ದೀವರ ಆಚರಣೆಗಳಲ್ಲಿ ಯೋಧ’ ಪರಂಪರೆ

ಶಿವಾನಂದ ಕುಗ್ವೆ

ದೀವರ ಆಚರಣೆಗಳು ಮತ್ತು ಆರಾಧನೆಗಳು ಮತ್ತು ಸ್ಥಳನಾಮಗಳಲ್ಲಿ ಅನೇಕ ಇತಿಹಾಸದ ಸಂಗತಿಗಳು ಲಭ್ಯವಿರುವುದನ್ನು ಮುಂದೆ ವಿವರಿಸಲಾಗಿದೆ.

ದಂಡಿಗೆ’ ತಡೆದ ಹಾದಿ : ಮಲೆನಾಡಿನ ಹಳ್ಳಿಗಳಲ್ಲಿ ಯಾವುದೇ ಹಳ್ಳಿಗಳಿಗೆ ಹೋದರು ಆ ಊರಿನ ಜನರಲ್ಲಿ ಒಂದೊಂದು ಹಾದಿಗೂ ರೂಢಿಗತವಾದ ಹೆಸರು ಬಂದಿರುತ್ತವೆ. ಹೀಗೊಂದು ಹೊಸನಗರ ತಾಲ್ಲೂಕಿನ ಹಲುಸಾಲೇ ಮಳವಳ್ಳಿಯಿಂದ ಮುಂದೆ ಹೋದರೆ ಅಲ್ಲೊಂದು ಹಳ್ಳಿ ಇದೆ ಅಲ್ಲಿ ಒಂದು ದಾರಿಯ ಹೆಸರೇ ದಂಡಿಗೆ ತಡೆದ ಹಾದಿ” ಎಂದು ಕರೆಯುತ್ತಾರೆ. ಆ ಹಾದಿಗೆ ಆ ಹೆಸರು ಬಂದಿದ್ದರ ಬಗ್ಗೆ ಹಿನ್ನೆಲೆ ವಿಚಾರಿಸುತ್ತಾ ಹೋದಾಗ ಅದರ ಹಿಂದೊಂದು ಇತಿಹಾಸವೇ ಇದೆ ಎಂಬುದು ನಮಗೆ ತಿಳಿಯಿತು.

ಹಿಂದೆ ರೈತರಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಇರುತ್ತಿದ್ದವು. ಅಂತದೊಂದು ದೊಡ್ಡ ಕುಟುಂಬ ಆ ಊರಲ್ಲಿ ಇತ್ತು. ಕುಟುಂಬದ ಹೆಸರು ಕಾಫಿ ಕುಟುಂಬ. ಅದೀಗ ಹಿರೇಭಾಸ್ಕರ ಮುಳುಗಡೆಯ ನಂತರ ಆ ಕುಟುಂಬದ ನೂರಾರು ಎಕರೆ ಭೂಮಿ ಮುಳುಗಡೆಯಾಗಿ ಆ ಮನೆಯ ಸದಸ್ಯರು ನಂತರ ಎಲ್ಲೆಲ್ಲೋ ಪುನರ್ವಸತಿ ಕಂಡುಕೊಂಡು ಇಡೀ ಕುಟುಂಬ ಛಿದ್ರವಾಗಿದೆ ಈಗ. ಕೆಲವು ತಲೆಮಾರುಗಳ ಹಿಂದೆ ಆ ಕುಟುಂಬದ ಹಿರಿಯರು ಹೇಳಿದ ಕಥೆ ಈ ವಿವರಣೆಯಲ್ಲಿ ಇದೆ. ಒಂದು ಮದುವೆಯ ಸಂದರ್ಭದಲ್ಲಿ ನಡೆದ ಘಟನೆ ಅದು. ಆ ವಧು-ವರರನ್ನು ಪಲ್ಲಕ್ಕಿ (ದಂಡಿಗೆ)ಯಲ್ಲಿ ಹೊತ್ತುಕೊಂಡು ಬರುವುದು ಆ ಕುಟುಂಬದ ಅನೂಚಾನವಾಗಿದ್ದ ಪದ್ಧತಿಯಾಗಿತ್ತು. ಹಿಂದೆ ಇಂತಹ ದೊಡ್ಡ ಕುಟುಂಬಗಳ ಅನುಕೂಲಸ್ಥರು ಹೀಗೆ ಮಧುಮಕ್ಕಳನ್ನು ದಂಡಿಗೆಯಲ್ಲಿ ಹೊತ್ತು ಮನೆ ತುಂಬಿಸಿಕೊಳ್ಳುತ್ತಿದ್ದರೆಂದು ಅದೊಂದು ಪ್ರತಿಷ್ಠೆಯ ವಿಷಯವೂ ಆಗಿತ್ತು. ಆಗಿನ್ನು ಮೋಟಾರುವಾಹನಗಳು ಬಂದಿರದಿದ್ದ ಕಾಲವಾಗಿತ್ತು. ಆದರೆ ಈ ಕೆಳಜಾತಿಯ ಈ ರೈತರು ಆ ಊರಿನ ಗೌಡರೆದುರಿಗೆ ದಂಡಿಗೆ ಮೇಲೆ ಮೆರವಣಿಗೆ ಮಾಡುವುದನ್ನು ಸಹಿಸದಾದರು. ಅಂದು ದಂಡಿಗೆಯಲ್ಲಿ ಕರೆದೊಯ್ಯುತ್ತಿದ್ದ ವಧು-ವರರನ್ನು ಊರಿನ ಗೌಡರ ಕಡೆಯವರು ತಡೆದರು. ನಿಮ್ಮಂತ ಕೀಳು ಜಾತಿಯವರಿಗೆ ದಂಡಿಗೆಯಲ್ಲಿ ಹೋಗುವ ಹಕ್ಕಿಲ್ಲ ಎಂಬುದು ಅವರ ತಕರಾರು ಆಗಿತ್ತು. ಆದರೆ ತಮ್ಮ ಕುಟುಂಬದಲ್ಲಿ ಅನೂಚಾನವಾಗಿ ಹೀಗೆ ನಡೆಸಿಕೊಂಡು ಬಂದಿರುತ್ತಾರೆ ಎಂದು ದೀವರ ಕುಟುಂಬದ ವಾದವಾಗಿತ್ತು. ಆದರೆ ಗೌಡರು ಕೇಳಲಿಲ್ಲದೀವರು ತಮ್ಮ ಹಠ ಬಿಡಲಿಲ್ಲ. ಇದರಿಂದಾಗಿ ಅಲ್ಲಿ ಸ್ಥಳದಲ್ಲೇ ಊರಿನ ಗೌಡರಿಗೆ ಹಾಗೂ ದೀವರಿಗೆ ಹೊಡೆದಾಟವೂ ಆಯಿತು. ಆ ಪ್ರಕರಣ ಪೊಲೀಸ್ ಠಾಣೆಗೂ ಹೋಯಿತು. ಕೇಸು ದಾಖಲಾಗಿ ನ್ಯಾಯಾಲಯಕ್ಕೂ ಹೋಯಿತು. ಸಾಗರದಲ್ಲಿ ಆ ಕಾಲದಲ್ಲಿ ಕೋರ್ಟ್ ಇರಲಿಲ್ಲ. ಅದು ಶಿವಮೊಗ್ಗದ ನ್ಯಾಯಾಲಯಕ್ಕೆ ಕೇಸನ್ನು ಕಳುಹಿಸಲಾಯಿತು. ಈ ದೀವರ ಕುಟುಂಬದ ಯಜಮಾನ ಎತ್ತಿನ ಗಾಡಿಯಲ್ಲಿ ಶಿವಮೊಗ್ಗಕ್ಕೆ ಹೋಗಿ ತನ್ನ ಪರವಾಗಿ ವಕೀಲರನ್ನು ಇಟ್ಟು ಇಲ್ಲಿ ವ್ಯಾಜ್ಯವನ್ನು ನಡೆಸುತ್ತಾನೆ. ಅದು ಅನೇಕ ವರ್ಷಗಳು ನಡೆಯುತ್ತದೆ. ನ್ಯಾಯಾಧೀಶರು ವಾದ ವಿವಾದವನ್ನು ಆಲಿಸುತ್ತಾರೆ. ನ್ಯಾಯಾಧೀಶರು ಇಂಗ್ಲೀಷ್‍ನವರಾಗಿರುತ್ತಾರೆ. ಮೊದಲು ಅವರಿಗೆ ಈ ಪ್ರಕರಣದ ಹೂರಣ ಗೊತ್ತಾಗಲೇ ಇಲ್ಲ. ಅವರಿಗೆ ಹಿಂದೂ ಸಮಾಜದ ಜಾತಿ ವ್ಯವಸ್ಥೆಮೇಲುಕೀಳು ಭಾವನೆಗಳು ಇರುವುದು ಅವರಿಗೆ ತಿಳಿದಿಲ್ಲ. ಅದೆಲ್ಲವನ್ನೂ ದೀವರ ಕುಟುಂಬದ ಪರವಾಗಿ ವಾದ ಮಂಡಿಸಿದ ವಕೀಲರು ಪ್ರಸ್ತುತಪಡಿಸುತ್ತಾರೆ. ನಂತರ ಈ ಕುಟುಂಬದವರಲ್ಲಿ ಇದ್ದ ಪುರಾತನ ಕಾಲದ ತಾಮ್ರ ಶಾಸನ ಒಂದು ಈ ವ್ಯಾಜ್ಯದಲ್ಲಿ ಸಹಾಯಕ್ಕೆ ಬರುತ್ತದೆ. ಆ ಯಜಮಾನ ಹಳೇ ತಾಮ್ರ ಪಟವನ್ನು ವಕೀಲರಿಗೆ ತಂದು ಕೊಡುತ್ತಾನೆ. ಆ ತಾಮ್ರ ಶಾಸನ ಓದುವಂತವರಿಂದ ಓದಿಸಿ ಆ ನ್ಯಾಯಾಲಯಕ್ಕೆ ವಕೀಲರು ವಿವರಿಸಿದ ವಿಚಾರ ಹೀಗಿದೆ :

ಈ ತಾಮ್ರ ಪಟವನ್ನು ಬಹಳ ಹಿಂದಿನ ಕಾಲದ ನೃಪೋತ್ತಮನೊಬ್ಬನು ಆ ಕುಟುಂಬದ ಯಜಮಾನನಿಗೆ ಸನ್ಮಾನ ನೀಡಿ ಕೊಟ್ಟಂತಹ ತಾಮ್ರ ಪಟ ಅದಾಗಿರುತ್ತದೆ. ತಾಮ್ರ ಪತ್ರದ ಕಾಲ ಕ್ರಿ.ಶ. 1298 (ಶಾಲಿಯಾನ ಶಕ 1120) ಅದರ ವಿವರವನ್ನು ವಕೀಲರು ನ್ಯಾಯಾಧೀಶರೆದುರಿಗೆ ಮಂಡಿಸುತ್ತಾರೆ. ಅದು ಹೀಗಿದೆ :

ಅಲ್ಲಿಂದ ಛಂದಕ ನಗರಾಧಿಪಕೇತು ನೃಪೋತ್ತಮನೊಂದು ದಿವಸ ರಾಜಸಭಾ ಮಧ್ಯದಲ್ಲಿ ಕುಳಿತಿರುವ ಸಮಯದಲ್ಲಿ ಮುತ್ತಿನ ಕಾಪಿ ಹನುಮನಾಯ್ಕನೆಂಬ ದೀವರ ಚಾರನು ದೊರೆಯ ಸಮ್ಮುಖಕ್ಕೆ ಬಂದು ಆನೆಮರಿಸಿಂಹದಮರಿಕಸ್ತೂರಿ ಮೃಗ ಮುಂತಾದವನ್ನು ಕಾಣಿಕೆಯಾಗಿ ಕೊಡುವನು. ರಾಜನು ಬಹಳ ಮಮತ ರೂಪದಿಂದ ಆ ದೀವರನಿಗೆ ತನ್ನ ಸೇನಾಧಿಪತ್ಯವನ್ನು ಕೊಟ್ಟವನಾಗಿ ಪಾಲ್ಕೆ (ಪಲ್ಲಕ್ಕಿ ಅಥವಾ ದಂಡಿಗೆ) ಆನೆಯಮೇಲೆ ಅಂಬಾರಿಕುದುರೆಸೇನಾಪತಿತ್ವವನ್ನು ಕೊಡುವನು. ರಾಜನ ಕಾಲಾನಂತರ ಆತನ ಮಗ ಶೃತಕೇತು ಎಂಬ ನೃಪೋತ್ತಮನು ರಾಜ್ಯದ ದೊರೆತನವನ್ನು ವಹಿಸಿಕೊಳ್ಳುವನು. ಈತನ ಕಾಲದಲ್ಲಿಯೂ ದೀವರವನು ಸೇನಾಪತಿಯಾಗಿ ಮುಂದುವರೆಯುವನು” ಹೀಗೆ ಆ ಕುಟುಂಬದ ಸ್ಥಾನಮಾನ ಮುಂದುವರೆದಿರುವುದು. ಅದೇ ತಾಮ್ರ ಪಟವು ದೀವರನ್ನು ವಸುವರಾದಿತ್ಯರುಕಾಡಾನೆ ಮಲ್ಲರುಕದನಪ್ರಚಂಡರುಅಡವಿ ಭಂಡಾರರು ಎಂದು ಹೊಗಳಿರುವುದು ತಿಳಿದು ಬರುತ್ತದೆ.

ಆ ತಾಮ್ರ ಪಟದಲ್ಲಿ ಪಲ್ಲಕ್ಕಿಯನ್ನು (ಎಂದರೆ ಅದನ್ನೇ ಗ್ರಾಮ್ಯ ಭಾಷೆಯಲ್ಲಿ ದಂಡಿಗೆ ಎನ್ನುವರು) ರಾಜನೇ ಆ ಕುಟುಂಬಕ್ಕೆ ದಾನವಾಗಿ ಕೊಟ್ಟಿರುತ್ತಾನೆ. ಕಾಲಾನಂತರ ಅದು ಈ ಕುಟುಂಬದ ವಧೂವರರನ್ನು ಕೊಂಡೊಯ್ಯಲು ಮದುವೆ ಸಂದರ್ಭದಲ್ಲಿ ಮಾತ್ರ ಉಪಯೋಗಿಸಿ ಹಾಗೆ ಇಡುತ್ತಿದ್ದರು. ಮನೆಯಲ್ಲಿ ತಲೆಮಾರುಗಳಿಂದ ನಡೆದುಬಂದ ಪದ್ಧತಿಯಾಗಿತ್ತು. ಈ ಅಂಶವನ್ನು ಆ ನ್ಯಾಯಾಧೀಶರಿಗೆ ಈ ಕುಟುಂಬದ ಪರವಾದ ವಕೀಲರು ಹಿಂದೂ ಸಮಾಜದ ಜಾತಿ-ಭೇದ ಹಾಗೂ ಗೌಡಾಳಿಕೆಯ ಕಾಲದ ಮನಸ್ಥಿತಿಯನ್ನು ವಿವರಿಸಿ ಹೇಳಿದ ಮೇಲೆ ಆ ಇಂಗ್ಲೀಷ್ ನ್ಯಾಯಾಧೀಶರಿಗೆ ಅರ್ಥವಾಗುತ್ತದೆ. ಕೊನೆಗೂ ವ್ಯಾಜ್ಯದಲ್ಲಿ ಈ ಕುಟುಂಬದ ಪರವಾಗಿ ತೀರ್ಪು ನೀಡುತ್ತಾರೆ. ಪಲ್ಲಕ್ಕಿ ಅಥವಾ ದಂಡಿಗೆಯಲ್ಲಿ ಹೋಗುವುದು ಅವರ ವಂಶ ಪಾರಂಪರ್ಯ ಹಕ್ಕಾಗಿದೆ ಎಂದು ಆ ತೀರ್ಪು. ಆ ತಾಮ್ರ ಶಾಸನ ವಿವರಿಸುವಂತೆ ದೀವರ ಮುತ್ತಿನಕಾಪಿ ಹನುಮನಾಯ್ಕನ ಕುಟುಂಬಕ್ಕೆ ಆ ಸ್ಥಾನಮಾನ ನೀಡಿದ ಕಾಲ ಏಳು ಶತಮಾನಗಳ ಹಿಂದೆ. ಕಾಲ (ಕ್ರಿ.ಶ. 1298) ಅದು ವಿಜಯನಗರ ಕಾಲಕ್ಕೂ ಪೂರ್ವದ್ದುಆ ಕಾಲದಲ್ಲಿಯೇ ದೀವರು ವಸುವರಾದಿತ್ಯರುಕದನ ಪ್ರಚಂಡರುಅಡವಿ ಭಂಡಾರರುಕಾಡಾನೆಮಲ್ಲರು ಎಂದು ಹೊಗಳಿಸಿಕೊಳ್ಳಬೇಕಾದರೆಈ ಸಮುದಾಯದವರು ಇಲ್ಲಿಯ ಮೂಲ ನಿವಾಸಿಗಳುಆಗಲೇ ಆನೆಗಳನ್ನು ಪಳಗಿಸುವ ಛಾತಿ ಇದ್ದವರು. ಯುದ್ಧದಲ್ಲಿ ಕಾದಾಡುವವರು ಆಗಿದ್ದರಿಂದಲೇ ಆ ದೀವರನಿಗೆ ಸೇನಾದಿಪತ್ಯ ಕೊಡಲಾಗುತ್ತದೆ ಎಂಬುದು ಐತಿಹಾಸಿಕವಾದ ಹಿನ್ನಲೆಯನ್ನು ತಿಳಿಸುವುದು. ನಂತರ ಇಂತಹ ಕುಟುಂಬದ ಮದುವೆಯಂತಹ ವಿಷೇಶ ಸಂದರ್ಭದಲ್ಲಿ ದಂಡಿಗೆ ಅಥವಾ ಪಲ್ಲಕ್ಕಿ ಮೇಲೆ ಹೊತ್ತು ಹೋಗುತ್ತಿದ್ದ ವಧೂವರರ ಉತ್ಸವನ್ನು ತಡೆದು ನಿಲ್ಲಿಸುವ ಕಾಲ ವೀರಶೈವ ಗೌಡರು ಪ್ರಾಬಲ್ಯವಾಗಿದ್ದ ಕಾಲವಾಗಿತ್ತು. ಗೌಡರು ಎಂದರೆ ಆಗ ಭೂಮಾಲೀಕರುಅವರೆದುರು ಇತರೆ ಜಾತಿಯವರು ಹೆಚ್ಚಿನ ಸ್ಥಾನಮಾನದಲ್ಲಿ ಮೆರೆಯುವಂತಿರಲಿಲ್ಲ. ಅಷ್ಟೆ ಅಲ್ಲ ಅವರೆದುರಿಗೆ ಕಾಲಲ್ಲಿ ಚಪ್ಪಲಿ ಧರಿಸಿಉದ್ದ ಪಂಜೆ ಬಿಟ್ಟು ಹೋಗುವುದು ಕಠಿಣ ಇತ್ತು. ಅದೀಗ ಸುಮಾರು ಒಂದೆರಡು ತಲೆಮಾರಿನ ಹಿಂದಿನ ಘಟನೆ ಎನ್ನಬಹುದು. (60-70 ವರ್ಷಗಳ ಹಿಂದೆ). ಅದೀಗ ದಂಡಿಗೆ ತಡೆದ ಹಾದಿ’ ಅಂತ ರೂಢಿಯಲ್ಲಿ ಕರೆಯುತ್ತಾರೆ.

ಪಡೆ ಆಳು” : ಜಂಬಾನಿ ಹಾಗೂ ಇನ್ನಿತರ ಕಡೆ ಸಿಕ್ಕ ಕೆಲವು ಶಾಸನಗಳನ್ನು ಮಧು ಗಣಪತಿರಾವ್‍ರವರು ಕರ್ನಾಟಕದ ದೀವರು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಆ ಶಾಸನಗಳು ಯುದ್ಧದಲ್ಲಿ ಕಾದಾಡಿದ ದೀವರ ಶೂರರ ಕುಟುಂಬಕ್ಕೆ ಉಂಬಳಿಯಾಗಿ ಗದ್ದೆಭೂಮಿ ಕೊಟ್ಟಿರುವ ಸಂಗತಿಯನ್ನು ಹೇಳಿದೆ. ಬಹಳ ಹಿಂದಿನಿಂದಲೂ ದೀವರುಈ ಪ್ರದೇಶದಲ್ಲಿ ರಾಜರು-ಪಾಳೆಗಾರರ ಕಾಲದಲ್ಲಿ ಪಡೆ ಆಳುಗಳಾಗಿ ಯುದ್ಧದಲ್ಲಿ ಕಾದಾಡುವ ಪ್ರವೃತ್ತಿಯವರಾಗಿದ್ದರು ಎಂಬುದನ್ನು ತಿಳಿಸುತ್ತವೆ.

ಮಲೆನಾಡಿನ ಈ ಪ್ರದೇಶದ ದೀವರ ಹಳ್ಳಿಗಳಲ್ಲಿ ಅಲ್ಲಲ್ಲಿ ಭೂತದಬನಜಟ್ಟಿಗನಬನಚೌಡಿಬನಯಕ್ಷಿಬನಗಳನ್ನು ಕಾಣಬಹುದು. ಕೋಟೆ ದುರ್ಗಮ್ಮಗಳು ಇವೆ. ಅವುಗಳನ್ನು ಈಗಲೂ ಪೂಜಿಸುತ್ತಾ ಬಂದಿರುವ ಮೂಲ ನಿವಾಸಿ ಜನ ಇವರು. ಕೆಲವು ಮನೆತನಗಳಿಗೆ ಮೀಸಲಾದ ಮನೆ ದೇವರುಗಳು ಇರುತ್ತವೆ. ಮಾಸ್ತಿಕಟ್ಟೆಗಳುಚೌಡಮ್ಮಗಳನ್ನು ನಿರ್ದಿಷ್ಟ ಕುಟುಂಬಗಳು ತಲೆಮಾರುಗಳಿಂದ ಪೂಜಿಸಿಕೊಂಡು ಬಂದಿರುವ ಪರಂಪರೆ ಇರುವುದು ಕೂಡ ವಿಶಿಷ್ಟವೇ ಆಗಿರುತ್ತದೆ ಮತ್ತು ಅವುಗಳ ಹಿಂದೆ ಇತಿಹಾಸವೇ ಇದೆ.

ಬೀರರ ಬನ” : ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಕಟ್ಟಿನಕಾರು ಗ್ರಾಮದ ಕಾರಣಿ ಊರಿನ ಕಾಡಿನಲ್ಲಿ ಬೀರರಬನ’ ಎಂಬ ಸ್ಥಳ ಇದೆ. ಅಲ್ಲಿ ನೂರಾ ಒಂದು ಶೂಲಗಳನ್ನು ನೆಟ್ಟಿರುತ್ತಾರೆ. ಅವುಗಳು ಮಳೆಗೆ ತೋಯ್ಯದಂತೆ ಸೋಗೆಯ ಗುಡಿಸಲನ್ನುಲಾಂಬಿಯಾಗಿ ಕಟ್ಟಿರುತ್ತಾರೆ.

ಪ್ರತೀ ವರ್ಷದ ದೀಪಾವಳಿಯ ವರುಷದಡುಕದಲ್ಲಿ ಅಲ್ಲಿಯ ದೀವರು ಆ ಶೂಲಗಳಿಗೆ ಎಡೆ ಇಟ್ಟು ಪೂಜಿಸಿ ಹೋಗುತ್ತಾರೆ. ಹಾಗೇನೆ ಮೂರು ವರ್ಷಗಳಿಗೊಮ್ಮೆ ಈ ಕಾಡಿನಲ್ಲಿ ಬಂದು ಪೂಜೆ ಪುನಸ್ಕಾರ ಮಾಡಿ ಊರೊಟ್ಟಿನ ಜಾತ್ರೆ ಮಾಡುವ ಪರಂಪರೆ ಉಳಿಸಿಕೊಂಡಿದ್ದಾರೆ. ಈ ಸಂಪ್ರದಾಯದ ಹಿನ್ನೆಲೆ ಏನೆಂದು ವಿಚಾರಿಸಿದಾಗ ಆ ಶೂಲಗಳು ಅಲ್ಲಿ ಹಿಂದಿನ ಕಾಲದಲ್ಲಿ ಶತ್ರುಗಳ ಸೈನ್ಯದೊಂದಿಗೆ ಕಾದಾಡಿ ಮಡಿದ ವೀರ ಯೋಧರ ನೆನಪಿಗಾಗಿ ಆ ಶೂಲಗಳನ್ನು ನೆಟ್ಟು ಪೂಜೆ ಸಲ್ಲಿಸಿ ಅಂದು ಈ ಪ್ರದೇಶದ ರಕ್ಷಣೆಗೆ ತಮ್ಮ ಜೀವ ಬಲಿದಾನ ಗೈದವರ ಸ್ಮರಣೆ ಮಾಡಿಕೊಳ್ಳುವ ಪರಂಪರೆ ಅದಾಗಿದೆ ಎಂದು ಹೇಳುತ್ತಾರೆ. ಇದೊಂದು ವಿಶೇಷ ಆಚರಣೆಯಾಗಿದೆ ಮತ್ತು ಐತಿಹಾಸಿಕ ಮಹತ್ವವುಳ್ಳದ್ದೂ ಆಗಿದೆ.

ಗಾಮನ ಹಬ್ಬ”, “ಘಟ ಪೂಜೆ” : ಈ ಯೋಧ ಪರಂಪರೆಯ ಇನ್ನೊಂದು ಆಚರಣೆ ದೀವರ ಮೂಲ ಹಳ್ಳಿಗಳಲ್ಲಿ ಆಚರಿಸುವ ಗಾಮ ದೇವರ ಹಬ್ಬ ಕೂಡ ಸೇರಿದೆ ಅಥವಾ ಆದ್ರೆ ಮಳೆ ಹಬ್ಬ ಎಂದು ಕರೆಯಲಾಗುವುದು. ಊರೊಟ್ಟಿನ ಹಬ್ಬ ಈ ಸೈನಿಕ ಪರಂಪರೆಯ ಸಾಕ್ಷಿಯಾಗಿ ಉಳಿದಿದೆ. ಗಾಮ ದೇವರುಗಳೆಂದರೆ ಅವು ಮುಖವಾಡಗಳುಊರೆಲ್ಲಾ ಸೇರಿ ಆರಾಧಿಸುವ ಆಚರಣೆ. ಯುದ್ಧದಲ್ಲಿ ಮಡಿದ ಯೋಧರ ನೆನಪಿಗಾಗಿ ಆಚರಣೆಯಲ್ಲಿರುವ ಒಂದು ಹಬ್ಬ. ಈ ಊರುಗಳಲ್ಲಿ ದೀವರ ಗ್ರಾಮ ದೇವರು ಅಥವಾ ಗಾಮ ದೇವರು ಎಂದು ಕರೆಯುವ ಮೂರ್ತಿಗಳು ದೇವಸ್ಥಾನಗಳಲ್ಲಿ ಎರಡು ಅಥವಾ ಹೆಚ್ಚು ಮುಖವಾಡಗಳಾಗಿರುತ್ತವೆ. ಹಸಿರುಹಳದಿ ಮತ್ತು ಕೆಂಪು ವರ್ಣದ ಮುಖವಾಡಗಳು. ಅವುಗಳಿಗೆ ಶೂರತ್ವ ಪ್ರತೀಕವಾದ ಕ್ವಾರೆ ಮೀಸೆ ಇರುತ್ತವೆ. ಅವು ಅವರ ಯಾವುದೋ ತಲೆಮಾರಿನ ಯೋಧರ ಶಿರ ಭಾಗ ಮಾತ್ರವಾಗಿರುತ್ತವೆ. ಆ ಮುಖವಾಡಗಳ ಜೊತೆಗೆ ಕುದುರೆ ಬೀರಪ್ಪನ ವಿಗ್ರಹಗಳುಕುದುರೆ ಮೇಲೆ ಯೋಧರು ಏರಿ ಕುಳಿತು ಖಡ್ಗ ಹಿಡಿದಿರುವ ಮರದ ವಿಗ್ರಹಗಳನ್ನು ಅಲ್ಲಿ ಪೂಜೆಗೆ ಇಟ್ಟಿರುತ್ತಾರೆ. ಇವೆಲ್ಲವುಗಳ ಹಿನ್ನೆಲೆಯನ್ನು ಹುಡುಕುತ್ತಾ ಹೊರಟಾಗ ಅಲ್ಲೊಂದು ಇತಿಹಾಸವೇ ಇದೆ ಎಂದು ಗೊತ್ತಾಗುತ್ತದೆ. ಆ ಶಿರಗಳು ಗಾಮ - ರಾಮರ ಮುಖವಾಡಗಳು ಎನ್ನುತ್ತಾರೆ. ರಾಮ’ ಎಂದರೆ ಇಲ್ಲಿ ದ್ವಾಪರಯುಗದ ಶ್ರೀರಾಮನಲ್ಲ. ಕನ್ನಡದ ಕಡುಗಲಿ ಕುಮಾರ ರಾಮ ಎಂದು ತಿಳಿಯುತ್ತದೆ. ವಿಜಯನಗರಕ್ಕೂ ಮೊದಲಿನ ಕಾಲಾವಧಿಯಲ್ಲಿ 1300ರ ನಂತರ ಕಾಲದಲ್ಲಿ ಬಳ್ಳಾರಿ ಹತ್ತಿರದ ಕಂಪ್ಲಿ’ ಕೋಟೆಯನ್ನಾಳುತ್ತಿದ್ದ ಈ ಕುಮಾರರಾಮ ಬೇಡರ ಪಾಳೆಗಾರ ಕಂಪಣ ನಾಯಕನ ಮಗನಾಗಿದ್ದ. ಆತನು ಶೌರ್ಯಕ್ಕೆಚಾರಿತ್ರ್ಯಕ್ಕೆ ಹೆಸರಾಗಿದ್ದರಾಜಕುಮಾರನಾಗಿದ್ದ ಉತ್ತರದ ಕಡೆಯಿಂದ ಪದೇ ಪದೇ ಕನ್ನಡ ನಾಡಿಗೆ ದಾಳಿ ಮಾಡುತ್ತಿದ್ದದೆಹಲಿ ಸುಲ್ತಾನರುಗಳಿಗೆ ತಡೆವೊಡ್ಡುತ್ತಿದ್ದ ರಣಧೀರನಾಗಿದ್ದ. ಆತನನ್ನು ಸೋಲಿಸಲೇಬೇಕೆಂದು ಅನೇಕ ಸಾರಿ ದಂಡೆತ್ತಿ ಬಂದಿದ್ದರುದೆಹಲಿ ಸುಲ್ತಾನ ತುಘಲಕ್‍ನಿಗೆ ಈತನನ್ನು ಸೋಲಿಸಲು ಆಗಿರುವುದಿಲ್ಲ. ಸುಲ್ತಾನನ ಮಗಳು ಕುಮಾರ ರಾಮನನ್ನೇ ಮದುವೆಯಾಗುವುದು ಎಂದು ಹಠÀ ಹೊತ್ತಿರುತ್ತಾಳೆ. ಅದಕ್ಕೆ ಕುಮಾರರಾಮ ಒಪ್ಪುವುದಿಲ್ಲ. ಹೇಗಾದರೂ ಮಾಡಿ ಶೂರ ರಾಮನನ್ನು ಸೋಲಿಸಲು ತಂತ್ರ ಹೂಡಿ ತುಘಲಕ್ ಅಪಾರ ಸೈನ್ಯ ಕಳುಹಿಸಿರುತ್ತಾನೆ. 3ನೇ ಬಾರಿ ಬಂದಂತಹ ಶತ್ರುಗಳ ಸೈನ್ಯದಲ್ಲಿ ಕುತಂತ್ರದಿಂದ ಸ್ಥಳೀಯ ಹೆಂಗಸೊಬ್ಬಳು ಕತ್ತಿ ಹಿಡಿದು ಕುಮಾರರಾಮನ ಎದುರಿಗೆ ಬರುತ್ತಾಳೆ. ಹೆಂಗಸೊಂದಿಗೆ ಯುದ್ಧ ಮಾಡಲ್ಲ ಎಂದು ಕುಮಾರ ರಾಮ ಅಂದಿನ ಯುದ್ಧ ಧರ್ಮದ ಪ್ರಕಾರ ಕತ್ತಿ ಎತ್ತುವುದಿಲ್ಲ. ಈ ಸಮಯ ನೋಡಿ ಆತನನ್ನು ಶತ್ರ್ರುಗಳು ಹಿಂದಿನಿಂದ ಬಂದು ಕತ್ತು ಕಡಿದು ಬಿಡುತ್ತಾರೆ. ಈ ಶಿರವನ್ನು ದೆಹಲಿಯ ಸುಲ್ತಾನನ ಮಗಳಿಗೆ ತೋರಿಸಲು ಕೊಂಡೊಯ್ಯುತ್ತಾರಂತೆ. ಶತ್ರುಗಳ ತಂತ್ರ ಇದರಿಂದ ಫಲಿಸಿರುತ್ತದೆ. ಇತ್ತ ಕಡೆ ಅರಮನೆಯಲ್ಲಿ ಕುಮಾರರಾಮನ ಪತ್ನಿಯರು ಪರಿವಾರವೆಲ್ಲ ಚಿತೆ ಏರಿ ಸಹಗಮನ ನಡೆಸುತ್ತಾರೆ. ಅತ್ಯಂತ ಶೂರನಾಗಿದ್ದಕುಮಾರರಾಮನು ಚಾರಿತ್ರ್ಯವಂತನೂದೈವತ್ವ ಸಂಭೂತನೂ ಆಗಿದ್ದನೆಂದು ಆತ ಬದುಕಿದ್ದಾಗಲೇ ಪ್ರತೀತಿ ಇತ್ತು. ಆತನೊಂದಿಗೆ ದೀವರ ಯೋಧರು ಇದ್ದಂತೆ ಕಾಣುತ್ತದೆ. ಗಾಮ’ ಈ ಬುಡಕಟ್ಟಿನ ನಾಯಕನೇ ಯೋಧನಾಗಿರಬೇಕು. ಇನ್ನು ಅವನೊಂದಿಗೆ ಅನೇಕ ದೀವರ ಯೋಧರು ವೀರ ಮರಣ ಹೊಂದಿರುವುದರಿಂದಲೇ ಅವರ ನೆನಪಿಗಾಗಿ ಈ ಗಾಮದೇವರ ಹಬ್ಬದಲ್ಲಿ ಬಿಂಗಿ’ ಆಚರಿಸುತ್ತಾರೆ. ಕೆಂಡದ ಮೇಲೆ ನಡೆಯುವ ಹರಕೆ ಸಂಪ್ರದಾಯ ಅಥವಾ ಕೊಂಡ ಹಾಯುವುದು ಈ ಊರುಗಳಲ್ಲಿ ಆಚರಣೆಯಲ್ಲಿದೆ. ಅಂದು ರಾತ್ರಿ ಗ್ರಾಮ ದೇವರಿಗೆ ಎಡೆ ಇಕ್ಕಿ ಘಟಪೂಜೆ’ ಮಾಡಲಾಗುತ್ತದೆ. ಅದು ಸತ್ತವರಿಗೆ ತಿಥಿ ಪೂಜೆ ಮಾಡುವ ಆಚರಣೆಯಾಗಿದೆ.

ಹೀಗೆ ಮಡಿದ ವೀರರಿಗೆ ಎಡೆ ಇಡುವುದು ದೀವರಲ್ಲಿ ಒಂದು ಸಂಪ್ರದಾಯವಾಗಿದೆ. ಯೋಧರ ನೆನಪಿಗಾಗಿ ಪೂಜೆಉತ್ಸವಜಾತ್ರೆ ನಡೆಸುವ ದೀವರು ತಮ್ಮ ಪೂರ್ವಜರನ್ನು ಸ್ಮರಿಸುವ ಸಂಸ್ಕøತಿ ಒಂದು ಅಭೂತಪೂರ್ವ ಪರಂಪರೆಯು ಹೌದುಊರೊಟ್ಟಿಗೆ ಆಚರಿಸುವ ಈ ಆರಾಧನೆ ಒಂದು ಬುಡಕಟ್ಟು ಸಂಸ್ಕøತಿಯೂ ಆಗಿ ಉಳಿದಿರುವುದನ್ನು ಐತಿಹಾಸಿಕ ಹಿನ್ನಲೆಯಲ್ಲಿ ಅಧ್ಯಯನ ನಡೆಸಬೇಕಾಗಿದೆ.

ಮನೆತನದ ಹೆಸರುಗಳು: ನಮ್ಮ ಗ್ರಾಮೀಣರಲ್ಲಿ ಹೀಗೆ ಉಳಿದುಕೊಂಡು ಬಂದಿರುವ ಆಚರಣೆಗಳುಆರಾಧನೆಗಳುಸ್ಥಳನಾಮಗಳುಮನೆತನದ ಹೆಸರುಗಳು ಕುತೂಲಹಕರವಾದ ಇತಿಹಾಸವನ್ನು ಬಿಚ್ಚಿಡುತ್ತವೆ. ಕೆಳದಿ ಸಂಸ್ಥಾನದ ಮೂಲ ಊರಾದ ಕೆಳದಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಇನ್ನು ಕೆಲವು ಮನೆತನಗಳ ಹೆಸರು ಕುತೂಹಲಕರವಾಗಿವೆ. ಉದಾಹರಣೆ ಕೆಳದಿಪುರದ ಕೊತವಾಲರು ಕುಟುಂಬಅದರಂತೆ ಮತ್ತು ಸೂರನಗದ್ದೆ ಊರುಗಳಲ್ಲಿರುವ ಆನೇರು’ ಮನೆತನ ಕೆಳದಿ ರಾಜ್ಯಾಡಳಿತ ಕಾಲದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ತಿಳಿಸುತ್ತದೆ. ಆನೇರು’ ಆ ಕಾಲದಲ್ಲಿ ಆನೆ ಪಳಗಿಸಿ ಸಾಕುತ್ತಿದ್ದರು. ರಾಜರ ಆನೆದಳದ ದಳಪತಿಯಾಗಿದ್ದರು ಎಂದೆಲ್ಲ ಹಳೆಯ ಕಾಲದ ಜನರಲ್ಲಿ ಪ್ರತೀತಿ ಇವೆ. ಅದೇ ರೀತಿ ಕೆಳದಿಯ ಪಕ್ಕದ ಕೆಳದಿಪುರದಲ್ಲಿ ಕೊತವಾಲರ ಕುಟುಂಬ ಒಂದಿದೆ. ಹೆಸರೇ ಸೂಚಿಸುವಂತೆ ಕೋಟೆ ಕಾಯುವ ರಕ್ಷಣಾಧಿಕಾರಿಗೆ ಕೊತವಾಲ ಎಂದು ಕರೆಯುತ್ತಿದ್ದರಂತೆ ಆ ಕುಟುಂಬದವರÀಲ್ಲಿ ಹಳೆಯ ತಲೆಮಾರಿನಲ್ಲಿದ್ದ ಯಾರೋ ಒಬ್ಬ ಕೊತವಾಲರಾಗಿರಬೇಕು.

ಸೂರನಗದ್ದೆ” : ಕೆಳದಿ ಹಾಗೂ ಸಾಗರ ಪಟ್ಟಣಕ್ಕೆ ನಡುವೆ ಇರುವ ಸೂರನಗದ್ದೆ ಎಂಬ ಊರು ಕೆಳದಿಗೆ ಸಮೀಪದಲ್ಲಿದೆ. ಆ ಊರಿನ ಹೆಸರೇ ಹೇಳುವಂತೆ ದಂಡಿನಲ್ಲಿ ಮಡಿದ ಯೋಧನ ಕುಟುಂಬಕ್ಕೆ ಉಂಬಳಿಯಾಗಿ ಗದ್ದೆಹೊಲವನ್ನು ಕೊಟ್ಟಿರುವುದಕ್ಕೆ ಆ ಊರಿಗೆ ಅದೇ ಹೆಸರಾಗಿದೆ. ಸೂರನಿಗೆ ಕೊಟ್ಟಿರುವ ಗದ್ದೆ. ಸೂರನಗದ್ದೆ’ ಎಂದು ಊರ ಹೆಸರಾಗಿದೆ. ಅಲ್ಲಿ ದಂಡಿನ ಕತ್ತಿ ಇದ್ದ ಮನೆತನ ಒಂದಕ್ಕೆ ಕತ್ತಿ’ ಮನೆತನ ಎಂದೇ ಹೆಸರಿದೆ.

ಉಂಬಳಿಬೈಲು” : ಕೆಳದಿ ಊರಿನ ಎದುರುಗಡೆ ಉಂಬಳಿಬೈಲು ಎಂಬ ಒಂದು ವಿಶಾಲಗದ್ದೆ ಬಯಲು ಇದೆ. ಆ ಜಮೀನೆಲ್ಲ ಹಳೆ ಪೈಕ ದೀವರ ಕುಟುಂಬಗಳ ಸಾಗುವಳಿ ಮಾಡುತ್ತಿದ್ದಾರೆ. ಕಾರಣ ಆ ಸಂಸ್ಥಾನಕ್ಕೆ ರಾಜಾಡಳಿತದಲ್ಲಿ ದಂಡಿಗೆ ಹೋಗಿ ಬಲಿದಾನ ಗೈದವರ ಕುಟುಂಬಗಳಿಗೆ ಭೂಮಿಗಳನ್ನು ರಕ್ತ ಕೊಡುಗೆ ಉಂಬಳಿ (ದಾನ)ಯಾಗಿ ಕೊಡಲಾಗಿದೆ ಎಂಬುದು ಹೇಳುತ್ತಾರೆ. ಆದ್ದರಿಂದ ಆ ಬಯಲಿಗೆ ಉಂಬಳಿಬೈಲು ಎನ್ನುತ್ತಾರೆ. ಇಂತಹ ಎಷ್ಟೋ ಸಂಗತಿಗಳು. ಅವುಗಳ ಹಿನ್ನಲೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಲ್ಲಿ ಇತಿಹಾಸದ ಅಂಶಗಳು ದೊರೆಯುತ್ತವೆ.

ಮಾಸ್ತಿಕಟ್ಟೆಗಳು”: ಮಾಸ್ತಿಕಟ್ಟೆಗಳು ದೀವರ ಹಳ್ಳಿಗಳಲ್ಲಿ ಅನೇಕ ಕಡೆ ಕಂಡುಬರುತ್ತವೆ. ಆ ಮನೆತನದ ಹೆಣ್ಣು ಮಗಳೊಬ್ಬಳು ಆಕೆಯ ಗಂಡ ದಂಡಿನಲ್ಲಿ ವೀರ ಮರಣ ಹೊಂದಿದ್ದಕ್ಕೆ ಆತನ ಸಾವಿನ ಚಿತೆಗೆ ಏರಿ ಸಹಗಮನ ಮಾಡಿರುತ್ತಾಳೆ. ಆ ಸ್ಮರಣೆಯಾಗಿ ಆಯಾ ಮನೆತನಗಳು ಮಾಸ್ತಿ ಪೂಜೆ ಸಲ್ಲಿಸಿ ಸ್ಮರಣೆ ಮಾಡುತ್ತಾ ಬಂದಿರುತ್ತವೆ. ಹಾಗಾಗಿ ಇದು ದೀವರ ಸಮುದಾಯದವರ ಯೋಧ ಪರಂಪರೆಗೆ ಸಾಕ್ಷಿಯಾಗಿ ಉಳಿದಿವೆ.

ಕನ್ನಡ ನಾಡಿನ ಮೊದಲ ರಾಜವಂಶ ಕದಂಬರು. ಅವರ ರಾಜಧಾನಿ ಬನವಾಸಿಯಾಗಿತ್ತು. ಈ ರಾಜವಂಶದ ಮೊದಲ ಅರಸು ಮಯೂರವರ್ಮನು. ಇಲ್ಲಿಯ ಹಳೆ ಪೈಕ ದೀವರ ಮೂಲದವನಾಗಿದ್ದ. ಆದರೆ ಇತಿಹಾಸದಲ್ಲಿ ಆತನೊಬ್ಬ ಬ್ರಾಹ್ಮಣ ದೊರೆ ಎಂದು ತಪ್ಪಾಗಿ ದಾಖಲಿಸಿ ಬಿಟ್ಟಿದ್ದಾರೆ ಎಂದು ಇತ್ತೀಚಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರುವಿದ್ವಾಂಸರು ಆಗಿರುವ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟಿರುವುದು ಅಧ್ಯಯನ ಯೋಗ್ಯವಾಗಿದೆ. ಇತಿಹಾಸ ಸಂಶೋಧಕರು ಇಲ್ಲಿಯ ಬುಡಕಟ್ಟುಗಳ ಕೊಡುಗೆಯನ್ನು ನಿರ್ಲಕ್ಷಿಸಿರುವುದು ಕಾಣುತ್ತದೆ. ಇನ್ನು ಹೆಚ್ಚಿನ ಸಂಶೋಧನೆಗೆ ಒಳಪಡಬೇಕಾಗಿರುವ ವಿಷಯವಾಗಿದೆ. ಮಧ್ಯ ಮಲೆನಾಡಿನಲ್ಲಿ ಸುಮಾರು 200 ವರ್ಷ ಆಳಿದ ಕೆಳದಿ ನಾಯಕರ ಕಾಲದಲ್ಲಿ ಚನ್ನಮ್ಮ ರಾಣಿ ಆಡಳಿತದ ಅವಧಿಯಲ್ಲಿ ಕೆಳದಿಯವನೇ ಆದ ಹೆಮ್ಮೆಯ ವೀರಭದ್ರ ನಾಯಕ ಎಂಬ ದಂಡ ನಾಯಕ ಉಲ್ಲೇಖವಿದೆ. ಆತನ ಓರ್ವ ಸಮರ್ಥ ಸೇನಾಧಿಪತಿಯು ಹಲವು ಯುದ್ಧಗಳನ್ನು ಗೆದ್ದು ರಾಣಿ ಚನ್ನಮ್ಮನಿಗೆ ಬಲ ನೀಡಿದ್ದನೆಂದು ಕೆಳದಿ ಲಿಂಗಣ್ಣ ಕವಿ ವಿರಚಿತ ಕೆಳದಿ ನೃಪವಿಜಯ’ ಗ್ರಂಥದಲ್ಲಿ ದಾಖಲಾಗಿರುವಂತದ್ದು. ಈಗ 200 ವರ್ಷ ಕಳೆದಿದ್ದರೂ ಇಂತಹ ವೀರ ಯೋಧನೊಬ್ಬನ ಬಗ್ಗೆ ಸ್ಥಳೀಯರಿಗೆ ತಿಳಿದಿಲ್ಲ ಎಂಬುದೇ ಒಂದು ವಿಷಾಧದ ಸಂಗತಿ. ಕೆಳದಿ ಚೆನ್ನಮ್ಮನ ಆಡಳಿತದಲ್ಲಿ ವೇಣು ಪರ ಅಥವಾ ಕವಲೆದುರ್ಗ (ತೀರ್ಥಹಳ್ಳಿ)ದಿಂದ ರಾಜ್ಯಾಡಳಿತ ನಡೆಸುತ್ತಿದ್ದಳು. ಶತ್ರುಗಳು ಕವಲೆದುರ್ಗವನ್ನು ಮುತ್ತಿಗೆ ಹಾಕುತ್ತಾರೆ. ಕೆಳದಿಯ ಹೆಮ್ಮೆಯ ವೀರಭದ್ರ ನಾಯಕ ನೇತೃತ್ವದಲ್ಲಿ ಚನ್ನಮ್ಮ ಸೈನ್ಯ ಕಳುಹಿಸುತ್ತಾಳೆ. ಆಗ ವೀರಭದ್ರ ನಾಯಕನ ಹರಪನಹಳ್ಳಿಯ ಬಾಣದ ಬೆಂಕಿಗೆ ಶತ್ರು ಸೈನ್ಯ ಹೆದರಿ ಓಟ ಕೀಳುತ್ತದೆ ಎಂದು ನೃಪವಿಜಯದಲ್ಲಿ ವಿವರಿಸಲಾಗಿದೆ. ಹರಪನಹಳ್ಳಿಯ ಬಾಣ ಎಂದರೆ ಬಾಣದ ತುದಿಗೆ ದೊಂದಿ ಕಟ್ಟಿ ಬೆಂಕಿ ಹಚ್ಚಿ ಶತ್ರುಗಳತ್ತ ಬಾಣ ಬಿಡುತ್ತಿದ್ದರಂತೆ ಎಂದು ಜನಪದರ ಬಾಯಲ್ಲಿದೆ. ನಂತರ ಅದೇ ಕಾಲದಲ್ಲಿ ಪಶ್ಚಿಮಘಟ್ಟದ ಮೇಲಿನ ಗಡಿ ಕಾವಲು ಪಡೆಯ ದಂಡ ನಾಯಕನಾಗಿದ್ದ ಕಾಸರಗೋಡು ತಿಮ್ಮಣ್ಣನಾಯಕ ಹಳೆ ಪೈಕದವನು. ಮಿರ್ಜಾನ ಕೋಟೆಗೆ ಶತ್ರು ಸೈನಿಕರು ಬಂದು ಮುತ್ತಿಗೆ ಹಾಕಿದಾಗ ಆ ಕೋಟೆಯನ್ನು ಶತ್ರುಗಳಿಂದ ಬಿಡುಗಡೆ ಮಾಡಲು ತಿಮ್ಮಣ್ಣನಾಯಕನೋರ್ವನೇ ಸಮರ್ಥನೆಂದು ಚನ್ನಮ್ಮರಾಣಿ ಆತನಲ್ಲಿಗೆ ಹೋಗಿ ಒತ್ತಾಯದಿಂದ ಕರೆತಂದು ಯುದ್ಧಕ್ಕೆ ಹಳೆ ಪೈಕರ ಸೈನ್ಯ ಕಳುಹಿಸುತ್ತಾಳೆ. ಆತ ಯುದ್ಧ ಗೆದ್ದು ಬರುತ್ತಾನೆ. ಅವನ ಸಮುದಾಯದ ಜನ ತಿಮ್ಮಣ್ಣನಾಯಕನಿಗೆ ವಿರೋಚಿತ ಸ್ವಾಗತ ಮಾಡುತ್ತಾರೆ. ಆ ಸಂದರ್ಭದಲ್ಲಿ ಆರತಿ ಬೆಳಗಲು ಬಂದ ಮಹಿಳೆಯರಿಗೆ ಆತ ಹೇಳುವ ಮಾತುಗಳು ಇಲ್ಲಿ ಉಲ್ಲೇಖಾರ್ಹವಾಗಿದೆ. ಎಲ್.ಆರ್. ಹೆಗಡೆಯವರು ಸಂಗ್ರಹಿಸಿದ (ಬೆಳ್ಳಿಯಮ್ಮನ ಹಾಡುಗಳು)

ನಿಮ್ ಮುಸ್ಕಾ ಯೋಗಿನ್ನೇss ತೇಗಿಯsಲು ಬೇಕುss

ಕುಪ್ಸ ಹಾಕ್ಬೇಕುss ಶೇರಿ ಉಡಬೇಕುss

ಮರನ ಮೂಗುತಿಯss ತೆಗೆಯsಲು ಬೇಕುss

ಚಿನ್ನದ ಮೂಗುತಿಯss ಇಡಲಲು ಬೇಕುss ||

ಇವು ಆ ಕಥನ ಗೀತೆಯಲ್ಲಿ ಬರುವ ಸಾಲುಗಳು. ಅಂದು ದೀವರ ಹೆಂಗಸರು ಉಡುತ್ತಿದ್ದ ಉಡುಗೆ ತೊಡುಗೆಗಳು ಎಂತಹ ದೈನೇಸಿ ಸ್ಥಿತಿಯಲ್ಲಿ ಇದ್ದವು ಎಂದು ವಿವರಿಸುತ್ತವೆ. ತಿಮ್ಮಣ್ಣನಾಯಕ ತಮ್ಮ ಜನಾಂಗದ ಹೆಂಗಸರು ಬದಲಾಗಬೇಕು ಎಂಬ ಆಶಯ ಹೊಂದಿದ್ದ ಎಂದು ತಿಳಿಯುತ್ತದೆ. ಜನಪದರ ಹಾಡುಗಳಲ್ಲಿ ಆತನ ಯುದ್ಧದ ಸಾಹಸಗಳು ಜನಪ್ರಿಯವಾಗಿದ್ದಾವೆ. ಹಾಗಾಗಿ ಅವನೊಬ್ಬ  ಜನಪದರ ನಾಯಕನು ಆಗಿದ್ದ ಎಂದು ತಿಳಿದುಬರುತ್ತದೆ.  ಈ ಎಲ್ಲಾ ಸಂಗತಿಗಳು ದೀವರಿಗೆ ಒಂದು ಯೋಧ ಪರಂಪರೆ ಇರುವುದನ್ನು ಸಮರ್ಥಿಸುತ್ತದೆ.

ದೀವರ ಜನಾಂಗದ ಬಗ್ಗೆ ಈವರೆಗೆ ಬಂದಿರುವ ಮುಖ್ಯ ಸಾಹಿತ್ಯ ಕೃತಿಗಳ ಪರಾಮರ್ಶೆ

-ವಿಲಿಯಂ

(ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿಯ ಪರಿಧಿಯಲ್ಲಿರುವ ದೀವರನ್ನು ಕುರಿತು ಬಂದಿರುವ ಮುಖ್ಯ ಸಾಹಿತ್ಯಕೃತಿಗಳು, ಕಾದಂಬರಿ, ಸಣ್ಣಕಥೆಗಳು, ಲೇಖನಗಳು)

                ದೀವರ ಜನಾಂಗದ ಪಾರಂಪರಿಕ ಬದುಕಿನ ಜೀವದ್ರವ್ಯಗಳು ಬಹು ಶ್ರೀಮಂತ. ಒಂದು ಕಾಲದಲ್ಲಿ ಇವರ ಬದುಕು ಅನಾವರಣಗೊಳ್ಳದೇ ಅದು ಕೇವಲ ಮೌಖಿಕವಾಗಿಯೇ ಉಳಿದಿದ್ದು ಬಹು ವಾಸ್ತವ ಸಂಗತಿ. ದೀವರ ಬದುಕು ಅಕ್ಷರರೂಪದಲ್ಲಿ ಬಂದದ್ದೇ ಕಳೆದ 3-4 ದಶಕಗಳಿಂದ. ಇವರ ಬದುಕಿನ ವಿವಿಧ ಪ್ರಮುಖ ಸಂದರ್ಭಗಳು, ಕಲೆಯ ವಿವಿಧ ರೂಪಗಳು, ಉಡುಗೆ-ತೊಡುಗೆ, ಊಟ-ಉಪಚಾರ, ಹಬ್ಬ ಹರಿದಿನಗಳು, ಧಾರ್ಮಿಕ ನಂಬಿಕೆಗಳು ಇವೆಲ್ಲವೂ ವೈವಿಧ್ಯಮಯ, ಅರ್ಥಪೂರ್ಣ. ಇತ್ತೀಚೆಗಿನ ದಶಕಗಳಲ್ಲಿ ಕರ್ನಾಟಕದಲ್ಲಿ ‘ಈಡಿಗ’  ಮತ್ತು ‘ದೀವರು’ ಇವೆರಡನ್ನು ಒಂದುಗೂಡಿಸುವ ಅನೇಕ ಸಾಂಸ್ಕøತಿಕ, ಆರ್ಥಿಕ, ರಾಜಕೀಯ ಪ್ರಯತ್ನಗಳು ನಡೆದರೂ ಅದು ಕೈಗೂಡಲಿಲ್ಲ. ಕಾರಣ ಇವೆರಡರ ನೆಲೆಗಳ ಸೂಕ್ಷ್ಮತೆಗಳು ಬೇರೆ ಬೇರೆಯೇ ಪರಿಕಲ್ಪನೆಯಾದರೆ ‘ದೀವರು’ ಈಡಿಗರಿಗಿಂತ ವಿಭಿನ್ನವಾದ ರೀತಿ-ರಿವಾಜು, ಆಚರಣೆಗಳನ್ನು ಹೊಂದಿರುವ ಜನಾಂಗ. ಹೀಗಾಗಿ ಇವೆರಡನ್ನೂ ಒಂದೇ ಹಂದರದಡಿ ತರಲು ಆಗಲಿಲ್ಲ. ಪಾರಂಪರಿಕ ಜನಾಂಗಗಳು ನೂರಾರಿರುವ ಕಾಲದ ನಡೆಯಲ್ಲಿ ತಮ್ಮೊಳಗೆ ತಾವೇ ಬದಲಾವಣೆಗಳನ್ನು ಕಂಡುಕೊಳ್ಳಬೇಕೇ ವಿನಃ ಅದನ್ನು ಸಾಂದರ್ಭಿಕ ಪ್ರಯತ್ನಗಳಿಂದ ಒಂದುಗೂಡಿಸುವುದಾಗಲೀ, ಬೇರ್ಪಡಿಸುವುದಾಗಲೀ ಆಗದ ಮಾತು. ಮಲೆನಾಡಿನ ಹಳ್ಳಿಗಾಡು ಪ್ರದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳು ಹಾಗೂ ಕಾರವಾರ ಜಿಲ್ಲೆಯ ದೀವರುಗಳ ನಾಮಧಾರಿ ನಾಯಕರ ನಡಾವಳಿಕೆ ಒಂದೇ ತೆರನಾಗಿವೆ. ಹಾಗೆ ನೋಡಿದರೆ ಈ ಎರಡೂ ಭೌಗೋಳಿಕ ಪ್ರದೇಶದ ಈ ಜನಾಂಗದವರ ಬಗ್ಗೆ ಆಗಿರುವ ತಳಸ್ಪರ್ಶ ಅಧ್ಯಯನಗಳು, ಬದುಕಿನ ಚಿಂತನೆಗಳು, ಪಾರಂಪರಿಕ ನಡೆಗಳ ಬಗ್ಗೆ ಸಾಹಿತ್ಯಕ ರಚನೆಗಳು ಆಗಿರುವುದು ಕಡಿಮೆ ಅಂತಲೇ ಹೇಳಬೇಕು. ಇತ್ತೀಚಿನ ದಶಕಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ಒಂದು ಸಂತೋಷದ ಸಾಧನೆ. ಕಾರವಾರ ಜಿಲ್ಲೆಯ ದೀವರನ್ನು ಕುರಿತು ಖ್ಯಾತ ಸಾಹಿತಿಗಳಾದ ಡಾ. ವಿಷ್ಣುನಾಯ್ಕ, ವಿ.ಗ. ನಾಯಕ್, ನಾಯಕ್ ಎನ್.ಆರ್. ಇಂಥವರು ಅನೇಕ ಕೃತಿಗಳನ್ನು ಹೊರತಂದಿರುವುದು ವಿಶೇಷದ ಸಂಗತಿ. ಒಂದು ಜನಾಂಗದ ಬದುಕನ್ನು ಅವರ ದಿನನಿತ್ಯದ ದಟ್ಟವಾದ ಬರವಣಿಗೆಗಳಲ್ಲಿ ಸೆರೆಹಿಡಿಯುವಂತೆ ಮಾಡಿ ಆ ಮೂಲಕ ಸಮಾಜವನ್ನು ವಿಶ್ಲೇಷಿಸುವುದು ವಾಸ್ತವವಾದ ಬರವಣಿಗೆಯ ಒಂದು ಅಂಶ. ಈ ದೃಷ್ಟಿಯಿಂದ ನಮ್ಮ ಎಲ್ಲಾ ಹೊಸ ಲೇಖಕರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ದಲಿತ, ಬುಡಕಟ್ಟು, ಹಿಂದುಳಿದ, ಮುಸ್ಲಿಂ ಹಿನ್ನೆಲೆಯಿಂದ ಬಂದ ಲೇಖಕರು ತಮ್ಮ ಜನಾಂಗಗಳ ಬೇನೆ, ಬೇಸರ, ಅನುಭವಿಸುತ್ತಿರುವ ಶೋಷಣೆ, ಬಯಸುತ್ತಿರುವ ಬಿಡುಗಡೆ, ಅವರ ಜನಾಂಗೀಯ ಬದುಕಿನ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಸೂಕ್ಷ್ಮತೆಗಳನ್ನು ಬಹು ಸುಂದರವಾಗಿ ಹೊರತರುತ್ತಿದ್ದಾರೆ. ಇವರೆಲ್ಲಾ ತಮ್ಮ ತಮ್ಮ ಪರಂಪರೆಯ ಬಗ್ಗೆ ಬರೆಯುವ ಅನಿವಾರ್ಯತೆಯೂ ಹೌದು. ಈ ದಿಸೆಯಲ್ಲಿ ದೀವರ ಹೊಸ ಲೇಖಕರು ಕೆಲಸ ಮಾಡಿದ್ದು ತುಂಬಾ ಕಡಿಮೆ. ಸಾಮಾನ್ಯವಾಗಿ ಲೇಖಕನಾದವನು ತನ್ನ ಜಾತಿ, ಸಮಾಜ, ಧಾರ್ಮಿಕ ಜೀವನದೃಷ್ಟಿಯ ಮೇಲೆ ತನಗೇ ಗೊತ್ತಿಲ್ಲದ ರೀತಿಯಲ್ಲಿ ಅವಲಂಬಿತನಾಗಿರುತ್ತಾನೆ.  ತನ್ನ ಸಮಕಾಲೀನ ಸಾಮಾಜಿಕ, ಧಾರ್ಮಿಕ ವಾಸ್ತವತೆಗಳನ್ನು ತನ್ನ ಸ್ವಂತ ನೆಲೆಯಲ್ಲಿಯೇ ನಿಂತು ಚಿಂತಿಸುತ್ತಾನೆ ಸಹ. ಇಂತಹ ವಾಸ್ತವತೆಯ ಚಿಂತನೆಗಳಲ್ಲಿ ಬರಹಗಾರನೊಬ್ಬ ತಕ್ಕಮಟ್ಟಿಗೆ ಮುಳುಗಿರುತ್ತಾನೆ ಮತ್ತು ಎಷ್ಟರಮಟ್ಟಿಗೆ ಪ್ರಜ್ಞಾಪೂರ್ವಕವಾಗಿ ತೂರಲು ಪ್ರಯತ್ನಿಸುತ್ತಾನೆ ಎಂಬುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಸಾಹಿತ್ಯ ರಚನೆ ಮಾಡುವಾಗ ತನ್ನ ಜನಾಂಗದ ಹಲವಾರು ವಾಸ್ತವಗಳು ಸಹಜವಾಗಿ ಒಳಗೆ ಕೆಲಸ ಮಾಡುತ್ತಿರುತ್ತವೆ. ಇದು ತಪ್ಪಾಗಲಿ, ಸಂಕುಚಿತ ವಾದ ಅಲ್ಲ. ಲೇಖಕ ತನ್ನ ಪರಂಪರೆಯ ಕಟ್ಟುಪಾಡಿನಲ್ಲಿ ಬೆಳೆದುಬಂದಿರುವುದರಿಂದ ಆ ಜನಾಂಗದ ಸಮಷ್ಟಿ ಬದುಕಿನ ಬಗ್ಗೆ ಸಹಜವಾದ ಸಾಮೀಪ್ಯ ಇರುವುದರಿಂದ ಅಭಿವ್ಯಕ್ತಿಯಲ್ಲಿ ಅನುಭವ, ಗಟ್ಟಿತನ ಉಳಿಯುತ್ತದೆ. ದೀವರ ಹೊಸ ಪೀಳಿಗೆಯ ಬರಹಗಾರರು ಈ ದಿಸೆಯಲ್ಲಿ ಯೋಚಿಸುವುದು ಒಳ್ಳೆಯದು. ಇಲ್ಲಿಯ ಹೊಸ ಪೀಳಿಗೆಯ ಯುವ ಬರಹಗಾರರಿಗೆ ಈ ಕಸುಬು ಮುಜುಗರ ಅನ್ನಿಸುತ್ತದೆ. ಈ ನೆಲೆಯಲ್ಲಿ ಬಹಳ ಸುಂದರ ಮೌಖಿಕ ರಚನೆಗಳು, ಹಾಡುಗಳು ಇದ್ದರೂ ಈವರೆಗೆ ಈ ಹಿನ್ನೆಲೆಯಿಂದ ಯಾವ ಕಾವ್ಯ ಕೃತಿಯೂ ಆಗಲಿಲ್ಲ.

                ದೀವರು ತಮ್ಮ ಪಾರಂಪರಿಕ ಜಗತ್ತಿನ ಮೂಲಕ ಸೃಷ್ಟಿಸಿಕೊಂಡಿರುವ ಸಾಂಸ್ಕøತಿಕ ದ್ರವ್ಯಗಳು ಬಹು ಮುಖ್ಯವಾದದ್ದು.  ಇಷ್ಟೆಲ್ಲ ಇದ್ದರೂ ಈ ಜನಾಂಗವು ಸೃಜನಶೀಲ ರಚನೆಗೆ ವಸ್ತುವಾಗಿದ್ದು ಕೇವಲ ಒಂದೆರಡು ದಶಕಗಳಿಂದೀಚೆಗೆ. ಬಹುಕಾಲ ನಿರ್ಲಕ್ಷ್ಯಗೊಂಡ ಈ ಮಲೆನಾಡಿನ ದೀವರ ಬದುಕು ಒಮ್ಮೆಲೇ ಅನಾವರಣಗೊಂಡಿದ್ದು ಸಹಾ ಮುಖ್ಯ ತಿರುವು.

                ದೀವರ ಜನಾಂಗವು ಬುಡಕಟ್ಟಿನ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಅದೊಂದು ಬುಡಕಟ್ಟು ಜನಾಂಗವಲ್ಲ. ಕಾಲದ ನಡೆಗೆ ಒಗ್ಗಿಕೊಂಡೇ ಕಾಡು ಹಾಗೂ ಗಿಡಜನ್ಯ ಪರಿಸರದಲ್ಲಿ ಬದುಕಿದ್ದರೂ ಇತ್ತೀಚೆಗೆ ಹೊರಲೋಕಕ್ಕೆ ತೆರೆದುಕೊಂಡಿದೆ. ಈ ಜನಾಂಗ ಎಲ್ಲಾ ಬುಡಕಟ್ಟಿನವರಂತೆ ಇದೂ ಸಹ ತನ್ನ ಸಾಂಸ್ಕøತಿಕ ಶ್ರೀಮಂತಿಕೆಂiÀಲ್ಲ್ಲಿಯೇ ಬದುಕು ಶ್ರೇಷ್ಠವೆಂದು ನಂಬಿರುವ ಸಮುದಾಯ. ಜಾಗತಿಕ ರಂಗದಂತಹ ಈ ಆತಂಕದ ಗಳಿಗೆಯಲ್ಲಿ ದೀವರ ವಿವಿಧ ಅಧ್ಯಯನಗಳು ಅನಾವರಣಗೊಳ್ಳುತ್ತಿರುವುದು ಬಹು ವಿಶೇಷ. ಈ ಜನಾಂಗದ ಅನನ್ಯ ನೆಲೆಗಳನ್ನು, ಕೂಪ ಪ್ರರೂಪಗಳನ್ನು, ಹೋರಾಟ ಸತ್ಯಾಗ್ರಹಗಳನ್ನು ಸೃಜನಶೀಲ ಮೂಸೆಯಲ್ಲಿಟ್ಟು ಕಾಸಿ ಕುಟ್ಟಿ ಹದಮಾಡಿ ಕಥೆ, ಕಾದಂಬರಿ ಮತ್ತಿತರ ಕೃತಿಗಳನ್ನು ಬರೆದದ್ದು ಚಿಕ್ಕ ಸಂಗತಿಯಲ್ಲ.

ನಾ. ಡಿಸೋಜರವರ ಕಥೆ, ಕಾದಂಬರಿಗಳಲ್ಲಿ ದೀವರು : ಸಾಂಸ್ಕøತಿಕವಾಗಿ ತುಂಬಾ ವಿಶಿಷ್ಟವಾಗಿರುವ ದೀವರ ಪಾರಂಪರಿಕ ಮಳೆಹಬ್ಬ, ಗ್ರಾಮದೇವರ ಹಬ್ಬ, ಗೌರಿಪೂಜೆ, ನಂಬಿಕೆಗಳು, ಹಸೆಚಿತ್ತಾರ ಕಲೆ, ಹಸೆ ಹಾಡುಗಳು, ಮನೆತನವನ್ನು ಕಟ್ಟುವ ಸ್ತ್ರೀಯರು, ಅವರ ಬದುಕಿನ ನೋವು-ನಲಿವುಗಳು, ಅನುಭವಿಸಿದ ಶೋಷಣೆಗೆ ಸಿಡಿದೆದ್ದ ದೀವರು, ಕಾಗೋಡು ಸತ್ಯಾಗ್ರಹದ ಹಿನ್ನೆಲೆ-ಹೀಗೆ ಡಿಸೋಜಾ ಈ ಜನಾಂಗದ ವಿವಿಧ ಆಯಾಮದ ಬದುಕನ್ನು ಸೆರೆಹಿಡಿದಂತೆ ಮತ್ಯಾರೂ ಸೆರೆಹಿಡಿದಿಲ್ಲ ಎಂಬುದು ಸತ್ಯ. ಹಾಗೆ ನೋಡಿದರೆ ಡಿಸೋಜಾ ತಮ್ಮ ಮೂಲಧರ್ಮವನ್ನೂ ಸಹ ಇಷ್ಟೊಂದು ಸಂಭ್ರಮದಿಂದ ಬರೆದಿಲ್ಲ ಅಂತ ಅನ್ನಿಸುತ್ತದೆ. ದೀವರ ಬದುಕನ್ನು ಪ್ರತಿಬಿಂಬಿಸುವ ಅನೇಕ ಸಣ್ಣಕಥೆಗಳು ಇವೆ. ಆದರೆ ಅವರ ‘ಕೊಳಗ’ ಕಾದಂಬರಿ ಇಡೀ ದೀವರ ಕ್ಯಾನ್ವಾಸ್ ಮೇಲೆ ತುಂಬಾ ಸುಂದರ ಕೆಲಸವನ್ನು ಮಾಡಿದೆ. ಈ ರೈತಾಪಿ ಜನಾಂಗದ ಕೊಳಗ, ನೊಗ, ನೇಗಿಲು, ಕಂಬಳಿ ಇವೆಲ್ಲಾ ಕಾಗೋಡು ಸತ್ಯಾಗ್ರಹಕ್ಕೆ ಪ್ರಮುಖ ಕಾರಣಗಳಾದರೂ ಒಂದು ಗುಡುಗಿಗೆ ಸತ್ಯಾಗ್ರಹ ಒಮ್ಮೆಲೇ ಮಿಂಚಿ ಗುಡುಗಲಿಲ್ಲ. ಸತ್ಯಾಗ್ರಹದ ಇತಿಹಾಸಪೂರ್ವದಲ್ಲಿದ್ದ ದೀವರ ಬದುಕು ಅನಾವರಣಗೊಳಿಸಿದ್ದಾರೆ. ಒಟ್ಟಾರೆ ‘ಕೊಳಗ’ ಕಾದಂಬರಿ ಸತ್ಯಾಗ್ರಹದ ಕತೆಯಲ್ಲ. ಇದು ಸತ್ಯಾಗ್ರಹಪೀಠಿಕಾ ಕಾದಂಬರಿ. ಗೇಣಿದಾರರಾಗಿದ್ದ ದೀವರು ; ಭೂಮಾಲಿಕರು ಗೇಣಿ ಅಳೆದುಕೊಳ್ಳುತ್ತಿದ್ದ ಕೊಳಗದ ವಿರುದ್ಧ ಅಸಹನೆಯ ಧ್ವನಿ ಎತ್ತಿದ್ದರ ಹಿನ್ನೆಲೆಯಾಗಿದೆ. ಒಡೆಯರ ಕೊಳಗದ ಅಳತೆ ಸರ್ಕಾರಿ ಕೊಳಗದ ಅಳತೆಯಾಗಿರಲಿಲ್ಲ. ಮೂರೂವರೆ ನಾಲ್ಕು ಸೇರಿನ ಕೊಳಗಗಳಿಗಿಂತ ದೊಡ್ಡದಾಗಿದೆ ಎಂಬುದೇ ಗೇಣಿದಾರರ ಸಿಟ್ಟು. ಈ ಘಟನೆಯ ಹಿಂದೆ ಗೇಣಿದಾರರ ಮೇಲೆ ನಿರಂತರ ಆಗುತ್ತಿದ್ದ ಸಾಮಾಜಿಕ, ಆರ್ಥಿಕ ಆತಂಕಗಳ ಗೋಳೇ ಇದೆ. ಈ ಹೋರಾಟದ ಮುನ್ನಾದಿನಗಳ ಕತೆಯನ್ನು ಹೇಳುವಲ್ಲಿ ಡಿಸೋಜಾ ಅವರು ದೀವರ ವರ್ಣಮಯ ಬದುಕಿನ ವಿವಿಧ ಅಂಶಗಳನ್ನು ಚಿತ್ರಿಸಿರುವುದು ಬಹು ಅನನ್ಯ. ಆ ದಿವಸಗಳಲ್ಲಿನ ಗೇಣಿದಾರರ ಬವಣೆಯ ದಟ್ಟ ವಿವರಗಳಿವೆ. ಈ ಹೋರಾಟಕ್ಕೆ ತನ್ನ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಿ, ಏಟು ತಿಂದ ಹುಚ್ಚಪ್ಪ ಈ ಕಾದಂಬರಿಯನ್ನು ನಿರೂಪಿಸುತ್ತಾನೆ. ಭೂಮಾಲಿಕರು ಹೇರುತ್ತಿದ್ದ ಹತ್ತು ಹಲವು ಮಾನಸಿಕ ಒತ್ತಡಗಳು ದೀವರನ್ನು ಒಂದುಗೂಡಿಸುತ್ತವೆ. ಈ ಕಾದಂಬರಿಯ ಉದ್ದಕ್ಕೂ ದೀವರು ಆಚರಿಸುವ ಆರಿದ್ರ ಮಳೆಹಬ್ಬ, ಡೊಳ್ಳು ಕಟ್ಟಿಕೊಂಡು ಕುಣಿಯುವ ಬಿಂಗಿ ಹಬ್ಬ, ನಾಗರಪಂಚಮಿ, ಗೌರಿಹಬ್ಬ, ಭೂಮಿ ಹುಣ್ಣಿಮೆ, ದೊಡ್ಡಹಬ್ಬ ಬೂರೆ ಹಬ್ಬ, ಬಂಡಿಪೂಜೆ ಹೀಗೆ ಹತ್ತು ಹಲವು ಜಾನಪದೀಯ ಸಂಭ್ರಮಗಳು ಹೊರಹೊಮ್ಮುತ್ತವೆ. ಒಂದು ಸಮುದಾಯದ ಅಪ್ಪಟ ಮಣ್ಣಿನ ಚಿತ್ರಕಲೆ ಇಲ್ಲಿದೆ. ಕೇವಲ ಕಾಗೋಡು ಸತ್ಯಾಗ್ರಹವನ್ನು ನೋಡಿರುವ, ಕೇಳಿರುವ, ಓದಿರುವವರಿಗೂ ಈ ಕಾದಂಬರಿ ಒಂದು ಭದ್ರವಾದ ಭೂಮಿಕೆಯನ್ನು ಸಿದ್ಧಮಾಡಿಕೊಡುತ್ತದೆ.

ನಾ.ಡಿಯವರ ಸಣ್ಣಕಥೆಗಳು : ಶರಾವತಿ ನದಿಯ ಸುತ್ತ ಅನೇಕ ಕಥೆಗಳನ್ನು ಸೃಷ್ಟಿಸಿದಂತೆ, ದೀವರ ಬದುಕಿನ ಸುತ್ತಲೂ ಅನೇಕ ಕಥೆಗಳನ್ನು ಸೃಷ್ಟಿಸಿದ್ದಾರೆ. ಒಂದು ನದಿಯ ಬದುಕಾದರೆ, ಮತ್ತೊಂದು ಜನಾಂಗದ ಬದುಕು. ‘ಹೆಡೆ’, ‘ಕುರ್ಚಿ’, ‘ಹಸೆ ಬರೆಯಲು ಬಂದವಳು’, ‘ತಾಯಿ ಗವರವ್ವನ’ ಇವೆಲ್ಲಾ ದೀವರ ಪ್ರಾತಿನಿಧಿಕ ಕತೆಗಳು. ಹೆಡೆ, ಕುರ್ಚಿ ಬಳುವಳಿಗಳೆಲ್ಲಾ ಒಂದು ಅರ್ಥಪೂರ್ಣವಾದ ಸಂಕೇತಗಳಾಗಿಯೇ ಉಳಿದಿವೆ. ಗೇಣಿರೈತರ ಹಾಡು, ಜೀತದಾಳುಗಳ ಬದುಕು-ಬವಣೆಯ ಚಿತ್ರ ಇಲ್ಲಿದೆ. ‘ಹಸೆ ಬರೆಯಲು ಬಂದವಳು’-ಇದು ಗೆಳತಿಯರ ನಡುವಿನ ಘರ್ಷಣೆ ಮತ್ತು ಮರುಸ್ನೇಹವನ್ನು ಕಟ್ಟಿಕೊಡುತ್ತದೆ. ಹಸೆಚಿತ್ತಾರ ಎಂಬುದೇ ದೀವರ ಬದುಕಿನ ಒಂದು ಸಂಭ್ರಮದ ಚಿತ್ರ. ಇದು ಈ ಜನಾಂಗದ ಒಂದು ಜನಾಂಗದ ಮುಗುಳ್ನಗೆ ಸಹ. ತಾಯಿ ಗವರವ್ವನ ಕರೆವೋರೆ ಇಲ್ಲಿ ಗ್ರಾಮದ ಗೌಡರ ದಬ್ಬಾಳಿಕೆ ಮತ್ತು ಮುಗ್ಧರನ್ನು ಅವರು ಶೋಷಿಸುವ ಪರಿಯ ಸೂಕ್ಷ್ಮತೆಗಳು ಇವೆ.

                ಶೋಷಣೆಯನ್ನು ಉಂಡವರು ಒಮ್ಮೆ ತಿರುಗಿಬಿದ್ದರೆ ಅವರು ಸರ್ಪವಾಗುತ್ತಾರೆ, ಹೆಡೆ ಬಿಚ್ಚುತ್ತಾರೆ ಎಂಬುದರ ಬಿಸಿ ಸಾವಿರಾರು ಎಕರೆ ಜಮೀನು ಹೊಂದಿದ್ದ ಗೌಡರಿಗೆ ತಟ್ಟುತ್ತದೆ. ಅದೇ ರೀತಿ ‘ಕುರ್ಚಿ’- ದಬ್ಬಾಳಿಕೆಗೆ ಪ್ರತಿಭಟನೆಯೇ ಮದ್ದು ಎಂಬ ಸತ್ಯವನ್ನು ಅರಳಿಸುತ್ತದೆ. ಗೌಡರು ದಾರಿಯಲ್ಲಿ ಹೋಗುವಾಗ ಕೆಳವರ್ಗದವರಾರೂ ಎದುರಿನಿಂದ ಬರಬಾರದು. ಅವರು ಕುಳಿತುಕೊಳ್ಳುವ ಬಂಡಿಯಲ್ಲಿ ಮತ್ಯಾರೂ ಕುಳಿತುಕೊಳ್ಳಬಾರದು. ಈ ರೀತಿಯ ಲಾಗಾಯ್ತಿನ ಗೌಡರ ರೀತಿ-ರಿವಾಜುಗಳನ್ನು ಮೀರಿದವರಿಗೆ ಬಗನಿಕೋಲಿನ ಹೊಡೆತವೇ ಗತಿ. ಆದರೆ ಜಟ್ಯನಾಯಕನು ಮಾತ್ರ ಗೌಡರೆದುರಿಗೆ ಮುಖಾಮುಖಿಯ ಸಂಕೇತವಾಗುತ್ತಾನೆ. ಬುದ್ಧಿ ಕಲಿಸುವುದಕ್ಕಾಗಿ ಸಮಯ ಕಾಯುತ್ತಾನೆ. ಒಂದು ದಿನ ಯುಗಾದಿ ಹಬ್ಬ ಬಂದಾಗ ‘ದಾನಶೂರ ಕರ್ಣ’ ನಾಟಕದಲ್ಲಿ ವೇದಿಕೆಗೆ ಗೌಡರನ್ನು ಮುಖ್ಯ ಅತಿಥಿಯಾಗಿ ಕರೆದು ಕುರ್ಚಿಯಲ್ಲಿ ಕೂರಿಸುತ್ತಾರೆ. ಉಳಿದವರೆಲ್ಲಾ ಎಂದಿನಂತೆ ನೆಲದ ಮೇಲೆ ಪ್ರೇಕ್ಷಕರಾಗಿರುತ್ತಾರೆ. ಆದರೆ ಗೌಡರ ಎದುರಿಗೆ ಜಟ್ಯನಾಯಕ ಎಲ್ಲರಂತೆ ನೆಲದ ಮೇಲೆ ಕೂರದೇ ತಾನೇ ಮನೆಯಿಂದ ತಂದ ಕುರ್ಚಿ ಹಾಕಿಕೊಂಡು ಕೂರುತ್ತಾನೆ. ಗೌಡರಿಗೆ ಸಹಿಸಲಾಗದ ಸಿಟ್ಟು ಬರುತ್ತದೆ. ಅವಮಾನವಾದವರಂತೆ ಗೌಡರು ಸಿಟ್ಟಿನಿಂದ ಕುರ್ಚಿ ಬಿಟ್ಟು ನಾಟಕ ನೋಡದೇ ಹೊರಟುಹೋಗುತ್ತಾರೆ. ಸೇರಿದ್ದ ಜನಸಾಮಾನ್ಯರೆಲ್ಲಾ ಸಿಳ್ಳೆ ಹೊಡೆಯುವುದರ ಮೂಲಕ ಅದುಮಿಟ್ಟಿದ್ದ ಸಿಟ್ಟು, ಸೇಡನ್ನು ತೀರಿಸಿಕೊಳ್ಳುತ್ತಾರೆ. ಜನರು ಜಟ್ಯನಾಯ್ಕನ ಧೈರ್ಯ ಮತ್ತು ತಮ್ಮ ಬದುಕಿನೊಳಗಿದ್ದ ಗುಲಾಮತನವನ್ನು ಕಂಡುಕೊಳ್ಳುತ್ತಾರೆ. ಈ ರೀತಿ ದೀವರು ಸೆಟೆದು ನಿಲ್ಲುವ ಕಥೆಗಳನ್ನು ಡಿಸೋಜಾ ಕೊಟ್ಟಿದ್ದಾರೆ. ದೀವರ ಬದುಕಿನೊಳಗಿಂದ ಡಿಸೋಜ ಐವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆಂದರೆ ಹುಬ್ಬೇರುವುದು ಸಹಜ. ಬಹುಶಃ ಒಂದೇ ಜನಾಂಗದ ನೆಲೆಯೊಳಗಿಂದ ಇಷ್ಟೊಂದು ಕಥೆಗಳನ್ನು ಬರೆದಿರುವ ಕಥೆಗಾರ ಕನ್ನಡದ ಸಂದರ್ಭದಲ್ಲಿ ಅಪರೂಪವೆನ್ನಿಸುತ್ತದೆ. ಈ ಜನಾಂಗದ ಎಲ್ಲಾ ಸಾಂಸ್ಕøತಿಕ ಬೇರು ಬಿಳಿಲುಗಳನ್ನು, ಇವರ ದೈನಂದಿನ ಹಾಗೂ ಸಾಂದರ್ಭಿಕ ಸಣ್ಣಪುಟ್ಟ ಸಾಮಗ್ರಿಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಉಪಯೋಗಿಸಿರುವ ಪರಿ ದೀವರ ಸಾಂಸ್ಕøತಿಕ ಕೋಶವಾಗಿ ನಿಲ್ಲುತ್ತದೆ.

ಹುಚ್ಚಪ್ಪ ಮಾಸ್ತರ : ದೀವರ ಜನಾಂಗದ ಜನಪದೀಯ ರೂಪಕವಾಗಿ ನಿಂತವರು ಕಲಾವಿದ ವಿದ್ವಾಂಸ ಹುಚ್ಚಪ್ಪ ಮಾಸ್ತರ್ ಅವರು. ಮೂಲತಃ ಸುಂದರ ಕಂಠಶ್ರೀಯ ವ್ಯಕ್ತಿ. ಮೊದಲಿನಿಂದಲೂ ಹಾಡುತ್ತಾ ಹೊರಟರೇ ವಿನಃ ಬರೆಯತೊಡಗಲಿಲ್ಲ. ಬಾಲ್ಯದಿಂದಲೇ ಬಯಲಾಟ, ಯಕ್ಷಗಾನದ ಸಂಗಡ ಬೆಳೆದುಬಂದವರು. ಸಮಾಜಕಲ್ಯಾಣ ಇಲಾಖೆಯ ಗಿರಿಜನ ವಸತಿ ಶಾಲೆಯಲ್ಲಿ ಮಾಸ್ತರಿಕೆ ಜೀವನ ಪ್ರಾರಂಭಿಸಿದ ಹುಚ್ಚಪ್ಪನವರು ಕೇವಲ ಗೋಡೆಗಳ ಮಧ್ಯದ ಶಿಕ್ಷಕರಾಗಿ ಉಳಿಯದೇ ಅಲ್ಲಿಯೇ ಇದ್ದ ‘ಹಸಲರು’ ಬುಡಕಟ್ಟನವರ ಬಗ್ಗೆ ಅಧ್ಯಯನ ಮಾಡಿ, ಅವರ ಸಾಮಾಜಿಕ, ಧಾರ್ಮಿಕ ನಂಬಿಕೆ, ಆಚರಣೆ, ಹಬ್ಬಹರಿದಿನ, ಹಾಡು, ಕುಣಿತಗಳೆಲ್ಲವನ್ನೂ ಹತ್ತಿರದಿಂದ ನೋಡಿದ ಅಧ್ಯಯನ ಕೃತಿ ‘ಹಸಲರು’ ಪ್ರಕಟಗೊಂಡಿದೆ. ವಿವಿಧ ಬುಡಕಟ್ಟು ಜನಾಂಗದ ಮತ್ತು ಅವರ ಕಲೆಗಳ ಕುರಿತಂತೆ ಅದರಲ್ಲಿಯೂ ಕರ್ನಾಟಕದ ವಿಶೇಷ ಬುಡಕಟ್ಟುಗಳಾದ ಹಾಲಕ್ಕಿ, ಕಚ್ಚೆಗೌಳಿ, ಹಸಲರು, ಗೊಂಡರು, ಕುಣಬಿಗಳು, ಸಿದ್ದಿಗಳು ಕುರಿತಂತೆ ಅಧ್ಯಯನ ಕೈಗೊಂಡರು. ಈ ಹಿನ್ನೆಲೆಯಿಂದಲೇ ಮುಂದೆ ಇವರು ‘ಗಿರಿಜನ ಸಂಸ್ಕøತಿ’ ಎಂಬ ಅಧ್ಯಯನ ಕೃತಿಯನ್ನು ಸಂಪಾದಿಸಿದರು. ಕಾಡಿನ ಒಡಲಿನಲ್ಲಿ ಅನಾದಿಯಿಂದಲೂ ನಿರಂತರವಾಗಿ ಬದುಕುತ್ತಾ ಬಹು ವಿಶಿಷ್ಟ ಬುಡಕಟ್ಟು ಸಂಸ್ಕøತಿಯನ್ನು ಕಟ್ಟಿಕೊಂಡು ಬಂದ ಅಡವಿಜೀವಿಗಳ ಜೀವನವನ್ನು ದಾಖಲಿಸುತ್ತಾ ವಿಶ್ಲೇಷಣೆ ಮಾಡಿದ್ದಾರೆ. ಅವರೇ ಸಂಪಾದಿಸಿದ ಚಂದ್ರಗುತ್ತಿ ರೇಣುಕಾಂಬೆ, ಯುಗದ ಚಿಂತಕ : ಡಾ. ರಾಮಮನೋಹರ ಲೋಹಿಯಾ ಪುಸ್ತಕಗಳಲ್ಲೂ ಸಾಂಸ್ಕøತಿಕ ತಿಳಿವಳಿಕೆ ಮತ್ತು ಎಚ್ಚರಗಳನ್ನು ಈ ಅಧ್ಯಯನ ಕೃತಿಯಲ್ಲಿ ಹುಚ್ಚಪ್ಪನವರು ದಾಖಲಿಸಿದ್ದಾರೆ.

                ಇವರು ಸಂಪಾದಿಸಿದ ಮತ್ತೊಂದು ಕೃತಿ ‘ಕಾಗೋಡು ಚಳವಳಿ-ಸುವರ್ಣ ಸಂಪುಟ’ (ಸಂ. ಡಾ. ಹಿ.ಚಿ. ಬೋರಲಿಂಗಯ್ಯ, ಎನ್. ಹುಚ್ಚಪ್ಪ ಮಾಸ್ತರ್) ಬಹು ವಿಶೇಷವಾದದ್ದು. ಗೇಣಿ ಕೃಷಿಕರಾಗಿ ನೂರಾರು ವರ್ಷಗಳ ಶೋಷಣೆಗೆ ಗುರಿಯಾಗಿದ್ದ ಜನವರ್ಗವೊಂದು ಕ್ರಮೇಣ ಎಚ್ಚರಗೊಂಡು ಭೂಮಾಲಿಕರನ್ನು ಧಿಕ್ಕರಿಸಿ ಮಾಡಿದ ಹೋರಾಟ ಕಾಗೋಡು ಸತ್ಯಾಗ್ರಹ. ದುಡಿಯುವ ರೈತರ ಐತಿಹಾಸಿಕ ಕಥನ, ಅವರ ಹಕ್ಕುಗಳು ಹಾಗೂ ಅವರ ಹೋರಾಟವನ್ನೇ ಕೇಂದ್ರವಾಗಿರಿಸಿಕೊಂಡು ಹೊರತಂದಿರುವ ಬಹು ಮುಖ್ಯ ಕೃತಿ. ಇದೊಂದು ಕಾಗೋಡು ಸತ್ಯಾಗ್ರಹಕ್ಕೆ ಸಂಬಂಧಿಸಿದ ಬಹು ಒಳ್ಳೆಯ ಆಕರ ಗ್ರಂಥ.

                ಇವರ ಸಂಪಾದನೆಯ ಮತ್ತೊಂದು ಕೃತಿ ‘ಸಾಧನೆಯ ಹರಿಕಾರ ಕಾಗೋಡು ತಿಮ್ಮಪ್ಪ’ (ಸಂಪಾದಕ ಹಿ.ಚಿ. ಬೋರಲಿಂಗಯ್ಯ, ಎನ್. ಹುಚ್ಚಪ್ಪ ಮಾಸ್ತರ್, ಕಾಗೋಡು ಅಣ್ಣಪ್ಪ) ಎಂಬ ಅಭಿನಂದನಾ ಗ್ರಂಥವಾಗಿದೆ. ಕಾಗೋಡು ತಿಮ್ಮಪ್ಪನವರು ಕರ್ನಾಟಕದ ಬಹು ಬದ್ಧತೆಯ ಹಾಗೂ ಕ್ರಿಯಾಶೀಲ ರಾಜಕಾರಣಿ. ಈ ಕೃತಿಯಲ್ಲಿ ಕಾಗೋಡರ ಸಾರ್ವಜನಿಕ ವ್ಯಕ್ತಿತ್ವ, ಕನಸುಗಾರಿಕೆ ಹಾಗೂ ಕೆಲಸಗಾರಿಕೆಯನ್ನು ಕುರಿತು ತುಂಬಾ ಒಳ್ಳೆಯ ಅಭಿನಂದನಾ ಗ್ರಂಥವನ್ನು ಹೊರತಂದಿದ್ದಾರೆ. ಕರ್ನಾಟಕ ಸಾಮಾಜಿಕ ಜನಪರ ಹೋರಾಟಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಕೋಶ, ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ ಹಾಗೂ ಅಕಾಡೆಮಿ ಪ್ರಕಟಣೆಗಳಿಗೆ ಹಾಗೂ ವಿವಿಧ ಜಾನಪದ ಸಾಹಿತ್ಯ, ಬುಡಕಟ್ಟು ಸಮಾವೇಶಗಳ ಸ್ಮರಣೆ ಗ್ರಂಥಗಳಿಗೆ ಹುಚ್ಚಪ್ಪನವರು ಒಳ್ಳೆಯ ಲೇಖನಗಳನ್ನು ಬರೆದಿದ್ದು ಇವು ಅಧ್ಯಯನಾರ್ಥಿಗಳಿಗೆ ಒಳ್ಳೆ ಆಕರಗಳಾಗಿ ನಿಂತಿವೆ.

ಲಕ್ಷ್ಮಣ ಕೊಡಸೆ: ಲಕ್ಷ್ಮಣ ಕೊಡಸೆಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರೈತ ಕುಟುಂಬದ ಮೊದಲ ಪೀಳಿಗೆಯ ಅಕ್ಷರಸ್ಥ. ಕಳೆದ ಸುಮಾರು 30 ವರ್ಷಗಳಿಂದ ನಗರದ ಜಂಜಡದ ಬದುಕಿನಲ್ಲಿದ್ದಾಗ್ಯೂ ಬಾಲ್ಯದ ಹಳ್ಳಿ ಮನಸ್ಸನ್ನು ಕಳಕೊಳ್ಳದ ವ್ಯಕ್ತಿ. ಅದನ್ನು ಬಹು ಆಪ್ತವಾಗಿ ಸಾಕಿಕೊಂಡೇ ಜಾಗತೀಕರಣದ ಆತಂಕಗಳ ಮಧ್ಯೆಯೇ ಬರೆಯುತ್ತಿರುವುದು ಬಹು ವಿಶೇಷ. ಪತ್ರಕರ್ತನಾಗಿ ಮೇಲೆ ಬಂದ ಕೊಡಸೆಯವರು ಪ್ರಜಾವಾಣಿ ಪತ್ರಿಕೆಗಳಲ್ಲಿ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿ ಸಹಾಯಕ ಸಂಪಾದಕನ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ. ಕಳೆದ 30 ವರ್ಷಗಳು ಪತ್ರಿಕೆಯಲ್ಲಿದ್ದು ‘ಬಲ್ಲಿದರೊಡನೆ’ ಎಂಬ ವ್ಯಕ್ತಿಪರಿಚಯ ಕೃತಿಯನ್ನು ಹೊರತುಪಡಿಸಿದರೆ, ಉಳಿದ ಸುಮಾರು ಹತ್ತು ಕೃತಿಗಳು ಅಪ್ಪಟ ಸಾಹಿತ್ಯಕ ನೆಲೆ-ಶೈಲಿಯಲ್ಲಿಯೇ ಬಂದಿವೆ. ಕಥೆ, ಕಾದಂಬರಿ ಹಾಗೂ ಒಂದೆರಡು ಸಂಪಾದನಾ ಕೃತಿಯನ್ನು ಬಹು ಸುಂದರವಾಗಿ ಹೊರತಂದಿದ್ದಾರೆ. ಪ್ರಮುಖವಾದ ಕಥಾ ಸಂಕಲನ ‘ಬಲ’, ‘ಮೈತ್ರಿ’, ‘ಅಪ್ಪ’, ‘ವಿಚಾರಣೆ’ ಹಾಗೂ ಕಾದಂಬರಿಗಳಾಗಿ ‘ಪಯಣ’., ‘ಭೂಮಿಹುಣ್ಣಿಮೆ’, ‘ನೆರಳು’, ‘ಪಾಡು’ ಇವುಗಳೆಲ್ಲಾ ಗ್ರಾಮೀಣ ನೆಲೆಯಂದಲೇ ಬಂದವುಗಳು. ತಾವು ಹುಟ್ಟಿ ಬೆಳೆದ ನೆಲದ ಸಂಸ್ಕøತಿಯಿಂದ ಬಹಳ ದೂರವಿದ್ದರೂ ಅದನ್ನು ಬಹು ಗಟ್ಟಿಯಾಗಿ ಹಿಡಿದಿಟ್ಟಿರುವುದು ಬಹು ವಿಶೇಷ. ಮಲೆನಾಡು ಪರಿಸರದ ಗ್ರಾಮೀಣ ಸಂಸ್ಕøತಿಗಳು ಕಣ್ಮರೆಯಾಗುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇವರ ಕೃತಿಗಳೆಲ್ಲಾ ಹಿತವೆನಿಸುತ್ತವೆ. ನಗರದ ಜಂಜಾಟಗಳ ಸುಳಿಗಳಿಗೆ ಬೆರಗಾಗಿ ಸಾಂಸ್ಕøತಿಕವಾಗಿ ನಾವೆಲ್ಲಾ ಕಳೆದುಹೋಗುತ್ತಿರುವ ಸಂದರ್ಭದಲ್ಲಿ ಕೊಡಸೆ ಅವರ ಗ್ರಾಮೀಣ ಬದುಕಿನ ಕೃತಿಗಳು ಬಹು ಅರ್ಥಪೂರ್ಣ.  ಊರುಮನೆ, ಕೇರಿಮನೆ, ಬೇಸಾಯ ಎಂಬ ನಂಬಿಕೆ, ಸಂಪ್ರದಾಯಗಳೆಲ್ಲಾ ಇವರ ಅವ್ವ, ಪಯಣಿಗ, ಭೂಮಿಹುಣ್ಣ್ಣಿಮೆ, ನೆರಳು, ಹಾಡು ಕೃತಿಗಳಲ್ಲಿ ಹೊರಹೊಮ್ಮಿವೆ. ಆ ಕಾಲಮಾನದ ಸಾಮಾಜಿಕ ಬದುಕಿನ ಅತಿ ಮಹತ್ವದ ಸಾಂಸ್ಕøತಿಕ ದಾಖಲೆಯಂತಿರುವ ಇವರ ಕಥೆ ಕಾದಂಬರಿಗಳು ಜಾನಪದ ಹಬ್ಬ ಹರಿದಿನಗಳು ಆಧುನಿಕತೆಯ ಅಬ್ಬರದ ನಡುವೆ ಮನುಷ್ಯ ಬದುಕಲು ಹೋರಾಟ ಮಾಡುತ್ತಿರುವುದನ್ನು ಸೊಗಸಾಗಿ ಚಿತ್ರಿಸಿವೆ. ಡಿಸೋಜ ಹೊರಗನಿಂದ ಒಳಗೆ ಬಂದು ದೀವರ ಸಂಸ್ಕøತಿಯನ್ನು ಬಾಚಿದವರು. ದೀವರ ಸಾಂಸ್ಕøತಿಕ ಹಾಗೂ ದೈನಂದಿನ ವಸ್ತುಪರಿಕರಗಳನ್ನು ಡಿಸೋಜಾರವರು ತಮ್ಮ ಕಥೆ, ಕಾದಂಬರಿಗಳಲ್ಲಿ ಉಪಯೋಗಿಸಿದಂತೆ ಮತ್ಯಾರೂ ಉಪಯೋಗಿಸಲಿಲ್ಲ. ಕೊಡಸೆಯವರು ಮೂಲತಃ ಅಲ್ಲಿಂದ ಬಂದವರೇ ಆದರೂ ಬದುಕಿನ ಗಟ್ಟಿ ದಿನಗಳನ್ನೆಲ್ಲಾ ರಾಜಧಾನಿಯ ಪತ್ರಿಕಾ ಅಕ್ಷರಗಳಲ್ಲಿಯೇ ಮುಳುಗಿದ್ದು ಆಗೊಮ್ಮೆ, ಈಗೊಮ್ಮೆ ಹೊರಬಂದು, ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ಉಣಬಡಿಸುತ್ತಾರೆ. ಇದೊಂದು ಸುಖ ಭೋಜನ. ಡಿಸೋಜ ಸಾಗರ ತಾಲ್ಲೂಕಿನ ರೈತಾಪಿ ಬದುಕನ್ನು ಸೆರೆ ಹಿಡಿದರೆ ಕೊಡಸೆಯವರು ಹೊಸನಗರ ತಾಲ್ಲೂಕಿನ ರೈತಾಪಿಗಳ ಬದುಕನ್ನು ಸೆರೆ ಹಿಡಿದಿದ್ದಾರೆ. ಡಿಸೋಜಾರವರ ಬರವಣಿಗೆಯಲ್ಲಿ ಇದು ದೀವರ ಬದುಕು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಕೊಡಸೆಯವರ ಬರವಣಿಗೆಯಲ್ಲಿ ಇದು ಜನಾಂಗವೊಂದರ ಬದುಕು ಎನ್ನುವ ರೀತಿಯಲ್ಲಿ ಕಥೆಗಳು ಹರಿಯುತ್ತವೆ. ದೇವರು ಬರುವವನು, ಕೊಟ್ಟಿಗೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಎಮ್ಮೆ ಏಕಾಏಕಿ ಸೋರು ಬಿಡುವುದನ್ನು ನಿಲ್ಲಿಸಿತು, ಅಂತ್ರದ ತಗಡಿಗೆ ಮೇಲೆ ಚಾಕು ತುದಿಯಿಂದ ಬರೆಯುವುದು, ನೆಂಟರ ಕಾಲಿಗೆ ನೀರು, ದೊಡ್ಡದು ಹಂದಿ, ಐದಾರು ಜನ ಹೊರುವಂಥ ದೊಡ್ಡ ಜೀವಾಂಧಿ, ಇವೆಲ್ಲಾ ಬ್ಯಾಡರಿತು, ಕೆಳಸೀಮಾರಲ್ಲಿ ಇರೋರೆಲ್ಲಾ ದೀವ್ರು, ಇವತ್ತು ಅವರ್ದೇನೋ ಹರಕೆ ಇದೆ ಅಂತ ಗೊತ್ತಾಯ್ತು ಅದಕ್ಕೆ ಊರೊಳಗೆ ಹೋಗದೇ ವಾಪಸು ಬಂದೆ ಎನ್ನುವ ಶೇಷಗಿರಿರಾಯರ ಮಾತು ಒಂದಾನೊಂದು ಕಾಲದಲ್ಲಿ ಈ ಕೊಟ್ಟಿಗೆ ಕಟ್ಟಿದ್ದೀವಲ್ಲ, ಈ ಜಾಗದಲ್ಲಿ ಹುಲಿ ಮಲಗಿತ್ತು. ನೋಡಿ, ಅಷ್ಟು ದೊಡ್ಡ ಕಾನು. ನೀವು ಇವತ್ತು ಪ್ಯಾಟಿಗೋಯ್ತೀರಲ್ಲ. ಚಿಮಣಿ ಎಣ್ಣೆ ತರಬೇಕು ನೋಡಿ ಎಂಬ ಮನೆಯೊಡತಿ ಸಾವಂತ್ರಕ್ಕನ ಕೂಗು ತೂರಿಬಂತು. ಈ ರೀತಿಯಲ್ಲಿ ಕೊಡಸೆಯವರ ಅನೇಕ ಕಥೆ, ಕಾದಂಬರಿಗಳಲ್ಲಿ ಬರುವ ಮಾತು ದೀವರ ಜನಾಂಗವನ್ನು ನೆನಪಿಸುತ್ತದೆ. ಡಿಸೋಜಾ ಈ ಜನರ ಸಾಂಸ್ಕøತಿಕ ಬದುಕನ್ನು ಬಹು ಸಂಭ್ರಮದಿಂದ ಬರೆದರೆ ಕೊಡಸೆಯವರು ಬಹು ಎಚ್ಚರಿಕೆಯಿಂದ ವಾಸ್ತವವಾದಿಯಂತೆ ಬರೆಯುತ್ತಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಕೊಡಸೆಯವರ ಒಂದು ಸುಂದರವಾದ ಒಂದು ಅಂಕಣ ‘ಹಾಯುದೋಣಿ’ಯನ್ನು ಬರೆಯುತ್ತಿದ್ದಾರೆ. ಪ್ರಕೃತಿ, ಕಾನು, ಮಳೆ, ಮಲೆನಾಡು ಪರಿಸರ, ಮೀನುಬೇಟೆ, ಹತ್ತುಮೀನು, ತ್ರಿವ್ಯಾದಿ ಪ್ರಸ್ತಾಪಗಳು ಬಂದಾಗಲೆಲ್ಲಾ ದೀವರ ಡೈಲೆಕ್ಟ್ ಹರಿಯುವ ಪರಿಯೇ ಬಹು ಸೊಗಸು.

ಡಾ. ಎಚ್.ಎಸ್. ಮೋಹನ್ ಚಂದ್ರಗುತ್ತಿ : ಶುದ್ಧ ಗ್ರಾಮೀಣ ಸೊಗಡಿನ ಯುವ ಬರಹಗಾರ. ಬಂದಿರುವ ಏಳೆಂಟು ಕೃತಿಗಳು ಇದೇ ಧ್ವನಿಯಲ್ಲಿ ಇರುವುದು ಬಹುಮುಖ್ಯ. ಮತ್ತೆ ಕೋಳಿ ಕಜ್ಜಾಯಕ್ಕೆ ಬರೋಣ. ಇದು ದೀವರ ವಿಶಿಷ್ಟ ಅಡುಗೆ ಮಾತ್ರವೇ ಅಲ್ಲ, ಅನನ್ಯತೆಯ ಸಂಕೇತ. ರೊಟ್ಟಿ, ಕರಿಮೀನು ಸಾರು, ಕಡಲು-ತುಕ್ಕಡಿ ಚೂರು, ತಂಬುಳಿಸಾರು, ಒಣತರಲೆಮೀನು ಇದೊಂಥರ ವಿಶೇಷ ಕಾಂಬಿನೇಷನ್. ಗದ್ದೆ ಒಕ್ಕುವ ಸಂದರ್ಭಗಳಲ್ಲಾಗಲೀ, ಆಲೇಮನೆ ಸೀಜನ್ನಿಗೆ ಒಣಮೀನು ಇದ್ದರೇನೇ ಊಟ ಸೇರುವುದು. ಕೋಳಿಸಾರು ಕಜ್ಜಾಯ ಮಾಡಿಕೊಂಡು ಒಂದು ಕೈಚೀಲದಲ್ಲಿ ಹಾಕಿಕೊಂಡು ಮೊಳ ಉದ್ದದ ಅಬ್ಬಲಿಗೆ ಹೂವು ತುರುಬಿಗೆ ಮುಡಿದುಕೊಂಡು, ಕೈತುಂಬಾ ಬಳೆ ತೊಟ್ಟುಕೊಂಡು ರಸ್ತೆಯಲ್ಲಿ ದೀವರ ಹೆಂಗಸರು ಹೊರಟರೆಂದರೆ ಯಾವುದೋ ನೆಂಟರ ಮನೆಯಲ್ಲಿ ಗರ್ಭಿಣಿಯೋ, ಹೆರಿಗೆಯಾದವರೋ ಅಥವಾ ಕಾಯಿಲೆ ಬಿದ್ದಿದ್ದಾರೆಂದೇ ಅರ್ಥ. ಬಸ್ಸಿನಲ್ಲಿ ಕುಳಿತವರೆಲ್ಲಾ ಈ ಪರಿಮಳವನ್ನು ಆಸ್ವಾದಿಸಬಹುದಾಗಿತ್ತು. ಆ ಜುಮುಕಿ, ಬೆಂಡೋಲೆ, ಚೈನು, ತಾಳಿಸರ, ಕುಬುಸದ ಖಣ ಇವೆಲ್ಲಾ ಒಂದು ರೀತಿಯ ಮೆರುಗು ಕೊಡುತ್ತಿತ್ತು.  ‘ಗನಗದಿಯನೇ ತಂಗಿ, ತಮ್ಮ’ ಎಂದುಕೊಳ್ಳುತ್ತಾ ಹೊರಟರೆಂದರೆ ಅದೊಂದು ವಿಶಿಷ್ಟಪೂರ್ಣ ಸೊಬಗಿನ ನೋಟ. ಒಂದು ಜನಾಂಗದ ಸಾಂಸ್ಕøತಿಕ ಕಥಾನಕ ತೆರೆದುಕೊಳ್ಳುವುದೇ ಅವರ ಉಡುಗೆ-ತೊಡುಗೆಗಳಲ್ಲಿ. ಹಾಗಾದರೆ ಇತ್ತೀಚೆಗೆ ಕಜ್ಜಾಯ ಕಡಮೆಯಾಯಿತು? (ಕೋಳಿ ಕಜ್ಜಾಯವೂ ಜಾಗತೀಕರಣವು) ಇದು ಮೋಹನ್ ತನ್ನ ಜನಾಂಗ, ಸಂಸ್ಕøತಿಯನ್ನು ತೆರೆದಿಡುವ ಪರಿ. ಎಲ್ಲೂ ಒಂದಿಷ್ಟು ಮುಜುಗರ ಮಾಡಿಕೊಳ್ಳದೇ ನೇರ, ಬಹುಸ್ಪಷ್ಟ, ಅಭಿಮಾನದ ಅಭಿವ್ಯಕ್ತಿ. ಇದು ಕೇವಲ ಅಂದಾಭಿಮಾನವಲ್ಲ. ಹೊಸತನವನ್ನು ಮೈಗೂಡಿಸಿಕೊಂಡರುವ ಈ  ಯುವ ಲೇಖಕ ಮರೆತೇ ಹೋಗಬಹುದಾದ ಬದುಕನ್ನು ಅವರದೇ ಆದ ಡೈಲೆಟ್‍ನಲ್ಲಿ ದಾಖಲಿಸುವುದು ಬಹು ಅನನ್ಯ. ಇವರ ‘ಸುರಗಿ ದಂಡೆ’ ಬಹು ವಿಶೇಷ ಕೃತಿ. ಸುರಗಿಹೂವು, ಸುರಗಿ ಮೊಗ್ಗು, ಸುರಗಿ ಮರ, ಸುರಗಿ ಹೂವು ಕಟ್ಟುವುದು, ಮುಡಿಯುವುದು ಇವೆಲ್ಲಾ ಕಣ್ಮರೆಯಾಗುತ್ತಿರುವ ಸಮಯದಲ್ಲಿ ಮೋಹನ್ ಸುರಗಿಹೂವನ್ನು ಬಹುಮುಖ್ಯ ರೂಪಕವಾಗಿ ಬಳಸಿಕೊಂಡು ಹೊರತಂದಿರುವ ಒಳ್ಳೆಯ ಕೃತಿ. ಇವರ ‘ಒಂಟಿ ನಡಿಗೆ’ ಸಂಕಲ ವಸ್ತುವಿಸ್ತಾರ, ವೈವಿಧ್ಯತೆಗಳನ್ನು ಹೊಂದಿರುವ ಕೃತಿ. ಹುಲ್ಲುಗರಿಕೆಗೂ ಹಸಿರುಬಣ್ಣ ಹೊಡೆಯುವ ಸಂಚಿನ ಸಂದರ್ಭದಲ್ಲಿ ಈ ಕೃತಿ ಬಹುಮುಖ್ಯ.

                ಚಂದ್ರಗುತ್ತಿ ಮೋಹನರ ಸಂಶೋಧನಾ ಕೃತಿ ‘ದೀವರು ಮಕ್ಕಳು’ ಒಂದರ್ಥದಲ್ಲಿ ಈ ಜನಾಂಗದ ಜೀವಾಳ. ಲೇಖಕರಿಗೆ ತನ್ನ ಸಮುದಾಯವನ್ನು ಕುರಿತು ಬರೆಯುವುದು ಸುಲಭವೂ ಹೌದು, ಕಷ್ಟವೂ ಹೌದು. ಸುಲಭ ಏಕೆಂದರೆ ಇದು ಲೇಖಕನ ಸ್ವಧರ್ಮ. ಕಷ್ಟಕ್ಕೆ ಕಾರಣ ಹತ್ತು ಹಲವು. ದೀವರಂತಹ ಒಂದು ಜನಾಂಗಕ್ಕೆ ಸಹಜವಾದ ಜನಾಂಗೀ ವ್ಯಾಮೋಹದ ಸಂಗತ. ಅವರ ನಡೆ-ಸಂಪ್ರದಾಯಗಳೆಲ್ಲವೂ ರಕ್ತದಲ್ಲಿ ಸೇರಿಕೊಂಡಿವೆ. ದೀವರು ರಾಜಕೀಯವಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುವ ಭರದಲ್ಲ್ಲಿ ತಮ್ಮ ಪಾರಂಪರಿಕ ಕಲೆ, ಶಕ್ತಿಗಳನ್ನು ಮರೆಯುತ್ತಿದ್ದಾರೆ ಎಂಬ ಅನಿಸಿಕೆ ಸುಳ್ಳಲ್ಲ. ಇಂತಹ ಸಂದರ್ಭದಲ್ಲಿ ಮೋಹನರ ಈ ಸಂಶೋಧನಾ ಗ್ರಂಥ ಬಹು ಮಹತ್ವಪೂರ್ಣ.

ಲೇಖಕರು, ಕವಿಗಳು, ಪತ್ರಕರ್ತರು : ಈ ಸಣ್ಣ ಸಮುದಾಯದೊಳಗಿನಿಂದ ಅನೇಕ ಸಾಹಿತಿಗಳು, ಪತ್ರಕರ್ತರು, ಸಂಪಾದಕರು, ಜಾನಪದ ವಿದ್ವಾಂಸರು ಬಂದಿರುವುದು ಸಂತೋಷದ ಸಂಗತಿ. ಮುಟಗುಪ್ಪೆ ಪರಶುರಾಮರವರ ‘ಜಪ್ತಿ’ ಕಂಥಾಸಂಕಲನವು ದೀವರ ಡೈಲಟ್‍ನಲ್ಲಿಯೇ ಬಂದಿದೆ. ನೇರಿಗೆ ನಾಗರಾಜ್‍ರವರ ಅನೇಕ ಸುಂದರ ಕಥೆಗಳು ಸಂಕಲನರೂಪದಲ್ಲಿ ಬರಬೇಕಾಗಿದೆ. ಶುಂಠಿ ಪರಮೇಶ್ವರವರ ಮುಳುಗಡೆ ಕಥಾಸಂಕಲನ ‘ಹಸಿವು’ ಪ್ರಮುಖ ಕೃತಿ.

                ಕವಿಯಾಗಿ ಹೆಸರು ಮಾಡಿರುವ ಶಶಿ ಸಂಪಳ್ಳಿಯವರ ಕವನಗಳು ಅಭಿವ್ಯಕ್ತಿಗೊಂಡಿರುವ ಪರಿಯೇ ಸೊಗಸು. ಶಿವರಾಮ ಕಾರಗಡಿ ಅವರು ಅನೇಕ ಬಿಡಿ ಕವನಗಳನ್ನು ರಚಿಸಿದ್ದಾರೆ. ಕೃಷಿಗೆ ಸಂಬಂಧಪಟ್ಟಂತೆ ಸೀತಾರಾಮ ಕುರುವರಿಯವರು ಬರೆದಿದ್ದಾರೆ.  ದೀವರ ಡೈಲೆಟ್‍ನಲ್ಲಿ ಮಂಜಪ್ಪ ಸೊರಬ ಅವರು ಅನೇಕ ಲೇಖನಗಳನ್ನು ಬರೆದಿರುವುದು ಬಹು ಅರ್ಥಪೂರ್ಣ. ಸರೋಜ ಚಂಗೊಳ್ಳಿಯವರ ಅನೇಕ ಪತ್ರಿಕಾ ಬರಹಗಳು ಇವೆ. ತೀರ್ಥಹಳ್ಳಿಯ ಡಾ. ನಾಗೇಶ್ ಬಿ.ಎಸ್. ಅವರ ಅನೇಕ ಸಮರ್ಥ ಕೃತಿಗಳು ಎಲ್ಲರ ಗಮನ ಸೆಳೆದಿವೆ. ಹೊಸನಗರದ ಸೋನಲೆ ಶ್ರೀನಿವಾಸ್‍ರವರ ಕವಿತಾ ಸಂಕಲನ ಬಹುಮುಖ್ಯ ಕೃತಿ. ದೀವರ ಡೈಲೆಟ್ಟನ್ನು ಬಹು ದಟ್ಟವಾಗಿ ಉಪಯೋಗಿಸುತ್ತಿರುವ ಕಿಡದುಂಬೆ ವಿಷ್ಣುಮೂರ್ತಿ ಅವರ ಅಪ್ಪನ ಕೋಟು, ಅಲ್ಲದೇ ಆಗಾಗ್ಗೆ ಪತ್ರಿಕೆಗಳಿಗೆ ಬರೆಯುತ್ತಿರುವ ಅವರ ಲೇಖನಗಳು ಗಾಢವಾಗಿ ತಟ್ಟುವಂಥದ್ದು. ದೀವರ ಸಾಂಸ್ಕøತಿಕ ಬದುಕನ್ನು ಸತತವಾಗಿ ಅಧ್ಯಯನ ಮಾಡುತ್ತಿರುವ ಮಡನೂರು ಗಣಪತಿಯವರ ಬರಹಗಳು ಬಹುಮುಖ್ಯವಾಗಿವೆ.

ಕೆ.ಪಿ. ಮಂಜುನಾಥ್, ಸಾಗರ : ಸಾಗರ ತಾಲ್ಲೂಕು ಭೈರಾಪುರದವರು. ತಮ್ಮದೇ ಸಂಪಾದಕತ್ವದ ಹೃದಯವಾಹಿನಿ ಪಾಕ್ಷಿಕ ಪತ್ರಿಕೆಯನ್ನು ಮಂಗಳೂರಿನಿಂದ ಹೊರತರುತ್ತಿದ್ದಾರೆ.  ಹೊರನಾಡು ಕನ್ನಡಿಗರ ಸಂಪರ್ಕದಲ್ಲಿರುವ ಶ್ರೀಯುತರ ಅನೇಕ ದೇಶಗಳಲ್ಲಿ ಕನ್ನಡ ಸಂಸ್ಕøತಿ ಸಮ್ಮೇಳನಗಳನ್ನು ಪ್ರತಿವರ್ಷ ಆಯೋಜಿಸುತ್ತಾ ಬಂದಿದ್ದು ಕನ್ನಡ ಸಾಹಿತ್ಯ ಸಾಂಸ್ಕøತಿಕ ಕ್ಷೇತ್ರದಲ್ಲಿ ಮಹತ್ವದ ಸಂಗತಿಯಾಗಿದೆ. 

ಎನ್. ಶಿವಾನಂದ ಕುಗ್ವೆ : ಸಾಗರದಲ್ಲಿ 80ರ ದಶಕದಿಂದ ದಲಿತ ಚಳವಳಿ ಹಾಗೂ ಅನೇಕ ಜನಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದು, ಸಾಮಾಜಿಕ ಕಾರ್ಯಕರ್ತರಾಗಿರುವ ಶಿವಾನಂದ ಕುಗ್ವೆ 1985ರಲ್ಲಿ ‘ಕೆಂಪು ತಾವರೆ’ ವಾರಪತ್ರಿಕೆ ನಡೆಸುವ ಮೂಲಕ ಪತ್ರಿಕಾಸೇವೆ ಮಾಡಿದ್ದಾರೆ. ನಂತರ ‘ಮಣ್ಣಿನ ವಾಸನೆ’ ಪತ್ರಿಕೆಯಲ್ಲಿ ದಲಿತ ಚಳವಳಿಯ ನೆನಪುಗಳು ಹಾಗೂ ಕಾಗೋಡು ಚಳವಳಿಯ ದಿನಗಳ ಬಗ್ಗೆ ಬರೆದ ಅಂಕಣ ಲೇಖನಗಳು ದಾಖಲೆಗೆ ಯೋಗ್ಯವಾಗಿವೆ.  ‘ಕಾಗೋಡು ಚಳವಳಿ ಸುವರ್ಣ ಸಂಪುಟ’ ಹಾಗೂ ‘ಕಾಗೋಡು ಚಳವಳಿಯ ಸ್ಮರಣ ಸಂಚಿಕೆ’ಗಳನ್ನು ಹೊರತಂದಾಗ ಕ್ಷೇತ್ರಕಾರ್ಯ ಮಾಡಿರುವುದು ಗಮನಾರ್ಹವಾಗಿದೆ.  ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾರೆ.

ವೀರಭದ್ರ ಸೂರಗುಪ್ಪೆ, ಹಾಗೆಯೇ ಇನ್ನೂ ಅನೇಕ ಬರಹಗಾರರು ಇದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಂತೂ ಈಗಾಗಲೇ ತುಂಬಾ ದೂರ, ಬಹು ಸಮರ್ಥವಾಗಿ ನಡೆದಿರುವ ಲಕ್ಷ್ಮಣ ಕೊಡಸೆ ಸೇರಿದಂತೆ ಸತ್ಯನಾರಾಯಣ, ಪ್ರಕಾಶ್ ಕುಗ್ವೆ, ನಾಗರಾಜ ನೆರಿಗಿ, ಅರವಿಂದ ಕರ್ಕಿಕೋಡಿ, ಬಸವರಾಜ ಸಂಪಳ್ಳಿ, ನಾಗರಾಜ ಕಲ್ಲುಕೊಪ್ಪ, ಸಂತೋಷ್‍ಕುಮಾರ್, ಜಗದೀಶ್ ಸಂಪಳ್ಳಿ, ಶಶಿ ಸಂಪಳ್ಳಿ, ವಿರೂಪಾಕ್ಷ ಹಾಲಗಳಲೆ, ಇವರೆಲ್ಲರ ಬಗ್ಗೆ ಒಂದು ಪ್ರತ್ಯೇಕ ಅಧ್ಯಯನ ಮಾಡಿದರೆ ಒಳಿತು.

                ಸಾಮಾಜಿಕ ಕಳಕಳಿಯ ಲೇಖನ, ವರದಿಗಳಿಗೆ ಹೆಸರಾಗಿರುವ ಹರ್ಷಕುಮಾರ ಕುಗ್ವೆ, ಲಕ್ಷ್ಮಣ ಟಿ. ನಾಯಕ, ನಾಗರಾಜ ಸೂರಗುಪ್ಪೆ, ಸೀತಾಲಕ್ಷ್ಮಿ ಕರ್ಕಿಕೋಡಿ, ಸಮಾಜಮುಖಿ ಪತ್ರಿಕೆಯ ಕನ್ನೇಶ ಕೋಲಸಿರ್ಸಿ, ಜಿ.ಟಿ. ಸತ್ಯನಾರಾಯಣ ಹೊಸ ತಲೆಮಾರಿನ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ.

 

ಲೇಖಕರು : ವಿಲಿಯಂ, 15/13, 2ನೇ ತಿರುವು, ನೆಹರೂನಗರ, ಸಾಗರ, ದೂರವಾಣಿ :08183-228123, 9480467608

 

 ನಾಮಧಾರಿ ನಾಯ್ಕ ಈ ಸಮಾಜದ ಸಂಪೂರ್ಣ ಇತಿಹಾಸದ ಅವಲೋಕನದ ಅನಾವರಣದ ಸಣ್ಣ ಪ್ರಯತ್ನ.

-ಸತೀಶ ನಾಯ್ಕ, ಪವರ್ ಆಪ್ ಎಕ್ಸ್‌ಪ್ರೆಸ್‌ ಪತ್ರಿಕೆ.ಭಟ್ಕಳ.ಉ.ಕ.

 ಹಳೆಪೈಕ :

ಹಳೆ ಅಂದರೆ ಪುರಾತನ, ಮೂಲತಃ,

ಪೈಕ ಅಂದರೆ ಗುಂಪು , ಒಕ್ಕೂಟ, ಕೂಟ, ಸಂಘ,

ಹಳೆಪೈಕ ಅಂದರೆ ಪುರಾತನ ಒಕ್ಕೂಟ, ಮೂಲ ಒಕ್ಕೂಟ ಎಂದಾಗುತ್ತದೆ.

ದೀವ ಅಂದರೆ ಬೆಳಕು, ಜ್ಞಾನ, ದೀಪ, ಜ್ಯೋತಿ.

ದೀವರು ಅಂದರೆ ಜ್ಞಾನವಂತರು.

ದೀವರು ನಾಯ್ಕ ಅಂದರೆ ವೀರತ್ವದ ಬೆಳಕಿನಡೆಗೆ ನಡೆಸುವ ನಾಯಕರು ಅಥವಾ ಯಜಮಾನರು.

ನಾಯ್ಕ ಅಂದರೆ ನಾಯಕ , ಮುಖಂಡ, ಮುಖ್ಯಸ್ಥ, ಯಜಮಾನ, ಕ್ಷತ್ರಿಯ.

ನಾಮಾಧಾರಿ ಅಂದರೆ ತಿಲಕವನ್ನು ಧರಿಸುವವನು,

ಪುರಾತನ ಕಾಲದಿಂದಲು ಪುರಾತನವಾದ ಒಕ್ಕೂಟವನ್ನು ಹೊಂದಿದ ಜನಾಂಗವನ್ನು ಅಥವಾ ಸಮುದಾಯವನ್ನು ಅಥವಾ ಪಂಗಡವನ್ನು ಅಥವಾ ವೀರರನ್ನು  ಹಳೆಪೈಕ ಎಂದು ಕರೆಯಲಾಗುತ್ತದೆ.

ಇಲ್ಲಿ ವಿಶ್ಲೇಷಣೆಯ ಬಗ್ಗೆ ಹೇಳ ಬೇಕೆಂದರೆ ಒಂದು ಸಮುದಾಯ ಅಥವಾ ಜನಾಂಗ ಒಗ್ಗಟ್ಟಿನಲ್ಲಿ ಒಕ್ಕೂಟವನ್ನು ಮಾಡಿ ಕೊಳ್ಳ ಬೇಕೆಂದರೆ ಆ ಜನಾಂಗದವರಲ್ಲಿ ಸಂಘಟನಾತ್ಮಕವಾದ ಮನೋಭಾವ ಸಂಘಟಿಸುವ ಶಕ್ತಿ ಇರಬೇಕಾಗುತ್ತದೆ. ಯಾವುದೇ ಸಂಘಟನೆಯನ್ನು ಮಾಡ ಬೇಕಾದರು ಅವರಲ್ಲಿ ಮುಖ್ಯವಾಗಿ ನಾಯಕತ್ವದ ಮುಂದಾಳತ್ವ ವಹಿಸುವ ಜ್ಞಾನವಿರಲೇ ಬೇಕಾಗುತ್ತದೆ.ಮತ್ತು ಅವರು ವೀರರು ಪರಾಕ್ರಮಿಶಾಲಿಗಳು ಆಗಿರಲೇ ಬೇಕಾಗುತ್ತದೆ.ಈ ವೀರತ್ವ ಮತ್ತು ಪರಾಕ್ರಮಿಶಾಲಿಗಳು ಆಗಿರುವವರು ಕ್ಷತ್ರಿಯರು ಮಾತ್ರ ಆಗಿರಲೂ ಮಾತ್ರ ಸಾಧ್ಯ. ಇಲ್ಲಿಗೆ ಹಳೆಪೈಕ ಎಂದರೆ ಕ್ಷತ್ರಿಯರು ಎನ್ನುವುದು ಎಲ್ಲರು ನಂಬಲೇ ಬೇಕಾದ ಸತ್ಯವಾಗಿ ಕಾಣುತ್ತದೆ. ಇಂದಿಗೂ ದೀವರಾದ ನಾಮಧಾರಿ ನಾಯ್ಕರಲ್ಲಿ ಒಕ್ಕೂಟ ಪದ್ದತಿ (ಕೂಟ) ಜಾರಿಯಲ್ಲಿದೆ.

ಇದರಿಂದ ನಮಗೆ ತಿಳಿಯಲ್ಪಡುವುದು ಹಳೆಪೈಕರು ಕ್ಷತ್ರಿಯ ಜನಾಂಗವಾಗಿತ್ತು. ಮತ್ತು ಪುರಾತನ ಕಾಲದಿಂದಲೂ ಯಜಮಾನರಾಗಿ ಅರಸರಾಗಿ ಆಡಳಿತ ನಡೆಸಿಕೊಂಡು ಬಂದವಾರಾಗಿರುತ್ತಾರೆ. ಹಾಗೂ ಕಾಲದ ಹೊಡೆತಕ್ಕೆ ಸಿಲುಕಿ ಅಂದರೆ ಯುದ್ಧದ ಸಮಯದಲ್ಲಿ ಹೋರಾಡಿ ವೀರ ಮರಣವನ್ನೋಪ್ಪಿ ಸೋತಾಗ ಬದುಕುಳಿದ ಸ್ತ್ರೀಯರು ಹಾಗೂ ಸಣ್ಣ ಸಣ್ಣ ಮಕ್ಕಳೊಂದಿಗೆ ಮತ್ತು ವಯಸ್ಸಾದ ಹಿರಿಯರೊಂದಿಗೆ ಪಶ್ಚಿಮ ಘಟ್ಟದ ಕರಾವಳಿ ಹಾಗು ಮಲೆನಾಡಿನ ದಟ್ಟ ಕಾಡುಗಳಲ್ಲಿ ಆಶ್ರಯವನ್ನು ಪಡೆದಂತೆ ಕಂಡು ಬರುತ್ತದೆ.

ಕಾಡಿನಲ್ಲಿ (ಕಾನನದಲ್ಲಿ) ವಾಸವಾಗಿದ್ದವರನ್ನ ಕಾನದೀವರು ಹಾಗೂ ತೆಂಕಣದಲ್ಲಿ ವಾಸವಾಗಿದ್ದವರನ್ನ (ತೆಂಕಣ ದಿಕ್ಕು (ತೆಂಕ್ ದಿಕ್ಕು)  ಇದರ ಅಪಭ್ರಂಶವಾಗಿ ತೆಂಗ ಬಂದಿರಬೇಕು) ತೆಂಗ ದೀವರು ಎಂದು ಗುರುತ್ತಿಸಿ ಕರೆದಿರಬೇಕು.ಹೀಗೆ ಮುಂದೆ ಮೂರ್ನಾಲ್ಕು  ತಲೆಮಾರುಗಳು ದಟ್ಟವಾದ ಕಾಡುಗಳಲ್ಲಿ ಅಲೆದಾಡಿ ಜೀವನೋಪಾಯಕ್ಕಾಗಿ ಕೃಷಿಯನ್ನು ಹಾಗೂ ಕಾಡುಗಳಲ್ಲಿ ಬೇಟೆಯಾಡಿ ಮತ್ತು ಕಾಡಿನಲ್ಲಿರುವ ತಾಳೆಮರದ ಕಾಂಡವನ್ನು ಕುಟ್ಟಿ ಪುಡಿಮಾಡಿ ಅದರ ಹಿಟ್ಟಿನಿಂದ ತಾಳೆ ಹಿಟ್ಟಿನ ಗಂಜಿ ಮಾಡಿ ಕುಡಿದು ಜೀವನ ಸಾಗಿಸಿದ ಹಾಗೆ ಕಂಡು ಬರುತ್ತಿದೆ. ಹೀಗೆ ಜೀವನ ಸಾಗಿಸುವುದೇ ಕಷ್ಟವಾದಾಗ ಕ್ಷತ್ರಿಯ ವಿದ್ಯೆಗಳಿಂದ ವಂಚಿತರಾಗಿ  ಮುಂದೆ ಇವರುಗಳು ಇತರರಿಂದ ದೌರ್ಜನ್ಯಕ್ಕೆ ಒಳಗಾಗಿ  ಬದುಕನ್ನು ಸಾಗಿಸಿದ ಹಾಗೆ ಕಂಡುಬರುತ್ತಿದೆ.

ಮೂಲತಃ ಇವರುಗಳು ತಿರುಪತಿಯ ತಿರುಮಲ ತಿಮ್ಮಪ್ಪನ ಭಕ್ತರಾದ ಇವರು ಮುಂದೆ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ವೈಷ್ಣವರಾಗಿ ನಾಮಧರಿಸುವುದರ ಮೂಲಕ ನಾಮಧಾರಿಗಳಾದಂತೆ ಕಂಡು ಬರುತ್ತಿದೆ. ಬಹುತೇಕವಾಗಿ ಎಲ್ಲಾ ಶೂದ್ರ ವರ್ಗಗಳು ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾದ ಸಂದರ್ಭದಲ್ಲಿ ಕ್ಷತ್ರಿಯ ಕುಲದವರಾದ ದೀವರು ಸಹ ಅವರಂತೆ ಶೂದ್ರರು ಎನಿಸಿ ಕೊಂಡಂತೆ ಕಂಡು ಬರುತ್ತದೆ.ಮುಂದೆ ನೂರಾರು ವರುಷ ದೌರ್ಜನ್ಯಕ್ಕೆ ಒಳಗಾಗಿ ಬಡತನದಿಂದ ಜೀವನ ಸಾಗಿಸಿ ಉಳ್ಳವರ ಹಾಗೂ ಕಂಡವರ ಜಮೀನುಗಳನ್ನು ಗೇಣಿಗೆ ತೆಗೆದುಕೊಂಡು ಹಾಗೂ  ಕಾಡಿನಲ್ಲಿರುವ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಊರಿನವರಿಗೆಲ್ಲಾ ಹಂಚಿಕೊಂಡು ಅಡುಗೆ ಮಾಡುತ್ತಿದ್ದರು ಮತ್ತು  ಊಟಕ್ಕೆ ಅನ್ನ ಇಲ್ಲದಿದ್ದರು ಕಾಡಿನಲ್ಲಿರುವ ತಾಳೆ ಮರದ ಕಾಂಡವನ್ನು ತಂದು ಪುಡಿ ಮಾಡಿ ಹಿಟ್ಟನ್ನಾಗಿಸಿ ನೀರಿನಲ್ಲಿ ಕುದಿಸಿ ಗಂಜಿ (ಅಂಬಲಿ) ಮಾಡಿ ಕುಡಿದು ಸ್ವಾಬಿಮಾನದಿಂದ ಜೀವನ ನಡೆಸಿದಂತೆ ಕಂಡು ಬರುತ್ತಿದೆ. ಇವರು ದೇವರ ಹೆಸರಲ್ಲಿ ಅಮಾಯಕ ಜನರಿಗೆ ಮೋಸ ಮಾಡಿ ಜೀವನ ಸಾಗಿಸಿರೋದು ಎಲ್ಲೂ ಕಂಡು ಬರುವುದಿಲ್ಲಾ.....

ಬ್ರಿಟಿಶ್ ಆಡಳಿತದ ಕಾಲದಲ್ಲಿ ಹಳೆಪೈಕ ಹಾಗು ಕೊಮಾರ ಪೈಕ ಇವೆರಡು ಪಂಗಡದವರು ಮೂಲತಃ ಯೋಧರಾಗಿದ್ದು, ಬ್ರಿಟೀಶರಿಗ ಸಿಂಹ ಸಿಂಹ ಸ್ವಪ್ನವಾಗಿದ್ದರೆಂಬ ಖ್ಯಾತಿಯನ್ನು ಹೊಂದಿದ, ಸಮಸ್ಯಾತ್ಮಕ ಬುಡಕಟ್ಟಿನವರಾಗಿ ತಲೆದೋರಿದ್ದರು. ಒಂದಾನೊಂದು ಕಾಲದಲ್ಲಿ, ವಿಜಯನಗರದ ಅರಸರಿಗೆ ಹಾಗು ಕರಾವಳಿಯ ಪಾಳೆಗಾರರಿಗೆ ಸೈನ್ಯಕ್ಕೆ ಯೊಗ್ಯವಾದ ಹಿನ್ನೆಲೆಯನ್ನುಳ್ಳ ಜನಾಂಗವಾಗಿದ್ದವು. ಈ ಜಾತಿಯ ಮೂಲಸ್ಥಳದ ಬಗ್ಗೆ ಯಾವುದೆ ಮಾಹಿತಿ ಸಿಗುವುದಿಲ್ಲ.ಇದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ. ಮತ್ತು ಅದರ ಬಗ್ಗೆ ನಿರಂತರವಾದ ಪ್ರಯತ್ನವು ನಡೆಯುತ್ತಿದೆ. ಸತೀಶ ನಾಯ್ಕ, ಪವರ್ ಆಪ್ ಎಕ್ಸ್‌ಪ್ರೆಸ್‌ ಪತ್ರಿಕೆ.ಭಟ್ಕಳ.ಉ.ಕ.

ಆದರೆ ಈ ಜನಾಂಗದ ಒಂದು ಪಂಗಡದ ಒಬ್ಬ ಸ್ವಾಮಿ ಅಥವಾ ಗುರು,ವಿಜಯನಗರದ ಆನೆಗುಂದಿಯಲ್ಲಿದ್ದನೆಂಬ ಆಧಾರದ ಮೇಲೆ ಈ ಜನಾಂಗದ ಸಂಪ್ರದಾಯವು ವಿಜಯನಗರ ಸಾಮ್ರಜ್ಯಕ್ಕೆ ಸಂಬಂಧಿಸಿದಂತೆ ಕಾಣುತ್ತದೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಭಾಗದ ಹಿಂದೂ ಸಮ್ರಾಜ್ಯದಲ್ಲಿ ಸೇನಾ ನಾಯಕರರಾಗಿದ್ದರೆಂದೂ ಅತ್ಯುತ್ತಮ ಸೈನಿಕ ತುಕಡಿಯನ್ನು ಹೊಂದಿದ ಪಡೆಯವರಾಗಿದ್ದರೆಂದೂ ಊಹಿಸಲಾಗಿದೆ. ವರ್ತಮಾನದಲ್ಲಿ ಅವರು ಕರಾವಳಿ ತಾಲ್ಲೂಕುಗಳಾದ ಅಂಕೋಲಾ,ಕುಮಟ,ಹೊನ್ನಾವರ ಹಾಗೂ ಘಟ್ಟದ ಮೇಲಿನ ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ವ್ಯಾಪಕವಾಗಿ ಇದ್ದಾರೆ.

ಹಳೆಪೈಕರ ಗುರುವಾದ ಮೈಸೂರು ಪ್ರಾಂತ್ಯದ, ಸಾಗರದ ಲೋಕಾಚಾರ್ಯನು ಇವರ ಮೂಲದ ಬಗ್ಗೆ ಒಂದು ಕತೆಯನ್ನು ಹೇಳುತ್ತಾನೆ: ಹೊಯ್ಸಳರ ಅರಸು ವೀರನರಸಿಂಹ ೨ ಭೂಪಾಲನ ಕಾಲದಲ್ಲಿ ಅವರ ಸೇವಕನಾದ ರಂಗನಾಯ್ಕ ಹಾಗೂ ಅವನ ಹೆಂಡತಿ ಭಾಮಿನಿಗೆ ಶ್ರೀಲಕ್ಷ್ಮಿಯ ಅನುಗ್ರಹದಿಂದ ಒಂದು ಗಂಡು ಮಗುವಾಗುತ್ತದೆ. ಅದು ಕುಮಾರಕ್ಷೇತ್ರ ಎನ್ನುವ ಸ್ಥಳ. ಸುಮಾರು ೧೧೪೩ನೇ ಶಖ ವರ್ಷದಲ್ಲಿ ಕಾರ್ತಿಕದ ಏಳನೇ ದಿನ ಆ ಮಗುವಿಗೆ ನಾರಾಯಣ ಎಂದು ಹೆಸರಿಡುತ್ತಾರೆ. ಒಂದು ದಿನ ನಾರಾಯಣನೆಂಬ ಆ ಮಗು ಬೀದಿಯಲ್ಲಿ ಆಡುತ್ತಿರುವಾಗ  ಹೊಯ್ಸಳರ ಅರಸು ವೀರನರಸಿಂಹ ೨ ಭೂಪಾಲನ ಮಗ ವೀರ ಸೋಮೇಶ್ವರ ರಾಜನು ರಥದ ಮೇಲೆ ಆ ಹಾದಿಯಲ್ಲಿ ಹಾದು ಹೋಗುತ್ತಿರುವಾಗ ಈ ಮಗುವನ್ನು ನೋಡುತ್ತಾನೆ. ಆ ಮಗುವಿನಲ್ಲಿದ್ದ ರಾಜಕಳೆಯನ್ನು ನೋಡಿ, ಎತ್ತಿಕೊಂಡು ಹೋಗಿ ಅರಮನೆಯಲ್ಲಿ ಬೆಳೆಸುತ್ತಾನೆ. ಆ ಮಗುವಿನ ಹದಿನಾರನೆ ವಯಸ್ಸಿಗೆ, ರಾಜಕುಮಾರನಿಗೆ ಕೊಡಿಸುವ ಶಿಕ್ಷಣವನ್ನು ಕೊಡಿಸುತ್ತಾನೆ. ಅವನನ್ನು ಆಡಳಿತದಲ್ಲಿ ಪ್ರಮುಖ ವಿಷಯಗಳನ್ನು ನಿರ್ವಹಿಸಲು ನೇಮಕ ಮಾಡಲಾಗುತ್ತದೆ. ನಂತರ ಅವನನ್ನು ಸೇನಾದಂಡನಾಯಕನನ್ನಾಗಿ ಮಾಡುತ್ತಾರೆ. ಅವನ ಅಪ್ರತಿಮ ಸಾಹಸ ಕಾರ್ಯವನ್ನು ಮೆಚ್ಚಿ ಗೌರವಿಸಲಾಗುತ್ತದೆ. ಈ ಸಮಯದಲ್ಲಿ, ನಾರಾಯಣನ ತಂದೆ ರಂಗನಾಯ್ಕನು ಹೇಗೋ ಮಾಡಿ ನಾರಾಯಣನನ್ನು ಭೇಟಿ ಮಾಡುತ್ತಾನೆ. ನಾರಾಯಣನಿಗೆ , ರಂಗನಾಯ್ಕ ಹಾಗೂ ಭಾಮಿನಿಯ ಕಳೆದು ಹೋದ ಮಗ ತಾನೆ ಎಂದು ಗೊತ್ತಾಗುತ್ತದೆ. ರಂಗನಾಯ್ಕನು ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಸೊರಗಿ ಹೋಗಿರುತ್ತಾನೆ. ವೀರ ಸೋಮೇಶ್ವರನಿಗೆ ನಾರಾಯಣನ ದೈನ್ಯತೆಯ ಮೂಲ ತಿಳಿಯುತ್ತದೆ. ನಂತರ ರಾಜನು, ನಾರಾಯಣನಿಗೆ ಟಂಕಶಾಲೆಯ ಉಸ್ತುವಾರಿಯನ್ನು ವಹಿಸಿಕೊಟ್ಟು, "ಹಳೆಪೈಕ" ಎಂಬ ಹಳ್ಳಿಯನ್ನು ಅವನಿಗೂ ಹಾಗೂ ಅವನ ಪೂರ್ವಜರಿಗೂ ಅನುಭವಿಸಲು ಜಾಗೀರು ಕೊಡುತ್ತಾನೆ. ಈ ಸಮಯದಲ್ಲಿ ನಾರಾಯಣನ ವಂಶಸ್ಥರಲ್ಲಿ ಕೆಲವರು ಯಾತ್ರೆಗೆ ಹೋಗುತ್ತಾರೆ. ಅವರು ರಾಮೇಶ್ವರ, ಕಾಶಿ, ತಿರುಪತಿ, ಶ್ರೀರಂಗ, ಉಡುಪಿ, ಗೋಕರ್ಣ ಹಾಗೂ ಹೊಯ್ಸಳರ ಸಾಮಂತರಾದ ಇಕ್ಕೇರಿಯ ವೆಂಕಟಪ್ಪನಾಯ್ಕ ಹಾಗೂ ಕೆಳದಿ ಸಂಕಣ್ಣನಾಯ್ಕನ ಆಸ್ಥಾನಕ್ಕೂ ಬೇಟಿ ಕೊಡುತ್ತಾರೆ. ಅಲ್ಲಿ, ಅವರನ್ನು ಆನೆಗುಂದಿ ಹಾಗೂ ಚಂದಾವರದ ಆಸ್ಥಾನದಲ್ಲಿ ಪ್ರಮುಖ ಖಾತೆಗಳನ್ನು ಕೊಟ್ಟು! ಇರಿಸಿಕೊಳ್ಳಲಾಯಿತು. ಆದ್ದರಿಂದ ಅವರು ಕುಮಟ ತಾಲ್ಲೂಕಿನ ಚಂದಾವರದಲ್ಲಿ ವಾಸಿಸತೊಡಗಿದರು. ಹಳೆಪೈಕರು ಸುಸಂಘಟಿತ ಸಮುದಾಯವಾಗಿದ್ದು ತಮ್ಮ ಸರಹದ್ದನ್ನು ಹದಿನಾಲ್ಕು (ಒಕ್ಕೂಟ) ಸೀಮೆಗಳಾಗಿ ಅಂದರೆ ಹೋಬಳಿಗಳಾಗಿ (ಒಕ್ಕೂಟಗಳಾಗಿ) ವಿಭಜಿಸಿಕೊಂಡಿದ್ದಾರೆ. ಅವುಗಳು ಕರಾವಳಿ ಹಳೆಪೈಕರ ಸೀಮೆಗಳು (ಒಕ್ಕೂಟ):

೧] ಚಂದಾವರ ೨] ಮಿರ್ಜನ ೩] ಗೇರುಸೊಪ್ಪ ೪] ಅಂಕೋಲ ೫) ಭಟ್ಕಳದ ಮಾವಳ್ಳಿ  ೬) ಭಟ್ಕಳದ ಸೂಸಗಡಿ

ಈ ಆರು ಸೀಮೆಗಳಲ್ಲಿ ಚಂದಾವರ ಸೀಮೆಯು ಮೊದಲಿನದು. ಚಂದಾವರದ ಹತ್ತಿರದಲ್ಲಿರುವ ಕೋನಳ್ಳಿ ಈ ಜನಾಂಗದ ಕೇಂದ್ರ ಸ್ಥಳ. ಇದಕ್ಕೆ ತಾಯಿಸ್ಥಳ ಎನ್ನುತ್ತಾರೆ. ಇವರ ಪ್ರತಿಯೊಂದು ಸೀಮೆಯಲ್ಲಿ (ಹೋಬಳಿಯ ಒಕ್ಕೂಟ) ಒಂದೊಂದು ಒಕ್ಕೂಟ ಇರುತ್ತದೆ, ಮತ್ತು ಒಕ್ಕೂಟದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕುಲದೇವರ ದೇವಸ್ಥಾನದಲ್ಲಿ ನಡೆಯುತ್ತದೆ. ಪ್ರತಿದೇವಾಲಯದಲ್ಲೂ ಒಂದು ಗುರು ಪೀಠವು ಇರುತ್ತದೆ. ಈ ಗುರು ಪೀಠದಲ್ಲಿ ಗುರುಗಳು ಕುಳಿತುಕೊಂಡು ತಮ್ಮ ಅನುಯಾಯಿಗಳಿಗೆ ಪ್ರವಚನವನ್ನು ನೀಡಲಾಗುತ್ತಿತ್ತು ಎಂದು ತಿಳಿಯಲಾಗಿದೆ. ಸತೀಶ ನಾಯ್ಕ, ಪವರ್ ಆಪ್ ಎಕ್ಸ್‌ಪ್ರೆಸ್‌ ಪತ್ರಿಕೆ.ಭಟ್ಕಳ.ಉ.ಕ.

ಘಟ್ಟದ ಮೇಲಿನ ಹಳೆಪೈಕರ ಸೀಮೆಗಳು .

೧) ಯಲ್ಲಾಪುರ 2) ಸೋಂದ೩) ಕರೂರು೪) ಸಿರಸಿ ೫) ಹೇಳೂರು ೬) ಬನವಾಸಿ ೭) ಇಸ್ಲೂರು ೮) ಬಿಳಗಿ ಈ ಎಂಟು ಸೀಮೆಗಳಲ್ಲಿ ಬಿಳಗಿ ಸೀಮೆಗೆ ಉನ್ನತ ಸ್ಥಾನವಿದೆ. ಇದರ ಕೇಂದ್ರ ಸ್ಥಳ ಬೆಲ್ಲಹಳ್ಳಿ (ಬೆಲ್ಹಾಳಿ-BELLHALI). ಅಲ್ಲೊಂದು ಮಠವಿದ್ದು ಅಲ್ಲಿ ಒಬ್ಬ ತ್ರಿನಾಮಧಾರಿ ಗುರುವಿರುತ್ತಾನೆ. ಒಂದೊಂದು ಸೀಮೆಗೂ (ಒಕ್ಕೂಟಕ್ಕೂ) ಹಲವಾರು ಹಳ್ಳಿಗಳು ಸೇರುತ್ತವೆ. ಪ್ರತಿ ಸೀಮೆಗೆ (ಕೂಟಕ್ಕೂ) "ಬುದ್ದವಂತ"ನೆಂಬ ಮುಖ್ಯಸ್ಥನಿರುತ್ತಾನೆ.( ಮುಖ್ಯಸ್ಥ್ಯನಾಗುವುದು ವಂಶ ಪಾರಂಪರ್ಯವಾಗಿ). ಈ ಜನಾಂಗದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸೇರುವ ಸಭೆಗೆ ಇವನೇ ಮುಖ್ಯಸ್ಥನಾಗಿರುತ್ತಾನೆ. ಪರಿಹರಿಸಲಾಗದ ಸಮಸ್ಯೆಗಳನ್ನು ಯಜಮಾನನಿಗೆ ವಹಿಸಲಾಗುತ್ತದೆ. ಯಜಮಾನ ಹಲವು ಸೀಮೆಗಳಿಗೆ ಮುಖ್ಯಸ್ಥನಾಗಿರುತ್ತಾನೆ.

ಮಲೆನಾಡಿನ ಹಳೆಪೈಕರ (ದೀವರ) ಸೀಮೆಗಳು :

ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳ ದೀವರಲ್ಲಿ ಸುಧಾರಣಾವಾದಿ ನಾಯಕರುಗಳು ಸೇರಿ 1931ರಲ್ಲಿ ಪುರಾತನ ನಾಮಧಾರಿ ವಿಷ್ಣುಭಕ್ತರ ಸಂಘವನ್ನು ರಚನೆ ಮಾಡಿದ್ದು, ಅದೇ ವರ್ಷ ದಿನಾಂಕ 02.03.1931ರಂದು ಸಂಘದ ಪ್ರಥಮ ಮಹಾಸಭೆಯನ್ನು ಸಿದ್ದಾಪುರ ತಾಲ್ಲೂಕು ಕೋಲಸಿರ್ಸಿಯಲ್ಲಿ ಕರೆಯಲಾಗಿತ್ತು. ಕರ್ನಾಟಕ ವಿಷ್ಣುಭಕ್ತ ನಾಮಧಾರಿ ಸಮಾಜದ ಸುಧಾರಣಾವಾದಿಗಳು ಸೇರಿ ಈ ಮಹಾಸಭೆಯಲ್ಲಿ ಮಹತ್ವವಾದ ನಿರ್ಣಯಗಳನ್ನು ಮಾಡಿದ್ದಾರೆ. ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳನ್ನು ಹದಿನೇಳು ಸೀಮೆಗಳನ್ನಾಗಿ ವಿಂಗಡಿಸಿದ್ದಾರೆ. ಅವು ಹೀಗಿವೆ.

1) ಬಿಳಗಿ ಸೀಮೆ   2) ಕೆಳದಿ ಸೀಮೆ  3) ಕ್ಯಾಸನೂರು ಸೀಮೆ  4) ಚಿಟ್ಟೂರು ಸೀಮೆ   5) ಇಕ್ಕೇರಿ ಸೀಮೆ   6) ಬೆಳಂದೂರು ಸೀಮೆ  7) ಹೊಸಗುಂದ ಸೀಮೆ   8) ಶಿರವಂತೆ ಸೀಮೆ  9) ಆವಿನಹಳ್ಳಿ ಸೀಮೆ 10) ತವನಂದಿ ಸೀಮೆ  

11) ಸೊರಬ ಸೀಮೆ  12) ಕರೂರು ಸೀಮೆ 13) ಗುತ್ತಿ ಸೀಮೆ  14) ಮಳಲಿ ಸೀಮೆ15) ಅಂಡಿಗೆ ಸೀಮೆ 16) ಹೇರೂರು  ಸೀಮೆ 17) ತೋಟ ಸೀಮೆ.

 ಈ ಹದಿನೇಳು ಸೀಮೆಗಳನ್ನು ಕಟ್ಟೆಗಳಾಗಿ ವಿಂಗಡಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.

1) ಹೊಸೂರು   2) ಕೋಲಸಿರ್ಸಿ 3) ಹಾಸಣಗಿ 4) ಸೆಟ್ಟಳ್ಳಿ  5) ಬೂದಗಿತ್ತಿ  6) ಕಾನಲೆ  7) ಹರೀಶಿ ಮಂಗಳೂರು         8) ಗೋಣುರು.

ಪುರಾತನ ನಾಮಧಾರಿ ವಿಷ್ಣುಭಕ್ತರ ಸಂಘ ಸಾಗರ, ಸೊರಬ ಹಾಗೂ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳ ವ್ಯಾಪ್ತಿಯನ್ನು ಹೊಂದಿದ್ದು ಈ ನಾಲ್ಕು ತಾಲ್ಲೂಕುಗಳನ್ನು ಹದಿನೇಳು ಸೀಮೆಗಳು ಮತ್ತು ಎಂಟು ಕಟ್ಟೆಗಳನ್ನಾಗಿ ವಿಭಾಗ ಮಾಡಿಕೊಂಡಿದ್ದಾರೆ. ಪ್ರಥಮ ಮಹಾಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈಗ್ಯೆ ಎಂಭತೈದು ವರ್ಷಗಳ ಹಿಂದಿನಿಂದಲೂ ಸುಧಾರಣಾವಾದಿಗಳು ಸಮಾಜದ ಬದಲಾವಣೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕೋಲ ಸಿರ್ಸಿಯಲ್ಲಿ ನಡೆದ ಪ್ರಥಮ ಮಹಾಸಭೆಯ ಅಧ್ಯಕ್ಷತೆಯನ್ನು ಆ ಕಾಲದಲ್ಲಿ ಬುದ್ಧಿವಂತರಾಗಿದ್ದ ಸಿದ್ದಾಪುರ ತಾಲ್ಲೂಕು ಶಿರಳಗಿ ಗ್ರಾಮ ಶ್ರೀ ಗೋವಿಂದ ಪುಟ್ಟನಾಯ್ಕರು ವಹಿಸಿದ್ದರು.

ದ್ವಿತೀಯ ಮಹಾಸಭೆ ದಿನಾಂಕ 26.03.1932ರಂದು ಸಾಗರ ತಾಲ್ಲೂಕು ಮರತ್ತೂರು ಗ್ರಾಮದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಶ್ರೀ ಬಿಷ್ಟಪ್ಪ ದ್ಯಾವಪ್ಪ, ಸೊರಬ ತಾಲ್ಲೂಕು ಇವರು ವಹಿಸಿದ್ದರು. ಈ ಸಭೆಯಲ್ಲಿ ನಾಲ್ಕು ತಾಲ್ಲೂಕುಗಳಿಂದ ಸುಮಾರು ಒಂದೂವರೆ ಸಾವಿರ ಜನರು ಸೇರಿದ್ದರು. ಎಂಭತ್ತು ವರ್ಷಗಳ ಹಿಂದೆ ಜನಾಂಗೀಯ ಸುಧಾರಣೆ ಸಭೆಗೆ ಬೇರೆ ಬೇರೆ ತಾಲ್ಲೂಕುಗಳಿಂದ ಒಂದೂವರೆ ಸಾವಿರ ಜನರು ಸೇರಿದ್ದರು ಎಂದರೆ ಆಶ್ಚರ್ಯಪಡುವ ವಿಚಾರವಾಗಿದೆ. ಜಾತಿಯ ಸುಧಾರಣೆ ಬಗ್ಗೆ ಜನಕ್ಕೆ ಇರುವ ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ. 1931 ಮತ್ತು 1932ರಲ್ಲಿ ನಡೆದ ಮಹಾಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಎರಡು ಪುಸ್ತಿಕಗಳಲ್ಲಿ ಪ್ರಕಟಿಸಿರುವುದು ಅಂದಿನ ಜನಾಂಗದ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಈ ಪುಸ್ತಿಕೆಗಳಲ್ಲಿರುವ ಕೆಲವು ಭಾಗಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಸತೀಶ ನಾಯ್ಕ, ಪವರ್ ಆಪ್ ಎಕ್ಸ್‌ಪ್ರೆಸ್‌ ಪತ್ರಿಕೆ.ಭಟ್ಕಳ.ಉ.ಕ.

ದಿನಾಂಕ 02.03.1931ರಂದು ಸಿದ್ದಾಪುರ ತಾಲ್ಲೂಕು ಕೋಲಸಿರ್ಸಿಯಲ್ಲಿ ನಡೆದ ಪ್ರಥಮ ಮಹಾಸಭೆಯಲ್ಲಿ ಸಾಗರ, ಸೊರಬ, ಸಿದ್ದಾಪುರ, ಶಿರಸಿ ಈ ನಾಲ್ಕು ತಾಲ್ಲೂಕುಗಳನ್ನು ಹದಿನೇಳು ಸೀಮೆಗಳು ಮತ್ತು ಎಂಟು ಕಟ್ಟೆಗಳನ್ನಾಗಿ ವಿಂಗಡಿಸಿ ಮುಖ್ಯವಾಗಿ ನಾಮಧಾರಿ ವಿಷ್ಣುಭಕ್ತರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಲಾಗಿದೆ ಮತ್ತು ಹದಿನೇಳು ಸೀಮೆಗಳಿಗೆ, ಎಂಟು ಕಟ್ಟೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

1931ರ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ದೀವರ ಸುಧಾರಣೆಗೆ ಪ್ರಯತ್ನ ನಡೆದಂತೆ ಕಾಣುವುದಿಲ್ಲ. ಈ ಬಗ್ಗೆ ದಾಖಲೆಗಳೂ ದೊರಕುವುದಿಲ್ಲ. 1931ರಲ್ಲಿ ಪ್ರಾರಂಭಗೊಂಡ ನಾಮಧಾರಿ ವಿಷ್ಣುಭಕ್ತರ ಸಂಘದ ಕಾರ್ಯಕ್ರಮಗಳ ಬಗ್ಗೆ ಎರಡು ಪುಸ್ತಿಕೆಗಳನ್ನು ಪ್ರಕಟಿಸಿರುವುದನ್ನು ಬಿಟ್ಟರೆ ಬೇರೆಯಾದ ದಾಖಲೆಗಳು ಕಂಡುಬರುವುದಿಲ್ಲ. ಈ ಸಂಘದ ಪದಾಧಿಕಾರಿಗಳು ದೀವರು ದಟ್ಟವಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಈ ನಾಲ್ಕು ತಾಲ್ಲೂಕುಗಳನ್ನು ಸೇರಿಸಿ ಹದಿನೇಳು ಸೀಮೆಗಳನ್ನಾಗಿ ವಿಂಗಡಿಸಿದ್ದಾರೆ. ಆಡಳಿತದ ಅನುಕೂಲಕ್ಕಾಗಿ ಹದಿನೇಳು ಸೀಮೆಗಳನ್ನು ಎಂಟು ಕಟ್ಟೆಗಳಾಗಿ ವಿಂಗಡಿಸಿದ್ದಾರೆ.

ಹಿಂದಿನ ನಮ್ಮ ಸಮಾಜದ ಹಿರಿಯರು ದೀವರು ಸಾಕಷ್ಟು ಸಂಖ್ಯೆಲ್ಲಿರುವ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳನ್ನು ಸಂಘಟನೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದಾರೆ. ಬಹುಶಃ ಆ ತಾಲ್ಲೂಕುಗಳು, ಸಾಗರದಿಂದ ಹೊಸನಗರ 42, ತೀರ್ಥಹಳ್ಳಿ 76 ಕಿಲೋಮೀಟರು ದೂರದಲ್ಲಿರುವುದೇ ಕಾರಣವಾಗಿರಬಹುದು. ನಾಮಧಾರಿ ವಿಷ್ಣುಭಕ್ತರ ಸಂಘದಂದ ಅತ್ಯಂತ ಹಿಂದುಳಿದ ಸಮಾಜದ ಬದಲಾವಣೆಗೆ ಸಾಕಷ್ಟು ಪ್ರಯತ್ನ ನಡೆದಿರುವುದು ಕಂಡುಬರುತ್ತದೆ.

ಸ್ವಾತಂತ್ರ್ಯಾನಂತರ ಸೊರಬ ತಾಲ್ಲೂಕಿನಲ್ಲಿ 1948ರಲ್ಲಿ ಸೊರಬ ತಾಲ್ಲೂಕಿಗೆ ಸೀಮಿತವಾದ ಹಾಲಕ್ಷತ್ರಿಯ ಸುಧಾರಣಾ ಸಂಘ ಸ್ಥಾಪನೆ ಮಾಡಿ ಇದರ ಮೂಲಕ ಸಮಾಜ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬರುತ್ತದೆ. ಸಂಘದ ಸಂಸ್ಥಾಪಕರಲ್ಲೊಬ್ಬರಾದ ಸೊರಬ ಟೌನ್ ಮುನ್ಸಿಪಲ್ ಮುತ್ಸದ್ದಿಯವರಾದ ಶ್ರೀ ಕೆ. ಬಂಗಾರಪ್ಪನವರು ‘ಹಾಲಕ್ಷತ್ರಿಯ ಸುಧಾರಣಾ ಸಂಘದ ನಿರ್ಣಯಗಳು’ ಎಂಬ ಪುಸ್ತಿಕೆಯನ್ನು ಬರೆದು 1948ರಲ್ಲಿ ಪ್ರಕಟಿಸಿದ್ದಾರೆ. ಆ ಕಾಲದ ಪ್ರಸಿದ್ಧ ಸಮಾಜ ಸುಧಾರಕರಾದ ಶ್ರೀ ಕೆ.ಎಚ್. ಮರಿಯಪ್ಪನವರು ಮುನ್ನುಡಿ ಬರೆದಿದ್ದಾರೆ. ಸೊರಬ ತಾಲ್ಲೂಕು ಸಲಹಾ ಸಮಿತಿಯವರಿಂದ ಅನುಮೋದಿಸಲ್ಪಟ್ಟಿದೆ. ಮುಂದುವರಿಯುತ್ತದೆ.......

ಸತೀಶ ನಾಯ್ಕ

ಸಂಪಾದಕರು

ಪವರ್ ಆಫ್ ಎಕ್ಸಪ್ರೆಸ್ ಪತ್ರಿಕೆ. ಭಟ್ಕಳ.

Mob: 9480864148