ದೀವರ ಜನಾಂಗದ ಅಡುಗೆ ಪದ್ಧತಿ ಹಾಗೂ ಆಹಾರಕ್ರಮ

                ದೀವರ ಆಹಾರದಲ್ಲಿ ಅಕ್ಕಿ ತುಂಬಾ ಮುಖ್ಯವಾಗಿದೆ. ಭತ್ತವನ್ನು ಬೇಯಿಸಿ ಒಣಗಿಸಿ ಅಕ್ಕಿ ಮಾಡಿಸುತ್ತಾರೆ. ಇದನ್ನು ‘ಕುಚ್ಚಕ್ಕಿ’ ಎನ್ನುತ್ತಾರೆ. ಕೃಷಿ ಕಾರ್ಯ ಮಾಡುವವರು ಹೆಚ್ಚಾಗಿ ಕುಚ್ಚಕ್ಕಿ ಊಟ ಮಾಡುತ್ತಾರೆ. ಭತ್ತವನ್ನು ನೇರವಾಗಿ ಅಕ್ಕಿ ಮಾಡಿಸಿದರೆ ಅದನ್ನು ‘ಬೆಣತಕ್ಕಿ’ ಎನ್ನುತ್ತಾರೆ. ಹಬ್ಬ-ಹರಿದಿನ, ಮದುವೆ ಮುಂಜಿಗಳಲ್ಲಿ ಮತ್ತು ನೆಂಟರಿಸ್ಟರು ಮನೆಗೆ ಬಂದಾಗ ಬೆಣತಕ್ಕಿ ಅನ್ನ ಮಾಡುತ್ತಾರೆ.

                ದೀವರಲ್ಲಿ ಬಹುತೇಕ ಜನ ಬಡವರಾಧ್ದರಿಂದ ತುಂಬಾ ಸರಳವಾದ ಆಹಾರವನ್ನು ಉಪಯೋಗಿಸುತ್ತಾರೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಒಂದು ಊರಿನಲ್ಲಿ ಎಂಟು, ಹತ್ತು ಇರುತ್ತಿದ್ದವು. ಅಂತಹ ಕುಟುಂಬಗಳಲ್ಲಿ ದುಡಿಯುವವರು ಹೆಚ್ಚಾಗಿ ಇರುತ್ತಿದ್ದರು. ಐವತ್ತು ಮತ್ತು ನೂರು ಜನರು ಒಂದೇ ಕುಟುಂಬದಲ್ಲಿ ವಾಸ ಮಾಡುತ್ತಿದ್ದರು. ಇಂತಹ ಕುಟುಂಬಗಳಲ್ಲಿ ದಿನವೂ ಮೀನು, ಮಾಂಸ ಪೂರೈಸುವುದಕ್ಕೆ ಒಬ್ಬರು ಇರುತ್ತಿದ್ದರು. ದೊಡ್ಡ ಕುಟುಂಬಗಳಲ್ಲಿ ಬಂದೂಕು (ಕೋವಿ) ಇದ್ದೇ ಇರುತ್ತಿತ್ತು. ಬಂದೂಕಿನಿಂದ ಪ್ರತಿದಿವಸ ಯಾವುದಾದರೂ ಒಂದು ಕಾಡುಪ್ರಾಣಿಯನ್ನು ಶಿಕಾರಿ ಮಾಡಿಕೊಂಡುಬಂದು ಅಡುಗೆಮನೆಗೆ ಮಾಂಸ ತಯಾರಿಸಿಕೊಡುತ್ತಿದ್ದರು. ‘ಗವಲಗಡಿಗೆ’ ಪ್ರತ್ಯೇಕ ಇರುತ್ತಿತ್ತು. ಗವಲುಗಡಿಗೆ ಆರದಂತೆ ಮಾಡುವುದು ಅವನ ಕೆಲಸವಾಗಿತ್ತು.

                ದೀವರಲ್ಲಿ ಹೆಚ್ಚಾಗಿ ಬಳಸುವುದು ತಂಬ್ಳಿ. ಇದನ್ನು ಹುಳಿ, ಹುಳಿಸಾರು ಎನ್ನುತ್ತಾರೆ. ತಂಬ್ಳಿ ಮಾಡುವ ವಿಧಾನ ತುಂಬಾ ಸರಳ. ನೀರಿನಲ್ಲಿ ಹುಣಸೇಹಣ್ಣು ನೆನೆ ಹಾಕಿ ಸ್ವಲ್ಪಹೊತ್ತಿನ ನಂತರ ಹುಣಸೆಹಣ್ಣನ್ನು ನೀರಿನಲ್ಲಿ ಕಿವುಚಿ ಚಗಟವನ್ನು ತೆಗೆದು ಹುಳಿಯಾದ ನೀರಿಗೆ ಬೇಕಾದಷ್ಟು ನೀರು ಹಾಕಿ ಉಪ್ಪು, ಖಾರ ಹಾಕಿ ಜೀರಿಗೆ, ಸಾಸುವೆ ಹುರಿದು ಪುಡಿ ಮಾಡಿ ಸೇರಿಸಿ ಸ್ವಲ್ಪ ಹೊತ್ತು ಕಾಯಿಸಬೇಕು. ನಂತರ ಸ್ವಲ್ಪ ಕೊಬ್ರಿ ಎಣ್ಣೆ ಕಾಯಿಸಿ ಸಾಸಿವೆ, ಈರುಳ್ಳಿ ಕೊಚ್ಚಿ ಹಾಕಿ ವಗ್ಗರಣೆ ಮಾಡುತ್ತಾರೆ. ಕುಚ್ಚಕ್ಕಿ ಅನ್ನಕ್ಕೆ ಹುಳಿಸಾರು ಹಾಕಿಕೊಂಡು ಒಣಮೀನು, ಸುಟ್ಟು ಮೀನಿನ ಹೊರಬನ್ನು ತೆಗೆದು ನಂಚಿಕೊಂಡು ಊಟ ಮಾಡುತ್ತಾರೆ.

ಒಣಮೀನು

                ಮಂಡೆತಾರಲೆ, ಹೊರಬು ತಾರಲೆ, ಕಡ್ಡಿಜಬ್ಬು, ದೇವಚಪ್ರೆ, ಗಿರ್ಲು, ಮರಿಕಂಟಿಗೆ, ಸ್ವಾಡೆಮೀನು, ಒಣ ಬಂಗಡೆ, ಕಾಳೇಸುರ, ಮಂಡೆಕೊರವೆ ಮುಂತಾದ ಒಣಮೀನುಗಳನ್ನು ಸುಟ್ಟುಕೊಂಡು ಬೇಯಿಸಿಕೊಂಡು, ಒಣಮೀನು ಚಟ್ನಿ ಮಾಡಿಕೊಂಡು ತಂಬ್ಳಿ ಸಾರಿನ ಜೊತೆಗೆ ನಂಚಿಕೊಂಡು ಊಟ ಮಾಡುತ್ತಾರೆ.

                ಒಣಗಿದ ಮೀನುಗಳಲ್ಲಿ ಹಾಲುಸ್ವಾರ್ಲು ಮತ್ತು ದಪ್ಪಸ್ವಾರ್ಲು ಮೀನುಗಳನ್ನು ವಿಶೇಷ ಸಂದರ್ಭಗಳಲ್ಲಿ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಮದುವೆ ಊಟದಲ್ಲಿ ಸ್ವಾರ್ಲುಮೀನು ಬಳಸುತ್ತಿದ್ದರು. ಪುರಾತನ ಕಾಲದಲ್ಲಿ ನಾಮಧಾರಿ ವಿಷ್ಣುಭಕ್ತರ ಸಂಘದ ಠರಾವಿನ ಪ್ರಕಾರ ಮದುವೆ ಊಟದಲ್ಲಿ ಮೀನು ಬಳಸಬಾರದು ಎಂದು ನಿಲ್ಲಿಸಿದರು. ಹೆಣ್ಣು ಗಂಡು ನಿಶ್ಚಿತಾರ್ಥ (ಪಾಯಸ ತುಪ್ಪ) ಶಾಸ್ತ್ರದಲ್ಲಿ ಬೀಗರು ಮನೆಗೆ ಬಂದಾಗ ಒಣಮೀನು ಸಾರು, ಕಜ್ಜಾಯ ಊಟ ಮಾಡುತ್ತಿದ್ದರು.

ಒಣಮೀನು ಚಟ್ನಿ

                ಒಣ ಬಂಗಡೆ, ತಾರಲೆ, ಸ್ವಾರ್ಲಮೀನು, ಮರಿಕಂಟಿಗೆ ಇತ್ಯಾದಿ ಎಲ್ಲಾ ಥರದ ಮೀನುಗಳಲ್ಲಿ ಚಟ್ನಿ ಮಾಡುವ ಮೀನನ್ನು ಸುಟ್ಟು ಸ್ವಚ್ಛಗೊಳಿಸಿ ಮುಳ್ಳು ತೆಗೆದು ಬಿಸಿನೀರಿನಲ್ಲಿ ತೊಳೆದು ಚೂರು ಚೂರು ಮಾಡಿ ಅರಿಶಿನ, ಹುಳಿ, ಖಾರ, ಈರುಳ್ಳಿಯನ್ನು ಕೊಬ್ರಿ ಎಣ್ಣೆಯಲ್ಲಿ ಹುರಿದು ಮೀನಿಗೆ ಸೇರಿಸುತ್ತಾರೆ. ಇದೇ ರೀತಿ ಎಲ್ಲಾ ಒಣಮೀನುಗಳನ್ನು ಮಾಡಬಹುದು.

ತರಕಾರಿಗಳು

                ದೀವರು ಮಿಶ್ರಾಹಾರಿಗಳು. ತರಕಾರಿಗಳಲ್ಲಿ ಮುಖ್ಯವಾಗಿ ತೊಂಡೆಕಾಯಿ, ಹೀರೇಕಾಯಿ, ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಪಡವಲಕಾಯಿ, ಹಾಲುಗುಂಬಳಕಾಯಿ, ಚಿನ್ನಿಕಾಯಿ, ಬೂದುಗುಂಬಳ ಕಾಯಿ, ಹಾಗಲಕಾಯಿ ಈ ಎಲ್ಲಾ ತರಕಾರಿಗಳನ್ನು ತಮ್ಮ ಹಿತ್ತಲಲ್ಲಿ ಬೆಳೆದುಕೊಳ್ಳುತ್ತಾರೆ.

                ಬೀನ್ಸ್, ಡಬ್ಬಲ್ ಬೀನ್ಸ್, ಅಲಸಂದಿ, ಕೋಸು, ಮೂಲಂಗಿ ಮುಂತಾದ ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನುತ್ತಾರೆ ಮತ್ತು ಮಡಾಗಲಕಾಯಿ, ಗಣಪೆಕಾಯಿಗಳನ್ನು ಬಳಸುತ್ತಾರೆ.

ಬದನೆಕಾಯಿ ಚಟ್ನಿ

                ದಪ್ಪ ಮತ್ತು ಉದ್ದನೆಯ ಬದನೆಕಾಯಿಗಳನ್ನು ಬೂದಿ ಮುಚ್ಚಿದ ಕೆಂಡದಲ್ಲಿ ಸುಡುತ್ತಾರೆ. ನಂತರ ಸುಟ್ಟ ಬದನೆಕಾಯಿ ಮೇಲಿನ ಸಿಪ್ಪೆಯನ್ನು ತೆಗೆದು ಸೌಟಿನಿಂದ ಚೆನ್ನಾಗಿ ನುರಿದು ನಂತರ ಉಪ್ಪು, ಈರುಳ್ಳಿ, ಖಾರ ಹಾಕಿ ಕಾಸಿದ ಕೊಬ್ರಿ ಎಣ್ಣೆಯನ್ನು ಬದನೆಕಾಯಿಗೆ ಹಾಕುತ್ತಾರೆ. ಬದನೆಕಾಯಿ ಚಟ್ನಿ ಸಿದ್ಧವಾಗುತ್ತದೆ. ರೊಟ್ಟಿಗೆ ನಂಚಿಕೆಯಾಗಿ ಬಳಸುತ್ತಾರೆ.

ಬೆರಕೆ ಸಾರು

                ಒಣಗಿದ ಬಂಗಡೆ ಮೀನಿನ ಮಂಡೆ, ಸ್ವಾರ್ಲು ಮೀನಿನ ಮಂಡೆ, ಕರ್ಕಿ ಮೀನು ಮಂಡೆ, ಸ್ವಾದೆಮೀನಿನ ಮಂಡೆ ಇವುಗಳ ಮಂಡೆಗಳನ್ನು ತರಕಾರಿ ಸಾರುಗಳಿಗೆ ಬೆರಕೆ ಹಾಕುತ್ತಾರೆ. ಹೆಚ್ಚಾಗಿ ಸೌತೆಕಾಯಿ, ಹೀರೆಕಾಯಿ, ಬದನೆಕಾಯಿಗಳ ಸಾರಿಗೆ ಬೆರಕೆ ಹಾಕುತ್ತಾರೆ ಮತ್ತು ಬಾಳೆಕಾಯಿ, ಹಲಸಿನಬೀಜ, ಕೆಸವಿನಗಡ್ಡೆ, ಹೆಡಿಗೆ ಗೆಣಸುಗಳ ಪಲ್ಯ ಮಾಡುವಾಗ ಒಣಮೀನು ಬೆರಕೆ ಹಾಕುತ್ತಾರೆ.

                ಯಾವುದಾದರೂ ಒಣಮೀನಿನ ಮಂಡೆಗಳನ್ನು ಬಿಸಿನೀರಿನಲ್ಲಿ ಬೇಯಿಸಿ, ಚೆನ್ನಾಗಿ ತೊಳೆದು ಬೇಡದ ಭಾಗವನ್ನು ತೆಗೆದುಹಾಕಿ ಚೂರು ಮಾಡಿ ತರಕಾರಿ ಹೋಳುಗಳ ಜೊತೆಗೆ ಸೇರಿಸಿ ಬೇಯಿಸಿ ಸಾರಿಗೆ ಹಾಕುವ ಪದಾರ್ಥಗಳನ್ನು ಸೇರಿಸಿ ಖಾರಾ ಮಾಡಿ ಹಾಕುತ್ತಾರೆ. ಸಾರು ಕಂಪಾಗುತ್ತದೆ.

ಗಣಪೆಕಾಯಿ ಪಲ್ಯ

                ಗಣಪೆಕಾಯಿ ಬಳ್ಳಿ ಕಾಡಿನಲ್ಲಿ ಭೂತಾಕಾರವಾಗಿ ಬೆಳೆಯುವ ಸಸ್ಯ. ಅದರ ಸಸಿಯನ್ನು ತಂದು ದೀವರು ತಮ್ಮ ಜಮೀನಿನ ಮೇಲ್ಭಾಗದಲ್ಲಿರುವ ದೊಡ್ಡದಾದ ಮರದ ಬುಡದಲ್ಲಿ ನೆಟ್ಟು ಬೆಳೆಸುತ್ತಾರೆ. ಬಳ್ಳಿಯಲ್ಲಿ ಸಾವಿರಾರು ಕಾಯಿಗಳು ಬಿಡುತ್ತವೆ. ಹಣ್ಣಾದ ಗಣಪೆಕಾಯಿಗಳು ನೆಲಕ್ಕೆ ಬೀಳುತ್ತವೆ. ಅವುಗಳನ್ನು ಆರಿಸಿಕೊಂಡುಬಂದು ಬೂದಿ ಮುಚ್ಚಿದ ಕೆಂಡದಲ್ಲಿ ಹಾಕಿ ಸುಡಬೇಕು. ಸುಟ್ಟಕೂಡಲೇ ಕಾಯಿ ಭಡ್ ಎಂದು ಹೊಟ್ಟುತ್ತದೆ. ಅವುಗಳನ್ನು ತೆಗೆದು ಕಲ್ಲಿನಿಂದ ಬಡಿದರೆ ಒಳಗಡೆಯಿರುವ ತಿರುಳು ಬರುತ್ತದೆ. ತಿರುಳನ್ನು ಬಿಸಿನೀರಿನಲ್ಲಿ ಹಾಕಬೇಕು. ಬಿಸಿನೀರು ಆರಿದಮೇಲೆ ತಿರುಳನ್ನು ತೆಗೆದು ಉದ್ದುದ್ದ ಹೆಚ್ಚಬೇಕು. ಸೀಳು ಸೀಳುಗಳಾಗಿ ಹೆಚ್ಚಿ ಬೇರೆ ಬಿಸಿನೀರಿನಲ್ಲಿ ಸೀಳುಗಳನ್ನು ಹಾಕಬೇಕು. ಸುಮಾರು 7 ಸಾರಿ ಬಿಸಿನೀರಿನಲ್ಲಿ ನೆನೆಸಿ ನೀರನ್ನು ಚೆಲ್ಲಬೇಕು. ಸಂಪೂರ್ಣ ಕಹಿ ಬಿಡುತ್ತದೆ.

                ಕೊಬ್ಬರಿ ಗಿಟುಕು ಕುಟ್ಟಿ ಪುಡಿ ಮಾಡಿ ಮೆಣಸಿನಕಾಯಿ, ದನಿಯಾ, ಅರಿಶಿನ, ಕಾಳುಮೆಣಸು, ಸಾಸಿವೆ ಇವುಗಳನ್ನು ಚೆನ್ನಾಗಿ ಪುಡಿ ಮಾಡಿ ಎಣ್ಣೆ ಕಾಯಿಸಿ ಬೆಳ್ಳುಳ್ಳಿ ಜಜ್ಜಿ ಎಣ್ಣೆಗೆ ಹಾಕಿ ಸಾಸಿವೆ ಹಾಕಿ ಕಾಯಿಸಬೇಕು. ಸಾಸಿವೆ ಹೊಟ್ಟಿದ ನಂತರ ಗಣಪೆಕಾಯಿ ಚೂರುಗಳಿಗೆ ಮಿಶ್ರಮಾಡಿ ಸ್ವಲ್ಪ ಹುರಿಯಬೇಕು.

ಸೊಪ್ಪುಗಳು

                ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನುತ್ತಾರೆ. ಮುಖ್ಯವಾಗಿ ಹರಿವೆಸೊಪ್ಪು, ಬಸಳೆಸೊಪ್ಪು, ನೆಲಬಸಳೆಸೊಪ್ಪು, ಕೆಸವಿನಸೊಪ್ಪು, ಕರಡಿಸೊಪ್ಪು, ಹಸಿರು ಹೊನಗೊನೆ ಸೊಪ್ಪು, ಒಂದೆಲಗದ ಸೊಪ್ಪು, ನುಗ್ಗೆಸೊಪ್ಪು, ಎಲವರಿಗೆ ಸೊಪ್ಪುಗಳು ಮುಖ್ಯವಾದವು.

ಗೆಡ್ಡೆಗೆಣಸು

                ದೀವರು ಒಣಮೀನು, ಹಸಿಮೀನು ತಿನ್ನುವಂತೆ ನಿಸರ್ಗದಲ್ಲಿ ದೊರೆಯುವ ನಾರುಬೇರು, ಗೆಡ್ಡೆಗೆಣಸು, ಸೊಪ್ಪುಗಳನ್ನು ತುಂಬಾ ಪ್ರೀತಿಯಿಂದ ತಿನ್ನುತ್ತಾರೆ.

                ಹೆಡಿಗೆ ಗೆಣಸು, ಕುರಿಮೊಲೆ ಗೆಣಸಿನಕಾಯಿ ಮತ್ತು ಗೆಡ್ಡೆ, ಕಾಯಿಗೆಣಸು, ಚಿನ್ನಿ ಗೆಣಸು, ಬೇಲಿ ಗೆಣಸಿನ ಕಾಯಿ ಮತ್ತು ಗೆಡ್ಡೆ, ಸುವರ್ಣಗೆಡ್ಡೆ, ಕೆಸವಿನ ಗೆಡ್ಡೆ, ಮಕ್ಕಳ ಕೆಸವಿನ ಗೆಡ್ಡೆ, ಕರೆ ಕೆಸವಿನ ಗೆಡ್ಡೆ, ತಾಮ್ರ ಕೆಸವಿನ ಗೆಡ್ಡೆ, ಬಳ್ಳಿಚೀಪು ಮುಂತಾದ ಗೆಡ್ಡೆ ಗೆಣಸುಗಳನ್ನು ಸಾರು-ಪಲ್ಯ ಮಾಡಿ ಉಪಯೋಗಿಸುತ್ತಾರೆ. ಕೆಲವು ಗೆಣಸುಗಳನ್ನು ಸುಟ್ಟು ಮತ್ತು ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನುತ್ತಾರೆ.

ಉಪ್ಪಿನಕಾಯಿ

                ದೀವರು ಉಪ್ಪಿನಕಾಯಿಗಳಲ್ಲಿ ಮುಖ್ಯವಾಗಿ ಮಾವಿನಕಾಯಿ, ಕಡಿಗಾಯಿ, ಮಿಡಿಕಾಯಿ, ಮಾದಲಕಾಯಿ, ದೊಡ್ಲಿಕಾಯಿ, ಲಿಂಬೆಕಾಯಿ, ನೆಲ್ಲಿಕಾಯಿ, ಕಳಲೆ ಉಪ್ಪಿನಕಾಯಿ, ಅಮಟೆಕಾಯಿ, ಇಡಿಗಾಯಿ, ಕಡಿಗಾಯಿ ಮುಂತಾದ ಉಪ್ಪಿನಕಾಯಿಗಳನ್ನು ಊಟದ ಜೊತೆಗೆ ಬಳಸುತ್ತಾರೆ. ಕಳಲೆ ಉಪ್ಪಿನಕಾಯಿಯನ್ನು ವರ್ಷಗಟ್ಟಲೇ ಇಟ್ಟುಕೊಳ್ಳುತ್ತಾರೆ. ಮಿಡಿ ಉಪ್ಪಿನಕಾಯಿಗಳನ್ನು ಎರಡು ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ. ದೊಡ್ಲಿ, ನಿಂಬೆ ಉಪ್ಪಿನಕಾಯಿಗಳನ್ನು ವರ್ಷಗಟ್ಟಲೆ ಕೆಡದಂತೆ ಇಟ್ಟುಕೊಳ್ಳುತ್ತಾರೆ.

ಮಜ್ಜಿಗೆಮೆಣಸು

                ದೀವರು ಹಸಿಮೆಣಸಿನಕಾಯಿಯನ್ನು ತಮ್ಮ ಗದ್ದೆಯಲ್ಲಿ ಬೆಳೆದುಕೊಳ್ಳುತ್ತಾರೆ. ಮೆಣಸಿನ ಕಾಯಿಗಳನ್ನು ಉಪ್ಪು ಹಾಕಿದ ಮಜ್ಜಿಗೆಯಲ್ಲಿ ಮುಳುಗಿಸಿ ನಾಲ್ಕು ಐದು ದಿವಸ ಇಡುತ್ತಾರೆ. ಮಜ್ಜಿಗೆ ಇಲ್ಲದವರು ನೀರಿನಲ್ಲಿ ಹುಣಸೇಹಣ್ಣು ಹಾಕಿ ನೆನೆಸಿ ಸ್ವಲ್ಪ ಹೊತ್ತಿನ ನಂತರ ಹುಣಸೇಹಣ್ಣನ್ನು ಕಿವುಚಿ, ಚಗಟೆ ಬಿಸಾಕಿ ಹುಳಿಯಾದ ನೀರಿನಲ್ಲಿ ಮೆಣಸಿನಕಾಯಿ ನಾಲ್ಕೈದು ದಿನ ನೆನೆಹಾಕಿ ನಂತರ ತೆಗೆದು ಬಿಸಿಲಿನಲ್ಲಿ ಒಣಗಿಸುತ್ತಾರೆ. ಚೆನ್ನಾಗಿ ಒಣಗಿದ ಮೇಲೆ ತೆಗೆದು ಒಂದು ಮಡಕೆಯಲ್ಲಿ ತುಂಬಿ ಇಟ್ಟುಕೊಳ್ಳುತ್ತಾರೆ. ಬೇಕಾದಾಗ ತೆಗೆದು ಎಣ್ಣೆಯಲ್ಲಿ ಹುರಿದು ಮಜ್ಜಿಗೆ ಮತ್ತು ಸಾರಿನ ಊಟದ ಜೊತೆಗೆ ನಂಚಿಕೆಗೆ ಬಳಸುತ್ತಾರೆ.

ಚಗಳಿ ಚಟ್ನಿ

                ಚಗಳಿ ಕೆಂಪು ಇರುವೆ ಜಾತಿಗೆ ಸೇರಿದ್ದು. ಇದು ಗಿಡಮರಗಳ ಮೇಲೆ ಎಲೆಗಳನ್ನು ಸೇರಿಸಿಕೊಂಡು ಗೂಡು ಕಟ್ಟುತ್ತದೆ. ಸಾವಿರಾರು ಮೊಟ್ಟೆಗಳನ್ನು ಇಡುತ್ತದೆ. ಯಾರೂ ಅದನ್ನು ಮುಟ್ಟುವ ಹಾಗಿಲ್ಲ. ಒಮ್ಮೆ ಮುಟ್ಟಿದರೆ ಚಗಳಿ ಅವರ ಮೇಲೆ ಆಕ್ರಮಣ ಮಾಡಿ ಕಚ್ಚುತ್ತದೆ. ಒಂದು ಕೊಟ್ಟೆಯಲ್ಲಿ ಸಾವಿರಾರು ಮೊಟ್ಟೆಗಳು ಇರುತ್ತವೆ. ಉಪಾಯವಾಗಿ ಕೊಂಬೆಯನ್ನು ಕಡಿದು ಗೂಡಿನ ಮೇಲೆ ಉಪ್ಪು ಚೆಲ್ಲುತ್ತಾರೆ. ಉಪ್ಪಿಗೆ ಕೆಲವು ಹುಳುಗಳು ಸಾಯುತ್ತವೆ. ಕೆಲವು ಓಡಿಹೋಗುತ್ತವೆ. ಉಳಿದ ಮೊಟ್ಟೆಗಳನ್ನು ಮಡಕೆಗೆ ತುಂಬಿಕೊಂಡು ತಂದು ತೆಂಗಿನಕಾಯಿ ಹಾಕಿ ಚಟ್ನಿ ತಯಾರಿಸುತ್ತಾರೆ. ರೊಟ್ಟಿ ಮತ್ತು ಚಟ್ನಿ ಹಾಕಿಕೊಂಡು ಊಟ ಮಾಡುತ್ತಾರೆ.

                ಮೊಟ್ಟೆಗಳನ್ನು ಹಂಚಿನಲ್ಲಿ ಹಾಕಿ ಬಿಸಿ ಮಾಡಿ ಹುರಿದು ಒಣಕೊಬ್ರಿ, ಮೆಣಸಿನಕಾಯಿ ಎಣ್ಣೆಯಲ್ಲಿ ಹುರಿದುಕೊಂಡು 2 ಬೆಳ್ಳುಳ್ಳಿ, ಉಪ್ಪು ಹಾಕಿ ಒರಳುಕಲ್ಲಿನಲ್ಲಿ ತಿರುಗಿಸಬೇಕು.

ಅಣಬೆ

                ದೀವರು ಮೀನು ಮಾಂಸವನ್ನು ಇಷ್ಟಪಡುವಂತೆ ಅಣಬೆಯನ್ನು ತುಂಬಾ ಬಳಸುತ್ತಾರೆ. ದೀವರು ಈ ಕೆಳಗಿನ ಅಣಬೆಗಳಿಂದ ಸಾರು, ಮುಂಡಿ (ಆಮ್ಲೆಟ್) ತಯಾರಿಸಿ ತಿನ್ನುತ್ತಾರೆ.

                ಕರೆಹೆಗ್ಗಾಲಣಬಿ, ಬಿಳಿ ಹೆಗ್ಗಾಲಣಬಿ, ಹುಲ್ಲಣಬಿ, ಹಾಗಿನಣಬಿ, ನುಚ್ಚ್ಯಾಲಣಬಿ, ಎಣ್ಣೆಣಬಿ, ಹಕ್ಕಲಣಬಿ, ಮುತ್ತಿನ ಮಲಕಿನಣಬಿ, ದರನಣಬಿ, ಮೊಟ್ಟಣಬಿ, ದೂಪದಣಬಿ, ಕೂಗಲಣಬಿ, ಕೋಳಿಕಾಲಣಬಿ, ಸಿಂಬ್ಳಸುರಕನಣಬಿ, ಹಳ್ಳೆಣಬಿ.

ಕಳಲೆ

                ದೀವರು ಬಿದಿರು ಕಳಲೆಯನ್ನು ಹೆಚ್ಚಾಗಿ ಬಳಸುತ್ತಾರೆ. ಕಳಲೆ ಪಲ್ಯ, ಕಳಲೆ ಸಾರು, ಕಳಲೆ ಬಾನ (ಪಲಾವ್), ಕಳಲೆ ಮುಂಡಿ(ಆಮ್ಲೆಟ್)ಗಳನ್ನಾಗಿ ಉಪಯೋಗಿಸುತ್ತಾರೆ. ಕಳಲೆಯನ್ನು ತುಂಬಾ ಚಿಕ್ಕದಾಗಿ ಹೆಚ್ಚುವುದಕ್ಕೆ ಕೊಚ್ಚುಕಳಲೆ ಎನ್ನುತ್ತಾರೆ. ಸಸಲು ಕಳಲೆ-ಸಸಲು ಎಂಬ ಮೀನಿನಾಕಾರವಾಗಿ ಹೆಚ್ಚಿ ಸಾರು ಮಾಡಿದರೆ ಸಸಲು ಕಳಲೆ ಎನ್ನುತ್ತಾರೆ. ಇದನ್ನು ಅನ್ನಕ್ಕೆ ಹಾಕಿಕೊಂಡು ಊಟ ಮಾಡುತ್ತಾರೆ.

ಕಳಲೆ ಬಾನ : ಚಿತ್ರಾನ್ನ-ಪಲಾವ್ ಮಾಡಿದಂತೆ ಅನ್ನಕ್ಕೆ ಚಿಕ್ಕ ಚಿಕ್ಕದಾದ ಕಳಲೆಯನ್ನು ಪಲಾವ್‍ಗೆ ಹಾಕಿದಂತೆ ಉಳಿದ ಸಾಮಾನು ಹಾಕಿದರೆ ಕಳಲೆ ಬಾನ ಆಗುತ್ತದೆ.

ಮುಂಡಿ (ಆಮ್ಲೆಟ್) : ನುಚ್ಚು ಕಳಲೆಯನ್ನು ಅಕ್ಕಿಹಿಟ್ಟಿನ ಜೊತೆಗೆ ಸೇರಿಸಿ ಹೆಂಚಿನಲ್ಲಿ ಎಣ್ಣೆ ಹಾಕಿ ಸುಟ್ಟರೆ ಕಳಲೆಮುಂಡಿಯಾಗುತ್ತದೆ. ಕಳಲೆಯನ್ನು ನೆನಸಿಟ್ಟ ನೀರನ್ನು ತೆಗೆದು ತಿಳಿಸಾರಿಗೆ ಹಾಕುವ ಎಲ್ಲಾ ಸಾಮಾನು ಹಾಕಿದರೆ ಕಳಲೆ ಬೇತಿನ ಸಾರು ತಯಾರಾಗುತ್ತದೆ. ಕಳಲೆ ಉಪ್ಪಿನಕಾಯಿ ಹಾಕುತ್ತಾರೆ. ಇದು ವರ್ಷಗಟ್ಟಲೆ ಕೆಡದಂತೆ ಇರುತ್ತದೆ.

ಹಸಿಮೀನು

                ದೀವರ ದೈನಂದಿನ ಊಟದಲ್ಲಿ ಹಸಿ ಅಥವಾ ಒಣಮೀನು ಇರಲೇಬೇಕು. ಹೊಳೆ, ಹಳ್ಳ, ಅವಳೆಕೆರೆಗಳಲ್ಲಿ ಸಿಗುವ ಮೀನು, ಸೀಗಡಿ, ಕಾರೇಡಿ, ಬೆಳ್ಳೇಡಿ, ಸಣ್ಣಮೀನುಗಳಾದ ಓಡೆಳೆಜಬ್ಬು, ಹಂದಿಕೊಚರಿ ಹಾರಜಬ್ಬು, ದಾನಮೀನು, ಕುಮಾರಮೀನು, ಕನ್ನಕಟ್ಟೆ ಗಿರ್ಲು, ಅರ್ಬು, ಕಲ್ಲ, ಕುಂಬ್ಳಿಪೀತ, ಕೊಚ್ಚಲಿ ಕೊರೆವೆ, ಸುಳಿಬರ್ಲುಗಿಂಡು, ಗೊಜಳೆ, ಕುಂಬ್ಳಂಡೆ, ದೇವಸಪ್ರೆ, ಕುಚು ಮುರಗೋಡು, ಅವಲು, ಹೆಮ್ಮಗಲು, ಬಾಳೆ, ಹೆಂಚಿನ ಮೀನು, ಚೇಳು, ಕ್ವಾಡ್ಸಾ, ತೋಲಿ, ಗೌರಿ, ಫಾರಂ ಮೀನುಗಳು, ಹಳ್‍ಮೀನು, ಆಮೆ, ಕೂಮ ಈ ಮೀನುಗಳನ್ನು ಹೆಚ್ಚಾಗಿ ಬಳಸುತ್ತಾರೆ.

                ಸಮುದ್ರಮೀನು, ಬಂಗಡೆ, ಪೆಡಿ, ತಾರಲೆ, ಬೆಳ್ಳಂಜೆ, ಕಾಂಡೆ ಮುಂತಾದ ಮೀನುಗಳನ್ನು ತಿನ್ನುತ್ತಾರೆ.

ಏಡಿ ಚಟ್ನಿ

                ಕಾರೇಡಿ ಅಥವಾ ಬೆಳ್ಳೇಡಿಗಳನ್ನು ಸುಟ್ಟು ಬೇಡವಾದ ಭಾಗವನ್ನು ತೆಗೆದುಹಾಕಿ ಸೌಟಿನಲ್ಲಿ ಚೆನ್ನಾಗಿ ಜಜ್ಜಿ ನುರಿದು ನಂತರ ಎಣ್ಣೆ ಕಾಯಿಸಿ ಈರುಳ್ಳಿ ಕೊಚ್ಚಿ ಸಾಸಿವೆ ಹಾಕಿ ನಂತರ ಅರಿಶಿನಪುಡಿ, ಹುಳಿ, ಉಪ್ಪು, ಖಾರ ಸೇರಿಸಿ ಕಾಯಿಸಿದ ಎಣ್ಣೆಯನ್ನು ಸೇರಿಸಿ ಸ್ವಲ್ಪಹೊತ್ತು ಕಾಯಿಸುವುದು. ರೊಟ್ಟಿ, ಅನ್ನದ ಜೊತೆಗೆ ನಂಚಿಕೆಯಾಗಿ ಬಳಸುತ್ತಾರೆ.

ಕರಿಮೀನು

                ಮಳೆಗಾಲದಲ್ಲಿ ಹಾಸುಕಟ್ಟುಗಳ ಮೂಲಕ ಚೀಲಗಟ್ಟಲೆ ಸಣ್ಣಮೀನುಗಳನ್ನು ಹಿಡಿಯುತ್ತಾರೆ. ತಿಂದು ಹೆಚ್ಚಾದ ಮೀನನ್ನು ಬೆಸಲುಕಳಿಗೆ ಹಾಕಿ ಚೆನ್ನಾಗಿ ಬೆಂಕಿ ಶಾಖ ಕೊಟ್ಟು ಒಣಗಿಸುತ್ತಾರೆ. ಚೆನ್ನಾಗಿ ಒಣಗಿದ ಮೀನನ್ನು ಮಡಕೆಗೆ ತುಂಬಿ ಇಟ್ಟುಕೊಳ್ಳುತ್ತಾರೆ. ಇದೇ ಕರಿಮೀನು. ಸಾರಿಗೆ ತೊಂದರೆಯಾದಾಗ ತೆಗೆದು ಗಟ್ಟಿಯಾಗಿ ಸಾರು ಮಾಡಿ ಉಪಯೋಗಿಸುತ್ತಾರೆ.

ಮಾಂಸ

                ದೀವರು ಕೋಳಿ, ಕುರಿ, ಕಾಡುಕುರಿ, ಕಾಡುಹಂದಿ, ಮುಳ್ಳುಹಂದಿ, ಜಿಂಕೆ, ಕಡ, ಮೊಲ, ಬರ್ಕ, ಕಬ್ಬೆಕ್ಕಕು, ಕುಣಪಿನಬೆಕ್ಕು, ಉಡ, ಮುಂಗುಸಿ ಮುಂತಾದ ಕಾಡುಪ್ರಾಣಿಗಳು ಮತ್ತು ಪುರ್ಲೆಹಕ್ಕಿ, ಗೌಜ, ಕಾಡುಕೋಳಿ, ನವಿಲು, ಬೆಳ್ಳಕ್ಕಿ, ಹುಂಟಿಕೋಳಿ, ಕೊಕ್ಕರೆ, ಜೇನುಗಿಡುಗ ಮುಂತಾದ ಪಕ್ಷಿಗಳ ಮಾಂಸವನ್ನು ತಿನ್ನುತ್ತಾರೆ.

ಮಾಂಸದ ಸಂಡಿಗೆ

                ದೀವರ ಅವಿಭಕ್ತ ಕುಟುಂಬದಲ್ಲಿ 50-60 ಜನರು ಒಟ್ಟಾಗಿ ಜೀವನ ಸಾಗಿಸುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಶಿಕಾರಿಗಾಗಿಯೇ ಒಬ್ಬರು ಇರುತ್ತಿದ್ದರು. ಇವರು ಪ್ರತಿದಿವಸ ಕಾಡಿಗೆ ಹೋಗಿ ಶಿಕಾರಿ ಮಾಡಿ ಮಾಂಸ ತಯಾರಿಸಿ ಅಡುಗೆಮನೆಗೆ ಕೊಟ್ಟರಾಯಿತು. ಮೀನು, ಏಡಿ ಹಿಡಿಯುವುದು-ಹೀಗೆ ದೊಡ್ಡ ಕುಟುಂಬಗಳಲ್ಲಿ ಗವಲಿನಗಡಿಗೆ ಆರದಂತೆ ಇಡುತ್ತಿದ್ದರು. ಕಾಡುಹಂದಿ, ಜಿಂಕೆ, ಕಡ ಶಿಕಾರಿ ಮಾಡಿದಾಗ ತಿಂದು ಉಳಿದ ಮಾಂಸವನ್ನು ಉಪ್ಪು, ಕಾಳುಮೆಣಸಿನಪುಡಿ, ಅರಿಶಿನಪುಡಿ ಹಾಕಿ ಬಿಸಿಲಿನಲ್ಲಿ ಅಥವಾ ಬೆಸಲಕಳಿಯಲ್ಲಿ ಒಣಗಿಸಿ ಚೆನ್ನಾಗಿ ಒಣಗಿದ ನಂತರ ಗಡಿಗೆಗೆ ತುಂಬಿ ಇಡುತ್ತಿದ್ದರು. ಇದನ್ನೇ ಮಾಂಸದ ಸಂಡಿಗೆ ಎನ್ನುತ್ತಾರೆ.

ದೀವರು ಬಳಸುವ ತನುವುಗಳು (ತಂಪಾದ ಪಾನೀಯಗಳು)

                ದೀವರು ಹೊಲಗದ್ದೆಗಳಲ್ಲಿ, ಬಿಸಿಲಿನಲ್ಲಿ ಕೆಲಸ ಮಾಡುವಾಗ, ಗದ್ದೆಯನ್ನು ಉಳುಮೆ ಮಾಡುವಾಗ, ಬಿತ್ತನೆ ಮಾಡುವಾಗ ಬಾಯಾರಿಕೆಯಾದಾಗ ಕೆಲವು ತನುವುಗಳನ್ನು ಕುಡಿಯುತ್ತಾರೆ. ಅವುಗಳನ್ನು ಇಲ್ಲಿ ಕೊಡಲಾಗಿದೆ.

‘ಮಸೆ’ ಎಂಬ ಮರದ ಎಲೆಯ ತನುವು

                ಕಾಡಿನಲ್ಲಿರುವ ‘ಮಸೆ’ ಎಂಬ ಜಾತಿಯ ಮರದ ಎಲೆಯ ಕುಡಿಗಳನ್ನು ತಂದು ನೀರಿನಲ್ಲಿ ಗಿವಚಿ ಬೇಕಾದಷ್ಟು ನೀರು ಹಾಕಿ ಬೆಲ್ಲ ಸೇರಿಸಿ ಕುಡಿಯುತ್ತಾರೆ. ಇದು ಲೋಳೆಯಾಗಿ ತುಂಬಾ ತಂಪಾಗಿರುತ್ತದೆ. ಬಿಸಿಲಿನಲ್ಲಿ ಕೆಲಸ ಮಾಡುವಾಗ ಈ ತನುವು ಮಾಡಿಕೊಂಡು ಕುಡಿಯುತ್ತಾರೆ.

ನುರಕಲು ಎಲೆಯ ತನುವು

                ಗುಡ್ಡಬೆಟ್ಟಗಳಲ್ಲಿ ಬೆಳೆಯುವ ‘ನುರುಕಲು’ ಎಂಬ ಮರದ ಎಲೆಯ ಕುಡಿಗಳನ್ನು ನೀರಿನಲ್ಲಿ ಗಿವಿಚಿ ಬೇಕಾದಷ್ಟು ನೀರು, ಬೆಲ್ಲ ಸೇರಿಸಿ ಕುಡಿಯುತ್ತಾರೆ. ಇದು ಕೂಡ ಲೋಳೆಯಾಗಿ ಇರುತ್ತದೆ. ದೇಹಕ್ಕೆ ತುಂಬಾ ತಂಪಾಗಿ ಬೇಗ ಹಸಿವು ಆಗುವುದಿಲ್ಲ. ಈ ಮರದ ಹಣ್ಣುಗಳನ್ನು ತಿನ್ನುತ್ತಾರೆ. ತುಂಬಾ ರುಚಿಯಾಗಿರುತ್ತದೆ.

ಬಿಳಿಕೌರಿ ಮರದ ತೊಗಟೆಯ ತನುವು

                ಗುಡ್ಡಬೆಟ್ಟಗಳಲ್ಲಿ ಬೆಳೆಯುವ ‘ಬಿಳಿಕೌರಿ’ ಎಂಬ ಮರದ ತೊಗಟೆಯನ್ನು ತೆಗೆದು ತೊಗಟೆಯ ಒಳಭಾಗದ ಬಿಳಿಯಾದ ದಾರವನ್ನು ತೆಗೆದು ನೀರಿನಲ್ಲಿ ಚೆನ್ನಾಗಿ ನೆನೆಸಿ ಗಿವಿಚಿದರೆ ಬರುವ ಲೋಳೆಯಾದ ರಸಕ್ಕೆ ಸಾಕಷ್ಟು ನೀರು, ಬೆಲ್ಲ ಹಾಕಿ ಕುಡಿಯುತ್ತಾರೆ. ಇದು ಕೂಡ ತುಂಬಾ ತಂಪಾಗಿರುತ್ತದೆ. ಇದು ಔಷಧೀಯ ಗುಣವನ್ನು ಹೊಂದಿದೆ.

                ಬಿಳಿಮುಟ್ಟು ಹೋಗುವ ಮಹಿಳೆಯರು ಮತ್ತು ಉರಿಮೂತ್ರ ಆದವರು ಈ ತನುವು ಕುಡಿದರೆ ವಾಸಿಯಾಗುತ್ತದೆ.

                ಏಪ್ರಿಲ್ ಮೇ ತಿಂಗಳುಗಳ ಸುಡುಬಿಸಿಲಿನಲ್ಲಿ ಕೆಲಸ ಮಾಡುವವರು ಈ ತನುವು ಕುಡಿಯುತ್ತಾರೆ. ದೇಹಕ್ಕೆ ತುಂಬಾ ಒಳ್ಳೆಯದು.

ಉದ್ದಿನಕಾಳು ತನುವು

                ಉದ್ದಿನಕಾಳುಗಳನ್ನು ಎರಡು ಗಂಟೆ ಸಮಯ ನೆನೆಸಿ ನಂತರ ತೆಗೆದು ತಿರುವಕಲ್ಲಿಗೆ ಹಾಕಿ ತಿರುಗಿಸಿ ಬೆಲ್ಲ ಹಾಕಿ ಸಾಕಷ್ಟು ನೀರು ಹಾಕಿ ಕುಡಿಯುತ್ತಾರೆ. ಬೇಸಿಗೆ ಕಾಲದಲ್ಲಿ ಈ ತನುವು ಮಾಡುತ್ತಾರೆ.

ಹೆಸರುಕಾಳು ತನುವು

                ಹೆಸರುಕಾಳನ್ನು ಎರಡು ಗಂಟೆ ನೆನೆಸಿ ನಂತರ ತೆಗೆದು ತಿರುವಕಲ್ಲಿಗೆ ಹಾಕಿ ತಿರುವಬೇಕು. ನಂತರ ಕಲ್ಲಿನಿಂದ ತೆಗೆದು ಸಾಕಷ್ಟು ನೀರು, ಬೆಲ್ಲ ಹಾಕಿದರೆ ನೊರೆ ನೊರೆಯಾಗಿ ಕುಡಿಯಲು ತುಂಬಾ ಹಿತವಾಗಿರುತ್ತದೆ.

ಹೆಸರುಕಾಳು ಬೇಯಿಸಿದ ತನುವು

                ಹೆಸರುಕಾಳಿಗೆ ಚೆನ್ನಾಗಿ ನೀರು ಹಾಕಿ ಬೇಯಿಸಿ, ಅರ್ಧ ಬೆಂದ ನಂತರ ಬೆಲ್ಲ ಸೇರಿಸಿ ಚೆನ್ನಾಗಿ ಬೇಯಿಸಬೇಕು. ಹೆಸರುಕಾಳು ರಸವನ್ನು ಬೇಸಿಗೆಯಲ್ಲಿ ಹೊಲದ ಕೆಲಸ ಮಾಡುವಾಗ ಮತ್ತು ಹಬ್ಬಹರಿದಿನಗಳಲ್ಲಿ ಉಪವಾಸ ಇದ್ದಾಗ ಈ ತನುವು ಕುಡಿಯುತ್ತಾರೆ. ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ದೇಹಕ್ಕೆ ತಂಪಾಗಿರುತ್ತದೆ. ಹಸಿವು ಆಗುವುದಿಲ್ಲ.

ರಾಗಿ ತನುವು

                ಹಸನಾದ ರಾಗಿಯನ್ನು ನಾಲ್ಕು ಗಂಟೆಗಳ ಕಾಲ ನೆನೆ ಹಾಕಿ ನಂತರ ತೆಗೆದು ತಿರುವ ಕಲ್ಲಿಗೆ ಹಾಕಿ ತಿರುವಬೇಕು. ನಯವಾಗುವವರೆಗೆ ತಿರುಗಿಸಬೇಕು. ನಂತರ ತಿರುಗಿಸಿದ ರಾಗಿಗೆ ಸಾಕಷ್ಟು ನೀರು, ಬೆಲ್ಲ, ಏಲಕ್ಕಿ ಹಾಕಿ ಗಾಳಿಸಬೇಕು. ಶುದ್ಧವಾದ ರಾಗಿಯ ತನುವು ತಯಾರಾಗುತ್ತದೆ. ಇದು ತುಂಬಾ ಆರೋಗ್ಯಕರ ಪಾನೀಯ. ಹೊಲದಲ್ಲಿ ರಾಗಿಯ ತೆನೆ ಹಾಲು ತುಂಬಿರುವಾಗ ತೆನೆಗಳನ್ನು ತಂದು ಒರಳುಕಲ್ಲಿಗೆ ಹಾಕಿ ತಿರುಗಿಸಿ ಗಾಳಿಸಿ, ಬೆಲ್ಲ ಹಾಕಿ, ಸಾಕಷ್ಟು ನೀರು ಹಾಕಿ ಕುಡಿಯುತ್ತಾರೆ. ಇದು ತುಂಬಾ ರುಚಿಯಾಗಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಳವೆ ಅಕ್ಕಿಯ ತನುವು

                ‘ಕಳವೆ’ ಎಂಬ ಜಾತಿಯ ಭತ್ತದ ಅಕ್ಕಿಯನ್ನು ಎರಡು ಗಂಟೆ ನೆನೆಸಿ ಏಲಕ್ಕಿ, ತೆಂಗಿನಕಾಯಿಯನ್ನು ಅಕ್ಕಿಗೆ ಸೇರಿಸಿ ಒರಳುಕಲ್ಲಿಗೆ ಹಾಕಿ ತಿರುವಿದ ನಂತರ ಬೆಲ್ಲ ಹಾಕಿ ಬೇಕಾದಷ್ಟು ನೀರು ಸೇರಿಸಿ ತನುವು ತಯಾರಿಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ತುಂಬಾ ರುಚಿಯಾಗಿರುತ್ತದೆ.

ಕುಚ್ಚಕ್ಕಿ ತನುವು

ಕುಚ್ಚಕ್ಕಿಯನ್ನು ಹುರಿದು ಒರಳುಕಲ್ಲಿಗೆ ಹಾಕಿ ತಿರುವಿ ನಂತರ ಬೇಕಾದಷ್ಟು ನೀರು, ಬೆಲ್ಲ ಹಾಕಿ ಕುಡಿಯುತ್ತಾರೆ. ಈ ತನುವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ರಾಗಿ ಗಂಜಿ

                ಹಸನಾದ ರಾಗಿಯನ್ನು ಬೀಸಿ ಹಿಟ್ಟು ಮಾಡಿ, ಹಿಟ್ಟಿಗೆ ಬೇಕಾಗುವಷ್ಟು ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಕಾಯಿಸುತ್ತಾರೆ. ಹೊಲದಲ್ಲಿ ಕೆಲಸ ಮಾಡುವವರು ಬಾಯಾರಿಕೆಯಾದಾಗ ರಾಗಿಗಂಜಿಯನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಹಸಿವು ಆಗುವುದಿಲ್ಲ.

ದೀವರು ತಯಾರಿಸುವ ಕಜ್ಜಾಯಗಳು

ಹೊಸಗೆರೆ ಕಜ್ಜಾಯ

                ಇದು ದೀವರು ಜನಾಂಗದ ತುಂಬಾ ಅಪರೂಪದ ಮತ್ತು ಪ್ರಮುಖವಾದ ಭಕ್ಷ್ಯ. ಮಾಂಸ ಮತ್ತು ತರಕಾರಿಯ ಜೊತೆಯಲ್ಲಿ ಬಳಸುತ್ತಾರೆ. ಕೋಳಿಮಾಂಸದ ಸಾರಿನ ಜೊತೆಗೆ ಹೊಂದಾಣಿಕೆಯಾಗುವ ಖಾದ್ಯ. ದೀವರಲ್ಲಿ ‘ಕೋಳಿ ಕಜ್ಜಾಯ’ ತುಂಬಾ ಜನಪ್ರಿಯವಾದ ಮತ್ತು ಅಪರೂಪದ ಖಾದ್ಯ.

                ಮದುವೆಯಲ್ಲಿ ಧಾರೆಶಾಸ್ತ್ರ ಹೊರತುಪಡಿಸಿ ಉಳಿದ ವೀಳ್ಯಾಶಾಸ್ತ್ರ, ನಿಶ್ಚಿತಾರ್ಥ, ಬೀಗರೂಟ, ಮೂರುಪಟ್ಟಿನ ಶಾಸ್ತ್ರ ಮುಂತಾದ ಶಾಸ್ತ್ರಗಳಲ್ಲಿ ಕೋಳಿ ಕಜ್ಜಾಯ ಮಾಡುತ್ತಾರೆ. ದೀಪಾವಳಿ ಮತ್ತು ಆರಿದ್ರಾ ಮಳೆ ಹಬ್ಬಗಳನ್ನು ಬಿಟ್ಟು ಉಳಿದ ಎಲ್ಲಾ ಹಬ್ಬಗಳಲ್ಲಿಯೂ ಕಜ್ಜಾಯ ಮಾಡುತ್ತಾರೆ. ತರಕಾರಿ ಮತ್ತು ಆಲೂಗಡ್ಡೆ ಸಾರಿನ ಜೊತೆಗೆ ಕಜ್ಜಾಯ ಹೊಂದಿಕೆಯಾಗುತ್ತದೆ.

                ಹೊಸದಾಗಿ ಮದುವೆಯಾದ ಕುಟುಂಬಗಳಲ್ಲಿ ಬೀಗರು ಬಂದಾಗ ಕೋಳಿ ಕಜ್ಜಾಯವನ್ನು ಮಾಡುತ್ತಾರೆ. ಮನೆಗೆ ನೆಂಟರಿಷ್ಟರು ಬಂದಾಗ ಕೋಳಿ ಕಜ್ಜಾಯ ಅಥವಾ ಒಣಸ್ವಾರ್ಲು ಮೀನು ಸಾರು ಕಜ್ಜಾಯ ಮಾಡುತ್ತಾರೆ.

                ಹೊಸಗೆರೆ ಕಜ್ಜಾಯವನ್ನು ಮಾಡುವ ವಿಧಾನ ಹೀಗಿದೆ.

                ಬೇಕಾಗುವಷ್ಟು ನೀರು ಕಾಯಿಸಿ ಚೆನ್ನಾಗಿ ಕಾದ ನಂತರ ತರಿತರಿಯಾದ ಅಕ್ಕಿಹಿಟ್ಟು (ಒಂದು ಬಟ್ಟಲು), ತೆಂಗಿನಕಾಯಿ ತುರಿ (ಒಂದು ಬಟ್ಟಲು), ಹೆಚ್ಚಿರುವ ಈರುಳ್ಳಿ (ಒಂದು ಬಟ್ಟಲು), ಅನ್ನ (ಒಂದು ಬಟ್ಟಲು), ತಕ್ಕಷ್ಟು ಉಪ್ಪನ್ನು ಅಕ್ಕಿಹಿಟ್ಟಿಗೆ ಸೇರಿಸಿ ಕುದಿನೀರಿಗೆ ಹಾಕಬೇಕು. ಗಂಟಾಗದಂತೆ ಸೌಟಿನಲ್ಲಿ ತಿರುವುತ್ತಿರಬೇಕು. ಸಣ್ಣ ಉರಿ ಇರಬೇಕು. ಸ್ವಲ್ಪ ಹೊತ್ತು ಬೇಯಿಸಿ ಇಳಿಸಬೇಕು. ಬಿಸಿ ಆರಿದ ಮೇಲೆ ಸ್ವಲ್ಪ ಹಿಟ್ಟು ತೆಗೆದು ನುಣುಪು ಬರುವಂತೆ ಚೆನ್ನಾಗಿ ಮಿಲಿದು ಉಂಡೆ ಮಾಡಿ ಅದೇ ಪಾತ್ರೆಯಲ್ಲಿ ಒಂದು ಕಡೆ ಇಟ್ಟುಕೊಳ್ಳಬೇಕು. ಒಂದು ಕಜ್ಜಾಯಕ್ಕೆ ಬೇಕಾಗುವಷ್ಟು ಹಿಟ್ಟನ್ನು ತೆಗೆದುಕೊಂಡು ಮರದ ಮರಗಿಯಲ್ಲಿ ಹೊಸೆದು ನಂತರ ಒಂದಕ್ಕೊಂದರ ತುದಿಯನ್ನು ಬಳೆಯಾಕಾರವಾಗಿ ಕೂಡಿಸಬೇಕು. ಇದೇ ರೀತಿ ಪೂರ್ಣ ಹಿಟ್ಟು ಮುಗಿಯುವವರೆಗೆ ಹೊಸೆದು ಕೂಡಿಸಿ ಒಂದು ಕಡೆ ಒಂದರ ಮೇಲೆ ಒಂದು ಇಟ್ಟುಕೊಳ್ಳಬೇಕು. ನಂತರ ಒಂದು ಬಾಣಲಿಯಲ್ಲಿ ಬೇಕಾಗುವಷ್ಟು ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಬೇಕು. ಎಣ್ಣೆ ಚೆನ್ನಾಗಿ ಕಾದ ನಂತರ ಎಂಟು-ಹತ್ತು ಕಜ್ಜಾಯ ಹಾಕಿ ಬೇಯಿಸುತ್ತಾರೆ. ಚೆನ್ನಾಗಿ ಬೆಂದಮೇಲೆ ಕಜ್ಜಾಯದ ಕಡ್ಡಿಯಿಂದ ಬಾಣಲಿಯಿಂದ ತೆಗೆದು ಬೇರೆ ಪಾತ್ರೆಗೆ ಹಾಕುತ್ತಾರೆ. ನಂತರ ಪುನಃ ಹಸಿ ಕಜ್ಜಾಯ ಹಾಕಿ ಬೇಯಿಸುತ್ತಾರೆ.

ಉದ್ದಿನವಡೆ ಕಜ್ಜಾಯ

                ಈ ಕಜ್ಜಾಯವನ್ನು ತರಕಾರಿ ಸಾರಿನ ಜೊತೆ ತಿನ್ನುತ್ತಾರೆ. ಬರೀ ಕಜ್ಜಾಯವನ್ನು ತಿನ್ನಬಹುದು. ಇದನ್ನು ಸೊರಬ ಮತ್ತು ಬಿಳಗಿ ಸೀಮೆಯ ದೀವರು ಹೆಚ್ಚಾಗಿ ಮಾಡುತ್ತಾರೆ. ಮುಖ್ಯವಾಗಿ ಇದನ್ನು ಚೌತಿಯ ನಂತರ ಹೆಣ್ಣುಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಾಗ ಐವತ್ತು-ನೂರು ಕಜ್ಜಾಯ, ಜೊತೆಗೆ ಚಕ್ಕುಲಿ, ಅತಿರಸದ ಕಜ್ಜಾಯವನ್ನು ಮಾಡಿಕೊಟ್ಟು ಕಳುಹಿಸುತ್ತಾರೆ. ಇದು ಹದಿನೈದು ದಿವಸಗಳವರೆಗೆ ಕೆಡದೇ ಇರುತ್ತದೆ. ಉದ್ದಿನವಡೆ ಕಜ್ಜಾಯವನ್ನು ಬೇರೆ ಬೇರೆ ಜಾತಿಯವರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕಾಯಿಗರಿಗೆ, ಹಾಲುಗರಿಗೆ ಇತ್ಯಾದಿ.

                ಉದ್ದಿನವಡೆ ಕಜ್ಜಾಯ ಮಾಡುವ ವಿಧಾನ ಹೀಗಿದೆ.

                ಅಕ್ಕಿ ತೊಳೆದು ಒಣಗಿಸಿ ಬೀಸಿ ಹಿಟ್ಟು ಮಾಡಿಕೊಳ್ಳುತ್ತಾರೆ. ಹಿಟ್ಟಿಗೆ ಉಪ್ಪು, ಸ್ವಲ್ಪ ಬೆಲ್ಲ, ಜೀರಿಗೆಪುಡಿ, ಅರಿಶಿನಪುಡಿ ಹಾಕಿ ಹಿಟ್ಟನ್ನು ಕಲೆಸಿ ಹದಮಾಡಿ ಇಡುತ್ತಾರೆ. ಸ್ವಲ್ಪಹೊತ್ತಿನ ನಂತರ ಅಂಟು ಬರುವಂತೆ ಹಿಟ್ಟನ್ನು ನುಲಿಯುತ್ತಾರೆ. ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಬಾಳೆ ಎಲೆಗೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಹಿಟ್ಟಿನ ಉಂಡೆಯನ್ನಿಟ್ಟು ಬೆರಳಲ್ಲಿ ಪೂರಿ ಆಕಾರದಲ್ಲಿ ತಟ್ಟಿ ನಂತರ ಎಣ್ಣೆಯಲ್ಲಿ ಬೇಯಿಸಬೇಕು.

ಅತಿರಸದ ಕಜ್ಜಾಯ

                ದೀವರ ಮಹಿಳೆಯೊಬ್ಬಳು ಅತಿರಸ ಕಜ್ಜಾಯದ ಬಗ್ಗೆ ‘ತುಪ್ಪದಾಗ ಬೆಂದ ಅತಿರಸದ ತಾಯವ್ವಾ, ಈಗ್ಯಾವ ಬೀಗರಿಗೆ ಹೊಸ ಅಡುಗೆ’ ಎಂದು ಹಾಡಿನ ಮೂಲಕ ಹೇಳಿದ್ದಾಳೆ. ದೀವರು ತಯಾರಿಸುವ ಸಿಹಿ ಕಜ್ಜಾಯಗಳಲ್ಲಿ ತುಂಬಾ ಮುಖ್ಯವಾದ ಖಾದ್ಯ. ಗೌರಿಹಬ್ಬದಲ್ಲಿ ಗೌರಿಗೆ ನೈವೇದ್ಯ ಮಾಡಲು ಈ ಕಜ್ಜಾಯವನ್ನು ಮಾಡುತ್ತಾರೆ. ನಂತರ ಗೌರಿಹಬ್ಬಕ್ಕೆ ಬಂದ ಹೆಣ್ಣುಮಕ್ಕಳು ಗಂಡನಮನೆಗೆ ಹೋಗುವಾಗ ಇದನ್ನು ಮಾಡಿ ಕಳುಹಿಸುತ್ತಾರೆ. ಈ ಖಾದ್ಯ ಹದಿನೈದು ದಿವಸಗಳವರೆಗೆ ಕೆಡದಂತೆ ಇರುತ್ತದೆ. ಇದನ್ನು ತಯಾರಿಸುವ ಕ್ರಮ ಕೆಳಗಿನಂತಿದೆ.

                ಅಕ್ಕಿ ತೊಳೆದು ಚೆನ್ನಾಗಿ ಒಣಗಿಸಿ ಹಿಟ್ಟು ಮಾಡಿಸಬೇಕು. ಬೆಲ್ಲ ಕಾಯಿಸಿ ಪಾಕ ಮಾಡಿ ಹುರಿಗಡಲೆಪುಡಿ, ಎಳ್ಳು, ಏಲಕ್ಕಿಪುಡಿ, ಕೊಬ್ಬರಿತುರಿ, ಸ್ವಲ್ಪ ಉಪ್ಪನ್ನು ಹಿಟ್ಟಿನ ಜೊತೆಗೆ ಸೇರಿಸಿ ಒಲೆಯ ಮೇಲಿರುವ ಬೆಲ್ಲದ ಪಾಕಕ್ಕೆ ಹಾಕಿ ಸ್ವಲ್ಪ ಅರಿಶಿನಪುಡಿ, ತುಪ್ಪ ಹಾಕಿ ಬೇಯಿಸಬೇಕು. ಚೆನ್ನಾಗಿ ಅಂಟಾಗುವವರೆಗೆ ಬೇಯಿಸಿ ಇಳಿಸಿ ಆರಿದ ನಂತರ ಚಿಕ್ಕ ಚಿಕ್ಕ ಬಿಲ್ಲೆಗಳನ್ನು ಮಾಡಿ ಇಟ್ಟುಕೊಳ್ಳಬೇಕು.

                ಅಕ್ಕಿಯನ್ನು ಎರಡು ಗಂಟೆ ನೆನೆಸಿ ನಯವಾಗಿ ತಿರುಗಿಸಿ ಅದ್ದಿಟ್ಟು ಮಾಡಿಕೊಳ್ಳಬೇಕು. ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಚೆನ್ನಾಗಿ ಕಾದನಂತರ ಮಿಶ್ರಣದ ಬಿಲ್ಲೆಗಳನ್ನು ಒಂದೊಂದಾಗಿ ಅದ್ದಿಟ್ಟಿನಲ್ಲಿ ಅದ್ದಿ ಬಾಣಲಿಗೆ ಹಾಕಿ ಬೇಯಿಸಬೇಕು.

ಬಾಳೆಹಣ್ಣಿನ ಕಜ್ಜಾಯ

                ಅಕ್ಕಿಯನ್ನು ಎರಡು ಗಂಟೆ ನೆನೆಸಿ ನಂತರ ನೀರನ್ನು ತೆಗೆದು ಅಕ್ಕಿಗೆ ಸುಲಿದ ಬಾಳೆಹಣ್ಣು, ಕೊಬ್ಬರಿತುರಿ, ಏಲಕ್ಕಿಪುಡಿ ಸೇರಿಸಿ ತಿರುವ ಕಲ್ಲಿಗೆ ಹಾಕಿ ನೀರು ಹಾಕದಂತೆ ಗಟ್ಟಿಯಾಗಿ ತಿರುವಬೇಕು. ನಂತರ ಬಾಣಲಿಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕಾಯಿಸಿ ನಂತರ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದು ಬಾಣಲಿಗೆ ಹಾಕಬೇಕು. ಚೆನ್ನಾಗಿ ಬೇಯಿಸಿ ತೆಗೆಯಬೇಕು.

ಒಬ್ಬಣಗಿತ್ತಿಯ ಕಜ್ಜಾಯ

                ಇದೊಂದು ವಿಶೇಷವಾದ ಕಜ್ಜಾಯ. ಇದನ್ನು ಅಪರೂಪಕ್ಕೊಮ್ಮೆ ಮಾಡುತ್ತಾರೆ. ಇದನ್ನು ತಯಾರಿಸಲು ಪ್ರತ್ಯೇಕವಾದ ಬಾಣಲಿಯಿರುತ್ತದೆ. ಬಾಣಲಿಯಲ್ಲಿ ಒಮ್ಮೆಗೆ ಒಂದೇ ಕಜ್ಜಾಯ ಮಾಡಬಹುದು. ಮಾಡುವ ವಿಧಾನ ಹೀಗಿದೆ.

                ಅಕ್ಕಿ ಜೊತೆ ಮೆಂತೆ ಸೇರಿಸಿ ಮೂರು-ನಾಲ್ಕು ಗಂಟೆ ನೆನೆ ಹಾಕುತ್ತಾರೆ. ನೆನೆ ಅಕ್ಕಿಯ ಜೊತೆಗೆ ತೆಂಗಿನಕಾಯಿ ತುರಿ, ಏಲಕ್ಕಿ, ಜೀರಿಗೆ ಸೇರಿಸಿ ಸ್ವಲ್ಪ ಅನ್ನ ಹಾಕಿ ತಿರುವ ಕಲ್ಲಿಗೆ ಹಾಕಿ ತಿರುವುತ್ತಾರೆ. ತಿರುವಿದ ಅಕ್ಕಿಹಿಟ್ಟಿಗೆ ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ದೋಸೆಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು ಸೌಟಿನಿಂದ ಎಣ್ಣೆ ಬಾಣಲಿಗೆ ಬಿಡುತ್ತಾರೆ. ಒಂದೊಂದೇ ಕಜ್ಜಾಯ ಬೇಯಿಸುತ್ತಾರೆ. ಈ ಕಜ್ಜಾಯವನ್ನು ತುಪ್ಪದೊಂದಿಗೆ ತಿಂದರೆ ಬಲು ರುಚಿ.

ಮೆಂತೆ ಕಜ್ಜಾಯ

                ಅಕ್ಕಿಯ ಜೊತೆ ಸ್ವಲ್ಪ ಮೆಂತೆ ಹಾಕಿ ರಾತ್ರಿ ನೆನೆಸಿಡಬೇಕು. ಬೆಳಗ್ಗೆ ನೆನೆದ ಅಕ್ಕಿಗೆ ತೆಂಗಿನಕಾಯಿತುರಿ, ಏಲಕ್ಕಿ ಹಾಕಿ ಬೆಲ್ಲ ಸೇರಿಸಿ ತಿರುವಕಲ್ಲಿಗೆ ಹಾಕಿ ತಿರುಗಿಸಬೇಕು. ನಂತರ ತಿರುವಿದ ಹಿಟ್ಟನ್ನು ಕಾಯಿಸಿದ ಎಣ್ಣೆಯ ಬಾಣಲಿಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಬಿಡಬೇಕು. ಚೆನ್ನಾಗಿ ಎಣ್ಣೆಯಲ್ಲಿ ಬೇಯಿಸಿ ತೆಗೆಯಬೇಕು.

ಹಲಸಿನಹಣ್ಣಿನ ಕಜ್ಜಾಯ

                ಅಕ್ಕಿಯನ್ನು ಒಂದು ಗಂಟೆ ನೆನೆಸಿ ನಂತರ ನೆನೆದ ಅಕ್ಕಿಯ ಜೊತೆಗೆ ಸಮ ಪ್ರಮಾಣದಲ್ಲಿ ಅಂಬಲಿ (ಬಿಳಾನು) ಹಲಸಿನಹಣ್ಣಿನ ತೊಳೆಗಳನ್ನು ಸೇರಿಸಬೇಕು. ತೆಂಗಿನಕಾಯಿತುರಿ, ಏಲಕ್ಕಿ, ಜೀರಿಗೆಪುಡಿ, ಉಪ್ಪು ಸೇರಿಸಿ ಒರಳುಕಲ್ಲಿನಲ್ಲಿ ತಿರುಗಿಸಬೇಕು. ನೀರು ಸೇರಿಸಬಾರದು. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಕಾದ ಎಣ್ಣೆಗೆ ತಿರುವಿದ ಹಿಟ್ಟನ್ನು ಸ್ವಲ್ಪ ಸ್ವಲ್ಪ ಬಿಡಬೇಕು. ಸರಿಯಾಗಿ ಬೆಂದನಂತರ ತೆಗೆಯಬೇಕು.

ಕಡುಬುಗಳು

ಕೊಟ್ಟೆ ಕಡುಬು

                ದೀವರು ಜನಾಂಗದ ಆಹಾರಕ್ರಮದಲ್ಲಿ ಕಡುಬು ತುಂಬಾ ಪ್ರಮುಖವಾದುದು. ವರ್ಷದಲ್ಲಿ ಆರಿದ್ರಾ ಮಳೆಹಬ್ಬ, ದೀಪಾವಳಿ ಹಬ್ಬಗಳಲ್ಲಿ ಕಡುಬು ಆಗಲೇಬೇಕು. ಕುರಿಮಾಂಸದ ಜೊತೆಗೆ ಕೊಟ್ಟೆಕಡುಬು ತುಂಬಾ ಹೊಂದಾಣಿಕೆ ಆಗುವಂತಹ ಖಾದ್ಯ. ಕುರಿ ಕಡುಬು, ಕೋಳಿ ಕಜ್ಜಾಯ ಮತ್ತು ಮೀನುರೊಟ್ಟಿ ಈ ಪದಾರ್ಥಗಳು ದೀವರ ಆಹಾರದಲ್ಲಿ ತುಂಬಾ ಹೊಂದಾಣಿಕೆಯಾಗುವ ಖಾದ್ಯಗಳು.

ಕೊಟ್ಟೆಕಡುಬು

                ಅಕ್ಕಿಯನ್ನು ತೊಳೆದು ಒಣಗಿಸಬೇಕು. ನಂತರ ಅಕ್ಕಿಯನ್ನು ರವೆಯಾಗಿ ಹಿಟ್ಟು ಮಾಡಿಸಬೇಕು. ಮೆಂತೆ, ಸ್ವಲ್ಪ ಉದ್ದಿನಬೇಳೆ, ಸ್ವಲ್ಪ ದನಿಯಾ ಮೂರನ್ನೂ ಸೇರಿಸಿ ಒಣಗಿಸಬೇಕು. ನಂತರ ಪುಡಿ ಮಾಡಿ ಅಕ್ಕಿಹಿಟ್ಟಿಗೆ ಸೇರಿಸಬೇಕು. ರವೆಯಂತೆ ಹಿಟ್ಟು ಮಾಡಿಕೊಂಡ ಅಕ್ಕಿಯ ಹಿಟ್ಟನ್ನು ಗಂಜಿ ಮಾಡಿಕೊಳ್ಳಬೇಕು. ಗಂಜಿ ಹದವಾಗಿರಬೇಕು. ಗಂಜಿ ಆರಿದ ನಂತರ ದೊಡ್ಡ ಪಾತ್ರೆಯಲ್ಲಿ ಅಕ್ಕಿಗಂಜಿ ಮತ್ತು ಹಿಟ್ಟನ್ನು ಸೇರಿಸಿ ಇದಕ್ಕೆ ಅರ್ಧ ಕೆ.ಜಿ. ಗೋಧಿರವೆ ಮತ್ತು ಉಪ್ಪು ಸೇರಿಸಬೇಕು. ಚೆನ್ನಾಗಿ ಕಲಸಿ ನಾಲ್ಕು ಗಂಟೆ ಮುಚ್ಚಿಡಬೇಕು. ನಂತರ ತೆಗೆದು ನೋಡಿದಾಗ ಹಿಟ್ಟು ನೀೀರೊಡೆದರೆ ಪ್ರತ್ಯೇಕ ನೀರು ಹಾಕುವುದು ಬೇಡ. ಅಕ್ಕಿಯ ಹಿಟ್ಟು ಇಡ್ಲಿ ಮಾಡುವ ಹದಕ್ಕೆ ಬರುತ್ತದೆ. ಬರದಿದ್ದರೆ ಆ ಹದಕ್ಕೆ ಬರುವಂತೆ ನೀರು ಸೇರಿಸಬೇಕು.

                ಬಾಳೆಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ನಾಲ್ಕು ಬೆರಳು ಅಳತೆಗೆ ಕೊಟ್ಟೆ ಕಟ್ಟಬೇಕು. ಹದವಾಗಿರುವ ಹಿಟ್ಟನ್ನು ಕೊಟ್ಟೆಗೆ ಹಾಕಿ ಮೇಲ್ಭಾಗದಲ್ಲಿ ಕೊಟ್ಟೆಯನ್ನು ಕಟ್ಟಬೇಕು. ದೊಡ್ಡ ಪಾತ್ರೆಗೆ ನೀರು ಹಾಕಿ ಪಾತ್ರೆಯ ತಳದಿಂದ ಸ್ವಲ್ಪ ಮೇಲೆ ಬರುವಂತೆ ಮರದ ಕಡ್ಡಿ ಜೋಡಿಸಬೇಕು. ಹಿಟ್ಟು ತುಂಬಿದ ಕೊಟ್ಟೆಗಳನ್ನು ಜೋಡಿಸಿಡಬೇಕು. ಸತತವಾಗಿ ಮೂರು ಗಂಟೆಗಳ ಕಾಲ ಬೇಯಿುಸಿ ನಂತರ ಪಾತ್ರೆ ಇಳಿಸಿ ಪಾತ್ರೆಯೊಳಗಿರುವ ಕಡುಬುಗಳನ್ನು ತೆಗೆಯಬೇಕು.

ಅರಿಶಿನದೆಲೆ ಕಡುಬು

                ಅಕ್ಕಿ ತೊಳೆದು ಒಣಗಿಸಿ ಹಿಟ್ಟು ಮಾಡಿಸಿಕೊಳ್ಳಬೇಕು. ಇದೇ ಹಿಟ್ಟನ್ನು ಸ್ವಲ್ಪ ತೆಗೆದು ಗಟ್ಟಿಯಾಗಿ ಗಂಜಿ ಮಾಡಿಕೊಳ್ಳಬೇಕು. ಸೌತೆಕಾಯಿ ತುರಿದು ಇದಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿಪುಡಿ ಸೇರಿಸಿ ಅಕ್ಕಿಗಂಜಿಗೆ ಉಪ್ಪು ಹಾಕಿ ಹಿಟ್ಟಿನ ಜೊತೆಗೆ ಸೇರಿಸಿ ಚೆನ್ನಾಗಿ ಕಲಸಿ ಅರಿಶಿನದ ಎಲೆ ತಂದು ಚೆನ್ನಾಗಿ ಒರೆಸಿ ಎಲೆಗಳನ್ನು ಉದ್ದ ಎರಡು, ಅಡ್ಡ ಎರಡು ಇಟ್ಟು, ಕಲಸಿದ ಹಿಟ್ಟನ್ನು ಎಲೆಗೆ ಹಾಕಿ ಮಡಿಸುತ್ತಾರೆ. ನಂತರ ಆವಿಯಲ್ಲಿ ಬೇಯಿಸುತ್ತಾರೆ. ಹೂರಣಕ್ಕೆ ಬೆಲ್ಲ ಸೇರಿಸಿ ಮಾಡಿದರೆ ಸಿಹಿ ಕಡುಬು ಆಗುತ್ತದೆ.

ಕಾಯಿಕಡುಬು

                ಅಕ್ಕಿಯ ಹಿಟ್ಟು  ಬೇಯಿಸಿ ನಂತರ ಪೂರಿ ಆಕಾರದಲ್ಲಿ ತಟ್ಟಿ ಇಟ್ಟುಕೊಳ್ಳಬೇಕು. ಬೆಲ್ಲವನ್ನು ಚೆನ್ನಾಗಿ ಪಾಕ ಮಾಡಿಕೊಳ್ಳಬೇಕು. ಪಾಕಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿಪುಡಿ, ಎಳ್ಳು ಸೇರಿಸಿ ಹೂರಣ ಮಾಡಿಕೊಂಡು ತಟ್ಟಿ ಇಟ್ಟುಕೊಂಡ ಬಿಲ್ಲೆಗೆ ಹಾಕಿ ಕರ್ಜಿಕಾಯಿ ಆಕಾರದಲ್ಲಿ ಮಡಿಸಬೇಕು. ನಂತರ ಆವಿಯಲ್ಲಿ ಬೇಯಿಸಬೇಕು. ಇದನ್ನೇ ಎಣ್ಣೆಯಲ್ಲಿ ಕರಿದರೆ ಕರಿಗಡುಬು ಎನ್ನಿಸಿಕೊಳ್ಳುತ್ತದೆ.

ಸೌತೆಕಾಯಿ ಕಡುಬು

                ಅಕ್ಕಿ ತೊಳೆದು ಒಣಗಿಸಿ ತರಿತರಿಯಾಗಿ ಬೀಸಿಕೊಳ್ಳಬೇಕು. ಸ್ವಲ್ಪ ಹಿಟ್ಟು ತೆಗೆದುಕೊಂಡು ಗಂಜಿ ಮಾಡಿಕೊಳ್ಳಬೇಕು. ನಂತರ ಸೌತೆಕಾಯಿ ತುರಿದು ಇದರ ಜೊತೆಗೆ ತೆಂಗಿನಕಾಯಿ ಚಿಕ್ಕ ಚಿಕ್ಕ ಚೂರುಗಳು, ಏಲಕ್ಕಿಪುಡಿ, ಬೆಲ್ಲವನ್ನು ಹಿಟ್ಟಿಗೆ ಸೇರಿಸಿ ಗಂಜಿಗೆ ಸೇರಿಸಿ ಚೆನ್ನಾಗಿ ಕಲೆಸಬೇಕು. ಬಾಳೆಎಲೆ ಬಾಡಿಸಿ ಅರಿಶಿನ ಎಲೆಯನ್ನು ಬಾಳೆಎಲೆಯ ಮೇಲೆ ಉದ್ದ ಎರಡು, ಅಡ್ಡ ಎರಡು ಇಟ್ಟು ಇದರ ಮೇಲೆ ಹದ ಮಾಡಿದ ಹಿಟ್ಟು ಹಾಕಿ ಚಚ್ಚೌಕ ಕಟ್ಟಿ ಇಟ್ಟು ಪಾತ್ರೆಯಲ್ಲಿ ನೀರು ಹಾಕಿ ತಳದಲ್ಲಿ ಕಡ್ಡಿ ಇಟ್ಟು ಕಡ್ಡಿಯ ಮೇಲೆ ಬಾಳೆಎಲೆ ಇಟ್ಟು ಕಡುಬುಗಳನ್ನಿಟ್ಟು ಆವಿಯಲ್ಲಿ ಬೇಯಿಸಬೇಕು. ಇದರಲ್ಲಿ ಸಿಹಿ ಮತ್ತು ಸಪ್ಪೆ ಕಡುಬುಗಳನ್ನು ಮಾಡುತ್ತಾರೆ.

                ಸೌತೆಕಾಯಿ ಕಡುಬು ಭೂಮಿಹುಣ್ಣಿಮೆಯಲ್ಲಿ ತಪ್ಪದೇ ಮಾಡುತ್ತಾರೆ. ಸಿಹಿ ಮತ್ತು ಸಪ್ಪೆ ಕಡುಬುಗಳೆರಡನ್ನೂ ಮಾಡುತ್ತಾರೆ. ಸಿಹಿ ಕಡುಬುಗಳನ್ನು ತುಪ್ಪ, ಹಾಲಿನೊಂದಿಗೆ ತಿಂದರೆ ತುಂಬಾ ಹಿತವಾಗಿರುತ್ತದೆ.

ಚಿನ್ನಿಕಾಯಿ ಕಡುಬು

                ದೀವರು ಸಿಹಿಕುಂಬಳಕಾಯಿಗೆ ಚಿನ್ನಿಕಾಯಿ ಎಂದು ಕರೆಯುತ್ತಾರೆ. ಚಿನ್ನಿಕಾಯಿ ಕಡುಬುಗಳನ್ನು ಮಾಡುತ್ತಾರೆ. ಇದನ್ನು ಮಾಡುವ ಕ್ರಮ ಹೀಗಿದೆ.

                ಅಕ್ಕಿಯನ್ನು ತೊಳೆದು ಒಣಗಿಸಿ ಆರಿದ ಮೇಲೆ ತರಿ ತರಿಯಾಗಿ ಬೀಸಿ ಅದರಲ್ಲಿ ಸ್ವಲ್ಪ ತೆಗೆದು ಗಂಜಿ ಮಾಡಿಕೊಳ್ಳುತ್ತಾರೆ. ನಂತರ ಚಿನ್ನಿಕಾಯಿ ತುರಿದು ತೆಂಗಿನಕಾಯಿ ಚೂರುಗಳು, ಏಲಕ್ಕಿಪುಡಿ, ಹಸಿಕಡ್ಲೆ, ಉಪ್ಪು, ಬೆಲ್ಲವನ್ನು ಹಿಟ್ಟು ಗಂಜಿಗೆ ಹಾಕಿ ಕಲಸುತ್ತಾರೆ. ಬಾಳೆಲೆ ಬಾಡಿಸಿ ಕೊಟ್ಟೆ ಕಟ್ಟಿ ಕೊಟ್ಟೆಗೆ ಕಲಸಿದ ಹಿಟ್ಟು ಹಾಕಿ ತುದಿಯನ್ನು ಕಟ್ಟಬೇಕು. ನಂತರ ಪಾತ್ರೆಯಲ್ಲಿ ನೀರು ಹಾಕಿ ತಳದಲ್ಲಿ ಕಡ್ಡಿ ಜೋಡಿಸಿ ಕಡ್ಡಿಯ ಮೇಲೆ ಬಾಳೆಎಲೆ ಹಾಸಿ ಕಡುಬು ಜೋಡಿಸಿ ಆವಿಯಲ್ಲಿ ಬೇಯಿಸಬೇಕು. ಕನಿಷ್ಠ ಮೂರು ಗಂಟೆ ಬೇಯಿಸುತ್ತಾರೆ.

ಹಲಸಿನಹಣ್ಣಿನ ಕಡುಬು

                ಇದನ್ನು ದೀವರು ಅಪರೂಪಕ್ಕೊಮ್ಮೆ ಮಾಡುತ್ತಾರೆ. ಜುಲೈ ತಿಂಗಳಲ್ಲಿ ಆರಿದ್ರಾ ಮಳೆ ಪ್ರಾರಂಭ ಹಾಗೂ ಮುಕ್ತಾಯದ ಅವಧಿಯಲ್ಲಿ ಆರಿದ್ರಾ ಮಳೆಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಕುಮಾರರಾಮನನ್ನು ಆರಾಧನೆ ಮಾಡುತ್ತಾರೆ. ಕುಮಾರರಾಮನಿಗೆ ನೈವೇದ್ಯ ಮಾಡಲು ಹಲಸಿನಹಣ್ಣಿನ ಕಡುಬು ಆಗಲೇಬೇಕು. ಗ್ರಾಮದ ಹಿರಿಯರೇ ಹಲಸಿನ ಹಣ್ಣಿನ ಕಡುಬು ತಯಾರಿಸಿ ಕುಮಾರರಾಮನಿಗೆ ನೈವೇದ್ಯ ಮಾಡುತ್ತಾರೆ. ಇದನ್ನು ಮಾಡುವ ಕ್ರಮ ಹೀಗಿದೆ.

                ಅಕ್ಕಿಯನ್ನು ತೊಳೆದು ಒಣಗಿಸಿ ಆರಿದ ನಂತರ ತರಿ ತರಿಯಾಗಿ ಹಿಟ್ಟು ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ಸ್ವಲ್ಪ ಹಿಟ್ಟನ್ನು ತೆಗೆದು ಗಂಜಿ ಮಾಡಿಕೊಳ್ಳುತ್ತಾರೆ. ನಂತರ ಬಿಳಾಲು ಹಲಸಿನಹಣ್ಣಿನ ತೊಳೆಗಳನ್ನು ತೆಗೆದು ಒರಳುಕಲ್ಲಿಗೆ ಹಾಕಿ ತಿರುವುತ್ತಾರೆ. ನಂತರ ಹಿಟ್ಟು, ಗಂಜಿ, ತಿರುವಿದ ಹಲಸಿನಹಣ್ಣು ಸೇರಿಸುತ್ತಾರೆ. ನಂತರ ಬಾಳೆಎಲೆಗಳನ್ನು ಬಾಡಿಸಿ ಕೊಟ್ಟೆ ತಯಾರಿಸಿ ಕೊಟ್ಟೆಗೆ ಕಲಸಿದ ಹಿಟ್ಟನ್ನು ತುಂಬಿ ತುದಿಯನ್ನು ಕಟ್ಟಬೇಕು. ಪಾತ್ರೆಯಲ್ಲಿ ನೀರು ಹಾಕಿ ಪಾತ್ರೆಯ ತಳದಲ್ಲಿ ಕಡ್ಡಿ ಜೋಡಿಸಿ ಕಡ್ಡಿಯ ಮೇಲೆ ಬಾಳೆಎಲೆ ಹಾಸಿ ಕಡುಬು ಜೋಡಿಸಿ ಬೇಯಸುತ್ತಾರೆ.

ಮುಷ್ಠಿ ಕಡುಬು ಅಥವಾ ಉಂಡೆಕಡುಬು

                ದೀವರಲ್ಲಿ ಈ ಕಡುಬನ್ನು ಕೆಲವು ತಾಲ್ಲೂಕುಗಳಲ್ಲಿ ‘ಉಂಡೆಕಡುಬು’ ಎನ್ನುತ್ತಾರೆ. ಸಾಗರ ತಾಲ್ಲೂಕಿನಲ್ಲ ಮುಷ್ಠಿ ಕಡುಬು ಎಂದು ಕರೆಯುತ್ತಾರೆ. ಇದು ತುಂಬಾ ಜನಪ್ರಿಯವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಭಕ್ಷ್ಯ. ಹಿಂದಿನ ಕಾಲದ ದೀವರು ಕಣದ ಹಬ್ಬ (ಕಣಬ್ಬ), ಕೂರಿಗೆ ಹಬ್ಬದಲ್ಲಿ ಹಾಗೂ ತಿಥಿ ಮತ್ತು ಬೊಜ್ಜದೂಟಗಳಲ್ಲಿ ಮಾಡುತ್ತಿದ್ದರು. ಈಗ ಬೆಳಗಿನ ತಿಂಡಿಗೆ ಮತ್ತು ಹಬ್ಬಗಳಲ್ಲೂ ಉಂಡೆಕಡುಬು ಮಾಡುತ್ತಾರೆ.

                ಅಕ್ಕಿ ತೊಳೆದು ಒಣಗಿಸಿ ನಂತರ ತರಿ ತರಿಯಾಗಿ ಬೀಸಿಕೊಂಡು ದನಿಯಾ, ಮೆಂತೆ, ಜೀರಿಗೆಗಳನ್ನು ಹುರಿದು ಪುಡಿ ಮಾಡಿಕೊಳ್ಳಬೇಕು. ನೀರು ಚೆನ್ನಾಗಿ ಕಾಯಿಸಿ, ಕಾದ ನೀರಿಗೆ ಹಿಟ್ಟು, 

ದನಿಯಾ, ಜೀರಿಗೆ, ಮೆಂತೆ, ಉಪ್ಪು ಮತ್ತು ತೆಂಗಿನಕಾಯಿ ತುರಿ, ಒಂದು ಬಟ್ಟಲು ಅನ್ನ ಹಾಕಿ ಚೆನ್ನಾಗಿ ತಿರುವಬೇಕು. ನಂತರ ಹತ್ತು ನಿಮಿಷ ಹಿಟ್ಟನ್ನು ಪಾತ್ರೆಯಲ್ಲಿ ಮುಚ್ಚಿಡಬೇಕು. ನಂತರ ಹಿಟ್ಟನ್ನು ತೆಗೆದು ಚೆನ್ನಾಗಿ ಮಿಲಿದು ಉಂಡೆ ಕಟ್ಟಬೇಕು. ಕೆಲವರು ಮುಷ್ಠಿಯಲ್ಲಿ ಹಿಟ್ಟನ್ನು ತೆಗೆದುಕೊಂಡು ಅದುಮಿ ಕಡುಬು ಮಾಡುತ್ತಾರೆ. ಇವು ಸ್ವಲ್ಪ ಉದ್ದವಾಗಿರುತ್ತವೆ. ಪಾತ್ರೆಯಲ್ಲಿ ಅನ್ನ ಬಸಿವ ಸಿಬ್ಲ ಇಟ್ಟು ಇದರ ಮೇಲೆ ನಿಷ್ಣೆ ಸೊಪ್ಪು ಹಾಕಿ ಪಾತ್ರೆಗೆ ನೀರು ಹಾಕಿ ಕಡುಬುಗಳನ್ನಿಟ್ಟು ಪಾತ್ರೆಯ ಮೇಲ್ಭಾಗದಲ್ಲಿ ಸೊಪ್ಪು ಇಟ್ಟು ಪಾತ್ರೆ ಮುಚ್ಚಿ ಆವಿಯಲ್ಲಿ ಕಡುಬು ಬೇಯಿಸುತ್ತಾರೆ. ಈ ಕಡುಬುಗಳನ್ನು ಮಾಂಸದ ಮತ್ತು ತರಕಾರಿ ಸಾರುಗಳಲ್ಲಿ ಬಳಸುತ್ತಾರೆ.

ಸಿಹಿ ಉಂಡೆಗಳು

ಕುಚ್ಚುಂಡೆ

                ತೊಗರಿಬೇಳೆ ಬೇಯಿಸಿಕೊಂಡು ತೊಳೆದ ಅಕ್ಕಿಹಿಟ್ಟಿಗೆ ಸೇರಿಸಿ ಒಣಕೊಬ್ಬರಿ ತುರಿ, ಏಲಕ್ಕಿಪುಡಿ, ಎಳ್ಳು ಸೇರಿಸಿ, ಬೆಲ್ಲಕ್ಕೆ ಬೇಳೆ ಬೇಯಿಸಿದ ನೀರು ಸೇರಿಸಿ ಚೆನ್ನಾಗಿ ಕಾಯಿಸಿ ಬೆಲ್ಲದ ಪಾಕ ಮಾಡಿಕೊಂಡು ಪಾಕಕ್ಕೆ ಅಕ್ಕಿಹಿಟ್ಟಿನ ಮಿಶ್ರಣವನ್ನು ಸೇರಿಸಬೇಕು. ಅದ್ದಿಟ್ಟು ಮಾಡಿಕೊಂಡು ಮಿಶ್ರಣವನ್ನು ಉಂಡೆ ಮಾಡಿ ಅದ್ದಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಬಿಟ್ಟು ಬೇಯಿಸಬೇಕು.

ತಂಬಿಟ್ಟಿನ ಉಂಡೆ

                ಭತ್ತವನ್ನು ದೊಡ್ಡ ಹೆಂಚಿಗೆ ಹಾಕಿ ಹುರಿಯಬೇಕು. ಅರಳು ಏಳುತ್ತದೆ. ಭತ್ತ ಮತ್ತು ಅರಳನ್ನು ಬೇರ್ಪಡಿಸಿ, ಅರಳನ್ನು ಒನಿಕೆಯಂದ ಕುಟ್ಟಿ ಪುಡಿ ಮಾಡಿ ಹುರಿದ ಎಳ್ಳು ಹಾಕಿ ಕೊಬ್ರಿ ಚೂರುಗಳನ್ನು ಸೇರಿಸಿ ಬೆಲ್ಲ ಕಾಯಿಸಿ, ಕಾದ ಬೆಲ್ಲಕ್ಕೆ ಅರಳುಪುಡಿ ಹಾಕಿ ಚೆನ್ನಾಗಿ ಸೌಟಿನಲ್ಲಿ ತಿರುವಿ ಉಂಡೆ ಕಟ್ಟುತ್ತಾರೆ.

ಸೀಕೇದುಂಡೆ

                ಕುಚ್ಚಲಕ್ಕಿ ಮತ್ತು ಹೆಸರುಕಾಳು, ಕಡ್ಲೆಕಾಳು ಹುರಿದು, ಹುರಿಗಡಲೆ ಸೇರಿಸಿ ತರಿ ತರಿ ಬೀಸಿಕೊಳ್ಳಬೇಕು. ಬೆಲ್ಲವನ್ನು ಕಾಯಿಸಿ ಪಾಕ ಮಾಡಿಕೊಂಡು ಬೆಲ್ಲ ಕುದಿಯುವಾಗ ಒಣಕೊಬ್ರಿ ಚೂರುಗಳನ್ನು, ಹಿಟ್ಟನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ನಂತರ ಉಂಡೆ ಕಟ್ಟುತ್ತಾರೆ. ಈ ಉಂಡೆಗಳನ್ನು ತಿಂಗಳುಗಟ್ಟಲೇ ಇಟ್ಟುಕೊಂಡು ತಿನ್ನಬಹುದು.