ದೀವರು ಆಚರಿಸುವ ಹಬ್ಬಗಳು

                ದೀವರು ಸಮುದಾಯದವರು ಹಿಂದುಗಳು ಆಚರಿಸುವ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ವಿಶೇಷವಾಗಿ ಭೂಮಿ ಹುಣ್ಣಿಮೆ, ಗೌರಿಹಬ್ಬ, ದೀಪಾವಳಿ, ಆರಿದ್ರಾ ಮಳೆ ಹಬ್ಬ ಮತ್ತು ಭೂತನ ಹಬ್ಬಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುತ್ತಾರೆ.

ಶಿವರಾತ್ರಿ ಹಬ್ಬ

                ಈ ಹಬ್ಬವನ್ನು ಕೆಲವರು ಶಿವರಾತ್ರಿಯ ದಿವಸ, ಇನ್ನು ಕೆಲವರು ಶಿವರಾತ್ರಿ ದಿವಸ ಉಪವಾಸವಿದ್ದು ಮರುದಿವಸ ಆಚರಿಸುತ್ತಾರೆ.

                ದೀವರಲ್ಲಿ ಶಿವನ ಬಳಿ (ಗೋತ್ರ) ಮಹಿಳೆಯರು ಶಿವರಾತ್ರಿಯ ದಿವಸ ಶಿವನನ್ನು ಮತ್ತು ಅಮ್ಮಳನ್ನು ತರುವ ಸಂಪ್ರದಾಯವಿದೆ. ಚೌತಿಗೂ, ಶಿವರಾತ್ರಿಗೂ ಆರು ತಿಂಗಳು ಅಂತರ. ಚೌತಿಯಲ್ಲಿ ತವರಿಗೆ ಬಂದ ಗೌರಿಯನ್ನು ಶಿವರಾತ್ರಿಗೆ ಶಿವ ಬಂದು ಕರೆದುಕೊಂಡು ಹೋಗುತ್ತಾನೆ ಎಂದು ಜನಪದರ ನಂಬಿಕೆ. ಶಿವರಾತ್ರಿಯ ದಿವಸ ಪ್ರಥಮವಾಗಿ ಅಮ್ಮಳನ್ನು ತಂದು ಕೂರಿಸುತ್ತಾರೆ. ಹಿತ್ತಾಳೆ ಗಿಂಡಿಯನ್ನು ಚೆನ್ನಾಗಿ ಬೆಳಗಿ ಅದಕ್ಕೆ ಶುದ್ಧವಾದ ನೀರು ತುಂಬಿ ಗಿಂಡಿಗೆ ಮಾವಿನ ಎಲೆ, ವೀಳ್ಯದೆಲೆ ಹಾಗೂ ತಲಿಗೆ ತುಪ್ಪ ಎಂಬ ಕಾಡುಹೂವಿನ ಗೊಂಚಲು ಸೇರಿಸಿ ಗಿಂಡಿಗೆ ಹಾಕುತ್ತಾರೆ. ಇಡಕಲು ಕೆಳಗೆ ಕುಡಿಬಾಳೆ ಎಲೆಯಿಟ್ಟು ಬಾಳೆಎಲೆಯ ಮೇಲೆ ಒಂದು ಹಿಡಿ ಅಕ್ಕಿ ಹರಡಿ ಅಮ್ಮಳನ್ನು ಕೂರಿಸುತ್ತಾರೆ. ನಂತರ ಬಾವಿಗೆ ಹೋಗಿ ಬಾವಿಕಟ್ಟೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಗಂಧ, ಕುಂಕುಮವಿಟ್ಟು ಹೂವು ಇಟ್ಟು ಊದುಬತ್ತಿ ಬೆಳಗಿ ಬಾವಿಪೂಜೆ ಮಾಡುತ್ತಾರೆ. ನಂತರ ಕೊಡದಲ್ಲಿ ಬಾವಿಯಿಂದ ಹೊಸನೀರು ಎತ್ತಿ ಸ್ವಚ್ಛಗೊಳಿಸಿದ ಗಿಂಡಿಗೆ ಶುದ್ಧವಾದ ನೀರು ತುಂಬಿ ಗಿಂಡಿಯಿಂದ ಐದು ಹನಿ ನೀರನ್ನು ಬಾವಿಗೆ ಬಿಟ್ಟು ಶಿವನಿಗೆ ಜೀವಕಳೆ ತುಂಬಲು ಪಂಚಭೂತಗಳ ಪ್ರತೀಕವಾಗಿ ಐದು ಚಿಕ್ಕ ಕಲ್ಲುಗಳನ್ನು ತೆಗೆದು ಸ್ವಚ್ಛವಾಗಿ ತೊಳೆದು ಗಿಂಡಿಗೆ ಹಾಕುತ್ತಾರೆ. ಗಿಂಡಿಯನ್ನು ಬಾವಿಯಿಂದ ಮನೆಯೊಳಗಡೆ ತಂದು ಇಡಕಲು ಕೆಳಗೆ ಅಮ್ಮನ ಬಲಭಾಗದಲ್ಲಿ ಕುಡಿಬಾಳೆಎಲೆ ಹಾಕಿ ಒಂದು ಹಿಡಿ ಅಕ್ಕಿಯನ್ನು ಬಾಳೆಯೆಲೆಯ ಮೇಲೆ ಹರಡಿ ಶಿವನನ್ನು ಕೂರಿಸುತ್ತಾರೆ.

                ನಂತರ ಮಾವಿನ ಎಲೆ ಮತ್ತು ವೀಳ್ಯದೆಲೆಗಳನ್ನು ಮತ್ತು ತಲಿಗೆ ಹೂವಿನ ಗೊಂಚಲು ಸೇರಿಸಿ ಗಿಂಡಿಗೆ ಹಾಕುತ್ತಾರೆ. ನಂತರ ಶಿವ ಮತ್ತು ಅಮ್ಮನವರಿಗೆ ಗಂಧ ಕುಂಕುಮ, ಕಣಕಪ್ಪು ಇಟ್ಟು ಮಲ್ಲಿಗೆ, ಸಂಪಿಗೆ, ಸುರಗಿ, ಕೇದಿಗೆ, ತಲಿಗೆ ಹೂವು ಮುಡಿಸುತ್ತಾರೆ. ಈ ದಿವಸ ನೈವೇದ್ಯಕ್ಕೆ ಹಲಸಿನ ಗುಚುಕಿನ ಪಲ್ಲೆ ಮತ್ತು ಸಾರು ಆಗಲೇಬೇಕು. ಹೊಸಗರೆ ಕಜ್ಜಾಯ, ವಡೆ, ಚಿತ್ರಾನ್ನ, ಕುಸುಮೆ ಕಾಳಿನ ಪಾಯಸ, ಹೋಳಿಗೆ, ಕೋಸಂಬರಿ, ಸಾಸಿವೆ, ಕಡ್ಲೇಬೇಳೆ ಚಟ್ನಿ ಮುಂತಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಶಿವ-ಪಾರ್ವತಿ(ಅಮ್ಮ)ಯರಿಗೆ ಎಡೆ ಮಾಡಿ ನೈವೇದ್ಯ ಮಾಡುತ್ತಾರೆ. ಜೊತೆಗೆ ಹಿರಿಯರಿಗೆ (ಇಡಕಲಿಗೆ) ಎಡೆ ಮಾಡುತ್ತಾರೆ. ಶಿವ ಮತ್ತು ಅಮ್ಮನವರಿಗೆ ಎರಡೆರಡು ಜೋಡು ತೆಂಗಿನಕಾಯಿ ಒಡೆದು ಭಕ್ತಿಯಿಂದ ಶಿವ ಪಾರ್ವತಿಯರಿಗೆ ಹಣ್ಣು ಕಾಯಿ ಅರ್ಪಿಸಿ ಪೂಜೆ ಮಾಡುತ್ತಾರೆ. ಶಿವ-ಪಾರ್ವತಿಯರನ್ನು ಪೂಜಿಸುವವರೆಗೆ ಉಪವಾಸವಿರುತ್ತಾರೆ. ಪೂಜೆಯ ನಂತರ ನೈವೇದ್ಯದ ಎಡೆಯಲ್ಲಿರುವ ಪದಾರ್ಥಗಳಲ್ಲಿ ಸ್ವಲ್ಪ ಸ್ವಲ್ಪ ತೆಗೆದು ಬಾಳೆ ಎಲೆಯಲ್ಲಿಟ್ಟು ಎಲೆಯಲ್ಲಿ ದೀಪದ ಬತ್ತಿಯನ್ನು ಹಚ್ಚಿ ಒಲೆಯಲ್ಲಿ ಉರಿಯುತ್ತಿರುವ ಬೆಂಕಿಗೆ ಹಾಕುತ್ತಾರೆ. ಈ ಪದ್ಧತಿಯನ್ನು “ಅಗ್ನಿಗೂಡಿಸುವುದು” ಎನ್ನುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ. ನೈವೇದ್ಯದ ಎಡೆಯನ್ನು ಕುಟುಂಬದ ಯಜಮಾನರು ಊಟ ಮಾಡುತ್ತಾರೆ. ಅಮ್ಮಳ ಎಡೆಯನ್ನು ಹಿರಿಯ ಮಹಿಳೆಯರು ಊಟ ಮಾಡುತ್ತಾರೆ. ಅಮ್ಮ ಮತ್ತು ಶಿವನಿಗೆ ನೈವೇದ್ಯ ಮಾಡಿದ ಎಂಜಲು ಎಲೆಯನ್ನು ಹೊರಗಡೆ ಎಸೆಯುವ ಹಾಗಿಲ್ಲ. ಎಲೆಗಳನ್ನು ಮಡಿಸಿ ಮನೆಯ ಸೂರಿಗೆ ಸಿಕ್ಕಿಸುತ್ತಾರೆ. ಎಂಜಲು ಎಲೆಯನ್ನು ಕಾಗೆ, ಕೋಳಿ, ನಾಯಿಗಳು ಮುಟ್ಟುವ ಹಾಗಿಲ್ಲ. ಊಟದ ನಂತರ ತೆಂಗಿನಮರದ ಬುಡದಲ್ಲಿ ಶಿವ ಮತ್ತು ಅಮ್ಮಳನ್ನು ವಿಸರ್ಜನೆ ಮಾಡುತ್ತಾರೆ.

                ಗಂಗೆ ಮತ್ತು ಇತರ ಬಳಿಯ ಮಹಿಳೆಯರು ಶಿವರಾತ್ರಿ ದಿವಸ ಶಿವನನ್ನು ತರುವುದಿಲ್ಲ. ಇವರು ಶಿವರಾತ್ರಿ ದಿವಸ ಉಪವಾಸವಿದ್ದು ಮರುದಿವಸ ಹಬ್ಬ ಮಾಡುತ್ತಾರೆ. ಇಡಕಲು ಕೆಳಗೆ ಎಡೆಯಿಟ್ಟು ಪೂಜಿಸಿ, ಊಟ ಮಾಡುತ್ತಾರೆ. ಈ ಹಬ್ಬವನ್ನು ತುಂಬಾ ಮಡಿ ಮೈಲಿಗೆಯಿಂದ ಆಚರಿಸುತ್ತಾರೆ.

ಯುಗಾದಿ

                ದೀವರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುವುದಿಲ್ಲ. ಹಬ್ಬದ ದಿವಸ ಬೆಳಗ್ಗೆ ಮುಂಚೆ ಎದ್ದು ಎಲ್ಲರೂ ಸ್ನಾನ ಮಾಡಿ ಶುಚಿರ್ಭೂತರಾಗಿ ಕುಟುಂಬದ ಪ್ರತಿಯೊಬ್ಬರೂ ಬೇವು-ಬೆಲ್ಲ ತಿನ್ನುತ್ತಾರೆ. ಯುಗಾದಿ ದಿವಸ ಉಪವಾಸ ಇರುವುದಿಲ್ಲ. ನಿರ್ದಿಷ್ಟವಾದ ದೇವರ ಆರಾಧನೆಯಿಲ್ಲ. ಕೆಲವು ಕುಟುಂಬಗಳಲ್ಲಿ ಅಮ್ಮನನ್ನು ತರುವ ಪದ್ಧತಿಯಿದೆ. ಮಹಿಳೆಯರು ಉಪವಾಸವಿದ್ದು ಅಮ್ಮನನ್ನು ತಂದು ಇಡಕಲು ಕೆಳಗೆ ಕುಡಿಬಾಳೆಎಲೆ ಇಟ್ಟು ಎಲೆಯ ಮೇಲೆ ಒಂದು ಹಿಡಿ ಅಕ್ಕಿ ಹರಡಿ ಅದರ ಮೇಲೆ ಅಮ್ಮಳನ್ನು ಕೂರಿಸುತ್ತಾರೆ. ಅಮ್ಮನಿಗೆ ಗಂಧ, ಕುಂಕುಮ, ಕಣ್ಕಪ್ಪಿನ ಬಟ್ಟು ಇಟ್ಟು ಹೂವುಗಳನ್ನು ಮುಡಿಸಿ, ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಇಡಕಲು ಕೆಳಗೆ ಅಮ್ಮನಿಗೆ ಎಡೆ ಮಾಡುತ್ತಾರೆ. ಅಗ್ನಿಗೂಡಿಸಿ ಎಲ್ಲರೂ ಊಟ ಮಾಡುತ್ತಾರೆ. ದೀವರಲ್ಲಿ ವಿಶೇಷವಾದ ಆಚರಣೆಗಳಿರುವುದಿಲ್ಲ.

ಕೂರಿಗೆ ಹಬ್ಬ

                ಮಲೆನಾಡಿನಲ್ಲಿ ದೀವರು ಸಾಮಾನ್ಯವಾಗಿ ಭರಣಿ ಮಳೆಯಲ್ಲಿ ಭೂಮಿಗೆ ಬೀಜ ಹಾಕುತ್ತಾರೆ. ಪ್ರಥಮವಾಗಿ ಭೂಮಿಗೆ ಬೀಜ ಹಾಕಿದ (ಬಿತ್ತನೆ) ದಿವಸ ಕೂರಿಗೆ ಹಬ್ಬವನ್ನು ಆಚರಿಸುತ್ತಾರೆ.

                ನೇಗಿಲು, ನೊಗ ಮತ್ತು ಬಿತ್ತನೆ ಉಪಕರಣಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿಡುತ್ತಾರೆ. ಅನ್ನ, ಸಾರು, ಪಾಯಸ, ಮುಷ್ಠಿಕಡುಬು ತಯಾರಿಸಿ ವ್ಯವಸಾಯೋಪಕರಣಗಳಿಗೆ ಮತ್ತು ಇಡಕಲು ಕೆಳಗೆ ಎಡೆ ಮಾಡಿ ನೇಗಿಲು, ನೊಗಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಒಣ ಸ್ವಾರ್ಲುಮೀನು ಅಥವಾ ಕೋಳಿ ಸಾರು, ಮುಷ್ಠಿಕಡುಬು ತಯಾರಿಸಿ ಊಟ ಮಾಡುತ್ತಾರೆ. ನೈವೇದ್ಯದ ಎಡೆಗೆ ಮೀನು, ಮಾಂಸ ಹಾಕುವುದಿಲ್ಲ.

ಚೌಡಿ ಹಬ್ಬ

                ದೀವರು ವಾಸ ಮಾಡುವ ಹಳ್ಳಿಗಳಲ್ಲಿ ಗ್ರಾಮದೇವತೆಗಳಾದ ಚೌಡಿ, ಯಕ್ಷಿ, ಭೂತ, ಜಟ್ಟಿಗಾ ದೇವರುಗಳ ಬನ(ವನ)ಗಳಿರುತ್ತವೆ. ಈ ಬನಗಳಲ್ಲಿರುವ ಗಿಡಮರಗಳನ್ನು ಕಡಿಯುವುದಿಲ್ಲ. ಬನಗಳಲ್ಲಿ ಗಿಡಮರಗಳು ಸೊಂಪಾಗಿ ಬೆಳೆದು ಬನಗಳ ಒಳಗಡೆ ಹೊಕ್ಕಾಗ ವಾತಾವರಣ ಮನಸ್ಸಿಗೆ ತುಂಬಾ ಸಂತೋಷ ಕೊಡುತ್ತದೆ.

                ಈ ಬನದ ಒಂದು ದೊಡ್ಡ ಮರದ ಬುಡದಲ್ಲಿ ಕೆಲವು ಶೂಲಗಳು ಮತ್ತು ದೊಡ್ಡ ಕಲ್ಲುಗಳಿರುತ್ತವೆ. ಇಲ್ಲಿ ಗ್ರಾಮದೇವತೆಗಳ ವಾಸ. ತುಂಬಾ ಹಳ್ಳಿಗಳಲ್ಲಿ ಚೌಡಮ್ಮನ ಹಬ್ಬ ನಡೆಯುತ್ತದೆ. ಕೆಲವು ಚೌಡಮ್ಮಗಳಿಗೆ ಕುಟುಂಬದವರು ಮಾತ್ರ ಪೂಜೆ ಮಾಡುತ್ತಾರೆ. ಇನ್ನು ಕೆಲವು ಚೌಡಮ್ಮಗಳಿಗೆ ಇಡೀ ಊರಿನವರೆಲ್ಲಾ ಸೇರಿ ಪೂಜೆ ಮಾಡುತ್ತಾರೆ. ಪ್ರತಿ ಕುಟುಂಬದವರೂ ಒಂದೊಂದು ಕೋಳಿಯನ್ನು ಚೌಡಮ್ಮಳಿಗೆ ಬಲಿ ಕೊಟ್ಟು ಇಡೀ ಗ್ರಾಮದವರೆಲ್ಲ ಸೇರಿ ಬನದಲ್ಲಿಯೇ ಅಡುಗೆ ತಯಾರಿಸಿ, ರೊಟ್ಟಿ, ಅನ್ನ ತಮ್ಮ ಮನೆಗಳಿಂದ ತಂದು ಸಾಮೂಹಿಕ ಭೋಜನ ಮಾಡುತ್ತಾರೆ. ಯಕ್ಷಿ ಮತ್ತು ಜಟ್ಟಿ (ಜಟ್ಟಿಗಾ) ಬನಗಳಿದ್ದ ಊರುಗಳಲ್ಲಿಯೂ ಇದೇ ರೀತಿ ಸಾಮೂಹಿಕ ಭೋಜನ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಾಗರಿಕತೆ ಮತ್ತು ರಾಜಕೀಯ ಪ್ರವೇಶಗಳಿಂದ ನಿಂತುಹೋಗಿದೆ.

ಕುಮಾರರಾಮ

                ಕುಮಾರರಾಮನಿಗೆ ರಾಮನಾಥ, ರಾಮುಗ, ಚೆನ್ನಿಗರಾಮ, ಬಾಲರಾಮ ಮುಂತಾದ ಹೆಸರುಗಳಿವೆ. ಕಮ್ಮಟದುರ್ಗ, ಹೊಸಮಲೆ ದುರ್ಗಗಳನ್ನೊಳಗೊಂಡ ಕುಂತಳ ದೇಶದ ಒಡೆಯನಾದ ಕಂಪಿಲರಾಯ ಈತನ ತಂದೆ. ಹರಿಯಲಾದೇವಿ ತಾಯಿ. ಕಂಪಿಲರಾಯನಿಗೆ ಬೇರೆ ಹೆಂಡತಿಯರಾದ ಬುಕ್ಕಾಂಬೆ ಮತ್ತು ತಿರುಮಲಾಂಬೆಯವರಲ್ಲಿ ಹುಟ್ಟಿದ ಕಾಟಿನಾಯಕ (ಕಾಟಣ್ಣ) ಮತ್ತು ಭೈರವದೇವರೆಂಬ ಹಿರಿಯರಾದ ಗಂಡುಮಕ್ಕಳಿದ್ದರು. ಆದರೆ ಕುಮಾರರಾಮನು ಪಟ್ಟದ ರಾಣಿ ಹರಿಯಲಾದೇವಿಯಲ್ಲಿ ಹುಟ್ಟಿದ ಒಬ್ಬನೇ ಗಂಡುಮಗ. ಅವರ ಕುಲದೈವವಾದ ಜಟ್ಟಂಗಿ ರಾಮೇಶ್ವರ ಕೃಪೆಯಿಂದ ಹುಟ್ಟಿದ ಕಾರಣ ಅವನಿಗೆ ರಾಮನೆಂದು ಹೆಸರಿಟ್ಟಿದ್ದರು. ಇವನು ಚಿಕ್ಕಂದಿನಿಂದಲೇ ಆಟ, ಪಾಠ, ಬೇಟೆ ಮುಂತಾದ ಸಮಸ್ತ ವಿದ್ಯೆಗಳಲ್ಲಿ ಪ್ರವೀಣನಾಗಿ ತನ್ನ ತಂದೆಯ ಬಲಗೈಯಂತಿದ್ದ. ಆಗಿನ ಕಾಲದಲ್ಲಿ ಉತ್ತರದಿಂದ ದಂಡೆತ್ತಿ ಬಂದ ಮಹಮದೀಯರನ್ನು ಮೂರು ಸಾರಿ ಪ್ರತಿಭಟಿಸಿ ಕಡೆಯ ಕಾಳಗದಲ್ಲಿ ಪ್ರಾಣ ತೆತ್ತು ಹುತಾತ್ಮನಾದನೆಂದು ಇವನನ್ನು ಕುರಿತು ಇತ್ತೀಚೆಗೆ ನಡೆದ ಸಂಶೋಧನೆಯಿಂದ ಕಂಡುಬರುತ್ತದೆ.

                ಪೌರುಷದ ಸಂಕೇತವಾಗಿ ಇವನು ಸಾಮಾನ್ಯರ ಬಾಯಲ್ಲಿ ಇಂದಿಗೂ ಕುಮಾರರಾಮನಾಗಿ ಉಳಿದಿದ್ದಾನೆ. ವಿಜಯನಗರ ಪತನಾನಂತರ ಸ್ವತಂತ್ರರಾದ ಮೈಸೂರು ಅರಸರಿಂದ ಒಯ್ಯಲ್ಪಟ್ಟ ಈಗಲೂ ಮೈಸೂರು ಅರಮನೆಯಲ್ಲಿರುವ ಕರ್ನಾಟಕ ರತ್ನ ಸಿಂಹಾಸನ ಕುಮಾರರಾಮನ ತಂದೆ ಕಂಪಿಲರಾಯ ನಿರ್ಮಿಸಿದ್ದೆಂದು ಇತಿಹಾಸಕಾರರು ಗುರುತಿಸಿದ್ದಾರೆ. ಇದರಿಂದ ಕುಮಾರರಾಮನ ವ್ಯಕ್ತಿತ್ವವು ತುಂಬಾ ಉದಾತ್ತವಾಗಿ ಬೆಳೆದು ಅಖಂಡ ಕರ್ನಾಟಕದ ಜನಗಳ ಮೇಲೆ ಅತ್ಯಂತ ಪ್ರಭಾವ ಬೀರಿದೆಯಲ್ಲದೆ ಅವನ ಪರನಾರೀಸೋದರ ಮುಂತಾದ ಸದ್ಗುಣಗಳು ದೇಶಾದ್ಯಂತ ಪ್ರತಿದಿನದ ಮನೆಮಾತಾಗಿದೆ.

                ದಕ್ಷಿಣಭಾರತದ ಇತಿಹಾಸದಲ್ಲಿ ಚಿರಂಜೀವಿ ಪಟ್ಟ ಗಿಟ್ಟಿಸಿಕೊಂಡ ಈ ಉಜ್ವಲ ತಾರೆ, ಪಂಪಾಕ್ಷೇತ್ರದ ಪರ್ವತಶ್ರೇಣಿಯಿಂದ ಪುಟಿದೆದ್ದ ಪವಿತ್ರ ಪರಾಕ್ರಮಿ. ಕನ್ನಡಿಗರ ಸ್ವಾಭಿಮಾನದ ಮೊಟ್ಟೆಗೆ ಕಾವು ಕೊಟ್ಟು ಜೀವೋತ್ಪತ್ತಿ ಮಾಡುವ ಸಾಮಥ್ರ್ಯ ಅವನಿಗುಂಟು. ಅವನು ಸ್ವಾತಂತ್ರ್ಯಪ್ರೇಮದ ಮೂಲಸೆಲೆ ಎಂದು ಪ್ರೊ. ದೇವೇಂದ್ರ ಮಾಧವರವರು ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿಯ ಸುಲ್ತಾನನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ ಈತ ಮೂರು ಸಾರಿ ದಿಲ್ಲಿಯ ಪ್ರಬಲ ದಾಳಿಯನ್ನು ಹಿಮ್ಮೆಟ್ಟಿಸಿದವನು. ನಂತರ ಮಾತಂಗಿ ಎಂಬ ಮಹಿಳೆಯ ನೇತೃತ್ವದ ನಾಲ್ಕನೇ ಆಕ್ರಮಣದಲ್ಲಿ ಸ್ತ್ರೀಯ ಜೊತೆಗೆ ಹೋರಾಡುವುದು, ಸ್ತ್ರೀಯನ್ನು ಕೊಲ್ಲುವುದು ಧರ್ಮವಲ್ಲವೆಂದು ತಿಳಿದು ತಟಸ್ಥನಾದಾಗ ಇದೇ ಸಮಯವೆಂದರಿತ ಮಾತಂಗಿಯು ಬಾಣ ಪ್ರಯೋಗಿಸಿ ಪರಮವೀರನನ್ನು ಬಲಿ ತೆಗೆದುಕೊಂಡಳು.

                ದಿಲ್ಲಿ ಸುಲ್ತಾನನ ಮಗಳಾದ ಬಾಬಮ್ಮಳಿಗೆ ಇಂಥ ಪರಾಕ್ರಮಶಾಲಿಯೆನಿಸಿದ ರಾಮನ ಹೆಸರನ್ನು ಕೇಳಿ ಆತನನ್ನು ಮದುವೆಯಾಗಬೇಕೆಂಬ ಹಂಬಲವುಂಟಾಯಿತು. ಈ ಕುರಿತಾಗಿ ಸುಲ್ತಾನನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗುವುವು. ಮಾತಂಗಿಯು ರಾಮನ ರುಂಡವನ್ನು ದೆಹಲಿಗೆ ಕಳುಹಿಸಲು ಅದನ್ನು ಕಂಡು ಸುಲ್ತಾನನು ಹತಾಶನಾಗಿ ಆ ರುಂಡವನ್ನು ದಿಲ್ಲಿಯಲ್ಲಿ ಇಟ್ಟುಕೊಳ್ಳಲಾರದೆ ಕಮ್ಮಟದುರ್ಗಕ್ಕೆ ಹಿಂತಿರುಗಿ ಕಳುಹಿಸಿದನು. ನಂತರ ಅದು ಲಿಂಗಾಕೃತಿಯಾಗುವುದೆಂದು ಪ್ರತೀತಿ.

ಕುಮಾರರಾಮನ ಕಾವ್ಯಗಳು

                ಕುಮಾರರಾಮನ ವ್ಯಕ್ತಿತ್ವಕ್ಕೆ ಮಾರುಹೋಗಿ ಅವನ ಆದರ್ಶಜೀವನವನ್ನು ಕುರಿತು ಅನೇಕರು ಹಲವು ಕನ್ನಡ ಕಾವ್ಯಗಳನ್ನು ರಚಿಸಿರುವುದು ಕಂಡುಬರುತ್ತದೆ. ಅವುಗಳಲ್ಲಿ ನಂಜುಂಡ ಕವಿಯ ರಾಮನಾಥ ಚರಿತೆ, ಪಾಂಚಾಳಗಂಗನ ಚೆನ್ನಿಗರಾಮನ ಸಾಂಗತ್ಯ ಹಾಗೂ ಮಹಾಲಿಂಗಸ್ವಾಮಿಯ ಬಾಲರಾಮನ ಸಾಂಗತ್ಯ ಪ್ರಮುಖವಾದವುಗಳು.

                ಹೀಗೆ ಈ ಮೂರು ಜನ ಕವಿಗಳು ಕುಮಾರರಾಮನನ್ನು ಕುರಿತು “ಸಾಂಗತ್ಯ” ಎಂಬ ಜನಪ್ರಿಯವಾದ ದೇಶೀಯ ಸಾಹಿತ್ಯಪ್ರಕಾರವನ್ನೇ ಆರಿಸಿಕೊಂಡು ಕಾವ್ಯ ರಚಿಸಿ ಅಮರಗೊಳಿಸಿದ್ದಾರೆ. ವೀರಶೈವ ಮತದ ಕವಿಗಳು ಶಿವಶರಣರಲ್ಲದವರ (ಮಾನವರ) ಮೇಲೆ ಕಾವ್ಯ ಬರೆಯಲಾಗದೆಂಬ ವೀರಶೈವ ಪರಂಪರೆಯ ಕಟ್ಟಳೆಯನ್ನು ದಾಟಿದ್ದಾರೆ. ಕಾರಣ ಕುಮಾರರಾಮನ ಪರಾಕ್ರಮ, ದೇಶಪ್ರೇಮ, ಪರನಾರಿ ಸೋದರತ್ವ, ತ್ಯಾಗ, ಬಲಿದಾನಗಳು ಅಂಥ ಪ್ರಭಾವ ಬೀರಿವೆ.

                ಕುಮಾರರಾಮನನ್ನು ಅವತಾರಪುರುಷನೆಂಬುದನ್ನು ಮೂರು ಜನ ಕವಿಗಳೂ ಒಪ್ಪಿರುತ್ತಾರೆ. ಆದರೆ ಈ ಕಲ್ಪನೆ ನಂಜುಂಡ ಕವಿಯಲ್ಲಿ ಖಚಿತವಾಗಿಯೂ, ಪಾಂಚಾಲಗಂಗನಲ್ಲಿ ಸ್ಥೂಲವಾಗಿಯೂ, ಮಹಾಲಿಂಗಸ್ವಾಮಿಯಲ್ಲಿ ಹಲ ಕೆಲವು ಬದಲಾವಣೆಗಳ ಮೂಲಕವೂ ಪ್ರತಿಪಾದಿತವಾಗಿದೆ.

                ಕರ್ನಾಟಕ ಇತಿಹಾಸದಲ್ಲಿ ಕುಮಾರರಾಮನದು ವಿಶಿಷ್ಟವಾದ ವ್ಯಕ್ತಿತ್ವ. ತಾನು ಬದುಕಿದ ಕಾಲಾವಧಿಯಲ್ಲಿಯೇ ವೀರತ್ವ ಮತ್ತು ಶುಚಿತ್ವಗಳಿಂದ ಐತಿಹಾಸಿಕ ವೀರನಾಗಿ, ಅದಕ್ಕಿಂತ ಹೆಚ್ಚಾಗಿ ಸಾಂಸ್ಕøತಿಕ ವೀರನಾಗಿ ಕುಮಾರರಾಮ ಪ್ರಸಿದ್ಧನಾಗಿದ್ದಾನೆ. ಈ ವೀರನ ಗುಣಗಾನ ಲಿಖಿತ ಪರಂಪರೆ ಮತ್ತು ಮೌಖಿಕ ಪರಂಪರೆಗಳೆರಡರಲ್ಲೂ ಹಾಡಾಗಿ, ಕಥೆಯಾಗಿ ಅಭಿವ್ಯಕ್ತಿ ಪಡೆದಿದೆ. ಅಷ್ಟೇ ಅಲ್ಲ, ಜನಪದರ ದೈನಂದಿನ ನಡೆ-ನುಡಿಗಳಲ್ಲಿ, ಸಂಪ್ರದಾಯ ಹಬ್ಬ, ಹರಿದಿನಗಳ ಆಚರಣೆಯಲ್ಲಿ ಕುಮಾರರಾಮನ ನೆನಪು ಕುಡಿಯೊಡೆಯುವುದನ್ನು ಕಾಣಬಹುದು.

                ಭಾರತೀಯ ಇತಿಹಾಸ ಸಂಸ್ಕøತಿಯಲ್ಲಿ ಸತ್ವ, ಪೌರುಷ, ವೀರ, ಧೀರ, ಶೌಚಗುಣಗಳನ್ನುಳ್ಳ ವೀರಪುರುಷರು ಸರ್ವಕಾಲಕ್ಕೂ ಆದರ್ಶವ್ಯಕ್ತಿಗಳಾಗಿ, ಆರಾಧ್ಯ ದೇವರುಗಳಾಗಿ ಪೂಜೆಗೊಳ್ಳುತ್ತಾರೆ. ಅಂಥವರಲ್ಲಿ ನಿಸ್ಸೀಮನಾದವನು ಪರನಾರಿ ಸೋದರ ಕುಮಾರರಾಮ. ಈತನ ಕಾಲ ಕ್ರಿ.ಶ. 1327 (ಸಾವಿರದ ಮೂರುನೂರಾ ಇಪ್ಪತ್ತೇಳು). ಅಂದರೆ ಆರು ಶತಮಾನಗಳ ಹಿಂದೆಯೇ ಬದುಕಿ ಬಾಳಿದ, ಕೆಲವು ಕಾಲವಾದರೂ ದಿಲ್ಲಿಯ ಸುಲ್ತಾನನಿಗೆ ಸಿಂಹಸ್ವಪ್ನವಾಗಿ ವಿಜೃಂಭಿಸಿದ ಗಂಡುಗಲಿ.

                ಹಿಂದೂ ಸಂಸ್ಕøತಿಯ ಸಂರಕ್ಷಣೆಗಾಗಿ ಸ್ಥಾಪಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯಕ್ಕೆ ಅಸ್ತಿಭಾರ ಹಾಕಿದ ಪುಣ್ಯಪುರುಷನಲ್ಲದೆ, ಖಿಲವಾಗುತ್ತಿದ್ದ ಆಷ್ರ್ಯೇಯ ಧರ್ಮವನ್ನು ಮೇಲಕ್ಕೆತ್ತಿದವ. ಈ ಮಹಾನ್ ವ್ಯಕ್ತಿತ್ವವನ್ನು ಗಮನಿಸಿ ಇತಿಹಾಸಕಾರರಾದ ಡಾ. ವಿ.ಬಿ. ದೇಸಾಯಿಯವರು ಕುಮಾರರಾಮನನ್ನು “ಕರ್ನಾಟಕದ ಪ್ರಥಮ ಸ್ವಾತಂತ್ರ್ಯವೀರ” ಎಂದು ಕರೆದಿದ್ದಾರೆ. ಶಿವಾಜಿಯ ತೂಕದಿಂದ ಆತನ ಬೆಲೆ ಕಟ್ಟಬೇಕು. ರಾಣಾ ಪ್ರತಾಪಸಿಂಹನ ಮಾನದಂಡದಿಂದ ಆತನ ಮಾನ್ಯತೆಯನ್ನು ನಿರ್ಧರಿಸಬೇಕು. ಹಕ್ಕಬುಕ್ಕರನ್ನು ನೋಡುವ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದಾರೆ.

                ಹೀಗೆ ಮಾನವನಾದ ಕುಮಾರರಾಮ ತನ್ನ ಹಿರಿಮೆಯಿಂದ ಮಹಾಪುರುಷನೆಂಬ ಪ್ರಶಸ್ತಿಗೆ ಪಾತ್ರನಾದ. ಈ ಮಹಾನುಭಾವನ ಕಥೆ ಕನ್ನಡನಾಡಿನ ಮೂಲೆ ಮೂಲೆಗಳಲ್ಲಿ ಹರಡಿದೆ.

ಆರಿದ್ರಾ ಮಳೆ (ಆದ್ರಮಳೆ) ಹಬ್ಬ

ಇದು ಮಲೆನಾಡಿನ ದೀವರು ಸಮೂಹ ಆಚರಿಸುತ್ತಿರುವ ವಿಶೇಷವಾದ ಹಬ್ಬ. ಶಿವಮೊಗ್ಗ ಬೆಲೆಯ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿಗಳಲ್ಲಿರುವ ದೀವರು ಈ ಹಬ್ಬವನ್ನು ಆಚರಿಸುತ್ತಾರೆ. ಇದು ಕಂಪಿಲದೇಶದ ಒಡೆಯನಾದ ಕಂಪಿಲದೇವನ ಧೀರಪುತ್ರ ರಣಧೀರ ಕುಮಾರರಾಮನ ಆರಾಧನೆಯ ಹಬ್ಬ. ಕುಮಾರರಾಮನನ್ನು ಮಲೆನಾಡಿನ ಬಗಿನೆ ದೀವರು, ಕರಾವಳಿಯ ತೆಂಗಿನ ದೀವರು ತುಂಬಾ ವಿಶಿಷ್ಟವಾಗಿ ಆರಾಧಿಸುತ್ತಾರೆ. ಕುಮಾರರಾಮ ಈ ಸಮುದಾಯಗಳ ಆರಾಧ್ಯದೇವ ಮತ್ತು ಸಾಂಸ್ಕøತಿಕ ವೀರ. ದೀವರ ಮೂಲ ಹೆಸರು ಹಳೆಪೈಕ. ಹಳೆ ಅಂದರೆ ಹಳೆಯ, ಪುರಾತನ. ಪೈಕ ಅಂದರೆ ಪಾಯಕ. ಪಾಯಕ ಅಂದರೆ ಸೈನಿಕ ಎಂದು ಅರ್ಥ. ಹಳೆಯ ಸೈನಿಕರು, ಕಾಲಾಳುಗಳು ಎನ್ನುತ್ತಾರೆ. ಇವರು ವಿಜಯನಗರ ಮತ್ತು ಕೆಳದಿ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ, ಕಾಲಾಳುಗಳಾಗಿ, ಸೇನಾನಾಯಕರಾಗಿ, ಸಾಮ್ರಾಜ್ಯದ ಉಳಿವಿಗಾಗಿ ತಮ್ಮ ತಲೆ ಕೊಟ್ಟು ಹೋರಾಡಿದವರು, ವೀರ ಯೋಧರು. ಕುಮಾರರಾಮ ವಿಜಯನಗರ ಸಾಮ್ರಾಜ್ಯದ ಕೇಂದ್ರಸ್ಥಳವಾದ ಹಂಪೆಯ ಸಮೀಪದ ಕಂಪಲಿ ರಾಜನಾಗಿ, ವೀರಯೋಧನಾಗಿ ಮಹಮದೀಯರೊಡನೆ ಹೋರಾಡಿ ಮರಣ ಹೊಂದಿದವನು. ಅವನಲ್ಲಿರುವ ಧೈರ್ಯ, ಸ್ಥೈರ್ಯ, ಸಾಹಸ, ಪರಾಕ್ರಮ, ತ್ಯಾಗ, ಬಲಿದಾನ, ಸಾಹಸಕಥೆಗಳು ಹಳೇಪೈಕರಲ್ಲಿ ತುಂಬಾ ಪ್ರಭಾವವನ್ನುಂಟುಮಾಡಿವೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ ಶಿವಮೊಗ್ಗ ಜಿಲ್ಲೆ, ಉತ್ತರಕನ್ನಡ ಜಿಲ್ಲೆಗಳಿಗೆ ವಲಸೆ ಬಂದ ಬೇಡ ಪಡೆಯೇ ಹಳೆಪೈಕ ಸಮುದಾಯ ಆಗಿರಬಹುದೇ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಮಲೆನಾಡಿನಲ್ಲಿ ಹಳೇಪೈಕರು ತಮ್ಮ ಗ್ರಾಮಗಳಲ್ಲಿ ದೇವರಗುಡಿಗಳಲ್ಲಿ ಕುಮಾರರಾಮ ಮತ್ತು ಗ್ರಾಮದೇವರು ಮುಖವಾಡಗಳನ್ನಿಟ್ಟು ವರ್ಷಕ್ಕೊಮ್ಮೆ ಆರಿದ್ರಾಮಳೆಯಲ್ಲಿ ಹಬ್ಬ ಆಚರಿಸಿ ಪೂಜಿಸುವುದು ಸಂಪ್ರದಾಯವಾಗಿದೆ.

                ಉತ್ತರಕನ್ನಡ ಜಿಲ್ಲೆಯ ಕುಮಟಾ ಬಳಿಯ ‘ಮಾಡಗೇರಿ”ಯಲ್ಲಿರುವುದು ರಣಧೀರ ಕುಮಾರರಾಮನ ದೇವಾಲಯವೇ ಆಗಿದೆ. ಅದೇ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅನಿಲಗೋಡಿನಲ್ಲಿರುವ ಕುಮಾರರಾಮನ ಗುಡಿಯು ಹಳೆಪೈಕರಿಂದಲೇ ಪೂಜಿಸಲ್ಪಡುತ್ತದೆ. ಇಲ್ಲಿಯೂ ಮುಖವಾಡಗಳಿವೆ.

                ಹಳೆಪೈಕರು ವಿಜಯನಗರದ ಮೂಲದವರು ಎಂಬುದಕ್ಕೆ ಕುಮಾರರಾಮನ ಆರಾಧನಾ ಪರಂಪರೆಯೇ ಬಲವಾದ ಪುರಾವೆ ಆಗಿದೆ.

                ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮನೆಮನೆಯಲ್ಲಿ ಮೃಗಶಿರ ಮಳೆ ಪ್ರಾರಂಭ ಅಥವಾ ಮುಕ್ತಾಯದ ಪಾದದಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಸಾಗರ ತಾಲ್ಲೂಕಿನ ಕುಗ್ವೆ, ಬರದವಳ್ಳಿ, ಹುಣಸೂರು, ಮರತ್ತೂರುಗಳಲ್ಲಿ ಆರಿದ್ರಾಮಳೆ ಪ್ರಾರಂಭ ಅಥವಾ ಅಂತ್ಯದ ಪಾದದಲ್ಲಿ ಯಾವುದಾದರೂ ಭಾನುವಾರ ಮತ್ತು ಸೋಮವಾರಗಳಲ್ಲಿ ಆರಿದ್ರಾ ಮಳೆಹಬ್ಬವನ್ನು ಆಚರಿಸುತ್ತಾರೆ. ಕುಮಾರರಾಮ ಮಲೆನಾಡಿನಲ್ಲಿ ಕೃಷಿಕರ ಗ್ರಾಮದೇವವಾಗಿ ಆರಾಧನೆಗೊಳ್ಳುತ್ತಾನೆ. ಆರಾಧನೆಯ, ಆಚರಣೆಯ ಸಂಪ್ರದಾಯಗಳು ಇಂತಿವೆ.

ಕುಗ್ವೆ ಗ್ರಾಮ (ಸಾಗರ ತಾಲ್ಲೂಕು)

                ಕುಗ್ವೆ ಗ್ರಾಮ ಸಾಗರ ನಗರಕ್ಕೆ ಮೂರು ಕಿಲೋಮೀಟರ್ ದೂರವಿರುವ ಹಳ್ಳಿ. ಇದು ಬೆಂಗಳೂರು-ಹೊನ್ನಾವರ (ಜೋಗ ಜಲಪಾತದ ಮಾರ್ಗ) ಹೆದ್ದಾರಿಯ ಪಕ್ಕದಲ್ಲಿದೆ. ಈ ಹಳ್ಳಿಯಲ್ಲಿ ಸುಮಾರು 260 ಮನೆಗಳಿವೆ. 1,500 ಜನಸಂಖ್ಯೆ ವಾಸವಾಗಿದ್ದಾರೆ. ಈ ಎರಡುನೂರಾ ಅರವತ್ತು ಕುಟುಂಬಗಳಲ್ಲಿ ದೀವರು ಜನಾಂಗದವರು ವಾಸವಾಗಿದ್ದಾರೆ. ಇಲ್ಲಿ ಅನೇಕ ತಲೆಮಾರುಗಳಿಂದ ಕುಮಾರರಾಮನನ್ನು ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಸಾಗರ ತಾಲ್ಲೂಕಿನ ದೀವರು ಸಮೂಹ ವಾಸ ಮಾಡುವ ಹಳ್ಳಿಗಳಲ್ಲಿ ಕುಮಾರರಾಮನ ಮುಖವಾಡದ ಜೊತೆಯಲ್ಲಿ “ಗಾಮ”ನ ಮುಖವಾಡ ಇದ್ದೇ ಇರುತ್ತದೆ. ಗ್ರಾಮದೇವತೆಯನ್ನು ಬಹುಶಃ “ಗಾಮ” ಎಂದೂ ಕರೆಯಬಹುದು. ಕುಗ್ವೆಯಲ್ಲಿ ಕುಮಾರರಾಮ ಮತ್ತು ಗಾಮದೇವರ ಸುಸಜ್ಜಿತವಾದ ದೇವಸ್ಥಾನವಿದೆ. ಗರ್ಭಗುಡಿ ಪ್ರತ್ಯೇಕವಾಗಿದೆ. ಎರಡು ಮುಖವಾಡಗಳು ಒಂದು ಅಡಿ ಎತ್ತರ, ಒಂದು ಅಡಿ ಅಗಲ ಇವೆ. ಕುಮಾರರಾಮನ ಮುಖವಾಡದ ಬಣ್ಣ ಹಸಿರು. ಗಾಮನ ಮುಖವಾಡದ ಬಣ್ಣ ಕೆಂಪು. ಮುಖವಾಡಕ್ಕೆ ಕೋರೆ ಮೀಸೆ ಮತ್ತು ಹಲ್ಲುಗಳಿವೆ. ಹಸಿರು ಮತ್ತು ಕೆಂಪುಬಣ್ಣದ ಎರಡು ಕುದುರೆಗಳಿವೆ. ಕುದುರೆಯ ಮೇಲೆ ಸವಾರರಿದ್ದಾರೆ. ಮೂರು ಅಡಿ ಎತ್ತರ, ಒಂದು ಅಡಿ ಅಗಲದ ಸುಂದರವಾದ ದೀಪದ ಮಲ್ಲಿಯರ ವಿಗ್ರಹಗಳು, ಛತ್ರಿ, ಚಾಮರ, ಮುಖತೋರಣಗಳಿವೆ. ಪ್ರತಿವರ್ಷ ಜೂನ್-ಜುಲೈ ತಿಂಗಳಲ್ಲಿ ಬರುವ ಆರಿದ್ರಾ ಮಳೆಯ ಪ್ರಾರಂಭ ಅಥವಾ ಮುಕ್ತಾಯದ ಪಾದದ ಯಾವುದಾದರೂ ಭಾನುವಾರ ಹಾಗೂ ಸೋಮವಾರ ಎರಡು ದಿವಸಗಳ ಕಾಲ ಹಬ್ಬ ನಡೆಯುತ್ತದೆ.

                ಶನಿವಾರ ರಾತ್ರಿ 8 ಗಂಟೆಗೆ ಗ್ರಾಮಸ್ಥರು ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಆವಿನಹಳ್ಳಿಯ ಕೆರಿಯಪ್ಪನವರ ಮನೆಗೆ ಹೋಗುತ್ತಾರೆ. ಅವರ ಮನೆಯಲ್ಲಿರುವ “ಗಾಮ” ಡೊಳ್ಳನ್ನು ಅಟ್ಟದಿಂದ ಇಳಿಸಿ ಅವರ ಮನೆದೇವರಾದ ಭೈರವನಿಗೆ ಪೂಜೆ ಸಲ್ಲಿಸಿ ಹಣ್ಣು ಕಾಯಿ ಒಡೆದು ಪೂಜೆ ಮಾಡಿ ಪ್ರಸಾದ ತೆಗೆದುಕೊಂಡುಬರುತ್ತಾರೆ. ಅವರ ಮನೆಯಲ್ಲಿ ಇಳಿಸಿದ ಗಾಮ ಡೊಳ್ಳನ್ನು ಕಟ್ಟಿಕೊಂಡು ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿದ್ದ ದೇವರಪೆಟ್ಟಿಗೆಯನ್ನು ಇಳಿಸಿ ದೇವರ ಮುಖವಾಡಗಳನ್ನು ತೆಗೆದು ನೀರಿನಿಂದ ಸ್ನಾನ ಮಾಡಿಸಿ ಸ್ವಚ್ಛಗೊಳಿಸಿ ಗದ್ದುಗೆಯ ಮೇಲೆ ಕೂರಿಸುತ್ತಾರೆ. ನಂತರ ದೇವರಿಗೆ ಪೂಜೆ ಮಾಡುತ್ತಾರೆ.

                ಮಾರನೇ ದಿವಸ ಅಂದರೆ ಭಾನುವಾರ ಬೆಳಗ್ಗೆ ಮುಂಚೆ ಎದ್ದು ಗ್ರಾಮಸ್ಥರು 4-5 ಜನರನ್ನು ತಾವರೆ ಮತ್ತು ಸಂಪಿಗೆ ಹೂವುಗಳನ್ನು ತರಲು ಕಳುಹಿಸುತ್ತಾರೆ. ಗ್ರಾಮಸ್ಥರು ಸೇರಿ ದೇವಸ್ಥಾನದ ಒಳಗೆ-ಹೊರಗೆ ಸ್ವಚ್ಛಗೊಳಿಸಿ ಮಾವಿನಸೊಪ್ಪಿನಿಂದ ತಳಿರುತೋರಣ ಕಟ್ಟಿ ಬಾಳೆಕಂಬಗಳನ್ನು ನಿಲ್ಲಿಸಿ ಶೃಂಗಾರಗೊಳಿಸುತ್ತಾರೆ. ಒಬ್ಬನನ್ನು ಗುಡಿಗಾರರಿಂದ ಬೆಂಡಿನ ಜಲ್ಲೀಸರ ಗರಿದೊಂಡ್ಲು ತರಲು ಸಾಗರಕ್ಕೆ ಕಳುಹಿಸುತ್ತಾರೆ. ಹೂವುಗಳನ್ನು ತರಲು ಹೋದವರು ಮತ್ತು ಗುಡಿಗಾರರಿಂದ ಬೆಂಡಿನ ಜಲ್ಲೀಸರ ಗರಿದೊಂಡ್ಲು ತರಲು ಹೋದವರು ಬಂದನಂತರ ಪೂಜಾರಿ (ದಾಸಯ್ಯ) ದೇವರಿಗೆ ಕಟ್ಟಿ, ತಾವರೆ (ಕಮಲ) ಮತ್ತು ಸಂಪಿಗೆ ಹೂವುಗಳನ್ನು ಮುಡಿಸಿ ಪೂಜೆಗೆ ಸಿದ್ಧಮಾಡಿಕೊಳ್ಳುತ್ತಾರೆ. ಊರೊಟ್ಟಿನಿಂದ ಪೂಜೆ ಹಣ್ಣು ಕಾಯಿ ಮಾಡುತ್ತಾರೆ. ನಂತರ ದೇವರನ್ನು ಮೆರವಣಿಗೆಗೆ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೊರಡಿಸುತ್ತಾರೆ. ಮುಖವಾಡಗಳನ್ನು ಗದ್ದುಗೆಯಿಂದ ಇಳಿಸಿ ಎರಡು ಜನ ಹಿರಿಯರು ಮುಖವಾಡಗಳನ್ನು ತಮ್ಮ ಮುಖಕ್ಕೆ ಹಿಡಿದುಕೊಂಡು ಮುಖ ತೋರಣ ಛತ್ರಿ ಚಾಮರ ಹಿಡಿದುಕೊಂಡು ಹೊರಡುತ್ತಾರೆ. ಮುಂಭಾಗದಲ್ಲಿ ಎರಡು ಜನ ಹುಡುಗರು ಕುದುರೆಗಳನ್ನು ಹೊತ್ತುಕೊಳ್ಳುತ್ತಾರೆ. ದೇವರು ಗರ್ಭಗುಡಿಯಿಂದ ಹೊರಟು ದೇವಸ್ಥಾನದ ಬಾಗಿಲಿಗೆ ಬಂದಾಗ ಊರಿನ ಪ್ರತಿ ಕುಟುಂಬದವರು ನೂರಾರು ಜನ ಸುಳಿಗಾಯಿ ಒಡೆಯುತ್ತಾರೆ. ನಂತರ ಗ್ರಾಮದ ಮುತ್ತೈದೆ ಮಹಿಳೆಯರು ಸೂರು ವೀಳ್ಳೇವು ದೇವರಿಗೆ ಬೀರುತ್ತಾರೆ. ಒಂದು ಕೋಳಿಯನ್ನು ಸುಳಿದು ದೇವಸ್ಥಾನದ ಎಡಭಾಗದಲ್ಲಿ ನಿಲ್ಲಿಸಿರುವ ಶೂಲಕ್ಕೇರಿಸುತ್ತಾರೆ. ಅಲ್ಲಿಯೇ ಒಂದು ಹತ್ತರ ಕುರಿಯನ್ನು ಬಲಿ ಕೊಡುತ್ತಾರೆ. ನಂತರ ಡೊಳ್ಳು ಕುಣಿತದ ಮೆರವಣಿಗೆ ಊರಿನ ಕಟ್ಟೆಬಾಗಿಲವರೆಗೆ ಹೋಗುತ್ತದೆ. ಆ ವರ್ಷ ಮದುವೆಯಾದ ಮದುಮಕ್ಕಳು ದೇವರ ಮುಖವಾಡಗಳನ್ನು ಹೊರುತ್ತಾರೆ. ಮೆರವಣಿಗೆ ಕಟ್ಟೆಬಾಗಿಲಲ್ಲಿ ಮೂರು ಸುತ್ತು ಹಾಕಿ ವಾಪಸು ಬರುತ್ತದೆ. ದೇವಸ್ಥಾನದಲ್ಲಿ ದೇವರನ್ನು ಗದ್ದುಗೆ ಮೇಲೆ ಕೂರಿಸಿ ಗ್ರಾಮದಿಂದ ಹಣ್ಣು ಕಾಯಿ ಮಾಡಿ ಪೂಜೆ ನಡೆಯುತ್ತದೆ. ನಂತರ ಗ್ರಾಮದ ಪ್ರತಿ ಕುಟುಂಬದವರು ಒಂದು ಒಡಿಗಾಯಿ, ಇನ್ನೊಂದು ಇಡಿಗಾಯಿ-ಹೀಗೆ ಎರಡು ಕಾಯಿಗಳನ್ನು ಕೊಡುತ್ತಾರೆ. ಪ್ರತಿ ಕುಟುಂಬದ ಒಂದು ಕಾಯಿಯನ್ನು ಒಡೆದು ಅಲ್ಲಿಯೇ ಇಟ್ಟುಕೊಳ್ಳುತ್ತಾರೆ. ಮಹಾ ಮಂಗಳಾರತಿ ನಡೆಯುತ್ತದೆ. ರಾತ್ರಿ ಊರಿನಲ್ಲಿ ಆ ವರ್ಷ ಮದುವೆಯಾದ ವಧೂವರರು ಬಂದು ಸೇರಿ ಹೆಣ್ಣುಮಕ್ಕಳು (ವಧುಗಳು) ದೇವರಿಗೆ ಹತ್ತು ಬೆರಳಾರತಿ ಬೆಳಗುತ್ತಾರೆ. ಗ್ರಾಮಸ್ಥರ ಪೂಜೆ ಆದನಂತರ ದೇವರ ಗದ್ದುಗೆ ಎದುರು ಚಚ್ಚೌಕವಾಗಿ ಬಾಳೆಯ ದಿಂಡು ಇಟ್ಟು ಸಾಲಾಗಿ ಒಂದು ಒಡಿಗಾಯಿ ಸಾಲು ನಂತರ ಇಡಿಗಾಯಿ ಸಾಲು ಹೀಗೆ 10-15 ಸಾಲು ಜೋಡಿಸುತ್ತಾರೆ. ದೇವರಿಗೆ ಹಲಸಿನ ಹಣ್ಣಿನ ಕಡುಬು ಮಾಡಿಸಿ ತಂದು ನೈವೇದ್ಯ ಮಾಡುತ್ತಾರೆ. ಗ್ರಾಮದ ಪ್ರತಿ ಕುಟುಂಬದವರಿಗೂ ದೇವರ ಪ್ರಸಾದವನ್ನು ಹಂಚುತ್ತಾರೆ. ಪ್ರತಿಯೊಬ್ಬರೂ ಪ್ರಸಾದ ತೆಗೆದುಕೊಂಡು ತಮ್ಮ ಮನೆಯ ಇಡಕಲು ಕೆಳಗೆ ಪ್ರಸಾದ ಇಟ್ಟು ಇಡಕಲು ಪೂಜೆ ಮಾಡಿ ನಂತರ ಕುಟುಂಬದವರು ಊಟ ಮಾಡುತ್ತಾರೆ. ಅಲ್ಲಿಯವರೆಗೂ ಕುಟುಂಬದವರೆಲ್ಲರೂ ಉಪವಾಸ ಇರಬೇಕಾಗುತ್ತದೆ. ಪ್ರಸಾದ ಹಂಚಿದ ನಂತರ ಗ್ರಾಮದ ಕೆಲವು ಹಿರಿಯರು ಹತ್ತರ ಕುರಿಯನ್ನು ಮಾಂಸ ಮಾಡಿ ಸ್ವಲ್ಪ ದೇವಸ್ಥಾನದಲ್ಲಿ ಬೇಯಿಸಿ ತಿನ್ನುತ್ತಾರೆ. ಉಳಿದ ಮಾಂಸವನ್ನು ಪ್ರತಿ ಕುಟುಂಬದವರಿಗೆ ಪಾಲು ಮಾಡಿ ಹಂಚುತ್ತಾರೆ.

                ಮೂರನೇ ದಿವಸ ಅಂದರೆ ಸೋಮವಾರ ಬಿಂಗಿ ಕಾರ್ಯಕ್ರಮ. ಪ್ರತಿ ಮನೆಯಿಂದ ಒಂದು ತುಂಡು ಸೌದೆ ತಂದು ದೇವಸ್ಥಾನದ ಬಲಭಾಗದಲ್ಲಿ ರಾಶಿ ಹಾಕುತ್ತಾರೆ. ಸುಮಾರು ಮೂರು ಗಂಟೆ ಸಮಯಕ್ಕೆ ದೇವಸ್ಥಾನದ ಬಲಭಾಗದ ಸ್ಥಳದಲ್ಲಿ ಡೊಳ್ಳು ಕುಣಿತದಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಕಟ್ಟಿಗೆ ರಾಶಿಗೆ ಬೆಂಕಿ ಹಾಕಿ ಕೊಂಡ ತಯಾರಿಸುತ್ತಾರೆ. ಮಕ್ಕಳು ಕುದುರೆಗಳನ್ನು ಹೊತ್ತುಕೊಂಡು ಡೊಳ್ಳಿನವರ ಜೊತೆ ಕುಣಿಯುತ್ತಾರೆ.

                ಡೊಳ್ಳಿನವರಿಗೆ ವಿಶ್ರಾಂತಿ ಕೊಡಲು ಊರಿನ ಯುವಕರು ಹಗಲುವೇಷಗಳನ್ನು ಮಾಡುತ್ತಾರೆ ಮತ್ತು ಡೊಳ್ಳುಗಳನ್ನು ಕಟ್ಟಿ ವೀರಾವೇಷದಿಂದ ಗತ್ತು ಗೈರತ್ತುಗಳಿಂದ ಕುಣಿಯುತ್ತಾರೆ. ಊರಿನವರು, ಪರ ಊರಿನಿಂದ ಬಂದ ನೆಂಟರಿಷ್ಟರು ಸೇರುತ್ತಾರೆ. ಮಧ್ಯಾಹ್ನ ಮೂರರಿಂದ ಆರು ಗಂಟೆಯವರೆಗೆ ಡೊಳ್ಳು ಕುಣಿತ, ಹಗಲುವೇಷಗಳು ನಡೆಯುತ್ತವೆ. ನಂತರ ಡೊಳ್ಳಿನವರು, ನಂತರ ಉಳಿದವರು ಕೊಂಡ ಹಾಯುತ್ತಾರೆ. ರಾತ್ರಿ ಗ್ರಾಮದ ಹಿರಿಯರು ಅವರವರ ಇಡಿಗಾಯಿ ಮತ್ತು ಒಡೆದಕಾಯಿ ಭಾಗಗಳನ್ನು ಕುಟುಂಬದವರಿಗೆ ವಾಪಸು ಕೊಡುತ್ತಾರೆ. ದೇವರಿಗೆ ಮಂಗಳಾರತಿ ಮಾಡಿ ಮುಖವಾಡಗಳನ್ನು ಪೆಟ್ಟಿಗೆಯಲ್ಲಿಟ್ಟು ಗರ್ಭಗುಡಿಯ ನಾಗಂದಿಗೆ ಮೇಲೆ ಇಡುತ್ತಾರೆ.

                ದೀಪಾವಳಿ ಹಬ್ಬದಲ್ಲಿ ಪೆಟ್ಟಿಗೆ ಇಳಿಸಿ ಮುಖವಾಡಗಳನ್ನು ಸ್ವಚ್ಛಗೊಳಿಸಿ ಗದ್ದುಗೆ ಮೇಲೆ ಇಡುತ್ತಾರೆ. ದೀಪಾವಳಿಯ ಬಲಿಪಾಡ್ಯಮಿ ದಿವಸ ಗ್ರಾಮದ ಪ್ರತಿ ಕುಟುಂಬದವರು ಹಣ್ಣು ಕಾಯಿ ಒಡೆಸುತ್ತಾರೆ. ಪಾಡ್ಯದ ಮರುದಿವಸ ಮುಖವಾಡಗಳನ್ನು ಪೆಟ್ಟಿಗೆಗೆ ತುಂಬಿ ನಾಗಂದಿಗೆಗೆ ಏರಿಸುತ್ತಾರೆ.

ಬರದವಳ್ಳಿ (ಸಾಗರ ತಾಲ್ಲೂಕು)

                ಶಿರಿವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ “ಬರದವಳ್ಳಿ”-ಇಲ್ಲಿ ದೀವರು ಹೆಚ್ಚಾಗಿ ವಾಸವಾಗಿದ್ದಾರೆ. ಕೆಲವು ಲಿಂಗಾಯಿತ ಮನೆಗಳು ಇವೆ. ಈ ಗ್ರಾಮದಲ್ಲಿ ದೊಡ್ಡದಾದ ಕುಮಾರರಾಮನ ದೇವಸ್ಥಾನವಿದೆ. ಇಲ್ಲಿ ವಿಶಿಷ್ಟ ಆಚರಣೆ ಮೂಲಕ ಆರಿದ್ರಾಮಳೆ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿಯ ದೇವರುಗಳ ವಾಸ್ತುವಿನ ವಿವರ ಹೀಗಿದೆ.

                ಎರಡು ಮುಖವಾಡಗಳಿದ್ದು ಇವು ಹಲಸಿನ ಮರದಿಂದ ಮಾಡಲ್ಪಟ್ಟಿವೆ. ಕುಮಾರರಾಮ ಮತ್ತು “ಗಾಮ” ದೇವರುಗಳ ರುಂಡಗಳು ಮಾತ್ರ ಇವೆ. ಎರಡೂ ಮುಖವಾಡ ಉದ್ದ ಅಥವಾ ಎತ್ತರ ಹದಿನೆಂಟು ಇಂಚು. ಅಗಲ ಹದಿನೈದು ಇಂಚು. ಕುಮಾರರಾಮನ ಮುಖವಾಡದ ಬಣ್ಣ ಹಸಿರು. ಗಾಮನ ಮುಖವಾಡದ ಬಣ್ಣ ಕೆಂಪು.

                ನಾಲ್ಕು ಕುದುರೆಗಳಿವೆ. ಕುದುರೆಗಳ ಮೇಲೆ ಕತ್ತಿ, ಗುರಾಣಿ ಹಿಡಿದ ಸೈನಿಕರಿದ್ದಾರೆ. ಎರಡು ದೀಪದ ಮಲ್ಲಿಯರ ವಿಗ್ರಹಗಳಿವೆ. ಎರಡೂ ವಿಗ್ರಹಗಳ ಎತ್ತರ ಮೂವತ್ತು ಇಂಚು. ಅಗಲ ಹನ್ನೆರಡು ಇಂಚು ಮಾತ್ರ. ಎರಡು ಕೈಗಳನ್ನು ಹೊಂದಿದ್ದು ಒಂದು ಕೈಯಲ್ಲಿ ದೀಪ, ಇನ್ನೊಂದು ಕೈಯಲ್ಲಿ ಕುಂಕುಮ ಭರಣಿಗಳಿವೆ. ಕಂಚಿನ ಜಾಗಟೆಗಳು ನಾಲ್ಕು ಇವೆ. ಕೆಂಪು ಮತ್ತು ಹಳದಿ ಬಣ್ಣದ ಬಾವುಟಗಳು, ಛತ್ರಿ, ಚಾಮರ, ಮುಖತೋರಣಗಳಿವೆ.

                ಪ್ರತಿವರ್ಷ ಜೂನ್ ತಿಂಗಳಲ್ಲಿ ಬರುವ ಆರಿದ್ರಾ ಮಳೆಯ ಮೊದಲ ಪಾದ ಅಥವಾ ಕೊನೆಯ ಪಾದದಲ್ಲಿ ಬರುವ ಒಂದು ಮಂಗಳವಾರ ಹಬ್ಬವನ್ನು ಆಚರಿಸುತ್ತಾರೆ. ಮಂಗಳವಾರ ಬೆಳಗ್ಗೆ ಊರಿನ ಹಿರಿಯರು ಸೇರಿ ದೇವರುಗಳನ್ನು ತುಂಬಿ ಇಟ್ಟ ಪೆಟ್ಟಿಗೆಗಳನ್ನು ಇಳಿಸಿ, ದೇವರುಗಳನ್ನು ಹೊರತೆಗೆದು ನೀರಿನಿಂದ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸುತ್ತಾರೆ. ಕೆಲವರನ್ನು ಪೂಜೆಗೆ ಸಂಪಿಗೆ, ತಾವರೆ, ಕೇದಿಗೆ ಹೂವುಗಳನ್ನು ತೆಗೆದುಕೊಂಡು ಬರಲು ಕಳುಹಿಸುತ್ತಾರೆ. ದೇವರ ಮುಖವಾಡಗಳನ್ನು ಸ್ವಚ್ಛಗೊಳಿಸಿದ ನಂತರ ಎಳ್ಳೆಣ್ಣೆಯನ್ನು ಹಚ್ಚಿ ದೇವರನ್ನು ಮಂಟಪದ ಮೇಲೆ ಕೂರಿಸುತ್ತಾರೆ. ಬೆಂಡಿನ ಜಲ್ಲಿದಂಡೆ ಮರಗಡಗ (ಬೆಂಡಿದ್ದು) ಗರಿದೊಂಡ್ಲು ಇವುಗಳನ್ನು ಸಾಗರದ ಗುಡಿಗಾರರಿಂದ ತಂದದ್ದನ್ನು ದೇವರಿಗೆ ಕಟ್ಟುತ್ತಾರೆ. ಹೂವಿಗೆ ಹೋದವರು ಹೂವುಗಳನ್ನು ತಂದನಂತರ ಕಮಲ, ಸಂಪಿಗೆ, ಕೇದಿಗೆ, ಹೂವುಗಳನ್ನು ದೇವರಿಗೆ ಮುಡಿಸುತ್ತಾರೆ. ನಂತರ ಒಂದು ಕೋಳಿಯನ್ನು ಬಲಿ ಕೊಟ್ಟು ರಕ್ತವನ್ನು ತಂದು ದೇವರ ಹಣೆಗೆ ಹಚ್ಚುವುದರ ಮೂಲಕ ಜೀವಕಳೆಯನ್ನು ತುಂಬುತ್ತಾರೆ. ನಂತರ ಮುಖವಾಡಗಳನ್ನು ಮಂಟಪದಿಂದ ಇಳಿಸಿ ಗದ್ದುಗೆಯ ಮೇಲೆ ಕೂರಿಸುತ್ತಾರೆ. ಹಣ್ಣು ಕಾಯಿ ಒಡೆದು ಪೂಜೆ ಮಾಡುತ್ತಾರೆ. ಈ ದಿವಸ ಗ್ರಾಮದವರೆಲ್ಲರೂ ಉಪವಾಸ ಇರುತ್ತಾರೆ. ಹೆಸರುಕಾಳಿಗೆ ನೀರು, ಬೆಲ್ಲ ಹಾಕಿ ಬೇಯಿಸಿದ ರಸವನ್ನು ಕುಡಿದು ಇಡೀ ದಿವಸ ಇರಬೇಕಾಗುತ್ತದೆ.

                ಊರಿನ ಕೆಲವರು ಮತ್ತು ಲಿಂಗಾಯತರು ಸೇರಿ ಊರಹೊರಗೆ ಇರುವ ಜಟ್ಟಿಗಾನ ವನಕ್ಕೆ ಹೋಗಿ ಅನ್ನ-ಸಾರು ಅಡುಗೆ ತಯಾರಿಸುತ್ತಾರೆ. ಜಟ್ಟಿಗಾನಿಗೆ ಒಂದು ಕುರಿಯನ್ನು ಬಲಿ ಕೊಟ್ಟು ಕುರಿಯ ತೊಳ್ಳೆ (ಖಲೀಜಾ) ತೆಗೆದು ಬೆಂಕಿಯಲ್ಲಿ ಸುಡುತ್ತಾರೆ. ನಂತರ ಒಂದುನೂರಾ ಒಂದು ಎಡೆ ಹಾಕಿ ಆ ಎಡೆಗೆ ಸುಟ್ಟ ಖಲೀಜಾವನ್ನು ಸ್ವಲ್ಪ ಸ್ವಲ್ಪ ಹಾಕುತ್ತಾರೆ. ನಂತರ ಲಿಂಗಾಯತರು ಮತ್ತು ದೀವರು ಪ್ರತ್ಯೇಕ ಎಡೆ ತೆಗೆದುಕೊಂಡು ಗುಳಿ ಕರೆಯುತ್ತಾರೆ. ಇಬ್ಬರ ಎಡೆಯಲ್ಲಿರುವ ಪದಾರ್ಥವನ್ನು ಗುಳಿ (ಕಾಗೆ) ಮುಟ್ಟಬೇಕು. ಮುಟ್ಟಿದನಂತರ ಗರ್ನಾಲು ಹೊಡೆದು ದೇವಸ್ಥಾನದಲ್ಲಿದ್ದವರಿಗೆ ಸುದ್ದಿ ಮುಟ್ಟಿಸುತ್ತಾರೆ. ದೇವಸ್ಥಾನದಲ್ಲಿದ್ದವರಿಗೆ ಸುದ್ದಿ ಮುಟ್ಟಿದ ಕೂಡಲೇ ದೇವರನ್ನು ಹೊರಡಿಸುತ್ತಾರೆ. ಮುಖವಾಡಗಳನ್ನು ಹೊತ್ತವರು ಗರ್ಭಗುಡಿಯನ್ನು ದಾಟಿ ದೇವಸ್ಥಾನ ಬಾಗಿಲಿಗೆ ಬಂದಾಗ ಪ್ರಥಮವಾಗಿ ಗ್ರಾಮದ ವತಿಯಿಂದ ಸುಳಿಗಾಯಿ ಒಡೆಯುತ್ತಾರೆ. ನಂತರ ಊರಿನ ಪ್ರತಿ ಕುಟುಂಬದವರೂ ಒಂದು ಸುಳಿಗಾಯಿ ಒಡೆಯುತ್ತಾರೆ. ನಂತರ ಒಂದು ಕೋಳಿಯನ್ನು ಸುಳಿದು ದೇವಸ್ಥಾನದ ಎಡಪಕ್ಕದಲ್ಲಿ ನಿಲ್ಲಿಸಿರುವ ಶೂಲಕ್ಕೇರಿಸುತ್ತಾರೆ. ಹಾಗೆಯೇ ಹತ್ತರ ಕುರಿಯನ್ನು ಕಡಿಯುತ್ತಾರೆ. ನಂತರ ದೇವರನ್ನು ಡೊಳ್ಳು ಕುಣಿತ ಮತ್ತು ವಾದ್ಯದ ಮೆರವಣಿಗೆಯೊಂದಿಗೆ ಊರಿನ ಅಗಸೆ ಬಾಗಿಲವರೆಗೆ ಹೋಗುತ್ತಾರೆ. ಆ ವರ್ಷ ಮದುವೆಯಾದ ಯುವಕರು ಸರದಿಯಂತೆ ದೇವರನ್ನು ಹೊರುತ್ತಾರೆ. ಅಗಸೆ ಬಾಗಿಲವರೆಗೆ ಹೋಗಿ ಮೂರು ಸುತ್ತು ಹಾಕಿ ವಾಪಸು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಬಂದು ದೇವರುಗಳನ್ನು ಗದ್ದುಗೆಗೆ ಏರಿಸಿ, ಊರಿನವರೆಲ್ಲರೂ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸುತ್ತಾರೆ. ರಾತ್ರಿ ಎಂಟು ಗಂಟೆಗೆ, ಆ ವರ್ಷ ಮದುವೆಯಾದ ವಧೂವರರು ಬಂದು ಹತ್ತು ಬೆರಳಾರತಿ ಮಾಡುತ್ತಾರೆ. ದೇವರಿಗೆ ಒಂದು ಕೆಜಿ ಅಕ್ಕಿ ಅನ್ನ ಮಾಡಿ ನೈವೇದ್ಯ ಮಾಡುತ್ತಾರೆ. ಆ ಅನ್ನವನ್ನು ಊರಿನ ಪ್ರತಿ ಕುಟುಂಬದವರಿಗೆ ಪ್ರಸಾದರೂಪವಾಗಿ ಹಂಚುತ್ತಾರೆ. ಅದನ್ನು ಇಡುಕಲು ಕೆಳಗೆ ಇಟ್ಟು ಇಡಕಲಿಗೆ ಪೂಜೆ ಮಾಡಿ ಮನೆಯವರು, ಹಬ್ಬಕ್ಕೆ ಬಂದಂತಹ ನೆಂಟರಿಷ್ಟರು ಸೇರಿ ಊಟ ಮಾಡುತ್ತಾರೆ. ಅಲ್ಲಿಯವರೆಗೆ ಉಪವಾಸ ಇರುತ್ತಾರೆ.

                ಮರುದಿವಸ ಅಂದರೆ ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಕುದುರೆಗಳನ್ನು ಮಕ್ಕಳು ಹೊತ್ತುಕೊಳ್ಳುತ್ತಾರೆ. ಜಾಗಟೆ, ಬಾವುಟಗಳು, ಮುಖತೋರಣ, ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಊರಿನ ಆಚೆ ಹರಿಯುತ್ತಿರುವ ವರದಾನದಿಗೆ ಹೋಗುತ್ತಾರೆ. ನದಿಯಲ್ಲಿ ಕುದುರೆಗಳನ್ನು ಸ್ನಾನ ಮಾಡಿಸುತ್ತಾರೆ. ನಂತರ ಬೇಯಿಸಿದ ಹತ್ತರ ಕುರಿಯ ಮಾಂಸದ ಎಡೆಯಿಟ್ಟು ನದಿ ಪೂಜೆ ಮಾಡಿ, ಪ್ರಸಾದವನ್ನು ಪಕ್ಕದ ಊರಾದ ನೇರ್ಲಿಗೆ ಗ್ರಾಮದವರಿಗೆ ಕೊಟ್ಟು ಅದೇ ಮೆರವಣಿಗೆಯೊಂದಿಗೆ ವಾಪಸು ಬರುತ್ತಾರೆ. ಕಟ್ಟೆ ಬಾಗಿಲವರೆಗೆ ಬಂದು ಅಲ್ಲಿಂದ ನೇರವಾಗಿ ದೇವಸ್ಥಾನದ ಬಾಗಿಲಿಗೆ ಬರುತ್ತಾರೆ. ಅಷ್ಟರಲ್ಲಿ ಗ್ರಾಮಸ್ಥರು ಮನೆಗೊಂದು ಸೌದೆ ರಾಶಿ ಹಾಕಿ, ಕೊಂಡ ತಯಾರಿಸುತ್ತಾರೆ. ಮೆರವಣಿಗೆ ಬಂದ ಕುದುರೆ ಹೊತ್ತವರು ಜಾಗಟೆ, ಬಾವುಟ ಮತ್ತು ತೋರಣ ಹಿಡಿದವರು ಮತ್ತು ಗ್ರಾಮಸ್ಥರು ಡೊಳ್ಳು ಕುಣಿತದವರೊಂದಿಗೆ ದೇವಸ್ಥಾನವನ್ನು ಮೂರು ಸುತ್ತು ಹಾಕಿ ಕೊಂಡ ಹಾಯುತ್ತಾರೆ. ಕುದುರೆ ಹೊತ್ತವರು ಜಾಗಟೆ, ಬಾವುಟ, ಮುಖತೋರಣ ಹಿಡಿದವರಿಗೆ ಮತ್ತು ಡೊಳ್ಳು ಕಟ್ಟಿದವರಿಗೆ ದೇವಸ್ಥಾನ ಪ್ರವೇಶ ಮಾಡುವ ಮೊದಲು ಅವರ ಪಾದಗಳಿಗೆ ನೀರು ಹಾಕುತ್ತಾರೆ. ನಂತರ ದೇವಸ್ಥಾನದೊಳಗಡೆ ಹೋಗುತ್ತಾರೆ. ದೇವರಿಗೆ ಪೂಜೆ ಮಾಡಿ ಮೆರವಣಿಗೆಗೆ ಭಾಗವಹಿಸಿದ ಎಲ್ಲರಿಗೂ ತೀರ್ಥಪ್ರಸಾದ ಕೊಡುತ್ತಾರೆ. ದೇವರ ಮುಂದಿಟ್ಟ ಒಡೆದ ತೆಂಗಿನಕಾಯಿ ಭಾಗಗಳನ್ನು ಊರಿನವರಿಗೆ ಹಂಚುತ್ತಾರೆ. ನಂತರ ದೇವರಿಗೆ ಮಹಾಮಂಗಳಾರತಿ ಮಾಡಿ ಮುಖವಾಡಗಳನ್ನು ಹಾಗೂ ಇತರೆ ವಸ್ತುಗಳನ್ನು ಪೆಟ್ಟಿಗೆ ತುಂಬಿ ಇಡುತ್ತಾರೆ.

                ಹಿಂದಿನ ಕಾಲದಲ್ಲಿ ಬರದವಳ್ಳಿ ಗ್ರಾಮದಲ್ಲಿ ದೀಪಾವಳಿಯ ಪಾಡ್ಯದ ದಿವಸ ಗೋಪೂಜೆ ಮಾಡಿ ಇನ್ನೇನು ದನಕರುಗಳನ್ನು ಬಿಡಬೇಕು, ಅಷ್ಟರಲ್ಲಿ ಬೂದಿ ಬಸಪ್ಪನ ದಂಡು ಗ್ರಾಮಕ್ಕೆ ಮುತ್ತಿಗೆ ಹಾಕುತ್ತದೆ. ಆಗ ಗ್ರಾಮದವರೆಲ್ಲರೂ ಒಗ್ಗಟ್ಟಾಗಿ ದಂಡಿನ ಜೊತೆಗೆ ಹೋರಾಡಿ ದಂಡನ್ನು ಹಿಮ್ಮೆಟ್ಟಿಸುತ್ತಾರೆ. ಈ ಹೋರಾಟದಲ್ಲಿ ಒಂದುನೂರಾ ಒಂದು ಜನ ಮರಣ ಹೊಂದುತ್ತಾರೆ. ನಂತರ ಗೋಪೂಜೆ ಮಾಡಿ ದನಕರುಗಳನ್ನು ಬಿಟ್ಟು ಓಡಿಸಿ, ಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ಬರದವಳ್ಳಿಯಲ್ಲಿ ದೀಪಾವಳಿಯಲ್ಲಿ ಎರಡು ಹೊತ್ತು ಗೋಪೂಜೆ ಮಾಡುವ ಸಂಪ್ರದಾಯ ಈಗಲೂ ಇದೆ. ದಂಡಿನೊಡನೆ ಹೋರಾಟ ಮಾಡಿ ಮಡಿದ ನೂರಾಒಂದು ವೀರರಿಗೆ ಅವರ ಸ್ಮರಣಾರ್ಥವಾಗಿ ಕುಮಾರರಾಮನ ಆರಾಧನೆಯ ಆರಿದ್ರಾಮಳೆ ಹಬ್ಬದ ದಿವಸ ಜಟ್ಟಿಗಾನ ಬನದಲ್ಲಿ ನೂರಾಒಂದು ಎಡೆಯಿಟ್ಟು ಗುಳಿ ಕರೆದು ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಹುತಾತ್ಮರನ್ನು ನೆನೆಸಿಕೊಳ್ಳುವ ಸಂಪ್ರದಾಯ ಬೆಳೆದುಬಂದಿದೆ.

                ದೀಪಾವಳಿಯ ಪಾಡ್ಯದ ದಿವಸ ಮಧ್ಯಾಹ್ನ ನೂರಾರು ಜೊತೆ ಬಾಸಿಂಗದ ಎತ್ತುಗಳನ್ನು ಅಗಸೆ ಬಾಗಿಲಿಗೆ ಹೊಡೆದುಕೊಂಡು ಹೋಗಿ ಒಂದು ಎತ್ತರವಾದ ಗೋಣಿಮರದ ಕೊಂಬೆಗೆ ತೆಂಗಿನಕಾಯಿ ಕಟ್ಟಿ ಬಂದೂಕಿನಿಂದ ಗುರಿ ಹೊಡೆಯುವ ಪದ್ಧತಿ ಬೆಳೆದುಬಂದಿದೆ. ನೂರಾರು ತೆಂಗಿನಕಾಯಿಗಳನ್ನು ಗುರಿ ಹೊಡೆಯುತ್ತಾರೆ.

                ದೀಪಾವಳಿ ವರ್ಷತೊಡಕಿನ ದಿವಸ ಪೆಟ್ಟಿಗೆಯಲ್ಲಿರುವ ಮುಖವಾಡಗಳನ್ನು ತೆಗೆದು ಸ್ವಚ್ಛಗೊಳಿಸಿ ಗದ್ದುಗೆಯಲ್ಲಿಟ್ಟು ಪೂಜಿಸುತ್ತಾರೆ. ಗ್ರಾಮಸ್ಥರು ಎಲ್ಲರೂ ಹಣ್ಣು ಕಾಯಿ ಮಾಡಿಸುತ್ತಾರೆ. ಅದೇ ದಿನ ರಾತ್ರಿ ಮುಖವಾಡಗಳನ್ನು ಪೆಟ್ಟಿಗೆಯಲ್ಲಿಟ್ಟು ನಾಗಂದಿಗೆ ಏರಿಸುತ್ತಾರೆ.

                ಸಾಗರ ತಾಲ್ಲೂಕಿನ ಹುಣಸೂರು, ಮರತ್ತೂರು ಗ್ರಾಮಗಳಲ್ಲಿ ಇದೇ ರೀತಿಯ ಮುಖವಾಡಗಳು, ಕುದುರೆಗಳು, ದೀಪದ ಮಲ್ಲಿಯರು, ಛತ್ರಿ, ಚಾಮರ, ಮುಖತೋರಣಗಳು ಇವೆ. ಹಬ್ಬದ ಆಚರಣೆಗಳು ಕುಗ್ವೆ ಗ್ರಾಮದ ಆಚರಣೆಗಳಂತೆ ಇವೆ.

ನಂದಿಕೊಪ್ಪ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ನಂದಿಕೊಪ್ಪ ತಾಲ್ಲೂಕು ಕೇಂದ್ರಕ್ಕೆ ತುಂಬಾ ಸಮೀಪವಿರುವ ಹಳ್ಳಿ. ಇಲ್ಲಿ ದೀವರು ಜನಾಂಗದವರು ಹೆಚ್ಚಾಗಿ ವಾಸವಾಗಿದ್ದಾರೆ. ಈ ಊರಿನಲ್ಲಿ ಕುಮಾರರಾಮನ ದೇವಸ್ಥಾನವಿದೆ. ದೇವಸ್ಥಾನ ತುಂಬಾ ಜೀರ್ಣಾವಸ್ಥೆಯಲ್ಲಿದ್ದು ಹೊಸನಗರ ಶಾಸಕರಾದ ಬಿ. ಸ್ವಾಮಿರಾವ್ ಅವರು ಕ್ಷೇತ್ರ ಕಾರ್ಯಕ್ಕೆ ಹೋದ ಸಂದರ್ಭದಲ್ಲಿ ಸರ್ಕಾರದ ಆರಾಧನೆ ಯೋಜನೆಯಲ್ಲಿ ಸೇರಿಸಿದ್ದು, ಉತ್ತಮ ದೇವಸ್ಥಾನ ನಿರ್ಮಾಣ ಮಾಡುವುದಾಗಿ ತಿಳಿಸಿದರು.

                ದೇವಸ್ಥಾನದಲ್ಲಿರುವ ವಿಗ್ರಹಗಳ ವಾಸ್ತುವಿನ ವಿವರ ಹೀಗಿದೆ.

                ನಾಲ್ಕು ಮರದ ಮುಖವಾಡಗಳಿವೆ. ರುಂಡಗಳು ಮಾತ್ರ. ಒಂದರ ಬಣ್ಣ ಕೆಂಪು, ಇನ್ನೊಂದರ ಬಣ್ಣ ಹಸಿರು. ಇದರ ಮುಂದೆ ಜೀನು ಬಿಗಿದ ಕುದುರೆಯ ವಿಗ್ರಹವಿದೆ. ಕೆಂಪುಬಣ್ಣದ ಮುಖವಾಡಕ್ಕೆ ಕೋರೆ ಮೀಸೆ ಗಡ್ಡಗಳಿವೆ. ಕೆಂಪುಬಣ್ಣದ ಮುಖವಾಡ ಗಾಮ, ಹಸಿರು ಬಣ್ಣದ ಮುಖವಾಡ ಕುಮಾರರಾಮ ಎಂದು ಊಹಿಸಬಹುದು. ಇನ್ನೆರಡು ಮುಖವಾಡಗಳ ಬಣ್ಣ ಕೆಂಪುಮಿಶ್ರಿತ ಬಿಳಿಬಣ್ಣ. ಇವುಗಳಿಗೆ ಮೀಸೆ, ಗಡ್ಡಗಳಿವೆ. ಈ ನಾಲ್ಕು ಮುಖವಾಡಗಳ ಎತ್ತರ ಒಂದು ಅಡಿ, ಅಗಲ ಒಂದು ಅಡಿ.

                ಕುಮಾರರಾಮನ ಮುಖವಾಡದ ಪಕ್ಕದಲ್ಲಿ ಎರಡು ಕಲ್ಲಿನ ಮುಖವಾಡಗಳು. ಒಂದು ಸ್ತ್ರೀ ಮುಖವಾಗಿರುವುದರಿಂದ ಕುಮಾರರಾಮನ ತಾಯಿ ಹರಿಯಲಾದೇವಿ ಮತ್ತು ಇನ್ನೊಂದು ಮುಖವಾಡ ಕುಮಾರರಾಮನದು ಎಂದು ಊಹಿಸಬಹುದು. ಇವುಗಳು ಕೂಡ ಎತ್ತರ ಹನ್ನೆರಡು ಇಂಚು, ಅಗಲ ಹನ್ನೆರಡು ಇಂಚು ಇವೆ. ಮಣ್ಣಿನ ಗದ್ದುಗೆಯ ಮೇಲೆ ಈ ಎಲ್ಲಾ ಮುಖವಾಡಗಳನ್ನು ಇಟ್ಟಿದ್ದಾರೆ. ಪ್ರತಿ ಸೋಮವಾರ ವಾರಕ್ಕೊಮ್ಮೆ ಪೂಜೆ ನಡೆಯುತ್ತದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಮಾಡುತ್ತಾರೆ. ದೀಪಾವಳಿಯಲ್ಲಿ ವಿಶೇಷ ಪೂಜೆ ಮಾಡಿ ಗ್ರಾಮಸ್ಥರೆಲ್ಲರೂ ಹಣ್ಣುಕಾಯಿ ಮಾಡಿಸುತ್ತಾರೆ. ನರಕ ಚತುರ್ದಶಿ ದಿವಸ ನೋೀನಿಯನ್ನು ಆಚರಿಸುತ್ತಾರೆ.

                ಜೂನ್ ತಿಂಗಳಲ್ಲಿ ಆರಿದ್ರಾಮಳೆ ಪ್ರಾರಂಭ ಅಥವಾ ಮುಕ್ತಾಯದ ಪಾದದಲ್ಲಿ ಒಂದು ಮಂಗಳವಾರ ಹಬ್ಬ ಪ್ರಾರಂಭವಾಗಿ ಗುರುವಾರ ಹೀಗೆ ಮೂರು ದಿವಸಗಳ ಕಾಲ ಉತ್ಸವದ ರೀತಿಯಲ್ಲಿ ಹಬ್ಬ ಆಚರಿಸುತ್ತಾರೆ. ಹಬ್ಬಕ್ಕೆ ಸೋನಲೆಯಿಂದ ದೊಂಬಿದಾಸರನ್ನು ಕರೆಸುತ್ತಾರೆ. ಮೂರು ಜನ ಮಹಿಳೆಯರು, ಎರಡು ಜನ ಗಂಡಸರು. ಇವರ ತಂಡದಲ್ಲಿ ನಾಲ್ಕು ಕಂಚಿನ ವಿಗ್ರಹಗಳು. ಇವು ಕೂಡ ಮುಖವಾಡಗಳು. (ನಾಲ್ಕು ಇಂಚು ಎತ್ತರ, ನಾಲ್ಕು ಇಂಚು ಅಗಲ) ನಾಲ್ಕು ಜಾಗಟೆಗಳಿವೆ. ಎರಡು ದೊಡ್ಡ ಗಂಟೆಗಳು.

                ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಗ್ರಾಮಸ್ಥರು ದೇವರು ಹೊತ್ತುಕೊಂಡು, ದೊಂಬಿದಾಸರು ಮದ್ದಲೆ, ಜಾಗಟೆ, ಗಂಟೆ ಬಾರಿಸುತ್ತಾ ಮಹಿಳೆಯರು ಕುಮಾರರಾಮನ ಹಾಡುಗಳನ್ನು ಹಾಡುತ್ತ, ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಹೊಸನಗರ ಹೋಗಿ ಗುಡಿಗಾರರಿಂದ ಮುಖವಾಡಗಳಿಗೆ ಬಣ್ಣ ಹಚ್ಚಿಸಿಕೊಂಡು ವಾಪಸು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಬಂದು ದೇವರುಗಳನ್ನು ಗದ್ದುಗೆ ಮೇಲೆ ಕೂರಿಸಿ ಹಣ್ಣುಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ.

                ಬುಧವಾರ ರಾತ್ರಿ 8 ಗಂಟೆಗೆ ನಂದಿಕೊಪ್ಪದಿಂದ ಒಂದೂವರೆ ಕಿಲೋಮೀಟರು ದೂರವಿರುವ ದೋಣಿಹೊಳೆಗೆ ಗ್ರಾಮಸ್ಥರು ದೇವರುಗಳನ್ನು ಹೊತ್ತುಕೊಂಡು, ಡೊಳ್ಳು ಕುಣಿತದ ಮೆರವಣಿಗೆಯಲ್ಲಿ ದೊಂಬಿದಾಸರು ಕುಮಾರರಾಮನ ಸಾಂಗತ್ಯವನ್ನು ಹಾಡುತ್ತಾ ಹೋಗುತ್ತಾರೆ. ನದಿಯ ದಂಡೆಯಲ್ಲಿ ಗದ್ದುಗೆ ತಯಾರಿಸಿ, ದೇವರುಗಳನ್ನು ಗದ್ದುಗೆ ಮೇಲೆ ಕೂರಿಸಿ ದೇವರುಗಳಿಗೆ ನದಿಯ ನೀರಿನಿಂದ ಸ್ನಾನ ಮಾಡಿಸಿ, ಹಣ್ಣುಕಾಯಿ ಮಾಡಿ ಪೂಜೆ ಸಲ್ಲಿಸುತ್ತಾರೆ.

                ನಂತರ ದೇವರುಗಳನ್ನು ಹೊತ್ತು ಮೆರವಣಿಗೆಯಲ್ಲಿ ಆದಿಸ್ಥಳವಾದ ಎಡಬೈಲು ಭೂತನ ವನಕ್ಕೆ ತಂದು ಪೂಜೆ ಸಲ್ಲಿಸಿ ಮೆರವಣಿಗೆ ಹೊರಡುತ್ತದೆ. ದೇವರ ಮುಂಭಾಗದಲ್ಲಿ ದೊಂಬರ ಮಹಿಳೆಯರು ಆವೇಶಭರಿತರಾಗಿ ಹಾಡುತ್ತಾ ಕುಣಿಯುತ್ತಾ ಮೆರವಣಿಗೆ ಗುರುವಾರ ಬೆಳಗ್ಗೆ 10 ಗಂಟೆಯಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಮೆರವಣಿಗೆಯೊಂದಿಗೆ ಎಡಬೈಲು ಭೂತನ ವನಕ್ಕೆ ಹೋಗಿ ಇಲ್ಲಿ ದೇವರುಗಳನ್ನು ಗದ್ದುಗೆಯಲ್ಲಿ ಕೂರಿಸಿ ಪೂಜೆ. ಪುನಃ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಹೋಗಿ ದೇವರುಗಳನ್ನು ಗದ್ದುಗೆಯಲ್ಲಿ ಕೂರಿಸಿ ಗ್ರಾಮಸ್ಥರೆಲ್ಲರೂ ಪೂಜೆ ಸಲ್ಲಿಸುತ್ತಾರೆ.

                ದೇವಸ್ಥಾನದ ಎಡಭಾಗದಲ್ಲಿ ತುಂಬರ ಮರದಲ್ಲಿ ಚೌಡಿ, ಎದುರುಭಾಗದಲ್ಲಿ ಮದ್ದಾಲೆ ಚೌಡಿ, ಹಿಂಭಾಗದಲ್ಲಿ ವಡಬೈಲು ಭೂತವಿದೆ. ಬಲಭಾಗದ ಸ್ವಲ್ಪದೂರದಲ್ಲಿ ಶೀಲವಂತ ಯಕ್ಷಿ ಇದೆ. ಹೀಗೆ ದೇವಾಲಯದ ಪರಿಸರದಲ್ಲಿ ಅನೇಕ ದೇವತೆಗಳು ವಾಸವಾಗಿದ್ದಾರೆ. ಹೊಸನಗರ ತಾಲ್ಲೂಕಿನಲ್ಲಿ ನಂದಿಕೊಪ್ಪದ ಹಾಗೆ ಅನೇಕ ಹಳ್ಳಿಗಳಲ್ಲಿ ಕುಮಾರರಾಮನ ಆರಾಧನೆ ತುಂಬಾ ವಿಶಿಷ್ಟ ರೀತಿಯಲ್ಲಿ ಆಚರಣೆಯಲ್ಲಿದೆ. ಕುಮಾರರಾಮನ ದೇವಸ್ಥಾನಗಳಿರುವ ಹಳ್ಳಿಗಳು.

 1. ನೇರಳೆ ಮಣಸಗಟ್ಟೆ ಗ್ರಾಮ                        ಹೊಸನಗರ
 2. ಮುಳಗೇರಿ ಯಲ್ಲಗುಡ್ಡೆ ಗ್ರಾಮ                         ___..__
 3. ಬೈಸ್ಕುಂದ ಮಾವಿನಕಟ್ಟೆ ಗ್ರಾಮ                     ___,,__
 4. ಕೆರೆಕೊಪ್ಪ ಮಾವಿನಕಟ್ಟೆ ಗ್ರಾಮ                     ___..__
 5. ವಾರಂಬಳ್ಳಿ ಸೋನಲೆ ಗ್ರಾಮ                              ___,,__
 6. ನಿವಣೆ ಸೋನಲೆ ಗ್ರಾಮ                              ___,,__
 7. ಹೆಬ್ಬುರಳಿ ಸಂಪೆಕಟ್ಟೆ ಗ್ರಾಮ                           ___,,__
 8. ಬಡಹೊಸಳ್ಳಿ ಬಿದರಹಳ್ಳಿ ಗ್ರಾಮ                           ___,,__

                ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಕುಮಾರರಾಮನ ಹಬ್ಬವನ್ನು ಆಚರಿಸುತ್ತಾರೆ.

 1. ಕೋಣಂದೂರು ತೀರ್ಥಹಳ್ಳಿ ತಾಲ್ಲೂಕು
 2. ಹಿರೇಕಲ್ಲಳ್ಳಿ ___,,__
 3. ಹುತ್ತಳ್ಳಿ, ಕಲ್ಲಳ್ಳಿ ಗ್ರಾಮ ___,,__

ಕೊರಕೋಡು, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ಇದೊಂದು ಪುಟ್ಟಹಳ್ಳಿ. ಕುಪ್ಪಗಡ್ಡೆ ಗ್ರಾಮಕ್ಕೆ ತುಂಬಾ ಹತ್ತಿರದಲ್ಲಿದೆ. ಇಲ್ಲಿ ಹೆಚ್ಚಾಗಿ ದೀವರು ಜನಾಂಗದವರು ಇದ್ದಾರೆ. ಈ ಹಳ್ಳಿಯಲ್ಲಿ ಕುಮಾರರಾಮನ ಸುಸಜ್ಜಿತವಾದ ದೇವಸ್ಥಾನವಿದೆ. ಇದನ್ನು ರಾಮನ ಮತ್ತು ರಾಮೇಶ್ವರ ದೇವರ ದೇವಸ್ಥಾನವೆಂದು ಕರೆಯುತ್ತಾರೆ. ಇಲ್ಲಿಯ ದೇವರುಗಳ ವಾಸ್ತುವಿನ ವಿವರ ಈ ರೀತಿ ಇದೆ. ದೇವಸ್ಥಾನದಲ್ಲಿ ಒಂದು ತೂಗುಮಂಚವಿದೆ. ಇದರ ಉದ್ದ ನಾಲ್ಕು ಅಡಿ, ಅಗಲ ನಾಲ್ಕು ಅಡಿ, ಎತ್ತರ ಒಂದೂವರೆ ಅಡಿ ಇದೆ. ಈ ತೂಗುಮಂಚದ ಮೇಲೆ ಎರಡು ಅಡಿ ಎತ್ತರ, ಒಂದೂವರೆ ಅಡಿ ಅಗಲದ ಕೆಂಪುವರ್ಣದ ಮುಖವಾಡ ಇದೆ. ಕೋರೆ ಮೀಸೆ ಇದೆ. ಮುಖವಾಡಕ್ಕೆ ಕಿರೀಟವಿದೆ. ತೂಗುಮಂಟಪದ ಮೇಲಿರುವ ಮಂಟಪದ ಮಧ್ಯೆ ರಾಮನ ಮುಖವಾಡವನ್ನು ಇಟ್ಟಿದ್ದಾರೆ. ರಾಮನ ಮುಖವಾಡದ ಬಲಭಾಗದಲ್ಲಿ ರಾಮನ ತಾಯಿ ಹರಿಯಲಾದೇವಿಯ ವಿಗ್ರಹವನ್ನು ಇಟ್ಟಿದ್ದಾರೆ. ಈ ವಿಗ್ರಹದ ಎತ್ತರ ಒಂದೂವರೆ ಅಡಿ, ಅಗಲ ಆರು ಇಂಚು ಇದೆ. ಸೀರೆ (ಪತ್ತಲ) ಉಡಿಸಿದ್ದಾರೆ. ಮೂಗಿಗೆ ಬಂಗಾರದ ನತ್ತು ಇದೆ. ಕೊರಳಿಗೆ ಚಿನ್ನದ ಮಾಂಗಲ್ಯಸರ ಹಾಕಿದ್ದಾರೆ. ಬೆಳ್ಳಿಯ ಕಟ್ಟು ಇರುವ ರುದ್ರಾಕ್ಷಿಸರ, ಬೆಳ್ಳಿಯ ಲಿಂಗದ ಕಾಯಿ, ಬೆಳ್ಳಿಯ ಲಿಂಗದ ಕರಡಿಗೆ, ಸೊಂಟಕ್ಕೆ ಬೆಳ್ಳಿಯ ಗೆಜ್ಜೆಪಟ್ಟಿಯನ್ನು ತೊಡಿಸಿದ್ದಾರೆ.

                ಕುಮಾರರಾಮನ ಹಣೆಯಲ್ಲಿ ಬಂಗಾರದ ತಗಡಿನ ಉದ್ದ ನಾಮವಿದೆ. ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ ಇದೆ. ಕಿರೀಟದ ಕೆಳಭಾಗದಲ್ಲಿ ಬೆಳ್ಳಿಯ ಛತ್ರಿಯನ್ನು ಜೋಡಿಸಿದ್ದಾರೆ. ಎಡಭಾಗದಲ್ಲಿ ಜೀನು ಬಿಗಿದ ಜೋಲು ಹೊದಿಸಿದ ಮರದ ಕುದುರೆಯಿದೆ. ಕುದುರೆಯ ಕೊರಳಿಗೆ ಲಿಂಗದಕಾಯಿ ಹಾಕಿದ್ದಾರೆ.

                ಈ ದೇವಸ್ಥಾನದಲ್ಲಿ ಪೂಜಾ ವಿಗ್ರಹ ಅಲ್ಲದೆ ಪಂಚಲೋಹದ ಉತ್ಸವಮೂರ್ತಿ ಕೂಡ ಇದೆ. ವಿಗ್ರಹದ ಹಿಂಭಾಗದಲ್ಲಿ ಒಂದೂವರೆ ಅಡಿ ಎತ್ತರ, ಒಂದು ಅಡಿ ಅಗಲದ ಸಿಂಹದ ಮುಖವುಳ್ಳ ಪಂಚಲೋಹದ ಪ್ರಭಾವಳಿ ಇರುತ್ತದೆ. ಪ್ರಭಾವಳಿಯ ಸಿಂಹದ ಮುಖದ ಮೇಲ್ಭಾಗದಲ್ಲಿ ಬೆಳ್ಳಿಯ ಛತ್ರಿ ಇದೆ. ಕುಮಾರರಾಮನ ವಿಗ್ರಹದ ನೆತ್ತಿಯ ಮೇಲೆ ಪಂಚಮುಖಿ ನಾಗರ ಹೆಡೆಯಿದೆ. ಕುಮಾರರಾಮ ಬಲಗೈಯಲ್ಲಿ ಬಿಚ್ಚುಕತ್ತಿಯನ್ನು ಹಿಡಿದಿದ್ದಾನೆ. ಎಡಗೈಯಲ್ಲಿ ಕುದುರೆಯ ಲಗಾಮು ಹಿಡಿದು ಕುದುರೆಯ ಮೇಲೆ ಕುಳಿತಿದ್ದಾನೆ. ಕುದುರೆ ಮುಂದಿನ ಕಾಲುಗಳನ್ನು ಎತ್ತಿ ನಿಂತಿದೆ. ಕುದುರೆಯ ಮೇಲೆ ಕುಳಿತಿರುವ ಕುಮಾರರಾಮನ ವಿಗ್ರಹದ ಎತ್ತರ ಒಂಭತ್ತು ಇಂಚು, ಅಗಲ ಮೂರು ಇಂಚು ಇದೆ. ಕಂಚಿನ ಪೀಠದ ಮೇಲೆ ಕುದುರೆಯನ್ನು ನಿಲ್ಲಿಸಿದ್ದಾರೆ.

                ದೇವಸ್ಥಾನದಲ್ಲಿ ನಾಲ್ಕೂವರೆ ಅಡಿ ಉದ್ದ, ಅಗಲ ಎರಡು ಇಂಚು ಮತ್ತು ಮೂರು ಅಡಿ ಉದ್ದ, ಅಗಲ ಎರಡು ಇಂಚಿನ ಎರಡು ಬಿಚ್ಚುಕತ್ತಿಗಳು ಇವೆ.

                ಗರ್ಭಗುಡಿಯ ಬಲಭಾಗದ ಮೂಲೆಯಲ್ಲಿ ಇಪ್ಪತ್ತೈದು ಶೂಲಗಳಿವೆ. ಶೂಲದ ರಾಶಿಗೆ ಶೂಲದ ಬೀರಪ್ಪ ಎಂದು ಹೇಳುತ್ತಾರೆ.

 

ಹರಕೆಗಳು ಮತ್ತು ನಂಬಿಕೆಗಳು

                ಮಕ್ಕಳಿಲ್ಲದವರು ಮಕ್ಕಳಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ.

                ಜಾನುವಾರುಗಳಿಗೆ ಕಾಯಿಲೆ ಬಂದರೆ ನಿವಾರಣೆಗಾಗಿ ಮಾಟ ಮಂತ್ರಗಳನ್ನು ತೆಗೆದುಹಾಕಲು, ಕುಟುಂಬದವರು ಕಾಯಿಲೆ ಬಿದ್ದಾಗ ವಾಸಿ ಮಾಡು ಎಂದು ಕುಮಾರರಾಮನಿಗೆ ಹರಕೆ ಮಾಡಿಕೊಳ್ಳುತ್ತಾರೆ.

                ಫಸಲು ಅಭಿವೃದ್ಧಿಯ ಬಗ್ಗೆ ಬೆಳ್ಳಿಛತ್ರಿ, ಘಂಟೆ, ಎಣ್ಣೆ ಒಪ್ಪಿಸುವುದು ಮುಂತಾದ ಹರಕೆ ಮಾಡಿಕೊಳ್ಳುತ್ತಾರೆ.

ಪ್ರತಿ ಭಾನುವಾರ ಕುಮಾರರಾಮನ ಪೂಜಾರಿಯಾದ ಬಂಗಾರಪ್ಪ ಎಂಬುವವನ ಮೈ ಮೇಲೆ ಬಂದು ಹೇಳಿಕೆಯಾಗುತ್ತದೆ. ಭಕ್ತಾದಿಗಳು ಸೊರಬ, ಶಿಕಾರಿಪುರ, ಶಿರಸಿ, ಹೊಸನಗರ ತಾಲ್ಲೂಕುಗಳಿಂದ ಬರುತ್ತಾರೆ.

                ಗ್ರಾಮಸ್ಥರು ಅವರವರ ಮನೆಗಳಲ್ಲಿ ಮರಣ ಹೊಂದಿದವರಿಗೆ ವೈಕುಂಠ ಸಮಾರಾಧನೆ ಮಾಡುವಾಗ ನಿಂಬೆಕಾಯಿ, ಭಸ್ಮ ಮಂತ್ರಿಸಿಕೊಂಡು ಹೋಗುತ್ತಾರೆ.

                ಅಮಾವಾಸ್ಯೆ, ಹುಣ್ಣಿಮೆ ದಿವಸ ಕುಮಾರರಾಮನಿಗೆ ವಿಶೇಷ ಪೂಜೆ ನಡೆಯುತ್ತದೆ. ವಾರದಲ್ಲಿ ಪೂಜಾರಪ್ಪ ಯಂತ್ರದ ತಗಡು ಕಟ್ಟುಕಾಯಿ ಮಾಡಿಕೊಡುತ್ತಾನೆ. ವಾರದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ. ಮೂರು ಅಥವಾ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಜೂನ್ ಅಂತ್ಯ ಅಥವಾ ಜುಲೈ ಪ್ರಾರಂಭದ ಒಂದು ಭಾನುವಾರ ಜಾತ್ರೆ ನಡೆಯುತ್ತದೆ. ಜಾತ್ರೆ ನಡೆಯುವ ಒಂದು ವಾರದ ಹಿಂದಿನ ಭಾನುವಾರ ಶೂಲದ ಬೀರಪ್ಪನ ಹಬ್ಬವನ್ನು ಮಾಡುತ್ತಾರೆ. ಈ ದಿನ ಗ್ರಾಮದಲ್ಲಿರುವ ಎಲ್ಲಾ ಡೊಳ್ಳುಗಳನ್ನು ಇಳಿಸಿ ದೇವಸ್ಥಾನಕ್ಕೆ ತಂದು ಬೀರಪ್ಪನಿಗೆ ಪೂಜೆ ಮಾಡುತ್ತಿರುವಾಗ ಡೊಳ್ಳು ಬಾರಿಸುತ್ತಾರೆ. ನಂತರ ಗ್ರಾಮದ ಎಲ್ಲಾ ದೇವರುಗಳನ್ನು ಪೂಜೆ ಮಾಡುತ್ತಾರೆ. ಪೂಜೆ ಮಾಡುವಾಗ ಡೊಳ್ಳು ಬಾರಿಸಲೇಬೇಕು. ಬೀರಪ್ಪನನ್ನು ಪೂಜೆ ಮಾಡುವಾಗ ಕುಮಾರರಾಮನಿಗೆ ಹಚ್ಚಿದ ದೀಪವನ್ನು ಜಾತ್ರೆ ಆಗುವವರೆಗೆ ಆರಿಸುವ ಹಾಗಿಲ್ಲ. ಅದು ನಂದಾದೀಪವಾಗಿ ಇರಬೇಕು. ಜಾತ್ರೆ ದಿವಸ ಬರುವವರೆಗೆ ಪ್ರತಿನಿತ್ಯ ಎರಡೂ ಹೊತ್ತು ಕುಮಾರರಾಮನಿಗೆ ಪೂಜೆ ನಡೆಯುತ್ತದೆ. ಪೂಜಾ ಸಮಯದಲ್ಲಿ ಎರಡೂ ಹೊತ್ತು ಡೊಳ್ಳು ಬಾರಿಸುತ್ತಾರೆ. ಮುಂದೆ ಬರುವ ಭಾನುವಾರ ಹಬ್ಬದ ದಿವಸ ಬೆಳಗಿನ ಜಾವ ದೇವರು ಪೂಜಾರಪ್ಪನ ಮೈಮೇಲೆ ಬರುತ್ತದೆ. ದೇವರು ಬಂದಾಗ ಪೂಜಾರಪ್ಪ ಖಡ್ಗವನ್ನು ಹಿಡಿದು ಝಳಪಿಸುತ್ತಾ, ದೊಂದಿ ಬೆಳಕಿನಲ್ಲಿ ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಊರ ಮುಂದಿರುವ ಕಟ್ಟೆ ಬಾಗಿಲವರೆಗೆ ಹೋಗಿ ವಾಪಾಸು ಬರುತ್ತಾನೆ. ನಂತರ ಕುಮಾರರಾಮನ ಮುಖಕ್ಕೆ ಬಟ್ಟೆಯ ತೆರೆಯನ್ನು ಹಿಡಿದು ಎರಡು ಕುರಿಗಳನ್ನು ಶೂಲದ ಬೀರಪ್ಪನಿಗೆ ಬಲಿ ಕೊಡುತ್ತಾರೆ. ನಂತರ ಕುಮಾರರಾಮನ ಮುಖಕ್ಕೆ ಹಾಕಿದ ತೆರೆಯನ್ನು ತೆಗೆದು ಹಣ್ಣು ಕಾಯಿ ಒಡೆದು ಪೂಜೆ ಮಾಡುತ್ತಾರೆ.

                ಆವೇಶಿತನಾದ ಪೂಜಾರಪ್ಪ, ಜೊತೆಯಲ್ಲಿ ಮೂರ್ನಾಲ್ಕು ಜನ ಸೇರಿಕೊಂಡು ಊರಿನ ಪ್ರತಿಯೊಂದೂ ಮನೆಗೆ ಹೋಗಿ ಸೌದೆ ಸಂಗ್ರಹ ಮಾಡುತ್ತಾರೆ. ಗ್ರಾಮಸ್ಥರು ಸೌದೆಯನ್ನು ದೇವಸ್ಥಾನದ ಮುಂಭಾಗದಲ್ಲಿ ರಾಶಿ ಹಾಕುತ್ತಾರೆ.

                ಮಾರನೆ ದಿವಸ ಬೆಳಗ್ಗೆ ಪೂಜಾರಪ್ಪ ಸೌದೆ ರಾಶಿಗೆ ಬೆಂಕಿ ಹಾಕುತ್ತಾನೆ. ಸೌದೆ ಸುಟ್ಟು ಕೆಂಡವಾದನಂತರ ಪೂಜಾರಪ್ಪ ಸುಟ್ಟ ಕೆಂಡಗಳನ್ನು ರಾಶಿ ಮಾಡುತ್ತಾನೆ. ನಂತರ ಕೆಂಡದ ರಾಶಿಗೆ ಐನೋರಿಂದ (ಲಿಂಗಾಯಿತರು) ಪೂಜೆ ಮಾಡಿಸುತ್ತಾರೆ. ನಂತರ ಪೂಜಾರಪ್ಪ ಪ್ರಥಮವಾಗಿ ಕೊಂಡ ಹಾಯುತ್ತಾನೆ. ನಂತರ ಗ್ರಾಮಸ್ಥರೆಲ್ಲರೂ ಕೊಂಡ ಹಾಯುತ್ತಾರೆ. ನಂತರ ಪೂಜಾರಪ್ಪ ಮತ್ತು ಗ್ರಾಮಸ್ಥರು ಹಾಗೂ ಈ ದೃಶ್ಯವನ್ನು ನೋಡಲು ಬಂದ ಸಾವಿರಾರು ಜನಗಳು ಸೇರಿ ಊರಿ ಹೊರಗಿನ ಕೆರೆಯವರೆಗೆ ಹೋಗುತ್ತಾರೆ. ಪೂಜಾರಪ್ಪ ಮೊಳಕಾಲವರೆಗೆ ಕೆರೆ ಇಳಿದು ಆ ವರ್ಷ ನಡೆಯುವ ಮಳೆ ಬೆಳೆಯ ಬಗ್ಗೆ ಕಾರಣಿಕ (ಭವಿಷ್ಯ) ಹೇಳುತ್ತಾನೆ. ನಂತರ ಅವರವರ ಮನೆಗಳಿಗೆ ಹೋಗುತ್ತಾರೆ.

                ನವರಾತ್ರಿ ಒಂಭತ್ತು ದಿವಸಗಳ ಕಾಲ ಕುಮಾರರಾಮನಿಗೆ ಎರಡು ಹೊತ್ತು ಪೂಜೆ ಮಾಡಿ ನಂದಾದೀಪ ಹಚ್ಚುತ್ತಾರೆ. ದಶಮಿ ದಿವಸ ಕುಮಾರರಾಮನ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು, ಊರ ಹೊರಗಿರುವ ಕೆರೆಯ ಹತ್ತಿರ ಇರುವ ಬನ್ನಿಕಟ್ಟೆಯಲ್ಲಿ ಪಲ್ಲಕ್ಕಿಯನ್ನು ಇಡುತ್ತಾರೆ. ಊರಿನ ಪಟೇಲರು ಬಂದು ಕುಮಾರರಾನಿಗೆ ಬನ್ನಿ ಮುಡಿಸಿ, ಹಣ್ಣು ಕಾಯಿ ಮಾಡಿಸುತ್ತಾರೆ. ಪುನಃ ಊರೊಳಗೆ ಪ್ರತಿ ಮನೆಗೆ ಪಲ್ಲಕ್ಕಿ ಹೋಗುತ್ತದೆ. ಪ್ರತಿ ಕುಟುಂಬದವರು ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸುತ್ತಾರೆ.

                ಊರಿನಲ್ಲಿ ಆ ವರ್ಷ ಮದುವೆಯಾದ ವಧೂವರರು ದೇವಸ್ಥಾನಕ್ಕೆ ಹೋಗಿ ಕರ್ಪೂರದಾರತಿ ಮತ್ತು ಹತ್ತು ಬೆರಳಾರತಿ ಮಾಡುತ್ತಾರೆ ಹಾಗೂ ಎರಡೂವರೆ ಅಥವಾ ಮೂರು ಸಾವಿರ ವೀಳ್ಯದೆಲೆಗಳಿಂದ ಎಲೆಪೂಜೆ ಮಾಡಿಸುತ್ತಾರೆ.

                ದೀಪಾವಳಿಯಲ್ಲಿ ಬೂರೆಹಬ್ಬದ ದಿವಸ ದೇವಸ್ಥಾನದಲ್ಲಿ ಬೂರೆನೀರು ತರುವವರೆಗೆ, ಊರಿನಲ್ಲಿ ಯಾರೂ ಬೂರೆನೀರು ತರುವ ಹಾಗಿಲ್ಲ. ಪಾಡ್ಯದ ದಿವಸ ಬಾಸಿಂಗ ಸೂಡಿದ ಎತ್ತುಗಳನ್ನು ದೇವಸ್ಥಾನಕ್ಕೆ ಹೊಡೆದುಕೊಂಡು ಬಂದು ಎತ್ತುಗಳಿಗೆ ಸುಳಿಗಾಯಿ ಒಡೆಯುತ್ತಾರೆ. ಕುಮಾರರಾಮನಿಗೆ ಹೆಚ್ಚಾಗಿ ದೀವರು, ಲಿಂಗಾಯತರು, ಮಡಿವಾಳರು, ಜೋಗಿಗಳು ಭಕ್ತರಿದ್ದಾರೆ.

ಹೆಚ್ಚೆ ಗ್ರಾಮ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ಹೆಚ್ಚೆ ಗ್ರಾಮ ಸೊರಬ ತಾಲ್ಲೂಕಿನಲ್ಲಿ ತುಂಬಾ ಪ್ರಮುಖವಾದ ಹಳ್ಳಿ. ಇದು ಐತಿಹಾಸಿಕ ಹಿನ್ನೆಲೆಯುಳ್ಳದ್ದು. ಇಲ್ಲಿ ಕುಮಾರರಾಮನ ದೇವಸ್ಥಾನವಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ದೀವರು ಜನಾಂಗದವರು ವಾಸವಾಗಿದ್ದಾರೆ. ಇವರು ಈ ದೇವಸ್ಥಾನಕ್ಕೆ ರಾಮೇಶ್ವರ ದೇವರ ದೇವಾಲಯವೆಂದು ಕರೆಯುತ್ತಾರೆ. ಇಲ್ಲಿರುವ ದೇವರುಗಳ ವಾಸ್ತುವಿನ ವಿವರ ಹೀಗಿದೆ; ಎರಡು ಮುಖವಾಡಗಳಿವೆ. ಇವು ಹಲಸಿನ ಮರದಿಂದ ಕೆತ್ತಲ್ಪಟ್ಟಿವೆ. ರುಂಡಗಳು ಮಾತ್ರ ಇವೆ. ಒಂದು ಕುಮಾರರಾಮ, ಇನ್ನೊಂದು ಗಾಮೇಶ್ವರ (ಗಾಮ) ದೇವರು. ಎರಡು ಮುಖವಾಡಗಳೂ ಒಂದು ಅಡಿ ಎತ್ತರ, ಒಂದು ಅಡಿ ಅಗಲ. ಕುಮಾರರಾಮನ ಮುಖವಾಡ ಬಣ್ಣ ಹಳದಿ. ದೊಡ್ಡದಾದ ಕಣ್ಣುಗಳು. ಗಲ್ಲಿ ಮೀಸೆ, ಕೋರೆಹಲ್ಲುಗಳು, ಹಣೆಯಲ್ಲಿ ಬಿಳಿಯ ನಾಮವಿದೆ. ಗಾಮನ ಮುಖವಾಡ ಬಣ್ಣ ಕೆಂಪು. ದೊಡ್ಡ ಕಣ್ಣುಗಳು. ಮೀಸೆಯಿರುವುದಿಲ್ಲ.

                ದೀಪಾವಳಿಯ ಪಾಡ್ಯದ ದಿವಸ ವಿಶೇಷವಾದ ಪೂಜೆ ನಡೆಯುತ್ತದೆ. ದೇವಸ್ಥಾನದಿಂದ ಎರಡೂ ಮುಖವಾಡಗಳನ್ನು ಪೆಟ್ಟಿಗೆಯಲ್ಲಿಟ್ಟುಕೊಂಡು ಪೂಜಾರಿ ಹೊತ್ತುಕೊಂಡು ಊರ ಹೊರಗಿರುವ ಬನಕ್ಕೆ ಹೋಗುತ್ತಾರೆ. ಜೊತೆಗೆ ಊರಿನ ಜನಗಳು ಇರುತ್ತಾರೆ. ಬನದಲ್ಲಿರುವ ಪೀಠದ ಪಕ್ಕದಲ್ಲಿ ಊರಿನ ಮಡಿವಾಳ ಬಂದು ಹಡದಿ ಬಟ್ಟೆ ಹಾಸುತ್ತಾನೆ. ಅದರ ಮೇಲೆ ಮಡಿಲಕ್ಕಿ ಹರಡಿ ಅಕ್ಕಿಯ ಮೇಲೆ ಮುಖವಾಡಗಳನ್ನು ಕೂರಿಸುತ್ತಾರೆ. ಋತುಮತಿ ಆಗದೇ ಇರುವ ಎರಡು ಜನ ಕನ್ಯೆಯರು ದೇವಸ್ಥಾನದಲ್ಲಿ ಕುಂಬಳಕಾಯಿ ಪಾಯಸ, ಅನ್ನ, ಸಾರು ಅಡುಗೆ ತಯಾರಿಸುತ್ತಾರೆ. ಮುತ್ತೈದೆಯರು ಮಾಡಿದ ಅಡುಗೆಯನ್ನು ಹೊರಬನಕ್ಕೆ ತೆಗೆದುಕೊಂಡು ಹೋಗಿ ಆರು ಎಡೆ ಮಾಡುತ್ತಾರೆ. ಒಂದು ಎಡೆ ಹಡದಿ ಹಾಸಿದ ಮಡಿವಾಳನಿಗೆ, ಒಂದು ಎಡೆ ಗುಳಿ ಎಡೆ, ನೈವೇದ್ಯ ಮಾಡಲು, ಅಡುಗೆ ತಯಾರಿಸಿದವರಿಗೆ ಒಂದು ಎಡೆ, ಇನ್ನೊಂದು ಎಡೆ ಪೂಜಾರಿಗೆ ಹೀಗೆ ಐದು ಎಡೆ ದೇವರಿಗೆ ನೈವೇದ್ಯ ಮಾಡುತ್ತಾರೆ.

                ಎರಡು ಸೇರು ಅಕ್ಕಿ ಬೇಯಿಸಿದ ಅನ್ನದಿಂದ ಬಲಿ ಎಡೆ ಎಂದು ಮಾಡುತ್ತಾರೆ. ಐದು ಗಂಟೆಗೆ ಬಲಿ ಎಡೆಯನ್ನು ಮಾಡುತ್ತಾರೆ.

                ನೈವೇದ್ಯಕ್ಕೆ ಎಡೆ ಇಟ್ಟ ನಂತರ ದೇವರಿಗೆ ಹಣ್ಣು ಕಾಯಿ ಒಡೆದು ಪೂಜೆ ನಡೆಯತ್ತದೆ. ಮಂಗಳಾರತಿ ನಂತರ ಅವರವರ ಎಡೆಗಳನ್ನು ಹಂಚುತ್ತಾರೆ. ಬಲಿ ಎಡೆಯನ್ನು ಹೆಣ್ಣುಮಗಳೊಬ್ಬಳು ಮಹಾಸತಿ ಕಲ್ಲಿನ ಹತ್ತಿರ ಇಟ್ಟು ಬರುತ್ತಾಳೆ. ಅಲ್ಲಿಯೇ ಇರುವ ಶೂಲಕ್ಕೆ ಒಂದು ಹೆಣ್ಣು ಕೋಳಿಯನ್ನು ಏರಿಸುತ್ತಾರೆ. ಈ ಕೋಳಿಯನ್ನು ಮಾದರ ಜಾತಿಯವರಿಗೆ ಕೊಡುತ್ತಾರೆ. ಹತ್ತರ ಕುರಿಯನ್ನು ಬಲಿ ಕೊಟ್ಟು ಅದರ ರಕ್ತವನ್ನು ಬಲಿ ಅನ್ನಕ್ಕೆ ಸೇರಿಸುತ್ತಾರೆ. ನಂತರ “ದನ ಹೊಡೆದುಕೊಂಡು ಬರ್ರೆಲೋ” ಎಂದು ಕೂಗು ಹಾಕುತ್ತಾರೆ. ಗುಳಿ ಎಡೆಯನ್ನು ಹೋ ಹೋ ಹೋ ಎಂದು ಕೂಗಿ ಕಾಗೆಗೆ ಇಡುತ್ತಾರೆ. ಗುಳಿ ಮುಟ್ಟಿದ ಕೂಡಲೇ ಬಲಿ ಎಡೆಯನ್ನು ಒಬ್ಬನ ಕೈಲಿ ಹಿಡಿಸಿಕೊಂಡು ಊರಿನ ಅಗಸೆ ಬಾಗಿಲಿನಲ್ಲಿರಿಸುತ್ತಾರೆ.

                ದೇವರ ಮುಖವಾಡಗಳನ್ನು ದಾರಿಯ ಮಧ್ಯೆ ಇದ್ದ ಆಂಜನೇಯ ಗುಡಿಗೆ ತಂದು ಇಡುತ್ತಾರೆ. ನಂತರ ಆಂಜನೇಯ ದೇವಸ್ಥಾನದ ಎಡಭಾಗದಲ್ಲಿ ಮೂರು ಕಬ್ಬುಗಳನ್ನು ಕಟ್ಟಿ ಕಂಬಿ ಪಂಚೆಯನ್ನು ಮಡಿವಾಳರು ಕಟ್ಟುತ್ತಾರೆ. ಬಲಿ ಎಡೆಯನ್ನು ಹೊತ್ತು ಅಗಸೆ ಬಾಗಿಲಲ್ಲಿ ನಿಂತಿರುವವರು ಸಂಜೆ ಮೇವು ಪೂರೈಸಿ ಮನೆ ಸೇರಲು ಬರುವ ದನಕರುಗಳ ಮೇಲೆ ಬೀರುತ್ತಾರೆ.

                ಆಂಜನೇಯ ದೇವಸ್ಥಾನದಲ್ಲಿ ಮಡಿವಾಳರು ಗೋಲಮ್ಮನ (ಉಡುಸಲಮ್ಮ) ಮುಂಡವನ್ನು ಇಟ್ಟು ಪೂಜಿಸುತ್ತಾರೆ. ಹತ್ತರ ಕುರಿಯಲ್ಲಿ ಬೂರೆ ಮಗೆ ಮಾಡಿದ ಕುಂಬಾರರಿಗೆ ಅರ್ಧಪಾಲು, ಹಡದಿ ಹಾಸಿದ ಮತ್ತು ಗೋಲಮ್ಮಳನ್ನು ಪೂಜೆ ಮಾಡಿದ ಮಡಿವಾಳರಿಗೆ ಅರ್ಧ ಪಾಲು ಕೊಡುತ್ತಾರೆ. ಉಳಿದಿದ್ದನ್ನು ಊರಿನವರು ಹಂಚಿಕೊಳ್ಳುತ್ತಾರೆ.

                ರಾತ್ರಿ ಪುಂಡಿಕೋಲಿನಿಂದ ದೊಂದಿ ಮಾಡಿಕೊಂಡು, ದೇವರ ದೀಪದಿಂದ ಹಚ್ಚಿಕೊಂಡು ಊರಿನವರೆಲ್ಲರೂ ಸೇರಿ ಊರಿನ ಹೊರಬನಕ್ಕೆ ಹೋಗುತ್ತಾರೆ. ಅಲ್ಲಿಂದ ಊರಿನ ಎಲ್ಲಾ ದೇವಸ್ಥಾನಗಳಿಗೂ ಹೋಗಿ ಕುಮಾರರಾಮನ ದೇವಸ್ಥಾನದ ಎದುರು ಹಾಕುತ್ತಾರೆ. ನಂತರ ಮನೆಗೊಂದು ಸೌದೆ ತುಂಡು ತಂದು ರಾಮ ದೇವಸ್ಥಾನದ ಹತ್ತಿರ ಹಾಕಿ ರಾಶಿ ಮಾಡುತ್ತಾರೆ. ಕಟ್ಟಿಗೆ ರಾಶಿಗೆ ಬೆಂಕಿ ಹಾಕಿಕೊಂಡ (ಅಚನಿ) ಮಾಡಿ ಬೆಳಗಿನವರೆಗೆ ಕಾಯುತ್ತಾರೆ.

                ಮರುದಿವಸ ಹನುಮಂತದೇವರ ದೇವಸ್ಥಾನದಲ್ಲಿರುವ ಮುಖವಾಡಗಳನ್ನು-ಕುಮಾರರಾಮ ಮತ್ತು ಗಾಮ ಪಲ್ಲಕ್ಕಿಯಲ್ಲಿಟ್ಟುಕೊಂಡು ದೇವಸ್ಥಾನಕ್ಕೆ ತರುತ್ತಾರೆ. ಕೈ ಕೋಲು ದೀವಟಿಗೆಯನ್ನು ಮಾದಿಗ ಜಾತಿಯವರು ಹಿಡಿದಿರುತ್ತಾರೆ. ಕೊಂಡದ ಸ್ಥಳಕ್ಕಿಂತ ಇಪ್ಪತ್ತೈದು ಅಡಿ ಹಿಂದೆ ಮಂಚ ಇಟ್ಟು ಪಲ್ಲಕ್ಕಿಯನ್ನು ಮತ್ತು ದೇವರಪೆಟ್ಟಿಗೆಯನ್ನು ಇಡುತ್ತಾರೆ.

                ಬೂರೆಮಗೆಯಲ್ಲಿರುವ ನೀರನ್ನು ದೇವಸ್ಥಾನದಿಂದ ಕೊಂಡದವರೆಗೆ ಸಿಂಪಡಿಸಿ ಶುದ್ಧಗೊಳಿಸುತ್ತಾರೆ. ಬೂರೆ ಮಗೆ(ಕುಂಭ)ಯನ್ನು ಅಚನಿ(ಕೊಂಡ)ಯ ಎದುರು ಇಟ್ಟು ದೇವರು ಕಾಣದಂತೆ ಅಚನಿಗೆ ತೆರೆ ಹಿಡಿಯುತ್ತಾರೆ. ಅಚನಿಗೆ ಗ್ರಾಮದಿಂದ ಹಣ್ಣು ಕಾಯಿ ಒಡೆದು ಪೂಜೆ ಮಾಡುತ್ತಾರೆ. ನಂತರ ಊರಿನವರೆಲ್ಲರೂ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸುತ್ತಾರೆ.

ಹರಕೆ ಹೊತ್ತವರು ಉಪ್ಪು, ಸಕ್ಕರೆ, ತುಪ್ಪ, ಹಾಲು, ತೆಂಗಿನಕಾಯಿ, ರವಿಕೆ ಖಣಗಳನ್ನು ಕೊಂಡಕ್ಕೆ ಹಾಕುತ್ತಾರೆ. ಕೆಲವರು ಸೀರೆ ಸೆರಗಿಗೆ ಕೆಂಡಗಳನ್ನು ಕಟ್ಟಿಕೊಳ್ಳುತ್ತಾರೆ.

ನಂತರ ದೇವರ ಪಲ್ಲಕ್ಕಿಯನ್ನು, ದೇವರ ಪೆಟ್ಟಿಗೆಯನ್ನು ಮತ್ತು ಶೂಲವನ್ನು ಪೂಜಾರಿ ಹೊತ್ತುಕೊಂಡು ಅಚನಿ(ಕೊಂಡ)ಯನ್ನು ಎರಡು ಬಾರಿ ಹಾಯ್ದ ನಂತರ ಊರಿನವರೆಲ್ಲರೂ ಕೊಂಡ ಹಾಯುತ್ತಾರೆ. ನಂತರ ದೇವರು ಹೊತ್ತವರ ಪಾದ ತೊಳೆದು ಒಳಗೆ ಹೋಗಿ ದೇವರನ್ನು ಕೂರಿಸುತ್ತಾರೆ. ನಂತರ ದೇವರಿಗೆ ಮತ್ತು ದೇವಸ್ಥಾನದ ಎದುರುಭಾಗದಲ್ಲಿರುವ ಕಲ್ಮೆಟ್ಟು ಬೂರಪ್ಪನಿಗೆ ಹಣ್ಣು ಕಾಯಿ ಮಾಡಿ ಪೂಜೆ ನಡೆಯುತ್ತದೆ.

ರಾತ್ರಿ ಹತ್ತು ಗಂಟೆಗೆ ದೇವರನ್ನು ಪೆಟ್ಟಿಗೆಯಲ್ಲಿಟ್ಟು ಮಾಂಸ ಬೇಯಿಸಿ ದೇವರಿಗೆ ಎಡೆ ಮಾಡುತ್ತಾರೆ. ನಂತರ ಎಡೆಯಲ್ಲಿರುವ ಪ್ರಸಾದವನ್ನು ತೆಗೆದುಕೊಂಡು ದೇವರ ದೀಪದಿಂದ ದೀಪ ಹಚ್ಚಿಕೊಂಡು ಅಂಟಿಗೆ-ಪಂಟಿಗೆ ಆಡಲು ಹೋಗುತ್ತಾರೆ. ಊರಿನ ಎಲ್ಲರ ಮನೆಗೂ ದೀಪ ಕೊಟ್ಟು, ದೀಪ ಕೊಟ್ಟವರ ಮನೆಯವರು ಕೊಟ್ಟ ಕಾಯಿ, ಕಡುಬು, ಹೋಳಿಗೆ, ಬೆಲ್ಲ, ಹಾಲು ದೇವಸ್ಥಾನದಲ್ಲಿ ಹಂಚಿ ತಿಂದು ಅವರವರ ಮನೆಗಳಿಗೆ ತೆರಳುತ್ತಾರೆ. ಸೊರಬ ತಾಲ್ಲೂಕಿನಲ್ಲಿ ತವನಂದಿ, ತಾವರೆಹಳಿ,್ಳ ಕಡಸೂರು, ಹಳೆಸೊರಬ ಮುಂತಾದ ಹಳ್ಳಿಗಳಲ್ಲಿ ಕುಮಾರರಾಮನ ದೇವಸ್ಥಾನಗಳಿವೆ. ಪ್ರತಿವರ್ಷ ವಿವಿಧ ರೀತಿಯಲ್ಲಿ ಆರಾಧನೆ ಮಾಡಿ ಹಬ್ಬವನ್ನು ಆಚರಿಸುತ್ತಾರೆ.

ಮನಮನೆ, ಸಿದ್ದಾಪುರ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ

                ಸಿದ್ದಾಪುರ ತಾಲ್ಲೂಕಿನಲ್ಲಿ ‘ಮನಮನೆ’ ತುಂಬಾ ಪ್ರಮುಖವಾದ ಹಳ್ಳಿಯಾಗಿದೆ. ಇಲ್ಲಿ ಎಲ್ಲಾ ಜನಾಂಗದವರೂ ವಾಸವಾಗಿದ್ದಾರೆ. ಆದರೆ ದೀವರು ಜನಾಂಗದವರೇ ಹೆಚ್ಚಾಗಿದ್ದಾರೆ. ಈ ಹಳ್ಳಿ ಶಿವಮೊಗ್ಗ ಜಿಲ್ಲೆಯ ಗಡಿಗೆ ತಗುಲಿಕೊಂಡಿದೆ. ಸುಮಾರು ಎರಡು ಸಾವಿರ ಕುಟುಂಬಗಳಿರುವ ಹಳ್ಳಿ ಸುಮಾರು ಎಂಟು ಸಾವಿರ ಜನಸಂಖ್ಯೆ ಇರಬಹುದು.

                ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗ್ರಾಮ ಪ್ರಮುಖ ಪಾತ್ರ ವಹಿಸಿರುತ್ತದೆ. ಸುಮಾರು ಎಂಟು-ಹತ್ತು ಜನಗಳು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಗಾಂಧೀಜಿಯವರು ಕರೆ ಕೊಟ್ಟಿದ್ದ ಕರ ನಿರಾಕರಣೆ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ವರ್ಷಾನುಗಟ್ಟಲೆ ಜೈಲುಶಿಕ್ಷೆ ಅನುಭವಿಸಿದ ವೀರ ಯೋಧರಿದ್ದಾರೆ.

                ಈ ಊರಿನಲ್ಲಿ 1950ರಲ್ಲಿಯೇ ಪಡವಲಪಾಯ ಬಡಗುತಿಟ್ಟಿನ ಯಕ್ಷಗಾನ ಮೇಳವಿತ್ತು. ಯಕ್ಷಗಾನದ ಎಲ್ಲಾ ಪ್ರಸಂಗಗಳನ್ನು ಪ್ರದರ್ಶಿಸುತ್ತಿದ್ದರು. 1958ರಿಂದ ಒಂದು ಮೂಡಲಪಾಯ ಯಕ್ಷಗಾನದ ಮೇಳವನ್ನು ದಿ. ರಾಮಪ್ಪ ಪಟೇಲ್ ಎಂಬುವರು ಸಂಘಟಿಸಿದರು. ಈ ಎರಡೂ ತಂಡಗಳಲ್ಲಿ ಶ್ರೇಷ್ಠ ಕಲಾವಿದರಿದ್ದರು. ದೀವರು ಜನಾಂಗದಲ್ಲಿಯೇ ಇವು ಪ್ರಥಮ ತಂಡಗಳೆಂದು ಗುರುತಿಸಬಹುದು. ಮನಮನೆ ಗ್ರಾಮ ಸಾಂಸ್ಕøತಿಕ ಕ್ಷೇತ್ರದಲ್ಲಿ  ಒಂದು ಕಾಲದಲ್ಲಿ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳಬಹುದು.

                ಮನಮನೆ ಗ್ರಾಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿಯ ಗಡಿಹಳ್ಳಿಯಾದ್ದರಿಂದ ತಾಳಗುಪ್ಪ ಹೋಬಳಿಯ ಅನೇಕ ಗ್ರಾಮದವರು ಹೆಣ್ಣು-ಗಂಡು ಕೊಟ್ಟು ತೆಗೆದುಕೊಂಡಿದ್ದಾರೆ. ಮನಮನೆ ಗ್ರಾಮದವರ ಜಮೀನುಗಳು ತಾಳಗುಪ್ಪಕ್ಕೆ ಸೇರಿದ ಹಳ್ಳಿಗಳಲ್ಲಿ ಇವೆ. ಇವರು ಮಳೆಹಬ್ಬ ಮಾಡದೇ ಕೆಲವು ಕೃಷಿ ಕಾರ್ಯಗಳನ್ನು ಮಾಡುವಂತಿಲ್ಲ. ಕಾರಣ ಇವರು ಆರಿದ್ರಾ ಮಳೆವರೆಗೆ ಕಾಯದೆ ಮೃಗಶಿರ ಮಳೆಯಲ್ಲಿಯೇ ಹಬ್ಬವನ್ನು ಮಾಡಿ ಪೂರೈಸುತ್ತಾರೆ. ಮೃಗಶಿರ ಮಳೆ ಪ್ರಾರಂಭ ಅಥವಾ ಮುಗಿಯುವ ಪಾದದಲ್ಲಿ ಒಂದು ಭಾನುವಾರ ಹಬ್ಬವನ್ನು ಮಾಡುತ್ತಾರೆ. ಇಲ್ಲಿ ಉತ್ತಮವಾದ ಕುಮಾರರಾಮ ಮತ್ತು ಗಾಮೇಶ್ವರ (ಗಾಮ) ದೇವರುಗಳ ದೇವಸ್ಥಾನವಿದೆ.

                ವಾಸ್ತುವಿನ ವಿವರ ಈ ರೀತಿ ಇದೆ. ಗ್ರಾಮಕ್ಕೆ ಸೇರಿದ ಎರಡು ಮುಖವಾಡಗಳಿವೆ. ಕುಮಾರರಾಮನ ಮುಖವಾಡದ ಬಣ್ಣ ಹಸಿರು. ಇದಕ್ಕೆ ಗಿರ್ಲು ಮೀಸೆಗಳಿವೆ. ದೊಡ್ಡದಾದ ಕಣ್ಣುಗಳು, ಗಾಮನ ಮುಖವಾಡದ ಬಣ್ಣ ಕೆಂಪು. ಇದಕ್ಕೂ ಕೂಡ ಗಿರ್ಲು ಮೀಸೆಗಳು, ಕಣ್ಣು ದೊಡ್ಡದಾಗಿದೆ. ಇವುಗಳು ಒಂದು ಅಡಿ ಎತ್ತರ, ಒಂದು ಅಡಿ ಅಗಲ ಇವೆ. ಇವುಗಳನ್ನು ಹಲಸಿನ ಮರದಿಂದ ತಯಾರಿಸಿದ್ದಾರೆ. ಈ ಎರಡು ಮುಖವಾಡಗಳಲ್ಲದೇ ಇನ್ನೂ ಐದು ಮುಖವಾಡಗಳಿವೆ ಮತ್ತು ಒಂದು ವೀರಭದ್ರನ ಹಲಗೆಯಿದೆ. ಈ ಗ್ರಾಮದ ಪ್ರತಿಷ್ಠಿತ ಕುಟುಂಬದವರು ನೂರಾರು ವರ್ಷಗಳ ಹಿಂದೆ ಈ ಮುಖವಾಡಗಳನ್ನು ಮಾಡಿಸಿಕೊಟ್ಟಿದ್ದಾರೆ. ಈ ಮುಖವಾಡಗಳನ್ನು ಕೂಡ ಮೂಲ ಮುಖವಾಡಗಳ ಜೊತೆಯಲ್ಲಿಟ್ಟು ಪೂಜಿಸುತ್ತಾರೆ. ಮುಖವಾಡಗಳನ್ನು ಮಾಡಿಸಿ ದೇವಸ್ಥಾನಕ್ಕೆ ಕೊಟ್ಟ ಕುಟುಂಬಗಳು ಹೀಗಿವೆ.

1)            ಕಾಶೇರ ಮನೆತನ ಗೌಡರು ಕುಟುಂಬ-ಮುಖವಾಡದ ಬಣ್ಣ ಹಸಿರು.

2)            ದೊಡ್ಡ ಮನೇರು ಮನೆತನದವರು-ಮುಖವಾಡದ ಬಣ್ಣ ಕೆಂಪು.

3)            ಗಿರಿಭಟ್ಟರ ಕುಟುಂಬದವರು-ಮುಖವಾಡದ ಬಣ್ಣ ಕೆಂಪು.

4)            ಮೂರು ಮನೇರು ಕುಟುಂಬದವರು-ಮುಖವಾಡದ ಬಣ್ಣ ಕೆಂಪು.

5)            ಭೂತೇರು ಕುಟುಂಬದವರು-ಮುಖವಾಡ ಬಣ್ಣ ಕೆಂಪು.

6)            ಗಿರಿಭಟ್ಟರ ಕುಟುಂಬದವರು ತಯಾರಿಸಿ ಕೊಟ್ಟ ವೀರಭದ್ರನ ಹಲಗೆ. ಹಲಗೆಯ ಮೇಲೆ ವೀರಭದ್ರನ ಚಿತ್ರವಿದೆ.

                ನಾಲ್ಕು ಕುದುರೆಗಳಿವೆ, ಭಕ್ತಾದಿಗಳು ಒಪ್ಪಿಸಿರುವ ನಾಲ್ಕು ಬೆಳ್ಳಿಯ ಮುಖವಾಡಗಳಿವೆ. ಇವು ಆರು ಇಂಚು ಎತ್ತರ, ಮೂರು ಇಂಚು ಅಗಲವಾಗಿವೆ.                 ಆರು ಅಡಿ ಎತ್ತರದ ಒಂದು ತ್ರಿಶೂಲವಿದೆ.

                ಶನಿವಾರ ಊರಿನ ಹಿರಿಯರು ಸೇರಿ ಪೆಟ್ಟಿಗೆ ಇಳಿಸಿ ಪೆಟ್ಟಿಗೆಯಲ್ಲಿಟ್ಟಿದ್ದ ಮುಖವಾಡಗಳನ್ನು ತೆಗೆದು ಎಲ್ಲಾ ಮುಖವಾಡಗಳನ್ನು ನೀರಿನಿಂದ ಸ್ವಚ್ಛಗೊಳಿಸಿ ಗದ್ದುಗೆಯ ಮೇಲೆ ಕೂರಿಸಿ ಯುವಕರು ಡೊಳ್ಳು ಕಟ್ಟಿಕೊಂಡು ‘ಚಂಗಬಲೊ ಹುಯ್ಯೊ’ ಎಂದು ಕೇಕೆ ಹಾಕುತ್ತಾ ಡೊಳ್ಳು ಬಾರಿಸುವುದರ ಮೂಲಕ ದೇವರಿಗೆ ಜೀವಕಳೆ ತುಂಬುತ್ತಾರೆ. ಗ್ರಾಮದಲ್ಲಿ ಹೊಸದಾಗಿ ಮದುವೆಯಾದ ಯುವಕರು ಈ ದಿನ ರಾತ್ರಿ ದೇವಸ್ಥಾನದಲ್ಲಿಯೇ ವಾಸ್ತವ್ಯ ಮಾಡುತ್ತಾರೆ. ಭಾನುವಾರ ಬೆಳಗಿನ ಜಾವ ಎದ್ದು ಕಮಲ ಮತ್ತು ಸಂಪಿಗೆ ಹೂವು ತರಲು ಹೋಗುತ್ತಾರೆ. ದೇವರಿಗೆ ನೈವೇದ್ಯ ಮಾಡಲು ಹಲಸಿನ ಹಣ್ಣಿನ ಕಡುಬು ಆಗಲೇಬೇಕು. ಋತುಮತಿಯಾಗದ ನಾಲ್ಕು ಜನ ಕನ್ಯೆಯರು (ಹೆಣ್ಣುಮಕ್ಕಳು) ಬೆಳಗ್ಗೆ ಮುಂಚೆ ಭತ್ತ ಕುಟ್ಟಿ ಅಕ್ಕಿ ಮಾಡಿ ಅಕ್ಕಿಯನ್ನು ಬೀಸಿ ಹಿಟ್ಟು ಮಾಡಿ ಪೂಜಾರಿಯಾದ ಗಡ್ಡದ ಬಂಗಾರಪ್ಪನ ಕಡೆ ಕೊಡುತ್ತಾರೆ. ಬಂಗಾರಪ್ಪ ಹಿಟ್ಟನ್ನು ಪಡೆದು ಹಲಸಿನ ಹಣ್ಣಿನ ಕಡುಬು ತಯಾರಿಸುತ್ತಾನೆ. ನಂತರ ಹೂವುಗಳನ್ನು ತರಲು ಹೋದ ಯುವಕರು ಹೂವುಗಳನ್ನು ತಂದಿರುತ್ತಾರೆ. ಪೂಜಾರಿ ಹೂವುಗಳನ್ನು ಮುಡಿಸಿ ಹನ್ನೆರಡು ಗಂಟೆಗೆ ಪೂಜೆಗೆ ಸಿದ್ಧತೆ ಮಾಡುತ್ತಾನೆ. ದೇವರಿಗೆ ಹಲಸಿನಹಣ್ಣಿನ ಕಡುಬು ನೈವೇದ್ಯ ಮಾಡಿ ಪೂಜೆ ಮಾಡಿ ಹಣ್ಣುಕಾಯಿ ಮಾಡುತ್ತಾರೆ. ಪೂಜೆಯ ಸಮಯದಲ್ಲಿ ಹೊರಗಡೆ ಒಂದು ಕುರಿಯನ್ನು ಬಲಿ ಕೊಡುತ್ತಾರೆ. ಊರಿನ ಪ್ರತಿ ಕುಟುಂಬದವರೂ ಹಣ್ಣು ಕಾಯಿ ಮಾಡಿಸುತ್ತಾರೆ. ಶೂಲವನ್ನು ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸುತ್ತಾರೆ. ದೇವರು ಸಿಡಿ ಬನಕ್ಕೆ ಹೊರಡುವ ಮುನ್ನ ಆ ವರ್ಷ ಮದುವೆಯಾದ ವಧೂವರರು ದೇವಸ್ಥಾನಕ್ಕೆ ಬಂದು ದೇವರಿಗೆ ಹತ್ತು ಬೆರಳಾರತಿ ಮಾಡುತ್ತಾರೆ. ಮಧ್ಯಾಹ್ನ ಮೂರು ಗಂಟೆಗೆ ಎಲ್ಲಾ ಮುಖವಾಡಗಳನ್ನು ಹೊತ್ತುಕೊಂಡು ಹೊಸದಾಗಿ ಮದುವೆಯಾದ ಮದುಮಕ್ಕಳು ಮುಖವಾಡಗಳನ್ನು ತಮ್ಮ ಮುಖಕ್ಕೆ ಹಿಡಿದುಕೊಳ್ಳುತ್ತಾರೆ. ಮಕ್ಕಳು ಕುದುರೆಗಳನ್ನು ಹೊತ್ತುಕೊಳ್ಳುತ್ತಾರೆ. ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಊರಿನಿಂದ ಒಂದು ಕಿಲೋಮೀಟರು ದೂರವಿರುವ ಸಿಡಿಬನಕ್ಕೆ ಹೋಗುತ್ತಾರೆ. ಸಿಡಿ ಬನದಲ್ಲಿರುವ ಚಿಕ್ಕದಾದ ಗುಡಿಯ ಗದ್ದುಗೆ ಮೇಲೆ ದೇವರುಗಳನ್ನು ಸಾಲಾಗಿ ಕೂರಿಸುತ್ತಾರೆ. ನಂತರ ಪೂಜೆ ಮಾಡಿ ಹಣ್ಣು ಕಾಯಿ ಮಾಡುತ್ತಾರೆ. ಇಲ್ಲಿ ಗದ್ದುಗೆಗೆ ಕುರಿಯನ್ನು ಬಲಿ ಕೊಡುತ್ತಾರೆ.

                ಸಿಡಿ ಬನದಲ್ಲಿ ಎರಡು ಕುರಿಗಳನ್ನು ಸುಲಿದು ಮಾಂಸ ಮಾಡಿ ಒಟ್ಟಿಗೆ ಬೇಯಿಸಿ ಸಾರು ಮಾಡುತ್ತಾರೆ. ಪ್ರತಿ ಕುಟುಂಬದವರು ಒಂದೆರಡು ಜನ ತಮ್ಮ ಮನೆಗಳ ಕಡುಬು, ರೊಟ್ಟಿ, ಅನ್ನ ತೆಗೆದುಕೊಂದು ರಾತ್ರಿ ಭೋಜನಕ್ಕೆ ಬರುತ್ತಾರೆ. ಸಾಮೂಹಿಕವಾಗಿ ಎಲ್ಲರೂ ಊಟ ಮಾಡುತ್ತಾರೆ. ಕೆಲವರು ಅಲ್ಲಿಯೇ ವಾಸ್ತವ್ಯ ಮಾಡುತ್ತಾರೆ.

                ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಸಿಡಿ ಬನದಲ್ಲಿ ಊರಿನ ಹಿರಿಯರು ಸೌದೆಯನ್ನು ತಂದು ರಾಶಿ ಹಾಕಿ ಕಟ್ಟಿಗೆ ರಾಶಿಗೆ ಬೆಂಕಿ ಹಾಕಿ ಕೊಂಡ ತಯಾರು ಮಾಡುತ್ತಾರೆ. ನಂತರ ಎಲ್ಲಾ ಮುಖವಾಡಗಳನ್ನು ಮತ್ತು ವೀರಭದ್ರನ ಹಲಗೆ ಹೊತ್ತುಕೊಂಡು ಡೊಳ್ಳು ಕುಣಿತದವರೊಂದಿಗೆ, ಪ್ರಥಮವಾಗಿ ವೀರಭದ್ರನ ಹಲಗೆ ಹೊತ್ತವನು ಕೊಂಡ ಹಾಯುತ್ತಾನೆ. ನಂತರ ಎಲ್ಲರೂ ಕೊಂಡ ಹಾಯುತ್ತಾರೆ. ಬಿಂಗಿ ಕಾರ್ಯಕ್ರಮ ಮುಗಿಸಿ ಊರಿಗೆ ಮರಳುತ್ತಾರೆ.

ದೇವಸ್ಥಾನದಲ್ಲಿ ದೇವರುಗಳನ್ನು ಪೆಟ್ಟಿಗೆಯಲ್ಲಿಟ್ಟು ನಾಗಂದಿಗೆ ಮೇಲೆ ಇಡುತ್ತಾರೆ.

 

ಕೊಡೆ ಅಮಾವಾಸ್ಯೆ

                ಜುಲೈ ತಿಂಗಳಲ್ಲಿ ಬರುವ ನಾಗರಪಂಚಮಿ ಹಬ್ಬಕ್ಕಿಂತ ಐದಾರು ದಿವಸಗಳ ಮುಂಚೆ ಬರುವ ಅಮಾವಾಸ್ಯೆ ಕೊಡೆ ಅಮಾವಾಸ್ಯೆ. ಈ ದಿವಸ ಹೊಸದಾಗಿ ಮದುವೆಯಾದ ಮತ್ತು ಹಳೆಯ ಅಳಿಯಂದಿರನ್ನು ಕರೆಸಿ ಹಬ್ಬ ಮಾಡುತ್ತಾರೆ. ಹೊಸ ಅಳಿಯಂದಿರಿಗೆ ಹೊಸ ಛತ್ರಿಯನ್ನು ಉಡುಗೊರೆಯಾಗಿ ಕೊಡುವ ಪದ್ಧತಿ ಇದೆ. ಅಳಿಯಂದಿರು ಬಂದಾಗ ಅವರಿಗೆ ಕೋಳಿ ಕಜ್ಜಾಯದ ಊಟ ಹಾಕಿ ಹೊಸ ಛತ್ರಿಯನ್ನು ಕೊಟ್ಟು ಕಳುಹಿಸುತ್ತಾರೆ.

                ಹಿಂದಿನ ಕಾಲದಲ್ಲಿ ಪಂಚಮಿ ನಂತರ ಗಂಡಿನ ತಂದೆ-ತಾಯಿ ಹೊಸ ಬೀಗರು, ಬೀಗಿತ್ತಿ ಮತ್ತು ಇತರೆ ಎರಡು-ಮೂರು ಜನ ನೂರು-ಇನ್ನೂರು ಹೊಸಗರೆ ಮತ್ತು ಉದ್ದಿನವಡೆ, ಕಜ್ಜಾಯ ಮಾಡಿಕೊಂಡು ಬೆತ್ತದ ಬುಟ್ಟಿಯಲ್ಲಿ ತುಂಬಿಕೊಂಡು ಬುಟ್ಟಿಯ ಮೇಲೆ ಬಿಳಿಪಂಚೆಯನ್ನು ಮುಚ್ಚಿಕೊಂಡು ಹೆಣ್ಣಿನ ಮನೆಗೆ ಸೀರೆ ಉಡಲು ಹೋಗುತ್ತಿದ್ದರು. ತಮ್ಮ ಮನೆಗೆ ಬಂದಂತಹ ಗಂಡಿನ ತಂದೆ-ತಾಯಿಯರಿಗೆ ಪ್ರೀತಿಯಿಂದ ಮತ್ತು ಗೌರವದಿಂದ ಬರಮಾಡಿಕೊಂಡು ಅಂದು ರಾತ್ರಿ ಮನೆಯಲ್ಲಿಯೇ ಉಳಿಸಿಕೊಂಡು ಮರುದಿವಸ ಬೀಗರಿಗೆ ಕೋಳಿ ಕಜ್ಜಾಯದ ಔತಣ ನೀಡಿ, ಬೀಗಿತ್ತಿಗೆ ಹೊಸ ಸೀರೆ ಉಡಿಸಿ, ಬೀಗರಿಗೆ ಪಂಚೆ, ಪೇಟಾ ಮತ್ತು ಜೊತೆಗೆ ಹೋದವರಿಗೆ ಮಹಿಳೆಯರಾಗಿದ್ದರೆ ರವಿಕೆ, ಪುರುಷರಾಗಿದ್ದರೆ ಟವೆಲ್ ಉಡುಗೊರೆ ನೀಡಿ ಗೌರವಿಸಿ ಕಳುಹಿಸುತ್ತಿದ್ದರು.          

ಚೌತಿ ಹಬ್ಬದ ನಂತರ ಹೆಣ್ಣಿನ ಕಡೆಯ ಬೀಗ-ಬೀಗಿತ್ತಿ ಮತ್ತು ಇತರೆಯವರು ಸೇರಿ ಗಂಡಿನ ಮನೆಗೆ ಗಂಡಿನವರು ತಂದ ಎರಡರಷ್ಟು ಕಜ್ಜಾಯಗಳನ್ನು ಮಾಡಿಕೊಂಡು ಬುಟ್ಟಿ ತುಂಬಿಕೊಂಡು ಗಂಡಿನ ಮನೆಗೆ ಹೋಗುತ್ತಿದ್ದರು. ಗಂಡಿನ ಮನೆಯವರು ಹೆಣ್ಣಿನ ತಂದೆ-ತಾಯಿಗೆ ವಿಶೇಷವಾದ ಗೌರವದಿಂದ ಸ್ವಾಗತಿಸಿ ಅಂದು ರಾತ್ರಿ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಮಾರನೇ ದಿವಸ ಗಂಡಿನ ಮನೆಯವರು ಹೆಣ್ಣಿನ ತಾಯಿಗೆ ಉತ್ತಮ ಸೀರೆ ಉಡಿಸಿ ಬೀಗರಿಗೆ ಪಂಚೆ, ಪೇಟಾ, ಉಳಿದವರಿಗೆ ರವಿಕೆ ಖಣ, ಟವೆಲ್ ಉಡುಗೊರೆ ಮಾಡಿ ಕೋಳಿ ಕಜ್ಜಾಯದ ಭೋಜನ ನೀಡಿ ಗೌರವದಿಂದ ಕಳುಹಿಸುತ್ತಿದ್ದರು. ಈಗ ಈ ಪದ್ಧತಿಗಳೆಲ್ಲ ನಿಂತುಹೋಗಿವೆ.

 

ನಾಗರಪಂಚಮಿ ಹಬ್ಬ

                ದೀವರಲ್ಲಿ ನಾಗರಪಂಚಮಿ ಹಬ್ಬದ ಆಚರಣೆಯಲ್ಲಿ ಎರಡು ಗುಂಪುಗಳಿವೆ-ಹಸಿ ತನಿ ಎರೆಯುವವರು ಮತ್ತು ಬಿಸಿ ತನಿ ಎರೆಯುವವರು ಎಂಬುದಾಗಿ.

                ಹಸಿ ತೆನೆ ಎರೆಯುವವರು ನಾಗರಪಂಚಮಿ ಹಬ್ಬದ ದಿವಸ ಎಲ್ಲರೂ ಸ್ನಾನ ಮಾಡಿ ಶುಚಿಯಾಗುತ್ತಾರೆ. ಮೊಳಕೆ ಕಟ್ಟಿದ ಹೆಸರುಕಾಳು, ಕಡ್ಲೆಕಾಳು, ಹುರಿದ ಹಲಸಿನಬೀಜ, ಹಸಿ ಕಡ್ಲೆ, ಹಾಲು, ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಪೂಜೆ ಸಾಮಾನು ತೆಗೆದುಕೊಂಡು ತಮ್ಮ ಮನೆಗೆ ಹತ್ತಿರದಲ್ಲಿರುವ ನಾಗರಕಲ್ಲಿನ ಹತ್ತಿರ ಹೋಗಿ ನಾಗರಕಲ್ಲನ್ನು ನೀರಿನಿಂದ ಚೆನ್ನಾಗಿ ತೊಳೆದು ಮತ್ತು ಕಲ್ಲಿನ ಸುತ್ತ ಇರುವ ಹುಲ್ಲು ಕೆತ್ತಿ ತೆಗೆದು ನಾಗರಕಲ್ಲಿನ ಸುತ್ತಲೂ ಸ್ವಚ್ಛಗೊಳಿಸುತ್ತಾರೆ. ನಂತರ ಮೊಳಕೆ ಕಾಳು, ಹಲಸಿನಬೀಜ, ಹಾಲು ನೈವೇದ್ಯ ಇಟ್ಟು ಹಾಲಿನಲ್ಲಿ ಬಾಳೆಹಣ್ಣು ಗಿವುಚಿ ನಾಗರಕಲ್ಲಿನ ಮೇಲೆ ಹಾಕುತ್ತಾರೆ. ನಂತರ ತೆಂಗಿನಕಾಯಿ ಒಡೆದು ಪೂಜೆ ಮಾಡಿ ಕರ್ಪೂರ ಬೆಳಗಿ ಮಂಗಳಾರತಿ ಮಾಡುತ್ತಾರೆ. ಈ ಪದ್ಧತಿಗೆ ಹಸಿ ತನಿ ಎರೆಯುವುದು ಎಂದು ಹೇಳುತ್ತಾರೆ.

                ಬಿಸಿ ತನಿ ಎರೆಯುವವರು ನಾಗರಪಂಚಮಿ ದಿವಸ ಮನೆಯವರೆಲ್ಲರೂ ಉಪವಾಸವಿದ್ದು ಬೆಳಗ್ಗೆ ಉಪಾಹಾರಕ್ಕೆ ಮುಸುರೆ ತಿನ್ನುವ ಹಾಗಿಲ್ಲ. ಉಪ್ಪಿಟ್ಟು ಅಥವಾ ಅವಲಕ್ಕಿ ತಿಂಡಿ ಮಾಡಿ ತಿನ್ನುತ್ತಾರೆ. ಕುಟುಂಬದ ಪ್ರತಿಯೊಬ್ಬರೂ ಸ್ನಾನ ಮಾಡಿ ಶುಚಿಯಾಗುತ್ತಾರೆ. ಸಂಪೂರ್ಣ ಸಸ್ಯಾಹಾರದ ಅಡುಗೆ ಅಂದರೆ ಅನ್ನ, ಸಾರು, ಪಲ್ಲೆ, ಚಿತ್ರಾನ್ನ, ಪಾಯಸ, ಸಾಸಿವೆ, ಚಟ್ನಿ ತಯಾರು ಮಾಡಿ ಇಡಕಲು ಕೆಳಗೆ ಎಡೆ ಮಾಡಿ, ನಾಗಪ್ಪನಿಗೆ ಪ್ರತ್ಯೇಕ ಎಡೆ ಮಾಡಿಕೊಂಡು ಮತ್ತು ಮೊಳಕೆ ಕಟ್ಟಿದ ಹೆಸರು ಮತ್ತು ಕಡ್ಲೆಕಾಳು, ಹುರಿದ ಹಲಸಿನ ಬೀಜ ಹಾಗೂ ಹಸಿ ಕಡ್ಲೆ, ಹಾಲು, ಹಣ್ಣು, ಪೂಜೆ ಸಾಮಾನು ತೆಗೆದುಕೊಂಡು ನಾಗರಕಲ್ಲು ಇದ್ದಲ್ಲಿ ಹೋಗಿ ನೀರಿನಿಂದ ನಾಗರಕಲ್ಲನ್ನು ಶುಚಿಗೊಳಿಸಿ ಹೂವು ಮುಡಿಸಿ ಕಲ್ಲಿಗೆ ಗಂಧ, ಕುಂಕುಮ, ಕಣಕಪ್ಪು ಹಚ್ಚುತ್ತಾರೆ. ತೆಗೆದುಕೊಂಡು ಹೋದ ಎಡೆ, ಮೊಳಕೆ ಮತ್ತು ಹುರಿದ ಕಾಳುಗಳು, ಹಲಸಿನ ಬೀಜ ನೈವೇದ್ಯ ಮಾಡಿ, ಹಾಲಿನಲ್ಲಿ ಬಾಳೆಹಣ್ಣು ಗಿವುಚಿ ನಾಗರಕಲ್ಲಿನ ಮೇಲೆ ಹಾಕುತ್ತಾರೆ. ನಂತರ ತೆಂಗಿನಕಾಯಿ ಒಡೆದು ಪೂಜೆ ಮಾಡಿ ಕರ್ಪೂರದಿಂದ ಮಂಗಳಾರತಿ ಬೆಳಗುತ್ತಾರೆ. ನಂತರ ಮನೆಗೆ ಬಂದು ಇಡಕಲು ಕೆಳಗೆ ಎಡೆ ಮಾಡಿ ಪೂಜೆ ಮಾಡಿ ನಂತರ ಅಗ್ನಿಗೂಡಿ ಎಲ್ಲರೂ ಊಟ ಮಾಡುತ್ತಾರೆ. ನಾಗಪ್ಪನಿಗೆ ತನಿ ಎರೆಯುವವರೆಗೆ ಉಪವಾಸವಿದ್ದು ಹಬ್ಬವನ್ನು ಆಚರಿಸುತ್ತಾರೆ.

                ನಾಗರಪಂಚಮಿ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳು ತವರಿಗೆ ಬರುತ್ತಾರೆ. ಈ ಹಬ್ಬಕ್ಕೆ ತವರಿಗೆ ಬಂದ ಹೆಣ್ಣುಮಕ್ಕಳು ಅಲ್ಲೇ ಹತ್ತು ದಿವಸ ಇದ್ದು ಗಂಡನ ಮನೆಗೆ ಹೋಗುತ್ತಾರೆ. ಗಂಡನ ಮನೆಗೆ ಹೊರಡುವ ಹೆಣ್ಣುಮಕ್ಕಳಿಗೆ ಅಳ್ಳುಂಡೆ, ಉದ್ದಿನವಡೆ, ಕಜ್ಜಾಯ, ಹುರಿದ ಕಡ್ಲೆಯನ್ನು ಮಾಡಿ ಕಳುಹಿಸಿಕೊಡುತ್ತಾರೆ.

ಬೆಚ್ಚಿನ ಸಂಕ್ರಾಂತಿ

                ಆಗಸ್ಟ್ ತಿಂಗಳಲ್ಲಿ ಬರುವ ಆಶ್ಲೇಷಾ ಮಳೆ ನಕ್ಷತ್ರದ ನಂತರ ಬರುವ ಮಳೆ ನಕ್ಷತ್ರ ‘ಮಖ’. ಇದನ್ನು ದೀವರು ‘ಮಗೆ’ ಮಳೆ ಎನ್ನುತ್ತಾರೆ. ಮಗೆ ಮಳೆ ಪ್ರಾರಂಭದ ದಿವಸ ಬರುವ ಸಿಂಹ ಸಂಕ್ರಮಣ ಬೆಚ್ಚಿನ ಸಂಕ್ರಾಂತಿ. ಇಂದು ದೀವರು ತಮ್ಮ ಹೊಲಗದ್ದೆಗೆ ಬೆಚ್ಚು ನಿಲ್ಲಿಸುತ್ತಾರೆ.

                ಬೆಚ್ಚು ಅಂದರೆ ಮುಂಡಿಗೆ ಎಂಬ ಜಾತಿಯ ಗಿಡ. ಇದು ಪೊದೆಯಾಗಿ ಬೆಳೆಯುತ್ತದೆ. ಮುಂಡಿಗೆ ಜಾತಿ ಗಿಡಕ್ಕೂ ಕೇದಿಗೆ ಹೂವಿನ ಗಿಡಕ್ಕೂ ವ್ಯತ್ಯಾಸವೇನಿಲ್ಲ. ಕೇದಿಗೆ ಹೂವಿನ ಗಿಡವೂ ಕೂಡ ಪೊದೆಯಾಗಿ ಬೆಳೆಯುತ್ತದೆ. ಎರಡರ ಎಲೆಗಳು ಕೂಡ ಉದ್ದವಾಗಿ ಎಲೆಗಳ ಎರಡೂ ಕಡೆ ಚಿಕ್ಕ ಮುಳ್ಳುಗಳಿರುವ ಉದ್ದವಾದ ಎಲೆಗಳಿರುತ್ತವೆ. ಕತ್ತಿಯಿಂದ ಎಲೆಗಳನ್ನು ಸವರಿ ಮುಂಡಿಗೆ ಗಿಡಗಳನ್ನು ಕತ್ತರಿಸಿಕೊಂಡು ಬರುತ್ತಾರೆ. ಮುಂಡಿಗೆ ಗಿಡ ನಾಲ್ಕೈದು ಅಡಿ ಎತ್ತರ ಬೆಳೆಯುತ್ತದೆ. ಜಮೀನಿನ ಹಾಳಿಯ ಮೇಲೆ ಬೆಚ್ಚನ್ನು ನಿಲ್ಲಿಸುತ್ತಾರೆ.

                ಹೀಗೆ ಗದ್ದೆಯಲ್ಲಿ ನಿಲ್ಲಿಸಿರುವ ಮುಂಡಿಗೆ ಗಿಡ ತೇವಾಂಶವಿರುವ ಕಡೆ ಬೇರು ಬಿಟ್ಟು ಚಿಗುರಿ ಹೂವಾಗಿ ಕಾಯಿ ಬಿಟ್ಟಾಗ ಫಸಲು ಹುಲುಸಾಗಿದೆ ಎಂದು ನಂಬುತ್ತಾರೆ. ಬೆಳೆಯನ್ನು ಕಟಾವು ಮಾಡುವಾಗ ಹೂವು ಕಾಯಿ ಬಿಟ್ಟ ಮುಂಡಿಗೆ ಗಿಡಕ್ಕೆ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಕತ್ತಿಯಿಂದ ಒಂದೇ ಪೆಟ್ಟಿಗೆ ಮುಂಡಿಗೆ ಗಿಡವನ್ನು ಕಡಿದು ಹೂವು ಅಥವಾ ಕಾಯಿಯನ್ನು ಭತ್ತ ತುಂಬುವ ಕಣಜಕ್ಕೆ ಹಾಕುತ್ತಾರೆ. ಧಾನ್ಯ ಹೆಚ್ಚಾಗುತ್ತದೆ ಎಂದು ನಂಬಿಕೆ.

ಸ್ವಾಣೆ ಮುದುಕಿ ಹಬ್ಬ

                ಬೆಚ್ಚಿನ ಸಂಕ್ರಾಂತಿಯ ದಿವಸ ರಾತ್ರಿ ಪ್ಪಾಣೆ ಮುದುಕಿ ದೀವರ ಮನೆಗಳಿಗೆ ಬರುತ್ತಾಳೆ. ಗೌರಿಯು ತನ್ನ ತವರುಮನೆಯವರ ಸ್ಥಿತಿ-ಗತಿಗಳನ್ನು ತಿಳಿದುಕೊಂಡುಬರಲು ಈ ಮುದುಕಿಯನ್ನು ಕಳುಹಿಸುತ್ತಾಳೆ ಎಂದು ಗೌರಿಯ ಭಕ್ತಾದಿಗಳ ನಂಬಿಕೆ.

                ಖಾರ ಅರೆಯುವ (ತಿರುವ ಕಲ್ಲಿನ ಗುಂಡು) ಗುಂಡನ್ನು ಮನೆಯ ಒಂದು ಮೂಲೆಯಲ್ಲಿ ಕೆಳಗೆ ಬಾಳೆಎಲೆ ಹಾಸಿ, ಎಲೆಯ ಮೇಲೆ ಗುಂಡನ್ನು ಇಟ್ಟು ಹಳೆಯ ರವಿಕೆ ಮತ್ತು ಮುಸುರೆ ಬಟ್ಟೆಯನ್ನು ಗುಂಡಿಗೆ ಹೊಚ್ಚುತ್ತಾರೆ. ಹಳೆಯದಾದ ಈಚಲು ಪೊರಕೆಯನ್ನು ಜೊತೆಯಲ್ಲಿಡುತ್ತಾರೆ. ಚೆಂಡುಹೂವಿನ ಗಿಡ, ಗೌರಿ ಹೂವಿನ ಗಿಡಗಳನ್ನು ಕಿತ್ತು ತಂದು ಕಲ್ಲಿನ ಪಕ್ಕದಲ್ಲಿಟ್ಟು ಕೆಸವಿನ ಎಲೆಯನ್ನು ಗೆಡ್ಡೆ ಸಹಿತ ಕಿತ್ತು ತಂದು ಛತ್ರಿ ಎಂದು ಇಡುತ್ತಾರೆ.

                ಅನ್ನ, ಬೇಳೆ ಸಾರು, ಹಕ್ಕಿ ಮಾಂಸ (ಬೇಯಿಸಿದ್ದು), ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಜೋನಿ ಬೆಲ್ಲ, ಕೆಸವಿನ ಸೊಪ್ಪಿನ ಪಲ್ಲೆ, ಕಾರೇಡಿ, ಬೆಳ್ಳೇಡಿಗಳನ್ನು ಸುಟ್ಟು ಎಲ್ಲಾ ಪದಾರ್ಥಗಳನ್ನು ಎಡೆಗೆ ಹಾಕಿ ನೈವೇದ್ಯ ಮಾಡುತ್ತಾರೆ.

                ಮಾರನೇ ದಿವಸ ಪ್ಪಾಣೆ ಮುದುಕಿಯ ನೈವೇದ್ಯದ ಎಡೆಯನ್ನು ಯಾರಾದರೂ ಬಡವರಿಗೆ ಕೊಡುತ್ತಾರೆ. ನಂತರ ಮುದುಕಿ ಕೈಲಾಸಕ್ಕೆ ಹೋಗುತ್ತಾಳೆ. ಕೈಲಾಸದಲ್ಲಿ ಶಿವ ಪ್ಪಾಣಜ್ಜಿಯನ್ನು ಗೌರಿಯ ತವರುಮನೆಯವರು ಏನೇನು ಮಾಡಿದ್ದರು ಎಂದು ಕೇಳುತ್ತಾನೆ. ಪ್ಪಾಣಜ್ಜಿಯು ಗೌರಿಯ ತವರುಮನೆಯಲ್ಲಿ ನಡೆದಂತಹ ವಿಷಯಗಳನ್ನು ವರದಿ ಮಾಡುತ್ತಾಳೆ.

                ಶಿವ ಗೌರಿಯನ್ನು ಕರೆದು ನಿನ್ನ ತವರುಮನೆಯಲ್ಲಿ ಮುದುಕಿಗೆ ರಾಗಿರೊಟ್ಟಿ, ಜೋನಿಬೆಲ್ಲ, ಕೆಸವಿನ ಸೊಪ್ಪಿನ ಪಲ್ಲೆ ಮಾಡಿದ್ದರಂತೆ. ನೀನು ಮಾತ್ರ ನಿನ್ನ ತವರನ್ನು ಹೊಗಳುತ್ತೀಯೆ ಎಂದಾಗ ಗೌರಿಯು, ಅಕ್ಕಿರೊಟ್ಟಿ ಸಾಕು, ಹಕ್ಕಿ ತುಂಡೇ ಸಾಕು. ಅಷ್ಟಕ್ಕೂ ನನ್ನ ತವರಿನವರು ಬಡವರು ಎನ್ನುತ್ತಾಳೆ. ಶಿವ ಪುನಃ ರಾಗಿ ರೊಟ್ಟಿಗೆ, ಜೋನಿಯ ಬೆಲ್ಲಕ್ಕೆ ಈಗೇನು ನಿನ್ನ ತವರ ಬೆರತೀಯೆ ಎಂದಾಗ ಗೌರಿ ರಾಗಿಯ ರೊಟ್ಟಿಗೆ ಜೋನಿ ಬೆಲ್ಲ ಸಾಕು. ಅಷ್ಟಕ್ಕೂ ನನ್ನ ತವರಿನವರು ಬಡವರು ಎಂದು ತನ್ನ ತವರನ್ನು ಸಮರ್ಥಿಸಿಕೊಳ್ಳುತ್ತಾಳೆ.

 

ಗೌರಿಹಬ್ಬ

                ಭಾದ್ರಪದ ಮಾಸ ಬಂತೆಂದರೆ ಮಲೆನಾಡಿನ ದೀವರ ಹೆಣ್ಣುಮಕ್ಕಳಿಗೆ ಸಂಭ್ರಮ, ಸಡಗರ. ಮದುವೆಯಾಗಿ ಗಂಡನ ಮನೆಗೆ ಹೋದವರು ಎಲ್ಲರೂ ತಾಯಿಯ ಮನೆಗೆ ಬರುತ್ತಾರೆ. ಮಲೆನಾಡಿನ ಹಳ್ಳಿಗಳಲ್ಲಿ ಕೆಲವರು ಅರಮನೆ ಗೌರಿಯನ್ನು ತಂದರೆ, ಇನ್ನು ಕೆಲವರು ಹಳ್ಳಿ ಗೌರಿಯನ್ನು ತರುತ್ತಾರೆ.

                ಗಣೇಶನ ಹಬ್ಬದ ಮೊದಲ ದಿವಸ ಭಾದ್ರಪದ ಶುಕ್ಲಪಕ್ಷದ ತೃತೀಯ ದಿನ ಮೈಸೂರು ಅರಮನೆಯಲ್ಲಿ ಗೌರಿ ತರುವ ದಿವಸ ಗೌರಿ ತಂದರೆ ಅರಮನೆ ಗೌರಿ, ಮರುದಿವಸ ತರುವ ಗೌರಿ ಹಳ್ಳಿ ಗೌರಿ. ಇದು ಹೆಂಗಸರ ಹಬ್ಬ. ಗೌರಿಹಬ್ಬದ ದಿವಸ ಮನೆಯ ಹೆಂಗಸರು ಮತ್ತು ಗಂಡಸರು ಉಪವಾಸ ಇರುತ್ತಾರೆ.

                ಮನೆಯ ಯಜಮಾನ ಬಾಳೆಮರಗಳನ್ನು ತಂದು, ನಾಲ್ಕು ಬಾಳೆದಿಂಡಿನ ಕಂಬಗಳಿಗೆ ಬಗಿನೆಮರದ ಹನ್ನೆರಡು ಕಡ್ಡಿಗಳನ್ನು ನೆಟ್ಟು ಗೌರಿ ಮಂಟಪವನ್ನು ತಯಾರಿಸುತ್ತಾನೆ. ಮಂಟಪದ ಒಳಗಡೆ ಕಂಗನಕಾಯಿ, ಮತ್ತಿಕಾಯಿ, ಮದ್ದಾಲೆಕಾಯಿ, ವಾಟೆಕಾಯಿ, ಕಂಚಿಕಾಯಿ, ಜುಮ್ಮನಕಾಯಿ, ಮತ್ತಿ ತೆನೆ, ಹುಣಾಲು ತೆನೆ, ಶಿವನೀರುಳ್ಳಿ ಗಡ್ಡೆ, ಚಪ್ಪೆ ಚೌಳಿ, ಸೂರನಕುಂಡಿಗೆ, ಗೌರಿಮುತ್ತು, ಗೌರಿ ತಲೆಕೂದಲು ಪಡವಲಕಾಯಿ, ಸೌತೆಕಾಯಿ, ಹೀರೆಕಾಯಿ ಮುಂತಾದ ತರಕಾರಿಗಳು ಈ ಎಲ್ಲಾ ಪಳವಳಿಕೆ ಸಾಮಾನುಗಳನ್ನು ಗೊಂಚಲುಗಳಾಗಿ ಮಂಟಪದ ಒಳಗೆ ಕಟ್ಟುತ್ತಾರೆ.

                ಹೆಣ್ಣುಮಕ್ಕಳು ಇಂದ್ರನ ಹೂವು ಗುಚ್ಛ, ಹೂವು ಸಾಕಾಗದೆ ಇದ್ದರೆ ಹುನಾಲು ತೆನೆ ಸೇರಿಸಿ ಚೆಂಡು ಕಟ್ಟುತ್ತಾರೆ. ಚಿಕ್ಕದಾದ ಬಾಳೆದಿಂಡಿಗೆ ಬಿದಿರುಕಡ್ಡಿಯನ್ನು ಜೋಡಿಸಿ ಚಿನ್ನದ ಕಮಲದ ಹೂವು, ತಿರುಪಿನ ಹೂವು, ಕತ್ತರಿಹೂವು, ಹರಳಿನ ಹೂವು, ಕೇದಿಗೆ, ಚವರಿಕುಣಿಕೆ ಜೋಡಿಸಿ ಕಟ್ಟಿಕೊಳ್ಳುತ್ತಾರೆ. ಗೊರಟೆ ಹೂವು, ಗೌರಿಹೂವು, ಬೆಣ್ಣೆಮುದ್ದೆ ಹೂವು, ಗುಡ್ಡೆ ದಾಸವಾಳದ ಹೂವು, ಕಾಳಿನಹೂವುಗಳನ್ನು ತಂದು ದಂಡೆ ಮಾಡಿಕೊಂಡು ಹೂವಿನ ಸಿಬ್ಲದಲ್ಲಿಟ್ಟುಕೊಳ್ಳುತ್ತಾರೆ.

                ನೆನೆ ಅಕ್ಕಿ, ನೆನೆಗಡಲೆ, ಒಂದು ಚಿಪ್ಪು ಬಾಳೆಹಣ್ಣು, ಗಂಧ, ಅರಿಶಿನ, ಕುಂಕುಮ, ಕಣ್ಕಪ್ಪು, ವಿಭೂತಿ, ಕಟ್‍ಲಾಡಿ, ಬಳೆ, ಪೂಜೆ ಸಾಮಾನುಗಳನ್ನು ಸಿದ್ಧಮಾಡಿಕೊಳ್ಳುವರು. ಕುಡಿಬಾಳೆಲೆಯಲ್ಲಿ ಒಂದು ಬೊಗಸೆ ಅಕ್ಕಿ ಹಾಕಿಕೊಂಡು ತಿರಗೆಮಣೆ, ಹಿಟ್ಟಂಡೆ ಇರಿಕೆ ಮತ್ತು ಗೌರಿಗೆ ಎಡೆ ಮಾಡುವ ಅತಿರಸದ ಕಜ್ಜಾಯ, ಬಾಳೆಹಣ್ಣಿನ ಕಜ್ಜಾಯ, ಹೊಸಗರೆ ಕಜ್ಜಾಯ, ಅಂಬಲಿ ಕಜ್ಜಾಯ, ಪಂಚಕಜ್ಜಾಯ, ಎಳ್ಳುಂಡೆ, ಕುಚ್ಚುಂಡೆ, ಸೀಕರುಂಡೆ, ಚಕ್ಕುಲಿ ಮುಂತಾದ ತಿಂಡಿ ತಿನಿಸುಗಳು ಈ ಸಾಮಾನುಗಳನ್ನು ಒಂದು ಅಗಲವಾದ ಬೆತ್ತದ ಪೆಟ್ಟಿಗೆ ಮುಚ್ಚಳದಲ್ಲಿ ಇಟ್ಟುಕೊಂಡು ಊರಿನ ಹೆಣ್ಣುಮಕ್ಕಳು ಅವರವರ ಕೇರಿಯಲ್ಲಿರುವ ಬಾವಿಗಳಿಗೆ ಹೋಗುತ್ತಾರೆ.

                ಬಾವಿಯ ಸುತ್ತ ಗೋಮಯ (ಸೆಗಣಿ ನೀರು) ಹಾಕಿ ಬಾವಿಯ ಕೆಳಭಾಗದ ಕಟ್ಟೆಯ ಮೇಲೆ ಪೆಟ್ಟಿಗೆ ಮುಚ್ಚಳವನ್ನು ಇಡುತ್ತಾರೆ. ಕೊಡಪಾನದಿಂದ ಬಾವಿಯಿಂದ ಶುದ್ಧವಾದ ನೀರನ್ನು ಎತ್ತಿ ತಂಬಿಗೆಗೆ ಹಾಕುತ್ತಾರೆ. ಪಂಚಭೂತಗಳ ಪ್ರತೀಕವಾಗಿ ಚಿಕ್ಕ ಐದು ಕಲ್ಲುಗಳನ್ನು ಸ್ವಚ್ಛವಾಗಿ ತೊಳೆದು ತಂಬಿಗೆಗೆ ಹಾಕಿ ಗೌರಿಗೆ ಜೀವಕಳೆಯನ್ನು ತುಂಬುತ್ತಾರೆ. ನಂತರ ತಂಬಿಗೆಯಿಂದ ಐದು ಹನಿ ನೀರನ್ನು ಬಾವಿಗೆ ಬಿಡುತ್ತಾರೆ. ಇಂದ್ರನ ಹೂವಿನ ಗುಚ್ಛ ಮತ್ತು ಜಡೆ ಬಂಗಾರವನ್ನು ಜೋಡಿಸಿದ ಕಡ್ಡಿಗಳನ್ನು ತಂಬಿಗೆ ಒಳಗೆ ಇಳಿಬಿಡುತ್ತಾರೆ. ನಂತರ ಗೌರಿಗೆ ಸೀರೆಯನ್ನು ಉಡಿಸುತ್ತಾರೆ. ಗೌರಿಗೆ ತಾಳಿಸರ, ಬೆಂಡೋಲೆ, ಬುಗುಡಿ, ಪವನ ಸರ, ಕಟ್‍ಲಾಡಿ ಬಳೆ ತೊಡಿಸಿ ಗಂಧ, ಕಣ್ಕಪ್ಪು, ಕುಂಕುಮ, ಅರಿಶಿನ, ವಿಭೂತಿ ಹೀಗೆ ಐದು ಬಟ್ಟುಗಳನ್ನು ಇಟ್ಟು ಅಲಂಕಾರ ಮಾಡುತ್ತಾರೆ. ಕಜ್ಜಾಯಗಳು, ಸಿಹಿ ಉಂಡೆಗಳನ್ನು ಎಡೆ ಮಾಡಿ ಪೂಜಿಸಿದ ನಂತರ ಬಾಳೆಹಣ್ಣು, ಎಲೆ, ಅಡಿಕೆ ಯಾವುದಾದರೂ ಒಂದು ಬಗೆಯ ಕಜ್ಜಾಯವನ್ನು ಸೇರಿಸಿ ಬಾವಿಗೆ ಬಿಡುತ್ತಾರೆ. ಎಲ್ಲಾ ಹೆಣ್ಣುಮಕ್ಕಳು ಸೇರಿ ಈ ಹಾಡು ಹೇಳುತ್ತಾರೆ. ಎರಡು ಜನ ಮುಂದೆ ಹೇಳಿದರೆ ಉಳಿದವರು ಹಿಂದೆ ದನಿಗೂಡಿಸುತ್ತಾರೆ. ಹಾಡು ಹೀಗಿದೆ.

                ಪುಟ್ಟ ಪುಟ್ಟ ಮಕ್ಕಳಿರಾ

                ಪಟ್ಟೇಯ ನೆಲದೂಡಿ

                ಕಪ್ಪ ತಕ್ಕಳರಿ ಗೌರೀಗೆ     ||ಶಿವೋ||

                ಕಪ್ಪ ತಕ್ಕಳರಿ ಗೌರೀಗೆ ನಾಳೆ |

                ಬರೂವ ಬೆನವಗೆ ತಕ್ಕಳರಿ ನೆನಗಡಲೆ ||ಪ||

                ಸಣ್ಣ ಸಣ್ಣ ಮಕ್ಕಳಿರಾ

                ಸಾಲೇಯ ನೆಲದೂಡಿ

                ವಾಲೆ ತಕ್ಕಳರಿ ಗೌರೀಗೆ ||ಶಿವೋ||

                ವಾಲೆ ತಕ್ಕಳರಿ ಗೌರೀಗೆ | ನಾಳೆ ಬರುವಾ

                ಬೆನವಗೆ ತಕ್ಕಳರಿ ಕೊನೆಹಣ್ಣು ||1||

                ಇಂದೇ ನಮ್ಮಲ್ಲಿ ತುಂಬಿದಂತ ಹಬ್ಬ

                ರಂಬೇರು ಹೆಣ್ಣುಮಕ್ಕಳು ಉಪವಾಸ

                ರಂಬೇರು ಹೆಣ್ಣುಮಕ್ಕಳು

                ಉಪವಾಸ ಐದಾರೇ |

                ಬ್ಯಾಗನೆ ಬಾ ಗೌರಿ ದಿಡಸೇರೆ ||

                ಬ್ಯಾಗಾನೆ ಬಾ ದಿಡಸೇರೆ ನಾವು ತಂದ

                ಕಪ್ಪು ಬಂಗಾರ ಇಡತೀನೆ ||2||

                ಬಾಳೇಯಕಾಯಿ

                ಭಾವಕ್ಕೀಡಾಡುತ್ತ

                ಬಾಲಯ್ಯ ಮದ್ದಲೆಯ ನುಡಿಸುತ್ತ ||

                ಬಾಲಯ್ಯ ಮದ್ದಲೆಯ ನುಡಿಸುತ್ತ

                ಹೋಗನಬನ್ನಿ ತಾಯಿ ಸಿರಿಗೌರಿ

                ಕರೆಯೋಕೆ ||3||

                ಕಂಚೀಯಕಾಯ

                ಅಂತರಕ್ಕೀಡಾಡುತ್ತ

                ಕೆಂಚಯ್ಯ ಮದ್ದಲೆಯ ನುಡಿಸುತ್ತ

                ಕೆಂಚಯ್ಯ ಮದ್ದಲೆಯ

                ನುಡಿಸುತ್ತ ಹೋಗನ ಬನ್ನಿ

                ತಾಯಿ ಸಿರಿಗೌರಿ ಕರೆಯೋಕೆ ||4||

                ಕಹಳೆಯವರೇಳಿ

                ಓಲಗದವರೇಳಿ

                ಈಗೇಳಿರಿ ನಾಗಸ್ವರದೋರೆ

                ಈಗೇಳಿರಿ ನಾಗಸ್ವರದೋರೆ | ನಮ್ಮನೆಯ

                ತಾಯಿ ಸಿರಿಗೌರಿ ಕರೆಯೋಕೆ ||5||

                ಮಹಿಳೆಯರು ಹಾಡುತ್ತಿರುವಾಗ ಮಕ್ಕಳು ಪಟಾಕಿ ಪೆಟ್ಲು ಹೊಡೆಯುತ್ತಾರೆ. ಹಾಡು ಮುಗಿದ ನಂತರ ಮಕ್ಕಳಿಗೆ ಪ್ರಸಾದ ಹಂಚುತ್ತಾರೆ. ಗೌರಿಯನ್ನು ಅವರವರ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಮನೆಯ ಬಾಗಿಲಿಗೆ ಗೌರಿ ಬಂದನಂತರ ಬಾಗಿಲ ಮೆಟ್ಟಿಲಲ್ಲಿ ಕುಡಿಬಾಳೆಎಲೆ ಇಟ್ಟು ಗೌರಿ ಹೊತ್ತವಳ ಬಲಗಾಲನ್ನು ಬಾಳೆಎಲೆಯ ಮೇಲಿರಿಸಿ ನಂತರ ಎಡಗಾಲ ಪಾದವನ್ನು ಇಡಿಸಿ, ಪಾದವನ್ನು ನೀರಿನಿಂದ ತೊಳೆದು ನಂತರ ಗೌರಿ ಹೊತ್ತವಳು ಮನೆಯ ಒಳಗಿರುವ ಗೌರಿ ಮಂಟಪದಲ್ಲಿ ತಿರುಗೆ ಮಣೆಯಿಟ್ಟು ಮಣೆಯ ಮೇಲೆ ಕುಡಿಬಾಳೆಎಲೆ ಹಾಸಿ ಎಲೆಯ ಮೇಲೆ ಒಂದು ಬೊಗಸೆ ಅಕ್ಕಿ ಹಾಕಿ ಗೌರಿಯನ್ನು ಕೂರಿಸುತ್ತಾರೆ. ಗೌರಿಯನ್ನು ಮಂಟಪದಲ್ಲಿ ಕೂರಿಸುವಾಗ

                ಹಣ್ಣಡಿಕೆ ಬಿದ್ದಾರೆ ದಣ್ಣಂದಾವು ಮಾಳಿಗೆ

                ಅಪ್ಪಯ್ಯ ಕಟ್ಟೀದ ಅರಮನೆ

                ಅಪ್ಪಯ್ಯ ಕಟ್ಟೀದ ಅರಮನೆ ಮಾಳಿಗೆ ಒಳಗೆ

                ತಾವ ನೋಡಿ ಕುಂಡ್ರೆ ಸಿರಿಗೌರಿ ||ಪ||

                ಕಾಯಡಿಕೆ ಬಿದ್ದಾರೆ ಓ ಅಂದಾವು ಮಾಳಿಗೆ

                ಅಣ್ಣಯ್ಯ ಕಟ್ಟೀದ ಅರಮನೆ |

                ಅಣ್ಣಯ ಕಟ್ಟೀದ ಅರಮನೆ ಮಾಳಿಗೆ ಒಳಗೆ

                ಜಾಗ ನೋಡಿ ಕುಂಡ್ರೆ ಸಿರಿಗೌರಿ ||1||

                ಗೌರಿಗೆ ಬಾಳೆದಿಂಡಿನ ಕಾಲುಗಳನ್ನು ಮಾಡಿ ಜೋಡಿಸಿ, ಕಾಲಿಗೆ ಬೆಳ್ಳಿಯ ಕಾಲುಂಗುರ, ಕಾಲುಪಿಲ್ಲಿ, ಮೀನುಂಗರ, ಮೀನಪಿಲ್ಲಿ, ಕಿರಿಪಿಲ್ಲಿ, ಕಾಲುಚೈನು, ಕಾಲಂದಿಗೆ, ಕಾಲುಪಡಂಗಗಳನ್ನು ಹಾಕುತ್ತಾರೆ. ಗೌರಿಯ ಕೊರಳಿಗೆ ಬಂಗಾರದ ತೀಕಿ, ಕಟ್ಟಾಣಿಸರ, ಏಕದಾನಿ, ಗುಂಡಿನಸರ, ತಾಳಿಸರ, ಕಿವಿಗೆ ಬಂಗಾರದ ಓಲೆ, ಬುಗುಡಿ, ಸೊಂಟಕ್ಕೆ ಬೆಳ್ಳಿಯ ಗೆಜ್ಜೆಪಟ್ಟಿ ತೊಡಿಸುತ್ತಾರೆ. ಇಂದ್ರನಹೂವಿನ ಗುಚ್ಛದಲ್ಲಿರುವ ಬಿದಿರಕಡ್ಡಿಗೆ ಚವಲಿ ಕಟ್ಟಿ ಜಡೆ ಹಾಕಿ ಜಡೆ ತುದಿಗೆ ಬೆಳ್ಳಿಯ ಜಡೆಗೊಂಡೇವು ಕಟ್ಟಿ ಗೌರಿಯನ್ನು ವಿಧ ವಿಧವಾಗಿ ಅಲಂಕಾರ ಮಾಡುತ್ತಾರೆ.

                ಗೌರಿಯನ್ನು ಸಂಪೂರ್ಣ ಅಲಂಕಾರ ಮಾಡಿದ ನಂತರ ಮನೆಯಲ್ಲಿ ತಯಾರಿಸಿರುವ ಎಲ್ಲಾ ಪದಾರ್ಥಗಳನ್ನು ಹಾಕಿ ನೈವೇದ್ಯದ ಎಡೆ ಮಾಡಿ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಕುಟುಂಬದಲ್ಲಿ ಮದುವೆಯಾದ ಹೆಣ್ಣುಮಕ್ಕಳು ತಮ್ಮ ತಮ್ಮ ಗಂಡನ ಮನೆಗಳಿಂದ ಹಣ್ಣು ಕಾಯಿ, ಮಡಿಲಕ್ಕಿ, ಕುಬುಸದ ಖಣ, ಕೊಬ್ರಿ ಬಟ್ಟಲು, ಉತ್ತುತ್ತಿ, ಗೌರಿಬಳೆ, ಕಟ್‍ಲಾಡಿ, ಮುಡಿದಂಡೆ ಮುಂತಾದ ಮುತ್ತೈದೆ ಸಾಮಾನುಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಅವುಗಳನ್ನು ಗೌರಿಯ ಬಲಭಾಗದಲ್ಲಿಟ್ಟು ಪ್ರತ್ಯೇಕವಾಗಿ ಪೂಜೆ ಸಲ್ಲಿಸುತ್ತಾರೆ.

                ಆ ವರ್ಷ ಮದುವೆ ಅಳಿಯ (ಮಗಳ ಗಂಡ) ಬಾಳೇಮೂತಿ ಇರುವ ಇಡೀ ಬಾಳೆ ಕೊನೆಗೆ ಸಿಂಗಾರ ಮಾಡಿ ಹೊತ್ತು ತರುತ್ತಾನೆ. ಇದಕ್ಕೆ ‘ಹೊರೆಗೊನೆ’ ಎನ್ನುತ್ತಾರೆ. ಇದನ್ನು ಗೌರಿಯ ಮಂಟಪದಲ್ಲಿ ಇಟ್ಟಿರುತ್ತಾರೆ.

                ಹೊಸ ಅಳಿಯ ಮನೆಯಲ್ಲಿರುವ ಮಕ್ಕಳಿಗೆ ಪಟಾಕಿ ತಂದುಕೊಡಬೇಕು. ಮಕ್ಕಳು ಪಟಾಕಿ ಪೆಟ್ಲು ಹೊಡೆದು ಖುಷಿಪಡುತ್ತಾರೆ. ಗೌರಿಯನ್ನು ಮೂರು ಅಥವಾ ಐದು ದಿವಸಗಳವರೆಗೆ ಇಟ್ಟು ಪೂಜಿಸುತ್ತಾರೆ. ಈ ಐದು ದಿವಸಗಳಲ್ಲಿ ಪ್ರತಿದಿವಸ ಗೌರಿಗೆ ವಿಧ ವಿಧವಾದ ಹೂವುಗಳಿಂದ ಅಲಂಕಾರ ಮಾಡಿ ಮತ್ತು ಬಗೆ ಬಗೆಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿ ಗೌರಿಗೆ ನೈವೇದ್ಯ ಮಾಡಿ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ದಿವಸ ರಾತ್ರಿ ಗೌರಿಗೆ ಕುಟುಂಬದ ಹೆಣ್ಣುಮಕ್ಕಳು ಕುಂಕುಮ ಮತ್ತು ಕರ್ಪೂರದಾರತಿ ಮಾಡಿ ಆರತಿ ಬಟ್ಟಲನ್ನು ಹೊಸ ಮತ್ತು ಹಳೆಯ ಅಳಿಯಂದಿರು ಇರುವಲ್ಲಿ ಇಡುತ್ತಾರೆ. ಮೊದಲು ಕುಟುಂಬದ ಯಜಮಾನ ಆರತಿ ಬಟ್ಟಲಿಗೆ ಕಾಣಿಕೆಯನ್ನು ಹಾಕುತ್ತಾರೆ. ಅಳಿಯಂದಿರು ಕಾಣಿಕೆಗಳನ್ನು ಹಾಕುತ್ತಾರೆ. ಆರತಿ ಬಟ್ಟಲಿಗೆ ಹಾಕಿರುವ ಕಾಣಿಕೆ ಹಣವನ್ನು ಹೆಣ್ಣುಮಕ್ಕಳು ಹಂಚಿಕೊಳ್ಳುತ್ತಾರೆ.

                ಗುಡ್ಡ ಬೆಟ್ಟಗಳಲ್ಲಿರುವ ಕಾಡುಬಳ್ಳಿಗಳಲ್ಲಿ ಬಿಡುವ ಬೆಣ್ಣೆಮುದ್ದೆ ಎಂಬ ಬಿಳಿ ಹೂವುಗಳನ್ನು ತಂದು ದಂಡೆ ಕಟ್ಟಿ ಗೌರಿಗೆ ಮುಡಿಸಿ ಗೌರಿಯನ್ನು ಶ್ವೇತಾಂಬರಿಯನ್ನಾಗಿ ಮಾಡುತ್ತಾರೆ. ಬೆಟ್ಟಗಳಲ್ಲಿರುವ ನಸುಗೆಂಪು ಮಿಶ್ರಿತ ಕಪ್ಪು ಬಣ್ಣದ ಕಾಳನಹೂವುಗಳನ್ನು ದಪ್ಪ ದಂಡೆ ಕಟ್ಟಿ ಗೌರಿಗೆ ಮುಡಿಸಿ, ಗೌರಿಯನ್ನು ಭದ್ರ ಕಾಳಿಯನ್ನಾಗಿ ಮಾಡುತ್ತಾರೆ. ನಸುಕೆಂಪು ಬಣ್ಣದ ಗುಡ್ಡೆ ದಾಸವಾಳ, ಅನೇಕ ಬಣ್ಣದ ಗೌರಿಹೂವು, ಗುಲಾಬಿ, ಬಿಳಿ ನೀಲಿ ಬಣ್ಣದ ಗೊರಟೆ ಹೂವುಗಳು, ಹಳದಿಬಣ್ಣದ ದೊಡ್ಡ ಗೊರಟೆ ಹೂವುಗಳನ್ನು ದೊಡ್ಡದಾದ ದಂಡೆ ಕಟ್ಟಿ ಗೌರಿಗೆ ಮುಡಿಸಿ ಅಲಂಕಾರ ಮಾಡುತ್ತಾರೆ. ಪ್ರತಿದಿವಸ ಯಾವುದಾದರೂ ಸಿಹಿ ಅಥವಾ ಕರಿದ ಖಾರದ ತಿಂಡಿಯನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ.

                ಕರ್ಜಿಕಾಯಿ, ಹೋಳಿಗೆ, ಅನೇಕ ತರಹದ ಸಿಹಿ ಉಂಡೆಗಳು, ಬಗೆ ಬಗೆಯ ಕಜ್ಜಾಯಗಳನ್ನು ಮಾಡಿ ಗೌರಿಗೆ ಎಡೆ ಮಾಡುತ್ತಾರೆ. ಗೌರಿಯನ್ನು ತಂದ ದಿವಸದಿಂದ ಬಿಡುವವರೆಗೆ ಶಿವನ ಮದುವೆ ಹಾಡು, ಅರ್ಜುನಸ್ವಾಮಿ ಹಾಡು, ಉತ್ತರದೇವಿ ಹಾಡು, ಕಾಳಿಂಗರಾಯನ ಹಾಡು, ಗುಣಸಾಗರಿ ಹಾಡು, ಕೆಂಚಮ್ಮನ ಹಾಡು, ನಾಗಮ್ಮನ ಹಾಡು, ಚಿಪ್ಪಿಗನ ಹಾಡು, ಗೌರಿ ಹುಟ್ಟುವ ಹಾಡು, ಗಿರಿರಾಜನ ಹಾಡು, ಗೌರಿ ವನವಾಸಕ್ಕೆ ಹೋದ ಹಾಡು, ಗಂಗೆ ಹಾಡು ಹೀಗೆ ಅನೇಕ ಕಥನಗೀತೆಗಳನ್ನು ಮತ್ತು ಬಿಡಿ ಹಾಡುಗಳನ್ನು ಹೆಣ್ಣುಮಕ್ಕಳು ರಾತ್ರಿಯೆಲ್ಲಾ ಹಾಡುತ್ತಾರೆ. ಒಮ್ಮೊಮ್ಮೆ ಗಂಡಸರು ದನಿ ಕೊಡುತ್ತಾರೆ. ಐದು ದಿವಸಗಳ ಕಾಲ ಜನಪದ ಗೀತೆಗಳ ರಸದೌತಣವನ್ನೇ ಹರಿಸುತ್ತಾರೆ.

ಗೌರಿ ಬಿಡುವ ದಿವಸ ಗೌರಿಗೆ ಏಳು ಊಟಗಳು ಆಗಬೇಕು. ಏಳು ರೀತಿಯ ಬಗೆ ಬಗೆಯ ತಿಂಡಿಗಳನ್ನು ಮಾಡಿ ಗೌರಿಗೆ ಎಡೆ ಮಾಡುತ್ತಾರೆ. ಬೆನವನಿಗೆ ಪ್ರತ್ಯೇಕ ಎಡೆ ಮಾಡುತ್ತಾರೆ. ಬೆನವನ ಎಡೆಗೆ ಕೆಸವಿನ ಸೊಪ್ಪಿನ ಪಲ್ಲೆ ಆಗಲೇಬೇಕು. ಗೌರಿಗೆ ಸಿಹಿ ತಿಂಡಿಗಳ ಜೊತೆಯಲ್ಲಿ ಅನ್ನ, ಸಾರು, ಪಾಯಸ, ಮೊಸರನ್ನ, ಹಾಲು ಅನ್ನ, ಹಾಲು ತುಪ್ಪ, ಹಾಲು-ಹಣ್ಣು ಎಡೆ ಮಾಡಿ ಗೌರಿಯನ್ನು ಪೂಜಿಸಿದ ನಂತರ ಸಂಜೆ ಗೌರಿಯನ್ನು ಮಂಪಟದಿಂದ ಹೊರತೆಗೆದು ಮನೆಯ ಹೆಬ್ಬಾಗಿಲವರೆಗೆ ತಂದು ಕೂರಿಸಿ, ಮತ್ತೊಮ್ಮೆ ಹಾಲು-ಹಣ್ಣು ಎಡೆ ಮಾಡಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಹೀಗೆ ಹಾಡುತ್ತಾರೆ.               

                ಇಂದ್ಹೋದ ಗೌರಿ ಇನ್ನೆಂದು ಬರುತೀಯೆ

                ಇಂದಿಗ್ಹೊರುಷಾಕೆ ಬರುತೀನಿ

                ಅಷ್ಟೊಂದ ಮಾತ ಹೇಳ್ಯಾಳೆ ಸಿರಿಗೌರಿ

                ಬಾಗಿಲ ಮೆಟ್ಟಿಲ ಇಳಿದಾಳೆ |

                ಬಾಗಿಲ ಮೆಟ್ಟಿಲು ಇಳಿದು ಏನಂದಾಳೆ |

                ಹುಟ್ಟೀದ ಮನೆಗೆ ಸಿರಿ ಬರಲಿ ||

                ಹುಟ್ಟೀದ ಮನೆಗೆ ಸಿರಿ ಬರಲಿ ಅಂತ್ಹೇಳಿ

                ಮುತ್ತ ಬೀರ್ಯಾಳೆ ಒಳಹೊರಗೆ

                ಗೌರಿ ಹೊತ್ತವಳು ಮನೆಯ ಒಳಗಡೆ ಅಕ್ಕಿಯನ್ನು ಬೀರುತ್ತಾಳೆ. ನಂತರ

                ಮುತ್ತ ಬೀರ್ಯಾಳೆ ಒಳಹೊರಗೆ ಸಿರಿಗೌರಿ

                ಮತ್ತೊಂದ ಮೆಟ್ಟಿಲನೆ ಇಳಿದಾಳೆ |

                ಮತ್ತೊಂದ ಮೆಟ್ಟಿಲನೆ ಇಳಿದಾಳೆ ಸಿರಿಗೌರಿ |

                ಹೂವ ಬೀರ್ಯಾಳೆ ಒಳ-ಹೊರಗೆ |

                ಹೂವ ಬೀರ್ಯಾಳೆ ಒಳಹೊರಗೆ ಸಿರಿಗೌರಿ

                ಹುಟ್ಟೀದ ಮನೆಗೆ ಸಿರಿ ಬರಲಿ |

                ಗೌರಿ ಹೊತ್ತವಳು ಮನೆಯ ಒಳಗೆ ಹೂವ ಬೀರುತ್ತಾಳೆ.

                ಇಡೀ ಊರಿನವರೆಲ್ಲಾ ಸೇರಿ ಒಟ್ಟಿಗೆ ಗೌರಿ ಹೊರಡಿಸುತ್ತಾರೆ.

                ಗೌರಿಯ ಮಂಟಪಕ್ಕೆ ಕಟ್ಟಿದ ಪಳವಳಿಕೆ ಸಾಮಾನುಗಳನ್ನು ಬಿಚ್ಚಿ ಒಂದು ಬುಟ್ಟಿಯಲ್ಲಿ ತುಂಬಿಕೊಳ್ಳುತ್ತಾರೆ. ಮನೆಯ ಅಂಗಳಕ್ಕೆ ಗೌರಿಯನ್ನು ಹೊರಡಿಸಿ ಅಂಗಳದಲ್ಲಿ ನಿಂತು ಏಳು ಸಾರಿ ಸುತ್ತಿ ತವರುಮನೆಗೆ ಒಳ್ಳೆಯದಾಗಲಿ ಎಂದು ಗೌರಿಗೆ ಮುಡಿಸಿದ ಹೂವು ಮತ್ತು ಮಡಿಲಕ್ಕಿಯನ್ನು ಮನೆಗೆ ಬೀರುತ್ತಾರೆ. ಊರಿನಲ್ಲಿರುವ ಕೆರೆ, ನದಿ ಅಥವಾ ಹಳ್ಳಕ್ಕೆ ಊರಿನ ಎಲ್ಲಾ ಕುಟುಂಬದ ಗೌರಿಯನ್ನು ತೆಗೆದುಕೊಂಡು ಡೊಳ್ಳು, ಕೋಲಾಟ ಮುಂತಾದ ಜಾನಪದ ಕುಣಿತಗಳೊಂದಿಗೆ, ಮಹಿಳೆಯರು ಹಾಡುಗಳನ್ನು ಹೇಳುತ್ತಾ ಮೆರವಣಿಗೆಯಲ್ಲಿ ಹೋಗುತ್ತಾರೆ. ಪಳವಳಿಕೆ ಸಾಮಾನುಗಳನ್ನು ಹೊಳೆಗೆ ಹಾಕಿ ಬೆನವನ ಬುತ್ತಿಯನ್ನು ಬಡವರಿಗೆ ಕೊಡುತ್ತಾರೆ.

                ಹೊಳೆಯ ದಂಡೆಗೆ ಹೋಗಿ ಗೋಮಯ (ಸೆಗಣಿ ನೀರು) ಹಾಕಿ ಗೌರಿಯನ್ನು ಕೂರಿಸಿ ಗೌರಿಗೆ ಧರಿಸಿರುವ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಹೂವುಗಳನ್ನು ತೆಗೆದು ಹೊಳೆಗೆ ಹಾಕುತ್ತಾರೆ. ತಂಬಿಗೆಯಲ್ಲಿರುವ ನೀರನ್ನು ಹೊಳೆಗೆ ಚೆಲ್ಲಿ ತಂಬಿಗೆಯಲ್ಲಿ ಐದು ಕಲ್ಲುಗಳನ್ನು ವಾಪಾಸು ಮನೆಗೆ ತಂದು ಮನೆಯ ಹಾಲು-ತುಪ್ಪದ ಪಾತ್ರೆಗೆ ಅಥವಾ ಭತ್ತದ ಕಣಜಕ್ಕೆ ಹಾಕುತ್ತಾರೆ. ಹಾಲು-ಹೈನ, ಧಾನ್ಯ ಹುಲುಸಾಗುತ್ತದೆ ಎಂಬ ನಂಬಿಕೆ. ಗಂಗೆ ಬಳಿಗೆ (ಗೋತ್ರ) ಸೇರಿದ ಹೆಣ್ಣುಮಕ್ಕಳು ಗೌರಿ ಬಿಟ್ಟು ಗಂಗೆಯನ್ನು ತರುತ್ತಾರೆ. ತಂಬಿಗೆಗೆ ಹೊಸದಾಗಿ ನೀರು ತುಂಬಿಸಿ, ಪುನಃ ಐದು ಕಲ್ಲುಗಳನ್ನು ಹಾಕಿ ಗೌರಿಗೆ ಹಾಕಿರುವ ಎಲ್ಲಾ ಆಭರಣಗಳನ್ನು ಮತ್ತು ಹೂವುಗಳನ್ನು ತೊಡಿಸಿ, ಅಲಂಕರಿಸಿ ಗಂಗೆಯ ಹಾಡು ಹೇಳುತ್ತಾ ಮನೆಗೆ ತರುತ್ತಾರೆ. ಗೌರಿ ಮಂಟಪದಲ್ಲಿ ಗಂಗೆಯನ್ನು ಕೂರಿಸಿ ಹಾಲು-ಹಣ್ಣು ನೈವೇದ್ಯ ಮಾಡಿ ಪೂಜೆ ಮಾಡುತ್ತಾರೆ. ಮರುದಿವಸ ಪುನಃ ಹಾಲು-ಹಣ್ಣು ನೈವೇದ್ಯ ಮಾಡಿ ತೆಂಗಿನಕಾಯಿ ಒಡೆದು ಪೂಜೆ ಮಾಡಿ ತೆಂಗಿನಮರದ ಬುಡದಲ್ಲಿ ಗಂಗೆಯನ್ನು ವಿಸರ್ಜನೆ ಮಾಡುತ್ತಾರೆ.

 

ಪಳುವಳಿಕೆ ಸಾಮಾನುಗಳು

                ಮಲೆನಾಡಿನ ದೀವರು ಜನಾಂಗದವರು ಗೌರಿಹಬ್ಬದಲ್ಲಿ ಬಾಳೆ ಕಂಬ ಮತ್ತು ಬಾಳೆರೆಂಬೆಗಳನ್ನು ಗೌರಿ ಕಡ್ಡಿಗಳಿಂದ ಸೆಟ್ಟು ಮಂಟಪ ತಯಾರಿಸುತ್ತಾರೆ. ನಾಲ್ಕು ಕಂಬಗಳಿರುವ ಮಂಟಪ ಮುಂಭಾಗದಲ್ಲಿ ತೆರೆದಿದ್ದು ಹಿಂಭಾಗ ಮತ್ತು ಎಡ ಬಲಭಾಗಗಳನ್ನು ಬಾಳೆ ರೆಂಬೆಗಳಿಂದ ಮುಚ್ಚಿರುತ್ತಾರೆ. ಮಂಟಪದ ಒಳಗಡೆಯ ಮೇಲ್ಭಾಗದಲ್ಲಿ ಪಳವಳಿಕೆ ಸಾಮಾನುಗಳನ್ನು ಜೋತು ಬೀಳುವಂತೆ ಕಟ್ಟಿರುತ್ತಾರೆ. ಪಳುವಳಿಕೆಯ ಸಾಮಾನುಗಳು ಹೀಗಿವೆ.

1) ಕಂಗನಹಳ್ಳು

                ಒಂದು ಜಾತಿ ಸಸ್ಯದ ಬಳ್ಳಿಯಲ್ಲಿ ಗೊಂಚಲು ಗೊಂಚಲಾಗಿ ಬಿಡುವ ಹಳದಿ ಬಣ್ಣದ ಕಾಯಿಗಳು. ಗೊಂಚಲು ಕಾಯಿಗಳು ಹಣ್ಣಾಗಿ ಒಡೆದಾಗ ಕೆಂಪು ಬೀಜಗಳು ಕಾಣುತ್ತವೆ. ಪಳವಳಿಕೆ ಸಾಮಾನುಗಳಲ್ಲಿ ಇದು ಒಂದು.

2) ಮದ್ದಾಲೆಕಾಯಿ

                ಮದ್ದಾಲೆ ಎಂಬ ಜಾತಿಮರ. ಇದು ಚಪ್ಪರದಂತೆ ಸುಮಾರು ಹತ್ತು ಅಡಿ ಎತ್ತರ ಬೆಳೆಯುತ್ತದೆ. ಹಳದಿಬಣ್ಣದ ಗೊಂಚಲು ಗೊಂಚಲು ಕಾಯಿ ಬಿಡುತ್ತವೆ. ಕಾಯಿಗಳು ಹಣ್ಣಾಗಿ ಒಡೆದಾಗ ಕೆಂಪುಬಣ್ಣದ ಬೀಜಗಳಿರುತ್ತವೆ. ಇದೊಂದು ಔಷಧೀಯ ಸಸ್ಯ. ಟೈಫಾಯಿಡ್ ಜ್ವರವಾದರೆ ಇದರ ಚಕ್ಕೆಯನ್ನು ತಂದು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಸುತ್ತಾರೆ.

3) ಮತ್ತಿಕಾಯಿ

                ಮತ್ತಿ ಎಂಬ ಜಾತಿಯ ದೊಡ್ಡಮರದಲ್ಲಿ ಗುಜ್ಜು, ಗುಜ್ಜಾಗಿ ಬಿಡುವ ಕಾಯಿಗಳ ಗೊಂಚಲು. ಈ ಮರ ತುಂಬಾ ಗಟ್ಟಿ ಜಾತಿಯದಾಗಿದ್ದು ಮನೆ ಕಟ್ಟಲು ನಾಟಾವನ್ನಾಗಿ ಬಳಸುತ್ತಾರೆ.

4) ಹುಣಾಲು ತೆನೆ

                ಹುಣಾಲು ಎಂಬ ಜಾತಿಯ ಮರ ಮತ್ತಿ ಮರದಷ್ಟೇ ಗಟ್ಟಿಯಾದುದು. ಇದನ್ನು ನಾಟಾವಾಗಿ ಬಳಸುತ್ತಾರೆ. ಈ ಮರದಲ್ಲಿ ಹೂವು ಮಾವಿನತೆನೆಯಂತೆ ಸುಂದರವಾಗಿರುತ್ತದೆ. ಹೂವುಗಳನ್ನು ಇಂದ್ರನ ಹೂವಿನ ಜೊತೆಗೆ ಸೇರಿ ಗುಚ್ಚಗಳನ್ನಾಗಿ ಮಾಡಿ ಗೌರಿ ತುಂಬುವ ತಂಬಿಗೆಯಲ್ಲಿ ಹಾಕುತ್ತಾರೆ. ಇಂದ್ರನಹೂವು ಸಿಗದೆ ಇದ್ದಾಗ ಹುನಾಲು ತೆನೆಯನ್ನೇ ಬಳಸುತ್ತಾರೆ.

5) ಪಡಂಗ

                ಪಡಂಗ ಎಂಬುದು ಒಂದು ಜಾತಿಯ ಸಸ್ಯ. ಪಡಂಗದಲ್ಲಿ ಚಿಕ್ಕದು ಮತ್ತು ದೊಡ್ಡದು ಎಂಬ ಎರಡು ವಿಧಗಳುಂಟು. ಚಿಕ್ಕ ಪಡಂಗ ಚಿಕ್ಕದಾದ ಜೋಳದ ಕುಂಡಿಗೆ ಆಕಾರದ್ದಾಗಿರುತ್ತದೆ. ದೊಡ್ಡ ಪಡಂಗ ದೊಡ್ಡ ಕುಂಡಿಗೆ ಬಿಡುತ್ತದೆ.

6) ಮುತ್ತು

                ಮರಗೆಣಸು ಎಂಬ ಸಸ್ಯದ ಬಳ್ಳಿ. ಈ ಬಳ್ಳಿಯಲ್ಲಿ ಗುಚ್ಚು ಗುಚ್ಚಾಗಿ ಮುತ್ತಿನ ಆಕಾರದಲ್ಲಿ ಬಿಡುವ ಬಿಳಿ ಬಣ್ಣದ ಕಾಯಿ ಗೊಂಚಲು. ಇದರ ಗಡ್ಡೆಯನ್ನು ಬೇಯಿಸಿ ತಿನ್ನುತ್ತಾರೆ.

7) ಸೂರನಕುಂಡಿಗೆ

                ಪಡಂಗ ಎಂಬ ಜಾತಿಯ ಸಸ್ಯಕ್ಕೆ ಸೂರನಕುಂಡಿಗೆ ಎಂದು ಕರೆಯುತ್ತಾರೆ.

8) ಬೆನಪ್ಪನ ಗೆಜ್ಜೆ

                ಹಾಡೇಗೆಡ್ಡೆ ಎಂಬ ಔಷಧ ಸಸ್ಯದ ಬಳ್ಳಿಯಲ್ಲಿ ಬಿಡುವ ಗೊಂಚಲು ಗೊಂಚಲಾದ ಗೆಜ್ಜೆ ಆಕಾರದ ಕಾಯಿ.

9) ಕೊಡಚಿನ ಕೋಡು

                ಇದೊಂದು ಔಷಧಿ ಗಿಡ. ಈ ಗಿಡದಲ್ಲಿ ಜವಳಿಕಾಯಿಯಂತೆ ಬಿಡುವ ಕಾಯಿಗಳ ಗೊಂಚಲು.

10) ಸೀರಣಿಗೆ

                ಇದೊಂದು ಜಾತಿಯ ಗಿಡದಲ್ಲಿ ಬಿಡುವ ಕಾಯಿಗಳು. ಕಾಯಿಗಳು ಉದ್ದವಾಗಿರುತ್ತವೆ.

 

11) ಗೌರಮ್ಮನ ತಲೆಕೂದಲು

                ಇದೊಂದು ಜಾತಿಯ ಬಳ್ಳಿಯಲ್ಲಿ ಬಿಡುವ ತಲೆಕೂದಲಿನಂತಿರುವ ಹಸಿರು ಎಲೆಗಳು. ಗಾಳಿ ಮರದ ಎಲೆಯಂತಿರುತ್ತದೆ.

12) ವಾಟೆಕಾಯಿ

                ವಾಟೆಮರದಿಂದ ಬಿಡುವ ಕಾಯಿಗಳು. ಇದರ ಹಣ್ಣುಗಳನ್ನು ಹುಳಿಗೆ ಬಳಸುತ್ತಾರೆ. ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ದೀವರು ಈ ಹುಳಿಯನ್ನು ಹೆಚ್ಚು ಬಳಸುತ್ತಾರೆ.

13) ಕಂಚಿಕಾಯಿ

                ಕಂಚಿ ಮರದಿಂದ ಬಿಡುವ ಕಾಯಿಗಳು. ಕಾಯಿಗಳಾದಾಗ, ಹಣ್ಣಾದಾಗ ತಿನ್ನಲು ಬಳಸುತ್ತಾರೆ.

14) ಜುಮ್ಮನಕಾಯಿ

                ಜುಮ್ಮನ ಮರದಿಂದ ಬಿಡುವ ಕಾಯಿಗಳು. ಕಾಯಿಗಳನ್ನು ಔಷಧಿಗೆ ಬಳಸುತ್ತಾರೆ.

15) ಚಪ್ಪಚೌಳಿ

                ಬೆಟ್ಟದಲ್ಲಿ ಬಿಡುವ ಆಲೂಗಡ್ಡೆ ಆಕಾರದ ಗಡ್ಡೆ. ಇದು ಚೌಳಾಗಿರುತ್ತದೆ. ತಿನ್ನಬಹುದು.

16) ಶಿವನೀರುಳ್ಳಿ

                ತೇವಾಂಶ ಇರುವ ಕಡೆ ಬೆಳೆಯುವ ಈರುಳ್ಳಿ ಆಕಾರದ ಗಡ್ಡೆ

17) ನೆಲವಾಟೆ

                ಬೆಟ್ಟದಲ್ಲಿ ಚಿಕ್ಕ ಗಿಡದಲ್ಲಿ ಬಿಡುವ ಕಾಯಿಗಳು. ಇವುಗಳನ್ನು ಹಸಿಯಾಗಿ ತಿನ್ನಬಹುದು ಮತ್ತು ಪಲ್ಲೆ ಮಾಡಬಹುದು.

18) ಬಳ್ಳಿವಾಟೆ

                ತೊಂಡೆಬಳ್ಳಿ ಆಕಾರದ ಬಳ್ಳಿಯಲ್ಲಿ ಬಿಡುವ ಕಾಯಿಗಳು. ಈ ಬಳ್ಳಿ ದೊಡ್ಡ ಗಿಡಗಳ ಮೇಲೆ ಹಬ್ಬುತ್ತದೆ.

19) ಮಡಾಗಲಕಾಯಿ

                ಇದು ಹಾಗಲಬಳ್ಳಿಯಂತೆ ಕಾಡಿನಲ್ಲಿ ಬೆಳೆಯುತ್ತದೆ. ಸಾರು, ಪಲ್ಲೆ ಮಾಡುತ್ತಾರೆ. ತುಂಬಾ ರುಚಿಯಾಗಿರುತ್ತದೆ.

 

 

20) ಹುಳಿಕಂಟಿಕಾಯಿ

                ಇದು ಮೂಸುಂಬೆ ಹಣ್ಣಿನಷ್ಟು ದಪ್ಪವಾಗಿರುತ್ತದೆ. ಕಾಯಿಗಳು ತುಂಬಾ ಹುಳಿಯಾಗಿರುವುದರಿಂದ ಉಪ್ಪಿನಕಾಯಿಗೆ ಬಳಸುತ್ತಾರೆ. ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.

21) ಕೆಂಚನದೊಣ್ಣೆ

ಏಕಾಂಗಿಯಾಗಿ ಉದ್ದವಾಗಿ ಬೆಳೆಯುವ ಒಂದು ಜಾತಿಯ ಸಸ್ಯ.

22) ಪಾತಾಳಗರುಡ

                ಇದೊಂದು ಔಷಧೀಯ ಸಸ್ಯದ ಗಿಡ.

23) ತಟಮಟ್ಲೆಕಾಯಿ

                ಗುಂಪಾಗಿ ಬೆಳೆಯುವ ಸಸ್ಯದಿಂದ ಬಿಡುವ ಇದು ಗುಚ್ಚು ಗುಚ್ಚಾಗಿರುತ್ತದೆ.

24) ಹೆಗ್ಗಾಣೆಕಾಯಿ

                ಕಾಡುಜಾತಿಯ ಬಳ್ಳಿಯಲ್ಲಿ ಬಿಡುವ ಕಾಯಿ.

25) ಕಾಗದಂಡೆಕಾಯಿ

                ಒಂದು ಜಾತಿಯ ಕಾಡುಬಳ್ಳಿಯಲ್ಲಿ ಬಿಡುವ ಕಾಯಿ.

 

ಮಹಾನವಮಿ ಹಬ್ಬ (ನವರಾತ್ರಿ)

                ದೀವರಲ್ಲಿ ವೈಷ್ಣವ ಸಂಪ್ರದಾಯ (ಶಿಕಾರಿಪುರ ಹುಚ್ಚರಾಯಸ್ವಾಮಿ ವಕ್ಕಲು) ಮತ್ತು ಚಂದ್ರಗುತ್ತಿ ರೇಣುಕಾಂಬೆಯ ವಕ್ಕಲು ಇವರು ಬೇರೆ ಬೇರೆ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಗುತ್ಯಮ್ಮನ ವಕ್ಕಲು ವಿಶೇಷವಾದ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ವೈಷ್ಣವ ಸಂಪ್ರದಾಯದವರು ಈ ರೀತಿ ಆಚರಿಸುತ್ತಾರೆ.

                ಮಹಾನವಮಿಯ ದಿವಸ ಕುಟುಂಬದವರೆಲ್ಲರೂ ಉಪವಾಸದಿಂದಿರುತ್ತಾರೆ. ಪ್ರತಿಯೊಬ್ಬರೂ ಸ್ನಾನ ಮಾಡಿ ಶುಚಿಯಾಗುತ್ತಾರೆ. ಬೆಳಗ್ಗೆ ಉಪಾಹಾರಕ್ಕೆ ರವೆ ಉಪ್ಪಿಟ್ಟು ಅಥವಾ ಅವಲಕ್ಕಿ ತಿಂದು ಬೆಲ್ಲ ಹಾಕಿ ಬೇಯಿಸಿದ ಹೆಸರುಕಾಳು ರಸ ಕುಡಿಯುತ್ತಾರೆ. ಅಡುಗೆ ಮಾಡುವ ಮಹಿಳೆಯರು ಸ್ನಾನ ಮಾಡಿ ಶುಚಿರ್ಭೂತರಾಗಿ ಅಡುಗೆ ತಯಾರಿಸುತ್ತಾರೆ. ಈ ಹಬ್ಬದಲ್ಲಿ ಹೊಸಗರೆ ಕಜ್ಜಾಯ, ಪಾಯಸ, ಚಿತ್ರಾನ್ನ, ಕೋಸಂಬರಿ, ಸಾಸಿವೆ, ಕಡ್ಲೆಬೇಳೆ ಚಟ್ನಿ, ತರಕಾರಿ ಸಾರು, ಪಲ್ಲೆ ಮುಂತಾದ ಪದಾರ್ಥಗಳನ್ನು ತಯಾರಿಸುತ್ತಾರೆ.

                ನಂತರ ಒಂದು ಹಿತ್ತಾಳೆ ಗಿಂಡಿಯನ್ನು ಚೆನ್ನಾಗಿ ಬೆಳಗಿ ಗಿಂಡಿಗೆ ಶುದ್ಧವಾದ ನೀರನ್ನು ತುಂಬಿ ಪಂಚಭೂತಗಳ ಪ್ರತೀಕವಾಗಿ ಐದು ಚಿಕ್ಕ ಕಲ್ಲುಗಳನ್ನು ಸ್ವಚ್ಛವಾಗಿ ತೊಳೆದು ಗಿಂಡಿಗೆ ಹಾಕಿ ಜೀವಕಳೆಯನ್ನು ತುಂಬುತ್ತಾರೆ. ಮಾವಿನ ಎಲೆ ಮತ್ತು ವೀಳ್ಯದೆಲೆಗಳನ್ನು ಸೇರಿಸಿ ಗಿಂಡಿಗೆ ಹಾಕಿ ಇಡಕಲು ಕೆಳಗೆ ಒಂದು ಮಣೆಯಿಟ್ಟು ಮಣೆಯ ಮೇಲೆ ಕುಡಿಬಾಳೆಎಲೆ ಇಟ್ಟು ಎಲೆಗೆ ಒಂದು ಬೊಗಸೆ ಅಕ್ಕಿ ಹಾಕಿ ಹರಡಿ ಗಿಂಡಿಯನ್ನು ಇಡುತ್ತಾರೆ. ಗಂಧ, ಕುಂಕುಮ, ಕಣ್ಕಪ್ಪು ಇಟ್ಟು ಮಲ್ಲಿಗೆ, ಸಂಪಿಗೆ, ಸುರಗಿಹೂವು ಮುಡಿಸುತ್ತಾರೆ. ಇಡಕಲು ಕೆಳಗೆ ನಾಲ್ಕು ಎಡೆ ಅಮ್ಮನಿಗೆ ಪ್ರತ್ಯೇಕವಾದ ಎಡೆಯಿಟ್ಟು ಎಡೆಗಳಿಗೆ ಆ ದಿನ ತಯಾರಿಸಿದ ಪ್ರತಿಯೊಂದು ಪದಾರ್ಥದ ಸ್ವಲ್ಪಭಾಗ ಹಾಕುತ್ತಾರೆ. ನಂತರ ಅಮ್ಮಳಿಗೆ ಎರಡು ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಎಡೆಯಲ್ಲಿರುವ ಸ್ವಲ್ಪ ಪದಾರ್ಥವನ್ನು ತೆಗೆದು ಒಂದು ಚಿಕ್ಕ ಬಾಳೆಎಲೆಯಲ್ಲಿ ಹಾಕಿ ಅದರಲ್ಲಿ ಹಚ್ಚಿರುವ ಬತ್ತಿಯನ್ನಿಟ್ಟು ಅಗ್ನಿಗೂಡುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ. ಅಮ್ಮನ ಎಡೆಯನ್ನು ಕುಟುಂಬದ ಹಿರಿಯ ಮಹಿಳೆ ಊಟ ಮಾಡಿ ಎಂಜಲು ಎಲೆಯನ್ನು ತೆಗೆದು ಹೊರಗಡೆ ಎಸೆಯುವ ಹಾಗಿಲ್ಲ. ಎಲೆಯನ್ನು ಕಾಗೆ, ಕೋಳಿ, ನಾಯಿಗಳೂ ಮುಟ್ಟುವಹಾಗಿಲ್ಲ. ಊಟದ ನಂತರ ಮಡಿಸಿ ಮನೆಯ ಸೂರಿಗೆ ಸಿಕ್ಕಿಸುತ್ತಾರೆ. ನಂತರ ಅಮ್ಮನನ್ನು ತೆಂಗಿನಮರದ ಬುಡಕ್ಕೆ ಗಿಂಡಿಯ ನೀರನ್ನು ಚೆಲ್ಲಿ ವಿಸರ್ಜನೆ ಮಾಡುತ್ತಾರೆ.

                ಚಂದ್ರಗುತ್ತಿ ಗುತ್ಯಮ್ಮ (ರೇಣುಕಾಂಬೆ) ವಕ್ಕಲು ಮಹಾನವಮಿ ಹಬ್ಬವನ್ನು ಆಚರಿಸುವ ಪದ್ಧತಿ ಹೀಗಿದೆ.

                ಹಬ್ಬ ಬರುವ ಒಂದು ವಾರದ ಮುಂಚೆ ಮನೆಯಲ್ಲಿರುವ ಪ್ರತಿಯೊಂದು ಬಟ್ಟೆಯನ್ನು ಬಿಡದೇ ತೊಳೆದು ಸ್ವಚ್ಛಗೊಳಿಸುತ್ತಾರೆ. ಮನೆಯ ಗೋಡೆಗಳಿಗೆ ಜೇಡಿ, ಕೆಮ್ಮಣ್ಣು ಹಚ್ಚಿ ಅಂದಗೊಳಿಸುತ್ತಾರೆ. ಹಬ್ಬ ಬರುವ ಮೂರು ದಿವಸ ಮುಂಚಿನಿಂದ ಒಪ್ಪತ್ತು ಪ್ರಾರಂಭವಾಗುತ್ತದೆ. ಅಂದರೆ ದಿವಸಕ್ಕೆ ಒಂದೇ ಊಟ. ಮೂರು ದಿವಸಗಳ ಕಾಲ ಮಧ್ಯಾಹ್ನ ನಾಲ್ಕು ಗಂಟೆಗೆ ಒಂದೇ ಊಟ. ಮಧ್ಯೆ ಏನೂ ತೆಗೆದುಕೊಳ್ಳುವುದಿಲ್ಲ. ಹೆಸರುಕಾಳನ್ನು ಬೆಲ್ಲ ಹಾಕಿ ಸಾಕಷ್ಟು ನೀರು ಹಾಕಿ ಬೇಯಿಸುತ್ತಾರೆ. ಚೆನ್ನಾಗಿ ಬೆಂದ ನಂತರ ಇಳಿಸಿ ಚೆನ್ನಾಗಿ ಆರಿದನಂತರ ಹೆಸರುಕಾಳು ರಸವನ್ನು ಮಕ್ಕಳಿಗೆ ಬೆಳಗ್ಗೆ ರಾತ್ರಿ ಕುಡಿಯಲು ಕೊಡುತ್ತಾರೆ. ಒಪ್ಪತ್ತಿನ ಪ್ರಥಮ ದಿವಸ ಕುಟುಂಬದವರೆಲ್ಲರೂ ಉಪವಾಸವಿದ್ದು ಕುಟುಂಬದ ಪ್ರತಿಯೊಬ್ಬರೂ ಸ್ನಾನ ಮಾಡಿ ಶುಚಿರ್ಭೂತರಾಗುತ್ತಾರೆ. ಕುಟುಂಬದ ಹಿರಿಯ ಮಹಿಳೆ ಒಂದು ಹಿತ್ತಾಳೆ ಹರಿವಾಣವನ್ನು ಚೆನ್ನಾಗಿ ಬೆಳಗಿ ಹರಿವಾಣದಲ್ಲಿ ಕುಡಿಬಾಳೆ ಎಲೆ ಇಟ್ಟು ಎಲೆಯಮೇಲೆ ಎರಡು ಬೊಗಸೆ ಅಕ್ಕಿ ಹಾಕಿಕೊಂಡು ಹೊಸ ಅರಿಶಿನ ಕೊಂಬನ್ನು ಜಜ್ಜಿ ಇದಕ್ಕೆ ಎರಡು ಮೂರು ಅಕ್ಕಿಕಾಳು ಸೇರಿಸಿಕೊಂಡು ನಯವಾಗಿ ಅರೆದು ಅದನ್ನು ವೀಳ್ಯದೆಲೆಯಲ್ಲಿ ಹಾಕಿಕೊಂಡು ಹರಿವಾಣದಲ್ಲಿ ಅರೆದ ಅರಿಶಿನ ಮತ್ತು ಎಲೆ ಅಡಿಕೆ ಇಟ್ಟುಕೊಂಡು ಐದು ಅಥವಾ ಒಂಭತ್ತು ಮನೆಗೆ ದೇವಿಯ ಹೆಸರನ್ನು ಹೇಳುತ್ತಾ “ಗುತ್ಯಮ್ಮ ನಿನ್ನ ಪಾದಕ್ಕೆ ಉಧೋ ಉಧೋ” ಎಂದು ಹೇಳುತ್ತಾ ಬೇಡುತ್ತಾ ಮನೆಯ ಬಾಗಿಲಲ್ಲಿ ನಿಂತಾಗ ಆ ಮನೆಯವರು ಒಂದು ಬೊಗಸೆ ಅಕ್ಕಿ ತಂದು ಹಾಕುತ್ತಾರೆ. ಹೀಗೆ ಐದು ಅಥವಾ ಒಂಭತ್ತು ಮನೆಯನ್ನು ಬೇಡಿ ತಂದ ಹರಿವಾಣವನ್ನು ಮನೆಗೆ ತಂದು ಇಡಕಲು ಕೆಳಗೆ ಇಟ್ಟು ಕುಟುಂಬದವರೆಲ್ಲರೂ ನಿಂತು “ಗುತ್ಯಮ್ಮ ನಿನ್ನ ಪಾದಕ್ಕೆ ಉಧೋ ಉಧೋ” ಎಂದು ಹೇಳಿ ಊಟ ಮಾಡಬೇಕು. ಊಟ ತುಂಬಾ ಸರಳವಾಗಿರಬೇಕು. ಅನ್ನ, ಸೌತೆಕಾಯಿ ತೊವ್ವೆ, ಬೆಳೆದ ಸೌತೆಕಾಯಿ ಅಥವಾ ಹೀರೆಕಾಯಿ ಸಾರು ಮಾಡಿ ಊಟ ಮಾಡಬೇಕು. ಪ್ರತಿ ದಿವಸ ನಾಲ್ಕು ಗಂಟೆಯಾಗುತ್ತದೆ. ನಂತರ ರಾತ್ರಿ ಊಟ ಇಲ್ಲ. ಹೆಸರುಕಾಳು ತನುವು ಕುಡಿದು ಮಲಗಬೇಕು. ಹೀಗೆ ಮೂರು ದಿವಸಗಳ ಕಾಲ ನಡೆಯುತ್ತದೆ. ನಾಲ್ಕನೇ ದಿವಸ ಹಬ್ಬ. ಹಬ್ಬದ ದಿವಸ ಎಲ್ಲರೂ ಬೆಳಗ್ಗೆ ಸ್ನಾನ ಮಾಡಿ ಹರಿವಾಣವನ್ನು ಹೊತ್ತು ಬೆಳಗ್ಗೆ ಹತ್ತು ಗಂಟೆಗೆ ಬೇಡಲು ಹೋಗುತ್ತಾರೆ. ಮೂರು ದಿವಸ ಬೇಡಿದ ಅಕ್ಕಿಯ ಜೊತೆಗೆ ಮನೆಯ ಅಕ್ಕಿಯನ್ನು ಸೇರಿಸಿ ಅನ್ನ ಮಾಡುತ್ತಾರೆ. ಪಾಯಸ, ಚಿತ್ರಾನ್ನ, ಹೊಸಗರೆ ಕಜ್ಜಾಯ, ಹೆಸರುಬೇಳೆ ಕೋಸಂಬರಿ, ಸಾಸಿವೆ, ಚಟ್ನಿ, ತರಕಾರಿ ಸಾರು, ಪಲ್ಲೆ ಮುಂತಾದ ಪದಾರ್ಥಗಳನ್ನು ಮಾಡುತ್ತಾರೆ.

                ಅಮ್ಮನನ್ನು ತರುವ ಸಂಪ್ರದಾಯ ಹೀಗಿದೆ. ಹಿತ್ತಾಳೆ ಗಿಂಡಿಯನ್ನು ಚೆನ್ನಾಗಿ ಬೆಳಗಿ ಶುದ್ಧವಾದ ನೀರು ತುಂಬುತ್ತಾರೆ. ಪಂಚಭೂತಗಳ ಪ್ರತೀಕವಾಗಿ ಐದು ಚಿಕ್ಕ ಕಲ್ಲುಗಳನ್ನು ಸ್ವಚ್ಛವಾಗಿ ತೊಳೆದು ಗಿಂಡಿಗೆ ಹಾಕಿ ಜೀವಕಳೆ ತುಂಬುತ್ತಾರೆ. ಮಾವಿನ ಎಲೆ, ಲಕ್ಕಿ ಕೊನೆ ಗಿಂಡಿಯಲ್ಲಿಟ್ಟು ಅರಿಶಿನ, ಕುಂಕುಮ ಹಚ್ಚಿ ಮಲ್ಲಿಗೆ, ಸಂಪಿಗೆ, ಸುರಗಿ ಹೂವು ಮುಡಿಸಿ ಅಮ್ಮನ ಪಕ್ಕದಲ್ಲಿ ಎಲೆ ಅಡಿಕೆಯಿಟ್ಟು ಇಡಕಲು ಕೆಳಗೆ ಒಂದು ಕಡೆ ಒಂದು ಮಣೆಯಿಟ್ಟು ಮಣೆಯ ಮೇಲೆ ಕುಡಿಬಾಳೆ ಎಲೆಯಿಟ್ಟು ಬಾಳೆಎಲೆಗೆ ಒಂದು ಬೊಗಸೆ ಅಕ್ಕಿಹಾಕಿ ಹರಡಿ ಅಮ್ಮನನ್ನು ಕೂರಿಸುತ್ತಾರೆ. ಅಮ್ಮನಿಗೆ ಒಂದು ಎಡೆ, ಇಡಕಲು ಕೆಳಗೆ ನಾಲ್ಕು ಎಡೆಯಿಟ್ಟು ಅಮ್ಮನಿಗೆ ಜೋಡು ತೆಂಗಿನಕಾಯಿ ಒಡೆದು ಪೂಜೆ ಮಾಡಿ ಕರ್ಪೂರ ಹಚ್ಚಿ ಮಂಗಳಾರತಿ 

ಮಾಡುತ್ತಾರೆ. ಚಿಕ್ಕದಾದ ಬಾಳೆಎಲೆಯನ್ನು ಎಡೆಗಳಲ್ಲಿರುವ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ತೆಗೆದು ಉರಿಯುವ ಬೆಂಕಿಗೆ ಹಾಕುತ್ತಾರೆ. ಈ ಪದ್ಧತಿಗೆ ಅಗ್ನಿಕೂಡುವುದು ಎಂದು ಹೇಳುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ. ಅಮ್ಮನಿಗೆ ಮತ್ತು ಇಡಕಲು ಕೆಳಗೆ ಇಟ್ಟ ಎಡೆಗಳಲ್ಲಿ ಚಿಕ್ಕದಾದ ಬಾಳೆಎಲೆಯಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಇಟ್ಟ ಎಡೆಗಳನ್ನು ಮನೆಯ ಹೊರಗಡೆ ಎತ್ತರವಾದ ಸ್ಥಳದಲ್ಲಿ ಇಟ್ಟು ಬರುತ್ತಾರೆ ಹಕ್ಕಿ-ಪಕ್ಷಿಗಳು ತಿನ್ನಲಿ ಎಂದು. ಅಮ್ಮನನ್ನು ತೆಂಗಿನಮರದ ಬುಡದಲ್ಲಿ ವಿಸರ್ಜಿಸುತ್ತಾರೆ.

ಭೂಮಿಹುಣ್ಣಿಮೆ (ಭೂಮಣ್ಣಿ ಹಬ್ಬ)

                ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳಲ್ಲಿರುವ ದೀವರು ಸಮೂಹ ಈ ಹಬ್ಬವನ್ನು ತುಂಬಾ ವಿಶೇಷವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ.

                ಮಲೆನಾಡಿನ ಮಣ್ಣಿನ ಮಕ್ಕಳಾದ ಇವರಿಗೆ ಭೂಮಿತಾಯಿಯೇ ಸರ್ವಸ್ವ. ಆಕೆಯನ್ನು ನಂಬಿಯೇ ಇವರು ಬದುಕುವುದು. ಆದ್ದರಿಂದ ಆಕೆಗೆ ಈ ಹಬ್ಬದಲ್ಲಿ ವಿಶೇಷ ಪೂಜೆ. ಭಕ್ತಿ, ಗೌರವವನ್ನು ಸಮರ್ಪಿಸುತ್ತಾರೆ.

                ಭೂಮಿಹುಣ್ಣಿಮೆ ಹಬ್ಬವನ್ನು ಬಯಕೆಯ ಹಬ್ಬವೆಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಗರ್ಭಿಣಿಯಾದ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಅವರಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನು ತಿನ್ನಿಸಿ ಇಷ್ಟಪಡುವ ಬಟ್ಟೆಬರೆಗಳನ್ನು ತೊಡಿಸಿ ಕಳುಹಿಸುವುದು ಸಂಪ್ರದಾಯ.

                ತಮಗೆ ಇಷ್ಟವಾದುದೆಲ್ಲ ಭೂಮಿತಾಯಿಗೂ ಇಷ್ಟವೆಂದು ಇವರು ಭಾವಿಸುತ್ತಾರೆ. ಭತ್ತದ ಪೈರು ಹೊಡೆ (ಗರ್ಭ) ಆಗುವ ಕಾಲದಲ್ಲಿ ಈ ಹಬ್ಬವನ್ನು ಆಚರಿಸುವಲ್ಲಿ ರೈತರ ಕಲ್ಪನೆ ಎಷ್ಟು ಉದಾತ್ತವಾದುದು ಎಂದು ತಿಳಿಯುತ್ತದೆ. ಭೂಮಿಯು ಸಹಾ ಅಮೂಲ್ಯ ಸ್ತ್ರೀದೇವತೆ ಎಂಬ ದಾರ್ಶನಿಕ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡಿದೆ. ಮಹಾನವಮಿ ಹಬ್ಬದ ಮೂರು ದಿವಸಗಳ ಮುಂಚೆ ಅಟ್ಟದಿಂದ ಭೂಮಣ್ಣಿ ಬುಟ್ಟಿ, ಹಚ್ಚಂಬಲಿ ಬುಟ್ಟಿಗಳನ್ನು ಕೆಳಗಿಳಿಸಿ ನೀರಿನಿಂದ ಚೆನ್ನಾಗಿ ತೊಳೆದು ಸಗಣಿಯಿಂದ ಸಾರಿಸಿ ಚೆನ್ನಾಗಿ ಒಣಗಿಸಿ ನಂತರ ಕೆಮ್ಮಣ್ಣು ಹಚ್ಚುತ್ತಾರೆ.

                ವಿಜಯದಶಮಿ ಹಬ್ಬದ ದಿವಸ ಬುಟ್ಟಿಗಳನ್ನು ಇಡಕಲು ಕೆಳಗೆ ಇಟ್ಟು ಪೂಜೆ ಮಾಡುತ್ತಾರೆ. ನಂತರ ಚಿತ್ತಾರ ಬರೆಯಲು ಅಕ್ಕಿಯನ್ನು ನೆನಸುತ್ತಾರೆ. ಮೂರನೇ ದಿವಸ ಅಕ್ಕಿಯನ್ನು ನುಣ್ಣಗೆ ಅರೆದು ದೋಸೆಹಿಟ್ಟಿನ ಹದದಲ್ಲಿ ಮಾಡಿಕೊಳ್ಳುತ್ತಾರೆ. ಪುಂಡಿನಾರಿನಿಂದ ಕುಂಚವನ್ನು (ಬ್ರೆಷ್) ತಯಾರಿಸಿಕೊಂಡು ಕುಂಚದ ಒಂದು ಕಡೆ ಭತ್ತದ ಹುಲ್ಲಿನ ದಂಟು (ಕಾಂಡ) ಕೊಳವೆಯನ್ನು ಹಾಕಿ ದಾರವನ್ನು ತುದಿಗೆ ಗಂಟು ಹಾಕುತ್ತಾರೆ. ಬ್ರೆಷ್‍ಗೆ (ಕುಂಚ) ಕೊಳವೆ ಹಾಕುವುದರಿಂದ ಹೆಚ್ಚಾದ ಬಣ್ಣ ಕೊಳವೆಯಲ್ಲಿ ಸಂಗ್ರಹವಾಗಿ ಚಿತ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಕುಂಚದಿಂದ ಭೂಮಣ್ಣಿ ಬುಟ್ಟಿ ಮತ್ತು ಹಚ್ಚಂಬಲಿ ಬುಟ್ಟಿಗಳಿಗೆ ಚಿತ್ತಾರ ಬರೆಯುತ್ತಾರೆ. ಬುಟ್ಟಿಗಳ ಮೇಲೆ ಗೊಣವೆ, ಏಣಿ, ಭತ್ತದ ಸಸಿ, ಅಡಿಕೆಮರ, ಬಾಳೆಮರ, ಭೂಮಣ್ಣಿ ಬುಟ್ಟಿ ಹೊತ್ತ ಮನುಷ್ಯ, ಸೀತೆಮುಡಿ, ಕೌಳಿಮಟ್ಟಿ, ಜೋಗಿಜಡೆ, ಕರಬಾನದ ಗಡಿಗೆ, ಗಾಡಿ, ಎತ್ತು, ಕಾಗೆ, ಆಲದಹಿಡಿ, ನೇಗಿಲು, ನೊಗ, ಕತ್ತಿ (ಕಂದಲಿ), ಬಾಸಿಂಗದ ನಿಲಿ, ಜೋಡೆಳೆ ನಿಲಿ, ಗೊಂಬೆಸಾಲು, ಚೆಂಡುಹೂವಿನ ಸಾಲು, ಬಾಬ್ಲಿ ಪಪ್ಳಿ, ಅರೆಪಪ್ಳಿ, ಕಣ್ಕಪ್ಪಿನ ಹೂವು ಹೀಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧ ಪಟ್ಟ ಚಿತ್ರಗಳು, ಸಸ್ಯಗಳು, ಹೂವುಗಳ ಚಿತ್ರಗಳನ್ನು ತುಂಬಾ ಕಲಾತ್ಮಕವಾಗಿ ಎರಡೂ ಬುಟ್ಟಿಗಳ ಮೇಲೆ ಬರೆಯುತ್ತಾರೆ. ಬುಟ್ಟಿಗಳಿಗೆ ಚಿತ್ತಾರ ಬರೆಯದೆ ಇದ್ದರೆ ಭೂಮಿ ಬಂಜೆಯಾಗುತ್ತಾಳೆ ಎಂಬ ನಂಬಿಕೆ ಇದೆ. ಬುಟ್ಟಿಯ ಮೇಲೆ ಅತ್ಯಂತ ಸುಂದರವಾಗಿ ಚಿತ್ತಾರ ಬರೆದರೆ ಭೂಮಿತಾಯಿ ಬರೀ ಚಿತ್ತಾರ ನೋಡಿಬಿಡುತ್ತಾಳೆ, ಹೊಟ್ಟೆ ತುಂಬಾ ಊಟ ಮಾಡುವುದಿಲ್ಲವೆಂಬ ನಂಬಿಕೆಯಿಂದ ಕೆಲವು ಮಹಿಳೆಯರು ವಕ್ರವಕ್ರವಾಗಿ ಚಿತ್ತಾರ ಬರೆಯುವುದೂ ಉಂಟು.

                ಭೂಮಿ ಹುಣ್ಣಿಮೆ ಹಬ್ಬದ ಹಿಂದಿನ ರಾತ್ರಿ ಮಹಿಳೆಯರಿಗೆ ಹಬ್ಬ ಅಡುವ ಕೆಲಸ. ಎಲ್ಲಾ ಮಹಿಳೆಯರು ರಾತ್ರಿ ಸ್ನಾನ ಮಾಡಿ ಶುಚಿಯಾಗಿ ಮನೆಯ ಯಜಮಾನಿತಿ ಅಡುಗೆ ಮಾಡುವ ಒಲೆಯನ್ನು ಸಗಣಿಯಿಂದ ಸಾರಿಸಿ, ಸ್ವಚ್ಛಗೊಳಿಸುತ್ತಾಳೆ. ‘ಹಚ್ಚಂಬಲಿ’ ಬೇಯಿಸಲು ಪ್ರಾರಂಭಿಸುತ್ತಾಳೆ. ಹಚ್ಚಂಬಲಿಗೆ ಹೀರೆ, ಪಡವಲ, ಸೌತೆ, ಚೌಳಿ, ಬದನೆ, ಬೆಂಡೆ, ತೊಂಡೆ, ಹಾಗಲ, ಅವರೆ ಇತ್ಯಾದಿ ಹೀಗೆ ಎಲ್ಲಾ ತರಹದ ತರಕಾರಿಗಳು, ಹರಿವೆಸೊಪ್ಪು, ಕೆಸವಿನಸೊಪ್ಪು, ಹೊನಗೊನೆ, ಬಸಳೆ, ಪುದೀನ, ಸಬ್ಬಸಿಗೆ, ಪಾಲಕ್ ಮುಂತಾದ ಅನೇಕ ಜಾತಿಯ ತಿನ್ನಲು ಯೋಗ್ಯವಾದ ಸೊಪ್ಪುಗಳು, ಮುಖ್ಯವಾಗಿ ಅಮಟೆಕಾಯಿ, ಹಸಿಮೆಣಸಿನ ಕಾಯಿ, ಅಕ್ಕಿ, ರಾಗಿ, ಜೋಳ, ಗೋಧಿ, ಬೇಳೆ, ಹೆಸರು, ಕಡಲೆ, ಉದ್ದು ಹೀಗೆ ಎಲ್ಲಾ ರೀತಿಯ ಧಾನ್ಯಗಳನ್ನು ಸೇರಿಸಿ ಹಚ್ಚಂಬಲಿ (ಚರಗ) ತಯಾರಿಸುತ್ತಾರೆ. ಆದರೆ ಉಪ್ಪು ಹಾಕುವುದಿಲ್ಲ. ಉಪ್ಪು ಹಾಕಿದರೆ ಭೂಮಿತಾಯಿಗೆ ನಂಜಾಗಿ ಚವಿಯಾಗುತ್ತದೆ ಎಂಬ ನಂಬಿಕೆ. ನಂತರ ಅಡುಗೆ ತಯಾರಿಸಲು ಪ್ರಾರಂಭಿಸುತ್ತಾರೆ. ಸೌತೆಕಾಯಿ ಹಾಕಿ ಸಿಹಿ ಮತ್ತು ಸಪ್ಪೆ ಕಡುಬು, ಅತಿರಸದ ಕಜ್ಜಾಯ, ಕುಚ್ಚುಂಡೆ, ಹೋಳಿಗೆ, ಬುತ್ತಿ ಉಂಡೆ (ಮೊಸರನ್ನ), ಚಿತ್ರಾನ್ನ, ಪಾಯಸ, ಹೊಸಗರೆ ಕಜ್ಜಾಯ, ವಡೆ, ಕೆಸವಿನ ಚೀಪಿನ ಪಲ್ಲೆ, ಸೌತೆಕಾಯಿ ಪಚಡಿ, ಸಾಸಿವೆ, ಚಟ್ನಿ, ಸೌತೆಕಾಯಿ ಮತ್ತು ಹೀರೆಕಾಯಿ ಸಾರು ಮುಂತಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಬೆಳಗಿನ ಜಾವ ಎದ್ದು ಗಂಡಸರು, ಮಕ್ಕಳು ಸ್ನಾನ ಮಾಡುತ್ತಾರೆ. ನಂತರ ಹಚ್ಚಂಬಲಿ ಬುಟ್ಟಿಗೆ ಹಚ್ಚಂಬಲಿ ಹಾಕಿಕೊಂಡು ಗಂಡಸರು ಹಚ್ಚಂಬಲಿ ಬೀರಿ ಬರಲು ಹೊಲಕ್ಕೆ (ಗದ್ದೆಗಳಿಗೆ) ಹೋಗುತ್ತಾರೆ. ಹಚ್ಚಂಬಲಿ ಬುಟ್ಟಿ ಇಡಕಲು ಕೆಳಗೆ ಇಟ್ಟು ಪೂಜೆ ಮಾಡುತ್ತಾರೆ. ಪ್ರತಿ ಗದ್ದೆಗೆ ಅಮಟೆಕಾಯಿ ಬೀಳುವಂತೆ ‘ಹಚ್ಚಂಬಲಿ, ಹರಿವೆಸೊಪ್ಪು, ಹಿತ್ಲಾಗೆ ಇರೋ ದಾರೆ ಹೀರೇಕಾಯಿ ಹೋ ಹೋ ಹೋ’ ಎಂದು ಕೂಗುತ್ತಾ ಹಚ್ಚಂಬಲಿ ಬೀರುತ್ತಾರೆ. ನಂತರ ಮನೆಗೆ ಬರುತ್ತಾರೆ. ಮನೆಯ ಯಜಮಾನತಿ ತಾನು ತಯಾರಿಸಿದ ಅಡುಗೆ ಪದಾರ್ಥಗಳನ್ನು ಭೂಮಣ್ಣಿ ಬುಟ್ಟಿಗೆ ತುಂಬಿ ಇಡಕಲು ಕೆಳಗೆ ಇಡುತ್ತಾಳೆ. ಸುಮಾರು ಎಂಟು-ಒಂಭತ್ತು ಗಂಟೆಗೆ ಮನೆಯ ಯಜಮಾನ ಇಡಕಲು ಕೆಳಗೆ ಇಟ್ಟಿರುವ ಭೂಮಣ್ಣಿ ಬುಟ್ಟಿಯನ್ನು ಪೂಜೆ ಮಾಡಿ, ಕರಿಯ ಕಂಬಳಿ ಕೊಪ್ಪೆಯನ್ನು ಹಾಕಿ ಸೊಂಟಕ್ಕೆ ವಡ್ಯಾಣ ಕಟ್ಟಿ, ವಡ್ಯಾಣಕ್ಕೆ ಕತ್ತಿ ಸಿಕ್ಕಿಸಿಕೊಂಡು ಭೂಮಣ್ಣಿ ಬುಟ್ಟಿಯ ಮೇಲ್ಭಾಗಕ್ಕೆ ಹೊಸ ಪಂಚೆಯನ್ನು ಮುಚ್ಚಿಕೊಂಡು ಬುಟ್ಟಿ ಹೊತ್ತುಕೊಂಡು ನಡೆಯುತ್ತಾನೆ. ಉಳಿದವರು ಕುಡಿವ ನೀರು, ಪೂಜೆ ಸಾಮಾನು, ದೀಪ, ಗೋಮಯ ಹಾಕಲು ಸ್ವಲ್ಪ ಸಗಣಿ ತೆಗೆದುಕೊಂಡು ಹೋಗುತ್ತಾರೆ. ನಿರ್ದಿಷ್ಟವಾದ ಗದ್ದೆಯ ಹತ್ತಿರ ಹೋಗಿ ಬುಟ್ಟಿ ಇಡುವ ಮತ್ತು ಭೂಮಿಪೂಜೆ ಮಾಡುವ ಸ್ಥಳಕ್ಕೆ ಸಗಣಿ ನೀರು (ಗೋಮಯ) ಹಾಕಿ ನಂತರ ಕಂಬಳಿ ಹಾಸಿ ಅದರ ಮೇಲೆ ಬುಟ್ಟಿಯನ್ನು ಇಡುತ್ತಾರೆ. ಗದ್ದೆಯಲ್ಲಿ ಎರಡು ಕಡೆ ಸಸಿ ಇರುವ ಸ್ಥಳದಲ್ಲಿ ಉದ್ದವಾದ ಎರಡು ಲಕ್ಕಿ ಕೋಲನ್ನು ಎರಡೂ ಕಡೆ ನಿಲ್ಲಿಸಿ ಭತ್ತದ ಸಸಿಗಳನ್ನು ಕೋಲಿಗೆ ಸೇರಿಸಿ ಚಿಕ್ಕ ತೋರಣ ಕಟ್ಟುತ್ತಾರೆ. ಎರಡೂ ಸಸಿಗೆ ಬರುವಂತೆ ಬಂಗಾರದ ತಾಳಿಸರವನ್ನು ಕಟ್ಟಿ, ಚಿನ್ನದ ಬೆಂಡೋಲೆಗಳನ್ನು ಎರಡೂ ಕಡೆ ಇಡುತ್ತಾರೆ. ಕಟ್‍ಲಾಡಿ ಬಳೆಯಿಟ್ಟು ಗಂಧ, ಕುಂಕುಮ, ಕಣ್ಕಪ್ಪು ಹಚ್ಚಿ ಹಂಗನೂಲನ್ನು ಇಡುತ್ತಾರೆ. ಸಸಿ ಎಡೆ, ಗುಳಿ ಎಡೆ, ಇಲಿ ಎಡೆ ಎಂಬ ಮೂರು ಎಡೆಯಿಟ್ಟು ತೆಂಗಿನಕಾಯಿ ಒಡೆದು ಪೂಜೆ ಮಾಡಿ ಕರ್ಪೂರದಾರತಿ ಬೆಳಗುತ್ತಾರೆ. ನಂತರ ಗುಳಿ ಎಡೆಯನ್ನು ತೆಗೆದುಕೊಂಡು ಕಾಗೆಯನ್ನು ಹೋ ಹೋ ಹೋ ಎಂದು ಗುಳಿ (ಕಾಗೆ) ಕರೆಯುತ್ತಾರೆ. ಕಾಗೆಗಳಲ್ಲಿ ದೆವ್ವ ಕಾಗೆ ಮತ್ತು ಕುಂಬಾರ ಕಾಗೆ ಎಂದು ಎರಡು ವಿಧಗಳುಂಟು. ಗುಳಿ ಎಡೆಯನ್ನು ದೆವ್ವ (ದೊಡ್ಡ) ಕಾಗೆ ಮುಟ್ಟಬೇಕು. ಎಡೆಯಲ್ಲಿ ಯಾವುದಾದರೂ ಪದಾರ್ಥವನ್ನು ದೆವ್ವ ಕಾಗೆ ಕಚ್ಚಿಕೊಂಡು ಹೋದರೆ ಗುಳಿ ಮುಟ್ಟಿತು, ಸ್ವರ್ಗಸ್ಥ ಕುಟುಂಬದ ಹಿರಿಯರು ಬಂದು ತಿಂದುಹೋದರು ಎಂದು ಭಾವಿಸುತ್ತಾರೆ. ನಂತರ ಇಲಿ ಎಡೆಯನ್ನು ಇಲಿಗಳ ಬಿಲಗಳು ಇರುವ ಜಾಗದಲ್ಲಿ ಇಟ್ಟು ಬರುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ. ಊಟ ಮಾಡಿದ ನಂತರ ಸಸಿ ಎಡೆಯಲ್ಲಿರುವ ಒಂದು ಕಡುಬನ್ನು ತೆಗೆದುಕೊಂಡು ಗದ್ದೆಯಲ್ಲಿರುವ ಸಸಿಗಳ ಬುಡವನ್ನು ಚಚ್ಚೌಕವಾಗಿ ಕಿತ್ತು ಬುಡದಲ್ಲಿ ಕಡುಬು ಇಟ್ಟು ಕಿತ್ತ ಸಸಿಗಳನ್ನು ಅದರ ಮೇಲೆ ಇಡುತ್ತಾರೆ. ನಂತರ ಮನೆಗೆ ಹೋಗುತ್ತಾರೆ. ಮನೆಯಲ್ಲಿ ಎಲ್ಲರೂ ಹಂಗನೂಲನ್ನು ಕಟ್ಟಿಕೊಳ್ಳುತ್ತಾರೆ. ಹಿಂದಿನ ರಾತ್ರಿ ಹಚ್ಚಂಬಲಿ ತಯಾರಿಸಿದ ಪಾತ್ರೆಯನ್ನು ಏಳು ದಿವಸಗಳವರೆಗೆ ತೊಳೆಯುವುದಿಲ್ಲ. ಪಾತ್ರೆ ಬೂರ್ಸಲು ಬರಬೇಕು. ಬಂದರೆ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ ಇದೆ.

                ಭೂಮಣ್ಣಿ ಹಬ್ಬದ ಮರುದಿವಸ ಇಲಾಡಿ ಅಂದರೆ ರಜಾ ಮಾಡುತ್ತಾರೆ. ಈ ದಿನ ಭೂಮಿಯ ಕೆಲಸ ಮಾಡುವುದಿಲ್ಲ.

                ಭತ್ತ ಕೊಯ್ಲು ಮಾಡುವಾಗ ಭೂಮಿಯಲ್ಲಿ ಹುಗಿದ ಕಡುಬನ್ನು ತೆಗೆದು ನೋಡುತ್ತಾರೆ. ಕಡುಬಿನಲ್ಲಿ ಹುಳು ಆಗಿದ್ದರೆ ಬೆಳೆ ಹುಲುಸಾಗಿದೆ ಎಂದು ನಂಬುತ್ತಾರೆ. ಭತ್ತ ಕೊಯ್ಲು ಮಾಡಿ ಗೊಣವೆ ಹಾಕಿದ ನಂತರ ಗೊಣವೆ ಮೇಲೆ ಇಡುವ ಬೆನುಂಡೆ ಬೆನವನಿಗೆ (ಗಣಪತಿ-ಚಚ್ಚೌಕವಾಗಿರುವ ಭತ್ತದ ಕೂಳೆಸಹಿತ ಇರುವ ಮಣ್ಣಿನ ಹೆಂಟೆ) ಭೂತನ ಹಬ್ಬದ ದಿವಸ ಭೂತಗಳಿಗೆ ಕಳ್ಳು ಹೊಯ್ದು ಬೆನವನ ಉಂಡೆಯನ್ನು ಗೊಣವೆ ಮೇಲಿಂದ ಇಳಿಸಿ ಹಂಗನೂಲನ್ನು ಕಟ್ಟಿ ಬೆನಪ್ಪನಿಗೆ ಪೂಜೆ ಮಾಡಿ ಪುನಃ ಗೊಣವೆ ಮೇಲೆ ಇಟ್ಟು ಬರುತ್ತಾರೆ.

ಭೂಮಣ್ಣಿ ಬುಟ್ಟಿ

                ಒಂದು ಅಡಿ ಎತ್ತರ, ನಾಲ್ಕು ಅಡಿ ಸುತ್ತಳತೆ (ವ್ಯಾಸ) ಇರುವ ಬಿದಿರಿನಿಂದ ತಯಾರಿಸಿದ ಸಾಮಾನ್ಯಬುಟ್ಟಿ. ಈ ಬುಟ್ಟಿಗೆ ಸಗಣಿಯಿಂದ ಸಾರಿಸಿ ನಂತರ ಕೆಮ್ಮಣ್ಣು ಹಚ್ಚುತ್ತಾರೆ.

ಹಚ್ಚಂಬಲಿ ಬುಟ್ಟಿ              

                ಎಂಟು ಇಂಚು ಎತ್ತರ, ಎರಡು ಅಡಿ ಎಂಟು ಇಂಚು ಸುತ್ತಳತೆಯ ಬಿದಿರಿನ ಚಿಕ್ಕಬುಟ್ಟಿ. ಈ ಬುಟ್ಟಿಗೂ ಸಗಣಿಯಿಂದ ಸಾರಿಸಿ ಕೆಮ್ಮಣ್ಣು ಹಚ್ಚಿ ಚಿತ್ರ ಬರೆಯುತ್ತಾರೆ. ಎರಡೂ ಬುಟ್ಟಿಗಳಿಗೂ ಒಂದೇ ರೀತಿಯ ಚಿತ್ರಗಳನ್ನು ಬರೆಯುತ್ತಾರೆ.

 

ಭೂಮಣ್ಣಿ ಬುಟ್ಟಿ ಮತ್ತು ಹಚ್ಚಂಬಲಿ ಬುಟ್ಟಿಗಳಲ್ಲಿ ಬರೆಯುವ ಚಿತ್ರಗಳು

1) ಕರಬಾನದ ಗಡಿಗೆ                                       2) ಸೀತೆಮುಡಿ                                    3) ಜೋಗಿ ಜಡೆ

4) ಕೌಳಿಮಟ್ಟಿ                                                   5) ಗೊಣವೆ                                         6) ಏಣಿ

7) ಗದ್ದೆ ಸಸಿ                                                         8) ಅಡಿಕೆಮರ                                    9) ಬಾಳೆಮರ

10) ಭೂಮಣ್ಣಿ ಬುಟ್ಟಿ ಹೊತ್ತ ಮನುಷ್ಯ                11) ಗಾಡಿ                                              12) ಎತ್ತು

13) ಆಲದ ಹಿಡಿ                                                                14) ನೇಗಿಲು                                         15) ನೊಗ

16) ಕತ್ತಿ (ಕಂದಲಿ)                                            17) ಬಾಸಿಂಗದ ನಿಲಿ                        18) ಜೋಡೆಳೆ ನಿಲಿ

19) ಗೊಂಬೆಸಾಲು                                           20) ಚೆಂಡುಹೂವಿನ ಸಾಲು        21) ಪಪ್ಳಿ

22) ಅರೆಪಪ್ಳಿ                                                     23) ಕಣ್ಕಪ್ಪಿನ ಹೂವು                    24) ಬಾಬ್ಲಿ

                ಕೃಷಿಗೆ ಸಂಬಂಧಪಟ್ಟ ಚಿತ್ರಗಳು, ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು, ಭೂಮಿಯಲ್ಲಿ ಬಿಡುವ ಹೂವುಗಳು ಮುಂತಾದ ಚಿತ್ರಗಳನ್ನು ತಮ್ಮದೇ ಶೈಲಿಯಲ್ಲಿ ಕಲಾತ್ಮಕವಾಗಿ ಬರೆಯುತ್ತಾರೆ.

                           

ದೀಪಾವಳಿ

                ದೀಪಾವಳಿ ಇದೊಂದು ಬೆಳಕಿನ ಹಬ್ಬ. ದೀವರಿಗೆ ದೀಪ ಮಹತ್ವದ ಕಲ್ಪನೆ. ಅದು ಸಾರ್ಥಕ ಬದುಕಿನ ಜೀವಂತಿಕೆಯ ಸಂಕೇತವೂ ಹೌದು. ಮಲೆನಾಡಿನ ದೀವರಿಗೆ ದೀಪಾವಳಿ ದೊಡ್ಡಹಬ್ಬ. ಇದನ್ನು ಐದು ದಿವಸಗಳ ಕಾಲ ಅತ್ಯಂತ ವಿಜೃಂಭಣೆ, ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ.

                ಪ್ರಕೃತಿಯ ತಾಮಸ ಕಳೆದು ಹಗುರವಾಗಿ ಹರೆಯ ಚಿಗುರಿರಲು, ನೆಲ ಹೊಲಗಳು ಹಸುರಾಗಿರಲು, ಆನಂದದ ಮಾಯಕಾರ ಕಾರ್ತಿಕ ಮೆಲುಹೆಜ್ಜೆಗಳನ್ನಿಡುತ್ತಾ ನೆಲಕ್ಕಿಳಿಯುವಾಗ ಮೃದು ಕಿಂಕಿಣಿಯ ಲಹರಿಯಂತೆ ಬರುತ್ತದೆ ಈ ಹಬ್ಬ. ದೀಪಾವಳಿ ಬಂದಿತೆಂದರೆ ಇಡೀ ಮಲೆನಾಡೇ ನಲಿಯುತ್ತದೆ. ದೀವರ ಹಳ್ಳಿಗಳಲ್ಲಿ ಇದಕ್ಕಿಂತ ಮಿಗಿಲಾದ ಹಬ್ಬವೇ ಇಲ್ಲ. ಹಾಗಾಗಿ ಇದನ್ನು ದೊಡ್ಡಹಬ್ಬವೆಂದು ಕರೆಯುತ್ತಾರೆ. ಹತ್ತು ಹಣತೆಗಳನ್ನು ಹಚ್ಚಲು ಎಣ್ಣೆ ಇಲ್ಲದವನ ಮನೆಯಲ್ಲಿಯೂ ಇನ್ನಿಲ್ಲದ ಸಂಭ್ರಮ, ಸಡಗರ.

ಬೂರೆ

                ನರಕ ಚತುರ್ದಶೀ (ಬೂರೆ) ಅಮಾವಾಸ್ಯೆ, ಪಾಡ್ಯ, ಮರಿಪಾಡ್ಯ, ವರ್ಷತೊಡಕು ಹೀಗೆ ಐದು ದಿವಸಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ.

                ಹಬ್ಬ ಪ್ರಾರಂಭವಾಗುವ ಹದಿನೈದು ದಿವಸ ಮುಂಚಿನಿಂದಲೇ ಹಬ್ಬದ ತಯಾರಿ ನಡೆಯುತ್ತದೆ. ಮನೆಯಲ್ಲಿರುವ ಹರಕುಚಪ್ಪು ಅರಿವೆಯನ್ನೂ ಬಿಡದೆ ಪ್ರತಿಯೊಂದು ಬಟ್ಟೆಯನ್ನೂ ತೊಳೆಯುತ್ತಾರೆ. ಅಟ್ಟದ ಮೇಲೆ, ಕೆಳಗೆ ಇರುವ ಮಡಕೆ, ಕುಡಿಕೆ, ಪಾತ್ರೆ-ಪಡಗಗಳನ್ನು ತೊಳೆದು ಶುಚಿಗೊಳಿಸುತ್ತಾರೆ.

                ಕುಟುಂಬದಲ್ಲಿರುವ ಪ್ರತಿಯೊಂದು ಚರ-ಸ್ಥಿರ ವಸ್ತುಗಳಲ್ಲಿ ಒಂದನ್ನೂ ಬಿಡದೆ ನೀರು ಹಾಕಿ ಶುಚಿಗೊಳಿಸುತ್ತಾರೆ. ಮನೆಯ ಒಳಗೆ, ಹೊರಗಡೆ ಸ್ವಲ್ಪವೂ ಧೂಳು, ಕರಿ, ಬಲೆ ಇಲ್ಲದಂತೆ ಮೂಲೆ ಮೂಲೆಯಲ್ಲೆಲ್ಲಾ ಕರಿ ಹೊಡೆದು ಸ್ವಚ್ಛಗೊಳಿಸುತ್ತಾರೆ.

                ಯುವಕರು ಗುಡ್ಡೆಯಲ್ಲಿರುವ ಕವಲುಮರದ ಬೇರುಗಳನ್ನು ಅಗೆದು ಕಿತ್ತು ತೆಗೆದು ಬೇರನ್ನು ಜಜ್ಜಿ ತೊಗಟೆಯ ಒಳಗಿರುವ ದಾರವನ್ನು ತೆಗೆದು ಹುರಿ ಹೊಸೆಯುತ್ತಾರೆ. ಸಾಕಷ್ಟು ಉದ್ದ ದಾರ ಹೊಸೆದ ನಂತರ ಆ ದಾರದ ಹಗ್ಗದಿಂದ ದನಕರುಗಳಿಗೆ ಬೇಕಾಗುವ ದಂಡೆ, ಕಣ್ಣಿ, ಮಕಂಡಗಳನ್ನು ಹೊಸೆದು ತಯಾರಿಸುತ್ತಾರೆ.

                ದೀಪಾವಳಿಯ ಪ್ರಥಮ ದಿವಸ ನರಕ ಚತುರ್ದಶಿ. ಇದಕ್ಕೆ ದೀವರು ಬೂರೆಹಬ್ಬವೆನ್ನುತ್ತಾರೆ. ಇದು ಬಲೀಂದ್ರನ ಆರಾಧನೆಯ ಹಬ್ಬ. ಈ ದಿವಸ ವಾಮನನಿಂದ ತುಳಿಯಲ್ಪಟ್ಟು ಪಾತಾಳಕ್ಕಿಳಿದ ಬಲಿ ಚಕ್ರವರ್ತಿ ಮತ್ರ್ಯಲೋಕಕ್ಕೆ ಎದ್ದುಬರುತ್ತಾನೆ ಎಂಬ ನಂಬಿಕೆ. ಈ ದಿವಸ ದೀವರ ಮಹಿಳೆಯರು ಬಲಿಂದ್ರನನ್ನು ತರುತ್ತಾರೆ. ಐದು ದಿವಸಗಳ ಕಾಲ ಬಲಿ ಚಕ್ರವರ್ತಿ ಮಾನವರನ್ನು ಕಾಪಾಡಲು ಮತ್ರ್ಯಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ. ಹಬ್ಬ ಹಾಡುವ ಕಲಾವಿದರು “ಬಲ್ಲೇಳು ಬಲೀಂದ್ರನೆ ಮತ್ರ್ಯಕೆ ಎಲ್ಲೋರ ಸಲಗಂತವನೆ” ಎಂದು ಹಾಡುತ್ತಾ, ಬಲೀಂದ್ರನನ್ನು ಸ್ವಾಗತಿಸುತ್ತಾರೆ. ಬಲೀಂದ್ರ ಪಾತಾಳ ಲೋಕದಿಂದ ಮತ್ರ್ಯಲೋಕಕ್ಕೆ ಬರುವಾಗ ಭೂಲೋಕದಲ್ಲಿ ಜಡ್ಡು ಜಬರೆಲ್ಲಾ ಚಿಗುರೊಡೆಯುತ್ತವೆ, ಗೊಡ್ಡು ದನಗಳೆಲ್ಲಾ ಗರ್ಭ ಧರಿಸಿ ಹಾಲು ಕೊಡುತ್ತವೆ ಎಂಬ ನಂಬಿಕೆ.

                ಬೂರೆ ಹಿಂದಿನ ದಿವಸ ಬೂರೆಗಳ್ಳತನ (ಬೂರೆಗಳ ಹಾಯುವುದು ಎನ್ನುತ್ತಾರೆ) ಮಾಡುವ ಸಂಪ್ರದಾಯವಿದೆ. ಗ್ರಾಮದ ಯುವಕರು ಬೂರೆಗಳ ಹಾಯುತ್ತಾರೆ. ಆ ರಾತ್ರಿ ಕದ್ದರೆ ಕಳ್ಳತನ ಮಾಡಿದವರನ್ನು ಬೈಯ್ಯುವ ಹಾಗಿಲ್ಲ. ಯಾರೂ ಬೈಯ್ಯುವುದಿಲ್ಲ. ಕತ್ತಲೆಯಲ್ಲಿ ಗೊತ್ತಾಗದಂತೆ ಮನೆಯ ಹಿತ್ತಲಲ್ಲಿರುವ ಸೌತೆಕಾಯಿ, ಹೀರೆಕಾಯಿ, ಚಿನ್ನಿಕಾಯಿ ಮುಂತಾದ ತರಕಾರಿಗಳನ್ನು ಕಳ್ಳತನ ಮಾಡುತ್ತಾರೆ. ತೆಂಗಿನಮರದಲ್ಲಿರುವ ಎಳೆನೀರುಗಳನ್ನು ಮರದಿಂದ ಇಳಿಸಿ ಕುಡಿಯುವುದು, ಬೆಳೆದ ತೆಂಗಿನಕಾಯಿಗಳನ್ನು ಇಳಿಸಿ ತೆಗೆದುಕೊಂಡು ಹೋಗುವುದು, ಮನೆಯ ಸುತ್ತಮುತ್ತಲಿರುವ ದಿನಬಳಕೆಯ ವಸ್ತುಗಳನ್ನು ಸ್ಥಳಾಂತರಿಸುವುದು ಮುಂತಾದ ಚೇಷ್ಟೆಗಳನ್ನು ಮಾಡುತ್ತಾರೆ. ಅದಕ್ಕಾಗಿ ರಾತ್ರಿಯೆಲ್ಲಾ ಎಚ್ಚರವಾಗಿರುತ್ತಾರೆ. ಗಂಡಸರು ಹಗ್ಗ, ಕಣ್ಣಿ, ಮಕಂಡ, ದಂಡೆ ಮುಂತಾದವುಗಳನ್ನು ಹೊಸೆಯುತ್ತಾ ತುಂಬಾ ಹೊತ್ತು ಎಚ್ಚರವಾಗಿರುತ್ತಾರೆ.

                ಹೊಸದಾಗಿ ಮದುವೆಯಾದ ಕುಟುಂಬಗಳಲ್ಲಿ ಸೊಸೆಯಂದಿರು ಬೂರೆ ಹಬ್ಬದ ದಿವಸ ಗಂಡನಮನೆಗೆ ಬರಲೇಬೇಕು. ಗಂಡನ ಮನೆಗೆ ಬಂದ ಸೊಸೆಯಿಂದ ಪಾಡ್ಯದ ಪೂಜೆ, ಚಪ್ಪೆರೊಟ್ಟಿ ಸುಡಲು ಬೇಕಾಗುವ ಅಕ್ಕಿಹಿಟ್ಟಿಗೆ ಎರಡು ಗಿದ್ನ (ಆರು ಸೇರು) ಭತ್ತ ಕುಟ್ಟಿ ಅಕ್ಕಿ ಮಾಡಿ ಇಟ್ಟುಕೊಳ್ಳಬೇಕು. ಈ ಕೆಲಸವನ್ನು ಮಾಡಲು ಸೊಸೆಯು ಸ್ನಾನ ಮಾಡಿ ಮಡಿಯಾಗಿ ಮಾಡಬೇಕಾಗುತ್ತದೆ.

                ಹೊಸದಾಗಿ ಮದುವೆಯಾದ ಗಂಡು ಹೆಣ್ಣುಗಳು ಹಿಂದಿನ ಕಾಲದಲ್ಲಿ ಬೂರೆ ಹಬ್ಬದವರೆಗೆ ಸೇರುವಹಾಗಿರಲಿಲ್ಲ. ದೀವರಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಗಂಡುಗಳಿಗೆ ಪ್ರತ್ಯೇಕವಾಗಿ ಪ್ರಸ್ಥ ಕಾರ್ಯ ಎಂಬುದು ಇರಲಿಲ್ಲ. ಬೂರೆ ಹಬ್ಬದವರೆಗೆ ಕಾಯಬೇಕಾಗಿತ್ತು. ಬೂರೆಹಬ್ಬದ ದಿವಸ ಗಂಡು-ಹೆಣ್ಣುಗಳು ಕೂಡಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ಮಾಯವಾಗಿದೆ.

                ಬಲೀಂದ್ರನಿಗೆ ನೈವೇದ್ಯ ಮಾಡಲು ಸಿಹಿ ಚಿನ್ನಿಕಾಯಿ ಕಡುಬು ಆಗಲೇಬೇಕು. ಕಡುಬು ತಯಾರಿಸಲು ಬೇಕಾದ ಚಿನ್ನಿಕಾಯಿ ತುರಿದು ಹಿಟ್ಟಿಗೆ ಹಾಕಿ ಬೆಲ್ಲ ಸೇರಿಸಿ ಹಿಟ್ಟು ಹದ ಮಾಡಿಕೊಳ್ಳುತ್ತಾರೆ ಮತ್ತು ಬಾಳೆ ಎಲೆಯನ್ನು ಬಾಡಿಸಿ ಕೊಟ್ಟೆಗಳನ್ನು ಕಟ್ಟಿ ತಯಾರು ಮಾಡಿಕೊಳ್ಳುತ್ತಾರೆ.

                ಬೂರೆ ದಿವಸ ಗಂಡಸರು ಮತ್ತು ಹೆಂಗಸರು ನಸುಕಿನಲ್ಲಿ ಎದ್ದು ಸ್ನಾನ ಮಾಡಿ ಮಡಿಯಾಗುತ್ತಾರೆ. ಮಹಿಳೆಯರು ಗಂಧ, ಅರಿಶಿನ, ಕುಂಕುಮ, ಕಣ್ಕಪ್ಪು, ಹಿಂಗಾರ, ಪಚ್ಚೆತೆನೆ, ಅಂಬಾಡಿ ಎಲೆ ಮತ್ತು ಹೊಸದಾಗಿ ತಂದೆ ಬೂರೆಮಗೆಯನ್ನು ತೆಗೆದುಕೊಂಡು ಬಾವಿಗೆ ಹೋಗುತ್ತಾರೆ. ಮುಂಚೆ ಬಾವಿ ಪೂಜೆ ಮಾಡಿ ನಂತರ ಬಾವಿಯಿಂದ ನೀರು ಎತ್ತಿ ಮಗೆಗೆ ನೀರು ತುಂಬಿಸಿ ಜೀವಕಳೆಯನ್ನು ತುಂಬಲು ಪಂಚಭೂತಗಳ ಪ್ರತೀಕವಾಗಿ ಐದು ಚಿಕ್ಕ ಕಲ್ಲುಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ನೀರು ತುಂಬಿದ ಮಗೆಗೆ ಹಾಕುತ್ತಾರೆ. ನಂತರ ಮಗೆಯಿಂದ ಐದು ಹನಿ ನೀರನ್ನು ಬಾವಿಗೆ ಬಿಡುತ್ತಾರೆ. ಮಗೆಗೆ ಗಂಧ, ಅರಿಶಿನ, ಕುಂಕುಮ, ಕಣ್ಕಪ್ಪು ಇಟ್ಟು ಮಗೆಯ ಬಾಯಿಗೆ ಹಿಂಗಾರ, ಮಾವಿನ ಎಲೆ, ಪಚ್ಚೆತೆನೆ, ಅಂಬಾಡಿ ಎಲೆ, ಹಸಿ ಅಡಿಕೆ ಗೊಂಚಲು ಈ ಎಲ್ಲಾ ವಸ್ತುಗಳನ್ನು ಇಟ್ಟು ನಂತರ ಊದುಬತ್ತಿ ಬೆಳಗಿ ಪೂಜೆ ಮಾಡುತ್ತಾರೆ. ನಂತರ ಒಳಗಡೆ ತಂದು ಇಡಕಲು ಕೆಳಗೆ ಇರಿಕೆ ಇಟ್ಟು ಇರಿಕೆಯ ಮೇಲೆ ಕುಡಿಬಾಳೆ ಎಲೆ ಹಾಸಿ ಅದರ ಮೇಲೆ ಹಿಂದಿನ ರಾತ್ರಿ ಭತ್ತ ಕುಟ್ಟಿ ತಯಾರಿಸಿದ ಅಕ್ಕಿಯನ್ನು ಒಂದು ಹಿಡಿ ಹಾಕಿ ಬಲೀಂದ್ರನನ್ನು ಕೂರಿಸುತ್ತಾರೆ. ಆ ಕುಟುಂಬದಲ್ಲಿ ಹೊಸದಾಗಿ ಮದುವೆಯಾದ ಸೊಸೆಯಂದಿರು ಇದ್ದರೆ ಅವರಿಂದ ಬಲೀಂದ್ರನನ್ನು ಇಡುವ ಕ್ರಿಯೆಗಳನ್ನು ಮಾಡಿಸುತ್ತಾರೆ. ಮಹಿಳೆಯರು ಬೆಳಗ್ಗೆ ಮುಂಚೆ ಎದ್ದಕೂಡಲೇ ಕಡುಬಿನ ಕೊಟ್ಟೆಗೆ ಹದಮಾಡಿದ ಹಿಟ್ಟನ್ನು ತುಂಬಿ ಕೊಟ್ಟೆಯ ಮತ್ತೊಂದು ತುದಿಯನ್ನು ಕಟ್ಟಿ ಪಾತ್ರೆಯಲ್ಲಿ ಹಾಕಿ ಬೇಯಿಸಲು ಇಡುತ್ತಾರೆ. ನಂತರ ಮಹಿಳೆಯರು ಇಡಕಲು ಬಾಗಿಲು ಮೆಟ್ಟಿಲು, ಕೊಟ್ಟಿಗೆ ಬಾಗಿಲು ಮೆಟ್ಟಿಲುಗಳಿಗೆ ಬೂರೆಬಟ್ಟು ಇಡುತ್ತಾರೆ.

                ಗಂಡಸರು ನಸುಕಿನಲ್ಲಿಯೇ ಎದ್ದು ಬೂರೆ ಮದ್ದು ತರಲು ಹೋಗುತ್ತಾರೆ. ಬೂರೆ ಮದ್ದು ಎಂದರೆ ಗಂಧದ ಮರಕ್ಕೆ ಹಬ್ಬಿರುವ ಅಮೃತಬಳ್ಳಿ (ಅಂತರಬಳ್ಳಿ), ಬಗಿನೆ ಸೊಪ್ಪು, ನೆಲ್ಲಿಕಾಯಿ, ಗುಡ್ಡೆಗೇರು ಮುಂತಾದ ಸಸ್ಯಗಳ ಬಳ್ಳಿ, ಕಾಯಿ, ಎಲೆಗಳನ್ನು ಸೇರಿಸಿ ಸಿಂಬೆ ಮಾಡಿ ತರುತ್ತಾರೆ. ಸಿಂಬೆಯನ್ನು ಮನೆಯ ಮುಂದಿನ ಬಾಗಿಲ ಸೂರಿಗೆ ಸಿಕ್ಕಿಸುತ್ತಾರೆ. ಬೂರೆಮದ್ದು ಬಾಗಿಲಲ್ಲಿ ಇದ್ದರೆ ಭೂತ, ಪ್ರೇತ, ಪಿಶಾಚಿಗಳು ಮನೆಯ ಒಳಗೆ ನೇರವಾಗಿ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ. ಕಳೆದ ವರ್ಷದ ಬೂರೆಮದ್ದನ್ನು ತೆಗೆದು ಅಡುಗೆ ಮಾಡುವ ಒಲೆಗೆ ಹಾಕಿ ಸುಡುತ್ತಾರೆ. ಬೂದಿಯನ್ನು ತೆಗೆದು ಬೂದಿಗೆ ನೀರು ಸೇರಿಸಿ ಬೂರೆಬಟ್ಟು ಇಡಲು ಬಳಸುತ್ತಾರೆ.

                ಗಂಡಸರು ಕೊಟ್ಟಿಗೆಯಲ್ಲಿರುವ ತಗ್ಗು ದಿಣ್ಣೆ ಹೊಂಡಗಳಿಗೆ ಮಣ್ಣು ಹಾಕಿ ಸಮಮಟ್ಟ ಮಾಡುತ್ತಾರೆ. ಈ ಕ್ರಮಕ್ಕೆ ಬೂರೆ ಮಣ್ಣು ಹಾಕುವುದು ಎನ್ನುತ್ತಾರೆ ಮತ್ತು ಬೂರೆಕಣ್ಣಿಗಳನ್ನು ಉಡಿದು ಸಿಂಬೆ ಮಾಡಿ ಬೂರೆಮಗೆಯ ಕೊರಳಿಗೆ ಹಾಕುತ್ತಾರೆ. ಹಾಗೆಯೇ ಕವಲುದಾರದಿಂದ ದನಕರುಗಳಿಗೆ ದಂಡೆ, ದಾಬು, ಕಣ್ಣಿ, ಮಕಂಡಗಳನ್ನು ಉಡಿದು ತಯಾರಿಸುತ್ತಾರೆ.

                ಮಹಿಳೆಯರು ಉಪವಾಸವಿದ್ದು ಚಿನ್ನಿಕಾಯಿ ಕಡುಬು, ಅನ್ನ, ಸಾರು, ಪಲ್ಲೆ, ಪಾಯಸ, ಚಿತ್ರಾನ್ನ, ಕೋಸಂಬರಿ, ಸಾಸಿವೆ, ಚಟ್ನಿ ಮುಂತಾದ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ಬಲೀಂದ್ರ ಮತ್ತು ಹರಿ ಇಡಕಲು ಕೆಳಗೆ ನಾಲ್ಕು ಎಡೆ, ಬಲೀಂದ್ರನಿಗೆ ಪ್ರತ್ಯೇಕವಾದ ಎಡೆ. ಎಡೆಗೆ ಸಿಹಿ ಕಡುಬು. ಆ ದಿನ ತಯಾರಿಸಿದ ಪದಾರ್ಥಗಳಿಗೆ ಸ್ವಲ್ಪಭಾಗ ತೆಗೆದು ಹಾಕುತ್ತಾರೆ. ನಂತರ ಊದುಬತ್ತಿ ಹಚ್ಚಿ ಪೂಜೆ ಮಾಡಿ ತೆಂಗಿನಕಾಯಿ ಒಡೆಯುತ್ತಾರೆ. ನಂತರ ತುಳಸಿಗೆ ಅಂದಿನ ಅಡುಗೆಯ ಎಡೆ ಮಾಡಿ ದೀಪ ಹಚ್ಚಿ ಪೂಜೆ ಮಾಡಿ ತೆಂಗಿನಕಾಯಿ ಒಡೆಯುತ್ತಾರೆ. ನಂತರ ಅಗ್ನಿಗೂಡಿಸಿ ಎಲ್ಲರೂ ಸೇರಿ ಊಟ ಮಾಡುತ್ತಾರೆ.

ಅಮಾವಾಸ್ಯೆ

                ದೀಪಾವಳಿಯ ಎರಡನೇ ದಿವಸ ಅಮಾವಾಸ್ಯೆ. ಈ ದಿನ ಬೆಳಗ್ಗೆ ಗಂಡಸರು ತಮ್ಮಲ್ಲಿರುವ ದನಕರುಗಳನ್ನು ಊರಿನಲ್ಲಿರುವ ಹೊಳೆ, ಹಳ್ಳ ಅಥವಾ ಕೆರೆಗಳಿಗೆ ಹೊಡೆದುಕೊಂಡು ಹೋಗಿ ಮೈ ತೊಳೆಯುತ್ತಾರೆ. ಗಾಡಿ, ಎತ್ತು ಇರುವವರು ಎತ್ತುಗಳ ಕೋಡುಗಳನ್ನು ಹರಿತವಾದ ಕತ್ತಿಯಿಂದ ಹೆರೆದು ಉಪ್ಪುಕಾಗದದಿಂದ ನಯಗೊಳಿಸುತ್ತಾರೆ ಮತ್ತು ಕೋಡುಗಳ ತುದಿಗೆ ಚಿಕ್ಕದಾಗಿ ತೂತು ಮಾಡಿ ಹಿತ್ತಾಳೆ ಕೋಡುಗೆಣಸು ಹಾಕುತ್ತಾರೆ.

                ಮಹಿಳೆಯರು ಸ್ನಾನ ಮಾಡಿ ಮಡಿಯಾಗಿ ಸರಳವಾಗಿ ಅನ್ನ, ಸಾರು, ಪಾಯಸ, ಸಾಸಿವೆ, ಚಟ್ನಿ ಮುಂತಾದ ಅಡುಗೆ ತಯಾರಿಸಿ ಇಡಕಲು ಕೆಳಗೆ ಮತ್ತು ಬಲೀಂದ್ರನಿಗೆ ಎಡೆ ಮಾಡಿ ಪೂಜೆ ಮಾಡಿ ಅಗ್ನಿಗೂಡಿ ಎಲ್ಲರೂ ಸೇರಿ ಊಟ ಮಾಡುತ್ತಾರೆ.                 ಮಧ್ಯಾಹ್ನ ಗಂಡಸರು ಪಾಡ್ಯದ ಪೂಜೆಗೆ ಬೇಕಾದ ಮಾವಿನಸೊಪ್ಪು, ಬಚ್ಚಲುಬಳ್ಳಿ, ಹಣ್ಣಡಿಕೆ, ಪಚ್ಚೆತೆನೆ, ಅಂಬಾಡಿ ಎಲೆ, ಹಿಂಗಾರ, ತುಳಸಿ ಮುಂತಾದ ವಸ್ತುಗಳನ್ನು ಜೋಡಿಸಿಕೊಳ್ಳುತ್ತಾರೆ. ಮಹಿಳೆಯರು ಪಾಡ್ಯದ ಕಾಲ್ಪೂಜೆಗೆ ಮತ್ತು ಪ್ರಸಾದ ಕಟ್ಟಲು ಬೇಕಾದ ಬೂರೆ, ಹಿಂದಿನ ದಿವಸ ಭತ್ತ ಕುಟ್ಟಿ ಮಾಡಿಕೊಂಡ ಅಕ್ಕಿಯನ್ನು ಬೀಸಿ ಹಿಟ್ಟು ಮಾಡಿಕೊಳ್ಳುತ್ತಾರೆ. ಕೊಟ್ಟೆ ಕಡುಬು ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ.

                ಇತ್ತೀಚಿನ ದಿನಗಳಲ್ಲಿ ದೀವರಲ್ಲಿ ವಿದ್ಯಾವಂತರಾದವರು ಅಮಾವಾಸ್ಯೆ ದಿವಸ ಪಿತೃಗಳಿಗೆ ಅನ್ನ ಹಾಕಿ ಪೂಜೆ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

                ಪಾಡ್ಯದ ದಿವಸ ಎತ್ತುಗಳಿಗೆ ಬಾಸಿಂಗ ಸೂಡುವವರು ಬೇರೆ ಬೇರೆ ಕಡೆಯಿಂದ ಚೆಂಡುಹೂವುಗಳನ್ನು ತಂದು ಬಾಸಿಂಗಕ್ಕೆ ಚೆಂಡು ಹೂವು ಜೋಡಿಸಿ ಹೂವಿನಸರ, ಹಣ್ಣಡಿಕೆ ಸರಗಳನ್ನು ದಬ್ಬಣದಿಂದ ಸುರಿದು ಸರಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಗಾಡಿ, ನೇಗಿಲು, ನೊಗ, ಕುಂಟೆ, ಕೊರಡು ಮುಂತಾದ ವ್ಯವಸಾಯೋಪಕರಣಗಳು ಮತ್ತು ಕತ್ತಿ, ಕೊಡಲಿ, ಹಾರೆ, ಗುದ್ದಲಿ, ಪಿಕಾಶಿ ಮುಂತಾದ ಸಮಸ್ತ ಆಯುಧಗಳನ್ನು ತೊಳೆದು ಪಾಡ್ಯದ ಪೂಜೆಗೆ ಅಣಿ ಮಾಡಿಕೊಳ್ಳುತ್ತಾರೆ.

                ಸಂಜೆ ದನಕರುಗಳು (ಜಾನುವಾರು) ಮೇವು ಪೂರೈಸಿ ಮನೆಗೆ ಬಂದಾಗ ಬೂರೆ ನೀರಿನಿಂದ ಓಕುಳಿ ಮಾಡಿ, ಜಾನುವಾರುಗಳ ಮೇಲೆ ಓಕುಳಿ ನೀರು ಚಿಮುಕಿಸುತ್ತಾರೆ.

                ಹೊಸದಾಗಿ ಮದುವೆಯಾಗಿ ಬಂದಿರುವ ಸೊಸೆಯಂದಿರು ರಾತ್ರಿ ಸ್ನಾನ ಮಾಡಿ ಮಡಿಯಾಗಿ, ಚಪ್ಪೆ ರೊಟ್ಟಿ (ತೂರೆ ರೊಟ್ಟಿ) ಸುಡುತ್ತಾರೆ. ಸೊಸೆಯರು ಇಲ್ಲದಿದ್ದಲ್ಲಿ ಮಹಿಳೆಯರೇ ಸ್ನಾನ ಮಾಡಿ ಮಡಿಯಾಗಿ ಆ ಕೆಲಸ ಮಾಡುತ್ತಾರೆ. ಚಪ್ಪೆ ರೊಟ್ಟಿ ಪಾಡ್ಯದ ದಿವಸ ಪ್ರಸಾದ ಕಟ್ಟಲು ಮತ್ತು ಕಾಲ್ಪೂಜೆಗೆ ಬೇಕೇ ಬೇಕಾಗುತ್ತದೆ. ಹಾಗಾಗಿ ಸಾಕಷ್ಟು ಚಪ್ಪೆರೊಟ್ಟಿಗಳನ್ನು ಸುಡುತ್ತಾರೆ. ಮರುದಿವಸ ಕಾಲ್ಪೂಜೆಗೆ ಕೊಟ್ಟೆ ಕಡುಬು ಮಾಡಲು ಬಾಳೆ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ಕೊಟ್ಟೆ ಕಟ್ಟಿಕೊಳ್ಳುತ್ತಾರೆ. ಕಡುಬಿಗೆ ಹಿಟ್ಟು ಹದ ಮಾಡಿಕೊಳ್ಳುತ್ತಾರೆ. ಕಾಲ್ಪೂಜೆಗೆ ಬೇಕಾದ ಹಸಿಕಡಲೆ, ಹೆಸರುಕಾಳು ನೆನೆಸಿಟ್ಟುಕೊಳ್ಳುತ್ತಾರೆ.

ಬಲಿಪಾಡ್ಯಮಿ

                ಬಲಿಪಾಡ್ಯಮಿ ದೀಪಾವಳಿಯ ಮೂರನೇ ದಿವಸ. ದೀವರಿಗೆ ಬಹಳ ಮುಖ್ಯವಾದ ಹಬ್ಬ. ವರ್ಷವೆಲ್ಲಾ ತಮ್ಮ ಜೊತೆಗೆ ಹಗಲಿರುಳು ಶ್ರಮ ವಹಿಸಿ ದುಡಿದು ತಮ್ಮ ಕುಟುಂಬದ ಆರ್ಥಿಕಾಭಿವೃದ್ಧಿಗೆ ಕಾರಣವಾದ ಜಾನುವಾರುಗಳಿಗೆ (ಎತ್ತು, ಹೋರಿ, ಆಕಳು, ಕರು, ಎಮ್ಮೆ, ಕೋಣ ಇತ್ಯಾದಿ) ಸಿಂಗರಿಸಿ ಗೋವಿಗೆ ಕಾಲ್ಪೂಜೆ ಮಾಡಿ ಸಂಭ್ರಮಿಸುವ ದಿವಸ. ಅವರ ಜೀವನದ ರಕ್ಷಕರಾಗಿ ಸದಾಕಾಲ ಬೆಂಗಾವಲಿಗರಾಗಿ ತಮ್ಮ ಸಂಕಷ್ಟಗಳನ್ನು ದೂರ ಮಾಡುವ ತಲೆ ತಲಾಂತರದಿಂದ ನಂಬಿಕೊಂಡು ಬಂದಿರುವ ಗ್ರಾಮದೇವತೆಗಳಾದ ದುರ್ಗಮ್ಮ, ಮಾರ್ಯಮ್ಮ, ಭೂತಪ್ಪ, ಯಕ್ಷಮ್ಮ, ಚೌಡಮ್ಮ ಮತ್ತು ಗ್ರಾಮದ ಗುಡಿಗಳಲ್ಲಿರುವ ದೇವರುಗಳಿಗೆ ಹಣ್ಣು ಕಾಯಿ ಒಡೆದು ಪೂಜಿಸುವ ಏಕೈಕ ದಿವಸ. ಕಾರಣ ಕೆಲವು ದೇವರುಗಳಿಗೆ ಈ ಹಬ್ಬದಲ್ಲಿ ಹಣ್ಣು ಕಾಯಿ ಮಾಡಿದರೆ ಇನ್ನು ಮುಂದಿನ ವರ್ಷವೇ ಮಾಡುವುದು. ಹಾಗಾಗಿ ಗ್ರಾಮದ ಎಲ್ಲಾ ಗ್ರಾಮದೇವತೆಗಳಿಗೂ ಭಯ, ಭಕ್ತಿಯಿಂದ ಪೂಜಿಸಿ ಹಣ್ಣುಕಾಯಿ ಮಾಡಿ ಕೈ ಮುಗಿಯುತ್ತಾರೆ ಮತ್ತು ಇವರು ನಂಬಿರುವ ಗ್ರಾಮದೇವತೆಗಳು ಪರವೂರಿನಲ್ಲಿದ್ದರೂ ಅಲ್ಲಿಗೆ ಹೋಗಿ ಹಣ್ಣುಕಾಯಿ ಒಡೆಸಿ ಪೂಜೆ ಮಾಡಿಸಿಕೊಂಡುಬರುತ್ತಾರೆ.

                ಪಾಡ್ಯದ ದಿವಸ ಬೆಳಗಿನ ಜಾವ ಹೆಂಗಸರು, ಗಂಡಸರು ಸ್ನಾನ ಮಾಡಿ ಮಡಿಯಾಗುತ್ತಾರೆ. ಮಹಿಳೆಯರು ಹದಗೊಳಿಸಿದ ಕಡುಬಿನ ಹಿಟ್ಟನ್ನು ಕೊಟ್ಟೆಯೊಳಗೆ ತುಂಬಿ ತುದಿಯನ್ನು ಕಟ್ಟಿ ಪಾತ್ರೆಯೊಳಗೆ ಬೇಯಿಸಲು ಇಡುತ್ತಾರೆ ಮತ್ತು ಪ್ರಸಾದ ಕಟ್ಟುವ ಸ್ಥಳವನ್ನು ಸಗಣಿಯಿಂದ ಸಾರಿಸುತ್ತಾರೆ. ನಂತರ ಗಂಡಸರು ಚಾಪೆ ಹಾಸಿಕೊಂಡು ಭೂಮಣ್ಣಿ ಬುಟ್ಟಿ, ಮಾವಿನ ಸೊಪ್ಪು, ಅಂಬಾಡಿ ಎಲೆ, ಹಸಿ ಅಡಿಕೆ ಕೊನೆ, ಹಿಂಗಾರ, ಪಚ್ಚೆತೆನೆ, ತುಳಸಿ ಕುಡಿ, ಬಚ್ಚಲುಬಳ್ಳಿ ಮುಂತಾದ ಸಲಕರಣೆಗಳನ್ನು ಹತ್ತಿರ ಇಟ್ಟುಕೊಂಡು ಪ್ರಸಾದ ಕಟ್ಟುವ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಮಾವಿನ ಸೊಪ್ಪಿನ ಗೊನೆ, (ಬಲಿತ) ಹಿಂಗಾರ, ಪಚ್ಚೆತೆನೆ, ಅಂಬಾಡಿ ಎಲೆ, ಹಸಿ ಅಡಿಕೆ ಚಿಪ್ಪು, ತುಳಸಿ ಕುಡಿ ಸೇರಿಸಿ ಗುಚ್ಚು ಮಾಡಿ ಮಧ್ಯೆ ಸಪ್ಪೆ ರೊಟ್ಟಿ ಸೇರಿಸಿ ಬಚ್ಚಲುಬಳ್ಳಿಯಿಂದ ಕಟ್ಟುತ್ತಾರೆ. ಪ್ರತಿ ಸರಕ್ಕೆ ಮೂರು ಅಥವಾ ನಾಲ್ಕು ಗುಚ್ಚು ಸೇರಿಸಿ ಕಟ್ಟಿ ಸರ (ಹಾರ) ಮಾಡುತ್ತಾರೆ. ಅವರ ಕುಟುಂಬದಲ್ಲಿ ಜಾನುವಾರುಗಳ ಸಂಖ್ಯೆಗಳಿಗೊಂದರಂತೆ ಹಾಗೂ ಮನೆಯ ಕೋಳು, ಮನೆ ಮತ್ತು ಕೊಟ್ಟಿಗೆಮನೆ ಬಾಗಿಲು, ತೆಂಗಿನಮರ, ಗಾಡಿ, ಪಂಪು ಮುಂತಾದ ಪೂಜಿಸಲ್ಪಡುವ ಮುಖ್ಯವಾದ ಎಲ್ಲಾ ವಸ್ತುಗಳಿಗೆ ಸೇರಿಸಿ ಪ್ರಸಾದದ ಸರಗಳನ್ನು ಕಟ್ಟಿ ಭೂಮಣ್ಣಿನ ಬುಟ್ಟಿಯಲ್ಲಿ ಇಡುತ್ತಾರೆ. ಬುಟ್ಟಿಯನ್ನು ಇಡಕಲು ಕೆಳಗೆ ಇಟ್ಟು ಪೂಜೆ ಮಾಡುತ್ತಾರೆ. ನಂತರ ಗಂಡಸರು ಜಾನುವಾರುಗಳನ್ನು ಕಟ್ಟುವ ಕೊಟ್ಟಿಗೆಗೆ ಹೋಗಿ ಜಾನುವಾರುಗಳಿಗೆ ದಂಡೆ, ಮಕಂಡಗಳನ್ನು ಕಟ್ಟುತ್ತಾರೆ. ಹಬ್ಬದ ಒಂದು ವಾರದ ಹಿಂದೆಯೇ ಎತ್ತುಗಳಿಗೆ ಗಂಟೆ, ಎಮ್ಮೆಗಳಿಗೆ ಲೊಡುಗ, ಲೊಟ್ಟೆಗಳನ್ನು ಕಟ್ಟಿರುತ್ತಾರೆ.

                ಎತ್ತು, ಆಕಳು, ಎಮ್ಮೆಗಳ ಕೋಡುಗಳಿಗೆ ಹುರಿಮಂಜಿನಿಂದ ಬಣ್ಣ ಹಚ್ಚುತ್ತಾರೆ. ಗಾಡಿ ಎತ್ತುಗಳಿಗೆ ವಿಶೇಷವಾಗಿ ಸಿಂಗರಿಸುತ್ತಾರೆ. ಕೋಡುಗಳಿಗೆ ಅಳಿಸದಂತಹ ಎನಾಮಲ್ ಕೆಂಪುಬಣ್ಣ ಎಂದು ಮೂರು ಸಾರಿ ಹಚ್ಚುತ್ತಾರೆ. ನಂತರ ಕೋಡುಗಳ ತುದಿಗೆ ಹಿತ್ತಾಳೆಯ ಗೋಡು ಗೆಣಸು ಹಾಕಿ ಬಣ್ಣದ ಗೊಂಡೇವು ಕಟ್ಟುತ್ತಾರೆ. ಎತ್ತುಗಳ ಮೈಮೇಲೆ ಬಣ್ಣದ ಜೂಲುಗಳನ್ನು ಹಾಕುತ್ತಾರೆ.

                ಗ್ರಾಮದ ಹಿರಿಯರು ಎಷ್ಟು ಹೊತ್ತಿಗೆ ಜಾನುವಾರುಗಳನ್ನು ಬಿಡಬೇಕೆಂದು ಜೋಯಿಸರಿಂದ ತಿಳಿದುಕೊಂಡಿರುತ್ತಾರೆ. ಎಷ್ಟು ಗಂಟೆಗೆ ಜಾನುವಾರುಗಳನ್ನು ಬಿಡಬೇಕೆಂದು ಕೊಂಡಿಕಾರನಿಂದ ಸಾರಿಸುತ್ತಾರೆ. ಆ ಸಮಯಕ್ಕೆ ಸರಿಯಾಗಿ ಕಾಲ್ಪೂಜೆ ಮಾಡಬೇಕು.

                ಮಹಿಳೆಯರು ಕಾಲ್ಪೂಜೆಗೆ ಬೇಕಾಗುವ ಪೂಜೆ ಸಾಮಾನು, ಗಂಧ, ಅರಿಶಿನ, ಕುಂಕುಮ, ಕಣ್ಕಪ್ಪು, ನೆನೆ ಅಕ್ಕಿ, ನೆನೆಗಡಲೆ, ನೆನೆಸಿದ ಹೆಸರುಕಾಳು ಕಡುಬು, ಬಾಳೇಹಣ್ಣು, ತೆಂಗಿನಕಾಯಿ, ಊದುಬತ್ತಿ, ಚೆಂಡುಹೂವು ಈ ಎಲ್ಲಾ ಸಾಮಾನುಗಳನ್ನು ಒಂದು ಬೆತ್ತದ ಪೆಟ್ಟಿಗೆ ಮುಚ್ಚಳದಲ್ಲಿ ಇಟ್ಟುಕೊಂಡು ಕೊಟ್ಟಿಗೆಗೆ ಹೋಗುತ್ತಾರೆ. ಮತ್ತೊಬ್ಬ ಮಹಿಳೆ ಕಳಸ ತೆಗೆದುಕೊಳ್ಳುತ್ತಾಳೆ. ಗಂಡಸರು ಇಡಕಲು ಕೆಳಗೆ ಇರುವ ಪ್ರಸಾದದ ಸರಗಳಿರುವ ಭೂಮಣ್ಣಿ ಬುಟ್ಟಿಯನ್ನು ತಂದು ಕೊಟ್ಟಿಗೆಯಲ್ಲಿ ಒಂದು ಕಡೆ ಇಟ್ಟುಕೊಂಡು ಎಲ್ಲಾ ಜಾನುವಾರುಗಳಿಗೆ ಪ್ರಸಾದದ ಸರಗಳನ್ನು ಕಟ್ಟುತ್ತಾರೆ. ಯಾವುದಾದರೊಂದು ಆಕಳನ್ನು ಬೆಳಕಿನಲ್ಲಿ ಕಟ್ಟಿಕೊಂಡು ಇದಕ್ಕೂ ಪ್ರಸಾದದ ಸರವನ್ನು ಕಟ್ಟಿ ಅಡಿಕೆಸರ, ಚೆಂಡುಹೂವಿನ ಸರಗಳನ್ನು ಕಟ್ಟುತ್ತಾರೆ. ಹಣೆಗೆ ಗಂಧ, ಅರಿಶಿನ, ಕುಂಕುಮ, ಕಣ್ಕಪ್ಪಿನ ಬಟ್ಟುಗಳನ್ನಿಟ್ಟು ಜೇಡಿ, ಕೆಮ್ಮಣ್ಣನ್ನು ಪ್ರತ್ಯೇಕವಾಗಿ ಕದಡಿಕೊಂಡು ಎಲ್ಲಾ ಜಾನುವಾರುಗಳಿಗೆ ಸಿದ್ದೆಯನ್ನು ಕದಡಿದ ಪಾತ್ರೆಗಳಲ್ಲಿ ಅದ್ದಿ, ನೆನೆಸಿಕೊಂಡು ದಾಕು ಹಾಕುತ್ತಾರೆ. ಜಾನುವಾರುಗಳ ಮೈಮೇಲೆಲ್ಲಾ ಜೇಡಿ, ಕೆಮ್ಮಣ್ಣಿನ ದಾಕು ಹಾಕುತ್ತಾರೆ. ಗೋಪೂಜೆಯ ಆಕಳಿಗೆ ಹೂವು ಮುಡಿಸಿ ಊದುಬತ್ತಿ ಬೆಳಗಿ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ನಂತರ ನೆನೆಅಕ್ಕಿ, ನೆನೆಗಡಲೆ, ಹೆಸರುಕಾಳು, ಕಡುಬುಗಳನ್ನು ಆಕಳಿಗೆ ತಿನ್ನಲು ಕೊಡುತ್ತಾರೆ.

                ಮಹಿಳೆಯರು ಗೋವಿಗೆ, ಗಾಡಿ ಎತ್ತುಗಳಿಗೆ ಕಳಸದಿಂದ ಆರತಿ ಬೆಳಗುತ್ತಾರೆ. ತಮ್ಮ ಕೊರಳಲ್ಲಿರುವ ತಾಳಿಸರ ಗೋವಿನ ಹಣೆಗೆ ಮುಟ್ಟಿಸುತ್ತಾರೆ. ಕುಟುಂಬದಲ್ಲಿರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಗೋವಿನ ಹಣೆಗೆ ಮುಟ್ಟಿಸುತ್ತಾರೆ. ನಂತರ ಮುಹೂರ್ತಕ್ಕೆ ಸರಿಯಾಗಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಬಿಟ್ಟು ಹೊರಗೆ ಓಡಿಸುತ್ತಾರೆ. ಈ ಪದ್ಧತಿಗೆ ‘ದನ ಬೆದರಿಸುವುದು’ ಎನ್ನುತ್ತಾರೆ.

                ಬಾಸಿಂಗ ಸೂಡಿದ ಎತ್ತುಗಳು ಮತ್ತು ವಿವಿಧ ಅಲಂಕಾರಗೊಂಡ ಎತ್ತುಗಳನ್ನು ಒಬ್ಬರು ಅಥವಾ ಎರಡು ಜನ ಕೈಯಲ್ಲಿ ಹಿಡಿದುಕೊಂಡು ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಮೆರವಣಿಗೆಯಲ್ಲಿ ಊರಿನ ಕಟ್ಟೆ ಬಾಗಿಲವರೆಗೆ ಹೋಗಿ ಗ್ರಾಮದ ಎತ್ತುಗಳನ್ನು ಒಂದೇ ಕಡೆ ನಿಲ್ಲಿಸಿಕೊಂಡು ಒಂದೇ ಸಾರಿ ಸುಳಿಗಾಯಿ ಒಡೆಯುತ್ತಾರೆ. ನಂತರ ಪುನಃ ಮೆರವಣಿಗೆಯಲ್ಲಿ ಊರಿಗೆ ಬರುತ್ತಾರೆ. ಗ್ರಾಮದ ಹೆಂಗಸರು, ಮಕ್ಕಳು, ಗಂಡಸರು ಸಾವಿರಾರು ಜನ ಸೇರುತ್ತಾರೆ. ನಂತರ ಅವರವರ ಮನೆಗಳಿಗೆ ಎತ್ತುಗಳನ್ನು ಹೊಡೆದುಕೊಂಡು ಹೋಗಿ ಎತ್ತುಗಳಿಗೆ ಓಕುಳಿ ಮಾಡಿ ಸುಳಿದು ಚೆಲ್ಲುತ್ತಾರೆ. ನಂತರ ಎತ್ತುಗಳನ್ನು ಅವರವರ ಹುಲ್ಲುಬ್ಯಾಣದಲ್ಲಿ ಮೇಯಲು ಬಿಟ್ಟುಬರುತ್ತಾರೆ.

                ಗಂಡಸರು ವ್ಯವಸಾಯೋಪಕರಣಗಳು ಮತ್ತು ಆಯುಧಗಳು-ಹಾರೆ, ಪಿಕಾಶಿ, ಗುದ್ದಲಿ, ಕತ್ತಿ, ಕಂದಲಿ ಮುಂತಾದವುಗಳನ್ನು ಮನೆಯ ಜಗಲಿಯ ಒಂದು ಕಡೆ ಜೋಡಿಸುತ್ತಾರೆ.

                ಮಹಿಳೆಯರು ಇಡಕಲು ಕೆಳಗೆ ಇರುವ ಬಲೀಂದ್ರ ಮಗೆಯನ್ನು ತಂದು ವ್ಯವಸಾಯೋಪಕರಣಗಳು ಮತ್ತು ಆಯುಧಗಳನ್ನು ಇಟ್ಟ ಸ್ಥಳದಲ್ಲಿ ಮುಂಭಾಗದಲ್ಲಿ ಸುತ್ತಲೂ ಸಗಣಿಯ ಕಟ್ಟೆಯನ್ನು ಮಾಡಿ ಮಧ್ಯೆ ಬಲೀಂದ್ರ ಮಗೆ ಅಲ್ಲಾಡದಂತೆ ಸಗಣಿ ಮೆತ್ತಿ ಇಡುತ್ತಾರೆ. ಬಲೀಂದ್ರ ಮಗೆಯ ಕೊರಳಿಗೆ ಜೇಡಿ, ಕೆಮ್ಮಣ್ಣಿನ ಪಟ್ಟಿಯನ್ನು ಎಳೆಯುತ್ತಾರೆ. ಬಲೀಂದ್ರನ ಸಗಣಿ ಕಟ್ಟೆಗೆ ಕಹಿ ಹಿಂಡೆಕಾಯಿ, ಗುಡ್ಡೆಗೇರುಕಾಯಿ, ನೆಲ್ಲಿಕಾಯಿ ಸಿಕ್ಕಿಸುತ್ತಾರೆ. ಮಗೆಯ ತಲೆ ಮೇಲಿರುವ ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಬಲೀಂದ್ರನ ಮುಂದೆ ಕೆಮ್ಮಣ್ಣು ಮತ್ತು ಜೇಡಿಯಿಂದ ಬಸವನಪಾದ ಬರೆಯುತ್ತಾರೆ. ಬಚ್ಚಲು ಹಂಡೆ ಮತ್ತು ಬಲೀಂದ್ರನ ಮಗೆಯ ಕೊರಳಿಗೆ ಬಸವನಬಳ್ಳಿ (ಮಾಲಿಂಗನಬಳ್ಳಿ) ಸುತ್ತುತ್ತಾರೆ. ವ್ಯವಸಾಯೋಪಕರಣಗಳಿಗೆ ಮತ್ತು ಆಯುಧಗಳಿಗೆ ಜೇಡಿ ಕೆಮ್ಮಣ್ಣಿನ ಪಟ್ಟೆಯನ್ನು ಎಳೆಯುತ್ತಾರೆ. ಸಗಣಿಗೆ ಕರ್ಕಿಹುಲ್ಲು ಮುಡಿಸಿ ಬಾಗಿಲು ಎರಡೂ ಕಡೆ, ಬಲೀಂದ್ರನ ಎರಡೂ ಕಡೆ ಹಾಗೂ ವ್ಯವಸಾಯೋಪಕರಣಗಳ ಎರಡೂ ಕಡೆ ಇಡುತ್ತಾರೆ. ಬಾಗಿಲುಗಳಿಗೆ ಮಾಲಿಂಗನ ಬಳ್ಳಿಯನ್ನು ಕಟ್ಟುತ್ತಾರೆ.

                ಗಂಡಸರು ಗ್ರಾಮದ ಒಳಗೆ - ಹೊರಗೆ ಇರುವ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣುಕಾಯಿ ಒಡೆದು ಪೂಜೆ ಮಾಡಿಸಿಕೊಂಡುಬರುತ್ತಾರೆ. ಗ್ರಾಮ ಸುಧಾರಣಾ ಸಮಿತಿಯ ಹಿರಿಯರು ಗ್ರಾಮದ ಪ್ರತಿಮನೆಗೂ ವಂತಿಗೆ ಹಾಕಿ ಹಣ ಒಟ್ಟು ಮಾಡಿ ಆ ಹಣದಿಂದ ಹತ್ತರಕುರಿಗಳನ್ನು ಕೊಂಡು ತಂದು ಗ್ರಾಮದ ಗಡಿಯಲ್ಲಿರುವ ಭೂತಗಳಿಗೆ ಬಲಿ ಕೊಡುತ್ತಾರೆ. ಮಾಂಸವನ್ನು ಪ್ರತಿ ಮನೆಗೆ ಹಂಚುತ್ತಾರೆ. ಊರಿನ ದೇವಾಲಯದಲ್ಲಿರುವ ದೇವರುಗಳಿಗೆ ಪೂಜೆಗೆ ವ್ಯವಸ್ಥೆ ಮಾಡುತ್ತಾರೆ. ಗ್ರಾಮದ ಪ್ರತಿ ಮನೆಯವರು ದೇವಸ್ಥಾನಕ್ಕೆ ಹೋಗಿ ಹಣ್ಣುಕಾಯಿ ಮಾಡಿಸಿಕೊಂಡುಬರುತ್ತಾರೆ. ಅನುಕೂಲಸ್ಥರು ಪೇಟೆಯಿಂದ ಮಾಂಸವನ್ನು ಕೊಂಡು ತರುತ್ತಾರೆ. ದೀಪಾವಳಿಯಲ್ಲಿ ಕುರಿ ಕಡುಬು (ಕುರಿಮಾಂಸ ಕೊಟ್ಟೆ ಕಡುಬು) ಆಗಲೇಬೇಕು. ಬೇರೆ ದೇವರುಗಳಿಗೆ ನೈವೇದ್ಯದ ಎಡೆ ಮಾಡಲು ಅನ್ನ, ಸಾರು, ಪಾಯಸ, ಕೋಸಂಬರಿ, ಸಾಸಿವೆ ಚಟ್ನಿ ತಯಾರು ಮಾಡುತ್ತಾರೆ. ಬಲೀಂದ್ರನಿಗೆ ಬಾವಿ, ತುಳಸಿಕಟ್ಟೆ, ಗಾಡಿ, ವ್ಯವಸಾಯೋಪಕರಣಗಳು, ಆಯುಧಗಳು, ಪಳತ, ಕಣಜ, ಅಕ್ಕಿಗೂಡು, ಅಲ್ಮೇರಾ, ಟ್ರಜರಿ, ಗ್ರಂಥಗಳಿದ್ದರೆ ಇವುಗಳಿಗೆಲ್ಲಾ ಎಡೆ ಮಾಡಿ ಪೂಜಿಸಿ ತೆಂಗಿನಕಾಯಿ ಒಡೆಯುತ್ತಾರೆ. ವಿಶೇಷವಾಗಿ ಕುಟುಂಬದಲ್ಲಿ ಮಡಿದ ಹಿರಿಯರಿಗೆ ಮಾಂಸದ ಎಡೆ ಮಾಡಿ ಪೂಜಿಸಿ ಹಣ್ಣು ಕಾಯಿ ಮಾಡುತ್ತಾರೆ. ದೀವರಲ್ಲಿ ಹಿರಿಯರ ಪೂಜೆಯು ಇಂದೇ ನಡೆಯುತ್ತದೆ. ಹಿರಿಯರಿಗೆ ಪ್ರತ್ಯೇಕವಾಗಿ ಪೂಜೆ ಮಾಡುವ ಸಂಪ್ರದಾಯವಿಲ್ಲ. ಒಳಗಡೆ ಎಲ್ಲಾ ದೇವರುಗಳಿಗೆ ಪೂಜೆಯಾದ ನಂತರ ಒಂದು ಎಡೆ ಅನ್ನ, ಸಾರು, ಪಾಯಸ, ಹಾಲು, ಹಣ್ಣು ಹಾಕಿ ಎಡೆಯನ್ನು ಹೊರಗಡೆ ನಾಯಿ, ಕೋಳಿಗಳು ಮುಟ್ಟದಂತೆ ಸ್ವಲ್ಪ ಎತ್ತರದ ಸ್ಥಳದಲ್ಲಿ ರಾಹು ಕೇತುಗಳಿಗೆ ಇಡುತ್ತಾರೆ. ನಂತರ ಅಗ್ನಿಗೂಡಿ ಎಲ್ಲರೂ ಸೇರಿ ಊಟ ಮಾಡುತ್ತಾರೆ. ಊಟ ಆಗುವುದು ರಾತ್ರಿ 8 ಗಂಟೆ ಆಗುತ್ತದೆ. ಅಲ್ಲಿಯವರೆಗೆ ಕಟ್ಟುನಿಟ್ಟಾಗಿ ಉಪವಾಸ ಇರುತ್ತಾರೆ. ಬೆಳಗ್ಗೆಯಿಂದ ರಾತ್ರಿ ಊಟ ಆಗುವವರೆಗೆ ಬೆಲ್ಲ ಹಾಕಿ ಬೇಯಿಸಿದ ಹೆಸರುಕಾಳು ರಸ ಕುಡಿದುಕೊಂಡು ಉಪವಾಸ ಇರುತ್ತಾರೆ.

                ಊಟದ ನಂತರ ಊರಿನ ಯುವಕರು ಕೆಲವು ಹಿರಿಯರು ಸೇರಿ ಗ್ರಾಮದ ದೇವಸ್ಥಾನದಲ್ಲಿ ದೇವರದೀಪದಿಂದ ತಮ್ಮ ದೀಪ ಹಚ್ಚಿಕೊಂಡು ಧಿಮ್ಮಾಲೆ ಕೂಗುತ್ತಾ ಹಬ್ಬ ಹಾಡಲು ಹೋಗುತ್ತಾರೆ.

ಮರಿಪಾಡ್ಯ

                ದೀಪಾವಳಿಯ ನಾಲ್ಕನೇ ದಿವಸಕ್ಕೆ ದೀವರು ಮರಿಪಾಡ್ಯ ಎನ್ನುತ್ತಾರೆ. ಈ ದಿವಸ ದೀವರಿಗೆ ಬಿಡುವು.

                ಖುಷಿಯಿಂದ ಕಾಲ ಕಳೆಯುತ್ತಾರೆ. ಅಳಿದುಳಿದ ದೇವತೆಗಳಿಗೆ ಹಣ್ಣು ಕಾಯಿ ಮಾಡಿಸಿಕೊಂಡುಬರುತ್ತಾರೆ. ಈ ದಿನ ಮತ್ತು ವರ್ಷತೊಡಕಿನ ದಿವಸ ಕೆಲವು ಗ್ರಾಮದೇವತೆಗಳನ್ನು ಹೊರಡಿಸಿ ಮೆರವಣಿಗೆ ಮಾಡುತ್ತಾರೆ. ಊರಿನಲ್ಲಿರುವ ಜನರ ಬಹುಕಾಲದ ಸಮಸ್ಯೆಗಳನ್ನು ಕೆಲವು ದೇವತೆಗಳು ಬಗೆಹರಿಸುತ್ತವೆ. ಹಿಂದೆ ನಡೆದಿರುವ ಕಳ್ಳತನ ಮತ್ತು ದೀರ್ಘಕಾಲದ ವ್ಯಾಜ್ಯಗಳನ್ನು ದೇವತೆಗಳ ಮೂಲಕ ಬಗೆಹರಿಸಿಕೊಳ್ಳುತ್ತಾರೆ. ಯುವಕರಿಂದ ಮರದ ಕೊಂಬೆಯ ಮೇಲೆ ತೆಂಗಿನಕಾಯಿ ಇಟ್ಟು ಬಂದೂಕಿನಿಂದ ಗುರಿ ಹೊಡೆಯುವ ಸ್ಪರ್ಧೆ ನಡೆಯುತ್ತದೆ.

ವರ್ಷತೊಡಕು

                ವರ್ಷತೊಡಕು ದೀಪಾವಳಿಯ ಐದನೇ ದಿವಸ. ಈ ದಿವಸ ಹಬ್ಬ ಮಾಡುತ್ತಾರೆ. ಮಾಂಸ, ಮೀನು ತಂದು ಭರ್ಜರಿ ಅಡುಗೆ ಮಾಡುತ್ತಾರೆ. ಕೆಲವರು ಸರಳವಾಗಿ ಅನ್ನ, ಸಾರು, ಪಾಯಸ ಮಾಡಿ ಇಡಕಲು ಕೆಳಗೆ ಮತ್ತು ಬಲೀಂದ್ರನಿಗೆ ಎಡೆಯಿಟ್ಟು ಪೂಜೆ ಮಾಡಿ ಅಗ್ನಿಗೂಡಿ ಊಟ ಮಾಡುತ್ತಾರೆ. ಯುವಕರು ಕಬಡ್ಡಿ, ಚೆಂಡಾಟಗಳನ್ನು ಆಡುತ್ತಾರೆ. ಕೆಲವು ಯುವಕರು ದೂರದಲ್ಲಿ ತೆಂಗಿನಕಾಯಿ ಇಟ್ಟುಕೊಂಡು ದಪ್ಪ ಗುಂಡಿನಿಂದ ಎಸೆಯುತ್ತಾರೆ. ಒಂದೇ ಏಟಿಗೆ ತೆಂಗಿನಕಾಯಿ ಹೊಡೆದವನಿಗೆ, ತೆಂಗಿನಕಾಯಿ ಗುರಿ ತಪ್ಪಿದರೆ ತೆಂಗಿನಕಾಯಿ ಇಟ್ಟವನಿಗೆ ಐವತ್ತು ಪೈಸೆ ಕೊಡಬೇಕು. ಇದೇ ರೀತಿ ಕೈಗೆ ಪಂಚೆ ಹುರಿ ಮಾಡಿ ಸುತ್ತಿಕೊಂಡು ಮುಷ್ಠಿಯಿಂದ ಗುರಿಕಾಯಿ ಗುದ್ದುತ್ತಾರೆ. ಒಂದೇ ಗುದ್ದಿಗೆ ಹೊಡೆದರೆ ತೆಂಗಿನಕಾಯಿ ಒಡೆದವನಿಗೆ, ತಪ್ಪಿದರೆ ಗುರಿಕಾಯಿ ಇಟ್ಟವನಿಗೆ ಐವತ್ತು ಪೈಸೆ ಕೊಡಬೇಕು. ಹೀಗೆ ಅನೇಕ ರೀತಿಯ ಆಟಗಳಿಂದ ಮೋಜು, ವಿನೋದದಲ್ಲಿ ಕಾಲ ಕಳೆಯುತ್ತಾರೆ.

ಭೂತನ ಹಬ್ಬ

ಭೂತನಿಗೆ ಕಳ್ಳು ಹೊಯ್ಯುವ ಸಂಪ್ರದಾಯ

                ಇದು ಸುಗ್ಗಿಯ ಪೂರ್ವದಲ್ಲಿ ನಡೆಯುವ ಹಬ್ಬ. ಬೆಳೆದುನಿಂತ ಬೆಳೆಯನ್ನು ಕಟಾವು ಮಾಡಿ ಗೊಣವೆ ಹಾಕಿದ ನಂತರ ವಕ್ಕಲು ಮಾಡುವ ಮುನ್ನ ಮಧ್ಯೆ ಬಿಡುವಿನ ಕಾಲದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

                ಈ ಹಬ್ಬಕ್ಕೆ ಹೊಸಕ್ಕಿ ಹಬ್ಬವೆಂದೂ ಕರೆಯುತ್ತಾರೆ. ಕೆಲವು ಊರುಗಳಲ್ಲಿ ಈ ಹಬ್ಬವನ್ನು ‘ಹಾಲುಹಬ್ಬ’ವೆಂದೂ ಆಚರಿಸುತ್ತಾರೆ. ಹೊಸದಾಗಿ ಬೆಳೆದು ಹಾಲುಗಟ್ಟಿದ ಭತ್ತವನ್ನು ತಂದು ಒರಳುಕಲ್ಲಿಗೆ ಹಾಕಿ ನೀರು ಸೇರಿಸಿ ರುಬ್ಬುತ್ತಾರೆ. ಕಲ್ಲಿನಿಂದ ತೆಗೆದು ಚೆನ್ನಾಗಿ ಗಾಳಿಸಿ ಬೆಲ್ಲ, ಏಲಕ್ಕಿ ಸೇರಿಸಿ ಕಾಯಿಸುತ್ತಾರೆ. ಗಟ್ಟಿಯಾಗಿ ಹಲ್ವ ರೀತಿಯಲ್ಲಿ ಪಾಯಸವಾಗುತ್ತದೆ. ತುಪ್ಪ ಸೇರಿಸಿ ತಿನ್ನುತ್ತಾರೆ. ಹಾಲುಗಟ್ಟಿದ ಭತ್ತದಿಂದ ಇದನ್ನು ಮಾಡುವುದರಿಂದ ‘ಹಾಲುಹಬ್ಬ’ ಎನ್ನುತ್ತಾರೆ. ಕೆಲವರು ಹೊಸ ಭತ್ತ ತಂದು ಕುಟ್ಟಿ ಅಕ್ಕಿ ಮಾಡಿ ಹೊಸ ಅಕ್ಕಿಗೆ ನೀರು ಸೇರಿಸಿ ಬೆಲ್ಲ, ಏಲಕ್ಕಿಪುಡಿ, ಹಸಿ ತೆಂಗಿನಕಾಯಿ ಚೂರುಗಳನ್ನು ಹಾಕಿ ಇಡಕ್ಕಿ ಪಾಯಸ ಮಾಡುತ್ತಾರೆ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಹೊಸ ಅಕ್ಕಿ ಪಾಯಸ ಮಾಡುತ್ತಾರೆ.

                ಸಾಮಾನ್ಯವಾಗಿ ಜನವರಿ ತಿಂಗಳು ಯಾವುದಾದರೂ ಭಾನುವಾರ ಅಥವಾ ಮಂಗಳವಾರ ದಿವಸ ನೆಂಟರಿಷ್ಟರನ್ನು ಕರೆದು ತುಂಬಾ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಊರಿನ ಯುವಕರು ಗ್ರಾಮಸ್ಥರ ಸಹಕಾರದಿಂದ ನಾಟಕ ಅಥವಾ ಮೂಡಲಪಾಯ ಬಯಲಾಟವನ್ನು ಕಲಿತು ಈ ದಿವಸ ಪ್ರದರ್ಶನ ಮಾಡುತ್ತಾರೆ.

ಭೂಮಿ ಹುಣ್ಣಿಮೆ ದಿವಸ ಭೂಮಿ ಪೂಜೆ ಮಾಡಿದ ನಂತರ ಕಟ್ಟಿದ ಹಂಗುನೂಲನ್ನು ಎಲ್ಲರ ಕೈಯಿಂದ ಬಿಚ್ಚಿಕೊಂಡು ಸಪ್ಪೆರೊಟ್ಟಿ (ಉಪ್ಪು ಹಾಕದೇ ಇರುವುದು) ಅಳ್ಳು ಭತ್ತ, (ಭತ್ತದ ಅರಳು) ಒಣಮೀನು ಪಲ್ಲೆ (ಸ್ವಾರ್ಲು ಮೀನು, ಗಟ್ಟಿಯಾಗಿ ಮಾಡಿದ್ದು) ರೊಟ್ಟಿ, ಬಾಟ್ಲಿಯಲ್ಲಿ ತೆಂಗಿನ ಕಳ್ಳು (ಕಳ್ಳು ಇಲ್ಲದಿದ್ದರೆ), ಸಾರಾಯಿ, ಮಾವಿನಸೊಪ್ಪು, ಚೆಂಡುಹೂವು ಮುಂತಾದವುಗಳನ್ನು ತೆಗೆದುಕೊಂಡು ಸಂಜೆ ಆರು ಗಂಟೆಗೆ ಎರಡು ಜನ ಸೇರಿ ಗೊಣವೆಗಳನ್ನು ಹಾಕಿದ ಗದ್ದೆಗೆ ಹೋಗುತ್ತಾರೆ. ಗೊಣವೆಗಳ ಮೇಲಿರುವ ಬೆನಪ್ಪಗಳನ್ನು ಇಳಿಸುತ್ತಾರೆ. ಬೆನವನ ಉಂಡೆಗೆ ಮಾವಿನಸೊಪ್ಪು, ಚೆಂಡುಹೂವುಗಳನ್ನು ಬೆನಪ್ಪನಲ್ಲಿರುವ ಕೂಳೆಗೆ ಹಂಗುನೂಲಿನಿಂದ ಕಟ್ಟುತ್ತಾರೆ. ಗದ್ದೆಯಲ್ಲಿ ಅರಳಿ ನಿಂತಿರುವ ಕಣಕಪ್ಪಿನ ಹೂವುಗಳನ್ನು ಮುಡಿಸಿ ಸಪ್ಪೆರೊಟ್ಟಿ, ಅಳ್ಳು ಭತ್ತ ಇಟ್ಟು, ಊದುಬತ್ತಿ ಹಚ್ಚಿ ಬೆನಪ್ಪನಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ.

                ನಂತರ ಆ ಭಾಗದಲ್ಲಿರುವ ಭೂತಗಳಿಗೆ ಗೊಣವೆಗಳ ಸುತ್ತ ಮೂರು ಕಡೆ ಭೂತಗಳಿರುವ ದಿಕ್ಕಿಗೆ ಮೀನು ರೊಟ್ಟಿ ಹಾಕಿ ಎಡೆ ಮಾಡುತ್ತಾರೆ. ಬಾಳೆಎಲೆಯಿಂದ ದೊನ್ನೆ ಆಕಾರ ಕೊಟ್ಟೆಗಳನ್ನು ಮಾಡಿ ಕೊಟ್ಟೆಗಳಲ್ಲಿ ಕಳ್ಳು ಅಥವಾ ಸಾರಾಯಿ ಹಾಕಿ ಎಡೆಯ ಪಕ್ಕದಲ್ಲಿ ಇಟ್ಟು ನಮ್ಮ ಗೊಣವೆಗಳನ್ನು ಕಳ್ಳಕಾಕರಿಂದ, ಬೆಂಕಿ ಅನಾಹುತದಿಂದ ಸಂರಕ್ಷಿಸು ಎಂದು ಭೂತಗಳಿಗೆ ನಮಸ್ಕಾರ ಮಾಡಿ ಬೇಡಿಕೊಳ್ಳುತ್ತಾರೆ. ಸಪ್ಪೆ ರೊಟ್ಟಿ ಮತ್ತು ಅರಳುಭತ್ತವನ್ನು ಗೊಣವೆಗಳ ಸುತ್ತ ಬೀರುತ್ತಾರೆ. ಇಳಿಸಿದ ಬೆನಪ್ಪಗಳನ್ನು ಗೊಣವೆ ಮೇಲೆ ಪುನಃ ಇಡುತ್ತಾರೆ. ನಂತರ ತಮ್ಮ ಮನೆಗಳಿಗೆ ಬಂದು ನೆಂಟರಿಷ್ಟರು, ಮನೆಯವರು ಕೂಡಿ ಊಟ ಮಾಡುತ್ತಾರೆ. ಈ ಹಬ್ಬದಲ್ಲಿ ಕೊಟ್ಟೆ ಕಡುಬು, ಒಣಸ್ವಾರ್ಲು ಮೀನು ಸಾರು, ಹಸಿ ಮೀನು ಮತ್ತು ಕೋಳಿಮಾಂಸದ ಸಾರು ಮಾಡುತ್ತಾರೆ. ರಾತ್ರಿಯೆಲ್ಲಾ ನಾಟಕ ಅಥವಾ ಮೂಡಲಪಾಯ ಬಯಲಾಟವನ್ನು ನೋಡಿ ಆನಂದಪಡುತ್ತಾರೆ.