ದೀವರ ಸಮುದಾಯದ ಆರಾದ್ಯ ದೈವ-ಹುಚ್ಚರಾಯಸ್ವಾಮಿ (ಆಂಜನೇಯ)

                 ದೀವರ ಸಮೂಹದಲ್ಲಿ ಮುಖ್ಯವಾಗಿ ಹುಚ್ಚರಾಯಸ್ವಾಮಿ ಹಾಗೂ ರೇಣುಕಾಂಬೆ ಎಂಬ ಎರಡು ದೇವರುಗಳನ್ನು ಆರಾಧಿಸುತ್ತಾರೆ. ವೈಷ್ಣವ ಸಂಪ್ರದಾಯದವನ್ನು ಅನುಸರಿಸುವವರು ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ನಡೆದುಕೊಳ್ಳುತ್ತಾರೆ. ಇವರ ಮನೆದೇವರು ಹುಚ್ಚರಾಯಸ್ವಾಮಿ (ಆಂಜನೇಯ). ಇವರಿಗೆ ದೊಡ್ಡದೇವರ ವಕ್ಕಲು, ಗಂಡೊಕ್ಕಲು ಎಂದು ಕರೆಯುತ್ತಾರೆ. ಉಳಿದವರು ಚಂದ್ರಗುತ್ತಿ ರೇಣುಕಾಂಬೆಗೆ ನಡೆದುಕೊಳ್ಳುತ್ತಾರೆ. ರೇಣುಕಾಂಬೆಗೆ ಗುತ್ಯಮ್ಮ, ಗುತ್ತಿ ಕನ್ನಮ್ಮ ಎಂದೂ ಕರೆಯುತ್ತಾರೆ. ಈ ದೇವತೆಗೆ ನಡೆದುಕೊಳ್ಳುವವರನ್ನು ಹೆಣ್ಣೊಕ್ಕಲು ಎಂದು ಕರೆಯುತ್ತಾರೆ. ದೀವರಲ್ಲಿ ಹೀಗೆ ಗಂಡೊಕ್ಕಲು ಮತ್ತು ಹೆಣ್ಣೊಕ್ಕಲು ಎಂದು ಎರಡು ಪಂಗಡಗಳಿವೆ. ಹೊಸನಗರ ತಾಲ್ಲೂಕಿನ ದೀವರು ಅಮ್ಮನಘಟ್ಟದ ಜೇನುಕಲ್ಲಮ್ಮ ಮತ್ತು ಬೆನ್ನಟ್ಟೆ ಗುತ್ಯಮ್ಮ-ಈ ದೇವತೆಗಳಿಗೆ ಹೆಚ್ಚಾಗಿ ನಡೆದುಕೊಳ್ಳುತ್ತಾರೆ. ಸೊರಬ ತಾಲ್ಲೂಕಿನ ದೀವರು ಹೆಚ್ಚಾಗಿ ಚಂದ್ರಗುತ್ತಿಯ ರೇಣುಕಾಂಬೆಯ ಭಕ್ತರು.

ಶಿಕಾರಿಪುರ ಎಂದೊಡನೆ ನೆನಪಾಗುವುದು ಈ ಊರಿನ ಮತ್ತು ಕೆಲವು ತಾಲ್ಲೂಕುಗಳ ಆರಾಧ್ಯ ದೈವವಾದ ಆಂಜನೇಯಸ್ವಾಮಿ - ಇಲ್ಲಿ ಹುಚ್ಚರಾಯಸ್ವಾಮಿ ಎಂದು ಕರೆಸಿಕೊಂಡಿದ್ದಾನೆ. ಮಲೆನಾಡಿನ ಕೆಲವು ತಾಲ್ಲೂಕುಗಳ ದೀವರ ಹಳ್ಳಿಗಳಿಗೆ ಹೋದರೆ ಪ್ರತಿ ಊರಿನಲ್ಲಿಯೂ ಹತ್ತಾರು ಜನ ಹುಚ್ಚಪ್ಪ ಎಂಬ ಹೆಸರಿನವರು ದೊರೆಯುತ್ತಾರೆ. ಅನೇಕ ವೈಷ್ಣವ ದೀವರು ಕುಟುಂಬಗಳಲ್ಲಿ ಹುಚ್ಚರಾಯಸ್ವಾಮಿ ಕುಟುಂಬದೇವತೆಯಾಗಿ, ಮನೆದೇವರಾಗಿ, ಪ್ರಾಣದೇವತೆಯಾಗಿ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಜನಮಾನಸದಲ್ಲಿ ನೆಲೆ ನಿಂತಿದ್ದಾನೆ.

                ಶಿಕಾರಿಪುರ ನಗರಕ್ಕೆ ಪೂರ್ವ ದಿಕ್ಕಿನಲ್ಲಿರುವ ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಅದರದೇ ಆದ ಐತಿಹ್ಯವಿದೆ. ಈ ದೇವರ ಹೆಸರು ಭ್ರಾಂತೇಶ ಎಂಬುದು ಇನ್ನೊಂದು ವಿಶೇಷ. ಶ್ರೀರಾಮದೂತ, ವಾನರಯೋಧ, ವಾಯುಪುತ್ರ, ಹನುಮಂತ, ಆಂಜನೇಯ ಎಂದೆಲ್ಲಾ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಈ ದೇವರು ಇಲ್ಲಿ ಹುಚ್ಚರಾಯಸ್ವಾಮಿ, ಭ್ರಾಂತೇಶ ಎನಿಸಿದ್ದಾನೆ.

                ಸಾಲಿಗ್ರಾಮ ಹೊಂದಿರುವ ಮೂರು ದೇವರನ್ನು ಶ್ರದ್ಧಾಭಕ್ತಿಯಿಂದ ಒಂದೇ ದಿನದಲ್ಲಿ ದರ್ಶನ ಮಾಡಿದರೆ ಪುಣ್ಯ ದೊರೆಯುತ್ತದೆ, ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ. ಕರ್ನಾಟಕದಲ್ಲಿ ಸಾಲಿಗ್ರಾಮಗಳನ್ನು ತಮ್ಮ ದೇಹದಲ್ಲಿ ಜೋಡಿಸಿಕೊಂಡಿರುವ ಮೂರ್ತಿಗಳು; ಶಿಕಾರಿಪುರದ ಭ್ರಾಂತೇಶನಿಗೆ ಮೂಗಿನಲ್ಲಿ ಸಾಲಿಗ್ರಾಮವನ್ನು ಜೋಡಿಸಲಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕದರಮುಂಡರಗಿಯ ಕಾಂತೇಶನಿಗೆ ಎರಡು ಕಣ್ಣುಗಳಲ್ಲಿ ಸಾಲಿಗ್ರಾಮಗಳನ್ನು ಜೋಡಿಸಲಾಗಿದೆ. ಇದೇ ಜಿಲ್ಲೆಯ ಹಿರೇಕೆರೂರು ಸಾತೇನಹಳ್ಳಿಯ ಶಾಂತೇಶನಿಗೆ ಎದೆಯ ಮೇಲ್ಭಾಗದಲ್ಲಿ ಸಾಲಿಗ್ರಾಮವನ್ನು ಜೋಡಿಸಲಾಗಿದೆ. ತಮ್ಮ ದೇಹದಲ್ಲಿ ಸಾಲಿಗ್ರಾಮಗಳನ್ನು ಹೊಂದಿರುವ ಈ ಮೂರೂ ಆಂಜನೇಯ ದೇವರುಗಳನ್ನು ಒಂದೇ ದಿವಸ ದರ್ಶನ ಮಾಡಿ ಪೂಜೆ ಸಲ್ಲಿಸಿದರೆ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ.

                ಶಿಕಾರಿಪುರ ಶಿಲ್ಪಕಲೆ, ಶಿಲಾ ದೇವಾಲಯಗಳ ಶ್ರೀಮಂತ ನಾಡು. ಅತಿ ಹೆಚ್ಚು ಶಾಸನಗಳು ಈ ಭಾಗದಲ್ಲಿ ದೊರೆತಿವೆ. ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಅನೇಕ ಶಿವಶರಣರು ಹುಟ್ಟಿರುವ ನಾಡು. ಅಲ್ಲದೆ ಕನ್ನಡನಾಡಿನ ಮೂಲದೊರೆ ಕದಂಬರ ರಾಜ ಮಯೂರವರ್ಮ ಇಲ್ಲಿಯವನೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಶಿಕಾರಿಪುರದ ಮೂಲಹೆಸರು ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ನಾಗರಖಂಡ ಕಾಲದ ಶಾಸನವೊಂದರಲ್ಲಿ ಶಿಕಾರಿಪುರಕ್ಕೆ ಜೇಡುಗೂಡು ಎಂತಲೂ, ದಾನವನ್ನು ಸ್ವೀಕರಿಸಲಿಲ್ಲವೆಂದು ವ್ಯಕ್ತಿಯೊಬ್ಬ ಆತ್ಮಾಹುತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮಹಾದಾನಪುರ ಎಂತಲೂ ಹಾಗೂ ಮಾಳಯ್ಯ, ಮಲ್ಲಯ್ಯ ಎಂಬುವರಿಂದ ಆರಂಭಗೊಂಡ ಈ ಊರು ಮಳಿಯನಹಳ್ಳಿ, ಮಾಳೇನಳ್ಳಿ ಎಂತಲೂ ಕರೆಯಲ್ಪಟ್ಟಿದೆ. ಅನಂತರದ ದಿನಗಳಲ್ಲಿ ದಟ್ಟವಾಗಿದ್ದ ಅರಣ್ಯವಿದ್ದ ಈ ಭಾಗ ಬೇಟೆಗಾರರ ಪ್ರಿಯವಾದ ಜಾಗವಾಗಿದ್ದರಿಂದ ‘ಶಿಕಾರಿಪುರ’ ಎಂದಾಗಿರುವ ಬಗ್ಗೆ ದಾಖಲೆಗಳು ಹೇಳುತ್ತವೆ.

                ಸರಿಸುಮಾರು 17ನೇ ಶತಮಾನದ್ದು ಎಂದು ಊಹಿಸಲಾಗುವ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯ ಈ ತಾಲ್ಲೂಕಿನ ಪ್ರಮುಖ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳಲ್ಲಿ ಒಂದು. 1941ರ ಮೈಸೂರು ಪುರಾತತ್ವ ಇಲಾಖಾ ವರದಿಯಂತೆ ಈ ದೇವಾಲಯವನ್ನು ನಿರ್ಮಿಸಿದವನು ವೀರಶೈವನಾದ ಹುಚ್ಚಪ್ಪಸ್ವಾಮಿ ಎನ್ನಲಾಗಿದೆ. ಹುಚ್ಚಪ್ಪಸ್ವಾಮಿ ಅಥವಾ ಹುಚ್ಚಪ್ಪ ಒಡೆಯರ್ ಎಂಬುವವನು ಇಲ್ಲಿ ಆಂಜನೇಯಸ್ವಾಮಿ ದೇವರ ದೇವಾಲಯವನ್ನು ನಿರ್ಮಿಸಿದ್ದಾನೆ. ಈಗಿನ ದೇವಾಲಯದ ಹಿಂಬದಿಯಲ್ಲೇ ಚಿಕ್ಕ ದೇವಾಲಯ ಇದ್ದುದಾಗಿಯೂ, ತೀರಾ ಇತ್ತೀಚೆಗೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡುವಾಗ ಹಳೆಯ ದೇವಾಲಯವನ್ನು ಒಡೆದಿರುವುದಾಗಿಯೂ ಸ್ಥಳೀಯರು ಹೇಳುತ್ತಾರೆ. ಇದು ಮೂಲ ಹುಚ್ಚರಾಯಸ್ವಾಮಿ ದೇವಾಲಯ. ದೇವಾಲಯದ ಮುಂಭಾಗದಲ್ಲಿ ಶ್ರೀಚಕ್ರ ಇದ್ದ ದೊಡ್ಡಗಾತ್ರದ ಬಂಡೆ ಇತು.್ತ ಈ ದೇವಾಲಯಕ್ಕೆ ಬಂದಿದ್ದ ಶೃಂಗೇರಿ ಸ್ವಾಮೀಜಿಯೊಬ್ಬರು ಶ್ರೀಚಕ್ರವಿರುವ ಬಂಡೆಯ ಕೆಳಗೆ ಯಾರದ್ದಾದರೂ ಸಮಾಧಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು ಎನ್ನಲಾಗುತ್ತದೆ. ಊರಿನವರು ಹೇಳುವಂತೆ ಈ ದೇವಾಲಯದ ಭಾಗದಲ್ಲಿ ಹುಚ್ಚಪ್ಪಸ್ವಾಮಿಯ ಸಮಾಧಿ ಇದೆ ಎನ್ನುವುದರಿಂದ ಆ ಸಮಾಧಿ ಇದೇ ಇರಬಹುದೆಂದು ಊಹಿಸಲಾಗಿದೆ. ಆದರೆ ಈಗ ಆ ಯಾವ ಕುರುಹುಗಳೂ ಅಲ್ಲಿಲ್ಲ.

                ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಮಠದಿಂದ ಬಂದು ಶಿಕಾರಪುರ ತಾಲ್ಲೂಕಿನ ನೆಲವಾಗಿಲಿನಲ್ಲಿ ನೆಲೆಸಿದ್ದ ಶೈವ ಸಮುದಾಯಕ್ಕೆ ಸೇರಿದ್ದ ಹುಚ್ಚಪ್ಪಸ್ವಾಮಿ ಎಂಬ ವ್ಯಕ್ತಿ ಶಿಕಾರಿಪುರದ (ಹಿಂದಿನ ಈ ಊರಿನ ಹೆಸರು ಬೇರೆಯಾಗಿದ್ದಿರಬಹುದು) ಬ್ರಾಹ್ಮಣ ಕುಟುಂಬಗಳೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡು ಕೊನೆಗೆ ಬ್ರಾಹ್ಮಣ ದೀಕ್ಷೆಯನ್ನು ಪಡೆಯುತ್ತಾರೆ ಮತ್ತು ಅಲ್ಲಿಯೇ ಮಠವೊಂದನ್ನು ನಿರ್ಮಿಸಿಕೊಂಡಿರುತ್ತಾರೆ. ಒಮ್ಮೆ ಹನುಮಂತದೇವರು ಹುಚ್ಚಪ್ಪಸ್ವಾಮಿಯವರ ಸ್ವಪ್ನದಲ್ಲಿ ಬಂದು ಊರಿನ ಸಮೀಪದ ದೊಡ್ಡ ಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಠಾಪಿಸುವಂತೆ ಅಪ್ಪಣೆಯಾಗುತ್ತದೆ. ಮರುದಿನ ಊರಿನ ಪ್ರಮುಖರಿಗೆ ವಿಷಯ ತಿಳಿಸಿದಾಗ ಕೆಲವರು ಅಪಹಾಸ್ಯ ಮಾಡುತ್ತಾರೆ. ಇನ್ನು ಕೆಲವರು ಉಪೇಕ್ಷೆ ಮಾಡುತ್ತಾರೆ. ಹುಚ್ಚಪ್ಪಸ್ವಾಮಿಗಳು ತೋರಿಸಿದ ಕಡೆ ಪರಿಶೀಲಿಸಲಾಗಿ ಚೌಕಾಕಾರವಾಗಿದ್ದ ಕಲ್ಲಿನ ಬಾನಿ ಮಗುಚಿಕೊಂಡಿತ್ತು. ಅತ್ಯಂತ ಕುತೂಹಲದಿಂದ ಅದನ್ನು ಅಂಗಾತ ಮಾಡಿದಾಗ ಅದರಲ್ಲಿ ಸುಂದರವಾದ ಹನುಮಂತದೇವರ ವಿಗ್ರಹ ಇರುವುದು ಗೋಚರಿಸುತ್ತದೆ. ಸುಮಾರು ನಾಲ್ಕು ಅಡಿ ಆಳದ, ಆರು ಅಡಿ ಉದ್ದದ ಈ ಬಾನಿಯಲ್ಲಿದ್ದ ‘ಪ್ರಸನ್ನ ಆಂಜನೇಯಸ್ವಾಮಿ’ ವಿಗ್ರಹವನ್ನು ತೆಗೆಯಲಾಗುತ್ತದೆ. ಈ ಕಲ್ಲಿನ ಬಾನಿ ಈಗಲೂ ದೇವಾಲಯದ ಆವರಣದಲ್ಲಿದೆ. ವಿಗ್ರಹವನ್ನು ಎಲ್ಲಿ ಪ್ರತಿಷ್ಠಾಪಿಸಬೇಕು ಎಂದು ಆಲೋಚಿಸಿದಾಗ ಹುಚ್ಚಪ್ಪಸ್ವಾಮಿಗಳ ಮಠವೇ ಸೂಕ್ತವೆಂದಾಗುತ್ತದೆ. ಈ ದೇವರಿಗೆ ತನ್ನ ಹೆಸರಿಡುವುದಾದರೆ ತಾನು ಸ್ಥಳ ನೀಡುತ್ತೇನೆ ಎಂದು ಹುಚ್ಚಪ್ಪಸ್ವಾಮಿ ಹೇಳುತ್ತಾರೆ. ಅವರ ಷರತ್ತನ್ನು ಒಪ್ಪಿಕೊಂಡು ಮಠದಲ್ಲಿಯೇ ದೇವರ ಪ್ರತಿಷ್ಠಾಪನೆಯಾಗುತ್ತದೆ. ಅಂದಿನಿಂದ ಈ ಆಂಜನೇಯಸ್ವಾಮಿಗೆ ‘ಹುಚ್ಚರಾಯಸ್ವಾಮಿ’ ಎಂದು ಕರೆಯಲಾಗುತ್ತಿದೆ.

                ಕಾಲಾನಂತರದ ದಿನಗಳಲ್ಲಿ ಇಸ್ಲಾಂ ರಾಜರ ಆಳ್ವಿಕೆಯಲ್ಲಿ ಈ ದೇವಾಲಯ ದಾಳಿಗೆ ಒಳಗಾಗುತ್ತದೆ. ಆದರೆ ಮಠದ ಭಾಗ ಹಾಗೆಯೇ ಉಳಿಯುತ್ತದೆ. ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ಆಸ್ಥಾನಗುರುಗಳಾಗಿದ್ದ ಶ್ರೀ ವ್ಯಾಸರಾಯಸ್ವಾಮಿಗಳು ಮುಕ್ತಿಮಾರ್ಗದ ಬೋಧನೆ ಮತ್ತು ಧರ್ಮಜಾಗೃತಿ ಮಾಡುತ್ತಾ ಕನ್ನಡನಾಡಿನಲ್ಲಿ ಸಂಚಾರ ಮಾಡುತ್ತಿದ್ದಾಗ ಮಲೆನಾಡಿನ ಪ್ರಕೃತಿಯ ಮಡಿಲಾದ ಶಿಕಾರಿಪುರಕ್ಕೆ ಆಗಮಿಸುವರು. ಇಲ್ಲಿಯ ಹನುಮಂತದೇವರ ವಿಗ್ರಹ ಭಿನ್ನವಾಗಿರುವುದನ್ನು ಗಮನಿಸುತ್ತಾರೆ. ಹಂಪೆಯಲ್ಲಿ ಯಂತ್ರೋದ್ಧಾರಕ ಹನುಮಂತದೇವರನ್ನು ಪ್ರತಿಷ್ಠಾಪಿಸಿ ಒಲಿಸಿಕೊಂಡಿದ್ದ ಸ್ವಾಮಿಗಳು ಶಿಕಾರಿಪುರದಲ್ಲಿ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸುವ ಕೈಂಕರ್ಯಕ್ಕೆ ಮುಂದಾಗುತ್ತಾರೆ. ಬಳ್ಳಿಗಾವಿಯಲ್ಲಿ ಮೂಲವಿಗ್ರಹದ ಯಥಾವತ್ ಆಂಜನೇಯಸ್ವಾಮಿ ವಿಗ್ರಹವನ್ನು ಕೆತ್ತಿಸಲಾಗುತ್ತದೆ. ವಿಗ್ರಹವನ್ನು ಬಳ್ಳಿಗಾವಿಯಿಂದ ಶಿಕಾರಿಪುರಕ್ಕೆ ಸಾಗಿಸುವಾಗ ಸ್ವಾಮಿಯ ನಾಸಿಕ ಭಾಗ ಭಗ್ನವಾಗುತ್ತದೆ. ಭಗ್ನವಾದ ವಿಗ್ರಹ ಪೂಜೆಗೆ ಶ್ರೇಷ್ಠವಲ್ಲವೆಂದು ತಿಳಿದು ಜನತೆ ಮತ್ತೆ ಜಿಜ್ಞಾಸೆಗೆ ಒಳಗಾಗುತ್ತಾರೆ. ಆಗ ವ್ಯಾಸರಾಯರ ಸಲಹೆಯಂತೆ ಉತ್ತರಭಾರತದ ಹಿಮಾಲಯದಿಂದ ಸಾಲಿಗ್ರಾಮವನ್ನು ತಂದು ನಾಸಿಕ ಭಾಗದಲ್ಲಿ ಜೋಡಿಸಿ ಪ್ರತಿಷ್ಠಾಪಿಸಲಾಗುತ್ತದೆ. ಈ ವ್ಯತ್ಯಾಸವನ್ನು ವಿಗ್ರಹದಲ್ಲಿ ಈಗಲೂ ಕಾಣಬಹುದಾಗಿದೆ.

                ಹನುಮಂತದೇವರನ್ನು ಹುಚ್ಚರಾಯಸ್ವಾಮಿ ಎಂದು ಕರೆಯುವ ಬಗ್ಗೆ ಪ್ರಶ್ನೆ ಉದ್ಭವಿಸಿದಾಗ ವ್ಯಾಸರಾಯಸ್ವಾಮಿಗಳ ಸ್ವಪ್ನದಲ್ಲಿ ಹನುಮಂತದೇವರು ಬಂದು ‘ಹುಚ್ಚರಾಯಸ್ವಾಮಿ ಎಂಬುದು ನನ್ನ ಹೆಸರೇ ಆಗಿದೆ’ ಎಂದು ಹೇಳಲು, ಆಗ ಊರಿನ ಪ್ರಮುಖರೆಲ್ಲರೂ ಸೇರಿ ದೇವರಿಗೆ ಅದೇ ಹೆಸರನ್ನು ಶಾಸ್ತ್ರೋಕ್ತವಾಗಿ ನಾಮಕರಣ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

                ನಂತರದ ಕಾಲಮಾನದಲ್ಲಿ ಸ್ಥಳ ಮಹಿಮೆಯೂ ಪ್ರಸಿದ್ಧಿಗೆ ಬಂದು ಆಗಿನ ಪಾಳೇಗಾರರು ಶುದ್ಧ ದ್ರಾವಿಡ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಾರೆ. ಪಾಳೇಗಾರರೇ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ದೇವಾಲಯದ ಸುತ್ತಲೂ ಇರುವ ದ್ರಾವಿಡ ಶೈಲಿಯ ಕಲೆಯೇ ಸಾಕ್ಷಿಯಾಗಿದೆ.

                ಷಹಾಜಿ ಸೈನ್ಯದಲ್ಲಿದ್ದು, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ‘ಧೋಂಡಿಯಾವಾಘ’ ಎಂಬ ಮರಾಠರ ಸರದಾರ ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಂಡು ಬಿದರೂರು ಅರಸರ ನೆರವು ಪಡೆಯಲು ಬರುತ್ತಾನೆ. ಚಿತ್ರದುರ್ಗ ಹಾಗೂ ಮಂಗಳೂರು ರೆಸಿಡೆಂಟರು ಬೇಟೆನಾಯಿಯ ಹಾಗೆ ಬೆನ್ನು ಹತ್ತಿದಾಗ ಶಿಕಾರಿಪುರಕ್ಕೆ ಬಂದ ಧೋಂಡಿಯವಾಘ ಶ್ರೀ ಹುಚ್ಚರಾಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತಾನೆ. “ತಾನು ಬ್ರಿಟಿಷ್ ಕೈದಿಯಾಗದೆ ಬಿದರೂರು ಅರಸರ ಬಳಿ ಹೋಗುವಂತಾದರೆ ತನ್ನ ಖಡ್ಗವನ್ನು ಸಮರ್ಪಿಸುತ್ತೇನೆ” ಎಂದು ಬೇಡಿಕೊಳ್ಳುತ್ತಾನೆ. ಆಗ ಅಪರೂಪದ ವರ್ಷಧಾರೆ (ಮಳೆ) ಸುರಿದು ಶಿಕಾರಿಪುರದ ಜೀವನದಿಯಾದ ಕುಮುದ್ವತಿ ತುಂಬಿ ಹರಿಯುತ್ತಾಳೆ. ಬ್ರಿಟಿಷ್ ಸೈನಿಕರು ನದಿ ದಾಟಿ ಬರಲಾರದೆ ಹಿಂದಿರುಗಿ ಹೋಗುತ್ತಾರೆ. ನಂತರ ಧೋಂಡಿಯವಾಘ ತಾನು ಹೇಳಿದಂತೆ ತನ್ನ ಯುದ್ಧಕತ್ತಿಯನ್ನು ದೇವರಿಗೆ ಸಮರ್ಪಿಸುತ್ತಾನೆ. ಧೋಂಡಿಯವಾಘನ ಖಡ್ಗ ಈಗಲೂ ದೇವಾಲಯದಲ್ಲಿದೆ.

                ದೇವಾಲಯದ ಮುಜರಾಯಿ ಇಲಾಖೆಗೆ ಸೇರಿದ್ದು ನಿತ್ಯಪೂಜೆ, ವಿಶೇಷ ಅಲಂಕಾರಗಳು, ಅಭಿಷೇಕ ಮಾಡಲಾಗುತ್ತದೆ. ಬೆಣ್ಣೆ ಅಲಂಕಾರ, ವೀಳ್ಯದೆಲೆ ಅಲಂಕಾರಗಳು ಇಲ್ಲಿನ ವಿಶೇಷಗಳಾಗಿವೆ. ಪ್ರತಿವರ್ಷ ಚೈತ್ರ ಶುದ್ಧ ದಶಮಿಯಂದು ಸ್ವಾಮಿಯ ಜಾತ್ರೆ ನಡೆಯುತ್ತದೆ. ಅಂದು ಸಂಜೆ ಗರುಡ, ಅಶ್ವ, ಗಜ ಉತ್ಸವಗಳು, ತಿರುಗಣಿ ಅಥವಾ ಚಕ್ರ ರಥೋತ್ಸವಗಳು, ಪುಷ್ಪ ರಥೋತ್ಸವ ಹಾಗೂ ದವನದ ಹುಣ್ಣಿಮೆ ಬೆಳಗಿನ ಸಮಯದಲ್ಲಿ ನಡೆಯುತ್ತವೆ. ಬ್ರಹ್ಮ ರಥೋತ್ಸವ ವೈಭವೋಪೇತವಾಗಿ ಜರುಗುತ್ತದೆ. ಭಕ್ತರು ಶ್ರದ್ಧಾಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ.

                ಸುಮಾರು ನಾಲ್ಕೈದು ಶತಮಾನದ ಪ್ರಾಚೀನತೆಯನ್ನು ಹೊಂದಿರುವ ಈ ದೇವಾಲಯ ಕಾಲ ಕಾಲಕ್ಕೆ ಭಕ್ತಾದಿಗಳ ಅಪೇಕ್ಷೆಯಂತೆ ಜೀರ್ಣೋದ್ಧಾರವಾಗುತ್ತಾ ಬಂದಿದೆ. ಬಹುಕಾಲ ಮೂಲ ದೇವಾಲಯವಷ್ಟೇ ಇದ್ದ ಈ ಶ್ರೀಕ್ಷೇತ್ರ 2010ರ ಬಳಿಕ ಜೀರ್ಣೋದ್ಧಾರವಾಗಿದೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ದೇವಾಲಯವಿದ್ದು ಮೂಲ ದೇವಾಲಯದಲ್ಲಿ ಗರ್ಭಗುಡಿ ಇದೆ. ಇದೀಗ ನವೀಕರಣಗೊಂಡ ಭಾಗದಲ್ಲಿ ದೇವಾಲಯದ ಮುಖ್ಯ ಪ್ರವೇಶದ್ವಾರ, ಪ್ರಾಂಗಣ, ಹಜಾರ, ವಿಮಾನಗೋಪುರ ನಿರ್ಮಿಸಲಾಗಿದೆ.

                ದೇವಾಲಯದ ಮುಂಭಾಗದಲ್ಲಿರುವ ಹುಚ್ಚ್ರಾಯನ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಬೃಹತ್ ಈಶ್ವರನ ಪ್ರತಿಮೆಯೊಂದಿಗೆ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಅಲ್ಲದೆ ಆಕರ್ಷಕ ಪುಷ್ಕರಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ದೇವಾಲಯದ ಹಿಂಭಾಗದ ಜಾಗದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಈ ಐತಿಹಾಸಿಕ ಶ್ರೀಕ್ಷೇತ್ರ ಭಕ್ತಿಯ ಪುಣ್ಯಕ್ಷೇತ್ರವಷ್ಟೇ ಅಲ್ಲದೆ ಸುಂದರ ಪ್ರೇಕ್ಷಣೀಯ ಸ್ಥಳವಾಗಿಯೂ ಕಂಗೊಳಿಸುತ್ತಿದೆ.