ಬೇಟೆ ಸಂಪ್ರದಾಯ

                ದೀವರು ಮಲೆನಾಡಿನ ದಟ್ಟವಾದ ಕಾಡುಗಳ ಅಂಚಿನಲ್ಲಿ ವಾಸ ಮಾಡುವ ನಿಸರ್ಗಜೀವಿಗಳು. ಈಗ್ಯೆ ಐದಾರು ದಶಕಗಳ ಹಿಂದೆ ಮಲೆನಾಡಿನಲ್ಲಿ ದಟ್ಟವಾದ ಕಾಡುಗಳಿದ್ದವು. ಕಾಡುಗಳಲ್ಲಿ ಅರಣ್ಯ ಸಂಪತ್ತು ಅಪಾರವಾಗಿತ್ತು. ಅನೇಕ ಜಾತಿಯ ಮರಗಳು, ಕಾಡುಪ್ರಾಣಿಗಳು, ಪಕ್ಷಿ ಸಂಕುಲಗಳು, ವಿವಿಧ ರೀತಿಯ ಗಿಡಮೂಲಿಕೆಗಳು, ಬಗೆ ಬಗೆಯ ಹಣ್ಣುಹಂಪಲುಗಳು, ಸಾವಿರಾರು ತುಡವೆ ಮತ್ತು ಹೆಜ್ಜೇನುಗಳು, ನೂರಾರು ಜಾತಿಯ ಪುಷ್ಪಗಳಿಂದ ಕೂಡಿದ ಅರಣ್ಯ ಸಂಪತ್ತು ಸಮೃದ್ಧವಾಗಿತ್ತು.

                ಆಕಾಶದೆತ್ತರ ಬೆಳೆದ ಹಲಸು, ಹೆಬ್ಬಲಸು, ಮತ್ತಿ, ಹುನಾಲು, ಬಿಲ್ಕಂಬಿ, ಶಿವನೆ, ಕರಿವಾಲ, ಬಯಿನೆ, ಬೀಟೆ, ಹೊನ್ನೆ, ನಂದಿ, ನೇರಳೆ, ಬೂರಲ, ಮುತ್ತುಗ, ಧೂಪ, ಹಾಲುಮಡ್ಡಿ, ಗಂಧಗರಿಕೆ, ಸುರಹೊನ್ನೆ, ರಂಜಾಲ, ಉಪ್ಪಾಗೆ, ಗುರಿಗೆ, ಮುರುಗ ಮುಂತಾದ ಕಾಡುಜಾತಿಯ ಮರಗಳು, ಹುಲಿ, ಚಿರತೆ, ಕಾಡುಕೋಣ, ಕಾಡುಹಂದಿ, ಮುಳ್ಳುಹಂದಿ, ಜಿಂಕೆ, ಕಾಡುಕುರಿ, ಕಡ, ಮೊಲ ಮುಂತಾದ ಪ್ರಾಣಿಗಳು, ಮಲೆನಾಡಿನ ಅಪೂರ್ವ ಪಕ್ಷಿಗಳಾದ ಕುಟ್ರಶೆಟ್ಟಿ, ಕುಂಡೆಕುಣಕ, ಕಾಗರಚೇಳು, ಚಿಕ್ಕವ್ವನ ಹಕ್ಕಿ (ಕೋಗಿಲೆ), ಪಿಕಳಾರ, ತಿಮ್ಮನಹಕ್ಕಿ, ಮೂನ್ಹಕ್ಕಿ, ಗೆದ್ಲಕೋಳಿ, ಉರಿಚಿಟ್ಲ, ಕರೆಗಿಡುಗ, ಬಿಳಿಗಿಡುಗ, ಜೇನುಗಿಡುಗ, ಕುಳಮಂಗ್ಯ, ಹೊಟ್ಟೆತುಂಡ, ಕುಚಗಿಡುಗ, ಬೆಳಾಲಿ ಕೊಂಚಗ, ಶಕುನಾರ, ಹುಂಡುಕೋಳಿ, ಚಿಪ್ರಕೋಳಿ, ಗೌಜನ್ಹಕ್ಕಿ, ಕಾಡುಕೋಳಿ ಇತ್ಯಾದಿ ಪಕ್ಷಿಗಳು, ಮಲೆನಾಡಿನ ನದಿ, ಹಳ್ಳ-ಕೊಳ್ಳ, ಕೆರೆಗಳಲ್ಲಿ ದೊರೆಯುವ ವಿಶಿಷ್ಟವಾದ ಮೀನು ಸಂತತಿಗಳು; ಕೊಚ್ಚಲಿ (ಚಿಕ್ಕಮೀನು), ಕುಚ್ಚು, ಮುರುಗೋಡು, ಬಾಳೆ, ಅವಲು, ಅರ್ಬು, ಗಿಂಡು, ಕೊರವೆ, ಜವಳುಕೊರವೆ, ಮುಂಡುಕೊರವೆ, ಹಂಚು, ಚೇಳು, ಸುಳಿಬರ್ಲು ಕ್ವಾಡ್ಸಾ, ಕುಮಾರ, ದಾನ, ಕನ್ನೆಕಟ್ಟೆ, ಕುಂಬಳವಿತ್ತ, ಓಡೆಳೆಜಬ್ಬು, ಹಾರಜಬ್ಬು, ಕಲ್ಲಗಿರ್ಲು ಇತ್ಯಾದಿ ಹೀಗೆ ಕಾಡಿನ ಸಮಸ್ತ ಜೀವಿಗಳ ಜೀವನಕ್ರಮ, ಗುಣಸ್ವಭಾವಗಳನ್ನು ತಿಳಿದವರು ದೀವರು ಜನಾಂಗದಲ್ಲಿ ಅನೇಕರು ಇದ್ದರು. ಈಗಲೂ ಇದ್ದಾರೆ. ಕಾಡಿನಲ್ಲಿರುವ ಗಿಡಮರಗಳ, ಬಳ್ಳಿಗಳ, ಹಣ್ಣು-ಹಂಪಲುಗಳ ಮತ್ತು ಪುಷ್ಪಗಳ ಹೆಸರುಗಳನ್ನು ಹೇಳಬಲ್ಲವರಾಗಿದ್ದರು. ದೀವರಿಗೆ ಕಾಡುಪ್ರಾಣಿ, ಪಕ್ಷಿ, ಮೀನುಗಳ ಶಿಕಾರಿ ಮಾಡುವುದೆಂದರೆ ತುಂಬಾ ಖುಷಿ. ಅವುಗಳನ್ನು ಹಿಡಿಯಲು ಅನೇಕ ವೈವಿಧ್ಯಮಯ ಸಾಧನಗಳನ್ನು ತಯಾರಿಸಿಕೊಂಡಿದ್ದಾರೆ ಮತ್ತು ವಿವಿಧ ರೀತಿಯ ಕ್ರಮವನ್ನು ಅನುಸರಿಸಿ ಹಿಡಿಯುತ್ತಾರೆ.

ಸೋವು ಬೇಟೆ

                ಬೇಟೆಯೆಂದರೆ ದೀವರಿಗೆ ತುಂಬಾ ಖುಷಿ ಕೊಡುವ ಹವ್ಯಾಸ. ಹಿಂದೆ ಸೈನಿಕರಾಗಿ ಉದ್ಯೋಗ ಮಾಡಿದವರಾದ ಇವರಿಗೆ ಬಂದೂಕನ್ನು ಹೆಗಲೇರಿಸಿ ನಡೆಯುವುದೆಂದರೆ ಎಲ್ಲಿಲ್ಲದ ಸಂಭ್ರಮ ಮತ್ತು ಹೆಮ್ಮೆ. ದೀವರ ಬೇಟೆ ಸಂಪ್ರದಾಯದಲ್ಲಿ ಸೋವು ಬೇಟೆ ತುಂಬಾ ಪ್ರಮುಖವಾದದ್ದು. ಇದೊಂದು ಸಮೂಹ ಶಿಕಾರಿ ಪದ್ಧತಿ. ಇಪ್ಪತ್ತೈದರಿಂದ ನೂರಾರು ಜನ ಭಾಗವಹಿಸುತ್ತಾರೆ. ದೊಡ್ಡ ದೊಡ್ಡ ಪ್ರಾಣಿಗಳಾದ ಹಂದಿ, ಕಡ, ಕಾಡುಕುರಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಶಿಕಾರಿ ಮಾಡುವಾಗ ಈ ಪದ್ಧತಿಯನ್ನು ಅನುಸರಿಸುತ್ತಾರೆ. ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ದಾಟುವ ಮಧ್ಯೆ ಕಾಡಿನ ಕೊನೆಯಲ್ಲಿ ಕೆಲವು ಜನ ಬಂದೂಕುಧಾರಿಗಳು ಬಂದೂಕು ಹಿಡಿದು ಅಲ್ಲಲ್ಲಿ ಮರಗಳ ಮೇಲೆ, ಪೊದೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ಅಥವಾ ಎರಡು ಕಿಲೋಮೀಟರ್ ದೂರದಿಂದ ಪ್ರಾಣಿಗಳು ಮುಂದೆ ಮುಂದೆ ಹೋಗುವಂತೆ ಇಪ್ಪತ್ತೈದರಿಂದ ಐವತ್ತು ಜನ ಸೋವು ಮಾಡುತ್ತಾರೆ. ಸಾಲಾಗಿ ಯಾವುದೇ ಪ್ರಾಣಿ ಹಿಂದೆ ಹೋಗದಂತೆ ಕೂಗುತ್ತಾ, ಗದ್ದಲ ಮಾಡುತ್ತಾ, ಕಾಡನ್ನು ಸೋಯುತ್ತಾ ಹೋಗುತ್ತಾರೆ. ಪ್ರಾಣಿಗಳು ಇವರ ಗದ್ದಲಕ್ಕೆ ಅಂಜಿ ಮುಂದೆ ಮುಂದೆ ಹೋಗುತ್ತಿರುತ್ತವೆ. ಕೂಗುವ ಶಬ್ದ ಕ್ಷೀಣಿಸುತ್ತಾ ಹೋದಂತೆ ಪ್ರಾಣಿಗಳು ಚಲಿಸುವುದನ್ನು ನಿಧಾನ ಮಾಡುತ್ತವೆ. ಬಂದೂಕು ಹಿಡಿದು ಕೂತವರ ಸಮೀಪ ಹೋದನಂತರ ಪ್ರಾಣಿಗಳಿಗೆ ಗುರಿ ಹಿಡಿದು ಗುಂಡು ಹಾರಿಸುತ್ತಾರೆ. ಗುಂಡು ತಗುಲಿ ಪ್ರಾಣ ಸತ್ತರೆ ಸಾಯಿಸಿದವರಿಗೆ ಸ್ವಲ್ಪ ಹೆಚ್ಚು ಮಾಂಸ ಕೊಟ್ಟು ಉಳಿದವರು ಸಮನಾಗಿ ಹಂಚಿಕೊಳ್ಳುತ್ತಾರೆ.

ಮೊಲದ ಬೇಟೆ

                ಮೊಲದ ಬೇಟೆಗೆ ಬಲೆಯನ್ನು ಉಪಯೋಗಿಸುತ್ತಾರೆ. ಬಲೆಯ ಉದ್ದ ಗರಿಷ್ಠ ನಾಲ್ಕು ಮಾರು, ಕನಿಷ್ಠ ಮೂರು ಅಳತೆಯ ಎಂಟು, ಹತ್ತು ಹೆಚ್ಚು ಅಂದರೆ ಇಪ್ಪತ್ತು ಬಲೆಗಳನ್ನು ಒಂದಕ್ಕೊಂದು ಸೇರಿಸಿ ಬಲೆ ಕಟ್ಟಿರುತ್ತಾರೆ. ನಾಲ್ಕು ಜನ ಮೊಲ ಹಿಡಿಯುವವರು ಕಾಣದಂತೆ ಮರೆಯಲ್ಲಿ ಕುಳಿತಿರುತ್ತಾರೆ. ಬಲೆ ಕಟ್ಟಿದ ವಿರುದ್ಧ ದಿಕ್ಕಿನಿಂದ ಸೋಯಾಳುಗಳು ಕೂಗುತ್ತಾ ಪೊದೆಗಳನ್ನು ಕೋಲಿನಿಂದ ಬಡಿಯುತ್ತಾ ಇಪ್ಪತ್ತರಿಂದ ಮೂವತ್ತು ಜನ ಬರುತ್ತಾರೆ. ಅಕ್ಕಪಕ್ಕದಲ್ಲಿ ಅಲ್ಲಲ್ಲಿ ಮೊಲಗಳು ಓಡಾಡದಂತೆ ಜನರನ್ನು ನಿಲ್ಲಿಸಿರುತ್ತಾರೆ. ಬೇಲಿ ಕಟ್ಟಿದ ಹಾಗೆ ಎಲ್ಲರೂ ಒಟ್ಟಾಗಿ ಬಲೆಯ ಕಡೆ ಹೋಗುತ್ತಾರೆ. ಮೊಲಗಳು ಹೆದರಿ ಮುಂದೆ ಹೋಗಿ ಬಲೆಯಲ್ಲಿ ಸಿಕ್ಕಿಬೀಳುತ್ತವೆ.

ಹಂದಿ ಬಲೆ ಬೇಟೆ

                ಕಾಡಿನಲ್ಲಿರುವ ‘ಕೂಗಲುಬಳ್ಳಿ’ ಎಂಬ ಜಾತಿಯ ಬಳ್ಳಿಯಿಂದ ನಾರು ತೆಗೆದು ಬಲೆ ಮಾಡುತ್ತಿದ್ದರು. ಇದು ತುಂಬಾ ಗಟ್ಟಿಯಾಗಿರುತ್ತಿತ್ತು. ಐದುನೂರು ವರ್ಷ ಬಾಳಿಕೆ ಬರುವಷ್ಟು ಗಟ್ಟಿಯಾಗಿರುತ್ತಿತ್ತು. ಈ ಬಲೆ ಐದು ಆಳೆತ್ತರ (25-30 ಅಡಿ) ಇರುತ್ತಿತ್ತು. ನಾಲ್ಕು ಜನರಿಂದ ಎಂಟು ಜನರು ಹೊರುವ ಬಲೆಗಳನ್ನು ತಯಾರಿಸುತ್ತಿದ್ದರು. ಕತ್ತಾಳೆಯಿಂದ ಹುರಿ ಮಾಡಿ ಬಲೆ ತಯಾರಿಸುತ್ತಿದ್ದರು. ಬಲೆಯ ಹಗ್ಗದ (ಕಣ್ಣಿ) ಸುತ್ತಳತೆ ಒಂದು ಅಡಿ ಇರುತ್ತಿತ್ತು. 20 ವರ್ಷ ಬಾಳಿಕೆ ಬರುತ್ತಿತ್ತು. ಒಂದೂವರೆ ಆಳೆತ್ತರ (9 ಅಡಿ) ನಾಲ್ಕು ಕವೆಕೋಲು ಹಾಕಿ ಬಲೆಯನ್ನು ನಿಲ್ಲಿಸುತ್ತಿದ್ದರು. ಬಲೆಯಿರುವ ದಿಕ್ಕಿನಿಂದ ಸೋವು ಮಾಡುತ್ತಿದ್ದರು. ಹಂದಿಗಳು ಹಿಂದೆ ಹೋಗುವುದಿಲ್ಲ, ಮುಂದೆ ಬರುತ್ತವೆ. ಸೋಯಾಳುಗಳು ಕರಿಕಂಬಳಿ ಕಟ್ಟಿಕೊಳ್ಳುತ್ತಿದ್ದರು. ಹಂದಿಗಳು ಸೋಯಾಳುಗಳ ಮೇಲೆ ಏರಿಬರುತ್ತಿದ್ದವು. ಒಮ್ಮೊಮ್ಮೆ ಕಚ್ಚಿಬಿಡುತ್ತಿದ್ದವು. ಹಂದಿಗಳು ಬಲೆಗೆ ಬಿದ್ದಕೂಡಲೇ ಬಲೆ ಮುಚ್ಚಿಕೊಳ್ಳುತ್ತಿತ್ತು. ಬಲೆಯನ್ನು ಹೊತ್ತು ಎರಡು ಮೂರು ಮಾರು ಹೊತ್ತುಕೊಂಡು ಹೋಗುತ್ತಿದ್ದವು. ಆಗ ಉಕ್ಕಿನ ಈಟಿಯಿಂದ, ಭರ್ಜಿಯಿಂದ ಹೊಡೆದು ಕೊಲ್ಲುತ್ತಿದ್ದರು.

ನಾಯಿಬೇಟೆ

                ಬರಕ, ಮೊಲ, ಕಬ್ಬೆಕ್ಕು, ಕುಣವಿನ ಬೆಕ್ಕು, ಮೂಂಗಿನಿ, ಉಡ ಮುಂತಾದ ಚಿಕ್ಕಪ್ರಾಣಿಗಳನ್ನು ನಾಯಿಗಳನ್ನು ಬಳಸಿ ಬೇಟೆಯಾಡುತ್ತಿದ್ದರು. ಎರಡು ಮೂರು ನಾಯಿಗಳನ್ನು ಕಾಡಿಗೆ ಕರೆದುಕೊಂಡುಹೋಗುತ್ತಿದ್ದರು. ಕಾಡಿನಲ್ಲಿ ಪ್ರಾಣಿಗಳು ಅವಿತುಕೊಂಡಿರುವ ಪೊದೆಗಳನ್ನು ಹುಡುಕುತ್ತಿದ್ದರು. ಪ್ರಾಣಿಗಳಿರುವ ಕುರುಹನ್ನು ನಾಯಿಗಳು ಹುಡುಕಿ ಬೆನ್ನಟ್ಟಿಕೊಂಡು ಹೋಗಿ ಹಿಡಿಯುತ್ತಿದ್ದವು.

ಪಕ್ಷಿಬೇಟೆ

                ‘ಕಳ್ಳಂಡೆ’ ಎಂಬ ಸಾಧನದಿಂದ ಅನೇಕ ಪಕ್ಷಿಗಳನ್ನು ಹಿಡಿಯುತ್ತಿದ್ದರು. ಒಂದು ಮೊಳ (16 ಇಂಚು) ಉದ್ದವಿರುವ 50 ಬಿದಿರಿನ ಕಡ್ಡಿಗಳನ್ನು ನಯವಾಗಿ, ಚಿಕ್ಕದಾಗಿ ಕತ್ತಿಯಿಂದ ಕೆತ್ತಿ ಒಂದು ಮೊಳ ಉದ್ದವಿರುವ ಬಿದಿರಿನ ಅಂಡೆಯನ್ನು ಮಾಡಿಕೊಂಡು ಅಂಡೆಗಳಲ್ಲಿ ಕಡ್ಡಿಗಳನ್ನು ಇಟ್ಟುಕೊಳ್ಳುತ್ತಾರೆ. ನಂತರ ಕಳ್ಳಿಕಾಯಿಗಳ ಮುಖದ ಭಾಗವನ್ನು ಸ್ವಲ್ಪ ಕೊಯ್ದು ಅಂಟು ಹೊರಡಿಸಿಕೊಳ್ಳುತ್ತಾರೆ. ಹಾಗೆಯೇ ಬಸಿರಿ ಮರದಿಂದ ಬರುವ ಮೇಣವನ್ನು ತೆಗೆದು ಈ ಎರಡೂ ಮರಗಳಿಂದ ಬರುವ ಮೇಣವನ್ನು ಒಂದು ಮಡಕೆಗೆ ಹಾಕಿ ಬೇಯಿಸಿ, ಚೆನ್ನಾಗಿ ಕುದಿಸಿ ಕಾದಮೇಲೆ ಬಿದಿರು ಅಂಡೆಗೆ ಮೇಣವನ್ನು ಹಾಕಿ ಕಡ್ಡಿಗಳಿಗೆ ಮೇಣವನ್ನು ಅಂಟಿಕೊಳ್ಳುವಂತೆ ಮಾಡುತ್ತಾರೆ. ಪಕ್ಷಿಗಳು ಮರದ ಮೇಲೆ ಕುಳಿತಿರುವುದುನ್ನು ನೋಡಿ ಅವುಗಳಿಗೆ ಕಾಣುವಂತೆ ಮರದ ಕೆಳಗೆ ಸುತ್ತಲೂ ಕಳ್ಳಂಡೆಯ ಕಡ್ಡಿಗಳನ್ನು ಚೌಕಾಕೃತಿಯಲ್ಲಿ ನೆಡುತ್ತಾರೆ. ಕಪ್ಪೆ ಅಥವಾ ಗೊಕ್ಕ (ಇಲಿ), ಬಡಚ(ಇಲಿಜಾತಿ)ಗಳಲ್ಲಿ ಯಾವುದಾದರೂ ಒಂದನ್ನು ಕಟ್ಟುತ್ತಾರೆ. ಪಕ್ಷಿಗಳು ಇಲಿಯನ್ನು ಹಿಡಿಯಲು ಮೇಣದ ಕಡ್ಡಿಗಳ ಮಧ್ಯೆ ಕುಳಿತುಕೊಂಡಾಗ ಪಕ್ಷಿಯ ರೆಕ್ಕೆಪುಕ್ಕಗಳಿಗೆ ಮೇಣದ ಕಡ್ಡಿಗಳು ತಗುಲಿ ಅಂಟಿಕೊಂಡು ಪಕ್ಷಿಗಳು ಹಾರಲಾಗದ ಸ್ಥಿತಿಯಾಗುತ್ತದೆ. ಆಗ ಪಕ್ಷಿಯನ್ನು ಹಿಡಿದುಕೊಳ್ಳುತ್ತಾರೆ. ಈ ಸಾಧನದಿಂದ ಕರೆಗಿಡಗ, ಜೇನುಗಿಡಗ, ಬಿಳಿಗಿಡಗ, ಮಂಡೆಗಿಡಗ, ಉರಿಚಿಟ್ಲ, ಕುಳ್ಡಾಮಂಗ್ಯ, ಹೊಟ್ಟೆತುಂಡ, ಕುಚ್ಚಗಿಡಗ, ಬೆಳಾಲು ಕೊಂಟಿಗ, ಶಕುನಾರ ಮುಂತಾದ ಪಕ್ಷಿಗಳನ್ನು ಹಿಡಿಯುತ್ತಿದ್ದರು.

ಉರ್ಲು

                ಪುಂಡಿನಾರಿನಿಂದ ಮಾಡಿದ ಒಂದು ಮಾರು (5 ಅಡಿ) ಉದ್ದವಿರುವ ಹುರಿ (ಹಗ್ಗ), ಬಾಗುವಂತೆ ಒಂದು ಗಿಡಕ್ಕೆ ಹುರಿ ಕಟ್ಟಿ ಬಗ್ಗಿಸಿ ಎರಡು ಕವಲುಕಂಬಗಳನ್ನು ನಿಲ್ಲಿಸಿ, ಕವಲುಕಂಬಕ್ಕೆ ಒಂದು ಅಡಿ ಎತ್ತರದ ಬೇಲಿ ಕಟ್ಟಿ, ಚಿಕ್ಕದೊಂದು ಕೊಂಡಿ ಬಿಟ್ಟಿರುತ್ತಾರೆ. ಭತ್ತ ತಿನ್ನುವ ಆಸೆಗೆ ಪಕ್ಷಿ ಕಂಡಿಯ ಒಳಗೆ ಹೊಕ್ಕಾಗ ಉರ್ಲು ಬಿಗಿದು ಪಕ್ಷಿಯ ಕುತ್ತಿಗೆಗೆ ಗಂಟುಬೀಳುತ್ತದೆ. ಇದರಲ್ಲಿ ಕೊಕ್ಕರೆ, ಹುಂಜ, ಕೋಳಿ, ಚಪ್ರೆಕೋಳಿ, ಕಾಡುಕೋಳಿ, ಗೌಜನಕ್ಕಿ ಮುಂತಾದ ಪಕ್ಷಿಗಳನ್ನು ಉರ್ಲುಹಾಕಿ ಹಿಡಿಯುತ್ತಾರೆ.

ಕುಂಟೆಬೇಲಿ

                ಕಾಡಿನ ಅಂಚಿನಲ್ಲಿ ಪ್ರಾಣಿಗಳು ಒಂದು ಕಡೆಯಿಂದ ಇನ್ನೊಂದು ಕಡೆ ದಾಟುವ ಹಾದಿಯನ್ನು ತಿಳಿದು ಕುಂಟೆ ಬೇಲಿಯನ್ನು ಮಾಡುತ್ತಾರೆ. ಕಾಡಿನ ಅಂಚುಗಳಲ್ಲಿ ಉದ್ದ ಬೇಲಿ ಹಾಕಿ ಬೇಲಿಯ ಮಧ್ಯೆ ಮೂರು, ನಾಲ್ಕು ಕುಂಟೆ ಏರಿಸುತ್ತಾರೆ. ಎರಡೂ ಕಡೆ ಗೂಟ ನಿಲ್ಲಿಸಿ ಕಿರಿಬೇಲಿ ಮಾಡಿ ನಡುವೆ ಭಾರವಾದ ಒಂದು ತುಂಡು ಹಾಕಿ ಎರಡೂ ಕಡೆ ಗೂಟ ನಿಲ್ಲಿಸಿ ಬಳ್ಳಿಗೆ ಗೂಟ ಕೊಟ್ಟು ತುಂಡನ್ನು ಒಂದೂವರೆ ಅಡಿ ಎತ್ತರ ಎಬ್ಬಿಸಿ ತುಂಡಿನ ಕೆಳಗಡೆ ಕಣ್‍ಕಡ್ಡಿ ಹಾಕಿ ನಿಲ್ಲಿಸಿರುತ್ತಾರೆ. ಆಚೆ-ಈಚೆ ಓಡಾಡುವ ಪ್ರಾಣಿಗಳು ಕುಂಟೆಯ ಕೆಳಗೆ ಹೋದಾಗ ಕಣ್‍ಕಡ್ಡಿ ಸಿಡಿದು ಕುಂಟೆ ಪ್ರಾಣಿಗಳ ಮೇಲೆ ಬಿದ್ದಾಗ ಪ್ರಾಣಿಗಳು ಸಾಯುತ್ತವೆ. ಬರಕ, ಮೊಲ, ಕಬ್ಬೆಕ್ಕು, ಕಾಡುಕುರಿ, ಮುಂಗುಸಿ, ಕಾಡುಕೋಳಿ, ನವಿಲು, ಉಡ ಮುಂತಾದ ಪ್ರಾಣಿ ಪಕ್ಷಿಗಳನ್ನು ಕುಂಟೆ ಬೇಲಿಯಿಂದ ಹಿಡಿಯುತ್ತಾರೆ.

ಹಂದಿ ಕುಣಿ

                ದಟ್ಟವಾದ ಅರಣ್ಯದ ಮಧ್ಯೆ ಎರಡು ಮೂರು ಕಡೆ ಹತ್ತು ಅಡಿ ಆಳದ ಗುಂಡಿ ತೆಗೆದು ಗುಂಡಿಯ ಸುತ್ತಲೂ ಬೇಲಿ ಹಾಕುತ್ತಾರೆ. ಗುಂಡಿಯ ಮೇಲ್ಭಾಗ ಅಗಲವಾಗಿ ಕೆಳಭಾಗ ಕಿರಿದಾಗಿರುತ್ತದೆ. ಗುಂಡಿಯ ಮೇಲ್ಭಾಗಕ್ಕೆ ಗುಂಡಿ ಮುಚ್ಚದಂತೆ ಚಿಕ್ಕ ಚಿಕ್ಕ ಕೋಲುಗಳನ್ನಿಟ್ಟು ಒಣದರಕು (ಒಣಗಿದ ಎಲೆ) ಮುಚ್ಚುತ್ತಾರೆ. ರಾತ್ರಿ ಓಡಾಡುವಾಗ ಹಂದಿಗಳು ಗುಂಡಿಗೆ ಬೀಳುತ್ತವೆ. ಬೆಳಗ್ಗೆ ಹೋಗಿ ನೋಡಿದಾಗ ಪ್ರಾಣಿಗಳು ಗುಂಡಿಯಲ್ಲಿ ಬಿದ್ದಿದ್ದರೆ ಬಡಿಗೆ, ಕಲ್ಲುಗಳಿಂದ ಹೊಡೆದು ಕೊಲ್ಲುತ್ತಾರೆ.

ಮೀನುಬೇಟೆ

                ದೀವರ ಅಹಾರಕ್ರಮದಲ್ಲಿ ಮೀನಿಗೆ ಅಗ್ರಸ್ಥಾನ. ದಿನನಿತ್ಯದ ಊಟದಲ್ಲಿ ಒಣಮೀನು ಇರಲೇಬೇಕು. ಮಲೆನಾಡಿನಲ್ಲಿ ದೊರೆಯುವ ಮೀನುಗಳನ್ನು ಹಿಡಿಯಲು ಅನೇಕ ಸಾಧನಗಳನ್ನು ಬಳಸುತ್ತಾರೆ.

ಕೆರೆಬೇಟೆ-ಇರಗೂಣಿ

               ದೊಡ್ಡ ದೊಡ್ಡ ಕೆರೆಗಳಲ್ಲಿ ಬೇಸಿಗೆಯಲ್ಲಿ ನೀರು ಬತ್ತಿ ಕಡಿಮೆಯಾದಾಗ ಸುತ್ತಮುತ್ತಲಿನ ಹಳ್ಳಿಯವರು ನೂರಾರು ಜನ ಸೇರಿ ಕೆರೆಬೇಟೆ ಮಾಡುತ್ತಾರೆ. ಕೆರೆಬೇಟೆಗೆ ‘ಇರಗೂಣಿ’ ಎಂಬ ಸಾಧನವನ್ನು ಬಳಸುತ್ತಾರೆ. ಇರಗೂಣಿಯಲ್ಲಿ ಎರಡು ಅಡಿ ಮೂರು ಇಂಚು ಉದ್ದವಿರುವ 50 ಬಿದಿರನ ಕಡ್ಡಿಗಳಿರುತ್ತವೆ. ಕಡ್ಡಿಗಳನ್ನು ನಯವಾಗುವಂತೆ ಒರೆದು ಪುಂಡಿನಾರಿನ ದಾರದಿಂದ ದುಂಡಾಕೃತಿಯಲ್ಲಿ ಹೆಣೆದಿರುತ್ತಾರೆ. ಇರಗೂಣಿಯಿಂದ ಇರಿಯುತ್ತಾ ಹೋಗುತ್ತಾರೆ. ಒಂದೇ ಸಾರಿ ನೂರಾರು ಜನ ಸೇರಿ ಕೆರೆಗೆ ಇಳಿದು ನೀರನ್ನು ಕಲಕುವುದರಿಂದ ಮೀನುಗಳು ಗಾಬರಿಕೊಂಡು ಹೆದರಿ ನೀರಿನಲ್ಲಿ ಹರಿದಾಡುತ್ತವೆ. ಇರಗೂಣಿಯಲ್ಲಿ ಇರಿಯುತ್ತಾ ಹೋಗುವುದರಿಂದ ಕೆಲವು ಮೀನುಗಳು ಇರಗೂಣಿಯ ಒಳಹೋದಾಗ ಬಡಿದಾಡುತ್ತವೆ. ಶಬ್ದ ಕೇಳಿ ಕೈ ಹಾಕಿ ಹಿಡಿಯುತ್ತಾರೆ. ಈ ಕ್ರಮದಿಂದ ಕುಚ್ಚು, ಅವಲು, ಬಾಳೆ, ಮುರಗೂಡು, ಚೇಳು ಮುಂತಾದ ದೊಡ್ಡ ಮೀನುಗಳನ್ನು ಹಿಡಿಯಬಹುದು. ಕೆರೆಬೇಟೆಯಲ್ಲಿ ಮಹಿಳೆಯರು ಕೆರೆಯ ಅಂಚಿಗೆ ನಿಂತುಬಿಡುವ ಚಿಕ್ಕಮೀನುಗಳನ್ನು ಬಿದಿರಿನ ಮಂಕ್ರಿಯಿಂದ ಗೋರಿ ಹಿಡಿಯುತ್ತಾರೆ.

ಹಾಸು ಕಟ್ಟುವುದು

                ಹರಿಯುವ ಚಿಕ್ಕ ಹಳ್ಳಗಳಿಗೆ ಹಾಸು ಕಟ್ಟುವುದರ ಮೂಲಕ ಮೀನುಗಳನ್ನು ಹಿಡಿಯುತ್ತಾರೆ. ಹಳ್ಳದ ಎರಡೂ ಕಡೆ ಗೂಟಗಳನ್ನು ನಿಲ್ಲಿಸಿ ಗೂಟಗಳ ಮಧ್ಯೆ ಹೂಲಿ ಮತ್ತು ಮಲ್ಡಿ ಗಿಡಗಳನ್ನು ಹಾಕಿ ಂಬಳ ಬಿಗಿಯುತ್ತಾರೆ. ಮಧ್ಯೆ ಅಡ್ಡೆಳೆ ಹಾಕಿ ಅದರ ಮೇಲೆ ಬಣಜ ಹಾಸುತ್ತಾರೆ. ಬಣಜವನ್ನು ವಾಟೆ ಬಿದಿರಿನಿಂದ ಅಥವಾ ಅಡಿಕೆಮರವನ್ನು ಸೀಳಿ ಕಡ್ಡಿ ಮಾಡಿ ನೂರು ಕಡ್ಡಿಗಳನ್ನು ಸೇರಿಸಿ ಚಾಪೆ ಹೆಣೆದಂತೆ ಹೆಣೆಯುತ್ತಾರೆ. ಬಣಜಗಳು ಮೂರು ಅಡಿ ಅಗಲ, ಐದು ಅಡಿ ಉದ್ದವಿರುತ್ತದೆ. ಬಣಜದ ತುದಿಯಲ್ಲಿ ಮೀನು ಬೀಳಲು ಕೂಣಿ ಹಾಕಿರುತ್ತಾರೆ. ಹಳ್ಳದ ನೀರು ಮಳೆ ಬಿದ್ದಾಗ ಹಾಸಿನ ಮೇಲೆ ನೀರು ಹಾದುಹೋಗುವಾಗ ಕುಣಿಯಲ್ಲಿ ಮೀನು ಬೀಳುತ್ತವೆ.

                ಜೂನ್, ಜುಲೈ ತಿಂಗಳಲ್ಲಿ ಹಾಸು ಕಟ್ಟುತ್ತಾರೆ. ಮಳೆಗಾಲ ಮುಗಿಯುವ ತನಕ ಆಗಾಗ್ಯೆ ಮೀನು ಹಿಡಿಯಬಹುದು. ಹಾಸನ್ನು ಡಿಸೆಂಬರ್ ತಿಂಗಳವರೆಗೆ ಮೀನುಗಳು ಹತ್ತುತ್ತವೆ. ಹಿಂಗಾರು ಮಳೆಗೆ ಮೀನು ಹಾಸಿನಲ್ಲಿ ಬೀಳುತ್ತವೆ. ಹಾಸಿನಿಂದ ಚೀಲಗಟ್ಟಲೆ ಮೀನು ಹಿಡಿಯುತ್ತಾರೆ. ಸಣ್ಣಮೀನುಗಳು ಹೆಚ್ಚು ಬಿದ್ದಾಗ ಅವುಗಳನ್ನು ಒಣಗಿಸಿ ಕರಿಮೀನು ಮಾಡುತ್ತಾರೆ.

ಹತ್ತುಮೀನು ಹೊಡೆಯುವುದು

                ಜೂನ್ ತಿಂಗಳಲ್ಲಿ ಮೃಗಶಿರ ಮಳೆಯಿಂದ ಪುನರ್ವಸು ಮಳೆಯವರೆಗೆ ಮೀನುಗಳು ಹೊಳೆ, ಹಳ್ಳ, ಕೆರೆಗಳಲ್ಲಿ ಹೊಸನೀರು ಕಂಡಾಕ್ಷಣ ಕೆಳಗಡೆಯಿಂದ ಮೇಲಕ್ಕೆ ಹತ್ತುತ್ತಿರುತ್ತವೆ. ಬ್ಯಾಟರಿ, ಲಾಟೀನು, ದೊಂದಿಗಳನ್ನು ಹಿಡಿದುಕೊಂಡು ಹತ್ತುಮೀನು ಹೊಡೆಯಲು ಕೆರೆ, ಹೊಳೆ, ಹಳ್ಳಗಳಿಗೆ ಕತ್ತಿಯನ್ನು ಹಿಡಿದುಕೊಂಡುಹೋಗುತ್ತಾರೆ. ಕುಚ್ಚು, ಮುರಗೋಡು, ಅವಲು, ಬಾಳೆ, ಚೇಳು ಮೊಟ್ಟೆ ಇಡುವ ಕಾಲಕ್ಕೆ ಹೊಸನೀರು ಹುಡುಕುತ್ತಾ ಹತ್ತುತ್ತಿರುತ್ತವೆ. ನೆಟ್ಟ ಕತ್ತಿಯಿಂದ ಲಾಟೀನು, ಬ್ಯಾಟರಿ ಮತ್ತು ದೊಂದಿ ಬೆಳಕಿನಲ್ಲಿ ಮೀನು ಹೊಡೆಯುತ್ತಾರೆ.

ಹಿಗ್ಗೇಣಿ ಕೂಣಿ

                ಮೀನು ಹಿಡಿಯುವ ಕೂಣಿ ಸಾಧನಗಳಲ್ಲಿ ಇದು ತುಂಬಾ ದೊಡ್ಡದು. ಬಿದಿರುಕಡ್ಡಿಗಳನ್ನು ಒರೆದು ಒಂದೊಂದು ಕಡ್ಡಿಗಳನ್ನು ಬೆಟ್ಟಗಲ ಇಟ್ಟು ದಾರದಿಂದ ಹೆಣೆಯುತ್ತಾರೆ. ಜೂನ್ ತಿಂಗಳಲ್ಲಿ ಹೊಸ ಮಳೆ ಬಿದ್ದಾಗ ಕೂಣಿಯ ಒಳಗೆ ಒರ್ಲೆಯನ್ನು (ಗೆದ್ದಲುಹುಳುವಿನ ಗೂಡು) ಹಾಕಿ ಕೆರೆಯ ಮಧ್ಯೆ ಹೋಗಿ ಕೂಣಿಯನ್ನು ಮುಳುಗಿಸಿಟ್ಟುಬರುತ್ತಾರೆ. ಚೇಳುಮೀನು ಹೆಚ್ಚು ಬೀಳುತ್ತವೆ, ಹೊಸ ಮಳೆ ಬಿದ್ದಾಗ ಮಾತ್ರ ಹೆಚ್ಚು ಮೀನು ಕೂಣಿಯಲ್ಲಿ ಬೀಳುತ್ತವೆ.

ಹನುಮನ ಕೂಣಿ

                ದೊಡ್ಡ ಹೊಳೆ, ಕೆರೆಗಳಿಗೆ ಈ ಕೂಣಿಯನ್ನು ಹಾಕುತ್ತಾರೆ. ಇದನ್ನು ದಪ್ಪವಾಗಿರುವ ಬಿದರುಕಡ್ಡಿಗಳನ್ನು ಹೆಣೆದು ಮಾಡುತ್ತಾರೆ. ಇದು ಒಂದು ಆಳೆತ್ತರ (6 ಅಡಿ) ಇರುತ್ತದೆ. ಇದನ್ನು ಊರಜನ ಸೇರಿ ದಡಿಗೆ ಹೊತ್ತುಕೊಂಡು ನದಿ ಅಥವಾ ಕೆರೆಗೆ ಹಾಕುತ್ತಾರೆ. ಬಾಳೆ, ಅವಲು, ಕುಚ್ಚು, ಮುರಗೋಡು ಮೀನುಗಳು ಈ ವಿಧಾನದಲ್ಲಿ ಬೀಳುತ್ತವೆ.

ಕಾರೆಡಿ ಕೂಣಿ

                ಕಾರೆಡಿ ಕೂಣಿ (ಕಪ್ಪು ಏಡ) ಏಡಿಗಳನ್ನು ಹಿಡಿಯಲು ತಯಾರಿಸಿರುವ ಪ್ರತ್ಯೇಕ ಕೂಣಿ. ಬಿದಿರುಕಡ್ಡಿಗಳನ್ನು ಕೊಟ್ಟಿಗೆ ಬಳ್ಳಿಯಿಂದ ಹೆಣೆದು ಕೂಣಯನ್ನು ತಯಾರಿಸಿರುತ್ತಾರೆ. ಗೊಬ್ಬರಗುಂಡಿಯಲ್ಲಿರುವ ಗೊಬ್ಬರದ ಹುಳುಗಳನ್ನು ಕೂಣಿಯ ಒಳಗೆ ಹಾಕಿ ಹಳ್ಳದಲ್ಲಿ ಇಟ್ಟು ಬರುತ್ತಾರೆ. ಗೊಬ್ಬರಹುಳುಗಳನ್ನು ತಿನ್ನಲು ಏಡಿಗಳು ಕೂಣಿಯೊಳಗೆ ಪ್ರವೇಶ ಮಾಡುತ್ತವೆ. ಹೊರಗೆ ಬರಲು ಸಾಧ್ಯವಾಗದೇ ಕೂಣಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ.

ಅಂಡೆ

                ಒಂದು ದೊಡ್ಡದಾದ ಐದು ಅಡಿ ಉದ್ದ ಬಿದಿರಿನ ಅಂಡೆಯ ಮೇಲ್ಭಾಗವನ್ನು ಕಡ್ಡಿ ಕಡ್ಡಿಯಾಗಿ ಬಿಗಿದು ಹುರಿಯಿಂದ ಹೆಣೆಯುತ್ತಾರೆ. ಮೇಲ್ಭಾಗ ಸದಾ ಅಗಲವಾಗಿರುವಂತೆ ದುಂಡಾಕೃತಿಯ ಕಬ್ಬಿಣದ ಸರಳಿನ ಉಂಗುರ ಇಟ್ಟು ಹಗ್ಗದಿಂದ ಕಟ್ಟಿರುತ್ತಾರೆ. ಭತ್ತದ ಗದ್ದೆಗಳಲ್ಲಿ ಎತ್ತರದಿಂದ ತಗ್ಗಿನ ಗದ್ದೆಗೆ ನೀರು ಬೀಳುವ ಸ್ಥಳಗಳಲ್ಲಿ ಅಂಡೆಯನ್ನು ಹಾಕುತ್ತಾರೆ. ಅಂಡೆಯಲ್ಲಿ ಮುರಗೋಡು ಮೀನು ಹೆಚ್ಚಾಗಿ ಬೀಳುತ್ತದೆ.

ಬಲೆಗಳು

                ಬಲೆಗಳಲ್ಲಿ ಐದು ರೀತಿಯ ಬಲೆಗಳನ್ನು ಬಳಸುತ್ತಾರೆ. ಬಿಡಿಬಲೆ, ಗೋರುಬಲೆ, ಬೀಸುಬಲೆ, ದೊಡ್ಡಬಲೆ, ಮಾರಿಬಲೆ ಎಂದು ಐದು ನಮೂನೆಯ ಬಲೆಗಳನ್ನು ಹಾಕಿ ಅನೇಕ ರೀತಿಯ ಮೀನುಗಳನ್ನು ಹಿಡಿಯುತ್ತಾರೆ. ಬಿಡಿ ಬಲೆಗಳಿಂದ ದೊಡ್ಡ ಮೀನು ಹಿಡಿಯುತ್ತಾರೆ. ಗೋರುಬಲೆಯಲ್ಲಿ ಜಬ್ಬಿನ ಮೀನು ಹಿಡಿಯುತ್ತಾರೆ. ಬೀಸುಬಲೆಯಲ್ಲಿ ದೊಡ್ಡ ಮತ್ತು ಚಿಕ್ಕ ಮೀನುಗಳನ್ನು ಹಿಡಿಯುತ್ತಾರೆ. ದೊಡ್ಡ ಬಲೆ ಮತ್ತು ಮಾರಿಬಲೆಯಲ್ಲಿ ಎಲ್ಲಾ ರೀತಿಯ ಮೀನುಗಳನ್ನು ಹಿಡಿಯುತ್ತಾರೆ

ಬೇಲಿ ಮತ್ತು ವಡ್ಡು

             ಮಲೆನಾಡಿನಲ್ಲಿ ಬೇಲಿಯಿಲ್ಲದೆ ಯಾವ ಬೆಳೆಯನ್ನೂ ತೆಗೆಯಲು ಸಾಧ್ಯವಿಲ್ಲ. ಮನೆಯ ಸುತ್ತಮುತ್ತ, ಮನೆಯ ಹಿತ್ತಲಿಗೆ, ಬೆಳೆ ಕುಯ್ದು ‘ಗೊಣಬೆ’ ಹಾಕಿದ ನಂತರ ಬೇಲಿ ಮಾಡಬೇಕು. ಇಲ್ಲವಾದರೆ ದನಕರುಗಳು ಗೊಣವೆ ಹಿರಿದು ತಿನ್ನುತ್ತವೆ. ಬೇಸಿಗೆ ಬೆಳೆ ಉದ್ದು, ಹೆಸರು, ಕಡಲೆ, ಎಳ್ಳು ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುವಾಗ ಬೆಳೆಯ ಸುತ್ತ ಬೇಲಿ ಹಾಕಲೇಬೇಕು. ಇಲ್ಲವಾದರೆ ಜಾನುವಾರುಗಳು ಬೆಳೆಯನ್ನು ತಿಂದು ಬರಿದು ಮಾಡುತ್ತವೆ. ತೇವ ಮತ್ತು ನೀರಿಗೆ ಅನುಕೂಲವಿರುವ ಜಮೀನಿನಲ್ಲಿ ಕಬ್ಬು, ತರಕಾರಿ ಬೆಳೆಯಲು ಬೇಲಿ ಹಾಕಬೇಕಾಗುತ್ತದೆ. ದಕ್ಷಿಣಕರ್ನಾಟಕ ಭಾಗದಲ್ಲಿ ಅವರವರ ಜಾನುವಾರುಗಳನ್ನು ಕಟ್ಟಿ ಸಾಕುತ್ತಾರೆ. ದೊಡ್ಡ ದೊಡ್ಡ ಹೊಲಗಳಿಗೆ ಬೇಲಿ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಆ ಭಾಗದ ಜನ ತಮ್ಮ ಜಾನುವಾರುಗಳನ್ನು ಕಟ್ಟಿ ಸಾಕುತ್ತಾರೆ. ಮನೆಯಿಂದ ಬಿಟ್ಟು ಹೊಡೆಯುವುದಿಲ್ಲ. ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಕಾವಲು ಮಾಡುವುದಿಲ್ಲ. ಸ್ವತಂತ್ರವಾಗಿ ಬಿಡುತ್ತಾರೆ. ಜಾನುವಾರುಗಳು ತಮ್ಮ ಪಾಡಿಗೆ ತಾವು ಹೋಗಿ ಹಸಿರನ್ನು ಮೇಯ್ದುಕೊಂಡು ಬರುತ್ತವೆ. ಮಳೆಗಾಲದಲ್ಲಿ ಎಲ್ಲಾ ಕಡೆ ಫಸಲು ಬೆಳೆದಿರುತ್ತಾರೆ. ಹಾಗಾಗಿ ಪ್ರತಿ ಊರಿನಲ್ಲಿಯೂ ಸರತಿಯಂತೆ ಕಾವಲು ಮಾಡುತ್ತಾರೆ. ವಾರಕ್ಕೆ ಒಂದು ಬಾರಿ ಕಾಯಲು ಬರುತ್ತಾರೆ. ಊರಿನಲ್ಲಿ ಎರಡು-ಮೂರು ಗುಂಪುಗಳನ್ನಾಗಿ ಮಾಡಿಕೊಂಡು ಜಾನುವಾರುಗಳನ್ನು ಬಾರಿಯಲ್ಲಿ ಕಾಯುವುದು ಸಾಮಾನ್ಯವಾಗಿದೆ.

1)    ಭತ್ತದ ಫಸಲನ್ನು ಕಟಾವು ಮಾಡಿದ ನಂತರ ಜಾನುವಾರುಗಳನ್ನು ಕಾಯಲು ಬಾರಿ ಮಾಡುತ್ತಾರೆ. ಮಲೆನಾಡು ಭಾಗದಲ್ಲಿ ಹೆಚ್ಚು ಬೆಳೆಯುವುದು ಭತ್ತ. ಇದನ್ನು ಕೊಯ್ಲು ಮಾಡಿದನಂತರ ಅವರವರ ಗದ್ದೆಗಳಲ್ಲಿ ಗೊಣವೆ ಹಾಕುತ್ತಾರೆ. ಒಂದರಿಂದ ಎರಡು ಮೂರು ಗೊಣವೆಗಳನ್ನು ಹಾಕುತ್ತಾರೆ. ಇವುಗಳಿಗೆ ತಕ್ಷಣ ಬೇಲಿ ಮಾಡುತ್ತಾರೆ. ಗೊಣವೆಗಳಿಂದ ಎರಡೂವರೆ ಅಡಿ ಬಿಟ್ಟು ಗೊಣವೆಗಳ ಸುತ್ತಲೂ ಬೇಲಿ ಮಾಡುತ್ತಾರೆ. ಕೆಲವರು ಪರಗಿ ಮುಳ್ಳು, ಚದುರಂಗವನ್ನು ಕಡಿದುತಂದು ಸುತ್ತಲೂ ರಾಸಿ ಹಾಕುತ್ತಾರೆ. ದನಕರುಗಳಿಗೆ ಮುಳ್ಳಿನ ರಾಸಿಯನ್ನು ದಾಟಿ ಹೋಗುವುದು ಕಷ್ಟವಾಗುತ್ತದೆ. ಕೆಲವರು ಬಿದಿರು ಗಳವನ್ನು ಕಡಿದು ತಂದು ಜೋಡುಗೂಟಗಳನ್ನು ನಿಲ್ಲಿಸಿ ಗೂಟದ ಒಳಗಡೆ ಬಿದಿರನ್ನು ಸೇರಿಸಿ ಕೊಟ್ಟೆಬಳ್ಳಿಯಿಂದ ಗೂಟ ಇರುವ ಕಡೆ ಕಟ್ಟು ಹಾಕಿ ಇಂಬಳ ಹಾಕುತ್ತಾರೆ. ಒಂದು ಗೇಣಿಗೆ ಒಂದು ಎರಡು ಬಿದಿರು ಗಳವನ್ನು ಹಾಕಿ ಕಟ್ಟುತ್ತಾರೆ. ಸುಮಾರು ನಾಲ್ಕು ಅಡಿ ಎತ್ತರ ಬೇಲಿ ಹಾಕುತ್ತಾರೆ. ದನಕರುಗಳು ನಾಲ್ಕು ಅಡಿ ಎತ್ತರದ ಬೇಲಿಯನ್ನು ಹಾರಿ ಗೊಣವೆಯನ್ನು ಹಿರಿದು ತಿನ್ನುವುದು ಕಷ್ಟವಾಗುತ್ತದೆ.

2)   ಕೂಡು ಕುಟುಂಬದವರು (ಅವಿಭಕ್ತ ಕುಟುಂಬ) ಒಂದೇ ಕಡೆ ಹತ್ತರಿಂದ ಮೂವತ್ತು ಎಕ್ರೆ ಹುಲ್ಲು  ಬ್ಯಾಣವೂ ಸೇರಿ ಜಮೀನು ಹೊಂದಿರುತ್ತಾರೆ. ಇವರು ಮೂವತ್ತು ಎಕ್ರೆ ಜಮೀನಿಗೆ ಪ್ರತಿ ವರ್ಷ ಪದೇ ಪದೇ ಬೇಲಿ ಮಾಡುವುದು ಕಷ್ಟವಾಗುತ್ತದೆ. ಇವರು ತಮ್ಮ ಜಮೀನಿನ ಸುತ್ತ ಐದು ಅಡಿ ಆಳ, ನಾಲ್ಕು ಅಥವಾ ಐದು ಅಡಿ ಅಗಲದ ಅಗಳ ತೆಗೆಯಿಸಿ ಅಗಳದ ಮೇಲೆ ಮಣಿಪಟ್ಟೆ ಅಥವಾ ಎಪ್ಪತ್ತು ವರುಷದ ಕ್ಯಾದಿಗೆಯನ್ನು ಅಗಳದ ಸುತ್ತ ನೆಡುತ್ತಾರೆ. ಇದು ತುಂಬಾ ಒಂದಕ್ಕೊಂದು ಸೇರಿ ಹತ್ತಿರವಾಗಿ ಬೆಳೆಯುತ್ತದೆ. ಎರಡು ಮೂರು ವರ್ಷಗಳಲ್ಲಿ ತುಂಬಾ ಒತ್ತಾಗಿ ಬೆಳೆಯುತ್ತದೆ. ಇದರ ಎಲೆ ಚಪ್ಪಟೆಯಾಗಿದ್ದು ತುಂಬಾ ಗಟ್ಟಿಯಾಗಿರುತ್ತದೆ. ಎಲೆಯ ಎರಡೂ ಕಡೆ ಮುಳ್ಳುಗಳಿರುತ್ತವೆ. ಎಲೆಯ ತುದಿಯಲ್ಲಿ ಬಾಣದಂತೆ ದಪ್ಪವಾದ ಒಂದು ಮುಳ್ಳು ಇರುತ್ತದೆ. ಇದನ್ನು ದಾಟಿ ಮನುಷ್ಯರಾಗಲಿ, ಪ್ರಾಣಿಗಳಾಗಲಿ ಹೋಗಲು ಸಾಧ್ಯವಾಗದು. ಮಣಿಪಟ್ಟೆಯ ಮಧ್ಯೆ ಒಂದು ಗಳ ಎದ್ದು ತುದಿಯಲ್ಲಿ ಬೂದುಬಣ್ಣದ ಹೂವು ಬಿಡುತ್ತದೆ. ರೈತರು ಮಣಿಪಟ್ಟೆಯ ಪಟ್ಟೆಗಳನ್ನು (ಎಲೆ) ಕಡಿದು ಎರಡೂ ಕಡೆ ಇರುವ ಮುಳ್ಳುಗಳನ್ನು ಕತ್ತಿಯಿಂದ ತೆಗೆದು ಸಾಕಷ್ಟು ದಿವಸ ನೀರಿನಲ್ಲಿ ಹಾಕಿ ನೆನೆಸಿ ಕೊಳೆಸುತ್ತಾರೆ. ನಂತರ ತೆಗೆದು ಮರದ ತುಂಡಿನಿಂದ ಬಡಿದರೆ ಉತ್ತಮವಾದ ಮತ್ತು ಗಟ್ಟಿಯಾದ ಬಿಳಿಬಣ್ಣದ ದಾರ ಸಿಗುತ್ತದೆ. ಆ ದಾರದಿಂದ ಹಗ್ಗ ಕಣ್ಣಿಗಳನ್ನು ಮಾಡುತ್ತಾರೆ. ಪುಂಡಿನಾರಿನಷ್ಟೇ ಗಟ್ಟಿಯಾಗಿರುತ್ತದೆ.

3)  ಅನುಕೂಲಸ್ಥ ಕುಟುಂಬದ ಕೆಲವು ಬುದ್ಧಿವಂತರು ತುಂಬಾ ಹಿಂದೆ ದರಖಾಸ್ತು ಕಾನೂನು ಬಿಗಿಯಿಲ್ಲದೇ ಇರುವಾಗ ಕುಟುಂಬದಲ್ಲಿರುವ ಎರಡು ಜನಕ್ಕೆ ಹತ್ತರಿಂದ ಹದಿನೈದು ಎಕ್ರೆ ಖುಷ್ಕಿ ಜಮೀನನ್ನು ಮಂಜೂರ್ಮಾಡಿಸಿಕೊಂಡವರು. ಗಾಡಿ ಎತ್ತುಗಳಿಗೆ ಹುಲ್ಲು ಬ್ಯಾಣ ಮಾಡಲು ಹದಿನೈದು ಎಕ್ರೆ ಸುತ್ತಲೂ ಐದು ಅಡಿ ಅಗಲ, ನಾಲ್ಕು ಅಡಿ ಆಳದ ಅಗಳ ತೋಡಿಸಿ ಅಗಳ ತೋಡಿ ಹಾಕಿದ ಹೊಸಮಣ್ಣಿನ ಮೇಲೆ ಮೈಸೂರು ಖಾರೆ ಗಿಡವನ್ನು ನೆಡುತ್ತಾರೆ. ಇದು ಒಂದೆರಡು ವರ್ಷದಲ್ಲಿ ಭಯಂಕರವಾಗಿ ಬೆಳೆಯುತ್ತದೆ. ಇದು ಮೈಯೆಲ್ಲಾ ಮುಳ್ಳಿನಿಂದ ಕೂಡಿರುತ್ತದೆ. ಮನುಷ್ಯರು ಮತ್ತು ದನಕರುಗಳು ದಾಟಲು ಸಾಧ್ಯವೇ ಇಲ್ಲ. ಈ ಬ್ಯಾಣದಲ್ಲಿ ತಮ್ಮ ಕುಟುಂಬದ ಗಾಡಿ ಎತ್ತುಗಳ ಜೊತೆಯಲ್ಲಿ ಊರಿನ ಬೇರೆಯವರಿಗೂ ಗಾಡಿ ಎತ್ತುಗಳನ್ನು ಮೇವಿಗೆ ಬಿಟ್ಟುಕೊಳ್ಳುತ್ತಾರೆ. ಒಂದು ಜೊತೆ ಎತ್ತಿಗೆ ಒಂದೂವರೆಯಿಂದ ಎರಡು ಸಾವಿರ ಹಣ ಪಡೆಯುತ್ತಾರೆ. ಮಳೆಗಾಲದಲ್ಲಿ ಮೂರು ತಿಂಗಳು ಮಾತ್ರ ಬ್ಯಾಣಕ್ಕೆ ಬಿಟ್ಟುಕೊಳ್ಳುತ್ತಾರೆ.

4)  ಬೇಸಿಗೆಯಲ್ಲಿ ಬೆಳೆಯುವ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಕಡಲೆ, ಎಳ್ಳು, ಹುರುಳಿ, ಶುಂಠಿ, ತರಕಾರಿಗಳನ್ನು ಬೆಳೆಯಲು ಬಿದಿರು ಗಳಗಳನ್ನು ಸೀಳಿ ದಬ್ಬೆಗಳನ್ನು ಮಾಡಿ ಬೇಲಿಯನ್ನು ಹೆಣೆಯುತ್ತಾರೆ. ಸುಮಾರು ಆರು ಅಡಿ ಎತ್ತರ ಇರುತ್ತದೆ. ಇದಕ್ಕೆ ಗಟ್ಟಿಯಾದ ಜೋಡು ಗೂಟ ನಿಲ್ಲಿಸಿ, ಗೂಟಗಳ ಮಧ್ಯೆ ಇಟ್ಟು ಚಿಪ್ಪುಳ ಕಟ್ಟುತ್ತಾರೆ. ಈ ಬೇಲಿಯಲ್ಲಿ ಹಂದಿ, ನರಿ, ಮೊಲ, ಬರಕ ಮುಂತಾದ ಚಿಕ್ಕ ಪ್ರಾಣಿಯೂ ಹೋಗುವ ಹಾಗಿಲ್ಲ.

5)  ಮಲೆನಾಡಿನ ಭಾಗದಲ್ಲಿ ಹಿಂದೆ ರಸದಾಳೆ ಕಬ್ಬು ಬೆಳೆಯುತ್ತಿದ್ದರು. ಅನೇಕ ವರ್ಷಗಳ ಕಾಲ ಕಬ್ಬು ಬೆಳೆದು ಜೋನಿಬೆಲ್ಲ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವುದನ್ನು ಬಿಟ್ಟಿದ್ದಾರೆ. ಕಬ್ಬು ಬೆಳೆಯುವಾಗ ಕಬ್ಬನ ಗದ್ದೆಗೆ ಸುತ್ತಲೂ ಬೇಲಿ ಮಾಡಬೇಕಾಗಿತ್ತು. ಕಬ್ಬು ಹಾಕಿದ ನಂತರ ಜೋಡು ಗೂಟಗಳನ್ನು ನಿಲ್ಲಿಸಿ ಬಿದಿರು ಗಳಗಳನ್ನು ಮುಳ್ಳುಗಳನ್ನು ಸವರಿ ಗಳ ಮಾತ್ರ ತಂದ ಜೋಡು ಗೂಟದ ಒಳಗಡೆ ಸೇರಿಸಿ, ಗೂಟಗಳನ್ನು ಸೇರಿಸಿ ಗಟ್ಟಿಯಾಗಿ ಕಟ್ಟುತ್ತಿದ್ದರು. ಬಿದಿರಡ್ಡೆಗಳನ್ನು ಒಂದರ ಮೇಲೊಂದು ಇಟ್ಟು ಸುಮಾರು ನಾಲ್ಕೂವರೆ ಅಡಿ ಎತ್ತರ ಬೇಲಿ ಕಟ್ಟುರಿತ್ತಿದ್ದರು. ಎಂತಹ ತುಡುದನಗಳಾದರೂ ಬೇಲಿ ಹಾರಲು ಸಾಧ್ಯವಾಗುತ್ತಿರಲಿಲ್ಲ. ಈಗ ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದ್ದಾರೆ.

6)  ಅಡಿಕೆ ತೋಟ ಮನೆಯ ಮುಂಭಾಗದಲ್ಲಿ ತೋಟ ಮಾಡುವಾಗ ಚಿಗರ ಗೂಟಗಳನ್ನು ನೆಟ್ಟು ಅಡಿಕೆ ಅಥವಾ ಬಿದಿರು ದಬ್ಬೆಗಳಿಂದ ಚಿಪ್ಪುಳ ಹಾಕಿ ಕಟ್ಟುತ್ತಿದ್ದರು. ಚಿಗರ ಗೂಟಗಳು ಮಲೆನಾಡಿನಲ್ಲಿ ತುಂಬಾ ಇವೆ. ಲಕ್ಕಿ ಗಿಡ, ಹಾಲವಾಣ, ಆಡುಮಟ್ಟದ ಗಿಡ ಕಳ್ಳಿ ಮನೆಯ ಸುತ್ತ ಖಾಯಂ ಬೇಲಿ ಮಾಡಲು ಇವುಗಳನ್ನು ಬಳಸುತ್ತಾರೆ.

7)   ಅಡಿಕೆ ತೋಟಗಳಿಗೆ ಈ ಬೇಲಿಗಳು ತಡೆಯುವುದಿಲ್ಲ. ಅದಕ್ಕಾಗಿ ದಪ್ಪಗಿರುವ ಕಾಡುಕಲ್ಲುಗಳನ್ನು ಆರಿಸಿ ರಾಸಿ ಹಾಕಿಕೊಂಡು ಕಲ್ಲಿನೊಂದಿಗೆ ಮಣ್ಣನ್ನು ಸೇರಿಸಿ ಕಂಟ್ಣ ಕಟ್ಟುತ್ತಾರೆ. ಗೋಡೆ ಕಟ್ಟಿದಂತೆ ಸುಮಾರು ಏಳು ಅಡಿವರೆಗೆ ಕಂಟ್ಣ ಎಬ್ಬಿಸುತ್ತಾರೆ. ಇದು ಖಾಯಂ ಆಗಿ ಉಳಿಯುತ್ತದೆ. ಮಳೆಗಾಲದಲ್ಲಿ ಕಂಟ್ಣದ ಮೇಲೆ ತೊಳೆದು ಹಾಳಾಗದಿರಲಿ ಎಂದು ಕರಡವನ್ನು ಹೊಚ್ಚುತ್ತಾರೆ.

8)  ಇತ್ತೀಚೆಗೆ ತೋಟದ ಸುತ್ತ ಕಂಟ್ಣ ಕಟ್ಟಲು ಕಷ್ಟವಾದರೆ ಸುತ್ತಲೂ ಕಲ್ಲಿನ ಕಂಬ ನಿಲ್ಲಿಸಿ ತಂತಿಯನ್ನು ಕಟ್ಟುತ್ತಾರೆ. ತಂತಿಯನ್ನು ಕಟ್ಟಿದರೂ ಕೂಡ ಚಿಗರ ಗೂಟ ನೆಡುತ್ತಾರೆ.

9)  ಇತ್ತೀಚೆಗೆ ಜನಪ್ರಿಯವಾಗಿರುವ ಬೇಲಿ ಎಂದರೆ ಐಬೆಕ್ಸ್ ಬೇಲಿ. ಹಂದಿ ಮುಂತಾದ ಕಾಡುಪ್ರಾಣಿಗಳಿಂದ ಮತ್ತು ತುಡು ಜಾನುವಾರುಗಳಿಂದ ಹಾಗೂ ಕಳ್ಳಕಾಕರಿಂದ ಬೆಳೆಯನ್ನು ರಕ್ಷಿಸಲು ಐಬೆಕ್ಸ್ ಬೇಲಿಯನ್ನು ಮಾಡುತ್ತಿದ್ದಾರೆ. ಆರು ಅಡಿ ಉದ್ದವಿರುವ ಕಲ್ಲು ಕಂಬಗಳನ್ನು ತರಿಸಿ ನಾಲ್ಕು ಅಡಿಗೆ ಒಂದರಂತೆ ನಿಲ್ಲಿಸಿ, ಐದು ಅಥವಾ ನಾಲ್ಕು ಸುತ್ತು ಬರುವಂತೆ ಇನ್ಸುಲೇಟರ್‍ಗಳನ್ನು ಕಂಬಗಳಿಗೆ ಕಟ್ಟಿ ಇನ್ಸುಲೇಟರ್ ಮೇಲೆ ತಂತಿಯನ್ನು ಎಳೆಯುತ್ತಾರೆ. ಛಾರ್ಜಬಲ್ ಬ್ಯಾಟರಿಯಿಂದ ತಂತಿಗಳಿಗೆ ಸಂಪರ್ಕ ಕೊಡಲಾಗುತ್ತದೆ. ಕಾಡುಪ್ರಾಣಿಗಳಾದ ಕಾಡುಹಂದಿ, ಕಾಡುಕೋಣ, ಕಾಡೆಮ್ಮೆ, ಹುಲಿ ಇತ್ಯಾದಿ ಕಾಡುಪ್ರಾಣಿಗಳಿಗೆ ದಾಟಲು ಸಾಧ್ಯವೇ ಇಲ್ಲ. ಹಂದಿಯಂತಹ ಒರಟು ಪ್ರಾಣಿಯಂತೂ ಬೇಲಿಯಲ್ಲಿ ತಂತಿ ನೋಡಿದರೆ ಸಾಕು ಮಾರುದ್ದ ಓಡುತ್ತದೆ. ಪ್ರಾಣಿಗಳು ಬೇಲಿಗೆ ಸ್ವಲ್ಪ ತಾಗಿದರೂ ಸಾಕು ವಿದ್ಯುತ್ ಹೊಡೆದಂತೆ ಶಾಕ್ ಹೊಡೆಯುತ್ತದೆ. ಅದಕ್ಕಾಗಿ ಪ್ರಾಣಿಗಳೂ ಕೂಡ ಹೆದರುತ್ತವೆ.

ವಡ್ಡುಗಳು

                ಮಲೆನಾಡಿನಲ್ಲಿ ಹಳ್ಳ-ಕೊಳ್ಳ, ಹೊಳೆ-ಕೆರೆ, ಝರಿಗಳು ಹೆಚ್ಚಾಗಿರುತ್ತವೆ. ಗದ್ದೆ ಬಯಲಿನ ತಲೆಕಟ್ಟಿನಲ್ಲಿ ಮಧ್ಯೆ ಹಳ್ಳ ಹರಿಯುತ್ತಿರುತ್ತದೆ. ಗದ್ದೆ ಬಯಲಿನ ತಲೆಕಟ್ಟಿನಲ್ಲಿರುವ ಹಳ್ಳಕ್ಕೆ ವಡ್ಡು ಕಡ್ಡಿದರೆ ಕೆಳಗಿನ ಭಾಗದ ಜಮೀನಿಗೆ ಸುಲಭವಾಗಿ ನೀರು ಹರಿಯುತ್ತದೆ. ಈ ರೀತಿಯ ನೀರಿನಿಂದ ತರಕಾರಿ, ಕಬ್ಬು ಇತ್ಯಾದಿ ಬೆಳೆಗಳಿಗೆ ಅತ್ಯಂತ ಪ್ರಯೋಜನವಾಗುತ್ತದೆ. ಗದ್ದೆ ಬಯಲಿನ ಮಧ್ಯದಲ್ಲಿ ಹಳ್ಳ ಹರಿಯುತ್ತಿದ್ದರೆ ಈ ಹಳ್ಳಕ್ಕೆ ನಮಗೆ ಬೇಕಾದ ಕಡೆ ವಡ್ಡು ಹಾಕಿ ನೀರು ನಿಲ್ಲಿಸಿ, ಮೇಲ್ಭಾಗದ ಗದ್ದೆಗಳಿಗೆ ಒಂದೆರಡು ಗದ್ದೆ ನೀರು ಹಚ್ಚಬೇಕಾದರೆ ನೀರನ್ನು ವಡ್ಡು ಕಟ್ಟಿ ನಿಲ್ಲಿಸಿ ಎರಡು ಜನ ಸೇರಿ ಗೂಡೆಯಿಂದ ಎತ್ತಿ ಹಾಕುತ್ತಾರೆ. ಈ ರೀತಿಯ ನೀರಿನಿಂದ ಬದನೆ, ಮೆಣಸಿನಗಿಡ, ಬೆಂಡೆಗಿಡ ಮುಂತಾದ ಗಿಡಗಳಿಗೆ ಏತ ನೀರಾವರಿಯಂತೆ ಗೂಡೆಯಿಂದ ನೀರು ಎತ್ತಿ ಹಾಯಿಸಬಹುದು. ಗದ್ದೆ ಬಯಲಿನ ತಲೆಕಟ್ಟಿನಲ್ಲಿ ಒಂದು ಹಳ್ಳ ಹರಿಯುತ್ತಿದ್ದರೆ ಆ ಹಳ್ಳಕ್ಕೆ ಎಂಟು-ಹತ್ತು ಮನೆಯವರು ಸೇರಿ, ಹಳ್ಳಕ್ಕೆ ವಡ್ಡು ಕಟ್ಟಿ ಬೆಳೆದಿರುವ ಫಸಲಿಗೆ ನೀರು ಹಾಯಿಸುತ್ತಾರೆ. ನೀರಾವರಿ ಅನುಕೂಲತೆ ಇರುವ ಕಡೆ ಎರಡನೇ ಬೆಳೆ ಬೆಳೆಯುತ್ತಾರೆ.

ದೀವರು ಬಳಸುವ ಕೃಷಿ ಉಪಕರಣಗಳು

                ದೀವರು ವ್ಯವಸಾಯಕ್ಕಾಗಿ ಬಳಸುವ ಉಪಕರಣಗಳು ತುಂಬಾ ವೈವಿಧ್ಯತೆಯಿಂದ ಕೂಡಿವೆ. ಒಂದೊಂದು ಉಪಕರಣಕ್ಕೆ ತನ್ನದೇ ಆದ ಉಪಯೋಗ ಹಾಗೂ ವೈಶಿಷ್ಟ್ಯವಿದೆ. ಇವುಗಳ ಬಳಕೆಯಲ್ಲಿ ಸಂಪ್ರದಾಯನಿಷ್ಠ ಮನೋಭಾವ ಕಂಡುಬರುತ್ತದೆ. ಒಂದು ಉಪಕರಣಕ್ಕೆ ಆದ ಕೆಡುಕು ತಮ್ಮ ಬದುಕಿನ ಮೇಲಾದ ಕೆಡಕು ಎಂದು ತಿಳಿಯುತ್ತಾರೆ. ಉಳುಮೆ ಮಾಡುವಾಗ ನೇಗಿಲು, ನೊಗ ಮುರಿದರೆ ತಮಗೆ ಒಳ್ಳೆಯದಾಗುವುದಿಲ್ಲವೆಂದು ತಿಳಿಯುತ್ತಾರೆ. ಪ್ರತಿಯೊಂದು ಕೆಲಸವನ್ನು ಶುರು ಮಾಡುವಾಗ ಉಪಕರಣಕ್ಕೆ ಭಕ್ತಯಿಂದ ಶರಣು ಮಾಡಿ ಕೆಲಸ ಪ್ರಾರಂಭ ಮಾಡುತ್ತಾರೆ.

ಅಗೆಯುವ ಸಾಧನಗಳು

ಗುದ್ದಲಿ

                ಅಗೆಯುವ ಸಾಧನಗಳಲ್ಲಿ ಗುದ್ದಲಿ ತುಂಬಾ ಪ್ರಮುಖವಾದುದು. ವ್ಯವಸಾಯ ಮತ್ತು ವ್ಯವಸಾಯೋತ್ತರ ಕೆಲಸಗಳಲ್ಲಿ ಗುದ್ದಲಿ ಬೇಕೇಬೇಕು. ಒಂದೂವರೆ ಅಡಿ ಉದ್ದ, ಒಂದು ಅಡಿ ಅಗಲದ ಉಕ್ಕಿನ ತಗಡಿನ ಸಾಧನ. ಒಂದು ಕಡೆ ಮೂರೂವರೆ ಅಡಿ ಉದ್ದ ಅಥವಾ ನಾಲ್ಕು ಅಡಿ ಉದ್ದದ ಮರದ ಕಾವು ಇರುತ್ತದೆ. ಕೃಷಿಯ ಪ್ರತಿಯೊಂದು ಕೆಲಸಕ್ಕೆ ಗುದ್ದಲಿ ಬೇಕೇಬೇಕು.

ಪಿಕಾಸಿ

                ಇದು ಕಬ್ಬಣದ ಉಪಕರಣ. ಇದಕ್ಕೆ ಎರಡೂ ಕಡೆ ಕವಲುಗಳಿರುತ್ತವೆ. ಒಂದು ಕಡೆ ಚೂಪಾಗಿದ್ದು ಇನ್ನೊಂದು ಕಡೆಯ ತುದಿಯ ಭಾಗ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಮಧ್ಯದಲ್ಲಿ ಮರದ ಗಟ್ಟಿಯಾದ ಕಾವು ಹಾಕಲು ತೂತು (ರಂಧ್ರ) ಇರುತ್ತದೆ. ಇದರಲ್ಲಿರುವ ಅಗಲವಾದ ರಂಧ್ರಕ್ಕೆ ಗಟ್ಟಿಯಾದ ಮರದ ಕಾವು ಹಾಕಿರುತ್ತಾರೆ. ಪಿಕಾಸಿಯನ್ನು ಮಣ್ಣು ಅಗೆಯಲು, ಗುಂಡಿ ತೋಡಲು ಬಳಸುತ್ತಾರೆ.

 

ಕುಂಟಾಣಿ

                ಸುಮಾರು ಒಂದೂವರೆ ಅಡಿ ಉದ್ದ, ನಾಲ್ಕು ಇಂಚು ಅಗಲ, ಒಂದೂವರೆ ಇಂಚು ದಪ್ಪದ ಉಕ್ಕಿನ ಗುದ್ದಲಿ ಆಕಾರದ ಕಬ್ಬಿಣದ ಸಾಧನ. ಕುಂಟಾಣಿಯ ಒಂದು ಕಡೆ ಹರಿತವಾಗಿದ್ದು ಚಪ್ಪಟೆಯಾಗಿರುತ್ತದೆ. ಇನ್ನೊಂದು ಕಡೆ ನಾಲ್ಕು ಅಡಿ ಉದ್ದದ ಮರದ ಹಿಡಿಯಿರುತ್ತದೆ. ಗಿಡಗಳನ್ನು ನೆಡಲು, ಕಳೆ ಗಿಡಗಳನ್ನು ಬೇರು ಸಹಿತ ಕಿತ್ತುಹಾಕಲು ಉಪಯುಕ್ತ ಸಾಧನ.

ಹಾರೆ

ಇದೊಂದು ಕಬ್ಬಿಣದ ಸಲಾಕೆ. ಒಂದು ತುದಿ ಚೂಪಾಗಿರುತ್ತದೆ. ಇನ್ನೊಂದು ತುದಿ ಚಪ್ಪಟೆಯಾಗಿರುತ್ತದೆ. ಗುಂಡಿ ತೋಡಲು, ಬೇಲಿಯ ಗೂಟಗಳನ್ನು ನಿಲ್ಲಿಸಲು, ಭಾರವಾದ ವಸ್ತುಗಳನ್ನು ಉರುಳಿಸಲು ಬಳಸುತ್ತಾರೆ.

ಕತ್ತರಿಸುವ ಸಾಧನೆಗಳು

ಕೊಡಲಿ

                ಇದೊಂದು ಕಬ್ಬಿಣದ ಸಾಧನ. ದೊಡ್ಡದಾದ ಮರಗಳನ್ನು ಕಡಿಯಲು, ಒಣಸೌದೆಯನ್ನು ಸೀಳಲು, ಮರದ ಉದ್ದ ತುಂಡುಗಳನ್ನು ಮಧ್ಯೆ ಕತ್ತರಿಸಲು ಬಳಸುತ್ತಾರೆ.

ಗರಗಸ

                ಮರ ಕೊಯ್ಯಲು ಬಳಸಲು ಮುಖ್ಯವಾದ ಸಾಧನ. ಉಕ್ಕಿನ ತೆಳುವಾದ ತಗಡಿನಲ್ಲಿ ತಯಾರಿಸುತ್ತಾರೆ. ಇದು ಐದು ಅಡಿ ಉದ್ದವಿರುತ್ತದೆ. ಅರ್ಧ ಅಡಿಯಿಂದ ಒಂದು ಅಡಿ ಅಗಲವಿರುತ್ತದೆ. ಇದಕ್ಕೆ ಒಂದು ಕಡೆ ಹಲ್ಲುಗಳಿರುತ್ತವೆ. ಹಿಡಿದು ಕೊಯ್ಯಲು ಎರಡು ಕಡೆ ಮರದ ಹಿಡಿ ಇರುತ್ತದೆ. ಇದನ್ನು ಮರ ಕೊಯ್ಯಲು ಎರಡು ಜನ ಬೇಕಾಗುತ್ತಾರೆ.

ಕಂದಲಿ ಕುಡುಗೋಲು (ಕತ್ತಿ)

                ಕತ್ತರಿಸುವ ಸಾಧನಗಳಲ್ಲಿ ಕತ್ತಿ ಪ್ರಮುಖವಾದುದು. ಕತ್ತಿಯಲ್ಲಿ ಕೊಯಿಲುಕತ್ತಿ, ಸೊಪ್ಪುಕತ್ತಿ, ಕಳೆಕತ್ತಿ, ಮೆಟ್ಟುಕತ್ತಿ, ದೊಡ್ಡಕತ್ತಿ-ಹೀಗೆ ಅನೇಕ ವಿಧಾನಗಳಿವೆ. ಅರ್ಧಚಂದ್ರಾಕೃತಿಯಲ್ಲಿದ್ದು ಕತ್ತಿಯ ಹಿಂಭಾಗಕ್ಕೆ ಮರದ ಹಿಡಿ ಇರುತ್ತದೆ. ಕತ್ತಿಯನ್ನು ಕಬ್ಬಿಣ, ಉಕ್ಕಿನಿಂದ ತಯಾರಿಸಲಾಗುತ್ತದೆ. ಕತ್ತಿಯ ಒಳಮೈ ಎರಡರಿಂದ ನಾಲ್ಕು ಅಂಗುಲ ಅಗಲವಾಗಿದ್ದು ಒಂದರಿಂದ ಒಂದೂವರೆ ಅಡಿ ಉದ್ದವಿರುತ್ತದೆ.

                ಕೊಯಲು ಕತ್ತಿ ಎರಡು ಅಡಿ ಉದ್ದವಿರುತ್ತದೆ. ಭತ್ತವನ್ನು ಕೊಯ್ಯಲು ಬಳಸುತ್ತಾರೆ. ಭತ್ತ ಕೊಯ್ಯಲು, ಸೊಪ್ಪು, ಹುಲ್ಲು, ಕರಡ ಕೊಯ್ದು ತರಲು ಬಳಸುವ ಸಾಧನಕ್ಕೆ ಕುಡಗೋಲು ಎನ್ನುತ್ತಾರೆ.

                ಮೆಟ್ಟುಕತ್ತಿಯ ಬುಡದ ಭಾಗವನ್ನು ಒಂದು ದೊಡ್ಡದಾದ ಮಣೆಗೆ ಹೊಡೆದಿರುತ್ತಾರೆ. ಅಡಿಕೆ ಸುಲಿಯಲು ಮಾತ್ರ ಬಳಸುತ್ತಾರೆ.

ಎತ್ತಿನಗಾಡಿ

                ಇದೊಂದು ಬಹುಮುಖ್ಯವಾದ ಸಾರಿಗೆ ಸಾಧನ. ಕೃಷಿ ಉತ್ಪನ್ನಗಳು, ಗೊಬ್ಬರ, ಸೌದೆ, ಮರಮುಟ್ಟುಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ಅನೇಕ ಬಿಡಿಭಾಗಗಳನ್ನು ಹೊಂದಿರುವ ಸಾಧನ.

ಮೇಲ್ಮಣೆ

                ಮೂಕು ಮತ್ತು ಉದಿಗೆ ಮರದ ಮೇಲ್ಭಾಗದಲ್ಲಿರುವ ದಪ್ಪವಾದ ಹೊನ್ನೆ ಎಂಬ ಜಾತಿಯ ಮರದ ಹಲಗೆ.

ಮೂಕು

                ಕುದುರೆಯ ಮುಖದ ಆಕಾರದ ಗಾಡಿಯ ಮುಂಭಾಗವನ್ನು ನೆಲಕ್ಕೆ ಇಡುವ ಮತ್ತು ಗಾಡಿಯನ್ನು ಎತ್ತುವ ಸಾಧನ. ಇದನ್ನು ಹೊನ್ನೇಮರದಂದ ತಯಾರಿಸಲಾಗುತ್ತದೆ.

ಉದಿಗೆಮರ

                ಇದು ಗಾಡಿಯ ಬೆನ್ನೆಲುಬು. ಹದಿನಾಲ್ಕು (14) ಅಡಿ ಉದ್ದವಾಗಿರುತ್ತದೆ. 6ಘಿ3.5 ಇಂಚು ದಪ್ಪವಿರುವ ಉದ್ದನೆಯ ಸೈಜು. ಗಾಡಿಯ ಮಧ್ಯದಲ್ಲಿರುತ್ತದೆ. ಗಾಡಿ ಹೊಡೆಯುವವನು ಕುಳಿತುಕೊಳ್ಳಲು ಆಧಾರವಾಗಿರುವಂತೆ ಬಗಿನೆ ಅಥವಾ ಬಿದಿರಿನ ಪಟ್ಟಿಗಳನ್ನು ಹಾಕಿರುತ್ತಾರೆ.

ಸಿಫಾರಿ ಕಟ್ಟಿಗೆ

                ಗಾಡಿ ಹೊಡೆಯುವವನು ಕುಳಿತುಕೊಳ್ಳಲು ಆಧಾರವಾಗಿರುವಂತೆ ಬಗಿನೆ ಅಥವಾ ಬಿದಿರಿನ ಪಟ್ಟಿಗಳು.

ಕ್ವಾರೆಪಟ್ಟಿ

                ಓಟಿ ಮತ್ತು ಉದಿಗೆ ಮರವನ್ನು ಸೇರಿಸಲಿರುವ ಮರದ ಪಟ್ಟಿಗಳು.

   ಓಟಿ

                ಗಾಡಿಯ ಮಧ್ಯೆ ಇರುವ ಗಾಡಿಯ ಭಾರವನ್ನು ಹೊರುವ ಸಾಧನ. ಅಚ್ಚು, ಚಕ್ರ, ಉದಿಗೆಮರ, ಏಣಿತೋಳು ಮತ್ತು ಅಚ್ಚುಗಳನ್ನು ಹೊರುವ ದಪ್ಪನೆಯ ಮರದ ಸಾಧನ. ನಾಲ್ಕು ಅಡಿ ಉದ್ದವಿರುತ್ತದೆ.

 ಗಾಡಿಚಕ್ರ ಪುಟ್ಟಿ

                ಚಕ್ರದ ಕಾಲು ಮತ್ತು ಹಳಿಯ ಮಧ್ಯೆ ವೃತ್ತಾಕಾರದಲ್ಲಿ ಬಳಸುವ ಮರದ ಎರಡು ಅಡಿ ಉದ್ದದ ಸಾಗುವಾನಿ ಮರದ ಚಪ್ಪಟೆಯಾಗಿರುವ ದಪ್ಪನೆಯ ಹಲಗೆಗಳು.

ಕಾಲು (ಗಾಡಿ)

                ಗುಂಭ ಮತ್ತು ಪುಟ್ಟಿಯನ್ನು ಬಿಗಿಗೊಳಿಸಲಿರುವ ಸಾಗುವಾನಿ ಮರದ 2ಘಿ3 ಸೈಜಿನ ಮರದ ಪಟ್ಟಿ.

ಗುಂಭ

                ಚಕ್ರದ ಮಧ್ಯಭಾಗ ಪುಟ್ಟಿ, ಕಾಲು ಹಳಿಗಳನ್ನು ಸೇರಿಸುವ ಕೇಂದ್ರ.

ಹಳಿ

                ಚಕ್ರದ ಮೇಲ್ಭಾಗದಲ್ಲಿ ಸುತ್ತುವರಿದಿರುವ ಕಬ್ಬಿಣದ (ಉಕ್ಕು) ಚಪ್ಪಟೆಯ ಪಟ್ಟಿ.

ಅಚ್ಚು

                ಗಾಡಿಯ ಚಕ್ರಗಳನ್ನು ತಿರುಗಿಸುವ ಎರಡು ಚಕ್ರಗಳನ್ನು ಹೊತ್ತಿರುವ ಕಬ್ಬಿಣದ ದಪ್ಪನೆಯ ತುದಿ ಮತ್ತು ದುಂಡಾಗಿರುವ ಪಟ್ಟಿ.

ಕೀಲು

                ಗಾಡಿಚಕ್ರವನ್ನು ಅಚ್ಚಿನ ಹೊರಮುಖ ಸರಿದಾಡದಂತೆ ತಡೆಯುವ ಕಬ್ಬಿಣದ ಸರಳು.

ಗುಂಭಕಟ್ಟು

                ಗುಂಭಗಳ ರಕ್ಷಣೆ ಎರಡೂ ಕಡೆ ಬಿಗಿ ಮಾಡಿದ ಕಬ್ಬಿಣದ ಪಟ್ಟಿ.

ಓಟಿಕಟ್ಟು

                ಅಚ್ಚು ಮತ್ತು ಓಟಿ ಅಚ್ಚುಗಳನ್ನು ಬಿಗಿಗೊಳಿಸುವ ಕಬ್ಬಿಣದ ಸರಳು.

ಮೂಕಿಮೊಳೆ

                ಮೂಕಿ ಮತ್ತು ಉದಿಗೆಮರ ಮೇಲ್ಮಣೆಯನ್ನು ಸೇರಿಸಿ ಬಿಗಿಗೊಳಿಸುವ ಮೇಲ್ಭಾಗದಲ್ಲಿ ಹಿತ್ತಾಳೆ ಕಳಸವಿರುವ ಕಬ್ಬಿಣದ ಸರಳು.

ಕೊಳ್‍ಗೂಟ

              ಗಾಡಿಯ ನೊಗದಲ್ಲಿ ಎತ್ತುಗಳು ಒಳಸರಿಯದಂತೆ ಮೇಲ್ಭಾಗದಲ್ಲಿ ಗಿಳಿರೂಪದ ಮರದ ಹತ್ತು ಇಂಚು ಉದ್ದವಿರುವ ಪಟ್ಟಿ.

 ಕೊಳ್‍ಹಗ್ಗ

                ಗಾಡಿಯನ್ನು ಎತ್ತಿನ ಕೊರಳಿಗೆ ನೊಗದಿಂದ ಕಟ್ಟುವಾಗ ನೊಗದಿಂದ ಎತ್ತಿನ ಕೊರಳಿಗೆ ಕಟ್ಟುವ ಕತ್ತದ ಹುರಿಯಿಂದ ತಯಾರಿಸಿದ ಗೊಂಡೆ ಗಂಟು ಇರುವ ಹಗ್ಗ.

ಗಾಡಿ ನೊಗ

                ಗಾಡಿಯನ್ನು ಎಳೆಯಲು ಎತ್ತುಗಳ ಹೆಗಲಿಗೆ ಹಾಕುವ ಮರದಿಂದ ತಯಾರಿಸಿದ ಸಾಧನ. ನೊಗವನ್ನು ಹಲಸು, ಶಿವನೆ ಮರಗಳಿಂದ ತಯಾರಿಸುತ್ತಾರೆ.

ಮೂಕಿನ ಮಿಣಿ

                ಮೂಕು ಮತ್ತು ನೊಗವನ್ನು ಸೇರಿಸಿ ಕಟ್ಟುವ ಹಗ್ಗ. ಕತ್ತ ಅಥವಾ ಪುಂಡನಾರಿನಿಂದ ಹಗ್ಗವನ್ನು ತಯಾರಿಸುತ್ತಾರೆ.

ಏಣಿತೋಳು

                ಒಂಬತ್ತು ಅಡಿ ಉದ್ದದ 6ಘಿ3.5 ಇಂಚಿನ ಹೊನ್ನೆಮರದ ಹಲಗೆ ತೋಳುಗಳು. ಏಣಿ ಆಕಾರದಲ್ಲಿ ಅಡ್ಡಪಟ್ಟಿಗಳನ್ನು ಜೋಡಿಸಿರುವ ಮರದ ಹಲಗೆಗಳು.

ಕಣಗೆ ಗೂಟ

                ಏಣಿ ತೋಳಿಗೆ ಎರಡೂ ಕಡೆ ನಿಲ್ಲಿಸುವ ಮರದ ಗೂಟಗಳು. ಬಿದಿರು ಅಥವಾ ಮರದ ಗೂಟಗಳು. ಅರಚಾಟಿ ಎಂಬ ಜಾತಿಯ ಮರದ ಗೂಟಗಳನ್ನು ಬಳಸುತ್ತಾರೆ. ಈ ಗೂಟಗಳು ತುಂಬಾ ಗಟ್ಟಿಯಾಗಿರುತ್ತವೆ. 6ಘಿ6=12 ಗೂಟಗಳಿರುತ್ತವೆ. ಆರು ಅಡಿ ಉದ್ದದ ಎರಡೂ ಕಡೆ ಸೇರಿ ಹನ್ನೆರಡು ಗೂಟಗಳಿರುತ್ತವೆ. ಈ ಗೂಟಗಳಿಗೆ ಎರಡೂ ಕಡೆ ಅಡಿಕೆ ಮರದಿಂದ ತಯಾರಿಸಿದ ಚಪ್ಪಟೆಯಾದ ದಬ್ಬೆಗಳನ್ನು ಕತ್ತದ ಹಗ್ಗದಿಂದ ಕಟ್ಟಿರುತ್ತಾರೆ. ಒಂದೊಂದು ಕಡೆ ಐದೈದು ದಬ್ಬೆಗಳಿರುತ್ತವೆ.

ಅದ್ಲೆ

                ಕಣಗೆ ಗೂಟಕ್ಕೆ ಉದ್ದ ಸಾಲಾಗಿ ಕಟ್ಟುವ ಅಡಿಕೆ ದಬ್ಬೆಗಳು.

ಅಂಬಾರದಂಡಿಗೆ

                ಕಣಗೆ ಗೂಟಗಳನ್ನು ಸೇರಿಸಿದ ಮೇಲ್ಭಾಗಕ್ಕಿರುವ ಬಿದಿರಿನ ಮರದ ಪಟ್ಟಿ.

 ಒಕ್ಕಣೆಯ ಸಾಧನಗಳು

ಮೇಟಿ

                ಭತ್ತದ ಕೇವಿಯನ್ನು ಒಕ್ಕಲು ಮಾಡುವಾಗ ಕಣದ ಮಧ್ಯೆ ನೆಡುವ ಆರು ಅಡಿ ಉದ್ದದ ಕಕ್ಕೆ ಮರದ ಕಂಬ.

ರೋಣಗಲ್ಲು

                ಭತ್ತ, ರಾಗಿ, ಜೋಳ ಇತ್ಯಾದಿ ಫಸಲನ್ನು ಕಟಾವು ಮಾಡಿದ ನಂತರ ಕಾಳು, ಹುಲ್ಲನ್ನು ಬೇರ್ಪಡಿಸಲು ಉಪಯೋಗಿಸುವ ಭಾರವಾದ ಕಲ್ಲಿನ ಸಾಧನ.

ಅಟ್ಟು

                ರೋಣಕಲ್ಲಿಗೆ ಜೋಡಿಸಿರುವ ಮರದ ದಪ್ಪ ಹಲಗೆ. ಚೌಕಾಕಾರದಲ್ಲಿರುವ ಮರದ ಹಲಗೆಗಳು.

ಹಾರೆ

                ರೋಣಗಲ್ಲು ತಿರುಗಲು ಕಲ್ಲಿನ ಎರಡು ಭಾಗದಲ್ಲಿ ಹಾಕಿರುವ ಕಬ್ಬಿಣದ ಹಾರೆಗಳು.

ಗ್ವಾರೆಮಣೆ

                ಭತ್ತವನ್ನು ರಾಸಿ ಮಾಡಲು ಹಾಗೂ ಸಗಣಿಯಿಂದ ಕಣ ಸಾರಿಸಲು ಉಪಯೋಗಿಸುವ ಸಾಧನ. ತೇಳುಮರದ ಹಲಗೆಯಿಂದ ಅರ್ಧಚಂದ್ರಾಕೃತಿಯಲ್ಲಿ ತಯಾರಿಸಿದ ಉದ್ದವಾದ ಹಿಡಿಯಿರುವ ಉಪಕರಣ.

ಹರ ಹಾಕುವುದು

                ಗೊಣವೆಯಿಂದ ಭತ್ತದ ಮೆದೆಯನ್ನು ತೆಗೆದು ಕಣದ ಮಧ್ಯಭಾಗದಲ್ಲಿ ದುಂಡಾಗಿ ಹರಡುವುದು.

ಗೂಡೆ

                ಕಣದಿಂದ ಭತ್ತವನ್ನು ಗಾಡಿಯ ಮೂಲಕ ಸಾಗಿಸಲು ಉಪಯೋಗಿಸುವ ಸಾಧನ.

ತಟ್ಮಣೆ

                ಗೊಣವೆ ಹಾಕುವಾಗ ಭತ್ತದ ಮೆದೆಯ ಬುಡದ ಭಾಗ ಸಮನಾಗಿ ಕೂರುವಂತೆ ತಟ್ಟುವ ಮರದ ಉಪಕರಣ.

 ಉಳುಮೆಯ ಸಾಧನಗಳು

ನೇಗಿಲು (ನೇಗ್ಲು)

                ಭೂಮಿಯನ್ನು ಉಳುಮೆ ಮಾಡುವ ಸಾಧನ. ಹೊನ್ನೆ, ಮತ್ತ, ಕೌಲು, ಹುನಾಲು, ಜಂಬೆ ಈ ಜಾತಿಯ ಮರಗಳಲ್ಲಿ ಯಾವುದಾದರೊಂದು ಜಾತಿಯ ಮರದಿಂದ ನೇಗಿಲನ್ನು ತಯಾರಿಸುತ್ತಾರೆ.

ಈಸು

                ನೇಗಿಲಿಗೆ ಈಸು ತುಂಬಾ ಮುಖ್ಯವಾದ ಭಾಗ. ಇದು ತುಂಬಾ ಗಟ್ಟಿಯಾಗಿರಬೇಕು. ಹೆಚ್ಚಾಗಿ ಬಗಿನಿ ಮರದಿಂದ ಈಸುಗಳನ್ನು ತಯಾರಿಸುತ್ತಾರೆ.

ಅಡಸಾಲು

                ನೇಗಿಲಿನ ಹಿಂಭಾಗದಲ್ಲಿ ಇರುತ್ತದೆ. ಈಸನ್ನು ನೇಗಿಲಿಗೆ ಹಾಕಿ ಹಿಂಭಾಗದಲ್ಲಿ ಅಡಸಾಲು ಇಟ್ಟು ಬೆಣೆ ಹಾಕುತ್ತಾರೆ. ಅಡಸಾಲು ಬಿದಿರಿನ ಒಂದು ಭಾಗ.

ಕಚ್ಚೆಬೆಣೆ

                ನೇಗಿಲಿಗೆ ಈಸನ್ನು ಹಾಕಿ ಹಿಂಭಾಗದಲ್ಲಿ ಅಡಸಾಲು ಇಟ್ಟು ಕಚ್ಚೆಬೆಣೆ ಹಾಕಿ ಗಟ್ಟಗೊಳಿಸುತ್ತಾರೆ.

ಕುಳ (ಕುಣ)

                ಒಂದೂವರೆ ಅಡಿ ಉದ್ದ, ಮೂರು ಇಂಚು ಅಗಲವಿರುವ ಕಬ್ಬಿಣದ ಚಪ್ಪಟೆಯಾಗಿರುವ ಸಾಧನ.

ಹತ್ತಿಗೆಕಾಲು

                ಕುಣ ನೇಗಿಲಿನಿಂದ ಸರಿದಾಡದಂತೆ ಕುಣಕ್ಕೆ ಮೇಲುಗಡೆ ಹತ್ತಿಗೆಕಾಲು ಹೊಡೆದು ಬಿಗಿಗೊಳಿಸುತ್ತಾರೆ.

ರುಮ್ಮಿ

                ನೇಗಿಲಿನಿಂದ ಉಳುಮೆ ಮಾಡುವಾಗ ಗಟ್ಟಿಯಾಗಿ ಹಿಡಿದುಕೊಳ್ಳಲು ಅಡಸಾಲಿಗೆ ಹಾಕಿರುವ ಹಿಡಿಕೈ.

ನೊಗ

                ಎರಡು ಎತ್ತುಗಳ ಹೆಗಲಮೇಲೆ ನೊಗ ಇಟ್ಟು ನೇಗಿಲನ್ನು ಎತ್ತುಗಳನ್ನು ಜೊತಗದಿಂದ ಕಟ್ಟಿ ಉಳುಮೆ ಮಾಡುತ್ತಾರೆ. ಹಲಸು, ಹೆಬ್ಬಲಸು, ಶಿವನೆ, ಜುಮ್ಮ ಎಂಬ ಜಾತಿಯ ಮರದಿಂದ ನೊಗವನ್ನು ತಯಾರಿಸುತ್ತಾರೆ. ನೊಗ ಆರು ಅಡಿ ಉದ್ದವಿರುತ್ತದೆ.

ಗಳೇವು

                ಮಿಣಿ, ಜೊತಗ, ಉಕ್ಕೇದ ಹಗ್ಗ-ಈ ಸಾಮಾನುಗಳಿಗೆ ಗಳೇವು ಎನ್ನುತ್ತಾರೆ.

ಮಿಣಿ

                ಮಿಣಿಯನ್ನು ಪುಂಡಿನಾರು, ಕತ್ತಾಳೆ ನಾರುಗಳಿಂದ ದಪ್ಪನೆಯ ಹಗ್ಗವನ್ನು ಉಡಿದಿರುತ್ತಾರೆ. ಈ ಹಗ್ಗ ಹದಿನೆಂಟು ಅಡಿ ಉದ್ದವಿರುತ್ತದೆ.

ದಳೆ ಹಾಕುವುದು

                ಮಿಣಿಯನ್ನು ಅಡಸಾಲಿಗೆ ಕಟ್ಟಿ ಈಸಿಗೆ ಸುತ್ತಿ ನೊಗಕ್ಕೆ ಕಟ್ಟುವುದು.

ಜೊತಗ

                ಉಳುಮೆ ಮಾಡುವಾಗ ಎತ್ತಿನ ಕೊರಳಿಗೆ ನೊಗ ಸೇರಿಸಿ ಕಟ್ಟುವ ಸಾಧನ. ಪುಂಡಿನಾರು ಅಥವಾ ಕತ್ತದ ಹಗ್ಗಗಳಿಂದ ಜೊತಗ ಹೆಣೆಯುತ್ತಾರೆ.

ಕೊರಡು

                ಬಗಿನೆ ಮರದಿಂದ ತಯಾರಿಸಿದ ವಳಲೆ ಆಕಾರದ ಉಪಕರಣ. ಉದ್ದ 6.5 ಅಡಿ, ಅಗಲ 1.5 ಅಡಿ ಇರುತ್ತದೆ.

ಮೇಳಿ

                ಕೊರಡಿನ ಮಧ್ಯೆ ಹಿಡಿದುಕೊಳ್ಳಲು ರುವ ಸಾಧನ. ಅರಚಟ್ಟಿ ಎಂಬ ಮರದ ಮರದಿಂದ ಮೇಳಿ ತಯಾರಿಸುತ್ತಾರೆ.

ಕೊರಡಿನ ಕಣೆ

                ಕೊಲ್ಡಿನ ಮುಂಭಾಗದಲ್ಲಿ ಕೊಲ್ಡನ್ನು ಎಳೆಯಲು ಬಳಸುವ ಎಂಟು ಅಡಿ ಉದ್ದನೆಯ ಕಾಮತ್ತಿ, ಕರಿವಲದ, ಅರಚಟ್ಟಿ, ಚಳ್ಳೆ ಗಿಡಗಳ ಎಳೆಗಳು.

ಮುಕ್ಕಟ್ಟು

                ಕೊರಡಿನ ಕಣೆಗಳನ್ನು ಸೇರಿಸಿ ಕಟ್ಟುವ ಪುಂಡಿನಾರಿನ ಹಗ್ಗ.

ವಲಾಸು

                ಕೊರಡಿನ ಎರಡು ತುದಿಗಳಲ್ಲಿ ಇರುವ ರಂಧ್ರಗಳಿಂದ ಮಧ್ಯಭಾಗದಲ್ಲಿರುವ ಮೇಳಿಗೆ ಕಟ್ಟುವ ಹಗ್ಗ. ಕತ್ತ, ಬೆತ್ತವನ್ನು ಬಳಸುತ್ತಾರೆ.

 ಹರ್ತೆಕುಂಟೆ

                ಬಿತ್ತನೆ ಮಾಡಿ ಇಪ್ಪತ್ತು ದಿವಸಗಳ ನಂತರ ಭೂಮಿಯಲ್ಲಿ ಕಳೆಯಾಗದಂತೆ ಹರಗುವ ಉಪಕರಣ. ಹರ್ತೆಕುಂಟೆ ತಯಾರಿಸಲು ಮತ್ತಿ, ಬೀಟೆ, ಕಕ್ಕೆ ಮರಗಳಲ್ಲಿ ಯಾವುದಾದರೂ ಒಂದು ಜಾತಿಯ ಮರವನ್ನು ಬಳಸುತ್ತಾರೆ. ಕುಂಟೆ ಒಂದೂವರೆ ಅಡಿ ಉದ್ದ, ಅರ್ಧ ಅಡಿ ದಪ್ಪ ಇರುತ್ತದೆ.

ನೆತ್ತಿಮೇಳಿ

                ಕುಂಟೆಯ ನಡುಮಧ್ಯೆಯಲ್ಲಿರುತ್ತದೆ. ಮೂರು ಅಡಿ ಎತ್ತರ ಇರುತ್ತದೆ.

ಊರುಗೋಲು

                ಕುಂಟೆಯ ಬಲಭಾಗದ ಬಲ ಕಣಿಕೆಯ ಮೇಲೆ ಹಿಡಿದುಕೊಳ್ಳಲು ತಾಳಗಳು ಆ ಕಡೆ ಈ ಕಡೆ ಸರಿದಾಡದಂತೆ ಒಂದೇ ಸಮಾನವಾಗಿ ಹೋಗಲು ಊರುಗೋಲು ಬಳಸುತ್ತಾರೆ.

ತಾಳಗಳು

                ಒಂದು ಅಡಿ ಉದ್ದ, ಎರಡೂವರೆ ಇಂಚು ಅಗಲವುಳ್ಳ ಕಬ್ಬಿಣದ ತಾಳಗಳು.

ಕಣಿಗೆ

                ಎಂಟು ಅಡಿ ಉದ್ದವಿರುತ್ತದೆ. ಎರಡು ಕಣಿಗೆಗಳು ಇರುತ್ತದೆ. ಅರಚಟ್ಟಿ, ಗೊರಬಳೆ, ಬಿದಿರು, ಬಗಿನೆ ಇವುಗಳನ್ನು ಯಾವುದಾದರೂ ಒಂದು ಜಾತಿಯ ಕಣಿಗೆಗಳನ್ನು ಬಳಸುತ್ತಾರೆ.

ಹಲ್ಕು

                ಮುಂಗಾರು ಮಳೆಯ ನಂತರ ಭತ್ತದ ಗದ್ದೆಯಲ್ಲಿ ನೀರು ನಿಂತಾಗ ಸಸಿಯ ಅಕ್ಕಪಕ್ಕದಲ್ಲಿರುವ ಕಳೆಯನ್ನು ತೆಗೆಯಲು ಹಲ್ಕು ಹೊಡೆಯುತ್ತಾರೆ. ಹಲ್ಕಿನ ಹಿಂಭಾಗದಲ್ಲಿ ಕೊರಡು ಹೊಡೆಯುತ್ತಾರೆ.

ಹಲ್ಕಿನ ಕುಂಟೆ

                ಇದು ಹಲ್ಕಿನ ಮುಖ್ಯವಾದ ಭಾಗ. ಬೀಟೆಮರದಿಂದ ಹಲ್ಕಿನ ಕುಂಟೆಯನ್ನು ತಯಾರಿಸುತ್ತಾರೆ. ಆರು ಅಡಿ ಉದ್ದ, ನಾಲ್ಕು ಇಂಚು ದಪ್ಪ, ನಾಲ್ಕು ಇಂಚು ಅಗಲ ಇರುತ್ತದೆ. ಹಲ್ಕಿನ ಕುಂಟೆಯಲ್ಲಿ ಇಪ್ಪತ್ತ್ನಾಲ್ಕು ಹಲ್ಲುಗಳಿರುತ್ತವೆ. ಬಗಿನೆ ಮರದ ಹಲ್ಲುಗಳು, ನೆತ್ತಮೇಳಿ, ವಲಾಸುಗಳಿರುತ್ತವೆ. ಎಂಟು ಅಡಿ ಉದ್ದದ ಎರಡು ಕಣಿಗೆಗಳಿರುತ್ತವೆ. ಹಲ್ಲುಗಳಿಗೆ ಬೆತ್ತದ ಸಿಗಳಿನಿಂದ ಚಿಪ್ಳ (ಹೆಣಿಗೆ) ಹಾಕಿರುತ್ತಾರೆ. ಮಳೆಗಾಲ ಪ್ರಾರಂಭವಾಗಿ ಗದ್ದೆಗಳಲ್ಲಿ ನೀರು ನಿಂತಾಗ ಆಲ ಹೊಡೆಯುತ್ತಾರೆ. ಆಲ ಹೊಡೆಯುವಾಗ ಹಲ್ಕು-ಕೊರಡು ಎರಡನ್ನೂ ಒಟ್ಟಿಗೆ ಹೊಡೆಯುತ್ತಾರೆ.

 ಮೆಟ್ಟು ಕೊರಡು

                ಭೂಮಿಯನ್ನು ಉಳುಮೆ ಮಾಡಿದನಂತರ ಏಳುವ ಮಣ್ಣಿನ ಹೆಂಟೆಗಳನ್ನು ಪುಡಿ ಮಾಡಲು ಕೊರಡಿನ ಮೇಲೆ ಹತ್ತಿ ನಿಂತುಕೊಂಡು ಕೊರಡು ಹೊಡೆಯುವುದರಿಂದ ಹೆಂಟೆಗಳೆಲ್ಲಾ ಒಡೆದು ಪುಡಿಯಾಗುತ್ತವೆ. ಮೇಳಿಯಿರುವುದಿಲ್ಲ. ಕೊರಡಿನ ಮೇಲೆ ಗಟ್ಟಿಯಾಗಿ ನಿಂತುಕೊಳ್ಳಲು ನೊಗಕ್ಕೆ ಹಗ್ಗವನ್ನು ಕಟ್ಟಿ ಹಿಡಿದುಕೊಂಡಿರುತ್ತಾರೆ.

ಹೆಗ್ಗುಂಟೆ

                ಮುಂಗಾರಿ ಮಳೆ ಬಿದ್ದ ಕೂಡಲೇ ಭೂಮಿಯನ್ನು ಬಿತ್ತನೆ ಮಾಡುವ ಮೊದಲು ಗದ್ದೆಯಲ್ಲಿ ಎದ್ದಿರುವ ಕಳೆಹೋಕು ತೆಗೆಯಲು ಹೆಗ್ಗುಂಟೆಯನ್ನು ಹೊಡೆಯುತ್ತಾರೆ. ಮೂರು ಅಡಿ ಉದ್ದ, ಮೂರು ಇಂಚು ಅಗಲದ ಕಬ್ಬಿಣದ ತಾಳವಿರುತ್ತದೆ. ಬೀಟೆ, ಕಕ್ಕೆ, ಬೆಳಾಲು ಮರಗಳಲ್ಲಿ ಯಾವುದಾದರೂ ಜಾತಿಯ ಮರದಿಂದ ಹೆಗ್ಗುಂಟೆಯನ್ನು ತಯಾರಿಸಿರುತ್ತಾರೆ. ನೆತ್ತಿಮೇಳಿಯಿರುತ್ತದೆ. ಎಂಟು ಅಡಿ ಉದ್ದದ ಎರಡು ಕಣಿಗೆಗಳಿರುತ್ತವೆ.

ಹೆಂಡೆಗೊಡತಿ

                ಉಳುಮೆ ಮಾಡಿದ ನಂತರ ಏಳುವ ಮಣ್ಣಿನ ಹೆಂಡೆಗಳನ್ನು ಒಡೆಯಲು ಉಪಯೋಗಿಸುವ ಉಪಕರಣ.

ಆಲದ ಹಿಡಿ

                ಮುಂಗಾರು ಮಳೆ ಬಿದ್ದಕೂಡಲೇ ಹಲ್ಕು, ಕೊರಡು ಹೊಡೆದ ನಂತರ ಭೂಮಿಯಿಂದ ಏಳುವ ಕಸ, ಕಳೆಗಳನ್ನು ಗೋಚಲು ಬಾಚಣಿಗೆ ಆಕಾರದ ಉಪಕರಣ. ಹನ್ನೆರಡು ಹಲ್ಲುಗಳಿರುತ್ತವೆ. ಒಂದೂವರೆ ಅಡಿ ಉದ್ದದ ಹಲ್ಲುಗಳನ್ನು ಬೆತ್ತದ ಸೀಳಿನಿಂದ ಹೆಣೆದಿರುತ್ತಾರೆ. ಬಿದಿರಿನ ಹಲ್ಲುಗಳು ಸಾಮೆ ಬಿದಿರಿನ ಆರು ಅಡಿ ಉದ್ದದ ಹಿಡಿಯಿರುತ್ತದೆ.

ಮಂಡೆಸದೆ

                ಬಿತ್ತನೆ ಮಾಡುವಾಗ ಗದ್ದೆಯನ್ನು ಹದಗೊಳಿಸುವಾಗ ಏಳುವ ಕಳೆದ ವರ್ಷದ ಭತ್ತದ ಬುಡಭಾಗ.

ಕೂಳೆ

                ಫಸಲನ್ನು ಕಟಾವು ಮಾಡಿದ ನಂತರ ಉಳಿಯುವ ಬುಡದ ಬಾಗ.

 ಸಲ್ಟ್ಹಿಡಿ

                ಮಂಡೆಸದೆ ಗುಡಿಸಲು ಬಳಸುವ ಉದ್ದನೆಯ ಹಿಡಿ (ಪೊರಕೆ). ವಕ್ಕಲು ಮಾಡುವಾಗ ಭತ್ತದ ಹುಲ್ಲಿನಿಂದ ಬಂದ ಹೊಟ್ಟನ್ನು ಗುಡಿಸಲು ಬಳಸುವರು. ಅರಚಟ್ಟಿ ಎಂಬ ಜಾತಿಯ ಗಿಡದ ಕೊಂಬೆಗಳಿಂದ ತಯಾರಿಸಿರುತ್ತಾರೆ. ನಿಂತುಕೊಂಡೇ ಗುಡಿಸಬಹುದು.

ಸೀಕೆಹಿಡಿ (ಕಡ್ಡಿಪೊರಕೆ)

                ತೆಂಗಿನ ಗರಿಗಳಲ್ಲಿರುವ ಮಧ್ಯದ ಕಡ್ಡಿಗಳನ್ನು ಸೇರಿಸಿ ಮಾಡುವ ಪೊರಕೆ. ವಕ್ಕಲು ಮಾಡುವಾಗ ಭತ್ತದ ಕಾಳುಗಳನ್ನು ಗುಡಿಸಲು ಉಪಯೋಗಿಸುವ ಪೊರಕೆ.

ವ್ಹಾಕೆ ಹೂಡುವುದು

                ಫಸಲನ್ನು ಕಟಾವು ಮಾಡಿದನಂತರ ಭೂಮಿಯ ಹದ (ತೇವಾಂಶ) ಆರುವುದರೊಳಗೆ ಉಳುಮೆ ಮಾಡುವುದು.

ಇಚ್ಚಾಲು

                ವ್ಹಾಕೆ ಊಡಿದ ನಂತರ ಎರಡನೇ ಸಾರಿ ಭೂಮಿಯನ್ನು ಉಳುಮೆ ಮಾಡುವುದು.

ನುರಿಸುವುದು

                ಭೂಮಿಯಲ್ಲಿ ಬೀಜವನ್ನು ಹಾಕಲು ಭೂಮಿಯನ್ನು ಹದಗೊಳಿಸುವುದಕ್ಕೆ ನುರಿಸುವುದು ಎನ್ನುತ್ತಾರೆ.

ಗುಡ್ಡೆ ಸರಿಯೋದು

                ಗದ್ದೆಯ ಮಧ್ಯೆ ಗೊಬ್ಬರ ರಾಸಿ ಹಾಕುವುದು.

ಗುಡ್ಡೆ ಕಡಿಯೋದು

                ಗೊಬ್ಬರ ರಾಸಿಗೆ ಬಿತ್ತನೆಯ ಬೀಜ ಸೇರಿಸಿ ಗೊಬ್ಬರಬೀಜ ಸೇರಿಸಿ ಕಲಸುವುದು.

ಬಿತ್ತುವ ಮಂಕರಿ

                ಬಿತ್ತನೆಯ ಬೀಜವನ್ನು ಸೇರಿಸಿದ ಗೊಬ್ಬರವನ್ನು ಮಂಕರಿಗೆ ಹಾಕಿಕೊಂಡು ಬಿತ್ತುವ ಸಾಧನ.

ಸಾರಾ ಹೊರೋದು

                ಬೀಜ ಸೇರಿಸಿದ ಗೊಬ್ಬರದ ರಾಸಿಯಿಂದ ಬಿತ್ತುವ ಮಹಿಳೆಯ ಮಂಕರಿಯಲ್ಲಿ ಖರ್ಚಾದ ಕೂಡಲೇ ರಾಸಿಯಿಂದ ತುಂಬಿಕೊಂಡು ಬಿತ್ತುವ ಮಹಿಳೆಯ ಮಂಕರಿಗೆ ಹಾಕುವುದು.

 ಮೆರಕೋಲು

                ವಕ್ಕಲು ಮಾಡುವಾಗ ಭತ್ತ ಉದುರಿದ ನಂತರ ಹುಲ್ಲನ್ನು ತೆಗೆಯಲು ಬಳಸುವ ಸಾಧನ. ನಾಲ್ಕು ಅಡಿ ಉದ್ದವಿರುವ ಶಾಮೆ ಗಳಕ್ಕೆ ಕಬ್ಬಿಣದ ಕೊಕ್ಕೆ ಜೋಡಿಸಿರುತ್ತಾರೆ.

ಕಟ್ಲಹಗ್ಗ

                ಫಸಲನ್ನು ಕಟಾವು ಮಾಡಿದನಂತರ ಗೊಣವೆ ಹಾಕುವಾಗ ಮೆದೆಗಳನ್ನು ಹೊರೆಯಾಗಿ ಕಟ್ಟಲು ಬಳಸುವ ಹಗ್ಗಗಳು. ಎಂಟು ಅಡಿ ಉದ್ದವಿರುತ್ತದೆ. ಪುಂಡಿ, ಕತ್ತಾಳೆ, ಕತ್ತದ ದಾರದಿಂದ ಹಗ್ಗಗಳನ್ನು ಹೊಸೆಯುತ್ತಾರೆ.

ತಟಗ

                ಗೊಣವೆ ಹಾಕುವಾಗ ಕೆವಿಯನ್ನು ಸಮಮಟ್ಟ ಮಾಡಲು ತಟ್ಟುವ ಉಪಕರಣ. ಆರು ಅಡಿ ಎತ್ತರವಿರುತ್ತದೆ. ಬಗನೆ ಮರದ ಹಲಗೆಯಿಂದ ತಯಾರಿಸುತ್ತಾರೆ.

ಗೋರೆಮಣೆ/ಗ್ವಾರೆಮಣೆ

                ಭತ್ತವನ್ನು ರಾಸಿ ಮಾಡಲು ಬಳಸುವ ಉಪಕರಣ.

ಬಗಿನೆ ಹಿಡಿ

                ಬಗಿನೆ ಮರದ ಅಗಲವಾದ ರೆಂಬೆ ವಕ್ಕಲು ಮಾಡುವಾಗ ಹುಲ್ಲು ತೆಗೆದ ನಂತರ ಭತ್ತದ ಮೇಲಿರುವ ಹುಲ್ಲಿನ ಹೊಟ್ಟನ್ನು ತೆಗೆಯಲು ಬಳಸುವ ಸಾಧನ.

ಹೊಟ್ಟರಾಸಿ

                ವಕ್ಕಲು ಮಾಡಿದ ನಂತರ ಭತ್ತದ ಕಾಳು ಹುಲ್ಲಿನ ಹೊಟ್ಟು ಸೇರಿರುವುದಕ್ಕೆ ಹೊಟ್ಟರಾಸಿ ಎನ್ನುತ್ತಾರೆ.

ಮುಕ್ಕಟ್ಟು

                ಭತ್ತವನ್ನು ತೂರಿದ ನಂತರ ಬರುವ ಜೊಳ್ಳುಭತ್ತ ಮತ್ತು ಭತ್ತದ ಕಾಳು ಸೇರಿರುವುದಕ್ಕೆ ಮುಕ್ಕಟ್ಟು ಎನ್ನುತ್ತಾರೆ.

ಕುತ್ರೆ/ಕುತ್ರಿ

               ಗೊಣವೆ ಹಾಕಿದ ಸ್ಥಳಕ್ಕೆ ಕುತ್ರೆ ಎನ್ನುವರು.

ದಾಬಿಣಿ

                ಮರದ ಕರಡಿಗೆ ಕಬ್ಬಿಣದ ದುಂಡಾಕಾರದ ಸರಳು. ಎಂಟು ಅಡಿ ಉದ್ದವಾದ ಆರು ಬುಲ್ಡೆ ಗಂಟು ಹೊಡೆದಿರುವ ದಪ್ಪನೆಯ ಹಗ್ಗ. ಆರು ಎತ್ತುಗಳನ್ನು ಕಟ್ಟಲು, ಆರು ದಾಟುಗಳಿರುತ್ತವೆ (ಕಣ್ಣಿಗಳಿರುತ್ತವೆ).

ಮೇಟಿ ಎತ್ತು

                ಕಣದಲ್ಲಿ ಮೇಟಿಯ ಪಕ್ಕದಲ್ಲಿ ಪ್ರಥಮವಾಗಿ ದಂಬಣಿಗೆ ಕಟ್ಟುವ ಎತ್ತು.

ಕಡಿಬೇಸಿ

                ದಾಬಿಣಿ ತುದಿಗೆ ಕಟ್ಟುವ ಎತ್ತು ಕಡಿಬೇಸಿ ಎತ್ತು.

ಮೇಟಿ

                ವಕ್ಕುವ ಕಣದ ಮಧ್ಯೆ ನಿಲ್ಲಿಸುವ ಹಾಲುಗಂಬ. ಮದ್ದಾಲೆ ಮರವನ್ನು ಹೆಚ್ಚಿಗೆ ಮೇಟಿಗೆ ಬಳಸುತ್ತಾರೆ.

ಹುರೋಳಿಗೆ

                ಪ್ರಥಮ ಸಾರಿ ಗೊಣವೆಯಲ್ಲಿನ ಕೇಪಿಗಳನ್ನು ತೆಗೆದು ಕಣದಲ್ಲಿ ಹರ ಹಾಕಿ ವಕ್ಕಲು ಪ್ರಾರಂಭಿಸುತ್ತಾರೆ. ಈ ದಿವಸ ಗೊಣವೆ ಮೇಲಿಟ್ಟ ಬೆನುಂಡೆಯನ್ನು ತೆಗೆದು ಕೆಳಗಿಳಿಸಿ ಗೊಣಬೆಯ ಸ್ವಲ್ಪ ದೂರದಲ್ಲಿಟ್ಟು ಚಪ್ಪೆರೊಟ್ಟಿ (ಉಪ್ಪು ಹಾಕದೆ ಇರುವುದು), ಅಳ್‍ಭತ್ತ ಮನೆಯಿಂದ ತೆಗೆದುಕೊಂಡು ಹೋಗಿ ಗೊಣವೆ ಮತ್ತು ಬೆನಪ್ಪನ ಸುತ್ತು ಗೋಮಯ (ಸಗಣಿ ನೀರು) ಪ್ರೋಕ್ಷಣೆ ಮಾಡಿ ಶುದ್ಧಿಗೊಳಿಸಿ ಚಪ್ಪರೊಟ್ಟಿ, ಅಳ್‍ಭತ್ತ ಬೆನಪ್ಪನಿಗೆ ಎಡೆ ಮಾಡಿ ಗದ್ದೆಯಲ್ಲಿರುವ ಕಣಕೊಪ್ಪಿನ ಹೂವು ಮುಡಿಸಿ ಪೂಜೆ ಮಾಡುತ್ತಾರೆ. ಊಟಕ್ಕೆ ಒಣಬಂಗಡೆ ಮೀನು ಸಾರು, ರೊಟ್ಟಿ, ಅನ್ನ ಊಟ ಮಾಡುತ್ತಾರೆ.

ಅಳ್‍ಭತ್ತ

                ಸುಗ್ಗಿಯ ಕಾಲದಲ್ಲಿ ಪ್ರತಿಯೊಂದು ಸುಗ್ಗಿ ಆಚರಣೆಗೂ ಅಳ್‍ಭತ್ತ ಮತ್ತು ಚಪ್ಪೆರೊಟ್ಟಿ ಇರಲೇಬೇಕು. ಹೊಸ ಭತ್ತವನ್ನು ಹುರಿದು ಭತ್ತದ ಅರಳು ತಯಾರಿಸುತ್ತಾರೆ.

ಚಪ್ಪೆರೊಟ್ಟಿ

                ಅಕ್ಕಿಹಿಟ್ಟಗೆ ಉಪ್ಪು ಹಾಕದೆ ಸಪ್ಪೆಯಾಗಿ ಚಿಕ್ಕ ಚಿಕ್ಕ ರೊಟ್ಟಿ ಸುಡುತ್ತಾರೆ. ನೈವೇದ್ಯಕ್ಕಾಗಿ ಬಳಸುತ್ತಾರೆ.

ಬೆನುಂಡೆ/ಬೆನವನ ಉಂಡೆ/ಬೆನಪ್ಪ

                ಫಸಲು ಕಟಾವು ಮಾಡಿ ಗೊಣವೆ ಹಾಕುವಾಗ ಗೊಣವೆ ಹಾಕಿ ಮುಗಿದ ನಂತರ ಗದ್ದೆಯಲ್ಲಿ ಕೂಳೆಸಹಿತ ಚಚ್ಚೌಕವಾಗಿ ಮಣ್ಣಿನ ಹೆಂಟೆಯನ್ನು ತೆಗೆದು ಭೂಮಿ ಹುಣ್ಣಿಮೆ ದಿವಸ ಕಟ್ಟಿದ ‘ಹಂಗ್‍ನೂಲು’ ಬಿಚ್ಚಿ ಮಾವನಸೊಪ್ಪು, ಚೆಂಡುಹೂವು, ಹಿಟ್ಟಂಡೆ, ಕಣಕೊಪ್ಪಿನ ಹೂವು ಸೇರಿಸಿ ಬೆನುಂಡೆ ಮೇಲಿರುವ ಕೂಳೆಗೆ ಕಟ್ಟಿ ಗೊಣವೆಯ ನೆತ್ತಿ ಮೇಲೆ ಗಣಪತಿಯ ಪ್ರತೀಕವಾಗಿ ಇಡುತ್ತಾರೆ.

ಹಿಡಿಹಗ್ಗ

                ಗಾಡಿ ಎತ್ತುಗಳಿಗೆ ಕಟ್ಟುವ ಗಗ್ಗರ ಹಾಕಿರುವ ಹಗ್ಗ.

ಕೋಡುಗೆಣಸು

                ಗಾಡಿ ಎತ್ತುಗಳನ್ನು ಶೃಂಗಾರಗೊಳಿಸಲು ಎತ್ತುಗಳ ಕೋಡುಗಳಿಗೆ ಹಾಕುವ ಆಭರಣ.

ಜೂಲು

                ಗಾಡಿ ಎತ್ತುಗಳನ್ನು ಸುಂದರಗೊಳಿಸಲು ಬಟ್ಟೆಯಿಂದ ತಯಾರಿಸಿದ ಎತ್ತುಗಳ ಬೆನ್ನಿನ ಮೇಲೆ ಹಾಕುವ ಅಲಂಕಾರಿಕ ವಸ್ತು. ಜೂಲಿನ ಕೆಳಭಾಗದಲ್ಲಿ ತೆಳುವಾದ ಗೋಣಿಚೀಲವಿದ್ದು ಗೋಣಿಚೀಲದ ಮೇಲ್ಭಾಗದಲ್ಲಿ ಬಣ್ಣದ ಬಟ್ಟೆಯನ್ನು ಸೇರಿಸಿ ಹೊಲಿಗೆ ಮಾಡಿರುತ್ತಾರೆ.

ಕಳೆಕತ್ತಿ

                ಫಸಲಿನಲ್ಲಿರುವ ಕಳೆಯನ್ನು ಕೀಳಲು ಬಳಸುವ ಕಬ್ಬಿಣದ ಮೂರು ಹಲ್ಲುಗಳಿರುವ ಉಪಕರಣ. ಕಳೆಕತ್ತಿಯನ್ನು ಹಿಡಿದುಕೊಳ್ಳಲು ಒಂದು ಕಡೆ ಮರದ ಹಿಡಿಯಿರುತ್ತದೆ.

ಗೂಡೆಮಂಕರಿ

                ವಕ್ಕಲು ಆದ ನಂತರ ಕಣವನ್ನು ಗುಡಿಸಿದ ಮೇಲೆ ಕಲ್ಲು, ಮಣ್ಣು, ಭತ್ತ ಬೇರ್ಪಡಿಸಲು ನೀರಿನಲ್ಲಿ ತೊಳೆಯಲು ಬಳಸುವ ಸಾಧನ. ಬಿದಿರಿನಿಂದ ತಯಾರಿಸಿದ್ದು. ಮೀನು ಹಿಡಿಯಲು ಕೂಡ ಬಳಸುತ್ತಾರೆ.

ಕರಡಿಗುಂಜು

                ಗಾಡಿ ಹೊಡೆಯುವ ಎತ್ತುಗಳನ್ನು ಸುಂದರಗೊಳಿಸಲು ಕೊರಳಿಗೆ ಕಟ್ಟುವ ಕರಡಿ ಕೂದಲು ಜೋಡಿಸಿ ಕಟ್ಟಿದ ಸಾಧನ.

ಕುರಿಕೋಡು

                ಗಾಡಿ ಎತ್ತುಗಳನ್ನು ಶೃಂಗಾರಗೊಳಿಸಲು ದೃಷ್ಟಿ ತಾಗದೇ ಇರಲೆಂದು ಅರ್ಧ ಕಂಬಳಿ, ಕುರಿ ಕೋಡು ಎತ್ತಿನ ಕೊರಳಿಗೆ ಕಟ್ಟುತ್ತಾರೆ.

ಮಕಂಡ

                ಕೌಲು ಮರದ ಬೇರಿನ ನಾರು, ಪುಂಡಿನಾರು, ಕತ್ತಾಳೆನಾರು ಯಾವುದಾದರೂ ಒಂದು ನಾರಿನಿಂದ ಎತ್ತುಗಳನ್ನು ಶೃಂಗಾರಗೊಳಿಸಲು ಎತ್ತಿನ ಮುಖಗಳಿಗೆ ಮಕಂಡಗಳನ್ನು ಉಡಿದು ಹಾಕುತ್ತಾರೆ.

ಹಲ್ಲೆ ಕಟ್ಟುವುದು

                ಗಾಡಿ ಎತ್ತುಗಳಿಗೆ ನಾಲ್ಕು ಕಾಲುಗಳಿಗೆ ಭಾರ ಎಳೆಯುವಾಗ ಎತ್ತುಗಳ ಕಾಲು ಅಟ್ಟೆ ಸವೆಯದಿರಲೆಂದು ಹಲ್ಲೆ ಕಟ್ಟಿಸುತ್ತಾರೆ.

 ಮೂಗುದಾರ

                ಗಾಡಿ ಎತ್ತುಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಎತ್ತುಗಳ ಮೂಗಿಗೆ, ನೂಲಿನ ದಾರವನ್ನು ಪೋಣಿಸಿ ಸದಾಕಾಲ ಇರುವ ಹಾಗೆ ನೋಡಿಕೊಳ್ಳುತ್ತಾರೆ.

ಗಗ್ಗರ ಸರ

                ಗಾಡಿ ಎತ್ತಿನ ಕೊರಳಿಗೆ ಹಾಕುವ ಘಂಟೆ, ಗಗ್ಗರ ಮುಂತಾದ ನಾದ ಬರುವ ವಸ್ತುಗಳನ್ನು ಸೇರಿಸಿ ಕೌಲು ಮರದ ಬೇರಿನ ನಾರಿನಿಂದ ತಯಾರಿಸಿದ ಹುರಿಯಿಂದ ದಂಡೆ ತಯಾರಿಸುವಾಗ ‘ನಾದ’ ಬರುವ ಅನೇಕ ವಸ್ತುಗಳನ್ನು ಸೇರಿಸಿ ಗಂಟೆಸರ ಮಾಡುತ್ತಾರೆ. ಅತ್ಯಂತ ಸುಂದರವಾಗಿ ಗಗ್ಗರ ದೊಡ್ಡಗೆಜ್ಜೆಗಳು, ಘಂಟೆಗಳನ್ನಿರಿಸಿ ಚರ್ಮದ ಗೆಜ್ಜೆಸರ ತಯಾರಿಸಿ ತರುತ್ತಾರೆ. ತುಂಬಾ ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ.

ಬಾರಿಕೋಲು

                ಎತ್ತುಗಳನ್ನು ಕಟ್ಟಿ ಗಾಡಿ ಹೊಡೆಯಲು ಬೆತ್ತದ ಕೋಲಿಗೆ ಅಲ್ಲಲ್ಲಿ ಗುಲಾಬಿ ಬಣ್ಣದ ಗೊಂಡೇವು ಹಾಕಿ ನೂಲಿನಿಂದ ಗಟ್ಟಿಯಾದ ಬಾರಿಕೋಲು ಉಡಿದು ಬೆತ್ತದ ಕೋಲಿಗೆ ಕಟ್ಟಿಕೊಳ್ಳುತ್ತಾರೆ. ಎತ್ತುಗಳನ್ನು ಎಚ್ಚರಿಸಲು ಪೆಟ್ಟು ಕೊಡುತ್ತಾ ಗಾಡಿ ಹೊಡೆಯುತ್ತಾರೆ.

ಹಂಗನೂಲು

                ಭೂಮಿಹುಣ್ಣಿಮೆ ಹಬ್ಬದ ದಿವಸ ಪೂಜೆಯಲ್ಲಿ ಹಂಗನೂಲು ಎಡೆಯಲ್ಲ್ಲಿ ಇಟ್ಟು ಪೂಜೆ ಮಾಡಿ ಊಟದ ನಂತರ ಕುಟುಂಬದ ಪ್ರತಿಯೊಬ್ಬರು ಬಲಗೈಗೆ ಹಂಗನೂಲನ್ನು ಕಟ್ಟಿಕೊಳ್ಳುತ್ತಾರೆ. ಫಸಲು ಕಟಾವು ಮಾಡಿದ ನಂತರ ಗೊಣಬೆ ಹಾಕುತ್ತಾರೆ. ಗೊಣಬೆಯ ಮೇಲೆ ಬೆನುಂಡೆಯನ್ನು ಕೂರಿಸುವಾಗ ಕುಟುಂಬದವರು ಕಟ್ಟಿರುವ ಹಂಗನೂಲನ್ನು ಬಿಚ್ಚಿ ಬೆನುಂಡೆಗೆ ಮಾವಿನಸೊಪ್ಪಿನ ಜೊತೆಗೆ ಕಟ್ಟಿ ಗೊಣಬೆಯ ಮೇಲೆ ಬೆನುಂಡೆಯನ್ನು ಇಡುತ್ತಾರೆ. ಇದು ಸಂಪ್ರದಾಯ.

ವಡ್ಡ್ಯಾಣಕೊಕ್ಕೆ

                ಕೃಷಿಕರು ಕೆಲಸ ಮಾಡುವಾಗ ಸೊಂಟಕ್ಕೆ ವಡ್ಡ್ಯಾಣವನ್ನು ಕಟ್ಟಿಕೊಂಡು ಕತ್ತಿಯನ್ನು ಕೊಕ್ಕೆಗೆ ಸಿಕ್ಕಿಸಿಕೊಂಡಿರುತ್ತಾರೆ.

ಕುಣಗಲು

                ಹಾಯುವ ಗಾಡಿ ಎತ್ತುಗಳಿಗೆ ಹಾಯದಿರಲೆಂದು ಮೂಗುದಾರಕ್ಕೆ ಎಂಟು ಅಡಿ ಉದ್ದದ ಬಿದಿರಿನ ಕೋಲು ಕಟ್ಟುವುದು.

ಭಂಟ್ನ

                ಹೋರಿಗಳನ್ನು ಉಳುಮೆ ಮಾಡಲು ತಿದ್ದುವಾಗ ಹೆಗಲಮೇಲೆ ಹಾಕುವ ಕವೆಗೋಲು.

ಸುಳೇಗಾಣ

                ಎತ್ತುಗಳನ್ನು ಉಳುಮೆಗೆ ತಿದ್ದಲು ಗಾಣದ ರೀತಿಯ ಎಳೆಯನ್ನು ಎತ್ತಿನ ಹೆಗಲಮೇಲೆ ಹಾಕಿ ತಿರುಗಿಸುವ ಮರದ ಎಳೆ.

ಲೊಟ್ಟೆ

                ತುಡು ಎಮ್ಮೆಗಳಿಗೆ ಕಟ್ಟುವ ಬಿದಿರಿನಿಂದ ತಯಾರಿಸುವ ಎರಡು ಗುಣುಕುಗಳಿರುವ ಒಂದು ಸಾಧನ.

ಲೊಡಗ

                ತುಡು ತಿನ್ನುವ ಎತ್ತು ಮತ್ತು ಎಮ್ಮೆಗಳಿಗೆ ಗುರುತಿಸಲು ಕಟ್ಟುವ ಕಬ್ಬಿಣದ (ಡಬ್ಬದ ಗಟ್ಟಿಯಾಗಿರುವ) ಗಂಟೆಯಾಕಾರದ ಸಾಧನ.

ಅಡ್ಡಕುಂಟೆ

                ತುಡು ಜಾನುವಾರುಗಳು ಬೇರೆಯವರ ಗದ್ದೆಗೆ ನುಗ್ಗಿ ತಿನ್ನಬಾರದೆಂದು ಜಾನುವಾರುಗಳಿಗೆ ಕೊರಳಿಗೆ ಕಟ್ಟುವ ನಾಲ್ಕು ಅಡಿ ಉದ್ದದ ಮರದ ತುಂಡು.

ಭಂಟ್ನ

                ಫಸಲು ಕಟಾವು ಮಾಡಿದ ನಂತರ ಹೊರೆಗಳನ್ನು ಕಟ್ಟಲು ಹಗ್ಗವನ್ನು ತಯಾರಿಸುವ ಉಪಕರಣ.

ಹಾಳೆಟೋಪಿ

                ಅಡಿಕೆ ಹಾಳೆಯಿಂದ ತಯಾರಿಸಿದ ಹಾಳೆಟೋಪಿ. ತಲೆಯಬೇಲೆ ಭಾರವಾದ ವಸ್ತುಗಳನ್ನು ಹೊರಲು, ಬಿಸಿಲಲ್ಲಿ ಕೆಲಸ ಮಾಡಲು ಹಾಳೆಟೋಪಿಯನ್ನು ಬಳಸುತ್ತಾರೆ.

ಗೂಡೆ

                ಒಂದು ಕಡೆಯಿಂದ ಇನ್ನೊಂದು ಕಡೆಗೆ ನೀರು ಎತ್ತಿ ಹಾಕಲು ಗೂಡೆಯನ್ನು ಬಳಸುತ್ತಾರೆ. ಗೂಡೆಯನ್ನು ತಗಡಿನಿಂದ ತಯಾರಿಸುತ್ತಾರೆ.

ಕೊಳಗ

                ಇದೊಂದು ಅಳತೆಯ ಮಾಪನ. ಮೂರು ಸೇರಿನಿಂದ ಮೂರೂವರೆ-ನಾಲ್ಕು ಸೇರು ಅಳತೆಯ ಕೊಳಗಗಳು ಇರುತ್ತವೆ. ಬೀಟೆ ಅಥವಾ ಬೆಳಾಲ ಮರ ಉಪಯೋಗಿಸಿ ತಯಾರಿಸಿದ ಅಳತೆಮಾಪನ ಮುಕ್ಕಾಲು ಅಡಿ ಎತ್ತರ, ಎರಡೂ ಕಾಲು ಅಡಿ ಸುತ್ತಳತೆ ಇರುತ್ತದೆ.

ತಟ್ಟೆ

                ಮಣ್ಣು, ಗೊಬ್ಬರ ಹೊರಲು ಬಳಸುತ್ತಾರೆ. ಬೆತ್ತದ ಸೀಳಿನಿಂದ ಹೆಣೆದಿರುತ್ತಾರೆ.

 ಹೆಡಿಗೆ

                ತಟ್ಟೆಗಿಂತ ಎರಡು-ಮೂರು ಪಟ್ಟು ದೊಡ್ಡದಾಗಿರುತ್ತದೆ. ಗೊಬ್ಬರ ಹೊರಲು ಬಳಸುತ್ತಾರೆ. ಅಡಿಕೆ, ಭತ್ತ, ಗೊಬ್ಬರ ಹೊರುವ ಸಾಧನ. ಇದನ್ನು ಕೂಡ ಬೆತ್ತದ ಸೀಳಿನಿಂದ ಹೆಣೆಯುತ್ತಾರೆ.

ಗೂಡು

                ಕಾಡಿನಿಂದ ಒಣಗಿದ ದರಕು (ಎಲೆ), ಹಗುರವಾದ ವಸ್ತುಗಳನ್ನು ತುಂಬಿ ಕಾಡಿನಿಂದ ತರಲು ಹೊರುತ್ತಾರೆ. ಗಟ್ಟಿಯಾದ ಬೆತ್ತದ ಸೀಳುಗಳಿಂದ ಮಧ್ಯೆ ದೊಡ್ಡದಾದ ಕಣ್ಣುಗಳನ್ನು ಬಿಟ್ಟು ಹೆಣೆದಿರುತ್ತಾರೆ. ಎತ್ತರ ನಾಲ್ಕೂವರೆ ಅಡಿ ಇರುತ್ತದೆ. ಕೆಳಭಾಗ ಅಗಲವಿರುತ್ತದೆ. ಮೇಲ್ಭಾಗ ಚಿಕ್ಕದಾಗಿರುತ್ತದೆ.

ಕಲ್ಲಿ

                ಕಲ್ಲಿಯನ್ನು ಬೆತ್ತದ ಸೀಳಿನಿಂದ ಹೆಣಿಕೆ ಮಾಡುತ್ತಾರೆ. ಮಧ್ಯೆ ಮಧ್ಯೆ ಕಂಡಿಗಳಿರುತ್ತವೆ. ತುಂಬಾ ಅಗಲವಾಗಿರುತ್ತದೆ. ಒಂದೂವರೆ ಅಡಿ ಎತ್ತರವಾಗಿರುತ್ತದೆ. ಗೊಬ್ಬರ ತುಂಬಲು ಬಳಸುತ್ತಾರೆ.

ಬಾಯವಡ್ಲ

                ಆಲ ಹೊಡಿಯುವಾಗ ಮತ್ತು ಅಕ್ಕಪಕ್ಕದಲ್ಲಿ ಇರುವ ಸಸಿಗಳನ್ನು ತಿನ್ನಬಹುದು ಎಂದು ಬಾಯವಡ್ಲ ಹಾಕಿರುತ್ತಾರೆ.

ದಂಡೆ

                ಕೌಲು ಎಂಬ ಮರದ ಬೇರಿನಿಂದ ದಾರವನ್ನು ತೆಗೆದು ಹುರಿಮಾಡಿ ಎತ್ತಿನ ಕೊರಳಿಗೆ ಗಂಟೆಸಹಿತ ದಂಡೆಯನ್ನು ಮಾಡುತ್ತಾರೆ.

ದಾಬಿನಕಣ್ಣಿ

                ಜಾನುವಾರುಗಳನ್ನು ಕೊಟ್ಟಿಗೆಯಲ್ಲ್ಲಿ ಗೂಟಕ್ಕೆ ಕಟ್ಟುವ ಹಗ್ಗ. ಕಾರಿ ಎಂಬ ಗಿಡದಿಂದ ದಾರ ತೆಗೆದು ಹಗ್ಗ ತಯಾರಿಸಿ ದಾಬಿನಕಣ್ಣಿ ಉಡಿಯುತ್ತಾರೆ.

ಜೊತಗ

                ಎತ್ತುಗಳಿಗೆ ನೊಗ ಕಟ್ಟುವಾಗ ಪುಂಡಿ ಅಥವಾ ಕತ್ತದ ದಾರದಿಂದ ಅರ್ಧ ಅಡಿ ಅಗಲ ಬಿದಿರು ಅಥವಾ ಶಾಮೆ ಕಡ್ಡಿಯನ್ನು ಬಳಸಿ ಪುಂಡಿ ಅಥವಾ ಕತ್ತದ ಹಗ್ಗದಿಂದ ಹೆಣೆಯುತ್ತಾರೆ.

 ಪಣತ/ಪಳತ

                ಹೆಚ್ಚಿನ ಪ್ರಮಾಣದ ಧಾನ್ಯವನ್ನು ಸಂಗ್ರಹಿಸಲು ಮನೆಯ ಒಂದು ಕಡೆ ಕೋಣೆ ಆಕಾರದಲ್ಲಿ ಕಟ್ಟಿದ ಭಾಗ. 75ರಿಂದ 150 ಕ್ವಿಂಟಾಲ್ ಧಾನ್ಯವನ್ನು ತುಂಬಿಡಬಹುದು.

ಬೆಣೆ

                ವ್ಯವಸಾಯದ ಉಪಕರಣಗಳಿಗೆ ಬಿಗಿ ಮಾಡಲು ಹಾಗೂ ಅಳತೆ ಪ್ರಮಾಣಗಳನ್ನು ನಿಗದಿಗೊಳಿಸುವ ಚಾಟಿ ಆಕಾರದ ಮರದ ತುಂಡು.

ಮಸಕಲ್ಲು

                ಕಬ್ಬಿಣದ ಆಯುಧಗಳನ್ನು ಕತ್ತಿ, ಕುಡಗೋಲು, ಕೊಡಲಿ ಇತ್ಯಾದಿ ಹರಿತಗೊಳಸುವ ಕಲ್ಲು.

ಬಣವೆ

                ಭತ್ತದ ಫಸಲನ್ನು ಕಟಾವು ಮಾಡಿದ ನಂತರ ಕ್ರಮವಾಗಿ ಗೋಪುರಾಕೃತಿಯಲ್ಲಿ ಮೆದೆಗಳನ್ನು ಜೋಡಿಸಿ ಹಾಕುವುದು.

ದಡ್ಡಿಚಪ್ಪರ

                ವಕ್ಕಲು ಮಾಡುವಾಗ ತಾತ್ಕಾಲಕವಾಗಿ ವಾಸಕ್ಕೆ ಕಟ್ಟಿಕೊಳ್ಳುವ ಚಪ್ಪರ.

ಹಕ್ಕೆ ಗುಡ್ಲು

                ಫಸಲನ್ನು ರಾತ್ರಿ ಸಮಯದಲ್ಲಿ ಕಾಡುಪ್ರಾಣಿಗಳಿಂದ ರಕ್ಷಿಸಲು ತಂಗುವ ಅಟ್ಟಣಿಗೆ.

ಜಿಗಣಿ

                ನೇಗಿಲಿನ ಕುಳವನ್ನು ಬಿಗಿಗೊಳಿಸುವುದು-‘ಯು’ ಆಕಾರದಲ್ಲಿರುತ್ತದೆ.

ಕುಳ

                ನೇಗಿಲಿನ ಮುಂಭಾಗಕ್ಕಿರುವ ಕಬ್ಬಿಣದ ಸಾಧನ. ಒಂದೂವರೆ ಅಡಿ ಉದ್ದವಾಗಿರುತ್ತದೆ.

ನೇಗಿಲು

                ಈಚು, ಬಾಳು, ಅಡಸಲು, ಮೇಳಿ, ಕುಳ, ಜಿಗಣಿ, ಕಟ್ಟೆಬೆಣೆ ಇರುವ ಉಳುಮೆ ಮಾಡುವ ಸಾಧನ.

                ಮಲೆನಾಡಿನಲ್ಲಿ ದೀವರು ಎರಡು ಬೇಸಾಯ ಪದ್ಧತಿಗಳನ್ನು ಅನುಸರಿಸುತ್ತಾರೆ. ಬಿತ್ತನೆ ಮತ್ತು ನಾಟಿ ಪದ್ಧತಿಗಳು. ಹಿಂದೆ ಬಿತ್ತನೆಯನ್ನು ಹೆಚ್ಚು ಮಾಡುತ್ತಿದ್ದರು. ಈಗ ನಾಟಿ ಪದ್ಧತಿಯನ್ನು ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾರು ಫಸಲು ಬೆಳೆಯುತ್ತಿದ್ದಾರೆ. ಹೊಸತಳಿ ಭತ್ತಗಳು ಮೂರೂವರೆ ನಾಲ್ಕು ತಿಂಗಳಿಗೆ ಕಟಾವಿಗೆ ಬರುತ್ತವೆ. ಇದರಲ್ಲಿ ಸಾಕಷ್ಟು ಭತ್ತದ ತಳಿಗಳು ಬಂದಿದೆ.

ನಾಟಿ ಮಾಡುವಾಗ ಬಳಸುವ ಕೆಲವು ಉಪಕರಣಗಳು

ನಳ್ಳಿ

                ಗದ್ದೆಯನ್ನು ನಾಟಿಗೆ ಮಣ್ಣನ್ನು ಪಾಕ ಮಾಡಿ ಸಮಮಟ್ಟ ಮಾಡುವ ಉಪಕರಣ. ಹೊನ್ನೆ, ಬಿಲ್‍ಕಂಬಿ ಮರದಿಂದ ತಯಾರಿಸುತ್ತಾರೆ. ಉದ್ದ ನಾಲ್ಕೂವರೆ ಅಡಿ, ಅಗಲ ಆರು ಇಂಚು ಇರುತ್ತದೆ.

ಗಣೆ

                ನಳ್ಳಿಯ ಮುಂದಿನ ಭಾಗದಲ್ಲಿರುವ ಎಂಟು ಅಡಿ ಉದ್ದವಿರುವ ಎರಡು ಸೀಳು. ಮಾಡಿ ನಳ್ಳಿಗೆ ಜೋಡಿಸಿರುತ್ತಾರೆ. ಸಾಗುವಾನಿ, ನೀಲಗಿರಿ ಮರದಿಂದ ತಯಾರಿಸುತ್ತಾರೆ.

ಮರ

                ನಾಟಿ ಮಾಡುವ ಮೊದಲು ಭೂಮಿಯಲ್ಲಿರುವ ತಗ್ಗು ದಿಣ್ಣೆಗಳನ್ನು ಸಮಮಟ್ಟ ಮಾಡುವ ಸಾಧನ. ಉದ್ದ ಹನ್ನೆರಡು ಅಡಿ, ಅಗಲ ಒಂಬತ್ತು ಇಂಚು ಇರುತ್ತದೆ. ಎರಡು ಜೊತೆ ಎತ್ತು ಕಟ್ಟಿ ಹೊಡೆಯುತ್ತಾರೆ. ಬೀಟೆಯ ಮರದಿಂದ ತಯಾರಿಸುತ್ತಾರೆ.

ಹಲಗೆ

                ನಾಟಿಗೆ ಮೊದಲು ಕೆಸರು ಮಣ್ಣನ್ನು ತಗ್ಗು ಉಬ್ಬುಗಳನ್ನು ಮಟ್ಟ ಮಾಡುವ ಉಪಕರಣ. ಒಂದೇ ಜೊತೆ ಎತ್ತನ್ನು ಕಟ್ಟಿ ಹೊಡಿಯುತ್ತಾರೆ.

ಗೊಣಸು

                ಹಲಗೆಗೆ ಹಾಕುವ ಬಳೆ.

ಮರ

                ಆರು ಅಡಿ ಉದ್ದ, ಒಂಬತ್ತು ಅಂಗುಲ ಅಗಲ ನಾಟಿಗದ್ದೆಯ ಮಣ್ಣನ್ನು ಪಾಕ ಮಾಡಲು ಮತ್ತು ಸಮಮಟ್ಟ ಮಾಡುವ ಸಾಧನ.

ವಿವಿಧ ರೀತಿಯ ಗದ್ದೆಗಳು

ಮಕ್ಕಿಗದ್ದೆ

                ಹೊಳೆ (ನದಿ) ಮತ್ತು ಕೆರೆನೀರಿನ ಆಶ್ರಯವಿಲ್ಲದೆ ಇರುವ ಮಳೆಯ ನೀರನ್ನೇ ಆಶ್ರಯಿಸಿಕೊಂಡಿರುವ ಮತ್ತು ಎತ್ತರದಲ್ಲಿರುವ ಗದ್ದೆಗೆ ಮಕ್ಕಿಗದ್ದೆ ಎಂದು ಕರೆಯುತ್ತಾರೆ.

ಮೊರಡು (ಮೊಲ್ಡು)

                ಎತ್ತರವಿಲ್ಲದ ಸದಾಕಾಲ ತೇವಾಂಶ(ಹದ)ವಿರುವ ಗದ್ದೆಗೆ ಮೊರಡು (ಮೊಲ್ಡು) ಗದ್ದೆ ಎಂದು ಕರೆಯುತ್ತಾರೆ.

ಸವಲು

                 ದೊಡ್ಡದಾದ ಸಮಮಟ್ಟವಿರುವ ತೇವಾಂಶವಿರುವ ಗದ್ದೆಗೆ ‘ಸವಲು’ ಗದ್ದೆ ಎನ್ನುವರು.

ಜವಳುಗದ್ದೆ

                   ಸದಾಕಾಲ ನೀರು ಇರುವ ತೇವಾಂಶ ಹೆಚ್ಚು ಇರುವ ಗದ್ದೆಗೆ ಜವಳುಗದ್ದೆ ಎನ್ನುವರು.

ಭತ್ತದ ತಳಿಗಳು 

   ದಪ್ಪ ಭತ್ತದ ತಳಿಗಳು

ರಾಜಭೋಗ                       150-160 ದಿವಸಗಳು

ದಬ್ಬಣಸಾಲೆ                       140-150 ದಿವಸಗಳು

ವಾರಂಗಲ                         130-140 ದಿವಸಗಳು

ಕಲ್ಚರ್                                125-135 ದಿವಸಗಳು

ಆನೆಕೊಂಬು                      100-145 ದಿವಸಗಳು

ಐ.ಈ.ಟಿ.                            140-1`50 ದಿವಸಗಳು

ಕೆಂಪುದಡಿ ಫಾರಂ             130-140 ದಿವಸಗಳು

ನೆರೆಗುಳಿ                             150-160 ದಿವಸಗಳು

ನ್ಯಾರೆಮಿಂಡ                        150-160 ದಿವಸಗಳು

ಕರೆಇಸಡಿ                           145-155 ದಿವಸಗಳು

ಬಿಳೇ ಇಸಡಿ                        145-155 ದಿವಸಗಳು

ಬಿಳೇಭತ್ತ                           145-155 ದಿವಸಗಳು

ದೊಡ್ಡವಾಳ್ಯ                       145-155 ದಿವಸಗಳು

ಸೋಮಸಾಲೆ                     145-155 ದಿವಸಗಳು

ನೆರಗುಳಿ                           150-160 ದಿವಸಗಳು

ದೊಡ್ಡಹೊನಸು                   150-160 ದಿವಸಗಳು

ತೊಗರಿ                            135-145 ದಿವಸಗಳು

ಹಕಲುಬುಡ್ಡ                       135-145 ದಿವಸಗಳು

ನ್ಯಾರೆಮಿಂಡ                     135-145 ದಿವಸಗಳು

ದಬ್ಬಣಸಾಲೆ                     150-160 ದಿವಸಗಳು

ಚಳ್ಳಭತ್ತ                          150-160 ದಿವಸಗಳು

ಮುಳಭತ್ತ                        150-160 ದಿವಸಗಳು

ಹಕ್ಕಲು ಹೊನಸು               150-160 ದಿವಸಗಳು

ಅರಲುಹೊನಸು                150-160 ದಿವಸಗಳು

ಜಿಗ್‍ಬಿಳೇಭತ್ತ                  150-160 ದಿವಸಗಳು

ಮಧುರೆ ಹೊನಸು              150-160 ದಿವಸಗಳು

ಇಂಟಾನು                       150-160 ದಿವಸಗಳು

ವನ್‍ಫೋರ್                     150-160 ದಿವಸಗಳು

ಬುಡ್ಡಭತ್ತ                        150-160 ದಿವಸಗಳು

ಆನೆಕೊಂಬು                    150-160 ದಿವಸಗಳು

ಮಟ್ಟಳಗ                         150-160 ದಿವಸಗಳು

ದಬ್ಬಣಸಾಲೆ                     150-160 ದಿವಸಗಳು

ಮಂಗಳ                          150-160 ದಿವಸಗಳು

ಫಾರಂವಾಳ್ಯ                    150-160 ದಿವಸಗಳು

ಹೊನಸು                         150-160 ದಿವಸಗಳು

ಬರಗೌರಿ                          150-160 ದಿವಸಗಳು

ಹಕಬುಡ್ಡ                         150-160 ದಿವಸಗಳು

ಬೆಳ್ಳಿಬುಡ್ಡ                         115-120 ದಿವಸಗಳು

ಮಾರ್ನಮಿಬುಡ್ಡ                 110-115 ದಿವಸಗಳು

ಕರೆಭತ್ತ                           110-115 ದಿವಸಗಳು

ಹೆಗ್ಗೆ                               140-150 ದಿವಸಗಳು

ಜಡ್ಡುಭತ್ತ                         140-150 ದಿವಸಗಳು

 

     ಸಣ್ಣಭತ್ತದ ತಳಿಗಳು

ತಾಯಚಾಂಗ್                       135-145 ದಿವಸಗಳು

ಮದ್ರಾಸ್‍ಸಣ್ಣ                        150-160 ದಿವಸಗಳು

ರಾಸಿ                                  120-130 ದಿವಸಗಳು

ಆಲುಬ್ಬಲು                            125-135 ದಿವಸಗಳು

ಗೌರಿ                                   135-145 ದಿವಸಗಳು

ಕಳವೆ                                  150-160 ದಿವಸಗಳು

ಫಾಲ್ಗುಣ                               150-160 ದಿವಸಗಳು

ಬಂಗಾರಕಡ್ಡಿ                          150-160 ದಿವಸಗಳು

ಕೊಯ್ಮತ್ತೂರು                        150-160 ದಿವಸಗಳು

ಪದ್ಮರೇಖಾ                            150-160 ದಿವಸಗಳು

ಮಧು                                  115-120 ದಿವಸಗಳು

ಭರಣಿ                                  115-120 ದಿವಸಗಳು

ಐ.ಆರ್.20                           130-140 ದಿವಸಗಳು

ಐ.ಆರ್.64                           130-140 ದಿವಸಗಳು

ವಾಣಿ                                   130-140 ದಿವಸಗಳು

ವಿಕ್ರಮ್                                130-140 ದಿವಸಗಳು

ಸೋನಾ                               130-140 ದಿವಸಗಳು

ಪುಷ್ಪ                                   130-140 ದಿವಸಗಳು

ಬಾಸ್ಮತಿ                               130-140 ದಿವಸಗಳು

ಸೂಪರ್‍ಸೋನಾ                       130-140 ದಿವಸಗಳು

ಮಂಡ್ಯ ವಾಣಿ                        130-140 ದಿವಸಗಳು

ಮಂಡ್ಯ ವಿಜಯ                      130-140 ದಿವಸಗಳು

ರತ್ನಚೂಡಿ                            150-160 ದಿವಸಗಳು

ಸಣ್ಣವಾಳ್ಯ                            150-160 ದಿವಸಗಳು

ಸಣ್ಣಹೊನಸು                        150-160 ದಿವಸಗಳು

ಇಂಟಾನು                           135-145 ದಿವಸಗಳು

ಜೇನುಗೂಡು                       135-145 ದಿವಸಗಳು

ಪದ್ಮ                                 135-145 ದಿವಸಗಳು

ಜೀರಿಗೆಸಣ್ಣ                         135-145 ದಿವಸಗಳು

ರಾಜವಾಣಿ                         135-145 ದಿವಸಗಳು

ಗೌರಿಸಣ್ಣ                           135-145 ದಿವಸಗಳು

ಭಾಗ್ಯಜ್ಯೋತಿ                    130-140 ದಿವಸಗಳು

ಅಕ್ಕಳ್                            130-140 ದಿವಸಗಳು

ಸೋನಾ ಮಸೂರಿ              140-150 ದಿವಸಗಳು

ವಿಜಯಮಸೂರಿ                140-150 ದಿವಸಗಳು

ಎಮರ್ಜೆನ್ಸಿ ಸೋನಾ          125-135 ದಿವಸಗಳು

ಅರವತ್ನಾಲ್ಕು (64)           125-135 ದಿವಸಗಳು

ಜಪಾನು 64                   125-135 ದಿವಸಗಳು

ಬಾಳೆತಳಿಗಳು

ದ್ಯಾವಬಾಳೆ

                ಮರಗಳು ತುಂಬಾ ಎತ್ತರ ಬೆಳೆಯುತ್ತವೆ. ಕಾಯಿ ಸ್ವಲ್ಪ ದಪ್ಪವಾಗಿರುತ್ತದೆ. ಒಂದು ಕೊನೆಯಲ್ಲಿ ಐವತ್ತರಿಂದ ನೂರಾಐವತ್ತು ಕಾಯಿಗಳಿರುತ್ತವೆ.

ಕರಿಬಾಳೆ

                ಕರಿಬಾಳೆ ಮರ ಎತ್ತರ ಒಂಬತ್ತರಿಂದ ಹತ್ತು ಅಡಿ ಇರುತ್ತದೆ. ಐವತ್ತರಿಂದ ನೂರಾಐವತ್ತು ಕಾಯಿ ಬಿಡುತ್ತದೆ.

ಪುಟ್ಟಬಾಳೆ

                ಮರ ಆರು ಅಡಿಯಿಂದ ಏಳು ಅಡಿ ಎತ್ತರ ಬೆಳೆಯುತ್ತದೆ. ಒಂದು ಕೊನೆಯಲ್ಲಿ ಐವತ್ತರಿಂದ 100 ಕಾಯಿಗಳಿರುತ್ತವೆ. ಕಾಯಿಗಳು ಚಿಕ್ಕದಾಗಿರುತ್ತವೆ. ತಿನ್ನಲು ತುಂಬಾ ಹಿತವಾಗಿ ಮತ್ತು ರುಚಿಯಾಗಿರುತ್ತವೆ.

ವಾಟಬಾಳೆ

                ಇದು ಆರರಿಂದ ಏಳು ಅಡಿ ಎತ್ತರ ಬೆಳೆಯುತ್ತದೆ. ಕಾಯಿಗಳು ಚಿಕ್ಕದಾಗಿದ್ದು ಒಂದು ಕೊನೆಯಲ್ಲಿ ಐವತ್ತರಿಂದ ನೂರು ಕಾಯಿಗಳಿರುತ್ತವೆ.

 ಮೈಸೂರುಬಾಳೆ

               ಮರ ಏಳರಿಂದ ಎಂಟು ಅಡಿ ಎತ್ತರ ಬೆಳೆಯುತ್ತದೆ. ಕೊನೆಯಲ್ಲಿ ನೂರರಿಂದ ಇನ್ನೂರು ಕಾಯಿ ಇರುತ್ತವೆ.

ಶಾನ್‍ಬಾಳೆ

                ಈ ತಳಿ ಎಂಟರಿಂದ ಒಂಬತ್ತು ಅಡಿ ಎತ್ತರ ಬೆಳೆಯುತ್ತದೆ. ಕೊನೆಯಲ್ಲಿ ಹತ್ತರಿಂದ ಐವತ್ತು ಕಾಯಿ ಬಿಡುತ್ತವೆ.

 ನೇಂದ್ರಬಾಳೆ

                ಈ ತಳಿ ಐದು ಅಡಿ ಎತ್ತರ ಬೆಳೆಯುತ್ತದೆ. ಕೊನೆಯಲ್ಲಿ ಇಪ್ಪತ್ತೈದರಿಂದ ನಲವತ್ತೈದು ಕಾಯಿ ಬಿಡುತ್ತದೆ.

ಪಚ್ಚಬಾಳೆ

               ಈ ತಳಿ ತುಂಬಾ ಅಪರೂಪದ ಜನಪ್ರಿಯ ತಳಿಯಾಗಿದೆ. ಸುಮಾರು ಎಂಟರಿಂದ ಒಂಬತ್ತು ಅಡಿ ಎತ್ತರ ಬೆಳೆಯುತ್ತದೆ. ಕೊನೆಯಲ್ಲಿ ನೂರರಿಂದ ಎರಡುನೂರು ಕಾಯಿ ಬಿಡುತ್ತದೆ.

ಗಿಡ್ಡಬಾಳೆ

                ಇದು ಮೂರೂವರೆ ಅಡಿಯಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ದಪ್ಪಕಾಯಿಗಳು. ನೂರರಿಂದ ಎರಡೂನೂರು ಕಾಯಿಗಳು ಬಿಡುತ್ತವೆ.

ರಸಬಾಳೆ

                ಈ ತಳಿ ತುಂಬಾ ಶ್ರೇಷ್ಠವಾದದ್ದು ಮತ್ತು ರುಚಿಯಾದದ್ದು. ಹತ್ತು ಅಡಿ ಎತ್ತರ ಮರ ಬೆಳೆಯುತ್ತದೆ. ದಪ್ಪಕಾಯಿಗಳು. ಇಪ್ಪತ್ತೈದರಿಂದ ನೂರಾ ಇಪ್ಪತ್ತೈದು ಕಾಯಿಗಳು ಬಿಡುತ್ತವೆ.

ಬೂದಬಾಳೆ

              ಈ ತಳಿ ಆರು ಅಡಿಯಿಂದ ಹತ್ತು ಅಡಿ ಎತ್ತರ ಬೆಳೆಯುತ್ತದೆ. ದಪ್ಪಕಾಯಿಗಳು. ಒಂದು ಕೊನೆಯಲ್ಲಿ ಇಪ್ಪತ್ತೈದರಿಂದ ನೂರು ಕಾಯಿ ಬಿಡುತ್ತದೆ.

ಪಟ್ತಬಾಳೆ

              ಈ ತಳಿ ಐದು ಅಡಿಯಿಂದ ಆರು ಅಡಿ ಎತ್ತರ ಬೆಳೆಯುತ್ತದೆ. ಕಾಯಿಗಳು ಉದ್ದವಾಗಿರುತ್ತವೆ. ನೂರು ಕಾಯಿಗಳಿಂದ ಇನ್ನೂರು ಕಾಯಿಗಳು ಬಿಡುತ್ತವೆ.

ಸೇಲಂಬಾಳೆ

                ಈ ತಳಿ ಆರು ಅಡಿ ಎತ್ತರ ಬೆಳೆಯುತ್ತದೆ. ದಪ್ಪವಾದ ಕಾಯಿಗಳು. ಒಂದು ಕೊನೆಯಲ್ಲಿ ಒಂದುನೂರು ಕಾಯಿಗಳಿಂದ ಎರಡುನೂರು ಕಾಯಿಗಳು ಬಿಡುತ್ತವೆ.

ಕಬ್ಬಿನ ತಳಿಗಳು

ಕರೆಕಬ್ಬು

         ಕಪ್ಪುಬಣ್ಣ, ಗಟ್ಟಿಯಾಗಿರುತ್ತದೆ. ಹಳೆ ತಳಿ, ಇಳುವರಿ ಸಾಮಾನ್ಯ.

ದಾಸಕಬ್ಬು

                ಮೃದುವಾಗಿರುತ್ತದೆ. ಬಿಳಿ ಮತ್ತು ಕೆಂಪುಬಣ್ಣದ ಪಟ್ಟೆಗಳಿರುತ್ತವೆ. ಇಳುವರಿ ಸಾಧಾರಣ.

ವಾಟಕಬ್ಬು

                ಗಟ್ಟಿಯಾಗಿರುತ್ತದೆ. ಬೂದುಬಣ್ಣ, ಇಳುವರಿ ಚೆನ್ನಾಗಿದೆ.

ಮೋರಿಸ್

                ಕೆಂಪುಬಣ್ಣ, ಬಿಳಿಯದಾದ ಗಂಟುಕಾಲು ಕಬ್ಬು. ಉತ್ತಮ ಇಳುವರಿ. ಈ ಕಬ್ಬನ್ನು ಕಾಡುಹಂದಿ ತಿನ್ನುವುದಿಲ್ಲ. ಹಾಲು ನಸುಗೆಂಪು ಬಣ್ಣ.

ದ್ಯಾವಕಬ್ಬು

                ಹಸಿರುಬಣ್ಣ. ತುಂಬಾ ಉದ್ದವಾಗಿ ಬೆಳೆಯುತ್ತದೆ. ಹೆಚ್ಚು ಇಳುವರಿ ಬರುತ್ತದೆ.

ರಸದಾಳೆ

                ತುಂಬಾ ಸಪೂರವಾಗಿರುತ್ತದೆ. ಗಿಡ್ಡದಾಗಿ ಬೆಳೆಯುತ್ತದೆ. ಬೂದುಬಣ್ಣ.

ಗುಬ್ಬು ರಸದಾಳೆ

                ಸಪೂರವಾಗಿರುತ್ತದೆ. ಗಿಡ್ಡದಾಗಿ ಬೆಳೆಯುತ್ತದೆ. ರಸದಾಳೆ ಕಬ್ಬಿನ ಹಾಗೆ ಇಳುವರಿ. ಬೂದುಬಣ್ಣ

ಕೊಹಿನೂರು ಕಬ್ಬು

                ಕೆಂಪುಬಣ್ಣ, ಇಳುವರಿ ಸಾಮಾನ್ಯ.

ಆನೆಕಬ್ಬು

                ದಪ್ಪವಾಗಿ ಬೆಳೆಯುತ್ತದೆ. ಸಪೂರವಾಗಿರುತ್ತದೆ. ಮೋರಿಸ್ ಕಬ್ಬಿನ ರೀತಿ ಇರುತ್ತದೆ.

 ಹುಚ್ಚುಕಬ್ಬು

                ಹುಚ್ಚುನಾಯಿ ಕಚ್ಚಿದರೆ ಈ ಕಬ್ಬಿನ ರಸವನ್ನು ಕುಡಿಸುತ್ತಾರೆ. ಬೆಲ್ಲ ತಯಾರಿಸಲು ಬರುವುದಿಲ್ಲ.

ಎಚ್‍ಎಂಟಿ

                ಉತ್ತಮವಾದ ಫಸಲು ಬರುತ್ತದೆ. ತುಂಬಾ ಮೆದುವಾಗಿರುತ್ತದೆ. ಬೆಲ್ಲ ತುಂಬಾ ಸವಿಯಾಗಿರುತ್ತದೆ.

                ವಿವಿಧ ರೀತಿಯ ಮಣ್ಣು

1) ಜವಳು ಮಣ್ಣು                                            2) ಕೆಂಜವಳು                                      3) ಆರು ಮಣ್ಣು                               

4) ಹೋಂಗಿ ಮಣ್ಣು                                         5) ಕೆಂಪುಮಣ್ಣು                                      6) ಕುಂಬಾರಮಣ್ಣು

7) ಕಾಗದಾಳಿ ಮಣ್ಣು                                       8) ಕೋಟಿಮಣ್ಣು                                    9) ಜೇಡಿಮಣ್ಣು

10) ದುಗುಳುಮಣ್ಣು                                      11) ಗೊಚ್ಚುಮಣ್ಣು                                  12) ಮಿದುಮಣ್ಣು

13) ಹೇಡಿಮಣ್ಣು                                          14) ವರ್ಲೆಮಣ್ಣು                                   15) ಗೋಡುಮಣ್ಣು

16) ಕರೆ ಗೋಡುಮಣ್ಣು                                  17) ಕೆಂಪು ಗೋಡುಮಣ್ಣು                        18) ಗೂರುಮಣ್ಣು

19) ಸುಡುಮಣ್ಣು                                          20) ಕೆಂಮಣ್ಣ                                      21) ಹುತ್ತದ ಮಣ್ಣು

22) ಹಳಿ ಮಣ್ಣು

                    ಸಾವಯವ ಗೊಬ್ಬರ

1) ಕೊಟ್ಟಿಗೆ ಗೊಬ್ಬರ                                       2) ದರಕಿನ ಗೊಬ್ಬರ                           3) ಕಾಂಪೋಸ್ಟ್ ಗೊಬ್ಬರ

4) ಸೊಪ್ಪಿನ ಗೊಬ್ಬರ                                      5) ಸದೆ ಗೊಬ್ಬರ                                6) ಬೇವಿನ ಗೊಬ್ಬರ

7) ಮಡ್ಡಿ ಗೊಬ್ಬರ                                           8) ಗುರು ಗೊಬ್ಬರ                               9) ಹುಡಿಗೊಬ್ಬರ

10) ಕೋಳಿ ಗೊಬ್ಬರ                                   11) ಕುರಿ ಗೊಬ್ಬರ                                12) ಎರೆಹುಳು ಗೊಬ್ಬರ

70ರ ದಶಕದ ರಸಗೊಬ್ಬರಗಳು

1) ಸಂಪೂರ್ಣ 19, 19, 19

2) ವಿಜಯ 17, 17, 17

3) ಸುಫಲಾ 15, 15, 15

4) ಇಫ್ಕೊ 10, 26

5) ಸೂಪರ್

6) ಪೊಟ್ಯಾಷ್

7) ಯೂರಿಯ

8) ಡಿ.ಎ.ಪಿ.

9) ಸುಫಲಾ

ಭತ್ತದ ಬೆಳೆಗೆ ಬರುವ ರೋಗಗಳು

1) ಬೆಂಕಿ ರೋಗ                                2) ಊದಬತ್ತಿ ರೋಗ                          3) ಊಬು ರೋಗ

4) ಕಟ್ಟೆ ರೋಗ                                  5) ಎರಗಲು ರೋಗ                           6) ಬಿಳೇ ಎರಗಲು ರೋಗ

7) ಸುಳಿ ರೋಗ                                  8) ಚುಕ್ಕೆ ರೋಗ                               9) ನಾಲಿಗೆಸುಳಿ ರೋಗ

10) ಅರಶಿವ ಮುಂಡಿಗೆ ರೋಗ

ಬೆಳೆಗೆ ಬರುವ ರೋಗಗಳನ್ನು ನಿಯಂತ್ರಿಸಲು ಬಳಸುವ ಔಷಧಿಗಳು

1) ಬಿ.ಎಸ್.ಸಿ. ಪೌಡರ್                   2) ಗೆಮಾಸ್ಕಿನ್                    3) ಮೆಲಾಥಿನ್                   4) ಡೆಮಾಕ್ರಿನ್

5) ಹಿನೋಸೆಲ್                             6) ಫಾಲಿಡಾಲ್                   7) ಎಂಡ್ರಿನ್

ಆಫರ್ ರೋಗ

                ಭತ್ತದ ಸಸಿಯ ಬುಡದಲ್ಲಿ ನುಸಿಗಳು ಗುಂಪು ಗುಂಪಾಗಿ ಸೇರಿ ಭತ್ತದ ಕಾಂಡದ ರಸವನ್ನು ಹೀರುತ್ತವೆ. ನುಸಿಗಳು ಒಣಗುತ್ತವೆ. ಒಮ್ಮೆ ಪ್ರಾರಂಭವಾದರೆ ಶೀಘ್ರವಾಗಿ ಹರಡುತ್ತವೆ. ರಾಸಾಯನಿಕ ಗೊಬ್ಬರದ ಜೊತೆಗೆ ಟಿಮೊಟೊ ಪುಡಿಯನ್ನು ಮರಳಿನಲ್ಲಿ ಸೇರಿಸಿ ಹಾಕಬೇಕು. ರೋಗ ಬರುವ ಮುಂಚೆ ಹಾಕಿದರೆ ರೋಗ ಬರುವುದೇ ಇಲ್ಲ. ಇದು ತುಂಬಾ ಮಾರಕ ರೋಗ.               

ಬೆಂಕಿರೋಗ

                ಗರಿಯೆಲ್ಲಾ ಚಿಕ್ಕಿ ಚಿಕ್ಕಿ ಬಿದ್ದು ಕಂದುಬಣ್ಣಕ್ಕೆ ತಿರುಗಿ ಗರಿಯ ತುದಿಭಾಗ ಒಣಗುತ್ತಾ ಬರುತ್ತದೆ. ಬಯೊಸ್ಟಿನ್ ಪೌಡರ್ ಒಂದು ಲೀಟರ್ ನೀರಿಗೆ ಒಂದು ಗ್ರಾಂ ಸೇರಿಸಿ ಸಿಂಪಡಿಸಬೇಕು.

ತೆನೆ ತಿಗಣೆ ರೋಗ

                ತೆನೆಗಳೆಲ್ಲಾ ಜೊಳ್ಳಾಗುತ್ತವೆ. ತೆನೆಗಳೂ ಮುರಿದು ಬಗ್ಗುತ್ತವೆ.

ಎರಗಲು ರೋಗ

                ಇದು ನಾಟಿ ಮಾಡಿದ ಭತ್ತಕ್ಕೆ ಬರುವ ರೋಗ. ಸಸಿ ಹಸರಾಗುವುದೇ ಇಲ್ಲ. ಕೆಂಪಾಗಿರುತ್ತದೆ. ಬೆಂಕಿಯಿಂದ ಅರ್ಧ ಸುಟ್ಟಿರುವ ಬಿದಿರಿನ ಅಥವಾ ಮರದ ಕರಿಗೂಟಗಳನ್ನು ಜಮೀನಿನ ಮಧ್ಯೆ ಅಲ್ಲಲ್ಲಿ ನಿಲ್ಲಿಸಬೇಕು. ಗಾಳಿ ಬೀಸಿದಾಗ ರೋಗ ನನಿರೋಧಕ ಶಕ್ತಿ ಉತ್ಪತ್ತಿಯಾಗಿ ಭತ್ತದ ಸಸಿಯ ಮೇಲೆ ಬೀಸುವುದರಿಂದ ರೋಗನಿವಾರಣೆಯಗುತ್ತದೆ. ಕಹಿಬೇವಿನ ಸೊಪ್ಪನ್ನು ಕೊಚ್ಚಿ ಮಡಬಾಯಿನಲ್ಲಿ ಹಾಕಿದರೆ ಬೇವಿನಲ್ಲಿಯ ಕಹಿ ಅಂಶ ಮಡಬಾಯಿಂದ ನೀರು ಗದ್ದೆಯಿಂದ ಗದ್ದೆಗೆ ಹರಿಯುವುದರಿಂದ ಎಲ್ಲಾ ಗದ್ದೆಗಳಿಗೆ ಹರಡಿ ಅನೇಕ ರೋಗಗಳು ನಿವಾರಣೆಯಾಗುತ್ತವೆ.

ಸೈನ್ಯದ ಹುಳು

                ಭತ್ತದ ಸಸಿಗಳನ್ನು ಸೈನ್ಯದಂತೆ ಲಕ್ಷಗಟ್ಟಲೆ ಹುಳುಗಳು ಮುತ್ತಿಗೆ ಹಾಕಿ ತಿನ್ನುವವು.

ಕಂದುಜಿಗಿ ಹುಳು

                ಭತ್ತದ ಸಸಿಯ ಕೆಳಭಾಗದಲ್ಲಿ ಸಸಿಯ ರಸವನ್ನು ಹೀರಿ ಒಣಗಿಸುತ್ತವೆ.

ತೆನೆ ತಿಗಣೆ ರೋಗ

                ತಿಗಣೆಯಂತೆ ಇರುವ ಹುಳು. ಭತ್ತದ ತೆನೆಯಲ್ಲಿನ ಭತ್ತದ ಹಾಲನ್ನು ಹೀರಿ ಭತ್ತವನ್ನು ಜೊಳ್ಳು ಮಾಡುತ್ತದೆ.

ಬೆಂಕಿರೋಗ

                ಭತ್ತದ ಸಸಿಯ ಎಲೆಯ ಮಧ್ಯೆ ಕೆಂಪು ಚುಕ್ಕೆಯಾಗಿ ತುದಿಯ ಭಾಗ ಒಣಗುತ್ತದೆ.

ಆನೆಕೊಂಬು (ಗಾಲ್‍ಮಿಡ್ಜೆಕಣೆ)

                ಭತ್ತದ ಸಸಿಯಲ್ಲಿ ಆನೆಕೊಂಬಿನಾಕಾರದಲ್ಲಿ ಸುಳಿ ಹೊರಟು ಮೂಲ ಸಸಿಯನ್ನು ಒಣಗಿಸುತ್ತದೆ.

ಎಲೆ ಸುರುಳಿ

                ಭತ್ತದ ಸಸಿಯ ಗರಿಯನ್ನು ಸುರುಳಿ ಮಾಡಿಕೊಂಡು ಈ ಹುಳು ಸೇರಿಕೊಂಡು ರಸವನ್ನು ಹೀರುತ್ತದೆ.

ಕಾಂಡ ಕೊರೆಯುವ ಹುಳು

                ಭತ್ತದ ಸಸಿಯ ಕಾಂಡವನ್ನು ಕೊರೆದು ಕಾಂಡದ ಒಳಸೇರಿ ತಿರುಳನ್ನು ತಿನ್ನುತ್ತದೆ. ಕಾಳು ತೆನೆ ಜೊಳ್ಳಾಗುತ್ತದೆ.

ಕಹಿಬೇವು

                ಕಹಿಬೇವಿನ ಸೊಪ್ಪು, ಬೀಜ, ಕಾಂಡ-ಇಡೀ ಮರವೇ ರೋಗನಿರೋಧಕ ಶಕ್ತಿ ಪಡೆದಿರುತ್ತದೆ. ಕಹಿಬೇವಿನ ಬೀಜವನ್ನು ಕುಟ್ಟಿ ಪುಡಿಮಾಡಿ ಸೋಸಿ, ನೀರಿನಲ್ಲಿ ಬೆರೆಸಿ, ಬೆಳೆಗೆ ಸಿಂಪಡಿಸಿದರೆ ಅನೇಕ ರೋಗಗಳು ದೂರವಾಗುತ್ತವೆ.

 ಮುಕುಟ

                ನಾಟಿ ಮಾಡಿದ ಸ್ವಲ್ಪ ದಿವಸಗಳಲ್ಲಿ ಸಸಿ ಹಸರಾಗದೆ ಸಸಿಯ ಸುಳಿಯು ಬೇಗ ಕೆಂಪಾಗುತ್ತದೆ. ಮುಕುಟ ಎಂಬ ಜಾತಿಯ ಗಿಡದ ಕೊಂಬೆಗಳನ್ನು ಕಡಿದುಕೊಂಡುಬಂದು ಗದ್ದೆಯ ಮಧ್ಯೆ ಅಲ್ಲಲ್ಲಿ ನಿಲ್ಲಿಸುತ್ತಾರೆ. ಈ ಗಿಡಕ್ಕೆ ಅನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿಯಿದೆ.

ದೀವರು ವಾಸವಾಗಿರುವ ಪರಿಸರದಲ್ಲಿರುವ ಸಸ್ಯಸಂಪತ್ತು

                ದೀವರು ನಿಸರ್ಗಜೀವಿಗಳು. ದಟ್ಟವಾದ ಅರಣ್ಯಗಳು, ಗುಡ್ಡ, ಬೆಟ್ಟ, ಬಯಲು ಹೀಗೆ ಪ್ರಾಕೃತಿಕವಾಗಿ ಅತ್ಯಂತ ಸುಂದರವಾಗಿರುವ ಪ್ರದೇಶಗಳಲ್ಲಿ ದೀವರು ವಾಸವಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಇವರು ಕಾಡು, ಗುಡ್ಡ, ಬೆಟ್ಟಗಳ ನಡುವೆ ಜೀವನ ಮಾಡುತ್ತಿರುವ ಜನಾಂಗ. ಇವರಿಗೆ ಕಾಡಿನಲ್ಲಿರುವ ಗಿಡ, ಮರ, ಬಳ್ಳಿ, ಫಲ-ಪುಷ್ಪಗಳು ಮತ್ತು ಕಾಡಿನಲ್ಲಿರುವ ಪಕ್ಷಿಸಂಕುಲಗಳು, ಕಾಡುಪ್ರಾಣಿಗಳ ಸಮಗ್ರ ಜ್ಞಾನ ಇರುತ್ತದೆ.

ಮರಗಿಡಗಳು

                ಹಲಸು, ಬಗನೆ, ಭರಣಿಗೆ, ಬೀಟೆ, ಹೆಬ್ಬಲಸು, ಮಾವು, ಸಾಗುವಾನಿ (ತೇಗ), ನಂದಿ, ಕರಿವಾಲ, ಗುಳಿಮಾವು, ಬೂರಲು, ಹೊನ್ನೆ, ಮತ್ತಿ, ತೊರಾಗಲ, ಹುಣಸೆ, ಮಸೆ, ಇಲಿಬಸರಿ, ಕಕ್ಕೆಮರ, ಜುಮ್ಮನ ಮರ, ಹುನಾಲು, ಚುಂಗಾಳಿ, ನೇರಲು, ಬಿಳೇಬಸರಿ, ಬಲ್ಕಂಬಿ, ಗೊದ್ದಲ, ಕುನ್ನೇರಳೆ, ಬೆಳಾಲು, ಲಕ್ಕಿಗಿಡ, ಗರಗತ್ತಿ, ಅತ್ತಿಮರ, ಹಾಲುಮಡ್ಡಿ, ದಾಲ್ಚಿನ್ನಿ, ನೆಲ್ಲಿಗಿಡ, ಕೌಲುಮರ, ಲವಂಗ, ಹೆನಿಗೆರೆ, ಕಾರೆಮರ, ಸರ್ವಸುಗಂಧಿ, ಕಂಚಿ, ಗಂಧಗರಿಗೆ, ಅರಚಟ್ಟಿ, ದೊಡ್ಲಿಕಾಯಿ, ಮಾದಲ, ಹಾಲವಾಣ, ಸಂಪಿಗೆ, ಹಂಗಾರಕ, ನೀಲಗಿರಿ, ಅಕೇಶಿಯ, ಶಿವನೆಮರ, ಬೇರುಹಲಸು, ಗಾಳಿಮರ, ದಡಸಲ, ಬನ್ನಿಮರ, ಕಣಗಲು, ಹಾಲೆ, ಪತ್ರೆ, ಗೊರಬಳೆ, ಬಿಲ್ಪತ್ರೆ, ಅರಳಿ, ಗುಡ್ಡಕಣಗಲು, ಮದ್ದಾಲೆ, ಜಂಬೆ, ಕಾಸರಕ, ಪಾರಿಜಾತ, ಅಶೋಕ, ಪಿಳ್ಳಿಮರ, ಪೇರಲೆ, ಆಲ, ಗಂಧ, ಚಂದನ, ನಾಗಸಂಪಿಗೆ, ಸುರಗಿ ಮರ, ಕಾಮತ್ತಿ ಮರ, ತಲಿಗೆ, ಕೊಡಚ, ಜಾಜಿ, ಮರಗೌರಿ, ಹೊಳಗೆರಿ, ನಿಷ್ಣೆ, ಸಳ್ಳೆ, ಗುರಿಗೆ, ಬೇವಿನಮರ, ಗೂಜಿನಮರ, ದಡಸಲು, ತುಂಬಿ, ತಾರಮರ, ಕಹಿಬೇವು, ಮುರಗ, ಮುತ್ತಲ, ವಾಟೆ, ಗುಡ್ಡೆಗೇರು, ಸುರಹೊನ್ನೆ, ಉಪ್ಪಾಗೆ, ನುಗ್ಗೆಮರ, ರಂಜಲ, ಗೋಡಂಬಿ, ಧೂಪದಮರ ಇತ್ಯಾದಿ

ಮಲೆನಾಡು ಪಕ್ಷಿ ಸಂಕುಲಗಳು

                ಜೇನುಗಿಡುಗ, ಕರೇಗಿಡಗ, ಬಿಳೇ ಗಿಡಗ, ಕುಚ್ಚು ಗಿಡಗ, ಮಂಡೆ ಗಿಡಗ, ಬೆಳಾಲು ಕೊಂಚಗ, ಗೊಳ್ಳಂಡೆ, ಹಂಡೇನಹಕ್ಕಿ, ಹೂಡ್ಲಹಕ್ಕಿ, ಚಿಕ್ಕವ್ವನ ಹಕ್ಕಿ (ಕೋಗಿಲೆ), ಉರಿಚಿಟ್ಲ, ಪೆಳ್ಳೆ ಹಕ್ಕಿ, ಕುಲ್ಡ್ಯಾಮಂಗ್ಯಾ, ಗೊಣಬೆ ಸುಂಡ್ಯಾ, ಹಪ್ಪೆ ಚೇರಾ, ಮೇಟಿಪುಟ್ಟ, ನೀರುಕಾಗೆ, ಗೀಜಗನ ಹಕ್ಕಿ, ರಾಮಚೇಳು, ಗಜನೀರ, ಉಳಿಂಗ, ತಳಿಗೀಜ, ನೆರಸೆ ಕೊಕ್ಕರೆ, ಕರೆ ಕೊಕ್ಕರೆ, ಬೂದ ಕೊಕ್ಕರೆ, ಮುಂಡ ಕೊಕ್ಕರೆ, ಬಳೇ ಕೊಕ್ಕರೆ, ಕಂಚುಗಾರ ಕೊಕ್ಕರೆ, ಕವುಟ, ಕರೆ ಕವುಟ, ಚೌರದ್ಹಕ್ಕಿ, ಪಿಚ್ಚೆ ಹಕ್ಕಿ, ರಾಮಗಿಡಗ, ಗೂಬೆ (ಗುಮ್ಮ), ಮರಕುಟಿಗ, ಚೆಲುವೆಹಕ್ಕಿ, ಕುಟ್ರನಹಕ್ಕಿ, ಎಮ್ಮಗೆರೆ, ಬೆಳಾಲಹಕ್ಕಿ, ನಾಮಗೋಳಿ, ಬೀರಿಕಾಲಿ, ಪುರ್ಲೆಹಕ್ಕಿ, ಕೆಂಬತ್ತು, ಕಾಗೆ, ಗಳ್ಡನಹಕ್ಕಿ, ಬಾಳೆಹಕ್ಕಿ, ಮುಣಕನಹಕ್ಕಿ, ಮಾವಿನಹಕ್ಕಿ, ಬೆಕ್‍ಬರ್ಲೆ, ಗುಬ್ಬಚ್ಚಿ, ಹದ್ದು, ಚಿಪ್ರೆಕೋಳಿ, ಬೈಲಾರು ಕೊಕ್ಕರೆ, ಕೆದ್ಲಕೋಳಿ, ತಿಮ್ಮನ ಹಕ್ಕಿ, ಹಸರನ ಹಕ್ಕಿ, ಕಾಗರ ಚೇಳ, ಹಾಳಿಗುಬ್ಬಚ್ಚಿ, ಕಾಕೋಳಿ (ಕಾಡುಕೋಳಿ), ಹುಂಟಕೋಳಿ, ಸಿಂಡ್ರಿ ಪಿಳ್ಳ, ಹೊಗೆಪೀಟಿ, ಕುಂಡೆ ಕುಣುಕ, ಹೊಟ್ಟೆತುಂಡ, ಮುಳ್ಳುತಿಮ್ಮನ ಹಕ್ಕಿ, ಗುದ್ಲಿಗ್ವಾರ, ಚಿಕಾಟ್ಲಿ ಹಕ್ಕಿ, ಗಡತುಕುಕ್ಕ, ಮೀನುಕುಂಯ, ಬಾಳೆಗಿಡಗ, ಶಕುನಾರ, ಲಗ್ಡ, ದಾಸಕೊಕ್ಕರೆ, ಹಾಡೇಹಕ್ಕಿ, ಪಾರಿವಾಳ, ಇಬ್ಬಾಡ್ಲಹಕ್ಕಿ.