ದೀವರು-ಜನಪದ ಸಾಹಿತ್ಯ ಮತ್ತು ಕಲೆಗಳು

               ಶಿವಮೊಗ್ಗ ಜಿಲ್ಲೆಯ ನೈಸರ್ಗಿಕ ವಾತಾವರಣಕ್ಕೆ ತಕ್ಕಂತೆ ಇಲ್ಲಿಯ ಜನರ ಬದುಕು ಕೂಡ ವೈವಿಧ್ಯಮಯವಾದದ್ದು. ವಿಶೇಷವಾಗಿ ವ್ಯವಸಾಯವನ್ನೇ ಅವಲಂಬಿಸಿಕೊಂಡಿರುವ ದೀವರು ಮಲೆನಾಡಿನ ವೈವಿಧ್ಯಮಯ ಜೀವನಕ್ಕೆ ತಮ್ಮ ದೇಣಿಗೆಯನ್ನು ಕೊಟ್ಟಿದ್ದಾರೆ. ಇವರು ದಟ್ಟವಾದ ಅಡವಿ ಹಾಗೂ ಗುಡ್ಡ ಕಣಿವೆಗಳ ನಡುವೆ ಜೀವಿಸುತ್ತಾ ಬಂದಿರುವುದರಿಂದ ನಾಗರಿಕತೆಯ ಯಾವುದೇ ಪ್ರಭಾವ ಇವರ ಮೇಲೆ ಆಗಲಿಲ್ಲ ಹಾಗೂ ಮಲೆನಾಡಿನ ಹಳ್ಳಿಗಳಿಗೆ ವಿದ್ಯಾಭ್ಯಾಸ ಪ್ರವೇಶ ಆದದ್ದು ಆರೇಳು ದಶಕಗಳ ಈಚೆಗೆ. ಮಣ್ಣಿನ ಮಕ್ಕಳಾಗಿ ಬದುಕಿದ ಈ ಜನ ಇಲ್ಲಿಯ ಪರಿಸರವನ್ನು ಪ್ರೀತಿಸುತ್ತಾ ತಮ್ಮ ಪಾಲಿಗೆ ತಾವು ಕೆಲಸ ಮಾಡಿಕೊಂಡಿದ್ದವರು. ಹೀಗೆಂದು ಇವರ ಜೀವನದಲ್ಲಿ ಆಟ, ವಿನೋದಗಳಿಗೆ ಕೊರತೆ ಇತ್ತೆಂದು ಹೇಳುವಂತಿಲ್ಲ. ಅನಕ್ಷರಸ್ಥರು, ನಾಗರಿಕತೆಯ ನಯ ನಾಜೂಕಿನ ಸೋಂಕಿಲ್ಲದವರು. ಆದರೆ ಈ ಜನ ಶಿಷ್ಟ ಕಾವ್ಯಗಳನ್ನು, ಕಲೆಗಳನ್ನು ರಚಿಸದೇ ಇದ್ದರೂ ಜಾನಪದ ಸಾಹಿತ್ಯ ಕಲೆಗಳ ಶ್ರೀಮಂತ ಬೆಳೆಯನ್ನು ಬೆಳೆಸಿದವರು. ತಮ್ಮ ಸುಖ ಸಂತೋಷವನ್ನು, ಮನಸ್ಸಿನ ತಳಮಳವನ್ನು, ಸಂಕಟವನ್ನು ಕಾವ್ಯದ ಮೂಲಕ ಹೊರಹೊಮ್ಮಿಸಲು, ಕಲೆಯ ಮೂಲಕ ಪ್ರದರ್ಶಿಸಲು ಉತ್ಸುಕರಾಗಿದ್ದವರು. ದೀವರ ಮಹಿಳೆಯರು ಹಾಡುವ ಬೀಸುವ ಪದಗಳು, ಕುಟ್ಟುವ ಹಾಡುಗಳು, ಮದುವೆ ಹಾಡುಗಳು, ಜೋಗುಳ ಹಾಡುಗಳು, ಗೌರಿಹಬ್ಬದಲ್ಲಿ ಹಾಡುವ ಹಾಡುಗಳು, ಸೋಬಾನೆ ಪದಗಳು, ಕಥನ ಗೀತೆಗಳು, ಖಂಡ ಕಾವ್ಯಗಳು, ಗಂಡಸರು ಹಾಡುವ ಅಂಟಿಕೆ-ಪಂಟಿಕೆ ಹಾಡುಗಳು ಹೀಗೆ ಒಂದೇ, ಎರಡೇ. ಅಪಾರ ಸಂಖ್ಯೆಯಲ್ಲಿ ಗೀತಸಾಹಿತ್ಯವನ್ನು ದೀವರ ಮಹಿಳೆಯರು ತಮ್ಮ ಒಡಲಲ್ಲಿ ತುಂಬಿಕೊಂಡಿದ್ದಾರೆ.

                ದೀವರ ಮಹಿಳೆಯರಲ್ಲಿರುವ ಒಗಟುಗಳು, ಒಡಪುಗಳು, ಜನಪದ ಕತೆಗಳು, ಗಾದೆಗಳು, ಜನಪದ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳನ್ನು ದೀವರ ಪ್ರತಿಯೊಬ್ಬ ಮಹಿಳೆಯು ತನ್ನ ಮನಸ್ಸಿನ ಆಳದಲ್ಲಿ ತುಂಬಿಕೊಂಡಿದ್ದಾಳೆ.

                ದೀವರ ಗಂಡಸರು ಹಬ್ಬ ಆಡುವ (ಹಾಡುವ) ಪದಗಳು, ಡೊಳ್ಳಿನ ಹಾಡುಗಳು, ಜನಪದ ಕಲೆಗಳಾದ ಡೊಳ್ಳು ಕುಣಿತ, ಕೋಲಾಟ, ಜನಪದ ರಂಗಕಲೆಗಳಾದ ಮೂಡಲಪಾಯ ಬಯಲಾಟ, ಮಲೆನಾಡಿನ ಸಣ್ಣಾಟಗಳು, ಪಡವಲಪಾಯ ಯಕ್ಷಗಾನ ಮುಂತಾದವುಗಳು ಹೇರಳವಾಗಿದ್ದವು.

                ಈ ಎಲ್ಲಾ ಕಲೆಗಳು ಮಲೆನಾಡಿನ ಮಣ್ಣಿನ ಸೊಗಡನ್ನು ಹೊಂದಿದವುಗಳಾಗಿದ್ದರೆ ಇನ್ನು ಕೆಲವು ಉತ್ತರಕರ್ನಾಟಕ ಮತ್ತು ದಕ್ಷಿಣೋತ್ತರ ಜಿಲ್ಲೆಗಳಿಂದ ಪ್ರಭಾವಿತವಾಗಿವೆ. ಮಲೆನಾಡಿನ ದೀವರು ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಹೋಗುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಬಯಲಾಟಗಳನ್ನು ನೋಡಿದ್ದು ಮತ್ತು ಅಲ್ಲಿಯ ವೃತ್ತಿ ಗಾಯಕರು ಈ ಜಿಲ್ಲೆಗಳಿಗೆ ಬರುತ್ತಿದ್ದದ್ದು ಕಾರಣವಿರಬಹುದು.

                ದೀವರ ಮಹಿಳೆಯರಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿಯೂ ಜನಪದ ಹಾಡುಗಾರ್ತಿಯರು ಇದ್ದರೂ ‘ಗುಣಸಾಗರಿ’ ಎಂಬ ಖಂಡಕಾವ್ಯದ ಹದಿನಾರು ಸಂದಿಗಳನ್ನು ಹೇಳುವವರು ಸೊರಬ ತಾಲ್ಲೂಕು ಹೆಚ್ಚೆ ಎಂಬ ಹಳ್ಳಿಯಲ್ಲಿದ್ದರು. ಸಾಗರ ತಾಲ್ಲೂಕಿನ ಬಲೆಗಾರು ಎಂಬ ಹಳ್ಳಿಯಲ್ಲಿ ದಿ. ಸುಳ್ಳೂರು ಕೆರಿಯಮ್ಮನವರು ಐದು ಸಂದಿ ಹಾಡುತ್ತಿದ್ದರು. ಇವರ ಮಗ ಪ್ರೊ. ಎಸ್.ಪಿ. ಕೆರಿಯಪ್ಪನವರು ಇದನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ದಿ. ಕೆರಿಯಮ್ಮನವರು ಚೌಪದಿಗಳನ್ನು ಮತ್ತು ಬಿಡಿ ಹಾಡುಗಳನ್ನು ಹೇಳುತ್ತಿದ್ದರು. ತಾಳಗುಪ್ಪ ಸಮೀಪವಿರುವ ಪಡಗೋಡಿನ ದೋಣ್ಜಿ ರಾಮಮ್ಮನವರು ಕೆಲವು ಕಥನ ಗೀತೆಗಳನ್ನು ಹಾಡುತ್ತಿದ್ದರು. ಹೊಂಕೇರಿಯ ಕನ್ನಮ್ಮ ಗಡೇಮನೆ, ಲಕ್ಷ್ಮೀ ರಾಮಪ್ಪ ಇವರು ಉತ್ತಮ ಗಾಯಕಿಯರಾಗಿದ್ದರು. ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರು ಅನೇಕ ಮದುವೆ ಹಾಡುಗಳು, ಬೀಸುವ, ಕುಟ್ಟುವ ಹಾಡುಗಳನ್ನು ಹಾಡಿದ್ದಾರೆ. ತಾಳಗುಪ್ಪಕ್ಕೆ ಸಮೀಪದಲ್ಲಿರುವ ಮರತ್ತೂರು ಗ್ರಾಮದಲ್ಲಿ ದಿ. ಮೈಲಮ್ಮ ಎಂಬ ಪ್ರಸಿದ್ಧ ಗಾಯಕಿ ಇದ್ದರು. ಇವರು ದೀವರ ಪ್ರಪ್ರಥಮ ವಿಧಾನಸಭೆಯ ಸದಸ್ಯರಾದ ಡಿ. ಮೂಕಪ್ಪನವರ ಧರ್ಮಪತ್ನಿ. ದಿ. ಮೈಲಮ್ಮನವರು ಹುಟ್ಟಿದ್ದು ಅದರಂತೆ ಗ್ರಾಮ. ಇವರ ತಾಯಿ ‘ಹಾಡೋ ಬಸಮ್ಮ’ ಎಂದೇ ಖ್ಯಾತರಾಗಿರುವ ಬಸಮ್ಮ-ದೀವರ ಜನಾಂಗದ ಶ್ರೇಷ್ಠ ಗಾಯಕಿಯರಲ್ಲಿ ಮೊದಲಿಗರು. ಸಾಗರ ಪಟ್ಟಣಕ್ಕೆ ಹತ್ತಿರವಿರುವ ಕುಗ್ವೆ ಗ್ರಾಮದಲ್ಲಿ ನೆಲ್ಲೂರು ಪುಟ್ಟಮ್ಮ, ಕೆಳದಿ ಮರಿಯಮ್ಮ, ಕಾಗೋಡು ಹುಚ್ಚಮ್ಮ ಇವರು ಶ್ರೇಷ್ಠ ಗಾಯಕಿಯರಾಗಿದ್ದರು. ಶಿರುವಾಳ, ಗಾಳಿಪುರ, ಕಾಗೋಡು, ಹಿರೇನೆಲ್ಲೂರು, ಯಲಕುಂದ್ಲಿ, ಸೂರಗುಪ್ಪೆ ಮುಂತಾದ ಹಳ್ಳಿಗಳಲ್ಲಿ ಉತ್ತಮ ಗಾಯಕಿಯರು ಇದ್ದರು. ಮರತ್ತೂರಿನ ದಿ. ಮೈಲಮ್ಮನವರಿಗೆ 1998ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರಕಿದೆ.

                ಸಿರಿವಂತೆ ಸೀಮೆಯ ಬರದವಳ್ಳಿ ಗ್ರಾಮದಲ್ಲಿ ಹಾದಿಮನೆ ಕನ್ನಮ್ಮ ಎಂಬ ಅಪರೂಪದ ಗಾಯಕಿ ಇದ್ದರು. ಇವರಿಗೂ ಕೂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ 2000ದಲ್ಲಿ ದೊರಕಿದೆ. ಬರದವಳ್ಳಿಯಲ್ಲಿ ಮಾಸೇರಿ ಹಾಲಮ್ಮ, ಬಂಡಿ ಹನುಮಮ್ಮ ಎಂಬ ಗಾಯಕಿಯರು ಇದ್ದಾರೆ.

                ಇದೇ ರೀತಿಯಲ್ಲಿ ದೀವರು ವಾಸ ಮಾಡುವ ಹಳ್ಳಿಗಳಲ್ಲಿ ಜನಪದ ಹಾಡುಗಳು, ಕಥೆಗಳು, ಗಾದೆ, ಒಗಟು, ಒಡಪುಗಳನ್ನು ಹೇಳುವ ಲಕ್ಷಾಂತರ ಮಹಿಳೆಯರು ಇದ್ದರು. ಇವರೆಲ್ಲರಲ್ಲಿರುವ ಜನಪದ ಸಾಹಿತ್ಯ ಮತ್ತು ಗೀತೆಗಳನ್ನು ಸಂಗ್ರಹಿಸಲು ಆಗಲಿಲ್ಲ. ದೀವರ ಸಮೂಹದಲ್ಲಿ ಜಾನಪದ ವಿದ್ವಾಂಸರು ಮತ್ತು ತಜ್ಞರು ಮೂಡಿಬರಲೇ ಇಲ್ಲ. ಬೇರೆ ಭಾಗದಲ್ಲಿ ಮೇಲ್ವರ್ಗದ ಜಾನಪದ ವಿದ್ವಾಂಸರು ಗ್ರಾಮೀಣ ಪ್ರದೇಶದ ಜನರಲ್ಲಿರುವ ಜನಪದ ಗೀತೆ, ಕತೆ, ಗಾದೆ, ಒಗಟುಗಳ ಸಂಗ್ರಹ ಮಾಡಿದಂತೆ ಮಲೆನಾಡಿನ ದೀವರ ಸಮೂಹದಲ್ಲಿ ಜಾನಪದ ಸಂಪತ್ತನ್ನು ಸಂಗ್ರಹಿಸುವ ಕೆಲಸ ಅಗಲೇ ಇಲ್ಲ.

                ಉತ್ತರಕನ್ನಡ ಜಿಲ್ಲೆಯ ಎಲ್.ಆರ್. ಹೆಗಡೆ ಎಂಬ ಮಾನವತಾವಾದಿಯಾದ ಜಾನಪದ ವಿದ್ವಾಂಸರಂಥವರು ಈ ಭಾಗದಲ್ಲಿ ಹುಟ್ಟಲೇ ಇಲ್ಲ. ಇವರು ಉತ್ತರಕನ್ನಡ ಜಿಲ್ಲೆಯ ನಾಮಧಾರಿ ಮಹಿಳೆಯರು ಹಾಡುವ ಕಥನ ಗೀತೆಗಳನ್ನು ಸಂಗ್ರಹ ಮಾಡಿ ಗ್ರಂಥರೂಪದಲ್ಲಿ ಪ್ರಕಟಿಸಿದ್ದಾರೆ. ಕಾಸರಗೋಡು ತಿಮ್ಮಣ್ಣನಾಯಕ ಎಂಬುವನು ಕೆಳದಿ ಚೆನ್ನಮ್ಮನ ಆಡಳಿತದಲ್ಲಿ ದಂಡನಾಯಕನಾಗಿದ್ದನೆಂದೂ, ಅವನು ನಾಮಧಾರಿ ಜನಾಂಗಕ್ಕೆ ಸೇರಿದವನು ಎಂಬ ಕಥನ ಗೀತೆಯು ‘ಬೆಳ್ಳಿಯಮ್ಮಳ ಹಾಡುಗಳು’ ಎಂಬ ಕೃತಿಯಲ್ಲಿ ಪ್ರಕಟವಾಗಿದೆ. ಕಾಸರಗೋಡು ತಿಮ್ಮಣ್ಣನಾಯಕನು ಔರಂಗಜೇಬನ ಸೈನ್ಯ ಶಿವಾಜಿ ಮಹಾರಾಜರ ಮಗನಾದ ರಾಜಾರಾಮನನ್ನು ಬೆನ್ನಟ್ಟಿ ಬಂದಾಗ ರಾಜಾರಾಮ ಕೆಳದಿ ಚೆನ್ನಮ್ಮಳ ಆಶ್ರಯ ಬೇಡುತ್ತಾನೆ. ಚೆನ್ನಮ್ಮ ರಾಜಾರಾಮನಿಗೆ ಆಶ್ರಯ ಕೊಟ್ಟು ದಂಡನಾಯಕನಾದ ಕಾಸರಗೋಡು ತಿಮ್ಮಣ್ಣನಾಯಕನಿಗೆ ಔರಂಗಜೇಬನ ಸೈನ್ಯವನ್ನು ಎದುರಿಸಲು ಆದೇಶ ನೀಡುತ್ತಾಳೆ. ತಿಮ್ಮಣ್ಣನಾಯಕ ವೀರಾವೇಶದಿಂದ ಹೋರಾಟ ಮಾಡಿ ಔರಂಗಜೇಬನ ಸೈನ್ಯವನ್ನು ಹಿಮ್ಮೆಟ್ಟಿಸುತ್ತಾನೆ. ಕೆಳದಿ ನಾಯಕರ ಆಡಳಿತದಲ್ಲಿ ಸೈನ್ಯದಲ್ಲಿ ವೀರಭದ್ರನಾಯಕ ಎಂಬ ಶೂರನಿದ್ದ. ಇವನ ಕೂಡ ದೀವರ ಜನಾಂಗಕ್ಕೆ ಸೇರಿದವನು ಎಂದು ಕೆಳದಿ ಇತಿಹಾಸದಿಂದ ನಮಗೆ ತಿಳಿಯುತ್ತದೆ. ಹೀಗೆ ದೀವರು ಕೆಳದಿ ಮತ್ತು ವಿಜಯನಗರ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ, ಸೇನಾನಾಯಕರಾಗಿ ರಾಜ್ಯ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

                ಉತ್ತರಕನ್ನಡ ಜಿಲ್ಲೆಯ ನಾಮಧಾರಿ ಮಹಿಳೆಯರು ಹೇಳುವ ಅನೇಕ ಜನಪದ ಗೀತೆಗಳನ್ನು ಪ್ರೊ. ಎಲ್.ಆರ್. ಹೆಗಡೆಯವರು ಸಂಗ್ರಹಿಸಿ ‘ಪರಮೇಶ್ವರಿಯ ಹಾಡುಗಳು’ ಮತ್ತು ‘ಬೆಳ್ಳಿಯಮ್ಮನ ಹಾಡುಗಳು’ ಎಂಬ ಕೃತಿಗಳಲ್ಲಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕೆಲಸ ನಡೆಯಲಿಲ್ಲವೆಂದು ವಿಷಾದದಿಂದ ಹೇಳಬೇಕಾಗುತ್ತದೆ.

               

                ಕೆಲವು ಸಮಯ ಗಾಳಿಪುರ, ಜನ್ನೆಹಕ್ಕಲು, ಶಿರುವಾಳ, ಮನಮನೆ ಮುಂತಾದ ಹಳ್ಳಿಗಳಿಗೆ ಹೋಗಿ ಟೇಪ್‍ರೆಕಾರ್ಡ್‍ನಲ್ಲಿ ನೂರಾರು ಹಾಡುಗಳನ್ನು ಧ್ವನಿಮುದ್ರಿಸಿಕೊಂಡೆ. ನನ್ನ ಅನಾರೋಗ್ಯ, ಕೆಲಸದ ಒತ್ತಡ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಆಗುವ ವರ್ಗಾವಣೆಗಳಿಂದ ಧ್ವನಿಮುದ್ರಿಸಿಕೊಂಡಿರುವುದನ್ನು ರೀರೈಟ್ ಮಾಡಲಿಕ್ಕಾಗದೆ ಎಲ್ಲಾ ಹಾಳಾದವು. ಪಡಗೋಡು ಗ್ರಾಮದ ಮರತ್ತೂರು ಪಾರ್ವತಿ ಎಂಬುವವರು ನೂರಾರು ಒಗಟು, ಗಾದೆ, ಒಡಪುಗಳನ್ನು ಹೇಳಿದ್ದಾರೆ.

                ಸಾಗರ ತಾಲ್ಲೂಕು ಆನಂದಪುರ ಹೋಬಳಿಯ ಗೌತಮಪುರ ಗ್ರಾಮದ ಶ್ರೇಷ್ಠ ಡೊಳ್ಳು ಕಲಾವಿದ ದಿ. ಎಂ. ಕೊಲ್ಲಪ್ಪ ಎಂಬುವವರು ಡೊಳ್ಳಿನ ಪದಗಳನ್ನು ಹಾಡಿದ್ದಾರೆ. ಹೀಗೆ ದೀವರ ಸಮುದಾಯದಲ್ಲಿ ಅಪಾರ ಜನಪದ ಸಾಹಿತ್ಯಸಂಪತ್ತು ಇತ್ತು. ಶ್ರೇಷ್ಠತಮ ಗಾಯಕಿಯರೆಲ್ಲಾ ತಮ್ಮ ಹಾಡುಗಳನ್ನು ಒಡಲಲ್ಲಿ ತುಂಬಿಕೊಂಡು ಸ್ವರ್ಗಸ್ಥರಾಗಿದ್ದಾರೆ.

ಮೂಡಲಪಾಯ ಬಯಲಾಟ

                ಕರ್ನಾಟಕದ ಯಕ್ಷಗಾನ ಬಯಲಾಟಗಳಲ್ಲಿ ಪ್ರಮುಖವಾಗಿ ಕಂಡುಬರುವ ಎರಡು ಪ್ರಭೇದಗಳು-ಮೂಡಲಪಾಯ ಮತ್ತು ಪಡವಲಪಾಯ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಬಯಲಾಟವನ್ನು ಮೂಡಲಪಾಯವೆಂದು, ದಕ್ಷಿಣ ಮತ್ತು ಉತ್ತರಕನ್ನಡ ಜಿಲ್ಲೆ ಭಾಗದ ಬಯಲಾಟವನ್ನು ಪಡವಲಪಾಯವೆಂದೂ ಕರೆಯುತ್ತಾರೆ. ಉತ್ತರಕರ್ನಾಟಕದ ದೊಡ್ಡಾಟವನ್ನು ಮೂಡಲಪಾಯವೆಂದೇ ಕರೆಯುತ್ತಾರೆ. ವಾಸ್ತವವಾಗಿ ದಕ್ಷಿಣ ಮತ್ತು ಉತ್ತರಕರ್ನಾಟಕದ ಭಾಗದ ಬಯಲಾಟದ ರೂಪದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಆದರೂ ಅನುಕೂಲದ ದೃಷ್ಟಿಯಿಂದ ಉತ್ತರ ಸಂಪ್ರದಾಯ ಮತ್ತು ದಕ್ಷಿಣ ಸಂಪ್ರದಾಯವೆಂದು ಇಟ್ಟುಕೊಳ್ಳಬಹುದಾಗಿದೆ. ಮೂಡಲಪಾಯದಲ್ಲಿನ ದಕ್ಷಿಣ ಸಂಪ್ರದಾಯವನ್ನು ಶಿವಮೊಗ್ಗ, ತುಮಕೂರು, ಬೆಂಗಳೂರು, ಕೋಲಾರ, ಹಾಸನ, ಮಂಡ್ಯ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುರುತಿಸಬಹುದು. ಉತ್ತರ ಸಂಪ್ರದಾಯದ ಮೂಡಲಪಾಯವನ್ನು ಬಳ್ಳಾರಿ, ಧಾರವಾಡ, ವಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಬೆಳಗಾಂ ಜಿಲ್ಲೆಗಳಲ್ಲಿ ಕಾಣಬಹುದು.

                ಪಡವಲಪಾಯದ ಯಕ್ಷಗಾನ ಬಯಲಾಟಗಳನ್ನು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿರುವ ಹಳ್ಳಿಗಳಲ್ಲಿ ಅನೇಕ ವರ್ಷಗಳಿಂದ ಮೂಡಲಪಾಯ ಬಯಲಾಟಗಳು ತುಂಬಾ ಪ್ರಚಲಿತವಾಗಿದ್ದವು. ಈ ತಾಲ್ಲೂಕುಗಳಲ್ಲಿರುವ ದೀವರು ಮತ್ತು ಇತರೆ ಹಿಂದುಳಿದ ಸಮುದಾಯದವರು ಹೆಚ್ಚಾಗಿ ಮೂಡಲಪಾಯ ಬಯಲಾಟಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಸಾಗರ ಪಟ್ಟಣಕ್ಕೆ ಹತ್ತಿರವಿರುವ ಕುಗ್ವೆ, ಕಂಬಳಿಕೊಪ್ಪ, ಶಿರುವಾಳ, ಬರದವಳ್ಳಿ, ಶಿರವಂತೆ, ಕಾನ್ಲೆ, ಪಡಗೋಡು, ತಾಳಗುಪ್ಪ, ಮರತ್ತೂರು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕುಗಳ ಕೆಲವಾರು ಹಳ್ಳಿಗಳಲ್ಲಿ ದೀವರು ಮೂಡಲಪಾಯ ಬಯಲಾಟವನ್ನು ಉಳಿಸಿಕೊಂಡುಬಂದಿದ್ದರು. ಮೂಡಲಪಾಯ ಬಯಲಾಟ ಈ ಭಾಗದ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕಲೆಯಾಗಿ ಉಳಿದುಕೊಂಡಿತ್ತು. ಈಗ್ಯೆ ಐದಾರು ದಶಕಗಳ ಹಿಂದೆ ಸಾಗರ, ಸೊರಬ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಮೂಡಲಪಾಯ ಬಯಲಾಟ ತಂಡಗಳು ಇದ್ದವು. ಈ ಭಾಗದ ಮೂಡಲಪಾಯ ಬಯಲಾಟಗಳಲ್ಲಿ ಬರುವ ರಾಗಗಳು ಮತ್ತು ಕುಣಿತಗಳು ಉತ್ತರ ಮತ್ತು ದಕ್ಷಿಣ ಕರ್ನಾಟಕದ ದೊಡ್ಡಾಟಗಳಲ್ಲಿರುವಂತೆಯೇ ಇವೆ. ಮಲೆನಾಡಿನ ಭಾಗದಲ್ಲಿರುವ ಮೂಡಲಪಾಯ ಬಯಲಾಟಗಳು ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ವಲಸೆ ಬಂದವುಗಳಾಗಿವೆ.

                ಮೂಡಲಪಾಯದ ಮುಖ್ಯವಾದ ಪ್ರಸಂಗಗಳಾದ ಕರಿಬಂಟನ ಕಾಳಗ, ಮಣಿ ಮಲ್ಲಾಸುರ ವಧೆ, ಸುಗಂಧಪುಷ್ಟ ಹರಣ, ರಾಮಾಯಣ, ಕುರುಕ್ಷೇತ್ರ, ಕಂಸ ವಧೆ, ಮಾರುತಿ ಲಿಂಗ ಪ್ರದಾನ, ಪ್ರಮೀಳ ಬಬ್ರುವಾಹನ, ಲವಕುಶರ ಕಾಳಗ, ವೀರ ಅಭಿಮನ್ಯು ಕಾಳಗ, ರತಿ ಕಲ್ಯಾಣ, ತಾರಕಾಸುರ ವಧೆ, ಮೂರೂವರೆ ವಜ್ರಗಳು ಮುಂತಾದ ಬಯಲಾಟದ ಪ್ರಸಂಗಗಳು ಈ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿವೆ.

                ಕುಗ್ವೆಯ ಶ್ರೀ ರಾಮೇಶ್ವರ ಮೂಡಲಪಾಯ ಬಯಲಾಟ ಸಂಘದವರು ರತಿ ಕಲ್ಯಾಣ, ಸುಗಂಧಪುಷ್ಪ ಹರಣ, ಇಂದ್ರಜಿತು ಕಾಳಗ ಪ್ರಸಂಗಗಳ ಪ್ರಯೋಗಗಳನ್ನು ತುಂಬಾ ವರ್ಷಗಳವರೆಗೆ ಮಾಡಿದ್ದಾರೆ. ಶಿರವಂತೆಯ ತ್ರಿಪುರಾಂತಕೇಶ್ವರ ಬಯಲಾಟ ಸಂಘದವರು ತುಂಬಾ ಯಶಸ್ವಿಯಾಗಿ ಕರಿಬಂಟನ ಕಾಳಗವೆಂಬ ಪ್ರಸಂಗವನ್ನು ಪ್ರದರ್ಶಿಸುತ್ತಿದ್ದರು. ತಾಳಗುಪ್ಪಕ್ಕೆ ತುಂಬಾ ಹತ್ತಿರವಿರುವ ಪಡುಗೋಡು ತುಂಬಾ ಪುಟ್ಟ ಹಳ್ಳಿ. ಐವತ್ತು ವರ್ಷಗಳ ಹಿಂದೆ ರತಿ ಕಲ್ಯಾಣವೆಂಬ ಮೂಡಲಪಾಯ ಬಯಲಾಟವನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದರು. ನಾನು ಯುವಕನಾಗಿದ್ದಾಗ ನೋಡಿ ರೋಮಾಂಚನಗೊಳ್ಳುತ್ತಿದ್ದೆ. ಈ ಬಯಲಾಟವನ್ನು ಕಲಿಸಿದವರು ಒಬ್ಬ ನಿರಕ್ಷರಕುಕ್ಷಿಯಾದ ಮಾದನ ಹುಚ್ಚಪ್ಪ ಎಂಬುವವರು. ಇವರು ರತಿ ಕಲ್ಯಾಣ ಬಯಲಾಟದ ಪ್ರಸಂಗವನ್ನು ಸಂಭಾಷಣೆ ಮತ್ತು ಹಾಡುಗಳನ್ನು ಬರೀ ಮೌಖಿಕವಾಗಿ ಸ್ಮರಣಶಕ್ತಿಯಿಂದ ಹೇಳುತ್ತಿದ್ದರು. ಇವರ ತಂಡದಲ್ಲಿ ಕೌಂಡ್ಳಿಕನ ಪಾತ್ರವನ್ನು ಹಳ್ಳಿಗುಡ್ಡೆ ಕನ್ನಪ್ಪ ಎಂಬುವರು ತುಂಬಾ ಅದ್ಭುತವಾಗಿ ಪಾತ್ರ ನಿರ್ವಹಿಸುತ್ತಿದ್ದರು. ಹಾಸ್ಯ ಪಾತ್ರದಲ್ಲಿಯೂ ಕೂಡ ನಿಷ್ಣಾತರಾಗಿದ್ದರು. ಹೀಗೆ ತಾಳಗುಪ್ಪ ಸುತ್ತಮುತ್ತ ಇರುವ ಮಂಜಿನಕಾನು, ಮರತ್ತೂರು, ಬಲೆಗಾರು, ಹುಣಸೂರು, ಬರದವಳ್ಳಿ, ಮೆಳವರಿಗೆ, ಅದರಂತೆ, ಕೆಳದಿ, ಕಾಗೋಡು, ಹಿರೇನೆಲ್ಲೂರು, ಸೈದೂರು, ಸುಳ್ಳೂರು, ಸೂರಗುಪ್ಪೆ ಹೀಗೆ ಪ್ರತಿ ಹಳ್ಳಿಗಳಲ್ಲಿಯೂ ಬಯಲಾಟಗಳು ಪ್ರದರ್ಶನಗೊಳ್ಳುತ್ತಿದ್ದವು.

                ಸೊರಬ ತಾಲ್ಲೂಕು ಕುಬಟೂರು ಬಯಲಾಟದ ಕೇಂದ್ರವಾಯಿತು. ನಾನು ಅಕಾಡೆಮಿ ಸದಸ್ಯನಾಗಿದ್ದಾಗ ಕುಬಟೂರಿನ ಕೆ. ಮಲ್ಲಾರಪ್ಪ ಎಂಬುವವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೆ. ಕುಬಟೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಯಲಾಟಗಳು ಪ್ರದರ್ಶನಗೊಳ್ಳುತ್ತಿದ್ದವು. ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್. ಬಂಗಾರಪ್ಪನವರು ಬಯಲಾಟದ ಉತ್ತಮ ಕಲಾವಿದರಾಗಿದ್ದರು. ಸೊರಬ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಮೂಡಲಪಾಯ ಬಯಲಾಟಗಳು ಪ್ರದರ್ಶನಗೊಳ್ಳುತ್ತಿದ್ದವು. ಹೊಸನಗರ, ಸಿದ್ದಾಪುರ, ಶಿರಸಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಬಯಲಾಟಗಳು ಪ್ರದರ್ಶನಗೊಳ್ಳುತ್ತಿದ್ದವು.

                ತಾಳಗುಪ್ಪದ ಕೂಡ್ಲಿಮಠದಲ್ಲಿ ಮೂಡಲಪಾಯ ವೇಷಭೂಷಣಗಳಿದ್ದು ಈ ಭಾಗದ ಎಲ್ಲಾ ಬಯಲಾಟದ ತಂಡಗಳಿಗೆ ಬಾಡಿಗೆಗೆ ಕೊಡುತ್ತ್ತಿದ್ದರು ಎಂದು ಹೇಳಲಾಗುತ್ತಿದೆ. ಕೆಲವರು ಶಿರಾಳಕೊಪ್ಪದಿಂದ ಬಯಲಾಟದ ವೇಷಭೂಷಣಗಳನ್ನು ಬಾಡಿಗೆಗೆ ತರುತ್ತಿದ್ದರು. ನಾಗರಿಕತೆಯ ಪ್ರವೇಶ ಮತ್ತು ಚಲನಚಿತ್ರಗಳಿಂದ ಗ್ರಾಮದಲ್ಲಿರುವ ಅನೇಕ ಜನಪದ ಕಲೆಗಳು ಅವಸಾನ ಹಂತದಲ್ಲಿವೆ. ಕೆಲವು ಅವನತಿ ಕಂಡಿವೆ.

ಸಣ್ಣಾಟಗಳು

                ಉತ್ತರ ಕರ್ನಾಟಕದಲ್ಲಿ ಕಾಣಬರುವ ಸಣ್ಣಾಟಗಳು ಯಕ್ಷಗಾನ ಬಯಲಾಟದ ಅನುಕರಣೆಯಿಂದಲೇ ಹುಟ್ಟಿಕೊಂಡವುಳಾದರೂ ಇತ್ತೀಚಿನ ಕಂಪೆನಿ ನಾಟಕಗಳ ಪ್ರಭಾವಕ್ಕೆ ತುಂಬಾ ಒಳಗಾಗಿವೆ. ಇವುಗಳನ್ನು-

1) ವೈಷ್ಣವ ಸಣ್ಣಾಟಗಳು

2) ಶೈವ ಸಣ್ಣಾಟಗಳು

3) ಲೌಕಿಕ ಸಣ್ಣಾಟಗಳು

                ಎಂದು ವಿಂಗಡಿಸಲಾಗಿದೆ. ದೊಡ್ಡಾಟದಿಂದ ಬೇರ್ಪಡಿಸಿ ಹೇಳುವುದಕ್ಕಾಗಿಯೇ ಇದನ್ನು ಸಂಣಾಟವೆಂದು ಕರೆಯಲಾಗಿದೆ.

                ವೈಷ್ಣವ ಸಂಣಾಟಗಳಲ್ಲಿ ಭಕ್ತ ಪ್ರಹ್ಲಾದ, ರುಕ್ಮಿಣಿ ಸ್ವಯಂವರ ದಂತಕಥೆಗಳನ್ನು ಆಯ್ದುಕೊಳ್ಳುತ್ತಾರೆ. ಶ್ರೀಕೃಷ್ಣ ಪಾರಿಜಾತ-ಸಣ್ಣಾಟಗಳಲ್ಲಿ ಅತ್ಯಂತ ಪ್ರಮುಖವಾದ ಪ್ರಕಾರ. ಇದನ್ನು ಸಣ್ಣಾಟಗಳ ರಾಜ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಿರುವುದನ್ನು ಗಮನಿಸಿದಾಗ ಅದೇ ಒಂದು ಪ್ರಕಾರವೆಂಬಷ್ಟು ಸ್ಥಾನ ಪಡೆದಿದೆ.

                ಶೈವ ಸಂಣಾಟಗಳಲ್ಲಿ ಅಲ್ಲಮಪ್ರಭು, ನಿಜಗುಣ ಶಿವಯೋಗಿ, ತಿರುನೀಲಕಂಠ, ಮಹಾದೇವಿಯಕ್ಕ, ಶ್ರೀ ಬಸವೇಶ್ವರ, ಪಂಚಾಕ್ಷರಿ ಮಹಿಮೆ, ನಾಗಲಿಂಗಜ್ಜ, ಹೇಮರೆಡ್ಡಿ ಮಲ್ಲಮ್ಮ ಮುಖ್ಯವಾದವುಗಳು. ಲೌಕಿಕ ಸಂಣಾಟಗಳಲ್ಲಿ ಸಂಗ್ಯಾ-ಬಾಳ್ಯಾ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ರೂಪಸಿಂಗ್, ರಾಧಾನಾಟ, ಬಲವಂತ-ಬಸವಂತ ಮುಂತಾದವುಗಳು.

                ಸಾಮಗಾನ ಇತ್ತೀಚಿನ ಒಂದು ಪ್ರಕಾರ. ಕಂಪೆನಿ ನಾಟಕಗಳ ಪ್ರಭಾವದಿಂದ ಬೆಳಕಿಗೆ ಬಂದದ್ದು, ಕುಣಿತ ಇದರಲ್ಲಿ ಇರುವುದಿಲ್ಲ. ಈ ಒಂದು ಪ್ರಮುಖ ವ್ಯತ್ಯಾಸದ ಜೊತೆಗೇ ವೇಷಭೂಷಣ, ವಾದ್ಯವಿಶೇಷಗಳು, ರಂಗಸಜ್ಜಿಕೆ, ಸಂಭಾಷಣೆಯ ವೈಖರಿ ಇವುಗಳಲ್ಲಿಯೂ ಪ್ರಮುಖ ವ್ಯತ್ಯಾಸಗಳು ಕಾಣಬರುತ್ತವೆ. ಈ ಪ್ರಕಾರವು ಜನಪದ ನಾಟಕದಿಂದ ಪ್ರಭಾವಿತವಾಗಿ ಕವಲೊಡೆದುಬಂದಿದ್ದು, ಇದು ಹೆಚ್ಚು ಹೆಚ್ಚು ಆಧುನಿಕ ನಾಟಕಗಳ ಕಡೆ ವಾಲುತ್ತಿರುವುದನ್ನು ಗಮನಿಸಬಹುದು.

ಮಲೆನಾಡಿನ ಪ್ರಮುಖ ತಾಲ್ಲೂಕುಗಳಾದ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲ್ಲೂಕುಗಳಲ್ಲಿ ಈಗ್ಯೆ ಐವತ್ತು ವರ್ಷಗಳ ಹಿಂದೆ ಅಪರೂಪದ ಸಣ್ಣಾಟದ ಪ್ರಕಾರ ಹೆಚ್ಚು ಜನಪ್ರಿಯವಾಗಿತ್ತು. ಮೂಡಲಪಾಯ ಬಯಲಾಟದ ಪ್ರಕಾರವೂ ಕೂಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹಳ್ಳಿಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಮಲೆನಾಡಿನ ಸಂಣಾಟಗಳಿಗೆ ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳ ಕಿನ್ನರಿ ಜೋಗಿಗಳ ಪ್ರಭಾವವಿರುವುದನ್ನು ಗಮನಿಸಬಹುದು. ದೊಡ್ಡಾಟದ ವೇಷಭೂಷಣಗಳಿಗೆ ಹಳ್ಳಿಗರು ಹೆಚ್ಚು ಖರ್ಚು ಮಾಡಬೇಕಾಗಿತ್ತು ಮತ್ತು ಅಭ್ಯಾಸ ಮಾಡುವುದು ಕಷ್ಟವಾಗುತ್ತಿತ್ತು. ವೃತ್ತಿ ಗಾಯಕರಾದ ಮತ್ತು ಸಂಚಾರಿಗಳಾದ ಕಿನ್ನರಿ ಜೋಗಿಗಳು ಧಾರವಾಡ ಜಲ್ಲೆಯ ತಿಳುವಳ್ಳಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೆಲವು ಹಳ್ಳಿಗಳಿಂದ ಸಾಗರ, ಸೊರಬ ತಾಲ್ಲೂಕಿನ ಹಳ್ಳಿಗಳಿಗೆ ಸುಗ್ಗಿ ಕಾಲದಲ್ಲಿ ಬೇಡಲು ಬರುತ್ತಿದ್ದರು. ಈ ಭಾಗದ ಗ್ರಾಮೀಣ ಜನರು ತಮ್ಮ ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಜೋಗೇರಾಟವನ್ನು ಆಡಿಸುತ್ತಿದ್ದರು. ಜೋಗಿಗಳಿಗೆ ಈ ಭಾಗದ ಗ್ರಾಮೀಣ ಜನರಲ್ಲಿ ಆತ್ಮೀಯ ಬಾಂಧವ್ಯ ಇತ್ತು. ಸುಗ್ಗಿಕಾಲದಲ್ಲಿ ಪ್ರತಿವರ್ಷ ಈ ಭಾಗಕ್ಕೆ ಬಂದರೆ ಎರಡು-ಮೂರು ತಿಂಗಳು ಇಲ್ಲಿಯೇ ಉಳಿಯುತ್ತಿದ್ದರು. ಯಾರದ್ದಾದರೂ ಮನೆಯ ಚೌಕಿಯಲ್ಲೋ ಅಥವಾ ಯಾವುದಾದರೂ ಗ್ರಾಮದ ದೇವಸ್ಥಾನದಲ್ಲಿಯೋ ತಮ್ಮ ಸಾಮಾನುಗಳನ್ನು ಇಟ್ಟು ಬಿಡಾರ ಮಾಡುತ್ತಿದ್ದರು. ಹಗಲೆಲ್ಲಾ ಭತ್ತ ವಕ್ಕುವ ಕಣಜಗಳಿಗೆ ಹೋಗಿ ಭತ್ತವನ್ನು ಕೇಳಿ ತೆಗೆದುಕೊಂಡುಬಂದು ಬಿಡಾರ ಸೇರುತ್ತಿದ್ದರು.

                ಆ ಕಾಲದಲ್ಲಿ ಕಿನ್ನರಿ ಜೋಗಿಗಳು ಹೇಳುವ ಹಾಡುಗಳು, ಕಿನ್ನರಿ ಕಾವ್ಯಗಳು, ಗೀಗೀ ತತ್ವಪದಗಳು, ಲಾವಣಿಗಳನ್ನು ಕೇಳಲು ಹಳ್ಳಿಯ ಜನ ಮುಗಿಬೀಳುತ್ತಿದ್ದರು. ಜೋಗಿಗಳು ಬೆಳತನಕ ಲಕ್ಷಾಪತಿ ರಾಜನ ಕಥೆ, ಶಂಕಿನಕುಮಾರ, ರಾಜಹಂಸ-ಪರಮಹಂಸ ಮತ್ತು ಪತಿವ್ರತೆಯರ ಕಥೆಗಳನ್ನು ಸಣ್ಣಾಟಕ್ಕೆ ರೂಪಾಂತರಿಸಿ ಸಂಭಾಷಣೆ, ಹಾಡು, ನೃತ್ಯಗಳನ್ನು ಸೇರಿಸಿ ಕೆಲವು ಹಳ್ಳಿಗಳಲ್ಲಿ ಬಯಲಾಟ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಇವರು ನಡೆಸಿದ ಸಣ್ಣಾಟಗಳು ಗ್ರಾಮೀಣ ಜನರ ಜೀವನದಲ್ಲಿ ಹೆಚ್ಚು ಪ್ರಭಾವವನ್ನು ಬೀರಿದವು. ಆಸಕ್ತಿ ಇರುವ ಹಳ್ಳಿಯ ಯುವಕರಿಗೆ ಹುಚ್ಚು ಹಿಡಿಸಿದವು.

                ನಂತರ ಸಾಗರ, ಸೊರಬ ತಾಲ್ಲೂಕುಗಳ ಪ್ರತಿಯೊಂದು ಹಳ್ಳಿಯಲ್ಲಿಯೂ ಸಣ್ಣಾಟವನ್ನು ಕಲಿಯತೊಡಗಿದರು. ಮಲೆನಾಡನ ಸಂಣಾಟಗಳು ಕಿನ್ನರಿ ಜೋಗಿಗಳು ಸೃಷ್ಟಿಸಿದ ಒಂದು ಉತ್ತಮವಾದ ಜನಪದ ಕಲಾಪ್ರಕಾರ ಎಂದು ಹೇಳಬಹುದು. ‘ಜೋಗೇರು ಧಾಟಿ’ ಎಂಬ ಹೊಸ ರಾಗ ಪದ್ಧತಿಯೇ ಪ್ರಾರಂಭವಾಯಿತು. ಹೆಚ್ಚು ಖರ್ಚಿಲ್ಲದೆ ಭರ್ಜರಿಯಾದ ವೇಷಭೂಷಣಗಳಿಲ್ಲದೆ ಅತ್ಯಂತ ಸರಳವಾಗಿ ಪ್ರದರ್ಶಿಸುವ ಕಲಾ ಮಾಧ್ಯಮವೆಂದು ಹೇಳಬಹುದು.

                ಈ ಸಣ್ಣಾಟಗಳಿಗೆ ಮುಖವೀಣೆ, ತಬಲಾ, ಹಾರ್ಮೋನಿಯಂ ವಾದ್ಯಗಳನ್ನು ಬಳಸುತ್ತಿದ್ದರು. ರಂಗದ ಬಲಭಾಗದಲ್ಲಿ ಮುಮ್ಮೇಳ ಮತ್ತು ಹಿಮ್ಮೇಳದವರಿರುತ್ತಿದ್ದರು. ಎಡಭಾಗದಿಂದ ಪಾತ್ರಗಳು ಪ್ರವೇಶಿಸಿ ಬಲಭಾಗದಲ್ಲಿ ಹೋಗುತ್ತಿದ್ದವು. ಸಣ್ಣಾಟದ ಹಾಡುಗಳು ಶಿಷ್ಟ ಸಂಗೀತದ ಯಾವ ಪ್ರಭಾವಕ್ಕೂ ಒಳಗಾಗದ ಜನಪದ ಸರಳಮಟ್ಟಿನವು ಆಗಿದ್ದವು. ರಾಜನ ಪಾತ್ರಕ್ಕೆ ತಲೆಗೆ ಒಂದು ಚಿಕ್ಕ ಕಿರೀಟ, ಹಿಂಭಾಗಕ್ಕೆ ಗೌನು. ಬಣ್ಣದ ಉದ್ದನೆಯ ಜುಬ್ಬಾ, ಬಿಳಿಯ ಪಂಚೆಯನ್ನು ಕಚ್ಚೆ ಕಟ್ಟುತ್ತಿದ್ದರು. ಮಲೆನಾಡಿನಲ್ಲಿ ಹೆಚ್ಚು ಜನಪ್ರಿಯವಾದ ಸಣ್ಣಾಟಗಳು ಯಾವುವೆಂದರೆ-ಸತ್ಯವತಿ, ಸವತಿ ಮತ್ಸರ, ತಿರುನೀಲಕಂಠ, ಮಹಾದೇವಿ, ಸತಿ ಅನಸೂಯ, ಸತಿ ಸಾವಿತ್ರಿ, ಮಾನವತಿ, ಸುಂದರವಲ್ಲಿ, ಪ್ರೇಮಲೀಲಾ, ಮದನಸುಂದರಿ, ರೇಣುಕಾ ಮಹಾತ್ಮೆ, ಶಿಬಿ ಚಕ್ರವರ್ತಿ, ಚೆನ್ನಮ್ಮನ ಕಥೆ, ಹೇಮರೆಡ್ಡಿ ಮಲ್ಲಮ್ಮ, ರಾಜಹಂಸ-ಪರಮಹಂಸ, ಸಂಗ್ಯಾ-ಬಾಳ್ಯಾ ಮುಂತಾದವು. ಸಂಗ್ಯಾ-ಬಾಳ್ಯಾದ ಕಥೆಯನ್ನು ವಿರೂಪಗೊಳಿಸದೆ, ಹಾಡಿನ ರಾಗಗಳನ್ನು ಮಾತ್ರ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.

                ಉತ್ತರಕರ್ನಾಟಕದ ಸಣ್ಣಾಟಗಳಲ್ಲಿ ಸಂಗ್ಯಾ-ಬಾಳ್ಯಾ, ತಿರುನೀಲಕಂಠ, ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಕಥಾನಕಗಳು ಮಲೆನಾಡಿನಲ್ಲಿಯೂ ಹೆಚ್ಚು ಜನಪ್ರಿಯವಾಗಿದ್ದವು. ಸೊರಬ ತಾಲ್ಲೂಕು ಬಾಡದಬೈಲು ಗ್ರಾಮದ ಯುವಕರು ಸಂಗ್ಯಾ-ಬಾಳ್ಯಾ ಸಣ್ಣಾಟವನ್ನು ತುಂಬಾ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರು. ಇವರು ಸಾಗರ, ಸಿದ್ದಾಪುರ, ಸೊರಬ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಸೊರಬ ತಾಲ್ಲೂಕು ಬೇರೆ ಬೇರೆ ಹಳ್ಳಿಗಳಲ್ಲಿ ಮಹಾದೇವಿ ಕಥೆ, ತಿರುನೀಲಕಂಠ, ರೇಣುಕಾ ಮಹಾತ್ಮೆ ಮತ್ತು ಜೋಗೇರು ರೂಪಿಸಿದ ಅನೇಕ ಸಣ್ಣಾಟಗಳು ಪ್ರದರ್ಶನಗೊಳ್ಳುತ್ತಿದ್ದವು. ಶಿರವಂತೆಯ ಹತ್ತಿರವಿರುವ ಜನ್ನೆಹಕ್ಕಲು ಗ್ರಾಮದಲ್ಲಿ ತಿರುನೀಲಕಂಠನ ಕಲೆ ಪ್ರದರ್ಶನ ಮಾಡುವುದರಲ್ಲೂ ಪ್ರಸಿದ್ಧಿ ಪಡೆದಿದ್ದರು. ಲಂಡಿಗೆರೆಯಲ್ಲಿ ‘ಮದನಸುಂದರಿ’ ಎಂಬ ಸಣ್ಣಾಟವನ್ನು ತುಂಬಾ ಸುಂದರವಾಗಿ ಅಭಿನಯಿಸುತ್ತಿದ್ದರು. ಶಿರವಂತೆಯ ಇನ್ನೊಂದು ಹತ್ತಿರದ ಹಳ್ಳಿ ಗಾಳೀಪುರದಲ್ಲಿ ಅರವತ್ತೈದು ವರ್ಷಗಳ ಹಿಂದೆ ‘ಸತ್ಯ ಹರಿಶ್ಚಂದ್ರ’ ಎಂಬ ಸಣ್ಣಾಟವನ್ನು ಅಭಿನಯಿಸುತ್ತಿದ್ದರು. ನಾನು ಬಾಲ್ಯದಲ್ಲಿ ನೋಡಿದ ನೆನಪು ಈಗಲೂ ನನ್ನ ಮನಸ್ಸಿನ ಆಳದಲ್ಲಿ ನಿಂತಿದೆ. ಏಕೆಂದರೆ ಅವರೆಲ್ಲ ಅನಕ್ಷರಸ್ಥರಾದರೂ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಸಾಗರದ ಸಮೀಪವಿರುವ ಕುಗ್ವೆ ಗ್ರಾಮದಲ್ಲಿ ಮೂಡಲಪಾಯ ಬಯಲಾಟಗಳ ಜೊತೆಗೆ ಹೇಮರೆಡ್ಡಿ ಮಲ್ಲಮ್ಮ, ಶಿಬಿ ಚಕ್ರವರ್ತಿ, ಸವತಿ ಮತ್ಸರ ಎಂಬ ಸಣ್ಣ ಹಾಡಿಕೆಯ ಆಟಗಳನ್ನು ಆಡುತ್ತಿದ್ದರು. ಐವತ್ತರ ದಶಕದಲ್ಲಿ ಮಾಜಿ ಸಚಿವರು, ದೀವರು ಜನಾಂಗದ ನಾಯಕರಾದ ಕಾಗೋಡು ತಿಮ್ಮಪ್ಪನವರು ಪ್ರೌಢಶಿಕ್ಷಣವನ್ನು ಪಡೆಯುತ್ತಿರುವಾಗ ಸಾಗರಕ್ಕೆ ಹತ್ತಿರವಿರುವ ಶಿರುವಾಳ ಗ್ರಾಮದಲ್ಲಿದ್ದು ಸಾಗರದ ಪುರ ಪ್ರೌಢಶಾಲೆಗೆ ನಡೆದುಬರುತ್ತಿದ್ದರು. ಇವರು ಶಿರುವಾಳದ ಯುವಕರನ್ನು ಸೇರಿಸಿ ಒಂದು ರಂಗತಂಡವನ್ನು ಕಟ್ಟಿ ಆ ತಂಡದಿಂದ ‘ಸುಂದರವಲ್ಲಿ’ ಎಂಬ ಸಣ್ಣಾಟವನ್ನು ಕಲಿತು ಕೆಲವು ಕಡೆ ಪ್ರದರ್ಶನ ಮಾಡಿದರು. ಸಾಗರದ ಸಣ್ಣಮನೆ ಸೇತುವೆ ಹತ್ತಿರ ಒಂದು ಪ್ರದರ್ಶನ ನೀಡಿದ್ದರು. ನಾನು ಕುಗ್ವೆಯಿಂದ ನೋಡಲು ಹೋಗಿದ್ದೆ. ಆಟದಲ್ಲಿ ಕಥಾನಾಯಕಿಯಾದ ಸುಂದರವಲ್ಲಿಯ ಸತ್ಯವನ್ನು ಪರೀಕ್ಷಿಸುವ ಒಬ್ಬ ಋಷಿಯ ಪಾತ್ರವನ್ನು ತಿಮ್ಮಪ್ಪನವರು ನಿರ್ವಹಿಸುತ್ತಿದ್ದರು. ತಿಮ್ಮಪ್ಪನವರು ಅದ್ಭುತವಾಗಿ ಅಭಿನಯಿಸುತ್ತಿದ್ದರು.

                ಕೆಳದಿ ಗ್ರಾಮದಲ್ಲಿ ಆ ಕಾಲದಲ್ಲಿ ಶ್ರೀ ರಾಮೇಶ್ವರ ಬಯಲಾಟ ಸಂಘ ಎಂಬ ರಂಗಸಂಸ್ಥೆ ಇತ್ತು. ಈ ಸಂಸ್ಥೆಯಲ್ಲಿ ಕೆಳದಿ, ತೆರವಿನಕೊಪ್ಪ, ಬಂದಗದ್ದೆ, ಮಾಸೂರು, ಅಡ್ಡೇರಿ, ಹಾರೇಗೊಪ್ಪ ಹಾಗೂ ನೇರಲಿಗೆ ಹೀಗೆ ಏಳು ಹಳ್ಳಿಗಳ ಕಲಾವಿದರಿದ್ದರು. ದೀವರು, ವಕ್ಕಲಿಗ, ಅಗಸ, ಬಡಗಿ, ಕ್ಷೌರಿಕ, ಮುಸ್ಲಿಂ, ಬೋವಿ, ಕುಂಬಾರ, ಶೆಟ್ಟಿ, ಬಣಜಿಗ ಹೀಗೆ ಒಂಭತ್ತು ಜಾತಿಯ ಕಲಾವಿದರಿರುವಂತಹ ಒಂದು ವಿಶಿಷ್ಟ ಜನಪದ ಬಯಲಾಟದ ರಂಗ ತಂಡ. ಇವರು ಸತಿ ಸಾವಿತ್ರಿ, ಸುಂದರವಲ್ಲಿ, ಮಾನವತಿ ಎಂಬ ಸಣ್ಣಾಗಳನ್ನು ಅಭ್ಯಾಸ ಮಾಡಿದ್ದರು. ಈ ತಂಡದಲ್ಲಿ ಪ್ರತಿಯೊಬ್ಬ ಕಲಾವಿದರೂ ಪಾತ್ರದ ಔಚಿತ್ಯವನ್ನು ಅರಿತು ಅಭಿನಯಿಸುತ್ತಿದ್ದರು. ಈ ಮೂರು ನಾಟಕಗಳ ಕಥಾನಾಯಕಿಯರಾದ ಸಾವಿತ್ರಿ, ಸುಂದರವಲ್ಲಿ, ಹೊಯ್ಯಮಾಲೆ ಸ್ತ್ರೀಪಾತ್ರಗಳನ್ನು ನನ್ನ ಚಿಕ್ಕಪ್ಪಂದಿರಾದ ಮಂಡಗಳಲೆ ಕನ್ನಪ್ಪ ಮತ್ತು ಮಂಡಗಳಲೆ ರಾಮಪ್ಪ ಇವರು ತುಂಬಾ ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಕೆಳದಿ ಊರಿನಲ್ಲಿ ಹರೇನು ಕೆರಿಯಪ್ಪ, ಹಾಸ್ಯ ಪಾತ್ರದ ಗಾಡಿ ಭೂತಪ್ಪ, ಮಂಡಗಳಲೆ ಕನ್ನಪ್ಪ ಮತ್ತು ಮಂಡಗಳಲೆ ರಾಮಪ್ಪ ಇವರುಗಳು ಯಾವ ವೃತ್ತಿನಾಟಕ ತಂಡಗಳ ಕಲಾವಿದರಿಗೆ ಯಾವುದೇ ರೀತಿಯಲ್ಲಿಯೂ ಕಡಿಮೆಯಿರಲಿಲ್ಲ. ಇವರುಗಳು ಬಾಲ್ಯದಲ್ಲಿ ನನ್ನ ಮೇಲೆ ತುಂಬಾ ಪ್ರಭಾವವನ್ನು ಬೀರಿದ್ದಾರೆ. ಭಾಗವತರಾಗಿ ಅಡ್ಡೇರಿ ದೊಡ್ಡಣ್ಣ ಯಾನೆ ಕನ್ನಗೌಡ ಇದ್ದರು. ಇವರಿಗೆ ನಾನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯನಾಗಿರುವಾಗ 1987ರಲ್ಲಿ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಳದಿಯ ಶ್ರೀ ರಾಮೇಶ್ವರ ಜಾನಪದ ಬಯಲಾಟ ಸಂಘ ಇಡೀ ದೀವರ ಜನಾಂಗದಲ್ಲಿಯೇ ಮಾದರಿಯಾಗಿತ್ತು. ಸತ್ಯವಾನ ಸಾವಿತ್ರಿ ಬಯಲಾಟದಲ್ಲಿ ಯಮದೂತರು ಸತ್ಯವಾನನ ಪ್ರಾಣವನ್ನು ಎಳೆಯಲು ಮುಂದಾದಾಗ ರಂಗದ ಹಿಂಭಾಗದಿಂದ ಭುಗ್ ಎಂದು ಬೆಂಕಿ ಬರುವಂತೆ ಮಾಡುತ್ತಿದ್ದರು. ಈ ತಂಡದ ಪ್ರಯೋಗಗಳು ಜೀವನದಲ್ಲಿ ಮರೆಯಲಾರದ ಹಾಗೆ ಉಳಿದುಕೊಂಡಿವೆ.

                ಹೀಗೆ ಮಲೆನಾಡಿನಲ್ಲಿ ದೀವರು ಜನಾಂಗದವರು ವಾಸ ಮಾಡುವ ಹಳ್ಳಿಗಳಲ್ಲಿ ಹಬ್ಬ-ಹರಿದಿನ, ದೇವರ ಕಾರ್ಯ, ತೇರು, ಜಾತ್ರೆಗಳಲ್ಲಿ ಮೂಡಲಪಾಯ ಬಯಲಾಟಗಳು ಮತ್ತು ಸಣ್ಣಾಟಗಳು ಪ್ರದರ್ಶನಗೊಳ್ಳುತ್ತಿದ್ದವು. ಜೊತೆಗೆ ಜನರಿಗೆ ಮನರಂಜನೆಯನ್ನುಂಟುಮಾಡುವ ಪ್ರಮುಖ ಸಾಧನಗಳಾಗಿದ್ದವು.

 

ಪಡವಲಪಾಯ ಯಕ್ಷಗಾನ 

ದೀವರ ಜನಾಂಗದ ಯಕ್ಷಗಾನ ಮೇಳಗಳು

                ಯಕ್ಷಗಾನ ಒಂದು ಜೀವಂತ ಕಲೆ. ಇದು ಕಥಾ ಸಾಹಿತ್ಯದ ಜೊತೆಗೆ ಜನರಿಗೆ ನೈತಿಕ ಪ್ರಜ್ಞೆಯನ್ನು ಮೂಡಿಸಿ ಭಾರತೀಯ ಪುರಾಣಗಳನ್ನು ಪರಿಚಯಿಸಿ ನಮ್ಮ ದೇಶದ ಭವ್ಯ ಸಂಸ್ಕøತಿಯನ್ನು ಬೆಳೆಸಿ, ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

                ಮನಸ್ಸಿಗೆ ರಂಜನೆಯನ್ನು ನೀಡುವುದಲ್ಲದೆ ಬುದ್ಧಿಗೆ ಪೋಷಣೆ ನೀಡಿ ಜ್ಞಾನದ ಪರಿಧಿಯನ್ನು ಹೆಚ್ಚಿಸಲು ತುಂಬಾ ಸಹಕಾರಿಯಾದ ಕಲೆ. ಕರ್ನಾಟಕದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಕಲೆ ಸಂಗೀತ, ನೃತ್ಯ, ಮಾತುಗಾರಿಕೆಯನ್ನು ಒಳಗೊಂಡು ಭವ್ಯವಾದ ವೇಷಭೂಷಣಗಳನ್ನು ಹೊಂದಿರುತ್ತದೆ.

                ಯಕ್ಷಗಾನ-ನಮ್ಮ ನಾಡಿನ ಹೆಮ್ಮೆಯ ಕಲೆ. ಇದರಲ್ಲಿ ಕಾಣಸಿಗುವ ವೈವಿಧ್ಯಪೂರ್ಣವಾದ ಕುಣಿತದ ಕೌಶಲ್ಯ, ಸಂಭಾಷಣಾ ಶೈಲಿಯಲ್ಲಿರುವ ಸೊಗಸು, ವೇಷಭೂಷಣಗಳಲ್ಲಿರುವ ವಿಶೇಷ ವೈಖರಿ ಹಾಗೂ ಅಭಿನಯದಲ್ಲಿರುವ ಆಕರ್ಷಣೆಗಳಿಂದಾಗಿ ಇದು ಜನಪ್ರಿಯವಾಗಿ ಮೆರೆಯುತ್ತಿದೆ.

                ಕರ್ನಾಟಕದ ಜನಪದ ರಂಗಕಲೆಗಳಲ್ಲಿ ಹೆಚ್ಚು ಶ್ರೀಮಂತವಾಗಿ ಬೆಳೆದ ಕಲೆ ಎಂದರೆ ಪಡವಲಪಾಯ ಯಕ್ಷಗಾನ. ಯಕ್ಷಗಾನವನ್ನು ಒಂದು ಕಾಲದಲ್ಲಿ ಹಳ್ಳಿಯವರು ದೊಡ್ಡಕುಂಡೇರು ಆಟ, ಚಪ್ಪರಬಿ ಆಟ ಎಂದು ಪರಿಹಾಸ್ಯ ಮಾಡುತ್ತಿದ್ದರು. ಕೇವಲ ನಲವತ್ತು ವರ್ಷಗಳಲ್ಲಿ ಈ ಕಲೆ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. ರಾಜ್ಯದ ಗಡಿಯನ್ನು ದಾಟಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ. ಆಗಾಗ್ಯೆ ಪಡವಲಪಾಯ ಯಕ್ಷಗಾನ ತಂಡಗಳು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಪ್ರದರ್ಶನ ನೀಡುತ್ತವೆ. ಈಗ್ಯೆ ನಲವತ್ತು ವರ್ಷಗಳ ಹಿಂದೆ ಗ್ರಾಮದ ಜನರ ಅನಾದರಣೆಗೊಳಗಾಗಿದ್ದ ಕಲೆ ಇಂದು ವೃತ್ತಿಮೇಳಗಳಾಗಿ ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಪ್ರದರ್ಶನಗೊಂಡು ಸಾವಿರಾರು ಪ್ರೇಕ್ಷಕರನ್ನು ರಂಜಿಸಿ ಕಲಾವಿದರಿಗೆ ಮತ್ತು ಸಂಘಟಕರಿಗೆ ಹಣ ಸಂಪಾದನೆಯ ಒಂದು ಪ್ರಮುಖ ವೃತ್ತಿಯಾಗಿದೆ. ಯಕ್ಷಗಾನದ ಮುಖ್ಯ ಕಲಾವಿದರು ಮೂವತ್ತು, ನಲವತ್ತು ಸಾವಿರ ರೂಪಾಯಿಗಳನ್ನು ಆರು ತಿಂಗಳಿಗೆ ಸಂಭಾವನೆ ಪಡೆಯುತ್ತಿದ್ದಾರೆ.

                ಕರ್ನಾಟಕದ ಜನಪದ ರಂಗಕಲೆಗಳಾದ ಮೂಡಲಪಾಯ ಯಕ್ಷಗಾನ ಮತ್ತು ಸಣ್ಣಾಟಗಳು ಅವಸಾನದ ಹಂತದಲ್ಲಿವೆ. ಪಡವಲಪಾಯ ಯಕ್ಷಗಾನ ಮಾತ್ರ ಏಕೆ ಬೆಳೆದಿದೆ ಎಂಬುದನ್ನು ಜನಪದರು ಮತ್ತು ವಿದ್ವಾಂಸರು ಯೋಚನೆ ಮಾಡಬೇಕಾದ ವಿಷಯ. ನಾಡಿನ ಉದ್ಧಾಮ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಶಿವರಾಮ ಕಾರಂತರು ಈ ಕಲೆಯನ್ನು ಕುರಿತು ಸಂಶೋಧನೆಯನ್ನು ಮಾಡಿ, ಸಂಸ್ಕರಿಸಿದರು, ಉದ್ಗ್ರಂಥವನ್ನು ರಚಿಸಿದರು. ನೃತ್ಯ, ಗೀತೆ, ಅಭಿನಯ, ಮಾತುಗಾರಿಕೆಗಳನ್ನು ಪರಿಷ್ಕರಿಸಿ ಹೊಸ ಸಂಸ್ಕಾರವನ್ನು ನೀಡಿ ತಮ್ಮದೇ ಆದ ತಂಡಗಳನ್ನು

ಸಂಘಟಿಸಿ ಹೊರರಾಜ್ಯಗಳಿಗೆ, ಹೊರ ದೇಶಗಳಿಗೆ ಹೋಗಿ ಪ್ರದರ್ಶನ ನೀಡಿದರು. ಪಡವಲಪಾಯ ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ನಾಗರಿಕ ಜನ ಒಪ್ಪುವಂತೆ, ಮೆಚ್ಚುವಂತೆ ಆ ಕಲೆಯಲ್ಲಿರುವ ಓರೆಕೋರೆಗಳನ್ನು ತಿದ್ದಿ ತೀಡಿದರು. ಯಕ್ಷಗಾನದ ಎಲ್ಲಾ ಪ್ರಕಾರಗಳಿಗೆ ಒಂದು ಚೌಕಟ್ಟನ್ನು ನಿರ್ಮಿಸಿದರು. ಹಾಗಾಗಿ ಈ ಕಲೆ ವಿಶ್ವವಿಖ್ಯಾತವಾಗಿ ಬೆಳೆಯುತ್ತಿದೆ. ಮತ್ತೊಂದು ಕಾರಣ ವಿದ್ಯಾವಂತರು ಮತ್ತು ಮೇಲ್ವರ್ಗದ ಕಲಾವಿದರು ಈ ಕಲೆಯನ್ನು ಬೆಳೆಸುವಲ್ಲಿ ಹೆಚ್ಚು ಶ್ರಮ ವಹಿಸಿ ದುಡಿಯುತ್ತಿದ್ದು, ಕೆಲವರಂತೂ ತಮ್ಮ ಜೀವನವನ್ನೇ ಈ ಕಲೆಗೆ ಸಮರ್ಪಣೆ ಮಾಡಿಕೊಂಡು ಹೊಸ ಕಲಾವಿದರಿಗೆ ತರಬೇತಿ ನೀಡುತ್ತಾ ಸದಾಕಾಲ ಯಕ್ಷಗಾನದ ಬಗ್ಗೆ ಅಧ್ಯಯನ, ಚಿಂತನ-ಮಂಥನ ಮಾಡುತ್ತಾ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ.

                ಕರ್ನಾಟಕದ ಉಳಿದ ಜನಪದ ರಂಗಕಲೆಗಳಾದ ದಕ್ಷಿಣಕರ್ನಾಟಕದ ಮೂಡಲಪಾಯವಾಗಲೀ, ಉತ್ತರಕರ್ನಾಟಕದ ದೊಡ್ಡಾಟವಾಗಲಿ ಹಾಗೂ ಸಣ್ಣಾಟವಾಗಲಿ ಪಡವಲಪಾಯ ಯಕ್ಷಗಾನದ ಮಟ್ಟಕ್ಕೆ ಬೆಳೆಯಲಿಲ್ಲ. ಕಾರಣ ಆ ಕಲಾಪ್ರಕಾರ ಕೈಗೆತ್ತಿಕೊಂಡು ಜಾನಪದ ವಿದ್ವಾಂಸರು ಇದುವರೆಗೂ ಪರಿಷ್ಕರಿಸಿಲ್ಲ, ಸಂಸ್ಕರಿಸಿಲ್ಲ. ಎಲ್ಲಾ ಅವಿದ್ಯಾವಂತ ಕಲಾವಿದರು. ಹೀಗಾಗಿ ಈ ಕಲೆಗಳು ಅವಸಾನದ ಅಂಚಿನಲ್ಲಿವೆ.

                ನಮ್ಮ ಸಮಸ್ತ ಜನಪದ ಕಲೆಗಳು ಮತ್ತು ರಂಗಕಲೆಗಳನ್ನು ನಾಗರಿಕ ಜನರನ್ನು ರಂಜಿಸುವಂತೆ ಪರಿಷ್ಕರಿಸಿ, ಸಂಸ್ಕರಿಸಬೇಕು. ಈಗಿರುವ ಸ್ಥಿತಿಯಲ್ಲಿ ಪ್ರದರ್ಶನ ನೀಡಿದರೆ ಇನ್ನು ಮುಂದೆ ಯಾರೂ ಇವುಗಳನ್ನು ನೋಡುವುದಿಲ್ಲ. ರಾಜ್ಯದ ಹಲವು ಕಡೆ ಜಾನಪದ ರಂಗನಾಟಕಗಳ ಕಾರ್ಯಾಗಾರಗಳನ್ನು ನಡೆಸಿ, ರಂಗತಂತ್ರಗಳನ್ನು ಬಲ್ಲಂತಹ ಉತ್ತಮ ನಿರ್ದೇಶಕರಿಂದ ನಿರ್ದೇಶನ ನೀಡಿಸಿ ಮೂಡಲಪಾಯ, ದೊಡ್ಡಾಟ, ಸಣ್ಣಾಟಗಳನ್ನು ಹೊಸ ರೀತಿಯಲ್ಲಿ ಪ್ರಯೋಗಿಸುವ ಬಗ್ಗೆ ಕಾರ್ಯೋನ್ಮುಖರಾಗಬೇಕಾಗಿದೆ.

                ಪಡವಲಪಾಯ ಯಕ್ಷಗಾನದಲ್ಲಿ ಬಡಗುತಿಟ್ಟು ಮತ್ತು ತೆಂಕುತಿಟ್ಟುಗಳೆಂದು ಎರಡು ಪ್ರಭೇದಗಳಿವೆ. ಸಭಾಯತ ಮಟ್ಟು ಎಂಬ ಇನ್ನೊಂದು ಪ್ರಭೇದ ಇತ್ತು. ಇದು ಉತ್ತರಕನ್ನಡ ಜಿಲ್ಲೆಯ ಕರ್ಕಿ ಹಾಸ್ಯಗಾರ ಮನೆತನದವರಾದ ಪರಮಯ್ಯ ಮತ್ತು ವರದಯ್ಯ ಎಂಬ ಹಾಸ್ಯಗಾರ ಕುಟುಂಬದವರಿಂದ ಪ್ರಾರಂಭವಾಗಿದ್ದು. ಆದರೆ ಈಗ ಪ್ರಚಲಿತವಿಲ್ಲ. ಯಕ್ಷಗಾನದ ಬಡಗುತಿಟ್ಟಿನ ಮೂಲ ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳಲ್ಲಿ ಅರ್ಧಭಾಗ. ಕರಾವಳಿಗೆ ಹೊಂದಿಕೊಂಡ ಮಲೆನಾಡು ಪ್ರದೇಶಗಳಲ್ಲಿ ಮಾತ್ರ ಬಡಗುತಿಟ್ಟಿನ ಮೇಳಗಳಿವೆ. ಯಕ್ಷಗಾನದ ಬಡಗುತಟ್ಟಿನ ಮೂಲ ರಾಷ್ಟ್ರಪ್ರಶಸ್ತಿ ವಿಜೇತ ಗಾಣಿಗರಾಮ ಅವರ ಕುಟುಂಬದಿಂದ ಬಡಗುತಿಟ್ಟು ಆರಂಭವಾಯಿತು ಎಂದು ಯಕ್ಷಗಾನ ತಿಳಿದವರು ಕೆಲವರ ಅಭಿಮತ. ಇವರು ಅಭಿನಯಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟರು.

                ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಬಡಗುತಿಟ್ಟಿನ ಯಕ್ಷಗಾನ ಹೆಚ್ಚು ಪ್ರಚಲಿತವಾಗಿದೆ. ಕರಾವಳಿ ಮತ್ತು ಮಲೆನಾಡಿನ ಉತ್ತರದಿಕ್ಕಿನ ಪ್ರದೇಶದಲ್ಲಿರುವ ಯಕ್ಷಗಾನ ಮೇಳಗಳಲ್ಲಿ ವ್ಯತ್ಯಾಸಗಳೂ ತುಂಬಾ ಇವೆ. ಬಡಗುತಿಟ್ಟಿನ ಯಕ್ಷಗಾನ ಮೇಳಗಳಲ್ಲಿ ಭಾಗವತರು ತಾಳವನ್ನು ಉಪಯೋಗಿಸುತ್ತಾರೆ. ಭಾಗವತರೇ ಮೊದಲನೇ ವೇಷಧಾರಿ. ಅವರೇ ಪ್ರದರ್ಶನದ ಪಾತ್ರದಾರರೂ ಕೂಡ. ತಾಳವೇ ಪ್ರಮುಖವಾಗಿರುವ ಹಿಮ್ಮೇಳದಲ್ಲಿ ಮೃದಂಗ ಮತ್ತು ಚಂಡೆ ವಾದನಗಳು ಪೂರಕವಾಗಿರುತ್ತವೆ. ಪಾತ್ರಧಾರಿಯ ಯೋಗ್ಯತೆಯನ್ನು ತಿಳಿದು ಅವನ ನೃತ್ಯ, ಹಾವ-ಭಾವಾಭಿನಯಗಳಿಗೆ ಅವಕಾಶ ಕಲ್ಪಿಸಿಕೊಂಡು ಭಾಗವತರು ಪ್ರಧಾನ ಪಾತ್ರ ವಹಿಸುತ್ತಾರೆ. ಕತೆಯ ಓಟದಲ್ಲಿ ಅವರದ್ದೇ ಹಿಡಿತವಿರುತ್ತದೆ.

                ಸುಮಾರು ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಶೃತಿ ಬಗ್ಗೆ ಹಾರ್ಮೋನಿಯಂ ಬದಲಾಗಿ ಪುಂಗಿ ಬುರುಡೆ-ಸೋರೆಕಾಯಿಗೆ ಜೀವಾಳ ಕಡ್ಡಿ (ನಳಿಕೆ) ಹಾಕಿ ತಯಾರು ಮಾಡಿದ ವಾದ್ಯ, ಈಗಿನ ಚಂಡೆ ಬದಲಿಗೆ ‘ತಾಸಮರ’ ಎಂಬ ಚರ್ಮವಾದ್ಯವನ್ನು ಉಪಯೋಗಿಸುತ್ತಿದ್ದರು. ತಾಸಮರವನ್ನು ಕೈರಾ ಅಥವಾ ಕಕ್ಕೆ ಜಾತಿಯ ಮರದಲ್ಲಿ ಒಂದು ಅಡಿ ವ್ಯಾಸದ, ಆರು ಅಡಿ ಆಳದ ಗೂಡನ್ನು ತಯಾರಿಸಿ, ಗೂಡಿನ ಒಂದು ಭಾಗಕ್ಕೆ ಎತ್ತಿನ ಚರ್ಮದಿಂದ ಮುಚ್ಚಿಗೆ ಹಾಕುತ್ತಿದ್ದರು. ಬೆಳಕಿಗೆ ತಾಮ್ರದ ಹರಿವಾಣದಲ್ಲಿ ಹರಳೆಣ್ಣೆ ಹಾಕಿ ಬಟ್ಟೆಯಿಂದ ಹೊಸೆದ ಬತ್ತಿ ಹಾಕಿ ಸುಮಾರು ನಾಲ್ಕು ಅಡಿ ಎತ್ತರದ ಬಾಳೆಮರದ ಕಂಬದ ಮೇಲಿಟ್ಟು ದೀಪ ಹಚ್ಚುತ್ತಿದ್ದರು. ರಂಗದ ಮುಂದೆ ಒಂದು ಮತ್ತು ಎಡ-ಬಲ ಭಾಗದಲ್ಲಿ ಒಂದೊಂದರಂತೆ ಮೂರು ದೀಪಗಳನ್ನು ಇಡುತ್ತಿದ್ದರು.

                ಹಿಮ್ಮೇಳದವರು ಈಗಿನಂತೆ ಕುಳಿತುಕೊಳ್ಳದೆ ಬೆಳಗಿನವರೆಗೂ ನಿಂತುಕೊಂಡೇ ಪದ್ಯ ಹೇಳುತ್ತಿದ್ದರು. ತಾಸಮರ ಮತ್ತು ಮೃದಂಗಗಳನ್ನು ಕೊರಳಿಗೆ ಕಟ್ಟಿಕೊಂಡು ಬಾರಿಸುತ್ತಿದ್ದರು. ಭಾಗವತನಾದವನು ಎಲ್ಲಾ ಪ್ರಸಂಗದ ಪದ್ಯಗಳನ್ನು ಕಂಠಪಾಠ ಮಾಡಬೇಕಾಗಿತ್ತು. ಭಾಗವತರೂ ಒಬ್ಬ ವೇಷಧಾರಿಯಂತೆ ನಿಲುವಂಗಿಯನ್ನು ತೊಟ್ಟು ತಲೆಗೆ ಜರಿ ಮುಂಡಾಸನ್ನು ಸುತ್ತಿ ಹೆಗಲ ಮೇಲೆ ಚಂದ್ರವಲ್ಲಿ ಧಾವಳಿ ಇಳಿಬಿಟ್ಟುಕೊಳ್ಳುತ್ತಿದ್ದರು. ರಾತ್ರಿ ಆಟ ಪ್ರಾರಂಭವಾಗುವ ಕಾಲದಲ್ಲಿ ಗಣಪತಿ ಪೂಜೆಯಿಂದ ಪ್ರಾರಂಭಿಸಿ ಬೆಳಗ್ಗೆ ಮುಕ್ತಾಯವಾಗುವ ಕಾಲದವರೆಗೂ ಒಬ್ಬನೇ ಭಾಗವತ ಪ್ರಸಂಗದ ಪದ್ಯಗಳನ್ನು ಹಾಡಬೇಕಾಗಿತ್ತು. ಧ್ವನಿವರ್ಧಕಗಳ ಸಹಾಯವಿಲ್ಲದಿದ್ದರೂ ತಮ್ಮ ಕಂಠಮಾಧುರ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

                ಚೌಕಿ ಮನೆಯಲ್ಲಿ ಹಣತೆ ದೀಪವನ್ನು ಹಚ್ಚಿ ವೇಷಧಾರಿಗಳು ಎಲ್ಲರೂ ಎದ್ದುನಿಂತು ಹೂವಿನಿಂದ ಶೃಂಗರಿಸಲ್ಪಟ್ಟ ಎತ್ತರದ ಬೆತ್ತದ ಪೆಟ್ಟಿಗೆ ಮೇಲಿಟ್ಟ ಮುಖ್ಯ ವೇಷಧಾರಿಯ ಕಿರೀಟವನ್ನೇ “ಶ್ರೀ ಗಣಪತಿ” ಎಂದು ಭಾವಿಸಿ ಹಿಮ್ಮೇಳದವರೊಡನೆ ಗಣಪತಿ ಸ್ತುತಿ ಮಾಡುತ್ತಿದ್ದರು. ಅನಂತರ ವಜ್ರ ಎಂಬ ಆಯುಧವನ್ನು ಕೋಡಂಗಿ ವೇಷದವನು ಹಚ್ಚಿದ ದೀಪದ ಹಣತೆಯನ್ನು ಹಿಡಿದುಕೊಂಡು ‘ರಂಗಸ್ಥಳಕ್ಕೆ ಅಪ್ಪಣೆಯಾ’ ಎಂದು ಕೇಳುವುದರೊಂದಿಗೆ ಚೌಕಿ ಮನೆಯಿಂದ ಹೊರಟು ರಂಗಪ್ರವೇಶ ಮಾಡುತ್ತಿದ್ದರು.

                ಕಸ್ತೂರಿ ಕೋಲಾಹಲೋ

                ಅರಿತಿಮಿರ ಮಾರ್ತಾಂಡೊ

                ಗಂಡಬೇರುಂಡೊ

                ಎಂಬುದಾಗಿ ಜೈಕಾರ ಹಾಕುತ್ತಾ ನಡೆವ ಕೋಡಂಗಿಯನ್ನು ಮುಂದಿಟ್ಟುಕೊಂಡು ಹಿಮ್ಮೇಳದವರು ರಂಗಪ್ರವೇಶ ಮಾಡುತ್ತಿದ್ದರು. ಅಲ್ಲಿ ಹಚ್ಚಿದ ಎಲ್ಲಾ ದೀಪಗಳನ್ನು ಉಜ್ವಲಗೊಳಿಸಿ, ಮತ್ತೊಮ್ಮೆ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಭಗವತಿ, ಮೂಕಾಂಬಿಕೆ, ಭೂಮಿದೇವಿ, ಅಷ್ಟದಿಕ್ಕುಗಳು ಮತ್ತು ಕುಳಿತಿರುವ ಸಭಿಕರಿಗೆ ಬೇರೆ ಬೇರೆ ಪದ್ಯಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಅನಂತರ ಮೊದಲು ಬಾಲಗೋಪಾಲ ವೇಷ ‘ಹರೇ ರಮಣ’ ಎಂಬ ಪದ್ಯದಿಂದ ಪ್ರವೇಶವಾಗುತ್ತಿದ್ದವು. ಪುನಃ ‘ಗಣಪತಿ ಸಭೆಗೈತಂದಂ’ ಪದ್ಯವನ್ನು ಹೇಳಿದ ತಕ್ಷಣ ಚೌಕಿಯ ಮನೆಯಲ್ಲಿದ್ದ ಗಣಪತಿಯ ಕಿರೀಟವನ್ನು ತಂದು ರಂಗಸ್ಥಳದಲ್ಲಿಟ್ಟು ‘ಗಜಮುಖದವಗೆ... ಆರತಿ ಎತ್ತಿರೆ’ ಎಂಬ ಪದ್ಯವನ್ನು ಹೇಳಿ ಆರತಿ ಎತ್ತುತ್ತಿದ್ದರು. ಅನಂತರ ವಿಕಟ ವೇಷ, ಪೀಠಿಕಾ ಸ್ತ್ರೀವೇಷಗಳು ತೆರೆಯ ಹಿಂದೆ ನಿಂತು ಗೆಜ್ಜೆ ಕಟ್ಟಿದ ಕಾಲಿನ ಉಂಗುಷ್ಠವನ್ನು ಭೂಮಿಯಲ್ಲಿ ಕೆರೆದು ಗೆಜ್ಜೆಯ ನಾದ ಮಾಡುತ್ತಿರುವಾಗ ಭಾಗವತರು ‘ಬಾ ಬಾ ಚಂದಭಾಮಾ’ ಎಂಬ ಪದ್ಯದಿಂದ ಸ್ತ್ರೀವೇಷವನ್ನು ರಂಗಕ್ಕೆ ಕರೆಯುತ್ತಿದ್ದರು. ಇಲ್ಲಿಯೂ ಕೆಲವು ದೇವರಪದ್ಯಗಳನ್ನು ಹೇಳಿ ಸಮಯಕ್ಕೆ ತಕ್ಕಂತೆ ಸ್ತ್ರೀವೇಷಗಳನ್ನು ಕುಣಿಸಿ ಪ್ರಸಂಗ ಪೀಠಿಕೆಗೆ ಬರುತ್ತಿದ್ದರು. ಸಾಮಾನ್ಯವಾಗಿ ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾಗುವ ಆಟದಲ್ಲಿ 12.30ರವರೆಗೂ ನಡೆಯುವ ಈ ಕಾರ್ಯಕ್ರಮಗಳಿಗೆ ಸಭಾ ಪದ್ಯ ಅಥವಾ ಪೀಠಿಕಾ ಪ್ರಕಾರವೆಂದು ಕರೆಯುತ್ತಿದ್ದರು. ನಂತರ ಒಡ್ಡೋಲಗದ ಮೂಲಕ ಕಥೆ ಪ್ರಾರಂಭವಾಗುತ್ತಿತ್ತು.

ಯಕ್ಷಗಾನದ ವಾದ್ಯಗಳು

                ಪಂಚಲೋಹದ ತಾಳ, ಮೃದಂಗ, ಚಂಡೆ, ಶೃತಿಗೆ ಹಾರ್ಮೋನಿಯಂ ಬಳಸುತ್ತಾರೆ.

ಮೃದಂಗ

                ಮೃದಂಗದ ಕಳಸಿಗೆ ಕಕ್ಕೆ, ಕದ್ರೆ, ಬೀಟೆ, ಹಲಸಿನ ಮರವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಮೃದಂಗದ ಉದ್ದ ಒಂದೂಮುಕ್ಕಾಲು ಅಡಿಯಿಂದ ಎರಡು ಅಡಿ, ಅಗಲ ಹತ್ತು ಇಂಚು, ಸುತ್ತಳತೆ ಒಂದೂವರೆ ಅಡಿ, ತುದಿಭಾಗ ಒಂದು ಅಡಿ ಇರುತ್ತದೆ.

                ಎರಡೂ ಭಾಗಕ್ಕೆ ಆಡು, ಕುರಿಯ ಚರ್ಮವನ್ನು ಹೊದಿಸುತ್ತಾರೆ. ಎಮ್ಮೆಕರದ ಚರ್ಮ ಅಥವಾ ಎತ್ತಿನ ಚರ್ಮದ ಬಾರು ಮೃದಂಗವನ್ನು ಬಿಗಿಯಲು ಬಳಸಲಾಗುತ್ತದೆ.

                ಬಲಭಾಗಕ್ಕೆ ಕರ್ಣ, ಕಬ್ಬಿಣದ ಕಿಟ್ಟದ ಪುಡಿ, ಗುಲಗುಂಜಿ, ಅನ್ನದಿಂದ ಅಂಟು ಮಾಡಿ ತಿಕ್ಕಿ ತಯಾರಿಸುತ್ತಾರೆ. ಎಡಭಾಗಕ್ಕೆ ಅನ್ನ ಮತ್ತು ಬೂದಿ ಮಿಶ್ರ ಮಾಡಿ ಪಾಕ ಮಾಡಿ ಬೋನಾ (ಬಾನಾ) ಮಾಡಿ ಹಚ್ಚಿಕೊಳ್ಳುತ್ತಾರೆ.

ಚಂಡೆ

                ಚಂಡೆಯನ್ನು ಕಕ್ಕೆ, ಬಗಿನೆ, ಹಲಸು, ಬೀಟೆ ಇವುಗಳಲ್ಲಿ ಯಾವುದಾದರೂ ಒಂದು ಜಾತಿ ಮರದಿಂದ ತಯಾರಿಸುತ್ತಾರೆ. ಎರಡೂ ಕಡೆ ಆಡಿನ ಚರ್ಮವನ್ನು ಬಳಸುತ್ತಾರೆ. ಆರು ತಿಂಗಳು ವಯಸ್ಸಿನ ಒಳಗಿನ ಎಮ್ಮೆಕರುವಿನ ಚರ್ಮದ ನೂಲಿನ ದಾರದಿಂದ ಬಿಗಿಯುತ್ತಾರೆ. ಕಬ್ಬಿಣದ ರಿಂಗಿಗೆ ಚರ್ಮ ಸುತ್ತಿ ಹೊಲಿದು ಮುಚ್ಚಿಗೆ ಅಟ್ಟೆಗಳನ್ನು ಬಿಗಿಯುತ್ತಾರೆ.

                ಚಂಡೆಯ ಉದ್ದ ಒಂದೂವರೆಯಿಂದ ಒಂದೂಮುಕ್ಕಾಲು ಅಡಿ, ಅಗಲ ಒಂದು ಅಡಿ, ಸುತ್ತಳತೆ ಎರಡು ಅಡಿ ಇರುತ್ತದೆ.

ಯಕ್ಷಗಾನದ ಬಡಗುತಿಟ್ಟಿನ ವೇಷಭೂಷಣಗಳು

1) ಕಿರೀಟ ವೇಷ                

2) ಕ್ಯಾದಿಗೆ ಮುಂದಲೆ ವೇಷ                        

3) ಮುಂಡಾಸು ವೇಷ

4) ಬಣ್ಣದ ವೇಷ

5) ಸ್ತ್ರೀ ವೇಷ

6) ಹಾಸ್ಯ ವೇಷ

7) ಮುನಿ ವೇಷ

 

1) ಕಿರೀಟ ವೇಷ

                ತಲೆಗೆ ಕಿರೀಟ. ಕಿರೀಟದ ಮುಂಭಾಗದಲ್ಲಿ ಮುಂದಲೆ ಕೇದಿಗೆ ಇರುತ್ತದೆ. ಕಿರೀಟದ ತುದಿಯಲ್ಲಿ ನವಿಲುಗರಿ, ಕಿವಿಗೆ ಕರ್ಣಕುಂಡ. ಕಿರೀಟದ ಹಿಂಭಾಗದಲ್ಲಿ ಚೌರಿ. ಕೊರಳಿಗೆ, ಕೊರಳಟ್ಟಿಗೆ, ಕಿರೀಟದ ಮುಂಭಾಗದಲ್ಲಿ ಕ್ಯಾದಿಗೆ, ಮೇಲ್ಭಾಗದಲ್ಲಿ ತಾವರೆಯಿರುತ್ತದೆ. ಎದೆಗೆ ಎದೆಹಾರ, ಭುಜಕ್ಕೆ ಭುಜಕೀರ್ತಿ, ಕೈಗೆ ಕೈಕಟ್ಟು, ತೋಳಿಗೆ ಬಾಜುಬಂದಿ, ಸೊಂಟಕ್ಕೆ ಸೊಂಟಪಟ್ಟಿ, ವೀರಗಾಸೆ, ಕಾಲಿಗೆ ಕಾಲ್ಕಡಗ, ಗೆಜ್ಜೆ, ಸೀರೆ-18 ಮೊಳದ ಚೌಕಳಿ ಸೀರೆ, ದಗಲೆ ಜುಬ್ಬಾ, ಪೈಜಾಮ (ಕಪ್ಪು), ಹೆಗಲಿಗೆ ಹೆಗಲವಲ್ಲಿ, ಹಿಂಭಾಗದಲ್ಲಿ ಕಿರೀಟದ ಚೌರಿಯ ಕೆಳಭಾಗದಿಂದ ಸೊಂಟದವರೆಗೆ ಪಾಗಿನಸೀರೆ.

 

2) ಕ್ಯಾದಿಗೆ ಮುಂದಲೆ ವೇಷ

                ಹುಲ್ಲು ಮತ್ತು ಬಟ್ಟೆಯಿಂದ ತಯಾರಿಸಿದ ಅಟ್ಟೆಗಳು. ಪಗಡೆ ಐದರಿಂದ ಹದಿಮೂರು ಅಟ್ಟೆಗಳವರೆಗೆ ಇರುತ್ತದೆ. ಅಟ್ಟೆಯ ಮೇಲೆ ಬಿಳಿಹುಲ್ಲಿನ ಜಡೆ. ಕೆಂಪು ಅಥವಾ ಕಪ್ಪುಬಟ್ಟೆಯಿಂದ ಮುಸುಕು (ಮುಚ್ಚುತ್ತಾರೆ). ಕೆಂಪು ಮುಸುಕಿಗೆ ಹಳದಿ ಮತ್ತು ಕಪ್ಪು ಬಣ್ಣದ ಟೇಪು. ಕಪ್ಪು ಮುಸುಕಿಗೆ ಕೆಂಪು ಮತ್ತು ಹಳದಿಬಣ್ಣದ ಟೇಪು ಸುತ್ತುತ್ತಾರೆ. ಜೊತೆಗೆ ಜರಿ ಗೋಟು (ಕೋರು). ಟೇಪಿನ ಮಧ್ಯೆ ಇದನ್ನು ಸುತ್ತುತ್ತಾರೆ. ಕ್ಯಾದಿಗೆ ಮುಂದಲೆ ಮೇಲುಗಡೆ ತುರಾಯಿ-ಮರದ್ದು ಅಥವಾ ಬೆಳ್ಳಿಯದ್ದು ಹಾಕಿರುತ್ತಾರೆ. ಹಿಂಭಾಗದಲ್ಲಿ ಮುಡಿ ಕಾಣದಂತೆ ಮುಡಿಕ್ಯಾದಿಗೆ ಕಟ್ಟುತ್ತಾರೆ. ತುರಾಯಿಗಳಿಗೆ ಉಲ್ಲನ್ ಹೂವುಚೆಂಡು ಸುತ್ತುಗಳಿರುತ್ತವೆ.

3) ಮುಂಡಾಸು

                ಹದಿಮೂರು ಅಟ್ಟೆ ಹಾಕಿ ಕ್ಯಾದಿಗೆ ಮುಂದಲೆಯಂತೆ ಕಟ್ಟುವುದು-ಮುಂಡಾಸಿನ ಪಾಗು ಕಟ್ಟುತ್ತಾರೆ.

4) ಬಣ್ಣದ ವೇಷ

                ಬಣ್ಣದ ತಟ್ಟಿಯನ್ನು ಹಿಂಭಾಗದಲ್ಲಿ ಕಟ್ಟುತ್ತಾರೆ. ಕಿರೀಟವಿರುತ್ತದೆ. ಪಾಗಿನ ಬದಲು ಬಿಳೀಚೌರಿ ಸೊಂಟಕ್ಕೆ ಬರುವಷ್ಟು ಉದ್ದವಾಗಿರುತ್ತದೆ. ಚೌರಿಯನ್ನು ಕೂದಲು ಮತ್ತು ನಾರು ಬಳಸಿ ಮಾಡುತ್ತಿದ್ದರು. ಇತ್ತೀಚೆಗೆ ಪ್ಲಾಸ್ಟಿಕ್ ಚೌರಿ ಬಂದಿರುತ್ತದೆ. ಮುಖಕ್ಕೆ ಅಕ್ಕಿಹಿಟ್ಟನ್ನು ಸುಣ್ಣದಲ್ಲಿ ಸೇರಿಸಿ ಕಲಸಿ ಅರೆದು ಅಂಟು ಮಾಡಿ, ತೆಂಗಿನಕಡ್ಡಿಯಿಂದ ಮುಖಕ್ಕೆ ಚಿಟ್ಟೆ ಇಡುತ್ತಾರೆ. ಕೋರೆಹಲ್ಲು ದಾರ ರಟ್ಟಿನಿಂದ ತಯಾರಿಸಿ ಕಟ್ಟಿರುತ್ತಾರೆ. ಚೌರಿಯಿಂದ ಮೀಸೆಯನ್ನು ಕಟ್ಟಿರುತ್ತಾರೆ.

5) ಸ್ತ್ರೀವೇಷ

                ತಲೆಗೆ ಟೋಪನ್ನು ಹಾಕಿ ಜಡೆ ಹೆಣೆದಿರುತ್ತಾರೆ. ತಲೆಗೆ ಶಿರೋಭೂಷಣ, ಮುಂದಲೆಗಳನ್ನು ಇಟ್ಟು ಕಿವಿಗೆ ವಾಲೆ ಕುಚ್ಚ ಕಟ್ಟಿರುತ್ತಾರೆ. ಮೂಗಿಗೆ ಮುಕುರ, ಕೈಗೆ ಕೈಕಟ್ಟು, ಸೊಂಟಕ್ಕೆ ವಡ್ಯಾಣ, ಡಾಬುಗಳು, ಕಾಲಿಗೆ ಗೆಜ್ಜೆ, ಸೀರೆ, ಕುಪ್ಪಸ ತೊಡುತ್ತಾರೆ.

* ಮೀನಾಕ್ಷಿ-ಪ್ರಮೀಳೆ ವೇಷ : ಕಸೆ ವೇಷ

                ಸೀರೆಯನ್ನು ಕಚ್ಚೆ ಹಾಕಿ ಎದೆಭಾಗಕ್ಕೆ ಕಸೆ ದಟ್ಟಿಯನ್ನು ಇಳಿಬಿಡುತ್ತಾರೆ. ಉಳಿದ ವೇಷಭೂಷಣಗಳು ಮೇಲಿನಂತೆ. ಕೈಯಲ್ಲಿ ಆಯುಧಗಳು-ಬಿಲ್ಲು, ಬಾಣ, ಕತ್ತಿ. (ಆಯಾಯ ಪಾತ್ರಗಳಿಗೆ ತಕ್ಕಂತೆ)

* ಕೋರೆ ಪಗಡೆ ವೇಷ

                ಮುಂಡಾಸು ವೇಷದಂತೆ ಬಲಭಾಗದ ಕಿವಿ ಮುಚ್ಚಿರುತ್ತದೆ. ವಾರೆಯಾಗಿ (ಓರೆ) ಇರುತ್ತದೆ. ಪಗಡೆಗೆ ಟೇಪು ಮಾತ್ರ ಸುತ್ತಿರುತ್ತಾರೆ. ಜರಿ ಕೋರು ಸುತ್ತಿರುವುದಿಲ್ಲ. ಕರ್ಣಕುಂಡಲ ಮತ್ತು ಕೇದಿಗೆ ಇರುವುದಿಲ್ಲ. ಭುಜಕೀರ್ತಿ ಮತ್ತು ಬಾಜುಬಂದಿ ಇರುವುದಿಲ್ಲ. ಪಾಗು ವಸ್ತ್ರದ ಬದಲು ಸೊಪ್ಪಿನ ಸರ ಹೆಗಲಿಗೆ, ಸೊಂಟಕ್ಕೆ ಕಟ್ಟುತ್ತಾರೆ. ಪಗಡೆಯ ತುದಿಯಲ್ಲಿ ತುರಾಯಿ ಇರುವುದಿಲ್ಲ. ಮುಡಿ ಕೇದಿಗೆ ಬದಲು ಕೆಂಜಳಿಲಿನ ಬಾಲ ಸಿಕ್ಕಿಸುತ್ತಾರೆ.

6) ಹಾಸ್ಯ ವೇಷ

                ಪೈಜಾಮ, ನಿಲುವಂಗಿ ಅಥವಾ ಜುಬ್ಬಾ, ತಲೆಗೆ ಉದ್ದನೆಯ ಟೋಪಿ.

ರಾಜನ ಪಾತ್ರದ ವೇಷಗಳು

                ಪೈಜಾಮ ಹಾಕಿ ಸೀರೆ ಕಟ್ಟುತ್ತಾರೆ. ಮೈಗೆ ಬಟ್ಟೆ ಹಾಕಿ ದಪ್ಪ ಮುಡಿ ಮೇಲೆ ನಿರಿ ಅಂಗಿ ಹಾಕಿರುತ್ತಾರೆ. ಎದೆಗೆ ಎದೆಕಟ್ಟು, ಮಣಿಯ ಆಭರಣ, ಕೈಗೆ ಕೈಕಟ್ಟುಗಳು, ತಲೆಗೆ ಟೋಪನ್ನು, ಕಾಲಿಗೆ ಕಾಲ್ಕಡಗ, ಗೆಜ್ಜೆ, ಹಿಂಭಾಗದಲ್ಲಿ ಬೆನ್ನಲ್ಲಿ ಕಟ್ಟಿ ಇಳಿಬಿಡುತ್ತಾರೆ.

7) ಮುನಿ ವೇಷ

                ತಲೆಗೆ ಮುಡಿ ಕಟ್ಟುತ್ತಾರೆ. ಕಾವಿ ಪಂಚೆ ಕಚ್ಚೆ ಹಾಕಿ ಉಡುತ್ತಾರೆ. ಮೈಗೆ ಕಾವಿ ಜುಬ್ಬಾ ಹಾಕುತ್ತಾರೆ. ಕೈಗೆ ಕಮಂಡಲ ಮತ್ತು ದಂಡ. ಕೊರಳಲ್ಲಿ ರುದ್ರಾಕ್ಷಿಸರ, ಕೈಯಲ್ಲಿ ಜಪಸರ, ಕೈಗೆ ಕಪ್ಪು ಹುರಿಕಟ್ಟು.

ನಾರದ ವೇಷ

                ತಲೆಗೆ ಹೂವುಚೆಂಡು, ಚಿಟಿಗೆ, ನವಿಲುಗರಿಯ ಕಟ್ಟು, ಜಪಸರ, ಕೈಗೆ ಹೂವಿನಕಟ್ಟು.

ಯಕ್ಷಗಾನದ ಆಯುಧಗಳು

                ಬಿಲ್ಲು, ಬಾಣ, ಗದೆ, ಚಕ್ರ, ಶೂಲ, ಕತ್ತಿ. ಎಲ್ಲಾ ಆಯುಧಗಳು ಮರದಿಂದ ತಯಾರಿಸಿದವುಗಳು. ಆಭರಣಗಳು ಮರದಿಂದ ತಯಾರಿಸಿದವುಗಳು.

ಪ್ರಸಾದನ

                ಬಿಳಿ ಜಿಂಕ್ ಪೌಡರು (ಸಪೇತ - ಸಫೇದ್ ಹಿಂದಿಪದ), ಹಳದಿ ಮತ್ತು ಕೆಂಪು ಜಿಂಕ್ ಪೌಡರು ಮೂರನ್ನೂ ಮಿಶ್ರ ಮಾಡಿ ಕೊಬ್ರಿ ಎಣ್ಣೆಯಲ್ಲಿ ಕಲೆಸಿದಾಗ ಗುಲಾಬಿ ಬಣ್ಣದ ದ್ರಾವಣ ತಯಾರಾಗುತ್ತದೆ. ಅದನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆ ತೈಲಾಂಶ ತೆಗೆಯಲು ಮುಖಕ್ಕೆ ಹಚ್ಚುವ ಪೌಡರ್ ಹಚ್ಚುತ್ತಾರೆ. ಕಣ್ಣು, ಹುಬ್ಬುಗಳಿಗೆ ಕಾಡಿಗೆ ಹಚ್ಚುತ್ತಾರೆ. ತುಟಿಗೆ ಕೆಂಪು ಜಿಂಕ್ ಪೌಡರು ಹಚ್ಚುತ್ತಾರೆ. ಸಫೇದ್, ಕಾಡಿಗೆ, ಹಳದಿ ಸೇರಿಸಿ ನೀಲಿಬಣ್ಣ ತಯಾರಿಸುತ್ತಾರೆ-ವಿಷ್ಣು, ರಾಮ, ಕೃಷ್ಣ, ಈಶ್ವರ, ಯಮ, ಕೆಲವು ರಕ್ಕಸ ಪತ್ರಗಳಿಗೆ ಬಳಸುತ್ತಾರೆ. ಪಾತ್ರಗಳ ಔಚಿತ್ಯಕ್ಕೆ ಅನುಗುಣವಾಗಿ ಸೌಮ್ಯ ಮತ್ತು ರೌದ್ರತೆಗೆ ನೀಲಿ, ಕೆಂಪು, ಹಳದಿ, ಬಣ್ಣಗಳಿಂದ ರೇಖೆಗಳನ್ನು ಬರೆಯುತ್ತಾರೆ. ಮೀಸೆಗೆ ಕ್ರೇಪ್ ಹೇರನ್ನು ಗಮ್‍ನಿಂದ (ಸ್ಪಿರಿಟ್, ರಾಳ ಮಿಶ್ರ ಮಾಡಿದ್ದು) ಅಂಟಿಸುತ್ತಾರೆ.

ರಂಗಸಜ್ಜಿಕೆ

                ಆರು ಕಂಬಗಳಿರುತ್ತವೆ. ಮೇಲ್ಭಾಗದಲ್ಲಿ ಮೇಲ್ಛಾವಣಿ ಹಾಕುತ್ತಾರೆ. ಬಟ್ಟೆ, ಸೊಪ್ಪು, ಅಡಿಕೆಸೋಗೆ ರಂಗ 14ಘಿ18 ಅಡಿ ಉದ್ದ ಅಗಲ ಇರುತ್ತದೆ. ಹಿಂಭಾಗದಲ್ಲಿ ಮೇಳದ ಹೆಸರಿನ ಪರದೆ ಇರುತ್ತದೆ. ಹಿಮ್ಮೇಳದವರಿಗೆ ಕುಳಿತುಕೊಳ್ಳಲು ಹಡಿಮಂಚ ಇರುತ್ತದೆ. ಹಡಿಮಂಚದ ಮುಂಭಾಗದಲ್ಲಿ ರಥ ಅಥವಾ ಸಿಂಹಾಸನವಿರುತ್ತದೆ.

ನೃತ್ಯ  ಸ್ವರೂಪ

                ಸಪ್ತ ತಾಳಗಳಿಗೆ ಅನುಗುಣವಾಗಿ ಹೆಜ್ಜೆಗಾರಿಕೆ ಇರುತ್ತದೆ. ಕೋರೆತಾಳ, ತ್ರಿಪುಟ, ಆದಿತಾಳ, ಜಂಪೆ, ರೂಪಕ (ಮಟ್ಟೆ), ಏಕತಾಳ, ಅಷ್ಟತಾಳಮುದ್ರೆಗಳಿರುತ್ತವೆ.

ಯಕ್ಷಗಾನದ ಪ್ರಸಂಗಗಳು

                ರಾಮಾಯಣ, ಮಹಾಭಾರತ, ಭಾಗವತ, ಶಿವಪುರಾಣ, ಸ್ಕಂದಪುರಾಣ, ದೇವಿಪುರಾಣ.

ರಾಮಾಯಣ

                ಪಟ್ಟಾಭಿಷೇಕ, ಪಂಚವಟಿ, ವಾಲಿ ವಧೆ, ಇಂದ್ರಜಿತು ಕಾಳಗ, ಅತಿಕಾಯ ಕಾಳಗ, ಚೂಡಾಮಣಿ, ರಾಮಾಶ್ವಮೇಧ, ಲವ-ಕುಶ, ರಾಮ ನಿರ್ಯಾಣ, ಸೀತಾ ವಿಯೋಗ ಇತ್ಯಾದಿ

ಮಹಾಭಾರತ

                ದ್ರೌಪದಿ ಸ್ವಯಂವರ, ರಾಜಸೂಯ, ಮಾಗಧ ವಧೆ, ಕೃಷ್ಣಾರ್ಜುನ ಕಾಳಗ, ಕರ್ಣಾರ್ಜುನ ಕಾಳಗ, ಭೀಷ್ಮ ವಿಜಯ, ಭೀಷ್ಮ ಪರ್ವ, ಗದಾಯುದ್ಧ, ಬಬ್ರುವಾಹನ, ಸುಧನ್ವಾರ್ಜುನ, ತಾಮ್ರಧ್ವಜ, ವೀರವರ್ಮ ಕಾಳಗ, ರತ್ನಾವತಿ ಕಲ್ಯಾಣ, ವಿದ್ಯುನ್ಮತಿ ಕಲ್ಯಾಣ, ಧರ್ಮಾಂಗದ ದಿಗ್ವಿಜಯ, ಸಮಗ್ರ ಕಂಸ.

ಗಿರಿಜಾ ಕಲ್ಯಾಣ, ಶಿವಪಂಚಾಕ್ಷರಿ ಮಹಿಮೆ, ಬನಶಂಕರಿ, ದೇವಿ ಮಹಾತ್ಮೆ ಇತ್ಯಾದಿ.

                ರಾಹು ಇರುವ ದಿಕ್ಕಿಗೆ ರಂಗಸ್ಥಳವನ್ನು, ರಾಹು ದಿಕ್ಕಿಗೆ ಅಥವಾ ಬಲಭಾಗಕ್ಕೆ ಅಭಿಮುಖವಾಗಿ ಮತ್ತು ರಾಹು ದಿಕ್ಕಿನ ಬಲಭಾಗಕ್ಕೆ ಇರುವಂತೆ ರಂಗಸ್ಥಳವನ್ನು ನಿರ್ಮಿಸುವುದಿಲ್ಲ.

                ಪಾತ್ರಧಾರಿಗಳು ಚೌಕಿ ಮನೆಯಲ್ಲಿ ಪಾತ್ರ ಸಿದ್ಧತೆಗೆ ಕೂರುವಾಗ ಅವರವರ ಸ್ಥಾನಕ್ಕನುಗುಣವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಗಣಪತಿ ಪೆಟ್ಟಿಗೆಯ ಬಲಭಾಗದ ಸಾಲಿನಲ್ಲಿ ಎರಡನೇ ವೇಷಧಾರಿಗಳು, ಇವರ ಪಕ್ಕದಲ್ಲಿ ಪುರುಷ ವೇಷಧಾರಿಗಳು, ಇವರ ಪಕ್ಕದಲ್ಲಿ ಕಥಾನಾಯಕಿ ಮುಖ್ಯ ಸ್ತ್ರೀವೇಷ, ಪುಂಡ ವೇಷಗಳು, ಇವರ ಪಕ್ಕದಲ್ಲಿ ಪೀಠಿಕೆ ಸ್ತ್ರೀ ವೇಷ, ಬಾಲಗೋಪಾಲ.

                ಗಣಪತಿ ಪೆಟ್ಟಿಗೆಯ ಎಡಭಾಗದ ಸಾಲಿನಲ್ಲಿ ಬಣ್ಣದ ವೇಷ, ಕಿರೀಟ ವೇಷ, ಪೋಷಕ ಪಾತ್ರಗಳು ನಂತರ ಕಪ್ಪು ಮುಂಡಾಸು, ಕೆಂಪು ಮುಂಡಾಸು, ಸಖಿ ಸ್ತ್ರೀವೇಷ, ಬಾಲಗೋಪಾಲ, ಅಡ್ಡ ಚೌಕಿಯಲ್ಲಿ ಗಣಪತಿ ಪೆಟ್ಟಿಗೆಯ ಹಿಂಭಾಗ ಹಾಸ್ಯಪಾತ್ರ, ಪ್ರಥಮ ವೇಷ ಭಾಗವತರು ಕೂರುತ್ತಾರೆ.

 

ದೀವರ ಸಮೂಹದ ಪಡವಲಪಾಯ ಯಕ್ಷಗಾನ ಮೇಳಗಳು

ಚಾಮುಂಡೇಶ್ವರಿ ಯಕ್ಷಗಾನ ಮಂಡಳಿ, ಮನಮನೆ, ಸಿದ್ದಾಪುರ ತಾ. ಉತ್ತರಕನ್ನಡ ಜಿಲ್ಲೆ

                ‘ಮನಮನೆ’ ಸಿದ್ದಾಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ದೀವರು ಜನಾಂಗದವರು ವಾಸ ಮಾಡುವ ಪ್ರಮುಖ ಹಳ್ಳಿ. ಉತ್ತರಕನ್ನಡ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಜಲ್ಲೆಯಾಗಿದೆ. ಬ್ರಾಹ್ಮಣರು ಮತ್ತು ಇತರೆ ಜನಾಂಗದವರ ಪ್ರಭಾವಕ್ಕೆ ಒಳಗಾಗಿ ದೀವರು ಜನಾಂಗದವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ‘ಮನಮನೆ’ ಗ್ರಾಮ ಒಂದರಲ್ಲಿಯೇ ಹತ್ತು-ಹದಿನೈದು ಜನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲುಶಿಕ್ಷೆಯನ್ನು ಅನುಭವಿಸಿದವರಿದ್ದಾರೆ. ಈಗ ಇವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಮನಮನೆ ಗ್ರಾಮವು ಬಹುಸಂಖ್ಯೆಯಲ್ಲಿ ದೀವರು ಜನಾಂಗದವರು ವಾಸ ಮಾಡುವ ಹಳ್ಳಿಯಾಗಿದೆ.

                ಈ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೆಲವು ಯುವಕರು ಸೇರಿ 1950ರಲ್ಲಿ ‘ಚಾಮುಂಡೇಶ್ವರಿ ಯಕ್ಷಗಾನ ಮಂಡಳಿ’ ಎಂಬ ಬಡಗುತಟ್ಟಿನ ಪಡವಲಪಾಯ ಯಕ್ಷಗಾನ ಮಂಡಳಿ ಎಂಬ ಸಾಂಸ್ಕøತಿಕ ಸಂಸ್ಥೆಯನ್ನು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ದೀವರ ಜನಾಂಗದವರಲ್ಲಿ ಯಕ್ಷಗಾನ ಕಲೆಯನ್ನು ಕಲಿತವರು ಯಾರೂ ಇರಲಿಲ್ಲ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಎಂಬ ಗ್ರಾಮದಲ್ಲಿ ಯಕ್ಷಗಾನ ಬಲ್ಲಂತಹ ಹೊನ್ನಾವರ ಮೂಲದವರಾದ ತೆಂಗಿನ ದೀವರು ಜನಾಂಗದವರಾದ ಹಂಡೆಪ್ಪ ಮಾಸ್ತರನ್ನು ಭೆಟ್ಟಿಯಾಗಿ ವಾರ್ಷಿಕ ಸಂಬಳವನ್ನು ನಿಗದಪಡಿಸಿಕೊಂಡು ಕರೆತಂದರು. ಯಕ್ಷಗಾನ ಕಲೆಯಲ್ಲಿ ಅಭಿರುಚಿಯುಳ್ಳ ಹನ್ನೆರಡು ಜನ ಕಲಾವಿದರನ್ನು ಸೇರಿಸಿಕೊಂಡು ಯಕ್ಷಗಾನವನ್ನು ಕಲಿಯಲಾರಂಭಿಸಿದರು.

ಮಂಡಳಿಯ ಮೂಲ ಕಲಾವಿದರು

1) ಮೈಲಪ್ಪ ಪುಟ್ಟಕುಂಬ್ಳೆ

2) ಕೊಲ್ಲೂರ ಮಂಜನಾಯ್ಕ

3) ಮಾರ್ಯೆಪ್ಪ ಕರಡಿನಾಯ್ಕ

4) ಕನ್ನಪ್ಪ ಬಸವನಾಯ್ಕ

5) ಮಾಸ್ತ್ಯ ಬಸವನಾಯ್ಕ

6) ಪಟೇಲ್ ರಾಮಪ್ಪ ರಾಮನಾಯ್ಕ

7) ನಾರಾಯಣ ಮೈಲಪ್ಪ ಕುಂಬ್ಳೆ

8) ಚೌಡಪ್ಪ ಕೆರಿಯನಾಯ್ಕ

9) ಅಣ್ಣಪ್ಪ ರಾಮನಾಯ್ಕ

10) ಹೊಳೆಬಾಗಿಲು ಚೌಡನಾಯ್ಕ

11) ಮುರುಮನೆ ಹುಚ್ಚಪ್ಪ

12) ಭಾಗವತರು: ಹಂಡೆಪ್ಪ ಮಾಸ್ತರು

ಸ್ತ್ರೀ ವೇಷಗಳು

1) ಮಾರ್ಯಪ್ಪ ಕರಡಿನಾಯ್ಕರು

2) ಪಟೇಲ್ ರಾಮಪ್ಪ ರಾಮನಾಯ್ಕ

3) ಕನ್ನಪ್ಪ ಬಸವನಾಯ್ಕ

ಭಾಗವತರು, ಮೃದಂಗ : ಹಂಡೆಪ್ಪ ಮಾಸ್ತರ್

ತಾಸಮರ (ಚಂಡೆ) : ಗೋಪಾಲ ಹಂಡೆಪ್ಪ ಮಾಸ್ತರ್

ಅಭ್ಯಾಸ ಮಾಡಿರುವ ಪ್ರಸಂಗಗಳು

1) ದಕ್ಷಾಧ್ವರ                                      2) ಗಿರಿಜಾ ಕಲ್ಯಾಣ                         

3) ವಿರಾಟಪರ್ವ                              4) ರತಿ ಕಲ್ಯಾಣ                

5) ಕರ್ಣಾರ್ಜುನರ ಕಾಳಗ            6) ಸುಧನ್ವಾರ್ಜುನ

7) ರುಕ್ಮಾಂಗದ ಚರಿತ್ರೆ                    8) ಕೃಷ್ಣ ಸಂಧಾನ ಇತ್ಯಾದಿ

ಪ್ರದರ್ಶನ ಮಾಡಿರುವ ಸ್ಥಳಗಳು

ವಾಟಗಾರು, ಕುಗ್ವೆ, ಪಡವಗೋಡು, ಬೇಡ್ಕಣಿ, ನಂದಿಸರ (ಕುಮಟಾ), ಮಾವಿನಗುಂಡಿ, ಕೋಲಸಿರ್ಸಿ, ಅವರಗುಪ್ಪ, ಕಾನಗೋಡು, ಮನಮನೆ

ಈ ಮಂಡಳಿಯವರು ವೇಷಭೂಷಣಗಳು, ರಂಗಪರಿಕರಗಳನ್ನು ಸ್ವಂತವಾಗಿ ಹೊಂದಿದ್ದು ಸುಸಜ್ಜಿತವಾದ ತಂಡವಾಗಿತ್ತು. ದೀವರ ಸಮೂಹದಲ್ಲಿ ಪ್ರಾರಂಭವಾದ ಪ್ರಥಮ ತಂಡವಾಗಿತ್ತು. ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಸುಮಾರು ಹನ್ನೆರಡು ತಂಡಗಳನ್ನು ಗುರುತಿಸಲಾಗಿದೆ.

ಶ್ರೀ ಬಸವೇಶ್ವರ ಯಕ್ಷಗಾನ ಮಂಡಳಿ, ಸೈದೂರು, ಸಾಗರ ತಾಲ್ಲೂಕು

                ಸೈದೂರು, ಸುಳ್ಳೂರು, ತಡಗಳಲೆ, ಕಣಸೆ ಮುಂತಾದ ಹಳ್ಳಿಗಳು ತಾಲ್ಲೂಕು ಕೇಂದ್ರ ಸಾಗರದಿಂದ ತುಂಬಾ ದೂರದಲ್ಲಿರುವ ಉತ್ತರಕನ್ನಡ ಜಿಲ್ಲೆಯ ಗಡಿಹಳ್ಳಿಗಳು. ಈ ಪ್ರದೇಶಗಳಲ್ಲಿ ಹೆಚ್ಚಾಗಿ ದೀವರು ಜನಾಂಗದವರು ವಾಸವಾಗಿದ್ದಾರೆ. ಎಲ್ಲರೂ ಗೇಣಿದಾರರು. ಭೂಮಾಲಿಕರ ದರ್ಪ, ದೌರ್ಜನ್ಯದಿಂದ ಬಡಗೇಣಿದಾರರು ನರಳಿದ್ದಾರೆ. ಇಲ್ಲಿ ಶಿಕ್ಷಣಸಂಸ್ಥೆಗಳು ಇರಲಿಲ್ಲ. ಪ್ರೌಢಶಿಕ್ಷಣವನ್ನು ಪಡೆಯಲು ಸಾಗರ ಅಥವಾ ತಾಳಗುಪ್ಪಕ್ಕೆ ಬರಬೇಕು. 1967ರವರೆಗೆ ಈ ಭಾಗಕ್ಕೆ ಹೋಗಲು ಸರಿಯಾದ ರಸ್ತೆಗಳೇ ಇರಲಿಲ್ಲ. ಮಳೆಗಾಲದಲ್ಲಿ ವರದಾನದಿ ಪ್ರವಾಹ ಬಂದು ದಾರಿಯಲ್ಲಿ ನೀರು ಮುಚ್ಚಿಕೊಳ್ಳುತ್ತಿತ್ತು. ಹಾಗಾಗಿ ಇಲ್ಲಿಯ ಹಳ್ಳಿಗಳು ದ್ವೀಪಗಳಾಗುತ್ತಿದ್ದವು. 1967ರಲ್ಲಿ ಸಾಗರ ಅಭಿವೃದ್ಧಿ ಮಂಡಳಿ ಚುನಾವಣೆಗಳು ನಡೆದವು. ಆ ವರ್ಷ ಸಮಾಜವಾದಿ ಪಕ್ಷ ಬಹುಮತದಿಂದ ಆಯ್ಕೆಯಾಯಿತು. ಆ ವರ್ಷ ಕಾಗೋಡು ತಿಮ್ಮಪ್ಪನವರು ಆಯ್ಕೆಯಾಗಿ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದರು. ತಿಮ್ಮಪ್ಪನವರು ಈ ಭಾಗಕ್ಕೆ ಹೆಚ್ಚು ಆದ್ಯತೆಯನ್ನು ಕೊಟ್ಟು ಕೆಲಸ ಮಾಡಿದರು. ಹೊಸದಾಗಿ ರಸ್ತೆಗಳು ನಿರ್ಮಾಣವಾದವು. ಸಂಚಾರ, ಸಾರಿಗೆ ಬಸ್ಸುಗಳು ಓಡಾಡಲು ಪ್ರಾರಂಭವಾದವು. 1972ರಲ್ಲಿ ಶಾಸಕರಾಗಿ ಆಯ್ಕೆಯಾದರು. ಐದು ವರ್ಷಗಳಲ್ಲಿ ಸಾಗರ ತಾಲ್ಲೂಕನ್ನು ಸಾಕಷ್ಟು ಅಭಿವೃದ್ಧಿಪಡಿಸಿದರು. ಸಾಗರ, ತಾಳಗುಪ್ಪ, ಕಾರ್ಗಲ್, ಶಿರವಂತೆ ಮುಂತಾದ ಕಡೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಮೆಟ್ರಿಕ್‍ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳು ಸರ್ಕಾರದಿಂದ ಪ್ರಾರಂಭಗೊಂಡವು. ಸೈದೂರು, ತಡಗಳಲೆ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರಥಮ ಆದ್ಯತೆ ಕೊಡಲಾಯಿತು. ಈ ಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿದ್ದು ವ್ಯಾಸಂಗವನ್ನು ಮುಂದುವರೆಸಿದರು. ಕೇವಲ ಹತ್ತು ವರ್ಷಗಳಲ್ಲಿ ಸೈದೂರು, ತಡಗಳಲೆ, ಸುಳ್ಳೂರು, ಕಣಸೆ ಗ್ರಾಮಗಳ ಪ್ರದೇಶಗಳು ಸಾಕಷ್ಟು ಅಭಿವೃದ್ಧಿಗೊಂಡಿವೆ.

                ಸೈದೂರು ಗ್ರಾಮದಲ್ಲಿ ಕಲಾಭಿರುಚಿಯಿರುವ ಯುವಕರುಗಳು ಸೇರಿ 1990ರಲ್ಲಿ ಶ್ರೀ ಬಸವೇಶ್ವರ ಯಕ್ಷಗಾನ ಮಂಡಳಿ ಎಂಬ ಪಡವಲಪಾಯ ಬಡಗುತಿಟ್ಟಿನ ಯಕ್ಷಗಾನ ಮಂಡಳಿಯನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಮಂಡಳಿಯ ಮುಖ್ಯಸ್ಥರು ಮತ್ತು ವ್ಯವಸ್ಥಾಪಕರಾಗಿ ಸೈದೂರಿನ ಬಿ. ಅಣ್ಣಪ್ಪನವರು ಇದ್ದಾರೆ. ತಂಡದಲ್ಲಿ ಹನ್ನೆರಡು ಜನ ಕಲಾವಿದರಿದ್ದಾರೆ. ವಾದ್ಯಗಾರರು ಮೂರು ಜನ, ಭಾಗವತರು ಒಬ್ಬರಿದ್ದಾರೆ. ಸ್ವಂತ ವೇಷಭೂಷಣಗಳನ್ನು ಹೊಂದಿದ್ದಾರೆ.

ಅಭ್ಯಾಸ ಮಾಡಿರುವ ಪ್ರಸಂಗಗಳು

1) ವೀರಮಣಿ ಕಾಳಗ                       2) ರುಂಡ ಭೈರವ ಕಾಳಗ

2) ಶಶಿಪ್ರಭಾ ಪರಿಣಯ                 4) ಸೀತಾ ಪರಿತ್ಯಾಗ

5) ಭೀಷ್ಮ ವಿಜಯ                           6) ಸುಧನ್ವಾರ್ಜುನ ಕಾಳಗ

                ತಮ್ಮ ಗ್ರಾಮದಲ್ಲಿ ಹಬ್ಬ-ಹರಿದಿನಗಳು ನಡೆದಾಗ, ಜಾತ್ರೆಗಳಲ್ಲಿ ತಮ್ಮ ಊರಿನಲ್ಲಿ ಮಾತ್ರ ಜನರಿಗೆ ಮನರಂಜನೆಯನ್ನು ನೀಡಲು ಪ್ರದರ್ಶನ ನೀಡುತ್ತಾರೆ.

ಶ್ರೀ ಮಾರಿಕಾಂಬಾ ಯಕ್ಷಗಾನ ಮಂಡಳಿ, ಸುಳ್ಳೂರು, ಸಾಗರ ತಾಲ್ಲೂಕು

                ಸುಳ್ಳೂರು- ಸೈದೂರಿನ ಪಕ್ಕದ ಹಳ್ಳಿ. ದೊಡ್ಡ ಹಳ್ಳಿ. ಹೆಚ್ಚಾಗಿ ದೀವ ಸಮೂಹ ಇರುವಂತಹ ಹಳ್ಳಿ. ಇಲ್ಲಿಯ ಕಲಾಭಿಮಾನಿಗಳು ಸೇರಿ 1988ರಲ್ಲಿ ಈ ಮಂಡಳಿಯನ್ನು ಸಂಘಟಿಸಿದ್ದಾರೆ.             ರಾಮಪ್ಪ ಬಿನ್ ಈರ್ಯಾನಾಯ್ಕ ಎಂಬುವವರು ಮುಖ್ಯಸ್ಥರು. ತಂಡದಲ್ಲಿ ಹನ್ನೆರಡು ಜನ ಕಲಾವಿದರಿದ್ದಾರೆ. ಮೂರು ಜನ ವಾದ್ಯಗಾರರು. ಒಬ್ಬರು ಭಾಗವತರಿದ್ದಾರೆ. ಇವರು ತಂಡದಲ್ಲಿ ಸ್ವಂತವಾಗಿ ವೇಷಭೂಷಣಗಳು, ವಾದ್ಯೋಪಕರಣಗಳು ಮತ್ತು ರಂಗಪರಿಕರಗಳನ್ನು ಹೊಂದಿದ್ದಾರೆ.

ಅಭ್ಯಾಸ ಮಾಡಿರುವ ಪ್ರಸಂಗಗಳು

1) ಸುಧನ್ವಾರ್ಜುನ ಕಾಳಗ                            2) ರೇಣುಕಾ ಮಹಾತ್ಮೆ

3) ಶಿವಲೀಲೆ                                                       4) ಗದಾಯುದ್ಧ

5) ಕಂಸ ವಧೆ                                                      6) ದೇವಿ ಮಹಾತ್ಮೆ

7) ದಕ್ಷ ಯಜ್ಞ                                                    8) ಭಸ್ಮಾಸುರ ಮೋಹಿನಿ

ಪ್ರದರ್ಶನಗಳು

                ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಸಿದ್ದಾಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಚಾಮುಂಡೇಶ್ವರಿ ಯಕ್ಷಗಾನ ಕಲಾಸಂಘ, ಮಂಡಗಳಲೆ, ಸಾಗರ ತಾಲ್ಲೂಕು

                ಮಂಡಗಳಲೆ ಹೆಚ್ಚಾಗಿ ದೀವರು ಜನಾಂಗದವರು ವಾಸ ಮಾಡುವ ದೊಡ್ಡ ಹಳ್ಳಿ. ಈ ಹಳ್ಳಿಯಲ್ಲ್ಲಿ ತುಂಬಾ ಜನ ಪ್ರಜ್ಞಾವಂತರಿದ್ದಾರೆ. ಕೆಲವರು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಕಾಗೋಡು ಚಳವಳಿಯ ಹೋರಾಟಗಾರರ ಕೇಂದ್ರಸ್ಥಳವಾಗಿದ್ದ ಈ ಹಳ್ಳಿ ವರದಾ ನದಿಯ ದಂಡೆಯ ಮೇಲೆ ಇದೆ. ನದಿ ಆಚೆ ಕಾಗೋಡು ಗ್ರಾಮವಿದೆ. ಹಿಂದೆ ನದಿಗೆ ಸೇತುವೆ ಇರಲಿಲ್ಲ. ನದಿ ದಾಟಿ ಆಚೆ ಹೋದರೆ ಕಾಗೋಡು. ವಾರಂಟ್ ಇರುವ ಸತ್ಯಾಗ್ರಹಗಳ ಅಡಗುತಾಣವಾಗಿತ್ತು. ಶಾಂತವೇರಿ ಗೋಪಾಲಗೌಡರಿಗೆ ವಾರಂಟ್ ಇದ್ದರೂ ಜನರನ್ನು ಸಂಘಟನೆ ಮಾಡಲು ಪೋಲೀಸರಿಂದ ತಪ್ಪಿಸಿಕೊಂಡು ಈ ಗ್ರಾಮದಲ್ಲಿ ಇರುತ್ತಿದ್ದರು. ಒಮ್ಮೆ ರೈತನ ಮನೆಯ ಅಟ್ಟದ ಮೇಲಿದ್ದ ಗೋಪಾಲಗೌಡರನ್ನು ಬಂಧಿಸಿದ್ದರು.

                ಈ ಗ್ರಾಮದ ಪ್ರಜ್ಞಾವಂತ ಯುವಕರು ಸೇರಿ 1980ರಲ್ಲಿ ಚಾಮುಂಡೇಶ್ವರಿ ಯಕ್ಷಗಾನ ಕಲಾಸಂಘವನ್ನು ಸ್ಥಾಪನೆ ಮಾಡಿಕೊಂಡರು. ತಂಡದಲ್ಲಿ ಇಪ್ಪತ್ತೇಳು ಜನ ಕಲಾವಿದರಿದ್ದಾರೆ. ವಾದ್ಯಗಾರರು ನಾಲ್ಕು ಜನ, ಭಾಗವತರು ಇಬ್ಬರಿದ್ದಾರೆ. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಸ್. ಚಿದಂಬರರಾವ್ ತಂಡದ ಮುಖ್ಯಸ್ಥರಾಗಿದ್ದಾರೆ.

ವೇಷಭೂಷಣಗಳು

                ತಂಡದಲ್ಲಿ ಸ್ವಂತ ವೇಷ-ಭೂಷಣಗಳಿರುವುದಿಲ್ಲ. ಸಿದ್ದಾಪುರ ತಾಲ್ಲೂಕಿನ ಹಣಜಿಬೈಲಿನಿಂದ ಪ್ರತಿ ಆಟಕ್ಕೆ ಬಾಡಿಗೆ ತರುತ್ತಾರೆ.

ಅಭ್ಯಾಸ ಮಾಡಿರುವ ಪ್ರಸಂಗಗಳು

1) ವೀರಮಣಿ ಕಾಳಗ                                       2) ಶ್ವೇತಕುಮಾರ ಚರಿತ್ರೆ

3) ಧರ್ಮಾಂಗದ ದಿಗ್ವಿಜಯ                         4) ಭದ್ರಾಯು ಚರಿತ್ರೆ

5) ಡುಂಡುಬಾಸುರ                                        5) ಸುಧನ್ವಾರ್ಜುನ                         

7) ವಜ್ರಶೇಖರ ಕಾಳಗ                                     8) ಸ್ವರ್ಗದ ಜಿಂಕೆ

9) ವಾಲಿ ಸುಗ್ರೀವರ ಕಾಳಗ                           10) ದ್ರೌಪದಿ ಪ್ರತಾಪ

11) ವಿದ್ಯುನ್ಮತಿ ಕಲ್ಯಾಣ                                               12) ಅಂಶುಮತಿ ಕಲ್ಯಾಣ

13) ಶಿವಲೀಲೆ

ಪ್ರದರ್ಶನಗಳು

                ಹಬ್ಬ-ಹರಿದಿನಗಳು, ಶಿವರಾತ್ರಿ, ಸುಗ್ಗಿ ಹಬ್ಬ, ಶಾಲಾ ವಾರ್ಷಿಕೋತ್ಸವ, ಜಾತ್ರೆಗಳು ಹಾಗೂ ಇತರ ಸಮಾರಂಭಗಳು.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಇಳಿಮನೆ, ಬೂದಗಿತ್ತಿ, ಸಿದ್ದಾಪುರ ತಾ.

                ‘ಇಳಿಮನೆ’ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಕೇಂದ್ರದಿಂದ ಬಹುದೂರವಿರುವ ಹಳ್ಳಿ. ಇಲ್ಲಿಯ ಸಾಮಾನ್ಯ ಜನರಿಗೆ ಮನರಂಜನೆಯನ್ನು ನೀಡಲು ಆಸಕ್ತಿ ಇರುವ ಕೆಲವರು ಜನ ಸೇರಿ ಈ ಕಲಾ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಪಾತ್ರಧಾರಿಗಳು ಇಪ್ಪತ್ತೊಂದು ಜನರಿದ್ದಾರೆ. ಮುಖ್ಯ ಪಾತ್ರಧಾರಿ ಹದಿನೈದು ಜನ, ವಾದ್ಯಗಾರರು ಮೂರು ಜನ, ಹಾಡುವವರು ಮೂರು ಜನರಿದ್ದಾರೆ.

                ಸ್ವಂತ ವೇಷಭೂಷಣಗಳಿರುವುದಿಲ್ಲ. ಆಟ ಮಾಡುವಾಗ ಹಣಜಿಬೈಲಿನಿಂದ ಬಾಡಿಗೆಗೆ ತರುತ್ತಾರೆ. ಹಬ್ಬ ಹರಿದಿನ, ಮದುವೆ, ದೇವರ ಕಾರ್ಯಗಳು ನಡೆಯುವಾಗ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸುತ್ತಾರೆ.

ಅಭ್ಯಾಸ ಮಾಡಿರುವ ಪ್ರಸಂಗಗಳು

1) ವಿದ್ಯುನ್ಮತಿ ಕಲ್ಯಾಣ                                                 2) ಗಯ ಚರಿತ್ರೆ

3) ದ್ರೌಪದಿ ಪ್ರತಾಪ                                        4) ಗದಾಯುದ್ಧ

5) ಕಾರ್ತವೀರ್ಯಾರ್ಜುನ ಕಾಳಗ             6) ಭೀಷ್ಮ ವಿಜಯ

7) ವೀರಮಣಿ ಕಾಳಗ                                       8) ಚಂದ್ರಹಾಸ ಚರಿತ್ರೆ

9) ರತಿ ಕಲ್ಯಾಣ                                                 10) ಪಂಚವಟಿ

11) ವಾಲಿ ಸುಗ್ರೀವರ ಕಾಳಗ                         12) ಚೂಡಾಮಣಿ

13) ವೀರ ಪುಷ್ಪಧ್ವಜ                                       14) ಚಂದ್ರರೇಖಾ ಪರಿಣಯ

15) ಯೋಗಿನಿ ಕಲ್ಯಾಣ                  16) ವೀರ ವಜ್ರಾಂಗ

                ಈ ತಂಡದ ಮುಖ್ಯಸ್ಥರು ತಿಮ್ಮ ನಾಗಾನಾಯ್ಕರು (ಟಿ.ಎನ್. ನಾಯ್ಕರು)

ಪ್ರದರ್ಶನಗಳು

                ಬೂದಗಿತ್ತಿ, ಇಳಿಮನೆ, ಕ್ಯಾದಿಗೆ, ಉಂಬಳಿಬೈಲು, ಕಲ್ಲಾಳ ಮುಂತಾದ ಕಡೆ.

ನಿರೂಪಕರು : ತಿಮ್ಮಪ್ಪ ಜೆಟ್ಯಾನಾಯ್ಕ, ಬೂದಗಿತ್ತಿ ಅಂಚೆ, ವಂದಾನೆ, ಸಿದ್ದಾಪುರ ತಾಲ್ಲೂಕು

 

ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ, ಬೇಡ್ಕಣಿ, ಸಿದ್ದಾಪುರ ತಾಲ್ಲೂಕು

ಸ್ಥಾಪನೆ : 1960ರ ದಶಕ

ಮಂಡಳಿಯ ಮುಖ್ಯಸ್ಥರು : ಕೃಷ್ಣ ಜಿ., ಪ್ರಸಿದ್ಧ ಯಕ್ಷಗಾನ ಕಲಾವಿದರು, ಮಾವಿನಕೊಪ್ಪ, ಅಂಚೆ: ನಾಣಿಕಟ್ಟಾ, ಸಿದ್ದಾಪುರ ತಾಲ್ಲೂಕು, ಉತ್ತರಕನ್ನಡ               ಮೊ:9448183468

ಕಲಾವಿದರು : 20 ಜನ

ಭಾಗವತರು :     ರಾಮಚಂದ್ರನಾಯ್ಕ, ಹೆಮ್ಮನಬೈಲು

                                ಗಣಪತಿ ಭಟ್, ಶಿರಸಿ

ಮೃದಂಗ:           ನಾರಾಯಣ ದೇವಾಡಿಗ, ಆಡುಕಟ್ಟಾ

                                ಕೃಷ್ಣಮೂರ್ತಿ ಭಟ್, ಬಿದರಕಾನು

ಚಂಡೆ:                 ಧನಂಜಯ ಪುರದಸರ, ಅಂಚೆ: ಆಡುಕಟ್ಟಾ, ಸಿದ್ದಾಪುರ ತಾ.

                                ಗಂಗಾಧರ ಹೆಗಡೆ, ಕಂಚೀಮನೆ, ಅಂಚೆ : ಹಸರಗೋಡು, ಸಿದ್ದಾಪುರ ತಾ.

ಸ್ತ್ರೀವೇಷಗಳು:   1) ಕನ್ನಪ್ಪ ಮಾಸ್ತರ್ ತಡಗಳಲೆ

                                2) ರಾಮಚಂದ್ರನಾಯ್ಕ, ಜಾಲಿಗದ್ದೆ, ಅಂಚೆ:ಕಾರ್ಗಲ್

                                3) ಲಕ್ಷ್ಮಣ ಬೇಡ್ಕಣಿ

ಹಾಸ್ಯ ಪಾತ್ರಗಳು: 1) ವೆಂಕಟರಮಣ ಹೆಗಡೆ, ಕಾನ್ಸೂರು, ಸಿದ್ದಾಪುರ ತಾ.

                                2) ಉದಯ ಜೈನ್, ಕಾರ್ಗಲ್

 

ಕಲಾವಿದರು

1) ಮಹಾದೇವನಾಯ್ಕ (ವಯಸ್ಸು 50, ನೆಲ್ಲಮಕ್ಕಿ, ಅಂಚೆ: ಅರಲಗೋಡು) : ಹನುಮಂತ, ಶನಿ, ದಕ್ಷ, ಈಶ್ವರ, ಕಂಸ, ನಳ-ದಮಯಂತಿಯಲ್ಲಿ ಋತುಪರ್ಣ, ಜಾಂಬವತಿ ಕಲ್ಯಾಣದ ಜಾಂಬವಂತ

2) ಹೆಸ್ಕೆ ಬಾಸ್ಕರನಾಯ್ಕ ಕುಂಬ್ರಿ : ಪುರುಷವೇಷ ಪುಳಿಂದ (ಬೇಡ), ಮದನ, ವೃಷಸೇನ, ಪ್ರದ್ಯುಮ್ನ, ಕೌಂಡ್ಳಿಕ ಇತ್ಯಾದಿ

3) ಶ್ರೀಕಾಂತನಾಯ್ಕ (ಹಿನ್ನಿ, ವಯಸ್ಸು 40) ಸ್ತ್ರೀವೇಷ : ಮೀನಾಕ್ಷಿ, ಶಶಿಪ್ರಭೆ, ಪ್ರಭಾವತಿ

4) ರಾಮಚಂದ್ರನಾಯ್ಕ ಕಾರ್ಗಲ್ : ದುಃಖದ ಪಾತ್ರಗಳು, ಪ್ರಭಾವತಿ, ಗುಣಸುಂದರಿ ಇತ್ಯಾದಿ ಸ್ತ್ರೀವೇಷಗಳು

5) ಕನ್ನಪ್ಪ ಮಾಸ್ತರ್ ತಡಗಳಲೆ: ಎಲ್ಲಾ ಪ್ರಸಂಗಗಳ ಸ್ತ್ರೀವೇಷ

6) ಕೃಷ್ಣಾಜಿ ಬೇಡ್ಕಣಿ, ಮೇಳದ ಮುಖ್ಯಸ್ಥರು:

ಹಾಸ್ಯ, ಪುರುಷವೇಷ, ರಾಜವೇಷ, ಕಥಾನಾಯಕ ಮತ್ತು ಖಳನಾಯಕ

7) ಲಕ್ಷ್ಮಣ ನಾಯ್ಕ ಬೇಡ್ಕಣಿ:

ಸ್ತ್ರೀವೇಷ ಮತ್ತು ಪುರುಷವೇಷ

8) ಹೊಡಗೋಡು ಚಂದ್ರಹಾಸ (ಹೊಡಗೋಡು, ಅಂ: ಹಡಿನಬಾಳ, ಹೊನ್ನಾವರ ತಾ. ಉತ್ತರಕನ್ನಡ): ಕೌರವ, ಕಂಸ, ಚಂದ್ರಹಾಸ, ಕೃಷ್ಣ, ಕಥಾನಾಯಕ ಮತ್ತು ಖಳನಾಯಕ

9) ರಮೇಶಗೌಡ, ಆಡುಕಟ್ಟಾ : ಸ್ತ್ರೀವೇಷ, ಪುರುಷವೇಷ, ಹಾಸ್ಯ ಇತ್ಯಾದಿ

10) ಗಿರಿಧರ ಕೃಷ್ಣಾನಾಯ್ಕ : ಕುಮಾರ ವೇಷ, ಸ್ತ್ರೀವೇಷ

11) ಗಣಪತಿನಾಯ್ಕ ಸೈದೂರು

12) ತಿಮ್ಮಪ್ಪನಾಯ್ಕ ಹುಣಸೂರು

13) ದೋಣ್ಜಿ ಎಚ್. ಹುಚ್ಚಪ್ಪ ಪಡಗೋಡು

ವೇಷಭೂಷಣಗಳು

                ಬಡಗು ಮತ್ತು ತೆಂಕುತಿಟ್ಟಿನ ಸ್ವಂತ ವೇಷಭೂಷಣಗಳು ಇವೆ. ರಂಗಮಂಟಪ, ರಂಗ ಪರಿಕರಗಳು, ಮೇಳಕ್ಕೆ ಬೇಕಾದ ಸಮಸ್ತ ಸಾಮಾನುಗಳು ಸ್ವಂತವಾಗಿ ಇವೆ.

ಪ್ರದರ್ಶನ ಮಾಡುವ ಪ್ರಸಂಗಗಳು

ಮಹಾಭಾರತ ಹಾಗೂ ಪುರಾಣ

1) ಸುಧನ್ವಾರ್ಜುನ                          2) ಬಬ್ರುವಾಹನ             

3) ಕೃಷ್ಣಾರ್ಜುನ                               4) ಕೃಷ್ಣಲೀಲೆ

5) ಮಾರುತಿ ಪ್ರತಾಪ                       6) ಶರಸೇತು ಬಂಧನ

7) ಭೀಷ್ಮ ವಿಜಯ                           8) ದ್ರೌಪದಿ ಪ್ರತಾಪ

9) ಶಶಿ ಕಲ್ಯಾಣ                                 10) ಸಗರ ಸಾರ್ವಭೌಮ

11) ಶ್ರೀದೇವಿ ಬನಶಂಕರಿ              12) ದಕ್ಷಯಜ್ಞ

13) ಭಸ್ಮಾಸುರ ಮೋಹಿನಿ             14) ಗದಾಯುದ್ಧ

15) ರಾಜಾ ರುದ್ರಕೋಪ                 16) ಸಂಪೂರ್ಣ ದೇವಿ ಮಹಾತ್ಮೆ

17) ಸಮಗ್ರ ಕಂಸ                              18) ಸಮಗ್ರ ಕಾರ್ತವೀರ್ಯಾರ್ಜುನ

ಇತರೆ ಪ್ರಸಂಗಗಳು

1) ಪಾಪಣ್ಣ ವಿಜಯ                      2) ಸಂಪೂರ್ಣ ಶನೇಶ್ವರ ಮಹಿಮೆ

ರಾಮಾಯಣ

1) ಪಂಚವಟಿ                                    2) ಪುತ್ರ ಕಾಮೇಷ್ಠಿ          

3) ವಾಲಿ ಮೋಕ್ಷ                               4) ಲಂಕಾದಹನ

5) ರಾಮಾಂಜನೇಯ                      6) ಮಾಯಾಪುರಿ ಮಹಾತ್ಮೆ

7) ವೀರಮಣಿ ಕಾಳಗ                       8) ಲವ ಕುಶ

9) ಮಹಿರಾವಣ ಕಾಳಗ

ಪ್ರದರ್ಶನದ ಸ್ಥಳಗಳು

ಶಿರಸಿ, ಸಿದ್ದಾಪುರ, ಸಾಗರ, ಯಲ್ಲಾಪುರ, ಶಿವಮೊಗ್ಗ ತಾಲ್ಲೂಕುಗಳಲ್ಲಿ ಅನೇಕ ಕಡೆ ಪ್ರದರ್ಶನ. ಒಂದು ವರ್ಷಕ್ಕೆ 600ರಿಂದ 700 ಪ್ರದರ್ಶನಗಳನ್ನು ನೀಡುತ್ತಾರೆ.

ಶ್ರೀ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿ, ಹೆಮ್ಮನಬೈಲು, ಸಿದ್ದಾಪುರ ತಾ. ಉ.ಕ.

ಮಂಡಳಿಯ ಮುಖ್ಯಸ್ಥರು: ಎಂ.ಆರ್. ನಾಯ್ಕರು (ಮಂಜುನಾಥ ನಾಯ್ಕರು), ಹೆಮ್ಮನಬೈಲು, ಅಂಚೆ: ಸೋಗಿನಕೊಪ್ಪ, ಸಿದ್ದಾಪುರ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ

ಭಾಗವತರು: ರಾಮಚಂದ್ರನಾಯ್ಕರು, ಹೆಮ್ಮನಬೈಲು

ಕಲಾವಿದರು: ಹದಿನೆಂಟರಿಂದ ಇಪ್ಪತ್ತು

                ಯಕ್ಷಗಾನದ ಮೇಳಗಳಲ್ಲಿ ಅತಿಥಿ ಕಲಾವಿದರೇ ಹೆಚ್ಚಾಗಿರುತ್ತಾರೆ. ಮೇಳದ ಆಟ ಇದ್ದಾಗ ಎಲ್ಲರೂ ಬಂದು ಸೇರಿಕೊಳ್ಳುತ್ತಾರೆ.

                ಯಕ್ಷಗಾನ ಕಲಾವಿದರು ಒಮ್ಮೆ ನೃತ್ಯ, ಅಭಿನಯ, ಅರ್ಥಗಾರಿಕೆ ಕಲಿತುಕೊಂಡರೆ ಯಾವುದೇ ಮೇಳದಲ್ಲಾದರೂ ಪಾತ್ರ ನಿರ್ವಹಿಸಬಹುದು. ಪ್ರಸಾದನ, ವೇಷಭೂಷಣಗಳನ್ನು ತೊಟ್ಟುಕೊಳ್ಳುವುದನ್ನು ಪಾತ್ರಧಾರಿಗಳೇ ಕಲಿತುಕೊಂಡಿರುತ್ತಾರೆ.

ವೇಷಭೂಷಣಗಳು

                ಮೇಳದಲ್ಲಿ ಬಡಗು ಮತ್ತು ತೆಂಕುತಿಟ್ಟಿನ ವೇಷಭೂಷಣಗಳು ಸ್ವಂತ ಇರುತ್ತವೆ.

ಪ್ರದರ್ಶನ ನೀಡುವ ಪ್ರಸಂಗಗಳು

                ಮಹಾಭಾರತ, ರಾಮಾಯಣ, ಭಾಗವತ, ಶಿವಪುರಾಣಗಳ ಯಾವುದೇ ಪ್ರಸಂಗಗಳನ್ನು ಪ್ರದರ್ಶನ ನೀಡಬಲ್ಲರು.

ಪ್ರದರ್ಶನಗಳು

                ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಶಿವಮೊಗ್ಗ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಪ್ರದರ್ಶನ ನೀಡಲಾಗಿದೆ.

ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿ, ಹೆಗ್ಗರಣೆ, ಸಿದ್ದಾಪುರ ತಾ. ಉ.ಕ.

                ಮಂಡಳಿಯ ಮುಖ್ಯಸ್ಥರಾಗಿ ಶ್ರೀ ರಘುಪತಿ ಮಾರ್ಯನಾಯ್ಕ ಹೆಗ್ಗರಣೆಯವರು ಇದ್ದಾರೆ.

ಭಾಗವತರು: ಲಕ್ಷ್ಮೀನಾರಾಯಣ ಹೆಗಡೆ, ಬೋಳಸುತ್ತಾ

ವಾದ್ಯಗಾರರು: ಮೂರು ಜನ

ಹಾಡುವವರು: ಎರಡು ಜನ

ಕಲಾವಿದರು: ಇಪ್ಪತ್ತು (20) ಜನರಿದ್ದಾರೆ.

                ಮಂಡಳಿಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳು ಮಾತ್ರ ಇವೆ. ವಾದ್ಯೋಪಕರಣಗಳು, ರಂಗಪರಿಕರಗಳು, ರಂಗಮಂಟಪ ಹೀಗೆ ಮಂಡಳಿಗೆ ಬೇಕಾದ ಸಮಸ್ತ ಸಾಮಾನುಗಳು ಇವೆ.

                ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳ ಬಹುತೇಕ ಹಳ್ಳಿಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಮಹಾಗಣಪತಿ ಯಕ್ಷಗಾನ ಮಂಡಳಿ, ಕಿಲಾರ, ಕುಳಿಬೀಡು, ಸಿದ್ದಾಪುರ ತಾ. ಉ.ಕ.

ಮಂಡಳಿಯ ಮುಖ್ಯಸ್ಥರು: ವಾಸುದೇವನಾಯ್ಕ, ಕಿಲಾರ

ಕಲಾವಿದರು: ಹದಿನೈದು (15) ಜನರಿದ್ದಾರೆ.

ವಾದ್ಯಗಾರರು: ಮೂರು ಜನ

ಭಾಗವತರು: ಎರಡು ಜನ

ವೇಷಭೂಷಣಗಳು

                ಎರಡು ವರ್ಷಗಳಿಂದ ಸ್ವಂತವಾಗಿ ಬಡಗುತಿಟ್ಟಿನ ವೇಷಭೂಷಣಗಳನ್ನು ಹೊಂದಿದ್ದಾರೆ.

ಪ್ರದರ್ಶನಗಳು

1) ಸುಂದೋಪಸುಂದರ ಕಾಳಗ                  2) ಲವ ಕುಶ

3) ಧರ್ಮಾಂಗದ ದಿಗ್ವಿಜಯ                         4) ಪುರಾಣಗಳ ಎಲ್ಲಾ ಪ್ರಸಂಗಗಳು

ಪ್ರದರ್ಶನ

                ಸಿದ್ದಾಪುರ, ಶಿರಸಿ, ಯಲ್ಲಾಪುರ, ಸಾಗರ ತಾಲ್ಲೂಕಗಳ ಹಳ್ಳಿಗಳಲ್ಲಿ ಪ್ರದರ್ಶನ ನೀಡುತ್ತಿರುತ್ತಾರೆ.

 

*-*-*-*

               

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲು ಎರಡು ಅಣೆಕಟ್ಟುಗಳನ್ನು ಕಟ್ಟಿತು. ಅವು ಹಿರೇಭಾಸ್ಕರ ಮತ್ತು ಲಿಂಗನಮಕ್ಕಿ ಅಣೆಕಟ್ಟುಗಳು. ಈ ಅಣೆಕಟ್ಟುಗಳಿಂದ ಸಾಗರ ತಾಲ್ಲೂಕಿನ ಲಕ್ಷಾಂತರ ಜನ ತಾವು ಸಾವಿರಾರು ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡರು. ಜಮೀನು ಖಾತೆ, ಪಹಣಿ ಮುಂತಾದ ರೆವನ್ಯೂ ದಾಖಲೆ ಹೊಂದಿದ್ದ ರೈತರಿಗೆ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಕಳೆದುಕೊಂಡ ಜಮೀನನ್ನು ಹೊಸದಾಗಿ ಸರ್ಕಾರ ಮಂಜೂರ್ಮಾಡಿ ಪುನರ್ವಸತಿ ಕಲ್ಪಿಸಿಕೊಟ್ಟಿತು.   ಎರಡು ಅಣೆಕಟ್ಟುಗಳಿಂದ ಸಾಗರ ತಾಲ್ಲೂಕು ಕರೂರು ಮತ್ತು ಬಾರಂಗಿ ಹೋಬಳಿಗಳ ಕೆಲವು ಭಾಗಗಳು ಮುಳುಗಡೆಯಾದವು. ಈ ಯೋಜನೆಯಿಂದ ಫಲವತ್ತಾದ ಭೂಮಿ, ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದವರು ಹೆಚ್ಚಾಗಿ ದೀವರು ಜನಾಂಗದವರು.

                ಮಲೆನಾಡಿನ ಫಲವತ್ತಾದ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡು ಶಿವಮೊಗ್ಗ ತಾಲ್ಲೂಕಿನ ಕೊರಗಿ, ಒಡೆಯರಕೊಪ್ಪ, ಶೆಟ್ಟಿಹಳ್ಳಿ, ರೇಚಿಕೊಪ್ಪ, ಪುರದಾಳು ಮುಂತಾದ ಬಯಲುಸೀಮೆಯ ಬರಡು ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ.

                ತಮ್ಮ ಮೂಲ ಊರಿನಲ್ಲಿ ಮನರಂಜನೆಗಾಗಿ ಬೆಳೆಸಿಕೊಂಡಿದ್ದ ತಾಳಮದ್ದಲೆ ಮತ್ತು ಯಕ್ಷಗಾನ ಕಲೆಯನ್ನು ತಾವಿರುವ ಸ್ಥಳದಲ್ಲಿಯೇ ರೂಢಿಸಿಕೊಂಡಿರುತ್ತಾರೆ. ಅವುಗಳ ಕಿರು ಪರಿಚಯ ಇಲ್ಲಿದೆ.

 

ಬಸವೇಶ್ವರ ಯಕ್ಷಗಾನ ಸಂಘ, ಪುರದಾಳು, ಅಂ:ಗಾಡಿಕೊಪ್ಪ, ಶಿವಮೊಗ್ಗ (ತಾ.&ಜಿಲ್ಲೆ)

ಸ್ಥಾಪನೆ: 1975 (19.02.1975)

ಮುಖ್ಯಸ್ಥರು: ಮಲವಳ್ಳಿ ಚೌಡನಾಯ್ಕರು (ರಾಜುನಾಯ್ಕರು)

ಕಲಾವಿದರ ಸಂಖ್ಯೆ : 14

1) ಮಲವಳ್ಳಿ ಚೌಡನಾಯ್ಕರು

2) ಹುರುಳಿ ಮಂಜನಾಯ್ಕರು

3) ಮಂಜಪ್ಪ ಹಿಳ್ಳೋಡಿ

4) ನಾರಾಯಣಪ್ಪ (ಕೆಂಚ ಮೇಷ್ಟ್ರು)

5) ವನದಗದ್ದೆ ತಿಮ್ಮಪ್ಪ

6) ಮಲವಳ್ಳಿ ಗಿಡ್ಡನಾಯ್ಕರು

7) ಹುರುಳಿ ನಾರಾಯಣಪ್ಪ

8) ಕೆ.ಎನ್. ಕೃಷ್ಣಪ್ಪ

9) ವಿ.ಟಿ. ಗಂಗಾಧರ

10) ಬಸವರಾಜ ಬಾವಿಮನೆ

11) ಕಾಗರಸೆ ಭೈರಪ್ಪ

12) ಕೆ.ಆರ್. ಗಣಪತಿ

13) ಭಾಗಕೊಳ್ಳಿ ಕೊಲ್ಲಪ್ಪ

14) ಮೂರ್ತಿ ಎಡೆಹಳ್ಳ

ಸ್ತ್ರೀ ವೇಷಧಾರಿಗಳು

1) ಕೆ. ನಾರಾಯಣಪ್ಪ ಹುರುಳಿ

2) ವಿ.ಟಿ. ಗಂಗಾಧರ

ಹಾಸ್ಯ ಪಾತ್ರಗಳು

1) ಮೂರ್ತಿ ಎಡೆಹಳ್ಳ

2) ಬಸವರಾಜ ಬಾವಿಮನೆ

                ಮೇಳದಲ್ಲಿ ಸ್ವಂತ ವೇಷಭೂಷಣಗಳು ಇರುವುದಿಲ್ಲ.

ಮೇಳದ ಮುಮ್ಮೇಳದವರು

ಭಾಗವತರು: ಮಂಜಪ್ಪ ಹುರುಳಿ

ಮೃದಂಗ: ತಿಮ್ಮಪ್ಪ ವನದಗದ್ದೆ

ಚಂಡೆ: ನಾರಾಯಣಪ್ಪ (ಕೆಂಚ ಮೇಷ್ಟ್ರು)

ಅಭ್ಯಾಸ ಮಾಡಿರುವ ಪ್ರಸಂಗಗಳು

1) ಶ್ವೇತಕುಮಾರ ಚರಿತ್ರೆ                2) ವಿದ್ಯುನ್ಮತಿ ಕಲ್ಯಾಣ 3) ವಾಲಿ ಸುಗ್ರೀವರ ಕಾಳಗ          4) ಪಂಚವಟಿ

ಪ್ರದರ್ಶನ ಮಾಡಿರುವ ಸ್ಥಳಗಳು

                ಪುರದಾಳು, ಶೆಟ್ಟಿಹಳ್ಳಿ, ಅಗಸವಳ್ಳಿ, ಹಾಯಹೊಳೆ

ಶ್ರೀ ಈಶ್ವರದೇವರ ಯಕ್ಷಗಾನ ಸಂಘ

ಕಲ್ಲಕುರಚಿ, ಅಂಚೆ : ಕನ್ನಂಗಿ, ತೀರ್ಥಹಳ್ಳಿ ತಾ. ಶಿವಮೊಗ್ಗ ಜಿಲ್ಲೆ

ಸ್ಥಾಪನೆ: 1978 (10.03.1978)

ತಂಡದ ಮುಖ್ಯಸ್ಥರು: ಎಂ. ರಾಮಪ್ಪ ಪಟೇಲ್, ಮಳಲಿ ಅ/o ಈಶ್ವರಪ್ಪ ಎಚ್. ಮೊ: 9480416322

ಕಲಾವಿದರ ಸಂಖ್ಯೆ : 16

1) ಎಂ. ರಾಮಪ್ಪ ಪಟೇಲ್

2) ಈಶ್ವರಪ್ಪ ಹುಬ್ಸೆ

3) ಕೊಳಗೋಡು ಮಂಜಪ್ಪ

4) ಶ್ರೀಧರ ಮೆಣಸಗಾರು

5) ಹುಚ್ಚಪ್ಪ ಹುಬ್ಬೆ

6) ಎಂ.ಬಿ. ನಾರಾಯಣಪ್ಪ

7) ಶೇಷಗಿರಿ ಸಿಂಗಾನ್ನೂರು

8) ಲಕ್ಷ್ಮಣಪ್ಪ ಸಿಂಗಾಪುರ

9) ಟಿ. ನಾರಾಯಣಪ್ಪ ಹುಬ್ಸೆ

10) ಎಸ್.ಬಿ. ಶ್ರೀಧರ

11) ಮಂಜಪ್ಪ ಕಾಗೋಡು

12) ಎಚ್.ಕೆ. ಸುರೇಶ ಹಾರೆಗೊಪ್ಪ

13) ಕೆ.ಎಸ್. ಪ್ರಸನ್ನ ಕಿರುವಾಸೆ

14) ಎ. ನಾರಾಯಣಪ್ಪ

15) ನಾಗಪ್ಪ ಹರ್ದೂರು

ಸ್ತ್ರೀ ವೇಷಧಾರಿಗಳು

1) ಹುಬ್ಸೆ ಹುಚ್ಚಪ್ಪ

2) ಎಂ.ಬಿ. ನಾರಾಯಣಪ್ಪ

3) ಶೇಷಗಿರಿ ಸಿಂಗಾನ್ನೂರು

ಹಾಸ್ಯ ಪಾತ್ರಧಾರಿಗಳು

1) ಎಂ.ಬಿ. ನಾರಾಯಣಪ್ಪ

                ಮೇಳದಲ್ಲಿ ಸ್ವಂತವಾಗಿ ವೇಷಭೂಷಣಗಳು ಇಲ್ಲ.

ಮುಮ್ಮೇಳದವರು

ಭಾಗವತರು: ಎಂ. ರಾಮಪ್ಪ ಪಟೇಲ್, ಮಳಲಿ

ಮೃದಂಗ: ಕೊಳಗೋಡು ಮಂಜಪ್ಪ, ಶ್ರೀಧರ ಮೆಣಸಗಾರು

ಚಂಡೆ : ಈಶ್ವರಪ್ಪ ಹುಬ್ಸೆ

ಪ್ರದರ್ಶನ ನೀಡುವ ಪ್ರಸಂಗಗಳು

1) ರತಿ ಕಲ್ಯಾಣ 2) ಭೀಷ್ಮ ವಿಜಯ 3) ದ್ರೌಪದಿ ಪ್ರತಾಪ 4) ಕರ್ಣಾರ್ಜುನ ಕಾಳಗ 5) ವಿದ್ಯುನ್ಮತಿ ಕಲ್ಯಾಣ 6) ಶ್ವೇತಕುಮಾರ ಚರಿತ್ರೆ

ಪ್ರದರ್ಶನ ನೀಡಿರುವ ಸ್ಥಳಗಳು

                ಕಲ್ಲುಕೊಪ್ಪ, ಶೆಟ್ಟಿಹಳ್ಳ, ಪುರದಾಳು, ಅರನ್ನಲ್ಲಿ, ಮತ್ತಿಕೊಪ್ಪ, ಎರೆಬೀಸು, ಹೆನಗೆರೆ, ಕಲ್ಲುಕುರಚಿ

 

ಶ್ರೀ ಮಹಾಗಣಪತಿ ಯಕ್ಷಗಾನ ಸಂಘ

ವಡೇರಕೊಪ್ಪ, ಅಂಚೆ:ಚೋರಡಿ, ಶಿವಮೊಗ್ಗ ತಾ. ಮತ್ತು ಜಿ.

ಸ್ಥಾಪನಾ ವರ್ಷ/ದಿನಾಂಕ : 14-03-1989

ಮುಖ್ಯಸ್ಥರ ಹೆಸರು: ರಾಮಪ್ಪ ಬೆಕ್ಕೋಡು, ಕೊರಗಿ, ಅಂಚೆ: ಚೋರಡಿ, ಶಿವಮೊಗ್ಗ ತಾ-ಜಿ. ಮೊ:9481500299

ಕಲಾವಿದರ ಸಂಖ್ಯೆ: 18

1) ರಾಮಪ್ಪ ಬೆಕ್ಕೋಡು

2) ಹೂವಪ್ಪ ಕ್ವಾಗೋಡು

3) ಲಕ್ಷ್ಮೀನಾರಾಯಣ ಬೆಕ್ಕೋಡು

4) ಗಣಪತಪ್ಪ ಬೆಕ್ಕೋಡು

5) ಕೃಷ್ಣಮೂರ್ತಿ ಬೆಕ್ಕೋಡು

6) ಎಚ್.ಎಂ. ಸತ್ಯನಾರಾಯಣ ಹಾನಗೆರೆ

7) ಮಂಜಪ್ಪ ತುಂಬಳ್ಳಿ

8) ಎಚ್.ಕೆ. ಮಂಜಪ್ಪ ಹಾನಗೆರೆ

9) ವೆಂಕಟೇಶ ಸುಳಿಮಕ್ಕಿ

10) ಧರ್ಮಪ್ಪ ಸುಳಿಮಕ್ಕಿ

11) ಎಸ್.ಪಿ. ರಾಮಪ್ಪ ಸುಳಿಮಕ್ಕಿ

12) ಬಂಗಾರಪ್ಪ ಪುರ್ಲೆ

13) ರಾಜಪ್ಪ ಅರಕಲ್ಲು

14) ಗಣಪತಿ ಅರಕಲ್ಲು

15) ಗಣಪತಿ ಇಡಾಲು

16) ನಾಗಪ್ಪ ಯಲವ

17) ಮಂಜಪ್ಪ ಬೀಸನಗದ್ದೆ

18) ವೆಂಕಟೇಶ ಹಾನಗೆರೆ

ಸ್ತ್ರೀ ವೇಷಧಾರಿಗಳು

1) ಧರ್ಮಪ್ಪ ಸುಳಿಮಕ್ಕಿ

2) ಬಂಗಾರಪ್ಪ ಪುರ್ಲೆ

3) ವೆಂಕಟೇಶ ಹಾನಗೆರೆ

ಹಾಸ್ಯಪಾತ್ರಗಳು

1) ಗಣಪತಪ್ಪ ಬೆಕ್ಕೋಡು

2) ರಾಮಪ್ಪ ಸುಳಿಮಕ್ಕಿ

                ಮೇಳದಲ್ಲಿ ವೇಷಭೂಷಣಗಳು ಇರುವುದಿಲ್ಲ.

ಮುಮ್ಮೇಳದವರು

ಭಾಗವತರು: ಲಕ್ಷ್ಮೀನಾರಾಯಣ ಬೆಕ್ಕೋಡು

ಮೃದಂಗ: ನಾಗಪ್ಪ ಯಲವ, ಮಂಜಪ್ಪ ಬೀಸನಗದ್ದೆ

ಚಂಡೆ: ಸತ್ಯನಾರಾಯಣ ಹಾನಗೆರೆ

ಪ್ರದರ್ಶನ ಮಾಡುವ ಪ್ರಸಂಗಗಳು

1) ಜಾಂಬವತಿ 2) ಕೃಷ್ಣ ವಿವಾಹ 3) ಮೀನಾಕ್ಷಿ ಕಲ್ಯಾಣ 4) ಭೀಷ್ಮ ವಿಜಯ 5) ಭಸ್ಮಾಸುರ ಮೋಹಿನಿ 6) ದ್ರೌಪದಿ ಪ್ರತಾಪ 7) ಸುಧನ್ವ ಕಾಳಗ 8) ರತಿ ಕಲ್ಯಾಣ 9) ವಿದ್ಯುನ್ಮತಿ ಕಲ್ಯಾಣ 10) ಕರ್ಣಾರ್ಜುನ ಕಾಳಗ 11) ಸ್ವರ್ಣ ಲಾವಣ್ಯ 12) ಶ್ವೇತಕುಮಾರ ಚರಿತ್ರೆ

ಪ್ರದರ್ಶನ ನೀಡರುವ ಸ್ಥಳಗಳು

                ವಡೇರಕೊಪ್ಪ, ಕೊರಗಿ, ತೊಳೆಮದು, ರೇಚಿಕೊಪ್ಪ, ಕಲ್ಲಕೊಪ್ಪ, ಕೊಳವಂಕ, ಪುರದಾಳು, ಹೆನಿಗೆರೆಕಟ್ಟೆ, ತಳಲೆ, ಕೆರೆಹಳ್ಳಿ, ಚೋರಡಿ, ಎರೆಬೀಸು, ಶೆಟ್ಟಿಹಳ್ಳಿ

 

ಡೊಳ್ಳು ಕುಣಿತ

                ಶಿವಮೊಗ್ಗ ಜಿಲ್ಲೆಯ ಗಂಡು ಕಲೆಯಾದ ಡೊಳ್ಳು ಕುಣಿತವನ್ನು ಜಿಲ್ಲೆಯಲ್ಲಿರುವ ದೀವರು, ಕುರುಬರು, ಒಕ್ಕಲಿಗರು, ಅಗಸರು, ಹಸಲರು ಮುಂತಾದ ಜನಾಂಗದವರು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಕರ್ನಾಟಕದಲ್ಲಿ ಡೊಳ್ಳುಕಲೆ ಕುರುಬ ಜನಾಂಗದವರ ಕಲೆ ಎಂದು ಜಾನಪದ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

                ಡೊಳ್ಳು ಕಲೆ ಮುಖ್ಯವಾಗಿ ದೈವಾರಾಧನೆಯ ಕಲೆ ಎಂದು ಹೇಳಬಹುದು. ಕುರುಬ ಜನಾಂಗದವರು ಬೀರೇದೇವರ ಆರಾಧನೆಗೆ ಡೊಳ್ಳನ್ನು ಬಳಸಿದರೆ, ಮಲೆನಾಡಿನ ದೀವರು ಜನಾಂಗದವರು ಗಾಮೇಶ್ವರ (ಗಾಮ) ಮತ್ತು ಕುಮಾರರಾಮರ ಆರಾಧನೆಗೆ ಬಳಸುತ್ತಾರೆ. ಕುರುಬ ಜನಾಂಗದವರು ‘ಬೀರ’ ಡೊಳ್ಳು ಎಂದು ಕರೆದರೆ, ದೀವರ ಜನಾಂಗದವರು ‘ಗಾಮ’ ಡೊಳ್ಳು ಎಂದು ಕರೆಯುತ್ತಾರೆ. ಬೀರ ಡೊಳ್ಳಿನ ಸಂಪ್ರದಾಯದವರ ಡೊಳ್ಳು ಬಾರಿಸುವಿಕೆಯಲ್ಲಿ ವೈವಿಧ್ಯವಿರುತ್ತದೆ. ದೀವರು ಜನಾಂಗದವರು ಗಾಮ ಮತ್ತು ಕುಮಾರರಾಮನ ಆರಾಧನೆಯ ಡೊಳ್ಳು ಬಾರಿಸುವಿಕೆಯಲ್ಲಿ ವೈವಿಧ್ಯವಿರುವುದಿಲ್ಲ.

                ಆದರೆ ಎರಡು ದಶಕಗಳ ಈಚೆಗೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಕಣ್ಣೂರು, ಗೌತಮಪುರ, ಹೊಸಕೊಪ್ಪ ಗ್ರಾಮಗಳ ದೀವರ ಯುವಕರು ಸಂಘಟಿತರಾಗಿ ತಂಡಗಳನ್ನು ರಚಿಸಿಕೊಂಡು ಕುರುಬ ಜನಾಂಗದವರನ್ನು ಮೀರಿಸುವಂತೆ ಬೀರ ಡೊಳ್ಳಿನ ಬಡಿತವನ್ನು ಅಭ್ಯಾಸ ಮಾಡಿ ವಿಶ್ವದ ಬೃಹತ್ ರಾಷ್ಟ್ರಗಳಾದ ರಷ್ಯಾ, ಅಮೆರಿಕಾ, ಚೀನಾ ಮುಂತಾದ ರಾಷ್ಟ್ರಗಳಿಗೆ ತಮ್ಮ ಡೊಳ್ಳು ತಂಡದೊಂದಿಗೆ ಪ್ರವಾಸ ಮಾಡಿ, ಆಯಾಯ ದೇಶದಲ್ಲಿ ಅನೇಕ ಕಡೆ ಪ್ರದರ್ಶನ ನೀಡಿ ಇಡೀ ವಿಶ್ವಕ್ಕೆ ಕರ್ನಾಟಕದ ಡೊಳ್ಳು ಕಲೆಯನ್ನು ಪರಿಚಯ ಮಾಡಿಸಿ, ದೀವರ ಜನಾಂಗದ ಯುವಕರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯ.

                ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹೊನ್ನಾಳಿ, ಚನ್ನಗಿರಿ, ಸಾಗರ, ಸೊರಬ, ಹೊಸನಗರ ತಾಲ್ಲೂಕುಗಳು ಡೊಳ್ಳು ಕುಣಿತದ ಮುಖ್ಯಪ್ರದೇಶಗಳು.

                ಕರ್ನಾಟಕದ ಜನಪದ ಕಾವ್ಯ ಸಂಪ್ರದಾಯಗಳಲ್ಲಿ ಬೀರದೇವರ ಡೊಳ್ಳಿನ ಸಂಪ್ರದಾಯವೂ ಒಂದಾಗಿದೆ. ಈ ಡೊಳ್ಳಿನ ಸಂಪ್ರದಾಯ ಎರಡು ರೂಪಗಳಲ್ಲಿ ಕಂಡುಬರುತ್ತದೆ.

1)            ಡೊಳ್ಳು ಕುಣಿತ                2) ಡೊಳ್ಳು ಮೇಳ

ಇದನ್ನು ಕುರುಬರ ಮೇಳವೆಂದೂ ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ ಡೊಳ್ಳು ಕಲೆಯನ್ನು ಇತರೆ ಹಿಂದುಳಿದ ಜನಾಂಗದವರು ಕಲಿತು ಕುರುಬ ಜನಾಂಗದವರನ್ನು ಮೀರಿಸುತ್ತಿದ್ದಾರೆ. ಡೊಳ್ಳು- ಆರಾಧನೆ ಕಲೆಯಿಂದ ಸಂಪೂರ್ಣ ಲೌಕಿಕ ಕಲೆಯಾಗಿ ಬೆಳೆಯುತ್ತಿದೆ.

ಉತ್ತರಕರ್ನಾಟಕದಲ್ಲಿ ವ್ಯಾಪಕವಾಗಿ ಕಂಡುಬರುವ ಈ ಸಂಪ್ರದಾಯ ದಕ್ಷಿಣ ಕರ್ನಾಟಕದ ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳವರೆಗೂ ವ್ಯಾಪಿಸಿದೆ. ದಕ್ಷಿಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹಾಲುಮತದವರು ಹೇರಳವಾಗಿ ನೆಲೆಸಿದ್ದಾರೆ. ಬೀರೆದೇವರ ಸಂಪ್ರದಾಯ ಇಲ್ಲಿ ವಿಶೇಷವಾಗಿ ಕಂಡುಬಂದರೂ ಡೊಳ್ಳು ಕುಣಿತವಾಗಲಿ, ಡೊಳ್ಳಿನ ಮೇಳವಾಗಲಿ ಕಂಡುಬರುವುದಿಲ್ಲ.

ನಮ್ಮ ಜನಪದ ವಾದ್ಯಗಳಲ್ಲಿ ಡೊಳ್ಳು ಗಾತ್ರದಲ್ಲಿ, ನಾದದಲ್ಲಿಯೂ ದೊಡ್ಡದು. ಇದೊಂದು ರಣವಾದ್ಯದಂತೆ ಕಂಡುಬರುತ್ತದೆ. ವೀರರು ಮಾತ್ರ ಹೊತ್ತು ಕುಣಿಯಬಹುದಾದ ಚರ್ಮವಾದ್ಯ ಇದಾಗಿದೆ. ಎರಡು ಅಡಿ ಉದ್ದ, ಒಂದು ಅಡಿ ಎಂಟು ಇಂಚು ಅಗಲ, ಐದು ಅಡಿ ಸುತ್ತಳತೆಯ ಈ ವಾದ್ಯ ಬಾರಿಕೆಯ ವಾದ್ಯ. ಇದಕ್ಕೆ ತಾಳೇಮರ, ಬೈನೆಮರ ಮತ್ತು ಸುರಹೊನ್ನೆ, ನಂದಿ, ಶಿವನೆ, ಗಂಧಗರಿಗೆ ಮುಂತಾದ ಮರಗಳನ್ನು ಬಳಸಲಾಗುತ್ತದೆ. ಪೀಪಾಯಿ ಆಕಾರದಲ್ಲಿ ಕೊರೆದ ಮರದ ಗಡಿಗೆಗೆ ಒಂದು ಕಡೆ ಆಡಿನ ಚರ್ಮ, ಇನ್ನೊಂದು ಕಡೆ ಕುರಿಯ ಚರ್ಮವನ್ನು ಅಳವಡಿಸಲಾಗುತ್ತದೆ. ಈ ಚರ್ಮವನ್ನು ಭದ್ರವಾದ ಹುರಿಗಳಿಂದ ಬಿಗಿದು ಕಟ್ಟಲಾಗುತ್ತದೆ. ಡೊಳ್ಳಿನವರು ತಮ್ಮ ವಾದ್ಯವನ್ನು ಬಾರಿಸಲು ಎರಡು ಕಡೆಗೂ ಕೋಲುಗಳನ್ನು ಬಳಸುವುದು ಕಂಡುಬರುವುದಿಲ್ಲ. ಬಲಗೈಯಲ್ಲಿ ‘ಗುಣಿ’ ಎಂಬ ಒಂದು ಮೊಳ ಉದ್ದದ ತುಂಡುಕೋಲನ್ನು ಬಳಸಿದರೆ ಎಡಗೈಯಲ್ಲಿ ಡೊಳ್ಳಿಯ ಎಡಭಾಗವನ್ನು ಬಡಿಯುತ್ತಾರೆ. ಈ ನಾದಗಳು ಏಕಕಾಲದಲ್ಲಿ ಬರದೆ ಒಂದಾದಮೇಲೊಂದರಂತೆ ಬಂದು ವೈವಿಧ್ಯವನ್ನು ನೀಡುತ್ತವೆ. ಬಹುದೂರದವರೆಗೆ ಕೇಳಿಬರುವ ಡೊಳ್ಳಿನ ಶಬ್ದ ಬಡಿಯುವವರಲ್ಲಿ, ಕೇಳುವವರಲ್ಲಿ ಪೌರುಷವನ್ನು ಚಿಗುರಿಸುತ್ತದೆ, ಆವೇಶವನ್ನು ತುಂಬುತ್ತದೆ.

ಡೊಳ್ಳಿಗೆ ಸಂಬಂಧಿಸಿದಂತೆ ಧಾರ್ಮಿಕ ಹಿನ್ನೆಲೆಯ ಅನೇಕ ಕಥೆಗಳು ಕಂಡುಬರುತ್ತವೆ.

ಹಿಂದೆ ಡೊಳ್ಳಾಸುರ ಎಂಬ ರಾಕ್ಷಸನಿದ್ದ. ಈ ರಾಕ್ಷಸ ಈಶ್ವರನನ್ನು ಕುರಿತು ತಪಸ್ಸು ಮಾಡಿ ತನ್ನ ಹೊಟ್ಟೆಯಲ್ಲಿಯೇ ಶಿವ ನೆಲೆಸುವಂತೆ ವರವನ್ನು ಬೇಡಿದ. ಶಿವ ಭಕ್ತನ ಮನವಿಯನ್ನು ಮನ್ನಿಸಿ ಅಲ್ಲಿಯೇ ನೆಲೆಸಿದ. ಕೊನೆಗೆ ಶಿವನಿಲ್ಲದೆ ಲೋಕವೆಲ್ಲಾ ತಲ್ಲಣಗೊಂಡು ದೇವತೆಗಳು ಗಣಪತಿಯನ್ನು ಮೊರೆ ಹೊಕ್ಕರು. ಅವನು ಡೊಳ್ಳೇಶ್ವರನ ಎದುರಿಗೆ ಅಪೂರ್ವ ರೀತಿಯಲ್ಲಿ ಕುಣಿಯತೊಡಗಿದ. ವಾದ್ಯಗಳ ಹೊಡೆತ, ಗಣೇಶನ ಕುಣಿತಗಳು ಡೊಳ್ಳೇಶ್ವರನ ಹೊಟ್ಟೆಯಲ್ಲಿದ್ದ ಶಿವ ಉಬ್ಬಿ ಹೋಗುವಂತೆ ಮಾಡಿದವು. ಉಬ್ಬುತ್ತಾ, ಉಬ್ಬುತ್ತಾ ಶಿವ ದೊಡ್ಡದಾಗಿ ಬೆಳೆದ. ಡೊಳ್ಳೇಶ್ವರನ ಹೊಟ್ಟೆ ಸೀಳಿಹೋಯಿತು. ಕೊನೆಗೆ ದೇವತೆಗಳು ಮರಳಿ ಶಿವನನ್ನು ಪಡೆದ ಸಂಕೇತವಾಗಿ ಡೊಳ್ಳೇಶ್ವರನ ಹೊಟ್ಟೆಯ ಚರ್ಮದಿಂದ ಡೊಳ್ಳನ್ನು ಮಾಡಿಕೊಂಡು ಬಾರಿಸುತ್ತಾ ಕುಣಿದರು. ಶಿವನನ್ನು ಸಂತುಷ್ಟಗೊಳಿಸಿದರು.

ಹೀಗೆ ಬಂದ ಈ ವಾದ್ಯ ಬೀರನ ಭಕ್ತರಾದ ಕುರುಬರಿಗೂ ಉಳಿದುಬಂದಿತು. ಶಿವನ ಪ್ರತಿರೂಪವೇ ಬೀರೇಶ್ವರ ಎಂಬುದನ್ನು ಇಲ್ಲಿ ಗಮನಿಸಬಹುದು. ಹಾಡುಗಾರಿಕೆಯ ಸಂಪ್ರದಾಯದಲ್ಲಿ ಡೊಳ್ಳಿನ ಹಾಡುಗಳು ಕುರುಬರಿಗೆ ಮಾತ್ರ ಮೀಸಲಾದವು. ಅತ್ಯಂತ ವಿರಳವಾಗಿ ಕೆಲವು ಕಡೆ ಡೊಳ್ಳು ಕುಣಿತವನ್ನು ಕಲಿತ ನಿದರ್ಶನಗಳು ಇದ್ದರೂ ಇದು ಪ್ರಧಾನವಾಗಿ ಕುರುಬರ ಕಲೆ ಎಂಬುದು ವಿದ್ವಾಂಸರುಗಳ ಅಭಿಪ್ರಾಯವಾಗಿವೆ

ಡೊಳ್ಳು ಕುಣಿತದ ಸಂಪ್ರದಾಯವನ್ನು ವೃತ್ತಿಗಾಯಕ ಸಂಪ್ರದಾಯವೆಂದು ಕರೆಯಲು ಬರುವುದಿಲ್ಲ. ಏಕೆಂದರೆ ಇದನ್ನು ಬದುಕಿನ ವೃತ್ತಿಯನ್ನಾಗಿ ಸ್ವೀಕರಿಸಿಲ್ಲ. ಬಿಡುವಿನ ವೇಳೆಯಲ್ಲಿ ಜಾತ್ರೆ, ಉತ್ಸವಗಳಲ್ಲಿ, ವಿನೋದಕ್ಕಾಗಿ ಕಲ್ಪಿಸಿಕೊಂಡ ಒಂದು ಕಲೆ. ತಮ್ಮ ದೈವಗಳ ಆರಾಧನೆಗೆ ಡೊಳ್ಳಿನ ಸೇವೆಯನ್ನು ಏರ್ಪಡಿಸಿದರೂ ವೃತ್ತಿಗಾಯಕ ಮೇಳದಂತೆ ಇದನ್ನು ಪರಿಗಣಿಸುವುದು ಕಷ್ಟವಾಗುತ್ತದೆ.

ಡೊಳ್ಳಿನ ನೃತ್ಯ (ಕುಣಿತ) ಒಂದು ಗಂಡುಕಲೆಯಾಗಿ ಈಗಾಗಲೇ ಅಪಾರ ಜನಪ್ರಿಯತೆಯನ್ನು ಸಾಧಿಸಿಕೊಂಡಿದೆ. ಹಳ್ಳಿಯ ಕಟ್ಟಾಳುಗಳು ದೊಡ್ಡ ದೊಡ್ಡ ಡೊಳ್ಳುಗಳನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ತಮ್ಮ ಶಕ್ತಿ ಸರ್ವಸ್ವವನ್ನು ಬಳಸಿ ಅವುಗಳನ್ನು ಬಡಿಯುತ್ತಾ ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಡೊಳ್ಳಿನ ಕಿವಿ ಬಿರಿಯುವ ಶಬ್ದ, ಝಲ್ಲರಿಯ ಕಣಿ-ಕಣಿ ನಾದ, ತಾಳಬದ್ಧವಾದ ಹೆಜ್ಜೆಯ ಕುಣಿತಗಳು ಇವುಗಳಿಂದ ಕೂಡಿದ ಈ ಮೇಳ ರೋಮಾಂಚನಕಾರಿಯಾದುದು, ರಮ್ಯಾದ್ಭುತವಾದುದು. ಹಿಡಿದ ಕೋಲು ಮುರಿಯುವಂತೆ, ಬೆನ್ನಲ್ಲಿ ಬೆವರು ಕೀಳುವಂತೆ ಡೊಳ್ಳನ್ನು ಅವರು ಬಡಿಯುವುದು ಒಂದು ಗತ್ತಾದರೆ, ವಿವಿಧ ಗತ್ತುಗಳಿಗೆ ತಕ್ಕಂತೆ ಕುಣಿದು ಕುಪ್ಪಳಿಸುವುದು ಮತ್ತೊಂದು ಗತ್ತು.

ಡೊಳ್ಳನ್ನು ಹೊತ್ತು ಲಾಗ ಹಾಕುವುದು, ಡೊಳ್ಳಿನ ಮೇಲೆ ಮತ್ತೊಬ್ಬನನ್ನು ಕೂರಿಸಿಕೊಂಡು ಕುಣಿಯುವುದು, ವೃತ್ತಾಕಾರವಾಗಿ, ಚಚ್ಚೌಕವಾಗಿ ಕುಣಿಯುವುದು, ಮರಗಾಲು ಕಟ್ಟಿಕೊಂಡು ಕುಣಿಯುವುದು ಇಂತಹ ಕೌಶಲಗಳಿಂದ ಕೂಡಿದ ಡೊಳ್ಳು ಕುಣಿತ ಕರ್ನಾಟಕದ ಜಾನಪದ ಕಲೆಗಳ ವೈವಿಧ್ಯಕ್ಕೆ ಹಾಗೂ ಸತ್ವಪೂರ್ಣತೆಗೆ ದ್ಯೋತಕವಾಗಿದೆ. ಮಕ್ಕಳ ಡೊಳ್ಳುಮೇಳ ಮತ್ತು ಮಹಿಳೆಯರ ಡೊಳ್ಳುಮೇಳಗಳು ಬೆಳೆಯುತ್ತಿರುವುದು ಒಂದು ಶುಭ ಸೂಚನೆಯಾಗಿದೆ.

ಡೊಳ್ಳಿನ ಕುಣಿತದ ನಂತರ ಪರಿಗಣಿಸಬೇಕಾದುದು ಡೊಳ್ಳಿನ ಗೀತಮೇಳ. ಜನಪದ ಗೀತಮೇಳಗಳ ಸಾಲಿನಲ್ಲಿ ಇದಕ್ಕೂ ಒಂದು ಸ್ಥಾನವನ್ನು ಮೀಸಲಾಗಿಡಬೇಕು. ಡೊಳ್ಳಿನ ಮೇಳದಲ್ಲಿ ಸಾಹಿತ್ಯದ ಭಾಗ ಅಪಾರವಾಗಿ, ಲಭ್ಯವಾಗುತ್ತದೆ. ವೈವಿಧ್ಯಪೂರ್ಣವಾದ ಕಥೆಗಳು, ಗೀತೆಗಳು ವಿವಿಧ ಮಟ್ಟುಗಳಲ್ಲಿ ಕಂಡುಬರುತ್ತವೆ. ಬಿಡಿ ಹಾಡುಗಳಲ್ಲಿ ಗಣಸ್ತುತಿ, ದೇವಸ್ತುತಿ, ಬೀರದೇವರ ಸ್ತುತಿ ಇವುಗಳ ಜೊತೆಗೇ ನೀತಿ ಪ್ರಧಾನವಾದ, ತತ್ವ ಪ್ರಧಾನವಾದ ಅನೇಕ ಬಗೆಯ ಹಾಡುಗಳು ಲಭ್ಯವಾಗುತ್ತವೆ. ಇವುಗಳಲ್ಲಿ ‘ಖರೆ’ ಹಾಡುಗಳು ತುಂಬಾ ಆಕರ್ಷಕವಾದವು.

ವೇದ ಶಾಸ್ತ್ರ ಹದಿನೆಂಟು ಪುರಾಣ

ಓದಿ ಹೇಳಿದವನ ಮಾತ ಖರೆ |

ಅನುಭವವರಿಯದೆ ಅಂಧಕತನದಿಂದ

ನಿಂದೆನಾಡಿ ನುಡಿದದ್ದು ಖರೆ ||

ಸತ್ಯದಲ್ಲಿ ಹರಿಶ್ಚಂದ್ರ ರಾಜನು

ಸುಡುಗಾಡು ಸೇರಿದ್ದು ಖರೆ |

ತತ್ವ ಬಿಟ್ಟು ನದಿಯೊಳು ಕರ್ಣನ

ತೇಲಿ ಬಿಟ್ಟ ಬಂದದ್ದು ಖರೆ ||

ಮೃಖಂಡ ಮುನಿಯ ಸಾವಿರ ವರ್ಷ

ತಪಸ್ಸಿಗೆ ಕುಳಿತದ್ದು ಖರೆ |

ಹಸಿವು ಅಡಗಿ ಅವನ ಸುತ್ತಲು ವೃಕ್ಷ

ಹುತ್ತ ಮೇಲೆ ಬೆಳೆದದ್ದು ಖರೆ ||

ದೇಹ ಕೂದಲು ಭೂಮಿಗೆ ಬೆಳೆದು

ಬೇರು ಬಿಟ್ಟು ಇಳಿದದ್ದು ಖರೆ |

ಧರ್ಮರಾಜನಿಗೆ ದವಲತ್ತು ಕಡಿಮೆಯಿಲ್ಲ

ಗಳಿಗ್ಯಾಗಿ ಅನುಗಾಲ ಮಾಡ್ಸಿದಯೆ ||

ಪುಣ್ಣಿಷ್ಟನಾದಂತ ಹರಿಶ್ಚಂದ್ರರಾಜನ

ವೀರಬಾಹುವಿನ ಮನೆ ಸೇರ್ಸಿದೀಯೆ |

ಪ್ರಾಣ ಉಳ್ಳಾಕೆ ಅವನ ಗಾಣ ಹೊಡಿಲಾಕಚ್ಚಿ

ದೀಪದ ಕಲಿ ರಾಗಕ್ಕೆ ಮೆಚ್ಚಿಸಿದೀಯೆ ||

ಬೀರದೇವರನ್ನು ಕುರಿತ ಪದ್ಯ

                ಎಲ್ಲೆಲ್ಲಾಡಿ ಬಂದೆ ನಮ್ಮಪ್ಪ ನಿನ್ನ

                ಕಾಲೆಲ್ಲಾ ಕೆಂಧೂಳವೊ

                ಮೈಯೆಲ್ಲಾ ಸಿರಿಗಂಧಾವೊ

                ಕಾಲೊಳಗಿರುವ ಲೋಲೆಂಬ ಗೆಜ್ಜೆ

                ಗಲ್ಲಗಲ್ಲ ಮಾತಾಡಿದವೊ

                ಏ ಗಲ್ಲ ಗಲ್ಲ ಮಾತಾಡಿದ ಕೇಳಿ

                ಸಿದ್ದಾ ಬಂದಾವೆಂದೇವೊ

                ಸಂಜೆಲೊತ್ತೀನ ಪಂಜೀನ ಬೆಳಕಲಿ

                ನಿಂದಿನ ನಾಡಿನ ನೀಮ್ಯಾಗೊ ಕಂಡೆ

                ಮಂಜಿನೋಟಕ್ಕೆ ಹೋಗಿದ್ದೇವೊ

                ಭಾವವುಳ್ಳ ನಿನ್ನ ಭಕ್ತರ ಮನೆಗೆ

                ಕೋರೆ ಊಟಕ್ಕೆ ಹೋಗಿದ್ದೆವೊ

                ಹೊಳವಾ ಕಂಸೆ ಯೊಳೆಯಾಗೆ ಬೀರಪ್ಪಾ

ಸುಳುವಾ ಕಂಡೆ ನಿನ್ನ ಪೌಳ್ಯಾಗೆ

                ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲ್ಲೂಕುಗಳ ಡೊಳ್ಳು ಕಲಾ ತಂಡಗಳು ದೀವರು ಜನಾಂಗದ ತಂಡಗಳಾಗಿವೆ. ಉತ್ತರಕರ್ನಾಟಕದ ಡೊಳ್ಳು ತಂಡಗಳ ಗೀತಮೇಳಗಳಲ್ಲಿ ಹೇಳುವ ಬಹುತೇಕ ಹಾಡುಗಳನ್ನು ಈ ತಂಡಗಳ ಕಲಾವಿದರು ಹೇಳುತ್ತಾರೆ. ದೀವರು ಜನಾಂಗದ ಡೊಳ್ಳು ತಂಡಗಳನ್ನು ಸಂಕ್ಷಿಪ್ತ ಪರಿಚಯದೊಂದಿಗೆ, ಆಯಾ ತಂಡದವರು ಹೇಳುವ ಗೀತಸಾಹಿತ್ಯದ ಪರಿಚಯವನ್ನು ಮಾಡಿಕೊಡಲಾಗಿದೆ.

 

ಕಣ್ಣೇಶ್ವರ ಜಾನಪದ ಕಲಾ ಸಂಘ (ರಿ.)

ಕಣ್ಣೂರು, ಅಂಚೆ: ಗೌತಮಪುರ, ಆನಂದಪುರಂ ಹೋಬಳಿ, ಸಾಗರ ತಾಲ್ಲೂಕು

                ‘ಕಣ್ಣೂರು’ ಸಾಗರ ತಾಲ್ಲೂಕು ಕೇಂದ್ರದಿಂದ 34 ಕಿ.ಮೀ. ದೂರದಲ್ಲಿರುವ ಹಳ್ಳಿ. ಹಿಂದೆ ಇಲ್ಲಿ ಕಣ್ವ ಎಂಬ ಮಹಾಮುನಿ ತಪಸ್ಸು ಮಾಡಿದ್ದನಂತೆ. ಈ ಗ್ರಾಮದಲ್ಲಿ ಕಣ್ಣೇಶ್ವರನ ದೇವಾಲಯವಿದೆ. ಈ ಗ್ರಾಮದಲ್ಲಿ ಹೆಚ್ಚು ಕೃಷಿಕರೇ ವಾಸವಾಗಿದ್ದಾರೆ. ಹೋಬಳಿ ಕೇಂದ್ರ ಆನಂದಪುರಂನಿಂದ ಎರಡು ಕಿ.ಮೀ. ದೂರದಲ್ಲಿದೆ. ಕಣ್ವ ಋಷಿಯು ತಪಸ್ಸು ಮಾಡಿದ್ದರಿಂದ ಈ ಊರಿಗೆ ಕಣ್ಣೂರು ಎಂದು ಹೆಸರು ಬಂದಿದೆ ಎಂದು ಸ್ಥಳ ಪುರಾಣದಿಂದ ತಿಳಿಯುತ್ತದೆ.

                ಊರಿನ ಯುವಕರುಗಳೆಲ್ಲ ಸೇರಿ 1978ರಲ್ಲಿ ಕಣ್ಣೇಶ್ವರ ಜಾನಪದ ಕಲಾ ಸಂಘವನ್ನು ಪ್ರಾರಂಭ ಮಾಡುವಾಗ 15 ಜನ ಜನಪದ ಡೊಳ್ಳು ಕಲಾವಿದರು ಇದ್ದರು. ಇಂದು ಕರ್ನಾಟಕ ರಾಜ್ಯದ ಡೊಳ್ಳು ಕಲಾತಂಡಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಬೆಳೆದಂತಹ ತಂಡವಾಗಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳಾದ ಅಮೇರಿಕಾ, ರಷ್ಯಾ, ಇಂಗ್ಲೆಂಡ್ ದೇಶಗಳ ಪ್ರವಾಸ ಮಾಡಿ ಮಲೆನಾಡಿನ ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆಯ ಡೊಳ್ಳು ಕಲೆಯನ್ನು ಆ ದೇಶಗಳಲ್ಲಿ ಪ್ರದರ್ಶನ ಮಾಡಿ ಕರ್ನಾಟಕದ ಡೊಳ್ಳು ಕಲೆಯನ್ನು ಮೊಳಗಿಸಿ ಕೀರ್ತಿ ಪತಾಕೆಯನ್ನು ಹಾರಿಸಿ ಅಂತಾರಾಷ್ಟ್ರೀಯ ಕಲಾವಿದರಾಗಿ ಖ್ಯಾತಿಯನ್ನು ಪಡೆದು ಬೆಳೆದಿದ್ದಾರೆ. ಇವರ ಸಾಧನೆ ಅಪಾರ. ದೀವರು ಜನಾಂಗದ ಯುವಕರ ಅಮೋಘ ಸಾಧನೆಯನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವಂತಾಗಿದೆ.

                ರಾಜ್ಯದ ಯುವ ಮತ್ತು ಕೃಷಿ ಪ್ರಶಸ್ತಿ ವಿಜೇತ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಬಿ. ಟಾಕಪ್ಪನವರು ಈ ತಂಡದ ಸಂಚಾಲಕರಾಗಿದ್ದಾರೆ. ಇವರ ತಂಡದಲ್ಲಿ ಡೊಳ್ಳು ಬಾರಿಸುವವರು ಇಪ್ಪತ್ತೈದು ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು ಇಪ್ಪತ್ತು (20) ಜನ, ವಾದ್ಯಗಾರರು ಮೂರು ಜನ, ಹಾಡುಗಾರರು ಎರಡು ಜನ ಸೇರಿ ಒಟ್ಟು ಇಪ್ಪತ್ತೈದು ಜನ ಅಪರೂಪದ ಕಲಾವಿದರು ಇರುವಂತಹ ಸುಸಜ್ಜಿತವಾದ ತಂಡ.

ಡೊಳ್ಳುಗಳ ವಿವರ

                ಶಿವನೆ ಮತ್ತು ಹೊನ್ನೆ ಎಂಬ ಜಾತಿ ಮರದಿಂದ ತಯಾರಿಸಿದ ಇಪ್ಪತ್ತು ಡೊಳ್ಳುಗಳಿವೆ. ಇವುಗಳ ಉದ್ದ ಎರಡು ಅಡಿ, ಅಗಲ ಒಂದು ಅಡಿ ಎಂಟು ಇಂಚು, ಸುತ್ತಳತೆ ಐದು ಅಡಿ. ಡೊಳ್ಳಿನ ಬಲಭಾಗಕ್ಕೆ ಚಿಂಕೆ ಚರ್ಮ, ಎಡಭಾಗಕ್ಕೆ ಆಡು ಕುರಿ ಚರ್ಮ ಹೊದಿಸಿದ್ದಾರೆ. ಚರ್ಮಕ್ಕೆ ಬಿದಿರಿನ ಬಂಕ ಹಾಕಿ ಪಿಳ್ಳೇರಿಸಿ ಪುಂಡಿ ನಾರಿನ ಹಗ್ಗದಿಂದ ಬಿಗಿದಿರುತ್ತಾರೆ. ಹಗ್ಗ ಏಳೂವರೆ ಮಾರು (ನಲವತ್ತೈದು ಅಡಿ) ಉದ್ದವಿರುತ್ತದೆ. ಡೊಳ್ಳು ಬಾರಿಸಲು ಮರ ಅಥವಾ ಬೆತ್ತದ ಕೋಲು ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಹಳದಿ ಮತ್ತು ಕೆಂಪುಬಣ್ಣದ ಪೇಟಾಗಳು. ಸೊಂಟಕ್ಕೆ ಕರಿಯ ಕಂಬಳಿ. ಮೈಗೆ ಜಿಂಕೆ, ಹುಲಿ ಬಣ್ಣದ ಕವಚ. ಕೊರಳಿಗೆ ತಾಯತ, ತಾಯತದಲ್ಲಿ ಆಂಜನೇಯನ ಚಿತ್ರ, ಬೆಳ್ಳಿ ತಾಯತ ಇರುವ ಕವಡೆಸರ. ಕೈಯ ಬಲಭಾಗಕ್ಕೆ ತಾಮ್ರದ ತಾಯತ ಕಟ್ಟಿ ಉಣ್ಣೆಯ ಕಪ್ಪುದಾರವನ್ನು ಕಟ್ಟಿರುತ್ತಾರೆ. ಹಣೆಗೆ, ಕೊರಳಿಗೆ ವಿಭೂತಿ, ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ.

ನೃತ್ಯದ ಸ್ವರೂಪ

                ಒಂದ್ಗುಣಿ, ಎರಡು ಗುಣಿ, ಮೂರುಗುಣಿ, ಎಡಗೈನಾದ

ಸಾಹಿತ್ಯ-ಹಾಡುಗಳು

1) ಬಸವಣ್ಣನ ಹಾಡು 2) ಬೀರೇದೇವರ ಹಾಡು 3) ರೇವಣಸಿದ್ದನ ಹಾಡು 4) ಡೊಳ್ಳಾಸುರನ ಹಾಡು 5) ಸುಳ್ಳನಾಡಬೇಡ ನಾಲಗೆ 6) ಬೇಡರ ಕಣ್ಣಪ್ಪನ ಹಾಡು

ಪ್ರದರ್ಶನಗಳು

                ಅಂತಾರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನಗಳು

1) ರಷ್ಯಾದಲ್ಲಿ ಭಾರತೋತ್ಸವ

                1987ರಲ್ಲಿ ರಷ್ಯಾದಲ್ಲಿ ಭಾರತೋತ್ಸವ ನಡೆದಾಗ ಭಾರತವನ್ನು ಪ್ರತಿನಿಧಿಸಿ ಕು.ಶಿ. ಹರಿದಾಸಭಟ್ಟರ ನಾಯಕತ್ವದಲ್ಲಿ ರಷ್ಯಾದಲ್ಲಿ ಮೂರು ತಿಂಗಳ ಕಾಲ ರಷ್ಯಾದೇಶದ ಎಂಟು ಮಹಾನಗರಗಳಲ್ಲಿ ಮೂವತ್ತೈದಕ್ಕೂ ಹೆಚ್ಚಿನ ಪ್ರದರ್ಶನ ನೀಡಿ, ಕರ್ನಾಟಕದ ಮಲೆನಾಡಿದ ದೀವರ ಡೊಳ್ಳು ಕಲೆಯನ್ನು ಪ್ರದರ್ಶನ ನೀಡಿ ಡೊಳ್ಳಿಯ ಜಯಭೇರಿಯನ್ನು ಮೊಳಗಿಸಿದ್ದಾರೆ. ಮುಖ್ಯವಾಗಿ ಮಾಸ್ಕೋ, ಲೆನಿನ್‍ಗ್ರಾಡ್, ಅರ್ಹಾಗೆಲ್, ಮವರ್ತೆನ್ಸ್, ಪಿಸ್ಕೋವಾ, ನವಗರೋಡ, ತಾಷ್ಕೆಂಟ್‍ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ದಿನಾಂಕ 3-7-1987ರಿಂದ 10-10-1987ರವರೆಗೆ ಪ್ರವಾಸಗೈದು ಪ್ರದರ್ಶನ ನೀಡಿದ್ದಾರೆ.

2) ಇಂಗ್ಲೆಂಡಿನಲ್ಲಿ ಕನ್ನಡ ಸಮ್ಮೇಳನ

                ಇಂಗ್ಲೆಂಡಿನ ಮ್ಯಾಂಚೆಸ್ಟರ್‍ನಲ್ಲಿ ದಿನಾಂಕ 25-8-2000ರಿಂದ 28-3-2000ರವರೆಗೆ ಕರ್ನಾಟಕವನ್ನು ಪ್ರತಿನಿಧಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರ ನಾಯಕತ್ವದಲ್ಲಿ ನಡೆದ ಸಹಸ್ರಮಾನದ ಕನ್ನಡ ಸಮ್ಮೇಳನದಲ್ಲಿ ಡೊಳ್ಳಿನ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.

3) ಅಮೇರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ

                ಅಮೇರಿಕಾದ ಹೋಸ್ಟನ್ ನಗರದಲ್ಲಿ ದಿನಾಂಕ 1-3-2000ದಿಂದ 3-9-2000ವರೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದಿಂದ ಭಾಗವಹಿಸಿ (ಡೊಳ್ಳು ಕುಣಿತ ತಂಡದೊಂದಿಗೆ) ಡೊಳ್ಳು ಕಲಾ ಪ್ರದರ್ಶನವನ್ನು ನೀಡಲಾಗಿದೆ.

4) ಇತರೆ ಅಂತಾರಾಷ್ಟ್ರೀಯ ಸಮ್ಮೇಳನಗಳು

1) ವಿಶ್ವ ಪ್ರವಾಸೋದ್ಯಮ ಉತ್ಸವ, ಬೆಂಗಳೂರು

2) ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ

3) ದಿನಾಂಕ 15.1.1985-17.12.1885ರವರೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

4) ಮದ್ರಾಸ್‍ನಲ್ಲಿ ನಡೆದ ಸೌತ್ ಏಷ್ಯನ್ ಫೆಡರೇಷನ್ ಕ್ರೀಡಾಕೂಟದ ಪ್ರಾರಂಭೋತ್ಸವ ಸಮಾರಂಭ

5) ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಮೇಳ

6) ದಿನಾಂಕ 3.10.2011-21.9.2012ರವರೆಗೆ ನವದೆಹಲಿಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

7) ದಿನಾಂಕ 11, 12, 13 ಮಾರ್ಚ್ 2010ರಂದು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ಡೊಳ್ಳುಕಲೆಯನ್ನು ಪ್ರದರ್ಶನ ಮಾಡಲಾಗಿದೆ.

5) ರಾಷ್ಟ್ರೀಯ ಕಾರ್ಯಕ್ರಮಗಳು

                ಕೆಳಕಂಡ ಕಾರ್ಯಕ್ರಮಗಳಲ್ಲಿ ಈ ತಂಡದವರು ಡೊಳ್ಳು ಕಲೆಯನ್ನು ಪ್ರದರ್ಶಿಸಿರುತ್ತಾರೆ.

1)            1982 ಡಿಸೆಂಬರ್ 23ರಿಂದ ಶಿರಸಿಯಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ

2) 1985 ನವೆಂಬರ್‍ನಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಪ್ರಾರಂಭೋತ್ಸವ ಸಮಾರಂಭ

3)            1988ರಲ್ಲ್ಲಿ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಕರ್ನಾಟಕ ಉತ್ಸವ

4)            1988 ಮಾರ್ಚ್ 10, 12ರಂದು ನವದೆಹಲಿಯಲ್ಲಿ ನಡೆದ ಕರ್ನಾಟಕ ಉತ್ಸವ

5)            1989 ಡಿಸೆಂಬರ್ 14ರಿಂದ 17ರವರೆಗೆ ಧಾರವಾಡದಲ್ಲಿ ನಡೆದ ಅಖಿಲ ಭಾರತ ಗ್ರಾಮೀಣ ಕ್ರೀಡಾಕೂಟದ ಕಾರ್ಯಕ್ರಮ

6)            1993 ಜನವರಿ 28, 29ರಂದು ಬಂಡೀಪುರದಲ್ಲಿ ನಡೆದ ರಾಷ್ಟ್ರೀಯ ಪ್ರವಾಸೋದ್ಯಮ ಉತ್ಸವ

7)            1993 ಜನವರಿ 30, 31ರಂದು ಊಟಿಯಲ್ಲಿ ನಡೆದ ರಾಷ್ಟ್ರೀಯ ಟೀ ಮತ್ತು ಪ್ರವಾಸೋದ್ಯಮ ಉತ್ಸವ

8)            1993ರಲ್ಲಿ ಮದ್ರಾಸ್‍ನಲ್ಲಿ ನಡೆದ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಮ್ಮೇಳನ

9)            1994 ನವೆಂಬರ್ 12ರಲ್ಲಿ ಮುಂಬಯಿಯಲ್ಲಿ ನಡೆದ ಕರ್ನಾಟಕ ಜಾನಪದ ಉತ್ಸವ

10)          1995 ಜುಲೈ 11ರಿಂದ 13ರವರೆಗೆ ಹಂಪಿಯಲ್ಲಿ ನಡೆದ ರಾಷ್ಟ್ರೀಯ ಗಿರಿಜನ ಉತ್ಸವ

11)          1995 ಅಕ್ಟೋಬರ್ 8ರಂದ 13ರವರೆಗೆ ಚಂಡೀಗಡದಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

12)          1995 ಅಕ್ಟೋಬರ್ 9ರಂದು ಲೂಧಿಯಾನದಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

13)          1995 ಅಕ್ಟೋಬರ್ 9ರಂದು ಜಲಂಧರ್‍ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

14)          1995 ಅಕ್ಟೋಬರ್ 10ರಂದು ರಿಜೋರಿಯದಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

15)          1995 ಅಕ್ಟೋಬರ್ 11ರಂದು ಜಮ್ಮುನಿನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

16)          1995ರಲ್ಲಿ ಪೂಂಛ್‍ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ

17)          1995 ಡಿಸೆಂಬರ್ 7ರಿಂದ 9ರವರೆಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ರಾಜ್ಯಗಳ ಶಾಸಕರ ಸಾಂಸ್ಕøತಿಕ ಕಾರ್ಯಕ್ರಮ

18) 1995 ಅಕ್ಟೋಬರ್ 13ರಿಂದ 15ರವರೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಪೋಲ್ವಾಲೊಂಕಶೈರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು

19)          1995ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಸಮಾರಂಭ

20)          1998 ಜೂನ್ 11, 12ರಲ್ಲಿ ಹಿಮಾಚಲ ಪ್ರದೇಶದ ಡಾಲ್‍ಹೌಸಿಯಲ್ಲಿ ನಡೆದ ರಾಷ್ಟ್ರೀಯ ಬೇಸಿಗೆ ಉತ್ಸವ

21)          1996 ಜೂನ್ 14ರಂದು ಹಿಮಾಚಲಪ್ರದೇಶದ ಸನಾವರ್‍ನಲ್ಲಿ ನಡೆದ ಬೇಸಿಗೆ  ಉತ್ಸವ

22)          1997 ಏಪ್ರಿಲ್ 3, 4ರಲ್ಲಿ ದೆಹಲಿಯಲ್ಲಿ ನಡೆದ ಲೋಕಚಾವಿ ಜಾನಪದ ಉತ್ಸವ

23)          1997 ಮೇ 15ರಂದು ಬೆಂಗಳೂರಿನಲ್ಲಿ ನಡೆದ 4ನೇ ರಾಷ್ಟ್ರೀಯ ಕ್ರೀಡಾ ಲಾಂಛನದ ಉದ್ಘಾಟನಾ ಸಮಾರಂಭ

24) 1997 ಮೇ 10ರಿಂದ ಜೂನ್ 11ರವರೆಗೆ ಬೆಂಗಳೂರಿನಲ್ಲಿ ನಡೆದ 4ನೇ ರಾಷ್ಟ್ರೀಯ ಕೂಟದ ಪ್ರಾರಂಭೋತ್ಸವ

25) 1997ರಲ್ಲಿ ಆಂಧ್ರದ ಕಾಕಿನಾಡದಿಂದ ಗುಂಟೂರು 50ನೇ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

26) 1998 ಆಗಸ್ಟ್ 5ರಿಂದ 15ರವರೆಗೆ ಧಾರವಾಡದಿಂದ ಅಂಕೋಲಾದವರೆಗೆ ನಡೆದ ಕರ್ನಾಟಕ ಸ್ವಾತಂತ್ರ್ಯೋತ್ಸವ

ಸಾಂಸ್ಕøತಿಕ ಜಾಥಾ

27) 2012ರಂದು ಸಹೃದಯ ಬಳಗ, ಸಾಗರ, ಇತಿಹಾಸ ವೇದಿಕೆ, ಸಾಗರ, ಸಾಗರಸುತ್ತ ಪತ್ರಿಕಾ ಬಳಗ, ಸಾಗರ ಇವರ ಸಂಯುಕ್ತಾಶ್ರಯದಲ್ಲಿ ಸಂಘಟಿಸಿದ ಜನಪದ ಕಲಾವಿದ ಸಾಗರೋತ್ಸವ-2012 ಸಮಾರಂಭ

28)          1999ರಲ್ಲಿ ಕೇರಳ ರಾಜ್ಯದ ಕೊಚ್ಚಿನ್‍ನಲ್ಲಿ ನಡೆದ ಚಲನಚಿತ್ರೋತ್ಸವ ಸಮಾರಂಭ

29)          2002 ಏಪ್ರಿಲ್ 15ರಂದು ದೆಹಲಿಯಲ್ಲಿ ಉಪರಾಷ್ಟ್ರಪತಿ ನಿವಾಸದಲ್ಲಿ ಹೊಸವರ್ಷದ ಪರಂಪರೋತ್ಸವ ಸಮಾರಂಭದಲ್ಲಿ ಕರ್ನಾಟಕದಿಂದ ಪ್ರದರ್ಶನಗೊಂಡ ಜಾನಪದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ

30)          2005 ನವೆಂಬರ್ 5, 6, 7ರಂದು ಒರಿಸ್ಸಾ ರಾಜ್ಯದ ಬಾಲಂಗೇಡ್‍ನಲ್ಲಿ ನಡೆದ ಲೋಕೋತ್ಸವ

31) 2005 ನವೆಂಬರ್ 2, 3, 4ರಲ್ಲಿ ಒರಿಸ್ಸಾ ರಾಜ್ಯದ ನವಿರಂಗಾಪುರದಲ್ಲಿ ನಡೆದ ಮಾಂಡೇವ ಸಂಸ್ಕøತಿ ಉತ್ಸವ

32) 2007 ಮೇ 13, 14ರಲ್ಲಿ ಒರಿಸ್ಸಾ ರಾಜ್ಯದ ಪುರಿಯಲ್ಲಿ ನಡೆದ 5ನೇ ರಾಷ್ಟ್ರೀಯ ಟ್ರೈಬಲ್ ಜಾನಪದ ಸಂಗೀತ ಮತ್ತು ನೃತ್ಯ ಉತ್ಸವ

33)          2007 ನವೆಂಬರ್ 28, 29ರಂದು ದೆಹಲಿಯಲ್ಲಿ ನಡೆದ ಸಾರಸ್ ಕಾರ್ಯಕ್ರಮ

34)          2007 ಡಿಸೆಂಬರ್ 20, 21, 22ರಂದು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

35)          2008ರಲ್ಲಿ ಜನವರಿ 9ರಿಂದ 13ರವರೆಗೆ ಮದ್ರಾಸ್‍ನಲ್ಲಿ ಮದ್ರಾಸ್ ಕ್ರಾಫ್ಟ್ ಫೌಂಡೇಷನ್ (ದಕ್ಷಿಣ ಚಿತ್ರ) ಇವರು ಏರ್ಪಡಿಸಿದ್ದ ಕಲೆಗಳ ಪ್ರದರ್ಶನ

36)          2008 ಫೆಬ್ರವರಿ 28ರಂದು ಮದ್ರಾಸ್‍ನಲ್ಲಿ ನಡೆದ ವಿಲೇಜ್ ಫೆಸ್ಟಿವಲ್ ಐಐಟಿ

37)          2008ರಲ್ಲಿ ಹಿಮಾಚಲಪ್ರದೇಶದ ಕುಲುವಿನಲ್ಲಿ ನಡೆದ ದಸರಾ ಉತ್ಸವ

38)          2010ರಲ್ಲಿ ಜನವರಿ 26ರಂದು ದೆಹಲಿಯ ಗಣರಾಜ್ಯೋತ್ಸವ ಪೆರೇಡ್

39)          2010 ಜನವರಿ 27ರಂದು ಭಾರತದ ಉಪರಾಷ್ಟ್ರಪತಿಯವರ ಸಮ್ಮುಖದಲ್ಲಿ, ದೆಹಲಿ ನಿವಾಸದ ಪ್ರಾಂಗಣದಲ್ಲಿ ನೀಡಿದ ಕಾರ್ಯಕ್ರಮ

40) 2010 ಜನವರಿ 28ರಂದು ಭಾರತದ ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ದೆಹಲಿ ಕ್ಯಾಂಪ್ ಪ್ರಧಾನಮಂತ್ರಿಗಳ ನಿವಾಸದ ಪ್ರಾಂಗಣ

41)          2010 ಜನವರಿ 28ರಂದು ಮಿಲಿಟರಿ ಆಫೀಸರ್ಸ್ ಮೆಸ್‍ನಲ್ಲಿ ಕಾರ್ಯಕ್ರಮ

42)          2010 ಜನವರಿ 31ರಂದು ಭಾರತ ಸರ್ಕಾರದ ಟ್ರೈಬಲ್ ಅಫೇರ್ಸ್ ಸಚಿವರಾದ ಶ್ರೀ ಕಾಂತಿಲಾಲ್ ಬುರಿಯಾ ಮತ್ತು ರಾಜ್ಯ ಸಚಿವರಾದ ಡಾ. ತುಷಾರ ವಿ. ಚೌಧುರಿಯವರ ಸಮ್ಮುಖದಲ್ಲಿ

43)          2010 ಮಾರ್ಚ್ 8,9ರಂದು ಇಂದೋರ್‍ನಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮ

44)          2010 ಮೇ ತಿಂಗಳಲ್ಲಿ ಕೇರಳದ ಬಡಗರ ಕರುನಾಡು ಸಾಂಸ್ಕøತಿಕ ಮಹೋತ್ಸವ

45)          2010 ಅಕ್ಟೋಬರ್ 15, 16ರಂದು ಊಟಿಯಲ್ಲಿ ನಡೆದ ಟೀ ಉತ್ಸವ

46) 2011 ಜನವರಿ 10ರಿಂದ 14ರವರೆಗೆ ಹೈದರಾಬಾದ್‍ನಲ್ಲಿ ನಡೆದ ಇಂಟೆಕ್ ನ್ಯಾಷನಲ್ 13ನೇ ಐಎಎಸ್‍ಸಿ ಕಾರ್ಯಕ್ರಮ

47) 2011 ಮಾರ್ಚ್ 11ರಿಂದ 13ರವರೆಗೆ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ

48) 2011 ಏಪ್ರಿಲ್ 21ರಿಂದ 24ರವರೆಗೆ ಬೀದರ್‍ನಲ್ಲಿ ನಡೆದ ಅಖಿಲ ಭಾರತ ಜಾನಪದ ಸಮ್ಮೇಳನ

49) 2012 ಜನವರಿ 30ರಿಂದ ಫೆಬ್ರವರಿ 15ರವರೆಗೆ ಹರಿಯಾಣ ರಾಜ್ಯದ ಸೂರಜ್‍ಕುಂಡ್‍ನಲ್ಲಿ ನಡೆದ ಸೂರಜ್‍ಕುಂಡ್ ಮೇಳ

50) 2012 ಮಾರ್ಚ್ 10ರಂದು ಊಟಿಯಲ್ಲಿ ನಡೆದ ವಾರ್ತಾ ಉತ್ಸವ

ಕರ್ನಾಟಕದಲ್ಲಿ ಡೊಳ್ಳು ಕುಣಿತ ನೀಡಿದ ಸ್ಥಳಗಳು ಮತ್ತು ಕಾರ್ಯಕ್ರಮಗಳು

1)            1985 ಮೇ 10ರಿಂದ 12ರವರೆಗೆ ಶಿವಮೊಗ್ಗದಲ್ಲಿ ನಡೆದ ರಾಜ್ಯ ಜನಪದ ಮೇಳ

2)            1991 ಮಾರ್ಚ್ 15 ಮತ್ತು 23, ಎರಡು ಬಾರಿ ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರ

3)            1992ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಜನಪದ ಕಲಾ ಮೇಳ

4)            1992 ಜನವರಿ 26ರಂದು ಪಟ್ಟದಕಲ್ಲುವಿನಲ್ಲಿ ನಡೆದ ‘ಪಟ್ಟದಕಲ್ಲು ಉತ್ಸವ’

5)            1992 ಮತ್ತು 1993 ನವೆಂಬರ್ ಒಂದರಂದು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಸಮಾರಂಭ

6)            1994ರಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯದ ಜನಪದ ಕಲಾಮೇಳ

7)            1995 ಜನವರಿ 16ರಿಂದ 28ರವರೆಗೆ ಕೋಲಾರದಲ್ಲಿ ನಡೆದ ಪ್ರವಾಸಿ ಉತ್ಸವ

8)            1996 ಜನವರಿ 13ರಂದು ರಾಮನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಬಸವ ಮೇಳ

9) 1991, 1992, 1995 ಮತ್ತು 96 ಈ ನಾಲ್ಕು ವರ್ಷಗಳಲ್ಲಿ ಕ್ರಮವಾಗಿ ಬೆಂಗಳೂರು, ಶಿವಮೊಗ್ಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

10)          1993 ಮತ್ತು 1996ನೇ ವರ್ಷಗಳಲ್ಲಿ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದ ಜನವರಿ 26ರ ಗಣರಾಜ್ಯ ದಿನೋತ್ಸವ ಸಮಾರಂಭ

11)          1996ರಲ್ಲಿ ಬೆಂಗಳೂರಿನಲ್ಲಿ ದೇವರಾಜ್ ಅರಸ್‍ರವರ ಜನ್ಮದಿನೋತ್ಸವ ಸಮಾರಂಭ

12)          1998 ಏಪ್ರಿಲ್ 28ರಂದು ಶಿವಮೊಗ್ಗದಲ್ಲಿ ನಡೆದ ಸಹ್ಯಾದ್ರಿ ಉತ್ಸವ

13)          2001ರಲ್ಲಿ ಮಂಗಳೂರಿನಲ್ಲಿ ನಡೆದ ಕರಾವಳಿ ಉತ್ಸವ

14) 2006 ಅಕ್ಟೋಬರ್ 16ರಂದು ಹೊಳೆನರಸೀಪುರದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಸ್ಕøತಿ ದಿಬ್ಬಣ ಕಾರ್ಯಕ್ರಮ

15) 2006 ಅಕ್ಟೋಬರ್ 25ರಂದು ಚಿತ್ರದುರ್ಗದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಸ್ಕøತಿ ದಿಬ್ಬಣ ಕಾರ್ಯಕ್ರಮ

16)          2006 ನವೆಂಬರ್ 5ರಂದು ಹಂಪಿಯಲ್ಲಿ ನಡೆದ ಹಂಪಿ ಉತ್ಸವ

17)          2006 ಏಪ್ರಿಲ್ 29, 30ರಲ್ಲಿ ಮೈಸೂರಿನಲ್ಲಿ ನಡೆದ ಜಾನಪದ ಜಾತ್ರೆ ಕಾರ್ಯಕ್ರಮ

18)          2006 ಡಿಸೆಂಬರ್ 16ರಂದು ಬಳ್ಳಾರಿಯಲ್ಲಿ ನಡೆದ ಸುವರ್ಣ ಕರ್ನಾಟಕ ಸಾಂಸ್ಕøತಿಕ ಉತ್ಸವ

19)          2006 ಡಿಸೆಂಬರ್ 28ರಂದು ಬಿಜಾಪುರದಲ್ಲಿ ನಡೆದ ಜಾನಪದ ಜಾತ್ರೆ

20)          2007 ಜನವರಿ 26, 27ರಂದು ಬಳ್ಳಾರಿಯಲ್ಲಿ ನಡೆದ ಜಾನಪದ ಜಾತ್ರೆ

21)          2007 ಏಪ್ರಿಲ್ 19, 20ರಂದು ಉಡುಪಿಯಲ್ಲಿ ನಡೆದ ಜಾನಪದ ಜಾತ್ರೆ

22)          2008 ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

23)          2009ರಲ್ಲಿ ಬೆಂಗಳೂರಿನಲ್ಲಿ ನಡೆದ ಆಗಸ್ಟ್ 15 ಸ್ವಾತಂತ್ರ್ಯೋತ್ಸವ ಸಮಾರಂಭ

24)          2009ರಲ್ಲಿ ಬೆಂಗಳೂರಿನಲ್ಲಿ ನಡೆದ ಜಾನಪದ ಜಾತ್ರೆ ಕಾರ್ಯಕ್ರಮ

25)          2010 ಜನವರಿ 10ರಂದು ಬೀದರ್‍ನಲ್ಲಿ ನಡೆದ ಜಿಲ್ಲಾ ಉತ್ಸವ

 

ಗೌತಮೇಶ್ವರ ಜಾನಪದ ಡೊಳ್ಳು ಕಲಾಸಂಘ (ರಿ.)

ಗೌತಮಪುರ, ಆನಂದಪುರಂ ಹೋಬಳಿ, ಸಾಗರ ತಾಲ್ಲೂಕು

                ಗೌತಮಪುರ ಸಾಗರದಿಂದ 36 ಕಿ.ಮೀ. ದೂರದಲ್ಲಿದೆ. ಈ ಊರಿನಲ್ಲಿ ಹಿಂದೆ ಗೌತಮ ಮುನಿ ತಪಸ್ಸು ಮಾಡಿದನಂತೆ. ಹಾಗಾಗಿ ಈ ಊರು ಗೌತಮಪುರ ಎಂದು ಸ್ಥಳಪುರಾಣದಿಂದ ತಿಳಿಯುತ್ತದೆ. ಇಲ್ಲಿ ಗೌತಮೇಶ್ವರ, ಸೂರ್ಯನಾರಾಯಣ, ಬನಶಂಕರಿ, ದುರ್ಗಾಪರಮೇಶ್ವರಿ, ವೀರಭದ್ರ, ಜನಾರ್ದನೇಶ್ವರ ದೇವರುಗಳ ದೇವಸ್ಥಾನಗಳಿವೆ.

                ಗೌತಮಪುರ ಆನಂದಪುರಂ ಹೋಬಳಿಯ ಪ್ರಮುಖವಾದ ಹಳ್ಳಿ. ಇಲ್ಲಿ ದೀವರು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯ ಗೌತಮೇಶ್ವರ ಜಾನಪದ ಡೊಳ್ಳು ಕಲಾಸಂಘ ತುಂಬಾ ಹಳೆಯ ತಂಡ. ಈ ತಂಡದ ಸಂಚಾಲಕರು ಬಿಳಿಯಪ್ಪನವರು. ಎಂ.ಎ., ಬಿ.ಪಿಎಡ್., ಪದವೀಧರರು. ಇದೇ ಗ್ರಾಮದಲ್ಲಿದಲ್ಲಿರುವ ಮಲೆನಾಡು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಉದ್ಯೋಗದಲ್ಲಿದ್ದಾರೆ.

                ಈ ತಂಡದಲ್ಲಿ ಇಪ್ಪತ್ತೇಳು ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು ಇಪ್ಪತ್ತೆರಡು ಜನ. ವಾದ್ಯಗಾರರು ಮೂರು ಜನ. ಹಾಡುವವರು ಎರಡು ಜನ ಸೇರಿ ಒಟ್ಟು ಇಪ್ಪತ್ತೇಳು ಕಲಾವಿದರು ಇದ್ದಾರೆ.

ಡೊಳ್ಳುಗಳ ವಿವರ

                ಈ ತಂಡದಲ್ಲಿ ಶಿವನೆ ಮತ್ತು ನಂದಿ ಎಂಬ ಜಾತಿಯ ಮರಗಳಿಂದ ತಯಾರಿಸಿದ ಇಪ್ಪತ್ತೆರಡು ಡೊಳ್ಳುಗಳಿವೆ. ಇವುಗಳ ಉದ್ದ ಇಪ್ಪತ್ತೊಂದು ಇಂಚು, ಅಗಲ ಹದಿನೆಂಟು ಇಂಚು, ಸುತ್ತಳತೆ ಅರವತ್ತು ಇಂಚು ಇದೆ.

                ಡೊಳ್ಳುಗಳ ಎಡಭಾಗಕ್ಕೆ ಆಡು ಕುರಿಯ ಚರ್ಮ ಹೊದಿಸಿದ್ದಾರೆ. ಬಲಭಾಗಕ್ಕೆ ಜಿಂಕೆಯ ಚರ್ಮ ಹೊದಿಸಿದ್ದಾರೆ. ಚರ್ಮಕ್ಕೆ ಬಿದಿರಿನ ಬಂಕ ಹಾಕಿ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಬಿಗಿದಿರುತ್ತಾರೆ. ಹಗ್ಗ ಏಳೂವರೆ ಮಾರು (ನಲವತ್ತೈದು ಅಡಿ) ಉದ್ದ ಇರುತ್ತದೆ.

                ಡೊಳ್ಳು ಬಾರಿಸಲು ಕೋಲುಗಳನ್ನು ಆಲದ ಕಾಲು, ಹಾಲವಾಣದ ಮರದ ಕೊಂಬೆ ಮತ್ತು ಬೆತ್ತದ ಕೋಲುಗಳಲ್ಲಿ ಯಾವುದಾದರೂ ಒಂದು ಜಾತಿಯ ಕೋಲನ್ನು ಬಳಸುತ್ತಾರೆ. ಕೋಲಿನ ಉದ್ದ ಹದಿನಾಲ್ಕು ಅಥವಾ ಹದಿನಾರು ಇಂಚು ಉದ್ದ ಇರುತ್ತದೆ.

ವೇಷಭೂಷಣಗಳು

                ತಲೆಗೆ ಹಳದಿ ಪೇಟಾ, ಕೊರಳಿಗೆ ಆಂಜನೇಯನ ಚಿತ್ರವಿರುವ ತಾಯಿತವಿರುವ ಕವಡೆಸರ, ಪೇಟಕ್ಕೆ ನವಿಲುಗರಿಯನ್ನು ಸಿಕ್ಕಿಸಿಕೊಂಡಿರುತ್ತಾರೆ. ಸೊಂಟಕ್ಕೆ ಕರಿಯ ಕಂಬಳಿ, ಮೈಗೆ ಜಿಂಕೆ ಚರ್ಮದ ಕವಚ (ಜಿಂಕೆ ಚರ್ಮದ ಆಕಾರವಿರುವ ಬಟ್ಟೆಯ ಕವಚ), ಕೈ, ಕಾಲುಗಳಿಗೆ ಕಪ್ಪು ಉಲ್ಲನ್, ಹಾರದ ದಂಡೆಗಳು, ಎಡಗಾಲಿಗೆ ಗೆಜ್ಜೆ, ಬಲಗಾಲಿಗೆ ಕರಿಯ ಉಲ್ಲನ್ ದಂಡೆ, ಹಣೆ ಎದೆ ಕೈಗೆ ವಿಭೂತಿ, ಹಣೆಯ ಮಧ್ಯೆ ಕುಂಕುಮ ಹಚ್ಚಿರುತ್ತಾರೆ.

ನೃತ್ಯ ಸ್ವರೂಪ

                ಒಂದು ಗುಣಿಯಲ್ಲಿ ನಿಧಾನಗತಿ, ಮುಕ್ತಾಯದಲ್ಲಿ ತೀವ್ರಗತಿ, ಎರಡು ಗುಣಿಯಲ್ಲಿ ತೀವ್ರಗತಿಯಲ್ಲಿ ಪ್ರಾರಂಭ. ತೀವ್ರಗತಿಯೇ ಮುಕ್ತಾಯ, ಕೈಬಾರಿಕೆ ಇತ್ಯಾದಿ.

ಸಾಹಿತ್ಯ - ಹಾಡುಗಳು

1) ಗಣಪತಿ ಸ್ತುತಿ

2) ಡೊಳ್ಳಾಸುರನ ಹಾಡು

3) ಗಜಮುಖ ದೈತ್ಯನ ಹಾಡು

4) ರೇವಣಸಿದ್ದನ ಹಾಡು

5) ಭಕ್ತ ಮಾರ್ಕಂಡೇಯನ ಹಾಡು

6) ಕೋಳೂರು ಕೊಡಗೂಸಿನ ಹಾಡು

7) ದೇವಾಂಗ ಮನುಬ್ರಹ್ಮನ ಹಾಡು

8) ಪಾರ್ವತಿತನಯ ಕುಮಾರ ಗಣೇಶನ ಹಾಡು

9) ಗಾರುಡಿ ಸಿದ್ದರಾಮನ ಹಾಡು

10) ಭಕ್ತ ಸಿರಿಯಾಳ ಹಾಡು

11) ಶಕ್ತಿಪುರಾಣದ ಹಾಡು

12) ಶಿವಶರಣ ಮಾದಾರ ಚೆನ್ನಯ್ಯನ ಹಾಡು

13) ರೇಣುಕಾ ಜಮದಗ್ನಿಯ ಚರಿತ್ರೆ

ಪ್ರದರ್ಶನಗಳು

1)            1985 ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ

2)            1987ರಲ್ಲಿ ದೆಹಲಿಯಲ್ಲಿ ನಡೆದ ದಕ್ಷಿಣ ವಲಯ ಸಾಂಸ್ಕøತಿಕ ಕಾರ್ಯಕ್ರಮ

3)            1987ರಲ್ಲಿ ತಮಿಳುನಾಡಿನಲ್ಲಿ ನಡೆದ ಟೈಟಾನ್ ವಾಚ್ ಕಂಪೆನಿಯ ಉದ್ಘಾಟನಾ ಸಮಾರಂಭ

4)            ತಾಲ್ಲೂಕು, ಜಿಲ್ಲೆ, ವಿಭಾಗ, ರಾಜ್ಯಮಟ್ಟದ ಕರ್ನಾಟಕ ರಾಜ್ಯದ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯವರು ಏರ್ಪಡಿಸುವ ಯುವಜನ ಮೇಳಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಡೊಳ್ಳು ಕುಣಿತ ಪ್ರದರ್ಶನ. 1978 ಮತ್ತು 1988ರಲ್ಲಿ ಎರಡು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿ

5)            1985 ಡಿಸೆಂಬರ್ 15ರಿಂದ 17ರವರೆಗೆ ಮೈಸೂರಿನಲ್ಲಿ ನಡೆದ ಚರಿತ್ರಾರ್ಹ ಪ್ರಥಮ ವಿಶ್ವಕನ್ನಡ ಸಮ್ಮೇಳನ

6) 1989ರಿಂದ ಬೆಂಗಳೂರು ಆಕಾಶವಾಣಿ ಕಲಾವಿದರಾಗಿದ್ದಾರೆ. ಇದುವರೆಗೂ ಹತ್ತು ಬಾರಿ ಕಾರ್ಯಕ್ರಮ ನೀಡಿದ್ದಾರೆ.

7)            1973 ಜನವರಿ 18, 19ರಂದು ನಡೆದ ಕರ್ನಾಟಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಯುವಜನ ಮಂಡಳಿಯವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಇವರು ನೆಹರೂ ಕ್ರೀಡಾಂಗಣದಲ್ಲಿ ನಡೆದ ವಿಭಾಗಮಟ್ಟದ ಯುವಜನ ಮೇಳದಲ್ಲಿ ಡೊಳ್ಳು ಕುಣಿತಕ್ಕೆ ಪ್ರಥಮ ಪ್ರಶಸ್ತಿ

8)            1978 ಜನವರಿ 26ರಂದು ಸಾಗರ ಪುರಸಭೆಯವರು ಏರ್ಪಡಿಸಿದ್ದ ಗಣರಾಜ್ಯ ದಿನೋತ್ಸವ ಕಾರ್ಯಕ್ರಮ

9)            1988 ಫೆಬ್ರವರಿ 6ರಂದು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ಹೊನ್ನಾವರದಲ್ಲಿ ನಡೆಸಿದ 15ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಂಗವಾಗಿ ನಡೆದ ರಂಗದರ್ಶನ ಕಾರ್ಯಕ್ರಮ

10)          1992ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅಕ್ಷರತುಂಗಾ ಕಾರ್ಯಕ್ರಮದ ಪ್ರೇರಣಾ ಜಾಥಾದಲ್ಲಿ ಭಾಗವಹಿಸಿ ಸಾಗರ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ ಗ್ರಾಮೀಣ ಜನರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸಿದ್ದು.

11)          1993 ಮೈಸೂರು ದಸರಾ ಮಹೋತ್ಸವದ ಮೆರವಣಿಗೆ

12) 1993 ನವೆಂಬರ್ 21ರಂದು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮ

13)          1994 ಮೇ 10, 11ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಇವರು ಚಿಕ್ಕಮಗಳೂರಿನಲ್ಲಿ ಆಯೋಜಿಸಿದ ದಕ್ಷಿಣಭಾರತ ಜನಪದ ಕಲಾಮಹೋತ್ಸವ

14) 1994 ಸೆಪ್ಟೆಂಬರ್ 6, 7, 8ರಂದು ಅಕ್ಷರಪ್ರಭಾ ಸಮಿತಿ, ಬೆಳಗಾವಿ ಇವರ ಆಶ್ರಯದಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಸಾಕ್ಷರತಾ ಸಾಂಸ್ಕøತಿಕ ಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಮಾರಂಭ

15)          1995 ಆಗಸ್ಟ್ 18ರಿಂದ 21ರವರೆಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಾಕ್ಷರತಾ ಸಮ್ಮೇಳನದಲ್ಲಿ ಶಿವಮೊಗ್ಗ ಅಕ್ಷರತುಂಗಾದ ಆಶ್ರಯದಲ್ಲಿ ಭಾಗವಹಿಸಿದ ಕಾರ್ಯಕ್ರಮ

16)          1995 ಡಿಸೆಂಬರ್ 18ರಿಂದ 27ರವರೆಗೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರು ಮದ್ರಾಸಿನಲ್ಲಿ ಆಯೋಜಿಸಿದ್ದ ಸೌತ್ ಏಷಿಯನ್ ಫೆಡರೇಷನ್ ಗೇಮ್ಸ್

17)          1997 ಮೇ 13ರಿಂದ 15ರವರೆಗೆ ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರು ಊಟಿ ಮತ್ತು ಕೊಡೈಕನಾಲ್‍ನಲ್ಲಿ ನಡೆದ ಬೇಸಿಗೆ ಉತ್ಸವ

18)          1997 ಮೇ 31ರಿಂದ ಜೂನ್ 6ರವರೆಗೆ ಬೆಂಗಳೂರು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ 4ನೇ ರಾಷ್ಟ್ರೀಯ ಕ್ರೀಡಾಕೂಟ

19)          1998ರ ಮೈಕೋ ಫೈನ್ ಆಟ್ರ್ಸ್ ಸೊಸೈಟಿಯವರ ಮೈಕೋಕಾರ್ನವಲ್ ಕಾರ್ಯಕ್ರಮ

20)          1998 ಸೆಪ್ಟೆಂಬರ್ 29ರಂದು ಮಡಕೇರಿಯವರ ದಸರಾ ಜನೋತ್ಸವ ಕಾರ್ಯಕ್ರಮ

21)          2000 ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯ ದಿನೋತ್ಸವ ಪೆರೇಡಿನಲ್ಲಿ ಭಾಗವಹಿಸಲು ತಂಜಾವೂರಿನ ಎಸ್.ಝಡ್.ಸಿ.ಸಿ.ಯವರ ಸಹಯೋಗದೊಂದಿಗೆ ಗೌತಮಪುರ ಮಲೆನಾಡು ಪ್ರೌಢಶಾಲೆಯ 125 ವಿದ್ಯಾರ್ಥಿಗಳಿಗೆ ಎರಡು ತಿಂಗಳು ಡೊಳ್ಳು ಕುಣಿತದ ತರಬೇತಿ ನೀಡಿ ದೆಹಲಿಯಲ್ಲಿ ನಡೆದ ಗಣರಾಜ್ಯ ದಿನೋತ್ಸವದ ಪೆರೇಡಿನಲ್ಲಿ ಭಾಗವಹಿಸಿದ್ದು.

22)          1997 ಮೇ 13ರಿಂದ 15ರವರೆಗೆ ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರು ಇವರು ನಡೆಸಿದ ಊಟಿ ಮತ್ತು ಕೊಡಕೈನಾಲ್‍ನಲ್ಲಿ ನಡೆದ ಬೇಸಿಗೆ ಉತ್ಸವ

23) 2007 ಮೇ 22, 23ರಂದು ಗೋವಾ ರಾಜ್ಯದ ಪಣಜಿಯಲ್ಲಿ ನಡೆದ ಅಖಿಲ ಭಾರತದ ಕನ್ನಡ ಸಾಂಸ್ಕøತಿಕ ಮೇಳ

24)          2004 ಜನವರಿ 18ರಿಂದ 20ರವರೆಗೆ ಕರ್ನಾಟಕ ರಕ್ಷಣಾ ವೇದಿಕೆಯವರು ಚನ್ನಪಟ್ಟಣದಲ್ಲಿ ಏರ್ಪಡಿಸಿದ್ದ ಕನ್ನಡಿಗ ಸಮಾವೇಶದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯವರ ಆದೇಶದಂತೆ ಭಾಗವಹಿಸಿ ನೀಡಿದ ಪ್ರದರ್ಶನ

25)          2006 ಮೇ 15ರಂದು ಮೈಸೂರು ಕೃಷ್ಣರಾಜಸಾಗರದಲ್ಲಿ ಕರ್ನಾಟಕ ಟೂರಿಸಂ ಎಕ್ಸ್‍ಪೊ-2006 ಅವರು ಏರ್ಪಡಿಸಿದ್ದ ಔತಣಕೂಟ ಸಂದರ್ಭದಲ್ಲಿ ಮನರಂಜನಾ ಕಾರ್ಯಕ್ರಮ

26)          2007ರಲ್ಲಿ ದುಬೈನಲ್ಲಿ ನಡೆದ ವಿಶ್ವ ವ್ಯಾಪಾರ ದಿನಗಳ ಉತ್ಸವ

27)          2010ರ ಜನವರಿ 26 ದೆಹಲಿಯಲ್ಲಿ ನಡೆದ ಗಣರಾಜ್ಯ ದಿನೋತ್ಸವ ಪೆರೇಡ್

28)          2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭ

29)          2012ರಲ್ಲಿ ಮಸ್ಸೂರಿ, ಡೆಹರಾಡೂನ್, ಉತ್ತರಾಖಂಡಗಳಲ್ಲಿ ಐಎಎಸ್, ಐಪಿಎಸ್, ಐಎಫ್‍ಎಸ್‍ನವರಿಗೆ ನೀಡಿದ ತರಬೇತಿ ಕಾರ್ಯಕ್ರಮ

 

ಜ್ಯೋತಿ ಜಾನಪದ ಡೊಳ್ಳು ಕಲಾಮೇಳ

ಹುಲ್ತಿಕೊಪ್ಪ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ಈ ತಂಡದಲ್ಲಿ ಹದಿನಾಲ್ಕು ಜನ ಕಲಾವಿದರು ಇದ್ದಾರೆ. ಎರಡು ಜನ ವಾದ್ಯಗಾರರು, ಹಾಡುವವರು ಎರಡು ಜನ, ಡೊಳ್ಳು ಬಾರಿಸುವವರು ಹತ್ತು ಜನ ಸೇರಿ ಹದಿನಾಲ್ಕು ಜನ ಕಲಾವಿದರು.

                ಈ ತಂಡದ ಮುಖ್ಯಸ್ಥರಾಗಿ ಟಿ. ನಾಗಪ್ಪ ತಳವಾರ ಹುಲ್ತಿಕೊಪ್ಪ ಇವರು ಇದ್ದಾರೆ.

ಡೊಳ್ಳುಗಳ ವಿವರ

                ನಂದಿ, ಗಂಧಗರಿಗಿ ಎಂಬ ಜಾತಿಯ ಮರದಿಂದ ತಯಾರಿಸಿದ ಹತ್ತು (10) ಡೊಳ್ಳುಗಳು ಇವೆ. ಡೊಳ್ಳುಗಳ ಉದ್ದ ಇಪ್ಪತ್ತು ಇಂಚು, ಅಗಲ ಹದಿನಾಲ್ಕು ಇಂಚು, ಸುತ್ತಳತೆ ಐವತ್ತೆರಡು (52) ಇಂಚು ಇದೆ. ಡೊಳ್ಳಿನ ಬಲಭಾಗಕ್ಕೆ ಹೋತನ ಚರ್ಮ, ಎಡಭಾಗಕ್ಕೆ ಆಡು ಕುರಿಯ ಚರ್ಮವನ್ನು ಹೊದಿಸಿದ್ದಾರೆ. ಪಿಳ್ಳುಕಡ್ಡಿ ಕೊಟ್ಟು ಪಿಳ್ಳೇರಿಸಿ ನೂಲಿನ ಹಗ್ಗದಿಂದ ಬಿಗಿದಿರುತ್ತಾರೆ. ಡೊಳ್ಳು ಬಾರಿಸುವ ಕೋಲಿಗೆ ರಬ್ಬರ್ ಚೆಂಡು ಹಾಕಿ ಅಥವಾ ಅರಬಿ ಸುತ್ತಿ ಚೆಂಡು ಮಾಡಿ ನೂಲಿನ ಹೆಣಿಗೆ ಮಾಡಿರುತ್ತಾರೆ. ಉಲ್ಲನ್ ದಾರದಿಂದ ಗೊಂಡೇವು ಮಾಡಿರುತ್ತಾರೆ. ಡೊಳ್ಳು ಬಾರಿಸುವ ಕೋಲು ಒಂದು ಅಡಿ ಉದ್ದ ಇರುತ್ತದೆ. ದೊಡ್ಡದಾದ ಕಂಚಿನ ತಾಳ ಮತ್ತು ಝಲ್ಲರಿಗಳನ್ನು ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಕೇಸರಿಬಣ್ಣದ ಪೇಟಾ ಸುತ್ತಿ ಪೇಟಕ್ಕೆ ನವಿಲುಗರಿ ಸಿಕ್ಕಿಸಿರುತ್ತಾರೆ. ಮೈಗೆ ಹುಲಿಪಟ್ಟೆಯಿರುವ ಹಳದಿಬಣ್ಣ ಜುಬ್ಬಾ. ಜುಬ್ಬದ ಮೇಲೆ ಕಪ್ಪು ಬಣ್ಣದ ಉಣ್ಣೆಯ ದಾರ, ಕೈ ರಟ್ಟೆಗಳಿಗೆ ಕಪ್ಪುದಾರ ಕಟ್ಟುತ್ತಾರೆ. ಸೊಂಟಕ್ಕೆ ಕರಿಯ 

ಕಂಬಳಿ ತೊಟ್ಟು, ಸೊಪ್ಪು ಸೊಂಟದ ಸುತ್ತ ಕಟ್ಟಿರುತ್ತಾರೆ. ಕೊರಳಿಗೆ ಕವಡೆಸರ, ಹಣೆಗೆ ಕೈಗೆ ಎದೆಗೆ ಕಾಲಿಗೆ ವಿಭೂತಿಪಟ್ಟಿ ಹಚ್ಚಿರುತ್ತಾರೆ.

ಮತ್ತೊಂದು ವೇಷ

                ಕೆಂಪು ಜುಬ್ಬಾ, ಕೇಸರಿ ಪೇಟಾ, ಬಿಳಿ ಪಂಚೆ, ಉಳಿದದ್ದು ಮಾಮೂಲಿ.

ಪ್ರದರ್ಶನಗಳು

                ಶರವೇಗದ ಸರದಾರ, ಅಶ್ವಮೇಧ ಚಲನಚಿತ್ರಗಳಲ್ಲಿ, ಮದ್ರಾಸು, ಟಿ. ನರಸಿಪುರ, ಶ್ರೀರಂಗಪಟ್ಟಣ, ಬೆಂಗಳೂರು ಯುವಜನ ಮೇಳಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಪಟ್ಟದಕಲ್ಲು, ಆಂಧ್ರ, ಮೈಸೂರು, ದಸರಾ ಉತ್ಸವ, ರಾಜ್ಯೋತ್ಸವ ಸಮಾರಂಭಗಳಲ್ಲಿ, ಸಾರ್ಕ್ ಸಮ್ಮೇಳನ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಬೆಂಗಳೂರು, ಹೈದರಾಬಾದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅನೇಕ ಕಾರ್ಯಕ್ರಮಗಳು

ನೃತ್ಯಸ್ವರೂಪ

                ಕೈಚಾಪು, ಮೂರುಗುಣಿ ಮರಗಾಲು, ಲಾಗ, ತಲೆ ಮೇಲೆ ಕೊಡ ಹೊತ್ತುಕೊಂಡು ಕುಣಿತ.

ಸಾಹಿತ್ಯ-ಹಾಡುಗಳು

1) ಡೊಳ್ಳಾಸುರನ ಹಾಡು

2) ಭಕ್ತ ಸಿರಿಯಾಳ

3) ಚಂದ್ರಗುತ್ತಿ ಅರಸನ ಹಾಡು ಇತ್ಯಾದಿ

 

ಸೋಮೇಶ್ವರ ಡೊಳ್ಳು ಕಲಾಸಂಘ

ಪತ್ರೆಸಾಲು, ಉಳವಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ‘ಪತ್ರೆಸಾಲು’ ಉಳವಿ ಕೆರೆಯ ದಂಡೆಯ ಮೇಲಿರುವ ಒಂದು ಪುಟ್ಟ ಹಳ್ಳಿ. ಈ ತಂಡದಲ್ಲಿ ಡೊಳ್ಳು ಬಾರಿಸುವವರು, ವಾದ್ಯಗಾರರು, ಹಾಡುವವರು ಸೇರಿ ಹನ್ನೆರಡು ಕಲಾವಿದರಿದ್ದಾರೆ.             ಎಸ್. ಈರಪ್ಪನವರು ತಂಡದ ಮುಖ್ಯಸ್ಥರು.

                ಈ ತಂಡದಲ್ಲಿ ಹತ್ತು ಡೊಳ್ಳುಗಳಿವೆ. ಎಲ್ಲಾ ಡೊಳ್ಳುಗಳು ಗಂಧಗರಿಗೆ ಎಂಬ ಜಾತಿ ಮರದಿಂದ ತಯಾರಿಸಲಾದವು. ಡೊಳ್ಳಿನ ಉದ್ದ ಇಪ್ಪತ್ತು ಇಂಚು, ಅಗಲ ಹದಿನೆಂಟು ಇಂಚು, ಸುತ್ತಳತೆ ಐವತ್ತನಾಲ್ಕು ಇಂಚುಗಳಿವೆ. ಡೊಳ್ಳಿನ ಬಲಭಾಗಕ್ಕೆ ಗಂಡು ಹೋತಕುರಿಯ ಚರ್ಮ, ಎಡಭಾಗಕ್ಕೆ ಆಡುಕುರಿಯ ಚರ್ಮವನ್ನು ಹೊದಿಸಿದ್ದಾರೆ. ಬಿದಿರುಕಡ್ಡಿಯಿಂದ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಬಿಗಿದಿದ್ದಾರೆ. ಡೊಳ್ಳು ಹೊಡೆಯಲು ಬಲಗೈಯಲ್ಲಿ ಬೆತ್ತದ ಕೋಲು ಬಳಸುತ್ತಾರೆ.

ಸಾಹಿತ್ಯ - ಹಾಡುಗಳು

1) ಕುರುಬರ ಮುದ್ದಪ್ಪ ಮತ್ತು ಮುದ್ದವ್ವ ಇವರು ಹುಟ್ಟಿದ ಹಾಡು

2) ಡೊಳ್ಳು ಹುಟ್ಟಿದ ಹಾಡು

3) ವಕ್ಕಲಿಗರು ಮಳೆರಾಯನನ್ನು ಕರೆಯುವ ಹಾಡು

4) ಸೀತೆಯ ಶೋಧನೆಗೆ ಆಂಜನೇಯ ಹೋಗುವ ಹಾಡು

5) ಸಿದ್ಧರು ಹುಟ್ಟಿದ ಹಾಡು

6) ಬೀರಪ್ಪದೇವರ ಮಂಗಳಾರತಿ ಹಾಡು ಇತ್ಯಾದಿ ಅಪರೂಪದ ಹಾಡುಗಳನ್ನು ಹೇಳುತ್ತಾರೆ. ಒಂದು ವರ್ಷಕ್ಕೆ ಎಪ್ಪತ್ತರಿಂದ ನೂರು ಪ್ರದರ್ಶನಗಳನ್ನು ನೀಡುತ್ತಾರೆ.

ಪ್ರದರ್ಶನಗಳು

                ಸೊರಬ ತಾಲ್ಲೂಕು ಯುವಜನ ಮೇಳಗಳಲ್ಲಿ, ಜಿಲ್ಲೆಯ ಯುವಜನ ಮೇಳ, ಬೆಂಗಳೂರು ಗಣರಾಜ್ಯ ದಿನೋತ್ಸವಗಳಲ್ಲಿ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಪ್ರದರ್ಶನ ಮಾಡಿದ್ದಾರೆ.

 

ಕಾಳಿಕಾಂಬಾ ಜಾನಪದ ಡೊಳ್ಳು ಕಲಾಮೇಳ

ಹೆಚ್ಚೆ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ‘ಹೆಚ್ಚೆ’ ಸೊರಬ ತಾಲ್ಲೂಕಿನ ಪ್ರಮುಖವಾದ ಹಳ್ಳಿ. ಇಲ್ಲಿಯ ಕಾಳಿಕಾಂಬಾ ಜಾನಪದ ಡೊಳ್ಳು ಕಲಾಮೇಳ ಕೂಡ ತುಂಬಾ ಪ್ರಸಿದ್ಧವಾದ ತಂಡ. ಈ ತಂಡದ ಮುಖ್ಯಸ್ಥರು ಹೆಚ್ಚೆ ಧರ್ಮಪ್ಪ ಮತ್ತು ಕೆ. ಲಕ್ಷ್ಮಣಪ್ಪ. ತಂಡದಲ್ಲಿ ಇಪ್ಪತ್ತ್ನಾಲ್ಕು ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು ಇಪ್ಪತ್ತು ಜನ, ವಾದ್ಯಗಾರರು ಎರಡು ಜನ, ಹಾಡುವವರು ಎರಡು ಜನ.

ಡೊಳ್ಳುಗಳ ವಿವರ

                ಈ ತಂಡದಲ್ಲಿ ಇಪ್ಪತ್ತು ಡೊಳ್ಳುಗಳಿವೆ. ಇವುಗಳನ್ನು ಗಂಧಗರಿಗೆ ಎಂಬ ಜಾತಿಯ ಮರದಿಂದ ತಯಾರಿಸಿದ್ದಾರೆ. ಇವುಗಳ ಉದ್ದ ಎರಡು ಅಡಿ, ಅಗಲ ಒಂದೂವರೆ ಅಡಿ, ಸುತ್ತಳತೆ ನಾಲ್ಕೂವರೆ ಅಡಿ. ಡೊಳ್ಳಿನ ಬಲಭಾಗಕ್ಕೆ ಜಿಂಕೆ, ಕಾಡುಕುರಿ ಅಥವಾ ಹೋತ (ಗಂಡುಮೇಕೆ) ಚರ್ಮ, ಎಡಭಾಗಕ್ಕೆ ಆಡುಕುರಿ ಚರ್ಮಗಳನ್ನು ಬಿದಿರಿನ ಬಂದಿ, ಇದರ ಜೊತೆ ಬಿದಿರಿನ ಪಿಳ್ಳುಕಟ್ಟಿ ಹಾಕಿ ಪಿಳ್ಳೇರಿಸಿ ಪುಂಡಿ ಅಥವಾ ನೂಲಿನ ಹಗ್ಗದಿಂದ ಎಂಟು-ಒಂಭತ್ತು ಕಣ್ಣು ಮಾಡಿ ಬಿಗಿಯುತ್ತಾರೆ.

                ಕಂಚಿನ ಅಥವಾ ಉಕ್ಕಿನ ತಾಳ ಬಳಸುತ್ತಾರೆ. ತಾಳಗಳ ಉದ್ದ ಏಳು ಇಂಚು ಅಗಲ, ಏಳು ಇಂಚು ಸುತ್ತಳತೆ, ಎರಡು ಅಡಿ ಇರುತ್ತವೆ. ಎರಡು ಗಗ್ಗರಕಟಿಗೆ-ಇವು ತಗಡಿನಿಂದ ಮಾಡಿದವು. ಡೊಳ್ಳು ಬಾರಿಸಲು ಬೆತ್ತದಕೋಲು ಅಥವಾ ಬಗಿನೆಕೋಲುಗಳನ್ನು ಬಳಸುತ್ತಾರೆ. ಕೋಲುಗಳಿಗೆ ಬಟ್ಟೆಯಿಂದ ಸುತ್ತಿ ಸಣಬೆ ಅಥವಾ ಉಲ್ಲನ್ ದಾರದಿಂದ ಗೋಟು ಕಟ್ಟಿರುತ್ತಾರೆ. ಕೋಲಿನ ದಿಂಡು ಕಾಣದಂತೆ ನೈಲಾನ್ ದಾರ ಸುತ್ತಿ ಉಲ್ಲನ್ ದಾರದಿಂದ ಗೊಂಡೇವು ಹಾಕಿರುತ್ತಾರೆ. ಕೋಲಿನ ಉದ್ದ ಹದಿನೈದು ಇಂಚು ಉದ್ದವಿರುತ್ತದೆ. ಡೊಳ್ಳುಗಳಿಗೆ ಕೆಂಪು ಮತ್ತು ಹಸುರುಬಣ್ಣದ ಜೂಲುಗಳನ್ನು ಹಾಕಿರುತ್ತಾರೆ.

ವೇಷಭೂಷಣಗಳು

                ತಲೆಗೆ ಹಸಿರುಬಣ್ಣದ ಪೇಟಾ, ಪೇಟಾದ ಒಂದು ಭಾಗದ ತುದಿಯನ್ನು ಹಿಂಭಾಗಕ್ಕೆ ಉದ್ದವಾಗಿ ಬಿಟ್ಟಿರುತ್ತಾರೆ. ಪೇಟಾದ ಮೇಲೆ ನವಿಲುಗರಿ ಮತ್ತು ಬೆಳ್ಳಕ್ಕಿ ಪುಕ್ಕದ ಕುಚ್ಚು ಹಾಕಿರುತ್ತಾರೆ. ಮೈಗೆ ಕೇಸರಿಬಣ್ಣದ ಜುಬ್ಬಾ ಹಾಕಿ ಸೊಂಟಕ್ಕೆ ಬಿಳಿಪಂಚೆಯನ್ನು ಕಾವಿಕಟ್ಟುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟುತ್ತಾರೆ.

ಮತ್ತೊಂದು ವೇಷ

                ಹಸಿರುಪೇಟಾ, ಮೈಗೆ ಉಣ್ಣೆಯ ಕಪ್ಪುದಾರವನ್ನು ಕ್ರಾಸಾಗಿ ಎದೆಗೆ ಕಟ್ಟುತ್ತಾರೆ. ಕೊರಳಿಗೆ ತಾಮ್ರದ ತಾಯಿತ, ಬಲಗಡೆಗೆ ತೋಳಿಗೆ ತಾಮ್ರದ ತಾಯಿತ, ಎಡಗೈ ತೋಳಿಗೆ ಉಣ್ಣೆದಾರ, ಬೆನ್ನು, ಎದೆ, ತೋಳುಗಳಿಗೆ ವಿಭೂತಿ. ಹಣೆಗೆ ಕುಂಕುಮದಿಂದ ಉದ್ದನಾಮ, ಸೊಂಟಕ್ಕೆ ಕಂಬಳಿ, ಕಂಬಳಿ ಮೇಲೆ ಸೊಂಟದ ಸುತ್ತ ಸೊಪ್ಪು, ಕಾಲಿಗೆ ಗೆಜ್ಜೆ.

ನೃತ್ಯದ ಸ್ವರೂಪ

                ಒಂದು, ಎರಡು, ಮೂರು, ಗುಣಿ ಬಡಿತಗಳು, ಎಡಗೈ ಬಾರಿಕೆ, ಕುಕ್ಕು ಹೊಡೆತ, ಲಾಗ, ಮರಗಾಲು, ಮಲಗಿ, ಡೊಳ್ಳು ಮೇಲೆ ನಿಂತು ಕೂತು ಬಡಿಯುವುದು.

ಸಾಹಿತ್ಯ-ಹಾಡುಗಳು

1) ಉಗ್ರ ತಪಸ್ಸಿನ ಹಾಡು

2) ಸತ್ಯ ಚೆನ್ನಮ್ಮಳ ಹಾಡು

3) ಶಿವಶರಣೆ ನಂಬಿಯಕ್ಕನ ಹಾಡು

4) ಗಣಪತಿ ಹಾಡು

5) ಭಕ್ತ ಬಲ್ಲಾಳನ ಹಾಡು

6) ಶಕ್ತಿ ಹೊಟ್ಟೇಲಿ ಶಿವ ಹುಟ್ಟಿದ

7) ಗುರುವಿನ ಹಾಡು

ಕಟ್ಟುಪಾಡುಗಳು

                ಪ್ರತಿ ಪ್ರದರ್ಶನಕ್ಕೆ ಹೊರಡುವ ಮೊದಲು ಕಾಳಿಕಾದೇವಿ ಮತ್ತು ಆಂಜನೇಯಸ್ವಾಮಿ ದೇವಾಲಯಗಳಿಗೆ ಹೋಗಿ ಆ ದೇವರುಗಳಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ಹೊರಡುತ್ತಾರೆ.

ಪ್ರದರ್ಶನಗಳು

                ಹಬ್ಬ, ಹರಿದಿನ, ಜಾತ್ರೆ, ಮದುವೆ, ಮೆರವಣಿಗೆ, ಗೌರಿ ತುಂಬುವಾಗ, ವಿಸರ್ಜಿಸುವಾಗ, ಗಣೇಶನ ವಿಸರ್ಜನಾ ಸಮಾರಂಭಗಳು

ಪ್ರಮುಖವಾದ ಪ್ರದರ್ಶನಗಳು

                ಉಡುಪಿ, ಧರ್ಮಸ್ಥಳ, ಗೋಕರ್ಣ, ಕುಮಟಾ, ಕಾರವಾರ, ಭದ್ರಾವತಿ, ತರೀಕೆರೆ, ಬನವಾಸಿ, ಬೆಂಗಳೂರು, ಮದ್ರಾಸ್, ಶಿವಮೊಗ್ಗ, ಮಡಿಕೇರಿ, ಚನ್ನಗಿರಿ, ಚಿತ್ರದುರ್ಗ, ಚಂದ್ರಗುತ್ತಿ, ಸೊರಬ, ಶಿಕಾರಿಪುರ, ಬಂಕಸಾಣ, ಶಿರಾಳಕೊಪ್ಪ, ಅಶ್ವಮೇಧ, ಶರವೇಗದ ಸರದಾರ ಚಲನಚಿತ್ರ, ಅಣ್ಣಿ ದೈವಂ ತಮಿಳು ಚಲನಚಿತ್ರ.

ಡೊಳ್ಳು ಸ್ಪರ್ಧೆಗಳು

                ನಜ್ಜೂರು, ಹೊಸಬಾಳೆ, ಹುಲ್ತಿಕೊಪ್ಪ, ತಂಡಿಗೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇಂಡುವಳ್ಳಿಯಲ್ಲಿ ನಡೆದ ಡೊಳ್ಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಬಳೆ ಪಡೆದಿದ್ದಾರೆ.

ಮೈಸೂರು ದಸರಾ ಮೆರವಣಿಗೆ

                1992 ಮತ್ತು 1993ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

ಯುವಜನ ಮೇಳಗಳು

                ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ.

ಇತರೆ ಉತ್ಸವಗಳು

                ರಾಜ್ಯೋತ್ಸವ ಸಮಾರಂಭಗಳಲಿ,್ಲ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಅಕ್ಷರತುಂಗಾ ಕಾರ್ಯಕ್ರಮ, ಶಿವಮೊಗ್ಗ

                1992ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅಕ್ಷರತುಂಗಾ ಕಾರ್ಯಕ್ರಮದ ಪ್ರೇರಣಾ ಜಾಥಾದಲ್ಲಿ ಭಾಗವಹಿಸಿ ಸೊರಬ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ ಡೊಳ್ಳು ಕುಣಿತವನ್ನು ಪ್ರದರ್ಶನ ನೀಡುವ ಮೂಲಕ ಸಾಕ್ಷರರಾಗಲು ಗ್ರಾಮೀಣ ಜನರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸಲಾಗಿದೆ.

                ಬೆಂಗಳೂರಿನಲ್ಲಿ ವರನಟ ಡಾ. ರಾಜಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದರ್ಶನ

                2010ರ ಜನವರಿ 26ರಂದು ನವದೆಹಲಿಯಲ್ಲಿ ನಡೆದ ಗಣರಾಜ್ಯ ದಿನೋತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ.

                2010ರ ಅಕ್ಟೋಬರ್ 3ರಂದು ದೆಹಲಿಯಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದಾರೆ.

 

ಕನ್ನಡ ಜಾನಪದ ಹವ್ಯಾಸ ಡೊಳ್ಳು ಕಲಾಸಂಘ

ಕೆ. ಹೊಸಕೊಪ್ಪ, ಅಂಚೆ: ಗಿಳಲಗುಂಡಿ, ಆನಂದಪುರಂ ಹೋಬಳಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ಈ ತಂಡದಲ್ಲಿ ಇಪ್ಪತ್ನಾಲ್ಕು ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು ಇಪ್ಪತ್ತುಜನ. ವಾದ್ಯಗಾರರು ಎರಡು ಜನ, ಹಾಡುವವರು ಎರಡು ಜನ-ಹೀಗೆ 24 ಜನ ಕಲಾವಿದರಿದ್ದಾರೆ. ತಂಡದ ಸಂಚಾಲಕರು, ಎಚ್. ಕೆ. ಬೂದ್ಯಪ್ಪನವರು, ಹೊಸಕೊಪ್ಪ

ಡೊಳ್ಳುಗಳ ವಿವರ

                ಶಿವನೆ ಎಂಬ ಜಾತಿಯ ಮರದಿಂದ ತಯಾರಿಸಿದ ಇಪ್ಪತ್ತು ಡೊಳ್ಳುಗಳಿವೆ. ಡೊಳ್ಳುಗಳ ಉದ್ದ ಎರಡೂವರೆ ಅಡಿ, ಅಗಲ ಒಂದೂವರೆ ಅಡಿ, ಸುತ್ತಳತೆ ನಾಲ್ಕು ಅಡಿ ಇವೆ.

                ಡೊಳ್ಳಿನ ಬಲಭಾಗಕ್ಕೆ ಹೋತ (ಗಂಡುಮೇಕೆ) ಚರ್ಮ, ಎಡಭಾಗಕ್ಕೆ ಆಡುಕುಡಿಯ ಚರ್ಮ ಹೊದಿಸುತ್ತಾರೆ. ಬಿದಿರಿನ ಬಂಕವನ್ನು ಹಾಕಿ ಪಿಳ್ಳೇರಿಸಿ ನೂಲಿನ ಹಗ್ಗದಿಂದ ಬಿಗಿದಿರುತ್ತಾರೆ.

                ತಾಳ: ದೊಡ್ಡದು. ಉದ್ದ ಎಂಟು ಇಂಚು, ಅಗಲ ಎಂಟು ಇಂಚು, ಸುತ್ತಳತೆ ಹದಿನೆಂಟು ಇಂಚು ಇದೆ.

                ಝಲ್ಲರಿ: ಮರ್ಕಸ್ ತಗಡಿನಿಂದ ತಯಾರಿಸಿದವು.

ವೇಷಭೂಷಣಗಳು

                ತಲೆಗೆ ಹಳದಿ ಬಣ್ಣದ ಪೇಟಾ, ಸೊಂಟಕ್ಕೆ ಕರಿಯ ಕಂಬಳಿ, ಮೈಗೆ ಜಿಂಕೆಚರ್ಮದ ಬಣ್ಣವುಳ್ಳ ಬಟ್ಟೆಯ ಕವಚ, ಕೈಗೆ ಮತ್ತು ಕಾಲುಗಳಿಗೆ ಉಲ್ಲನ್ ಕಪ್ಪುದಾರದ ಕಟ್ಟು ಕಟ್ಟಿರುತ್ತಾರೆ. ಕೊರಳಿಗೆ ಆಂಜನೇಯನ ತಾಯಿತವಿರುವ ಕವಡೆಸರ, ಕಾಲುಗಳಿಗೆ ಗೆಜ್ಜೆ, ಹಣೆಗೆ, ಮೈಗೆ, ಕೈಕಾಲುಗಳಿಗೆ ವಿಭೂತಿ.

                ಡೊಳ್ಳು ಬಾರಿಸುವ ಕೋಲನ್ನು ಆಲದಮರದ ಕಾಲುಗಳಿಂದ ತಯಾರಿಸಿರುತ್ತಾರೆ. ಹದಿನೈದು ಇಂಚು ಉದ್ದ, ಮೂರು ಅಂಚು ದಪ್ಪ ಇರುತ್ತದೆ. ಕೆಲವು ಸಾರಿ ಸೊಂಟಕ್ಕೆ ಕಂಬಳಿ, ಮೇಲೆ ಹಸಿರು ಸೊಪ್ಪನ್ನು ಕಟ್ಟಿಕೊಳ್ಳುತ್ತಾರೆ.

ನೃತ್ಯದ ಸ್ವರೂಪ

                ಒಂದು ಗುಣಿ, ಎರಡು ಗುಣಿ, ರಿಜ್ಜೆಳ್ಳು ಬಡಿತ, ಎರಡೂವರೆ ಗುಣಿ, ಡೊಳ್ಳು ಕುಣಿತದಲ್ಲಿ ಕೋಲಾಟ ಇತ್ಯಾದಿ ಬಡಿತಗಳು.

ಸಾಹಿತ್ಯ-ಹಾಡುಗಳು

1) ಬೇಡರಕಣ್ಣಪ್ಪ

2) ಬಸವಣ್ಣನ ಹಾಡು

3) ಗುರುವಿನ ಪದ

4) ವಿಧಿ ಕಾಡಿದ ಹಾಡು

5) ಬೀರೇದೇವರ ಮೂಲಪದ

6) ಚಂದ್ರಗುತ್ತಿ ಅರಸನ ಹಾಡು

ಪ್ರದರ್ಶನಗಳು

                ಹಬ್ಬ ಹರಿದಿನಗಳಲ್ಲಿ, ಜಾತ್ರೆ, ದೇವರ ಉತ್ಸವಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ.

1)            1989 ನವೆಂಬರ್ 14ರಿಂದ 19ರವರೆಗೆ ದೆಹಲಿಯಲ್ಲಿ ನಡೆದ ಎಂಟನೇ ಏಷ್ಯನ್ ಟ್ರ್ಯಾಕ್ ಎಂಡ್ ಫೀಲ್ಡ್ ಮೀಟ್‍ನಲ್ಲಿ ಭಾರತೀಯ ಡೊಳ್ಳು ವಾದ್ಯಗಳ ಕಾರ್ಯಕ್ರಮ

2)            1991 ಜನವರಿ 18ರಿಂದ 21ರವರೆಗೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದವರು ತಂಜಾವೂರಿನಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ಉತ್ಸವ

3)            1995 ಡಿಸೆಂಬರ್ 18ರಿಂದ 27ರವರೆಗೆ ಮದ್ರಾಸಿನಲ್ಲಿ ನಡೆದ 7ನೇ ಏಷ್ಯನ್ ಫೆಡರೇಷನ್ ಕ್ರೀಡಾಕೂಟ

4) 1996ರಂದು ಮುಂಬೈನಲ್ಲಿ ಪಶ್ಚಿಮವಲಯ ಸಾಂಸ್ಕøತಿಕ ಕೇಂದ್ರ, ಉದಯಪುರ ಅವರು ಆಯೋಜಿಸಿದ್ದ ಲೋಕೋತ್ಸವ-96

5)            1996ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರಿನವರು ನವದೆಹಲಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಉತ್ಸವ

6)            1996 ನವೆಂಬರ್ 12ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶ್ವ ಸುಂದರಿಯರ ಸ್ಪರ್ಧೆಯಲ್ಲಿ ಭಾಗವಹಿಸಿದ 171 ದೇಶಗಳಿಂದ ಬಂದ ಸುಂದರಿಯರ ಮನೋರಂಜನೆಗೆ ಆಯೋಜಿಸಿದ ಕಾರ್ಯಕ್ರಮ

7) 1996ರಲ್ಲಿ ಶ್ರೇಷ್ಠ ಸಂಗೀತ ನಿರ್ದೇಶಕರಾದ ಇಳೆಯರಾಜರವರ ಭೂಮಿಗೀತ ಸಿನೆಮಾ ರೆಕಾರ್ಡಿಂಗ್‍ನಲ್ಲಿ

8)            1996 ಡಿಸೆಂಬರ್ 7ರಿಂದ 1996 ಜನವರಿ 1ರವರೆಗೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರು ದೆಹಲಿಯಲ್ಲಿ ಆಯೋಜಿಸಿದ್ದ ಭಾರತೋತ್ಸವ-96 ಕಾರ್ಯಕ್ರಮ

9)            1998 ಜನವರಿ 26ರಂದು ಭಾರತ ಗಣರಾಜ್ಯ ದಿನೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರು ಆಯೋಜಿಸಿದ ಸ್ತಬ್ಧಚಿತ್ರ ಕಾರ್ಯಕ್ರಮ

10)          1998 ಜೂನ್ 6ರಂದು ಊಟಿಯಲ್ಲಿ ನಡೆದ ಬೇಸಿಗೆ ಉತ್ಸವ

11) 1998 ಜುಲೈ 9ರಂದು ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರು ಹೈದರಾಬಾದ್‍ನಲ್ಲಿ ಆಯೋಜಿಸಿದ್ದ ‘ಶಿಲ್ಪರಾಮ’ ಉತ್ಸವ

12)          1998 ಆಗಸ್ಟ್ 11ರಂದು ಚೆನ್ನೈನಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮ

13)          1999 ಫೆಬ್ರವರಿ 13ರಂದು ದಕ್ಷಿಣವಲಯದ ಸಾಂಸ್ಕøತಿಕ ಕೇಂದ್ರದವರು ತಂಜಾವೂರಿನಲ್ಲಿ ನಡೆಸಿದ ‘ಸಾಲಂಗೈ ನಾಟ್ಯಮ್’ ಕಾರ್ಯಕ್ರಮ

14)          2005 ಮೇ 27ರಿಂದ ಜೂನ್ 6ರವರೆಗೆ ಪಾಂಡಿಚೆರಿಯಲ್ಲಿ ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರಿನವರು ಡಿಯೂ ಡಮನ್‍ನಲ್ಲಿ ಆಯೋಜಿಸಿದ್ದ ‘ಡೊಮೆನ್ ಫೆಸ್ಟಿವಲ್’ ಕಾರ್ಯಕ್ರಮ

15)          2001 ಜನವರಿ 26 ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದವರ ಮೂಲಕ ಚೆನ್ನೈನಲ್ಲಿ ಗಣರಾಜ್ಯ ದಿನೋತ್ಸವ ಕಾಯರ್ಕಕ್ರಮ

16)          ಕಾಲ್ಗೇಟ್ ವಿಶ್ವವಿದ್ಯಾಲಯ, ಅಮೆರಿಕಾ 25 ಜನ ವಿದ್ಯಾರ್ಥಿಗಳಿಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ 2005 ಸೆಪ್ಟೆಂಬರ್ 21ರಿಂದ 20ರವರೆಗೆ ಡೊಳ್ಳು ಕುಣಿತದ ತರಬೇತಿ ಕೊಡಿಸಿದ್ದು.

17)          2005 ಮೇ 27ರಿಂದ 2005 ಜೂನ್ 1ರವರೆಗೆ ನಡೆದ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರ ಸಹಾಯದಿಂದ ಪಾಂಡಿಚೆರಿಯಲ್ಲಿ ನಡೆದ ‘ಫೀಟೆಡ್ ಪಾಂಡಿಚೆರಿ-2005’ ಉತ್ಸವ

18)          2005 ಡಿಸೆಂಬರ್ 17ರಿಂದ 2006 ಜನವರಿ 15ರವರೆಗೆ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ನಡೆದ ‘ದ್ವೀಪ ಪ್ರವಾಸೋದ್ಯಮ ಉತ್ಸವ’ (ಐಲ್ಯಾಂಡ್ ಟೂರಿಸಂ ಫೆಸ್ಟಿವಲ್)

19) 2006 ಜನವರಿ 26ರಂದು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಇವರ ಸಹಾಯದಿಂದ ತಮಿಳುನಾಡಿನ ರಾಜ್ಯಪಾಲರ ನಿವಾಸದಲ್ಲಿ ನಡೆದ ಗಣರಾಜ್ಯ ದಿನೋತ್ಸವ ಕಾರ್ಯಕ್ರಮ.

ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಗಳು

2007ರಲ್ಲಿ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಾರಾಟ ಪ್ರದರ್ಶನ-ಪ್ರವಾಸೋದ್ಯಮ ಉತ್ಸವ

2006 ಸನ್ಮಾನ್ಯ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ‘ಜಾನಪದ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ 300 ತಂಡಗಳಲ್ಲಿ ಈ ತಂಡವೊಂದೇ ವಿಧಾನಸೌಧ ಎದುರು ಪ್ರದರ್ಶನ ಕೊಡಲು ಆಯ್ಕೆಯಾಯಿತು. ಆಗ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಡೊಳ್ಳು ಕುಣಿತದ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ತಂಡದ ಕಲಾವಿದರು ಕುಣಿಯುವುದನ್ನು ನೋಡಿ ಸ್ಪೂರ್ತಿಗೊಂಡು ತಂಡದ ಕಲಾವಿದರನ್ನು ಹಾರೈಸಿದರು.

2006ರಲ್ಲಿ ಮುಂಬಯಿಯಲ್ಲಿ ನಡೆದ ಜಾನಪದ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಡೊಳ್ಳು ಕುಣಿತವನ್ನು ಪ್ರದರ್ಶನ ನೀಡಿದ್ದಾರೆ.

ರಾಜ್ಯಮಟ್ಟದ ಕಾರ್ಯಕ್ರಮಗಳಾದ ಗಣರಾಜ್ಯ ದಿನೋತ್ಸವ ಕಾರ್ಯಕ್ರಮಗಳಲ್ಲಿ, ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮಗಳಲ್ಲಿ, ಮೈಸೂರು ದಸರಾ, ಹಂಪಿ, ಹೊಯ್ಸಳ, ಬನವಾಸಿ, ಕದಂಬೋತ್ಸವ, ಹಾಸನ ಮುಂತಾದ ಉತ್ಸವಗಳಲ್ಲಿ ಭಾಗವಹಿಸಿ ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಿದ್ದಾರೆ.

ಸುಮಾರು 35ರಿಂದ 50 ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

 

ಶ್ರೀ ಬಸವೇಶ್ವರ ಜಾನಪದ ಡೊಳ್ಳು ಕಲಾ ಸಂಘ

ಪಿ.ಕಲಕೊಪ್ಪ, ಅಂಚೆ: ಭೀಮನಕೆರೆ, ಹೊಸನಗರ ತಾಲ್ಲೂಕು

                ಈ ತಂಡದಲ್ಲಿ 13 ಕಲಾವಿದರಿದ್ದಾರೆ. ತಂಡದ ಮುಖ್ಯಸ್ಥರು ಕೆ.ಪಿ. ದುಗ್ಗಪ್ಪ ಮತ್ತು ಪಿ. ಕಲಕೊಪ್ಪ. ತಂಡದಲ್ಲಿ ಕಲಾವಿದರ ಸಂಖ್ಯೆ 10. ವಾದ್ಯಗಾರರು 2. ಹಾಡುವವರು 1

ಡೊಳ್ಳುಗಳ ವಿವರ

                ಶಿವನೆ ಮರದಿಂದ ತಯಾರಿಸಿದ ಹತ್ತು (10) ಡೊಳ್ಳುಗಳಿವೆ. ಡೊಳ್ಳುಗಳ ಉದ್ದ ಎರಡು ಅಡಿ, ಅಗಲ 3 ಅಡಿ, ಸುತ್ತಳತೆ 6 ಅಡಿ. ಡೊಳ್ಳಿನ ಬಲಭಾಗಕ್ಕೆ ಗಂಡು ಕಾಡುಕುರಿಯ ಚರ್ಮ, ಎಡಭಾಗಕ್ಕೆ ಆಡುಕುರಿಯ ಚರ್ಮವನ್ನು ಹೊದಿಸುತ್ತಾರೆ. ಡೊಳ್ಳಿನ ಎರಡೂ ಕಡೆ ಕಳಸೆ ರಿಂಗ್‍ಗಳಿಗೆ ಚರ್ಮವನ್ನು ಸುತ್ತಿ ಪುಂಡಿನಾರಿನ ಹಗ್ಗದಿಂದ ಬಿಗಿಯುತ್ತಾರೆ. ಡೊಳ್ಳು ಬಾರಿಸಲು ಬಲಭಾಗ ಕೋಲಿಗೆ ತೆಂಗಿನಕೊನೆಯ ಬುಡಭಾಗ ಕೂರಂಬಳೆಯನ್ನು ಬಳಸುತ್ತಾರೆ ಅಥವಾ ಹಾಲವಾಣ ಮರದ ಕೊಂಬೆಯಿಂದ ಕೋಲನ್ನು ತಯಾರಿಸಿಕೊಂಡು ಬಳಸುತ್ತಾರೆ. ಕೋಲಿನ ಉದ್ದ ಒಂದೂವರೆ ಅಡಿ ಇರುತ್ತದೆ. ಕಂಚಿನ ತಾಳ, ತಗಡಿನ ಝಲ್ಲರಿಗಳನ್ನು ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಹಳದಿಬಣ್ಣದ ಪೇಟಾಗಳು, ಮೈಗೆ ಹುಲಿಪಟ್ಟೆ ಇರುವ ಹಳದಿ ಬಣ್ಣದ ಕಸೆ ಅಂಗಿಗಳನ್ನು ಧರಿಸುತ್ತಾರೆ. ಸೊಂಟಕ್ಕೆ ಕರಿಯ ಕಂಬಳಿಯನ್ನು ಸುತ್ತಿರುತ್ತಾರೆ. ಕೈಗಳಿಗೆ (ರಟ್ಟೆ) ಮತ್ತು ತೋಳು ಮತ್ತು ಮುಂಗೈಗಳಿಗೆ ಉಣ್ಣೆಯ ಕಪ್ಪುದಾರವನ್ನು ಕಟ್ಟಿರುತ್ತಾರೆ. ಪ್ಲಾಸ್ಟಿಕ್ ದಾರ, ಬಿಳಿಯ ಕುಚ್ಚಗಳನ್ನು ತೋ

ಉಗುರು ಇರುವ ತಾಳಿಗಳನ್ನು ಕಪ್ಪು ರೇಷ್ಮೆದಾರದಿಂದ ಕೊರಳಿಗೆ ಕಟ್ಟಿದ ಹಾಗಿರುತ್ತದೆ. ಹಣೆ, ಎದೆ, ತೋಳು, ಮುಂಗೈಗಳಿಗೆ ವಿಭೂತಿಯಿಂದ ಮೂರು ಪಟ್ಟೆಗಳನ್ನು ಹಾಕಿರುತ್ತಾರೆ. ಕಾಲು, ಕೈಗಳಿಗೆ ಗೆಜ್ಜೆಗಳನ್ನು ಕಟ್ಟಿರುತ್ತಾರೆ.

ನೃತ್ಯಸ್ವರೂಪ

                ಒಂದು, ಎರಡು, ಮೂರು ಗುಣಿ, ಬಡಿತಗಳು. ಎಡಗೈ ಬಾರಿಕೆ, ಕುಕ್ಕು ಹೊಡೆತ, ಲಾಗ, ಮರಗಾಲು, ಮಲಗಿ, ಡೊಳ್ಳಿನ ಮೇಲೆ ನಿಂತು, ಕೂತು ಬಡಿಯುವುದು.

ಸಾಹಿತ್ಯ-ಹಾಡುಗಳು

1) ಡೊಳ್ಳಾಸುರ ಹಾಡು

2) ಚಂದ್ರಗುತ್ತಿ ಅರಸನ ಹಾಡು

3) ಶಿವಶರಣೆ ನಂಬಿಯಕ್ಕನ ಹಾಡು

4) ಭಕ್ತ ಮಾರ್ಕಂಡೇಯನ ಹಾಡು

5) ಭಕ್ತ ಬಲ್ಲಾಳನ ಹಾಡು

6) ಜಮದಗ್ನಿ ರೇಣುಕಾಳ ಹಾಡು

ಪ್ರದರ್ಶನ ಸಂದರ್ಭ

                ಹಬ್ಬ, ರಥೋತ್ಸವ, ಜಾತ್ರೆ, ಉತ್ಸವ, ಗಣೇಶನ ಉತ್ಸವ, ಸಾರ್ವಜನಿಕ ಸಮಾರಂಭಗಳು ಇತ್ಯಾದಿ.

ಪ್ರದರ್ಶನಗಳು

1)            ಯುವಜನ ಮೇಳಗಳಲ್ಲಿ ತಾಲ್ಲೂಕು, ಜಿಲ್ಲಾಮಟ್ಟಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ

2)            ಶಿವಮೊಗ್ಗ, ಹೊಸನಗರ, ದಕ್ಷಿಣಕನ್ನಡ ಜಿಲ್ಲೆಯ ಕೋಟೇಶ್ವರ, ಹೊಳೆಹೊನ್ನೂರು, ಭದ್ರಾವತಿ, ಹೊನ್ನಾಳಿ ತಾಲ್ಲೂಕು ಸುಂಕದಕಟ್ಟೆ, ಹೊಸನಗರ ತಾಲ್ಲೂಕಿನ ಅನೇಕ ಗ್ರಾಮಗಳು.

 

ಶ್ರೀ ರುದ್ರೇಶ್ವರ ಜಾನಪದ ಡೊಳ್ಳು ಕಲಾಸಂಘ

ಚನ್ನಾಪುರ, ಅಂಚೆ: ತ್ಯಾಗರ್ತಿ, ಸಾಗರ ತಾಲ್ಲೂಕು

                ಈ ತಂಡದ ಮುಖ್ಯಸ್ಥರು ಎಚ್. ರೇವಣಪ್ಪ, ಚನ್ನಾಪುರ

                ಕಲಾವಿದರ ಸಂಖ್ಯೆ 18

                ವಾದ್ಯಗಾರರು 02

                ಹಾಡುವವರು 02 ಒಟ್ಟು ಕಲಾವಿದರ ಸಂಖ್ಯೆ 22

ಡೊಳ್ಳುಗಳ ವಿವರ

                ಈ ತಂಡದಲ್ಲಿ 18 ಡೊಳ್ಳುಗಳಿವೆ. ಎಲ್ಲಾ ಡೊಳ್ಳುಗಳನ್ನು ಶಿವನೆ ಎಂಬ ಜಾತಿಯ ಮರದಿಂದ ಮಾಡಲಾಗಿದೆ. ಡೊಳ್ಳಿನ ಬಲಭಾಗಕ್ಕೆ ಜಿಂಕೆಯ ಚರ್ಮ, ಎಡಭಾಗಕ್ಕೆ ಆಡುಕುರಿಯ ಚರ್ಮವನ್ನು ಹೊದಿಸಿದ್ದಾರೆ. ಡೊಳ್ಳಿಗೆ ಚರ್ಮ ಹೊದಿಸುವುದಕ್ಕಿಂತ ಮುಂಚೆ ಡೊಳ್ಳಿನ ಒಳಗೆ ಗೆಜ್ಜೆ, ಗಗ್ಗರಗಳನ್ನು ಹಾಕಿರುತ್ತಾರೆ. ಬಿದಿರಿನ ಬಂದಿಯನ್ನು ದುಂಡಾಕಾರವಾಗಿ ತಯಾರಿಸಿ ಇದರ ಸುತ್ತ ಚರ್ಮವನ್ನು ಸುತ್ತಿ ಬಂದಿಯ ಮೇಲೆ ಸಣ್ಣ ಬಿದಿರಿನ ಕಡ್ಡಿಯನ್ನು ಹಾಕಿ ಪಿಳ್ಳೇರಿಸಿ ಪುಂಡಿ ನಾರಿನ ಹಗ್ಗದಿಂದ ಬಿಗಿಯುತ್ತಾರೆ. ಹಗ್ಗ 45 ಅಡಿ ಉದ್ದವಿರುತ್ತದೆ.

                ಶಿವನೆ ಮರವನ್ನು ಕಡಿದು ತುಂಡು ಮಾಡಿ ಡೊಳ್ಳಿನ ಕಾಲು ತಯಾರಿಸಿ (ಪಟ್ಟೆ ಹೊಡೆದು) ಚರ್ಮ ಹೊದಿಸಿ ಬಿಗಿಯುತ್ತಾರೆ. ಡೊಳ್ಳಿನ ಉದ್ದ ಒಂದೂವರೆ ಅಡಿ, ಅಗಲ 15 ಇಂಚು, ಸುತ್ತಳತೆ ನಾಲ್ಕೂವರೆ ಅಡಿ ಇರುತ್ತದೆ.

                ಡೊಳ್ಳು ಬಾರಿಸಲು ಆಲದ ಕಾಲುಗಳನ್ನು ಬಳಸುತ್ತಾರೆ. ಕೋಲಿನ ಉದ್ದ ಒಂದು ಅಡಿ. ಡೊಳ್ಳುಗಳ ಮೇಲೆ ಕೆಂಪುಬಣ್ಣದ ಜೂಲು ಹಾಕಿರುತ್ತಾರೆ.

ವೇಷಭೂಷಣಗಳು

                ತಲೆಗೆ ಹಳದಿಬಣ್ಣದ ಪೇಟಾ, ಮೈಗೆ ಹುಲಿ ಪಟ್ಟೆಯಿರುವ ಹಳದಿಬಣ್ಣದ ಕವಚ, ಸೊಂಟಕ್ಕೆ ಕರೆಕಂಬಳಿ ಸುತ್ತಿಕೊಳ್ಳುತ್ತಾರೆ. ಕೊರಳಲ್ಲಿ ಕವಡೆಸರ, ಕೈಗಳಿಗೆ ಬಿಳಿಯಬಣ್ಣದ ಪ್ಲಾಸ್ಟಿಕ್ ಕುಚ್ಚಗಳು, ರಟ್ಟೆಗೆ ಕವಡೆ ಕಟ್ಟಿರುತ್ತಾರೆ. ಕಾಲು, ಎದೆ, ಕೈಗೆ ಕಪ್ಪುಬಣ್ಣದ ಉಣ್ಣೆಯ ದಾರ ಕಟ್ಟಿರುತ್ತಾರೆ. ಕಾಲಿಗೆ ಗೆಜ್ಜೆ ಎಡಗೈಗೆ ಗೆಜ್ಜೆ, ಪೇಟಾ ಮೇಲೆ ನವಿಲುಗರಿ ಸಿಕ್ಕಿಸಿಕೊಂಡಿರುತ್ತಾರೆ. ಹಣೆಗೆ, ಎದೆಗೆ ಮೂರು ಪಟ್ಟೆ ಬರುವಂತೆ ವಿಭೂತಿ ಹಚ್ಚಿರುತ್ತಾರೆ. ಹಣೆಗೆ ವಿಭೂತಿ ಮೇಲೆ ಮಧ್ಯೆ ಕುಂಕುಮಬಟ್ಟು ಇಟ್ಟುಕೊಳ್ಳುತ್ತಾರೆ.

                ಕಂಚಿನ ತಾಳ ಬಳಸುತ್ತಾರೆ.

 

 

ನೃತ್ಯಸ್ವರೂಪ

                ಒಂದು ಗುಣಿ, ಎರಡು ಗುಣಿ, ಮೂರು ಗುಣಿ ಬಡಿತಗಳು, ಕುದುರೆ ಕುಣಿತ, ಕೋಲುಕುಣಿತ, ಸುತ್ತುಕುಣಿತ, ಸಾರ್ ಹೊಡೆತ, ಲಾಗ ಹಾಕುವುದು ಇತ್ಯಾದಿ ಬಡಿತಗಳು.

ಕಲೆಯೊಡನೆ ಸಾಹಿತ್ಯ-ಹಾಡುಗಳು

1) ಗ್ರಾಮದೇವರ ಸ್ಮರಣೆಯ ಹಾಡು

2) ಚಂದ್ರಗುತ್ತಿಯ ಹಾಡು

3) ಸಸ್ಯಗಳ ಬಗ್ಗೆ ಹಾಡು

4) ವರುಣನ ಹಾಡು

5) ಜಮದಗ್ನಿ ಹಾಡು

6) ಸಂಘರಚನೆ ಹಾಡು

ಪ್ರದರ್ಶನಗಳು

ಹಬ್ಬ ಹರಿದಿನ, ಜಾತ್ರೆ, ರಥೋತ್ಸವ, ಪ್ರತಿವರ್ಷ ನಡೆಯುವ ಯುವಜನ ಮೇಳಗಳಲ್ಲಿ

1) 1989ರಲ್ಲಿ ಬೆಂಗಳೂರು ಮೈಕೊ ಫ್ಯಾಕ್ಟರಿಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ಪ್ರದರ್ಶನ.

2) ಹಾಸನ ಜಿಲ್ಲೆಯ ಹಿರೇಸಾವೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

3) ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ

4) ತುಮಕೂರು ಜಿಲ್ಲೆಯ ಯಡೆಯೂರು ಕಲ್ಪಶ್ರೀ ಉತ್ಸವ

5) ಚನ್ನಗಿರಿ ತಾಲ್ಲೂಕು ಬಸವಾಪಟ್ಟಣದಲ್ಲಿ

6) ಚಿಕ್ಕಮಗಳೂರು ಜಿಲ್ಲೆಯ ಕೈಮರದಲ್ಲಿ

7) ಮುಳ್ಳಯ್ಯನಗಿರಿಯಲ್ಲಿ

8) ಶಿಕಾರಿಪುರ ತಾಲ್ಲೂಕು ಮದಗದ ಕೆಂಚಮ್ಮನ ಜಾತ್ರೆ

9) ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ, ಬಳಕೂರು, ಶಂಕರನಾರಾಯಣ, ಕೋಟೇಶ್ವರದಲ್ಲಿ

10) ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ

11) ಹೊಸನಗರ ತಾಲ್ಲೂಕು ಹುಂಚ

12) 1998ರಲ್ಲಿ ತಾಲ್ಲೂಕುಮಟ್ಟದ ಯುವಜನ ಮೇಳದಲ್ಲಿ ಪ್ರಥಮ

13) 1999ರ ಯುವಜನ ಮೇಳಗಳಲ್ಲಿ ತಾಲ್ಲೂಕು, ಜಿಲ್ಲೆ, ವಿಭಾಗಮಟ್ಟದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ

14) ಬೆಂಗಳೂರು ಜಯಪ್ರಕಾಶ ವಿದ್ಯಾನಗರದಲ್ಲಿ ಪ್ರದರ್ಶನ

 

ಶ್ರೀ ಚನ್ನಮ್ಮಾಜಿ ಜಾನಪದ ಡೊಳ್ಳು ಕಲಾಸಂಘ

ಚನ್ನಶೆಟ್ಟಿಕೊಪ್ಪ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

                ಶ್ರೀ ಚನ್ನಮ್ಮಾಜಿ ಜಾನಪದ ಡೊಳ್ಳು ಕಲಾಸಂಘದಲ್ಲಿ ಒಟ್ಟು ಹದಿನೆಂಟು (18) ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು ಹದಿನಾಲ್ಕು (14) ಜನ, ವಾದ್ಯಗಾರರು ಎರಡು ಜನ, ಹಾಡುವವರು ಎರಡು ಜನರಿರುವ ಉತ್ತಮ ತಂಡವಾಗಿದೆ. ಈ ತಂಡದ ಮುಖ್ಯಸ್ಥರಾಗಿ ಎಸ್.ಆರ್. ನಾಗಪ್ಪನವರು ಚೆನ್ನಶೆಟ್ಟಿಕೊಪ್ಪ ಇವರು ಇದ್ದಾರೆ.

ಡೊಳ್ಳುಗಳ ವಿವರ

                ಶಿವನೆ, ಹೊನ್ನೆ ಎಂಬ ಜಾತಿಯ ಮರಗಳಿಂದ ತಯಾರಿಸಿದ ಹದಿನಾಲ್ಕು (14) ಡೊಳ್ಳುಗಳಿವೆ. ಡೊಳ್ಳುಗಳ ಉದ್ದ ಎರಡೂವರೆ ಅಡಿ, ಅಗಲ ಎರಡೂಕಾಲು ಅಡಿ, ಸುತ್ತಳತೆ ಐದು ಅಡಿ ಇವೆ. ಡೊಳ್ಳಿನ ಬಲಭಾಗಕ್ಕೆ ಮೇಕೆ ಚರ್ಮ, ಎಡಭಾಗಕ್ಕೆ ಆಡಿನ ಚರ್ಮ ಹೊದಿಸಿದ್ದಾರೆ. ಚರ್ಮದ ಒಳಗಡೆ ಬಿದಿರುಕಡ್ಡಿ ಸೇರಿಸಿ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಬಿಗಿಯುತ್ತಾರೆ. ಹಗ್ಗ ಹನ್ನೆರಡು ಮಾರು ಉದ್ದವಿರುತ್ತದೆ. ಡೊಳ್ಳು ಬಾರಿಸುವ ಕೋಲಿಗೆ ಆಲದ ಕಾಲನ್ನು ಬಳಸುತ್ತಾರೆ. ಕೋಲಿನ ಉದ್ದ 15 ಇಂಚು ಇರುತ್ತದೆ. 2 ಇಂಚು ದಪ್ಪ ಇರುತ್ತದೆ.

ವೇಷಭೂಷಣಗಳು

                ತಲೆಗೆ ಹಳದಿಬಣ್ಣದ ಪೇಟಾ, ಮೈಗೆ ಹುಲಿಪಟ್ಟೆಗಳಿರುವ ಹಳದಿಬಣ್ಣದ ಕಸೆ ಅಂಗಿ, ಕೊರಳಿಗೆ ಕೈಗೆ ಕವಡೆ, ಮಣಿಗಳನ್ನು ಕಟ್ಟಿಕೊಳ್ಳುತ್ತಾರೆ. ಹಣೆ, ಎದೆ, ಕೈಗಳಿಗೆ ವಿಭೂತಿ ಹಚ್ಚಿಕೊಳ್ಳುತ್ತಾರೆ. ಸೊಂಟಕ್ಕೆ ಕರಿಯ ಕಂಬಳಿ ಸುತ್ತಿಕೊಳ್ಳುತ್ತಾರೆ. ಕಂಬಳೆ ಮೇಲೆ ಸೊಪ್ಪು ಕಟ್ಟಿಕೊಳ್ಳುತ್ತಾರೆ.

ನೃತ್ಯದ ಸ್ವರೂಪ

                ಒಂದು ಗುಣಿ ಹೊಡೆತ, ಮೂರು ಗುಣಿ ಬಡಿತ, ಹಾರ್ಜೆಳ್ಳು ಹೊಡೆತ, ಕೈಬಾರಿಕೆ, ಲಾಗದ ಹೊಡೆತ, ಒಂಬತ್ತು ಗುಣಿ ಹೊಡೆತ, ಹದಿಮೂರು ಗುಣಿ ಹೊಡೆತ

 

ಹಾಡುಗಳು

1) ಬೀರಲಿಂಗೇಶ್ವರನ ಹಾಡು

2) ರೇವಣಸಿದ್ದನ ಹಾಡು

3) ಪಾಂಡವರ ಚರಿತ್ರೆ

4) ಬೀರೇಡೊಳ್ಳಿನ ಹಾಡು

5) ಡೊಳ್ಳಾಸುರನ ಹಾಡು

ಪ್ರದರ್ಶನಗಳು

                ಹಬ್ಬ, ಜಾತ್ರೆ, ರಥೋತ್ಸವ, ಸಾರ್ವಜನಿಕ ಸಮಾರಂಭಗಳು, ದೇವರ ಮೆರವಣಿಗೆ, ಬೆಂಗಳೂರು, ಹೊನ್ನಾವರ, ಶಿವಮೊಗ್ಗ, ಜೋಗ, ತೀರ್ಥಹಳ್ಳಿ, ಉಡುಪಿ, ಕಾರ್ಕಳ, ದಾವಣಗೆರೆ ಸಮಾರಂಭಗಳಲ್ಲಿ.

 

ಶ್ರೀ ದುರ್ಗಾ ಭೈರವೇಶ್ವರ ಜಾನಪದ ಡೊಳ್ಳು ಕಲಾಸಂಘ

ಹಿರೇಹಾರಕ, ಸಾಗರ ತಾಲ್ಲೂಕು

                ಈ ತಂಡದಲ್ಲಿ 24 ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು 20 ಜನ, ವಾದ್ಯಗಾರರು 2 ಜನ, ಹಾಡುವವರು 2 ಜನ. ತಂಡದ ಸಂಚಾಲಕರು ಎಸ್.ಎಂ. ಮೋಹನಪ್ಪ, ಹಿರೇಹಾರಕ

ಡೊಳ್ಳುಗಳ ವಿವರ

                ಇಪ್ಪತ್ತು (20) ಡೊಳ್ಳುಗಳಿವೆ. ಎಲ್ಲಾ ಡೊಳ್ಳುಗಳು ಶಿವನೆ ಮರದಿಂದ ಮಾಡಲ್ಪಟ್ಟಿವೆ. ಡೊಳ್ಳಿನ ಬಲಭಾಗಕ್ಕೆ ಗಂಡು ಆಡಿನ ಚರ್ಮ, ಎಡಭಾಗಕ್ಕೆ ಆಡಿನ ಚರ್ಮವನ್ನು ಹೊದಿಸಿದ್ದಾರೆ. ಬಿದಿರಿನ ಬಂಕವನ್ನು ಹಾಕಿ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಬಿಗಿಯುತ್ತಾರೆ. ಡೊಳ್ಳುಗಳ ಉದ್ದ ಎರಡು ಅಡಿ ಎಂಟು ಇಂಚು, ಅಗಲ ಒಂದು ಅಡಿ ಎಂಟು ಇಂಚು, ಸುತ್ತಳತೆ ಐದು ಅಡಿ ಇರುತ್ತವೆ.

ವೇಷಭೂಷಣಗಳು

                ತಲೆಗೆ ಹಳದಿ ಪೇಟಾ, ಮೈಗೆ ಹಳದಿಬಣ್ಣದ ಬಟ್ಟೆಗೆ ಬಿಳಿ ಚುಕ್ಕಿಯಿರುವ ಕವಚ, ಸೊಂಟಕ್ಕೆ ಕರಿಯ ಕಂಬಳಿ ಸುತ್ತಿಕೊಳ್ಳುತ್ತಾರೆ. ಕಪ್ಪುಬಣ್ಣದ ಕಕ್ಕಡ ಕಟ್ಟುತ್ತಾರೆ. ಕೊರಳಿಗೆ ಕವಡೆಸರ, ತೋಳುಗಳಿಗೆ ಬಿಳಿಯ ಪ್ಲಾಸ್ಟಿಕ್ ಕುಚ್ಚ, ಕಾಲಿಗೆ ಗೆಜ್ಜೆ, ಮುಖ, ಎದೆ, ಕಾಲುಗಳಿಗೆ ವಿಭೂತಿ. ತೋಳಿಗೆ ತಾಯಿತ.

                ಡೊಳ್ಳುಗಳಿಗೆ ಕೆಂಪುಬಣ್ಣದ ಜೂಲು, ಪೇಟಾದ ಮೇಲಕ್ಕೆ ನವಿಲುಗರಿ ಸಿಕ್ಕಿಸಿರುತ್ತಾರೆ. ಡೊಳ್ಳು ಬಾರಿಸಲು ಬೆತ್ತದ ಕೋಲುಗಳನ್ನು ಬಳಸುತ್ತಾರೆ.

ನೃತ್ಯದ ಸ್ವರೂಪ

                ಒಂದು ಗುಣಿ, ಮೂರು ಗುಣಿ, ಆರು ಗುಣಿ, ಕೈಬಾರಿಕೆ

ಸಾಹಿತ್ಯ-ಹಾಡುಗಳು

1) ದುರ್ಗಮ್ಮನ ಹಾಡು

2) ಡೊಳ್ಳಿನ ಹಾಡು

3) ಮಲ್ಲವ್ವಳ ಹಾಡು

4) ಶಿವನ ಹಾಡು

5) ಬಸವಣ್ಣನ ಹಾಡು

6) ರೇವಣಸಿದ್ಧನ ಹಾಡು

7) ಕೌರವ-ಪಾಂಡವರ ಹಾಡು

ಪ್ರದರ್ಶನಗಳು

                ಬೆಂಗಳೂರು, ಮಂಗಳೂರು, ಹಂಪಿ, ದಸರಾ ಉತ್ಸವ, ಕೇರಳ, ನಂಜನಗೂಡು, ಪುತ್ತೂರು, ಕುದುರೆಮುಖ, ಧರ್ಮಸ್ಥಳ, ಕಾರ್ಕಳ, ಉಡುಪಿ, ನವಿಲಗುಂದ, ಶಿವಮೊಗ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ದಸರಾ ಉತ್ಸವ, ರಾಮನಗರ ಜಾನಪದ ಲೋಕ, ಜೋಗ ಯುವಜನ ಮೇಳಗಳಲ್ಲಿ ಪ್ರದರ್ಶನ ನೀಡಿರುತ್ತಾರೆ.

 

ಗಾಮೇಶ್ವರ ಜಾನಪದ ಡೊಳ್ಳು ಕಲಾಸಂಘ

ತಳಿಗೆರೆ, ಆನಂದಪುರ, ಸಾಗರ ತಾಲ್ಲೂಕು

                ಆನಂದಪುರಂ ಹೋಬಳಿಯ ಗೌತಮಪುರ ಗ್ರಾಮಕ್ಕೆ ತುಂಬಾ ಸಮೀಪದಲ್ಲಿರುವ ಹಳ್ಳಿ. ಈ ಗ್ರಾಮದ ಡೊಳ್ಳು ತಂಡದ ಸಂಚಾಲಕರು ಧರ್ಮಪ್ಪನವರು. ಇವರ ತಂಡದಲ್ಲಿ 14 ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು 10 ಜನ, ವಾದ್ಯಗಾರರು ಎರಡು ಜನ, ಹಾಡುವವರು ಎರಡು ಜನ.

ಡೊಳ್ಳುಗಳ ವಿವರ

                ಶಿವನೆ ಮರದಿಂದ ತಯಾರಿಸಿದ ಹತ್ತು ಡೊಳ್ಳುಗಳಿವೆ. ಡೊಳ್ಳಿನ ಬಲಭಾಗಕ್ಕೆ ಗಂಡು ಆಡಿನ ಚರ್ಮ, ಎಡಭಾಗಕ್ಕೆ ಆಡಿನ ಚರ್ಮವನ್ನು ಹೊದಿಸಿದ್ದಾರೆ. ಚರ್ಮಕ್ಕೆ ಬಿದಿರಿನ ಬಂಕ ಹಾಕಿ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಬಿಗಿಯುತ್ತಾರೆ.

                ಡೊಳ್ಳು ಬಾರಿಸಲು ಆಲದ ಕಾಲನ್ನು ಬಳಸುತ್ತಾರೆ. ಕಂಚಿನ ತಾಳ, ಝಲ್ಲರಿಗಳನ್ನು ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಹಳದಿ ಪೇಟಾ, ಮೈಗೆ ಹಳದಿಬಣ್ಣದ ಹುಲಿಪಟ್ಟೆ (ಚುಕ್ಕಿ)ಯಿರುವ ಕಸೆ ಅಂಗಿ, ಕೊರಳಿಗೆ ಆಂಜನೇಯನ ತಾಯಿತ ಇರುವ ಕವಡೆಸರ, ಸೊಂಟಕ್ಕೆ ಕರಿಯ ಕಂಬಳಿ ಸುತ್ತಿರುತ್ತಾರೆ. ಕೈ ಕಾಲುಗಳಿಗೆ ಕಪ್ಪು ಉಣ್ಣೆದಾರ, ಕಾಲಿಗೆ ಗೆಜ್ಜೆ, ಪೇಟಾಕ್ಕೆ ನವಿಲುಗರಿ ಸಿಕ್ಕಿಸಿರುತ್ತಾರೆ. ಹಣೆಗೆ, ಎದೆಗೆ, ಕೈಗೆ ವಿಭೂತಿ. ಹಣೆಯ ಮಧ್ಯೆ ಕುಂಕುಮದಿಂದ ಬಟ್ಟು ಇಟ್ಟುಕೊಳ್ಳುತ್ತಾರೆ.

 

 

ನೃತ್ಯದ ಸ್ವರೂಪ

                ಒಂದು ಗುಣಿಯಲ್ಲಿ ನಿಧಾನಗತಿ, ಮುಕ್ತಾಯದ ಹಂತದಲ್ಲಿ ತೀವ್ರಗತಿ, ಎರಡು ಗುಣಿಯಲ್ಲಿ ತೀವ್ರಗತಿಯಲ್ಲಿ ಪ್ರಾರಂಭ, ತೀವ್ರಗತಿಯಲ್ಲಿ ಮುಕ್ತಾಯ, ಕೈಬಾರಿಕೆ.

ಸಾಹಿತ್ಯ-ಹಾಡುಗಳು

1) ಗಣಪತಿ ಸ್ತುತಿ

2) ಡೊಳ್ಳಾಸುರನ ಹಾಡು

3) ಗಜಮುಖ ದೈತ್ಯನ ಹಾಡು

4) ಚಂದ್ರಗುತ್ತಿ ಅರಸನ ಹಾಡು

ಪ್ರದರ್ಶನಗಳು

                ಕೇರಳ, ಶಿವಮೊಗ್ಗ, ಬೆಂಗಳೂರು ಮುಂತಾದ ಕಡೆ ಪ್ರದರ್ಶನ ನೀಡಿದ್ದಾರೆ.

 

ಲಕ್ಷ್ಮೀನರಸಿಂಹ ಜಾನಪದ ಡೊಳ್ಳು ಕಲಾಸಂಘ

ನರಸೀಪುರ, ಸಾಗರ ತಾಲ್ಲೂಕು

                ತಂಡದಲ್ಲಿ 16 ಜನ ಕಲಾವಿದರಿದ್ದಾರೆ. ಡೊಳ್ಳು ಬಾರಿಸುವವರು 12 ಜನ, ಒಬ್ಬ ವಾದ್ಯಗಾರರು 2 ಜನ, ಹಾಡುವವರು 2 ಜನರಿದ್ದಾರೆ.

                ತಂಡದ ಸಂಚಾಲಕರು ಎನ್. ಬಿ. ಈಶ್ವರಪ್ಪ, ನರಸೀಪುರ

ಡೊಳ್ಳುಗಳ ವಿವರ

                ಶಿವನೆ ಎಂಬ ಜಾತಿಯ ಮರದಿಂದ ತಯಾರಿಸಿದ 12 (ಹನ್ನೆರಡು) ಡೊಳ್ಳುಗಳಿವೆ. ಡೊಳ್ಳಿನ ಬಲಭಾಗಕ್ಕೆ ಗಂಡು ಆಡಿನ ಚರ್ಮ, ಎಡಭಾಗಕ್ಕೆ ಆಡುಕುರಿಯ ಚರ್ಮ ಹೊದಿಸುತ್ತಾರೆ. ಚರ್ಮಕ್ಕೆ ಬಿದಿರಿನ ಬಂಕ ಹಾಕಿ ಪಿಳ್ಳೇರಿಸಿ ಪುಂಡಿನಾರಿನ ಹಗ್ಗದಿಂದ ಡೊಳ್ಳನ್ನು ಬಿಗಿಯುತ್ತಾರೆ. ಡೊಳ್ಳು ಬಾರಿಸಲು ಆಲದಕಾಲುಗಳನ್ನು ಬಳಸುತ್ತಾರೆ.

                ದೊಡ್ಡದಾದ ಕಂಚಿನ ತಾಳ, ಝಲ್ಲರಿಯನ್ನು ವಾದ್ಯಗಳನ್ನಾಗಿ ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಹಳದಿ ಪೇಟಾ ಕಟ್ಟಿ ಪೇಟದ ಮೇಲೆ ನವಿಲುಗರಿ ಸಿಕ್ಕಿಸಿರುತ್ತಾರೆ. ಮೈಗೆ ಹಳದಿಬಣ್ಣದ ಹುಲಿಯ ಪಟ್ಟೆಗಳಿರುವ ಕಸೆ ಅಂಗಿಗಳು, ಕೊರಳಿಗೆ ಆಂಜನೇಯನ ತಾಯತ ಇರುವ ಕವಡೆಸರ ಸೊಂಟಕ್ಕೆ ಕರಿಯ ಕಂಬಳಿ ಸುತ್ತಿರುತ್ತಾರೆ.

                ಕೈ, ಕಾಲು, ಎದೆಗೆ ಉಣ್ಣೆಯ ಕಪ್ಪುದಾರವನ್ನು ಕಟ್ಟಿರುತ್ತಾರೆ. ಹಣೆ, ಎದೆ, ಮುಖ, ಕಾಲುಗಳಿಗೆ ವಿಭೂತಿ, ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ.

ನೃತ್ಯದ ಸ್ವರೂಪ

                ಒಂದು ಗುಣಿಯಲ್ಲಿ ನಿಧಾನವಾದ ಗತಿ, ಮುಕ್ತಾಯದಲ್ಲಿ ತೀವ್ರಗತಿ, ಎರಡು ಗುಣಿಯಲ್ಲಿ ತೀವ್ರಗತಿಯಲ್ಲಿ ಪ್ರಾರಂಭ, ತೀವ್ರಗತಿಯಲ್ಲಿ ಮುಕ್ತಾಯ, ಕೈಬಾರಿಕೆ ಇತ್ಯಾದಿ.

ಸಾಹಿತ್ಯ-ಹಾಡುಗಳು

1) ಗಣಪತಿ ಸ್ತುತಿ

2) ಡೊಳ್ಳಾಸುರನ ಹಾಡು

3) ಗಣಮುಖ ದೈತ್ಯನ ಹಾಡು

4) ಚಂದ್ರಗುತ್ತಿ ಅರಸನ ಹಾಡು

ಪ್ರದರ್ಶನ

                ಹಬ್ಬ, ಜಾತ್ರೆ, ರಥೋತ್ಸವ, ಮೆರವಣಿಗೆ ಸಾರ್ವಜನಿಕ ಸಮಾರಂಭ.

                ಮೈಸೂರು ದಸರಾ ಮೆರವಣಿಗೆಯಲ್ಲಿ ಮೂರು ಬಾರಿ, ಬೆಂಗಳೂರು, ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯಮಟ್ಟದ ಯುವಜನ ಮೇಳದಲ್ಲಿ ದ್ವಿತೀಯ ಸ್ಥಾನ, ಪಾವಗಡ ಮುಂತಾದ ಸ್ಥಳಗಳಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಿರುತ್ತಾರೆ.

ಹಬ್ಬ ಹಾಡುವುದು

ಅಂಟಿಗೆ-ಪಂಟಿಗೆ ಹಿನ್ನೆಲೆ

(ಜನಪದ ಗೀತ ಸಂಪ್ರದಾಯ)

                ದೀಪ ಭಾರತೀಯರ ಕಲ್ಪನೆಯಲ್ಲಿ ಮಹತ್ವದ್ದು. ಅದು ಸಾರ್ಥಕ ಬದುಕಿನ ಜೀವಂತಿಕೆಯ ಸಂಕೇತ. ಆದ್ದರಿಂದ ಮಲೆನಾಡಿಗರಿಗೆ ದೀಪಾವಳಿ ಬೆಳಕಿನ ಹಬ್ಬ. ಇದನ್ನು ಐದು ದಿವಸಗಳ ಕಾಲ ತುಂಬಾ ವಿಜೃಂಭಣೆಯಿಂದ, ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ.

                ಪ್ರಕೃತಿಯ ತಾಮಸ ಕಳೆದು ಹಗುರವಾಗಿ ಹರೆಯ ಚಿಗುರಿರಲು ನೆಲ, ಹೊಲಗಳೆಲ್ಲ ಕಾರ್ತಿಕ ಮೆಲುಹೆಜ್ಜೆಗಳನ್ನಿಡುತ್ತಾ ನೆಲಕ್ಕಿಳಿಯುವಾಗಿನ ಗೆಜ್ಜೆಯ ಮೃದು ಕಿಂಕಿಣಿಯ ಲಹರಿಯಂತೆ ಬರುತ್ತದೆ ಈ ಹಬ್ಬ. ದೀಪಾವಳಿ ಬಂದಿತೆಂದರೆ ಇಡೀ ಮಲೆನಾಡೇ ನಲಿಯುತ್ತದೆ. ಮಲೆನಾಡಿನ ಹಳ್ಳಿಗಳಲ್ಲಿ ಇದಕ್ಕಿಂತ ಮಿಗಿಲಾದ ಹಬ್ಬವೇ ಇಲ್ಲ. ಹಾಗಾಗಿ ಇದಕ್ಕೆ ‘ದೊಡ್ಡಹಬ್ಬ’ವೆಂದು ಕರೆಯುತ್ತಾರೆ. ಹತ್ತು ಹಣತೆಗಳನ್ನು ಹಚ್ಚಲು ಎಣ್ಣೆಯಿಲ್ಲದವನ ಮನೆಯಲ್ಲೂ ಇನ್ನಿಲ್ಲದ ಸಂತಸ, ಸಡಗರ, ಸಂಭ್ರಮ. ನರಕ ಚತುರ್ದಶಿಯಂದು ಈ ಹಬ್ಬದ ನಾಂದಿ. ಆ ದಿನ ‘ಬೂರೆ’ ಎಂದು ಆಚರಿಸುತ್ತಾರೆ. ನಸುಕು ಹರಿಯುವ ಮುನ್ನ ಊರಿನ ಹೆಣ್ಣುಮಕ್ಕಳು ಬಾವಿಯಲ್ಲಿ ಬೂರೆಮಗೆಯಲ್ಲಿ ಹೊಸ ನೀರನ್ನು ತುಂಬಿ ‘ಬಲೀಂದ್ರ’ನನ್ನು ಮನೆತುಂಬಿಸಿಕೊಳ್ಳುತ್ತಾರೆ.

                ಬಲೀಂದ್ರ ಕಾರ್ಗಾಲದ ಜಡದಿನಗಳನ್ನು ನರಕದ ಕತ್ತಲರಮನೆಯಲ್ಲಿ ಕಳೆದು ಕಾರ್ತಿಕದ ಎದುರಿನ ಹಿತವಾದ ಸುಂದರ ರಾತ್ರಿಯಲ್ಲಿ ಮೇಲೇರಿ ಮತ್ರ್ಯಕ್ಕೆ ಬರುತ್ತಾನೆ.

                ಮಲೆನಾಡಿನ ಹಳ್ಳಿಗಳಲ್ಲಿ ದೀಪಾವಳಿ ಕಾರ್ಯಕ್ರಮಗಳಲ್ಲಿಯೇ ಅತ್ಯಂತ ವರ್ಣರಂಜಿತವಾದದ್ದು ಪಾಡ್ಯದ ದಿವಸದ ‘ಗೋಪೂಜೆ’. ಮನೆಯಲ್ಲಿರುವ ಜಾನುವಾರು(ದನಕರುಗಳು)ಗಳಿಗೆ ಮೈ ತೊಳೆಸಿ, ಸಿಂಗರಿಸಿ, ಕೊರಳಿಗೆ ಮಾವಿನ ತೊಳಲು, ಹಿಂಗಾರ, ಚೆಂಡುಹೂವು, ಹಸಿ ಅಡಿಕೆ, ಅಂಬಾಡಿ ಎಲೆ, ಪಚ್ಚೆತೆನೆಗಳನ್ನು ಸೇರಿಸಿ, ಬಚ್ಚಲು ಬಳ್ಳಿಯಲ್ಲಿ ಗುಚ್ಚು ಗುಚ್ಚಾಗಿ ಸರ ಮಾಡಿ ಜಾನುವಾರುಗಳ ಕೊರಳಿಗೆ ಕಟ್ಟುತ್ತಾರೆ. ಮೈಮೇಲೆಲ್ಲಾ ಕೆಮ್ಮಣ್ಣು, ಜೇಡಿ ಮಣ್ಣನ್ನು ಬೇರೆ ಬೇರೆ ಪಾತ್ರೆಯಲ್ಲಿ ಬೂರೆ ನೀರು ಹಾಕಿ ಕದಡಿಕೊಂಡು ಮರದ ಸಿದ್ದೆಯನ್ನು ತೆಗೆದುಕೊಂಡು ಕದಡಿರುವ ಜೇಡಿ ಮತ್ತು ಕೆಮ್ಮಣ್ಣು ನೀರಿನಲ್ಲಿ ಅದ್ದಿ ಜಾನುವಾರುಗಳಿಗೆ ದಾಕು ಹಾಕುತ್ತಾರೆ. ಜಾನುವಾರುಗಳಿಗೆ ಹಣೆಗೆ ಚಪ್ಪೆರೊಟ್ಟಿ ಸರಗಳನ್ನು ಕಟ್ಟಿ ಕೋಡುಗಳಿಗೆ ಹುರಿಮಂಜು ಬಣ್ಣ ಹಚ್ಚುತ್ತಾರೆ.

                ಗಾಡಿ ಎತ್ತುಗಳಿಗೆ ಅವುಗಳ ಕೋಡುಗಳನ್ನು ನಯವಾಗುವಂತೆ ಹೆರೆದು ಕೆಂಪು ಬಣ್ಣಹಚ್ಚಿ ಕೋಡುಗಳಿಗೆ ಹಿತ್ತಾಳೆಯ ಕೋಡುಗೆಣಸುಗಳನ್ನು ಹಾಕುತ್ತಾರೆ. ಕೋಡುಗಳಿಗೆ ತುದಿಗೆ ಬಣ್ಣದ ರಿಬ್ಬನನ್ನು ಕಟ್ಟುತ್ತಾರೆ. ಚೆಂಡು ಹೂವುಗಳಿಂದ ಅಲಂಕೃತವಾದ ಬಾಸಿಂಗಗಳನ್ನು ಕಟ್ಟುತ್ತಾರೆ. ನಂತರ ಹಳ್ಳಿಯ ನೂರಾರು ಜೊತೆ ಬಾಸಿಂಗದ ಎತ್ತುಗಳು ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯಲ್ಲಿ ಹೋಗುವುದನ್ನು ನೋಡಲು ಎರಡು ಕಣ್ಣು ಸಾಲದಾಗುತ್ತದೆ.

ಅಂಟಿಗೆ-ಪಂಟಿಗೆ

                ದೀಪಾವಳಿಯ ಪಾಡ್ಯದಿಂದ ಪ್ರಾರಂಭಿಸಿ ವರ್ಷತೊಡಕಿನವರೆಗೆ ಮೂರು ದಿವಸಗಳ ಕಾಲ ರಾತ್ರಿ ನಡೆಯುವ ಜನಪದ ಗೀತಸಂಪ್ರದಾಯವೇ ‘ಅಂಟಿಗೆ-ಪಂಟಿಗೆ’. ಇದು ಮಲೆನಾಡಿನ ಅತ್ಯಂತ ಪ್ರಮುಖವಾದ ಜನಪದ ಕಲಾಪ್ರಕಾರ. ದೀಪಾವಳಿಯ ರಾತ್ರಿಗಳಲ್ಲಿ ಮನೆ ಮನೆಗೆ ಹೋಗಿ ದೀಪ ನೀಡಿ ಹಾಡುವ ಈ ಸಂಪ್ರದಾಯ ಚಿತ್ರದುರ್ಗ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪ್ರಚಲಿತವಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಹಬ್ಬ ಹಾಡುವುದು, ದೀಪ ನೀಡುವುದು ಮತ್ತು ಜ್ಯೋತಿ ನೀಡುವುದು ಎಂದೂ, ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಅಂಟಿಗೆ-ಪಂಟಿಗೆ ಎಂದೂ ಕರೆಯುತ್ತಾರೆ.

                ಗ್ರಾಮೀಣ ಶ್ರಮಜೀವಿಗಳಿಗೆ ಬಿಡುವು ದೊರಕಿದಾಗ ತಮ್ಮ ಆನಂದ, ಉತ್ಸಾಹಗಳಿಗೆ ರೂಪ ಕೊಟ್ಟು ರಸಿಕತೆಯನ್ನು ಮೆರೆಸುವ ಕಲಾವಿದರು ಗ್ರಾಮೀಣರಲ್ಲಿ ಬಹಳವಾಗಿ ದೊರಕುತ್ತಾರೆ. ಕಲೆ ಅವರ ಬಡತನಕ್ಕೆ, ದುಡಿಮೆಯಿಂದ ದಣಿದ ದೇಹಕ್ಕೆ ಉತ್ಸಾಹದ ವಸ್ತುವಾಗುತ್ತದೆ. ಅವರ ಬದುಕಿಗೆ ಬೆಂಬಿಡದ ನಂಟಾಗಿ ಉಳಿಯುತ್ತದೆ, ಬೆಳೆಯುತ್ತದೆ. ಅವುಗಳಲ್ಲಿ ಮಲೆನಾಡಿನ ಅಂಟಿಗೆ-ಪಂಟಿಗೆ, ಜನಪದ ಗೀತ ಸಂಪ್ರದಾಯದ ಕಲಾಪ್ರಕಾರವೂ ಒಂದು.

                ದೀಪಾವಳಿಯ ಪಾಡ್ಯ, ಕರಿ, ವರ್ಷತೊಡಕು-ಈ ಮೂರು ದಿವಸಗಳು ಮಲೆನಾಡಿನ ಜನಕ್ಕೆ ಮಹತ್ತರವಾದ ದಿವಸಗಳು. ಬಲಿಪಾಡ್ಯಮಿ ದಿವಸದಿಂದ ಮೂರು ರಾತ್ರಿಗಳಲ್ಲಿ ಊರಿನ ಉತ್ಸಾಹಿ ತರುಣರು ಹಿರಿಯರೊಂದಿಗೆ ಊರಿನ ಗ್ರಾಮದೇವತೆಗೆ ಸಂಪ್ರದಾಯವಾಗಿ ಪೂಜೆ ಮಾಡಿ, ಹಚ್ಚಿಕೊಂಡ ಜ್ಯೋತಿಯನ್ನು ಮನೆಯಿಂದ ಮನೆಗೆ ಹೋಗಿ, ತಮ್ಮ ಜ್ಯೋತಿಯಿಂದ ಮನೆಯವರ ಜ್ಯೋತಿಯನ್ನು ಅಂಟಿಸಿ ಹಾಡುವ ಪದ್ಧತಿಯೇ ಅಂಟಿಗೆ-ಪಂಟಿಗೆ. ಇದೊಂದು ಮಲೆನಾಡು ಪ್ರದೇಶದ ಕೆಲವು ಕಡೆ ಪ್ರಚಲಿತವಿರುವ ವಿಶಿಷ್ಟವಾದ ದೀಪ ನೀಡುವ ಸಂಪ್ರದಾಯ. ಈ ಜನಪದ ಹಾಡುಗಾರರ ತಂಡದವರನ್ನು ಹಬ್ಬ ಹಾಡುವವರು, ಜ್ಯೋತಿ ನೀಡುವವರು, ಅಂಟಿಗೆ-ಪಂಟಿಗೆಯವರು ಎನ್ನುತ್ತಾರೆ.

                ಅಂಟಿಗೆ-ಪಂಟಿಗೆ ಪದಗಳು ನಮ್ಮ ಜನಪದ ಸಾಹಿತ್ಯದ ಶ್ರೀಮಂತ ಭಂಡಾರ. ಇವು ಕಂಠಸ್ಥ ಸಂಪ್ರದಾಯದಲ್ಲಿ ಉಳಿದುಕೊಂಡುಬಂದಿವೆ. ಈ ಹಾಡುಗಳನ್ನು ಸಾಗರ ತಾಲ್ಲೂಕಿನಲ್ಲಿ ಹಬ್ಬ ಹಾಡುವ ಹಾಡುಗಳು ಎಂದೂ, ಸೊರಬ ತಾಲ್ಲೂಕಿನಲ್ಲಿ ಬಲ್ಲಾಳಿ ಪದ್ಯಗಳು ಎಂದೂ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕುಗಳಲ್ಲಿ ಬಿಂಗಿ ಪದ್ಯಗಳು ಎಂದೂ ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ, ಶೃಂಗೇರಿ ಭಾಗದಲ್ಲಿ ಅಂಟಿಗೆ-ಪಂಟಿಗೆ ಪದ್ಯಗಳು ಎಂದೂ ಕರೆಯುತ್ತಾರೆ.

                ಅಂಟಿಗೆ-ಪಂಟಿಗೆ ಕಲಾವಿದರು ಹಾಡುಗಳನ್ನು ಹೇಳುವಾಗ ಮುಮ್ಮೇಳದ ಇಬ್ಬರು. ಹಿಮ್ಮೇಳದ ಇಬ್ಬರು ಹಾಡುಗಾರರು ತೀರಾ ಹತ್ತಿರದಲ್ಲಿ ಕುಳಿತು ಅಂಟಿಕೊಂಡು ದನಿಗೂಡಿಸಿ ಹಾಡುವುದರಿಂದ ಅಂಟಿಗೆ ಎಂಬ ಮೊದಲ ಪದ ಬಂದಿರಬಹುದು ಎಂದು ಊಹಿಸಬಹುದಾದರೆ, ಪಂಟಿಗೆ ಎಂಬ ಪದದ ಅರ್ಥ ಸಮಸ್ಯೆಯಾಗಿಯೇ ಉಳಿಯುತ್ತದೆ. ಅಂಟಿಗೆ ಎಂಬ ಮಾತಿಗೆ ಬತ್ತೀವಿ, ಪಂಟಿಗೆ ಎಂಬ ಪದ ಬಂದಿರಬಹುದೇನೋ ಎಂದು ಊಹಿಸಬಹುದಾದರೂ ಇದು ಊಹೆ ಮಾತ್ರ. ಮೇಳದವರು ಹೊತ್ತುತಂದ ದೀಪವನ್ನು ಮನೆಯವರು ತಮ್ಮ ದೀಪಕ್ಕೆ ಅಂಟಿಸಿ ಹೊತ್ತಿಸಿಕೊಳ್ಳುವುದರಿಂದ ಈ ಪದ ಬಳಕೆಯಲ್ಲಿ ಬಂದಿರಬಹುದು ಎಂದು ಊಹಿಸುವುದು ಹೆಚ್ಚು ಸಮಂಜಸವಾಗಿದೆ.

                ಪಂಟಿಗೆ ಎಂಬ ಮಾತಿಗೆ ಸಮಾರಾಧನೆ (ಪಂಟಿ=ಊಟ) ಎಂಬ ಅರ್ಥವೂ ಇದೆ. ಈ ಸಂಪ್ರದಾಯದಲ್ಲಿ ಕೊನೆಯ ಕಾರ್ಯವಾದ ಅಂಟಿಗೆ-ಪಂಟಿಗೆ ಔತಣ(ಔಂತ್ಲ)ಕ್ಕೂ ಇದಕ್ಕೂ ಸಂಬಂಧ ಕಲ್ಪಿಸಬಹುದಾಗಿದೆ.

                ದೀಪಾವಳಿಯಲ್ಲಿ ಹೇಳುವ ಹಾಡುಗಳಿಗೆ ಅನ್ವಯಿಸಿ ಹೇಳುವುದಾದರೆ ಅಂಟಿಗೆ-ಪಂಟಿಗೆ ಪದಕ್ಕೆ ದೀಪಾವಳಿಯಲ್ಲಿ ಹೇಳುವ ಹಾಡುಗಳೆಂದು ಅರ್ಥ ಮಾಡಬಹುದಾಗಿದೆ.

                ಕರ್ನಾಟಕದ ಜನಪದ ಗೀತ ಸಂಪ್ರದಾಯಗಳಲ್ಲಿ ಅಂಟಿಗೆ-ಪಂಟಿಗೆ ಹಾಡುಗಳ ಸಂಪ್ರದಾಯವೂ ಒಂದು ಎಂಬುದಾಗಿ ಡಾ. ಜೀ.ಪಂ. ಪರಮಶಿವಯ್ಯನವರು ಗುರುತಿಸುತ್ತಾರೆ. ಇದರಲ್ಲಿ ಸಂದರ್ಭ ಧಾರ್ಮಿಕವಾದರೂ ಹಾಡುಗಳು ಲೌಕಿಕವಾದವುಗಳು ಎಂದು ಅವರ ಅಭಿಪ್ರಾಯ. ದೀಪಾವಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಗೀತೆಗಳನ್ನು ಹಾಡುವವರು ವೃತ್ತಿಗಾಯಕರಲ್ಲ.

                ದೀವಳಿಗೆ ಇರುಳಿನಲ್ಲಿ ದೀಪ ಹಿಡಿದು ಬರುವ ಆ ಜಾನಪದ ದೀಪಧಾರಿಗಳ ಮಾಯಕದ ಜೋಳಿಗೆಯಲ್ಲಿ ಅದೆಷ್ಟು ಚಿತ್ರ-ವಿಚಿತ್ರವಾದ ಸರಕುಗಳಿರುತ್ತವೆ. ಒಂದು ಸೊಲ್ಲು ಎತ್ತಿ, ಆ ಜೋಳಿಗೆಯ ದಾರವನ್ನು ಎಳೆದರಾಯಿತು. ಬಣ್ಣ ಬಣ್ಣದ ಯಕ್ಷಲೋಕವೇ ಕಣ್ಣೆದುರು ನಲಿಯತೊಡಗುತ್ತದೆ.

                ಬಯಲುನಾಡಿನ ಕೆಲವು ಭಾಗಗಳಲ್ಲಿ ಮಲೆನಾಡಿನ ಅಂಟಿಗೆ-ಪಂಟಿಗೆಯನ್ನು ಹೋಲುವ ಅನೇಕ ಸಂಪ್ರದಾಯಗಳಿವೆ. ಭಾಗವಂತಿಗೆ ಮೇಳ ದೀಪಾವಳಿಯಲ್ಲಿ ಬಯಲುಸೀಮೆಯಲ್ಲಿ ಕಾಣಬರುವ ಒಂದು ವಿಶಿಷ್ಟ ಸಂಪ್ರದಾಯ. ವೈಷ್ಣವ ಸಂಪ್ರದಾಯಗಳು ಹೆಚ್ಚಾಗಿರುವ ಭಾಗಗಳಲ್ಲಿ ಈ ಮೇಳ ನಡೆಯುತ್ತದೆ. ಊರಿನ ದೇವರೊಡನೆ ಭಾಗವಂತಿಗೆ ಪದಗಳನ್ನು ಹೇಳಿಕೊಂಡು ಊರೂರ ಮೇಲೆ ಹೊರಡುವ ತಂಡವನ್ನು ‘ದೀವಳಿಗೆಯ ದಂಡು’ ಎಂದು ಕರೆಯಲಾಗುತ್ತದೆ.

                ಇದಲ್ಲದೆ ಊರಿನ ಗೋವಳರು ದೀಪಾವಳಿ ರಾತ್ರಿಯಲ್ಲಿ ದೀವಿಗೆ ಹಿಡಿದು ಮನೆ ಮನೆಗೆ ಹೋಗಿ ದೀವಿಗೆಗೆ ಎಣ್ಣೆ ಎರೆಸಿಕೊಂಡು ಬರುವ ಸಂಪ್ರದಾಯವೊಂದನ್ನು ಡಾ. ಜೀ.ಶಂ. ಪರಮಶಿವಯ್ಯನವರು ಜನಪದ ಜೀವನದಲ್ಲಿ ದೀವಳಿಗೆ ಎಂಬ ಲೇಖನದಲ್ಲಿ ವಿವರಿಸಿದ್ದಾರೆ. ದೀವಳಿಗೆಗೆ ಐದಾರು ದಿನ ಮುಂಚೆಯೇ ಊರಿನ ಗೋವಳರೆಲ್ಲ ಕಲೆತು ದೊಡ್ಡದೊಂದು ದೀವಿಗೆಯನ್ನು ಹೊಂದಿಸಿಕೊಂಡು ಕಾಡು-ಮೇಡುಗಳನ್ನೆಲ್ಲಾ ಶೋಧಿಸಿ ಒಂದು ದೊಡ್ಡ ವಸ್ತ್ರದಲ್ಲಿ ತಂಗಟೆ, ಕಣಗಿಲೆ ಮುಂತಾದ ಹೂವುಗಳನ್ನು ಸಂಗ್ರಹಿಸಿಕೊಂಡು ರಾತ್ರಿಯ ಮಬ್ಬು ಊರನ್ನು ಮುಸುಕಿದಾಗ ಗುಂಪು ಕಟ್ಟಿಕೊಂಡು ಹೊರಡುತ್ತಾರೆ. ದೊಡ್ಡ ಹಣತೆಯನ್ನು ಹಿಡಿದವನು ಮುಂದೆ ಸಾಗುತ್ತಾನೆ. ಅವನ ಹಿಂದೆ ಇತರರು ನಡೆದು ಹಾಡುತ್ತಾ ಮನೆ ಮನೆಯ ಬಾಗಿಲಿಗೂ ಬರುತ್ತಾರೆ. ಇಬ್ಬರ ಸೊಲ್ಲಿಗೆ ಮತ್ತಿಬ್ಬರು ಸೊಲ್ಲನ್ನು ಕೊಡುತ್ತಾ ಉಳಿದವರು ಪಲ್ಲವಿಯನ್ನು ಹಾಡುತ್ತಾರೆ. ಮನೆಯವರು ಇವರ ದೀಪಕ್ಕೆ ಎಣ್ಣೆಯನ್ನು ಎರೆದು ಕಾಣಿಕೆಯನ್ನು ನೀಡುತ್ತಾರೆ. ಈ ಸಂಪ್ರದಾಯ ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ಮಲೆನಾಡಿನ ಅಂಟಿಗೆ-ಪಂಟಿಗೆಯನ್ನು ಹೋಲುತ್ತದೆ.

                ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ದೀಪಾವಳಿಯ ಆಚರಣೆಯೊಂದನ್ನು ಶ್ರೀ ಬೆಟಗೇರಿ ಕೃಷ್ಣಶರ್ಮರು ವಿವರಿಸಿದ್ದಾರೆ. ಹಳ್ಳಿಯ ಅನೇಕ ಜನ ವಕ್ಕಲುಮಕ್ಕಳು ಬೆಳೆದ ಜೋಳದ ದಂಟಿನಗಂಗಳಿಂದ ಅಂದವಾದ ಗೂಡುಗಳನ್ನು ನಿರ್ಮಿಸಿ ಅದರಲ್ಲಿ ದೀಪವನ್ನು ಇರಿಸಿಕೊಂಡು ಸಂಜೆಯ ವೇಳೆಯಲ್ಲಿ ವಕ್ಕಲಿಗರ ಮನೆ ಮುಂದೆ ನಿಂತು ‘ಇಡಿದೀಡಿ ಕಾಣಿಗೊ’ ಎಂದು ಕೂಗಿ ದನಗಳ ಕ್ಷೇಮವನ್ನು ಹಾರೈಸಿ ದನಗಳ ಯಜಮಾನರಿಂದ ಉಡುಗೊರೆ ಕಾಣಿಕೆಗಳನ್ನು ಪಡೆದುಕೊಳ್ಳುವರು. ಆ ಕಾಲದಲ್ಲಿ ಅವರ ದನಗಳ ಯೋಗಕ್ಷೇಮ ಕುರಿತಾದ ವಿಶಿಷ್ಟವಾದ ಜನಪದ ತುಂಡು ಪದ್ಯ ಹೇಳುತ್ತಿರುವ ಈ ಪದ್ಧತಿಗೆ ಅಂಟಿಗೆ-ಪಂಟಿಗೆ ಎನ್ನಲಾಗುತ್ತದೆ.

                ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿಮ್‍ಸಾಲ್ ಎಂಬ ಪದ ರೂಢಿಯಲ್ಲಿದೆ. ಅದನ್ನು ಕಾಮನ ಹಬ್ಬದ ರಾತ್ರಿಗಳಲ್ಲಿ ಹಾಡುತ್ತಾರೆ. ಕಾಮನಹಬ್ಬದಂದು ಹೋಳಿ ಸುಡುವ ಸಂಪ್ರದಾಯ ನಮ್ಮ ಹಳ್ಳಿಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ತರುಣರು ಗುಂಪು ಗುಂಪಾಗಿ ಸೇರಿ ರಾತ್ರಿ ಹೊತ್ತು ಊರಿನವರನ್ನು ನಿದ್ದೆ ಮಾಡಲು ಬಿಡದೇ ‘ದಿಮ್‍ಸಾಲ್’ ಎಂದು ಕೂಗುತ್ತಾ ಪದಗಳನ್ನು ಹಾಡುತ್ತಾ, ಅಕ್ಕಿ, ತೆಂಗಿನಕಾಯಿ, ದುಡ್ಡು ಬೇಡುವ ಪದ್ಧತಿಯಿದೆ. ಈ ಎಲ್ಲಾ ಪ್ರದೇಶಗಳಲ್ಲಿ ನಡೆಯುವ ಭಿನ್ನ ಆಚರಣೆಗಳನ್ನು ಗಮನಿಸಿದಾಗ ಅಂಟಿಗೆ-ಪಂಟಿಗೆ ಸಂಪ್ರದಾಯ ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಬಳಕೆಯಲ್ಲಿರಬೇಕು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ.

                ನಮ್ಮ ಜನಪದರಿಗೆ ದೇವರು, ಭೂಮಿ, ದೀಪ, ಗೋವು ಇತ್ಯಾದಿಗಳ ಬಗೆಗಿದ್ದ ಶ್ರದ್ಧೆ, ಆಚರಣೆ ಸಾಮಾಜಿಕ ಜೀವನಪದ್ಧತಿಗೆ ಕೈಪಿಡಿಯಾಗುತ್ತದೆ.

ಅಂಟಿಗೆ-ಪಂಟಿಗೆ ಆಚರಣೆ

                ಮಲೆನಾಡಿನಲ್ಲಿ ದೀಪಾವಳಿಯನ್ನು ದೊಡ್ಡ ಹಬ್ಬ ಎಂದು ಕರೆಯುತ್ತಾರೆ. ಮಲೆನಾಡಿನ ಜನ ಈ ಹಬ್ಬವನ್ನು ಐದು ದಿವಸಗಳವರೆಗೆ ತುಂಬಾ ಸಂಭ್ರಮ, ಸಡಗರಗಳಿಂದ ಆಚರಿಸುತ್ತಾರೆ. ದೀಪಾವಳಿ ನರಕ ಚತುರ್ದಶಿ (ಬೂರೆ), ಅಮಾವಾಸ್ಯೆ, ಪಾಡ್ಯ, ಮರಿಪಾಡ್ಯ (ಕರಿ), ವರ್ಷತೊಡಕು ಹೀಗೆ ಐದು ದಿವಸಗಳೂ ಹಬ್ಬವೇ. ಇದರಲ್ಲಿ ಪಾಡ್ಯದಿಂದ ವರ್ಷತೊಡಕಿನವರೆಗೆ ಮೂರು ದಿವಸಗಳ ಕಾಲ ರಾತ್ರಿ 8 ಗಂಟೆಯಿಂದ ಬೆಳಗಿನವರೆಗೆ ಹಬ್ಬ ಆಡುವ (ಅಂಟಿಗೆ-ಪಂಟಿಗೆ) ಕಾರ್ಯಕ್ರಮ ನಡೆಯುತ್ತದೆ.

                ಪಾಡ್ಯದ ದಿವಸ ಹಬ್ಬದ ಊಟದ ನಂತರ ಊರಿನ ಉತ್ಸಾಹಿ ತರುಣರು ಗ್ರಾಮದ ಮುಖ್ಯ ಗ್ರಾಮದೇವತೆಯ ದೇವಸ್ಥಾನಕ್ಕೆ ಹೋಗಿ ಸಂಪ್ರದಾಯಕವಾಗಿ ಪೂಜೆ ಮಾಡಿ, ದೇವರ ದೀಪದಿಂದ ತಮ್ಮ ದೀಪವನ್ನು ಹಚ್ಚಿಕೊಂಡು ತಾವು ಹಿಡಿದ ಜ್ಯೋತಿಯಿಂದ ಮನೆ ಮನೆಗೆ ಹೋಗಿ ಅವರ ದೀಪವನ್ನು ಮುಟ್ಟಿಸಿ (ಹಚ್ಚಿ) ಕಥನಗೀತೆಗಳನ್ನು ಹಾಡುವ ಪದ್ಧತಿಯೇ ಹಬ್ಬ ಹಾಡುವುದು ಅಥವಾ ಅಂಟಿಗೆ-ಪಂಟಿಗೆ ಎಂದು ಕರೆಯುತ್ತಾರೆ. ಇದೊಂದು ಮಲೆನಾಡಿನ ಕೆಲವು ಕಡೆಗಳಲ್ಲಿ ಪ್ರಚಲಿತವಾಗಿರುವ ವಿಶಿಷ್ಟವಾದ ದೀಪ ನೀಡುವ, ಜ್ಯೋತಿ ನೀಡುವ ಸಂಪ್ರದಾಯ ಎನ್ನುವರು. ಇವರನ್ನು ಹಬ್ಬ ಹಾಡುವವರು ಅಥವಾ ಅಂಟಿಗೆ-ಪಂಟಿಗೆಯವರೆಂದು ಕರೆಯುವುದು ವಾಡಿಕೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ದೇವಂಗಿ, ಕೋಣಂದೂರು, ಮಂಡಗದ್ದೆ ಪ್ರದೇಶಗಳಲ್ಲಿಯೂ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಪ್ರದೇಶಗಳಲ್ಲಿ ಅಂಟಿಗೆ-ಪಂಟಿಗೆ ಎಂಬ ಹೆಸರಿದೆ. ಉಳಿದ ಕಡೆ ಸಾಗರ, ಸೊರಬ, ಹೊಸನಗರ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕುಗಳಲ್ಲಿ ಹಬ್ಬ ಹಾಡುವುದು, ದೀಪ ಕೊಡುವುದು, ಜ್ಯೋತಿ ನೀಡುವುದು ಎನ್ನುತ್ತಾರೆ. ಅಂಟಿಗೆ-ಪಂಟಿಗೆ ಪದಗಳಿಗೆ ಸಾಗರ ತಾಲ್ಲೂಕಿನಲ್ಲಿ ಹಬ್ಬ ಹಾಡುವ ಪದಗಳೆಂದು, ಸೊರಬ ತಾಲ್ಲೂಕಿನಲ್ಲಿ ಬಲ್ಲಾಳಿ ಪದ್ಯಗಳೆಂದು ಹಾಗೂ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕುಗಳಲ್ಲಿ ಭಿಂಗಿ ಪದ್ಯಗಳು ಎಂದು ಕರೆಯುತ್ತಾರೆ.

                ಈ ಸಂಪ್ರದಾಯವನ್ನು ಪಾಡ್ಯದಿಂದ ಪ್ರಾರಂಭಿಸಿ ವರ್ಷತೊಡಕಿನವರೆಗೆ ನಡೆಸುತ್ತಾರೆ. ಮಣ್ಣಿನ ಹಣತೆ ಅಥವಾ ಕಂಚಿನ ಹಣತೆಯನ್ನು ಗ್ರಾಮದ ಮುಖ್ಯಸ್ಥರ ಮನೆಯಲ್ಲಿ ಇಟ್ಟಿರುತ್ತಾರೆ. ಹಬ್ಬದ ಊಟವಾದನಂತರ ಮುಖ್ಯಸ್ಥರ ಮನೆಗೆ ಹೋಗಿ ದೀಪವನ್ನು ತೆಗೆದುಕೊಂಡು ಊರಿನ ಮುಖ್ಯ ಗ್ರಾಮದೇವತೆಯ ದೇವಸ್ಥಾನಕ್ಕೆ ಹೋಗಿ ದೇವರ ಸನ್ನಿಧಿಯಲ್ಲಿ ಸೇರಿಕೊಂಡು, ದೇವರಿಗೆ ಪೂಜೆ ಸಲ್ಲಿಸಿ ಕರ್ಪೂರದಿಂದ ಬೆಳಗುವ ಮಂಗಳಾರತಿಯ ಜ್ಯೋತಿಯಿಂದ ದೀಪ ಹಚ್ಚಿಕೊಂಡು ತಂಡದ ನಾಯಕ

                ದಿಪ್ಪುಡು ದಿಪ್ಪುಡು ಹೋಳಿಗೆ

                ಕಾಲಕ್ಕೆ ಬರುವ ದೀವಳಿಗೊ

                ಹಬ್ಬಕ್ಕೊಂದು ಹೋಳಿಗೊ

                ಎಂದು ಕೂಗಿದಾಗ ಹಿಮ್ಮೇಳದವರು ‘ದಿಮ್ಸಾಲೊ’ ಎಂದು ಹೇಳುತ್ತಾರೆ.

                ದಿಮ್ಸಾಲ್ಹೊರಿಡಣ್ಣ ದಿಮ್ಸಾಲೊಡಿರೊ

                ದಿಮ್ಸಾಲ್ಹೊಡಿಯುವರ ದನಿಯೆದ್ದು ಬರಲೊ

                ದಿಮಿಸಾಲ್ಹೊಡಿರಣ್ಣ ಈ ಊರ ದೇವರಿಗೆ

                ಈ ಊರ ಬೂತಪ್ಪ ಬಲು ಸತ್ಯವಂತ

                ಸತ್ಯವಂತನಾದರೆ ಸಭೆ ಮುಂದೆ ಬರಲೊ

                ಈ ಊರ ಬೂತಪ್ಪಗೆ ಏನೇನು ಪೂಜೊ

ಹೆಡಿಗೆಲಿ ಹಣ್ಣು ಹೇರೀಲಿ ಕಾಯೊ

                ಆಚೆಯ ದಿಂಬದಾಗೆ ಯಾವ ತರದ ಬೆಳಕೊ

                ದಾಸಾರ್ಹುಡುಗನ ನಾಮಾದ ಬೆಳಕೊ

                ಎಂದು ಹಾಡುತ್ತಾ ಮನೆ ಮನೆಗೂ ಹೋಗುತ್ತಾರೆ. ಮನೆಯ ಬಾಗಿಲಿಗೆ ಹೋಗಿ ನಿಂತು ಮನೆಯವರನ್ನು ಎಚ್ಚರಿಸಲು ಏಕ ಕಂಠದಿಂದ ದಿಮಿಸಾಲ್ ಹೊಡಿಯುತ್ತಾರೆ. ತಾವು ದೂರದಿಂದ ನಡೆದುಬಂದ ಸ್ಥಿತಿಯನ್ನು ಹಾಡಿನ ಮೂಲಕ ಹೇಳುತ್ತಾರೆ.

                ಹಾ. . ಹೋ. . ನಲ್ಲಾರೆ ಎಂದು ಆಲಾಪಿಸಿ,

                ಗೋರೆಂಬ ಕತ್ತಲೆಯೊಳಗೆ

                ನಾವು ಬಂದೇವಯ್ಯೋ

                ಬಂದಾರೆ ನಮ ಬಾಜು ಬರಬೇಕಯ್ಯೊ

                ಕಲ್ಲುಮುಳ್ಳಿನ ತುಳಿದು ನಾವು ಬಂದೇವಯ್ಯೊ

                ಬಂದಾರೆ ನಮ ಬಾಜು ಬರಬೇಕಯ್ಯೊ

                                ಹೀಗೆ ಹೇಳುತ್ತಾ ಬಾಗಿಲು ತೆಗೆಸುತ್ತಾರೆ.

                ಬಾಗಿಲು ಬಾಗಿಲು ಚೆಂದ

                ಈ ಮನೆ ಬಾಗಿಲು ಚಂದ

                ಬಾಗಿಲ ಮ್ಯಾಲೇನೊ ಬರದಾರೆ

                ಬಾಗಿಲ ಮ್ಯಾಲೆ ಏನೇನೋ ಬರದೈದಾರೆ

                ಕುಚ್ಚು ಪಾರಿವಾಳದ ನವಿಲ್ಹಿಂಡು

                ಎಂದು ಹಾಡಿದಾಗ ಮನೆಯವರು ಬಾಗಿಲು ತೆಗೆಯುತ್ತಾರೆ. ಮನೆಯವರು ಬಾಗಿಲು ತೆಗೆದನಂತರ ದೀಪ ಇಡುವ ಸ್ಥಳದಲ್ಲಿ ಮನೆಯೊಡತಿ ಸಗಣಿಯಿಂದ ನೆಲವನ್ನು ಸಾರಿಸಿ, ಮಣೆ ಹಾಕುತ್ತಾಳೆ. ದೀಪವನ್ನು ಮಣೆ ಮೇಲಿಟ್ಟು ತಂಡದ ಯಜಮಾನ ಮಾತ್ರ ಕುಳಿತುಕೊಳ್ಳುತ್ತಾನೆ. ಉಳಿದವರು ನಿಂತುಕೊಂಡೇ ಹಾಡುತ್ತಾರೆ. ದೀಪಕ್ಕೆ ಪೂಜೆ ಮಾಡಿ ತೆಂಗಿನಕಾಯಿ ಒಡೆದ ನಂತರ ಮನೆಯೊಡತಿ ದೀಪಕ್ಕೆ ಎಣ್ಣೆ ಎಂದು ಜ್ಯೋತಿಯನ್ನು ಮನೆಯ ಹಣತೆಗೆ ಹಚ್ಚಿಕೊಂಡು ಬಲೀಂದ್ರನ ಹತ್ತಿರ ಇಡುತ್ತಾಳೆ. ನಂತರ ಬಲೀಂದ್ರನ ಹಾಡು ಹೇಳುತ್ತಾರೆ.

                ಬಲ್ಲೇಳೋ ಬಲೀಂದ್ರನೆ ಮತ್ರ್ಯಾಕೆ

                ಯಲ್ಲೋರ ಸಲಗಂತವನೆ

                ಬಲೀಂದ್ರರಾಯ ತಾನೆದ್ದು ಬರುವಾಗ

                ಜಡ್ಡು ಜಬರೆಲ್ಲಾ  ಚಿಗುರ್ಯಾವೊ

                ಬತ್ತು ಬರಡೆಲ್ಲಾ ಹಯನಾದೊ

                ಇನ್ನೂ ಅನೇಕ ಕಥನಗೀತೆಗಳನ್ನು ಈ ದೀಪಧಾರಿಗಳು ಹೇಳುತ್ತಾ ಮುಂದೆ ಸಾಗುತ್ತಾರೆ. ಹೀಗೆ ಮೂರು ದಿವಸಗಳವರೆಗೆ ಹಬ್ಬ ಹಾಡುವ ಸಂಪ್ರದಾಯ ನಡೆಯುತ್ತದೆ. ಮನೆಯಿಂದ ಮನೆಗೆ, ಹಳ್ಳಿಯಿಂದ ಹಳ್ಳಿಗೆ ಹೋಗುವಾಗ ದೀಪ ಗಾಳಿಗೆ ಆರದಂತೆ ಅಡಿಕೆ ಹಾಳೆಯಿಂದ ಮಾಡಿದ ತಡಿಕೆಯನ್ನು ಮರೆ ಮಾಡಿಕೊಳ್ಳುತ್ತಾರೆ. ಅಕಸ್ಮಾತ್ ಗಾಳಿಗೆ ದೀಪ ಆರಿಹೋದರೆ ಪುಂಡಿ ಅಥವಾ ಕಾವಲು ನಾರಿನಿಂದ ಮಾಡಿದ ಹಗ್ಗಕ್ಕೆ (ದಪ್ಪಹುರಿ) ಬೆಂಕಿ ಹಚ್ಚಿಕೊಂಡಿರುತ್ತಾರೆ. ಹುರಿಯ ಬೆಂಕಿಯಿಂದ ದೀಪವನ್ನು ಹಚ್ಚಿಕೊಳ್ಳುತ್ತಾರೆ. ಬೆಳಗಾದ ನಂತರ ಮನೆಗೆ ವಾಪಸಾಗುವಾಗ ದೀಪದ ನೆನೆಬತ್ತಿಯನ್ನು ಹಾಲುಮರಕ್ಕಿಟ್ಟು ಹಗ್ಗಕ್ಕೆ ಬೆಂಕಿಯನ್ನು ಹಚ್ಚಿಕೊಂಡು ಊರು ಸೇರುತ್ತಾರೆ. ಊರಿಗೆ ಸೇರಿದ ನಂತರ ದೀಪದ ಯಜಮಾನರ ಮನೆಯ ಅಡುಗೆ ಮಾಡುವ ಒಲೆಯ ಅಗ್ನಿಗೆ ಜ್ವಾಂಗೆ ಅಥವಾ ಜೋಂಗೆ ಬತ್ತಿಯನ್ನು ತಗುಲಿಸಿ ಆರಿಸಿ ಇಟ್ಟುಕೊಳ್ಳುತ್ತಾರೆ. ಒಲೆಯಲ್ಲಿರುವ ಬೆಂಕಿ ಆರದಂತೆ ಮನೆಯವರು ನೋಡಿಕೊಳ್ಳಬೇಕು.

                ದೀಪಧಾರಿಗಳು ತೆಗೆದುಕೊಂಡುಹೋಗುವ ಜ್ಯೋತಿ ಮಧ್ಯದಲ್ಲಿ ಆರಬಾರದೆಂಬ ನಿಯಮವಿದೆ. ಅಕಸ್ಮಾತ್ ದೀಪ ಆರಿದರೆ ಆ ತಂಡದವರಿಗೆ ಮತ್ತು ಊರಿನವರಿಗೆ ಕೆಡುಕಾಗುತ್ತದೆ ಎಂಬ ನಂಬಿಕೆಯಿದೆ. ಹಬ್ಬ ಹಾಡುವ ಸಂಪ್ರದಾಯ ಮುಗಿದನಂತರ ನಾಲ್ಕನೇ ದಿವಸ ಸಂಜೆ ತಂಡದವರೆಲ್ಲಾ ಸೇರಿ ಪುನಃ ದೀಪ ಹಚ್ಚಿಕೊಂಡು ಹಾಡು ಹೇಳುತ್ತಾ ದೀಪ ಆರಿಸುವ ಹಾಲುಮರದ ಹತ್ತಿರ ಹೋಗಿ ಮರ ಮತ್ತು ಜ್ಯೋತಿಯನ್ನು ಪೂಜೆ ಮಾಡಿ ನೆನೆಬತ್ತಿಯನ್ನು ಹಾಲುಮರದ ಕೊಂಬೆ, ಕೊಂಬೆಗೆ ಇಡುವುದರ ಮೂಲಕ ಮುಕ್ತಾಯ ಮಾಡುತ್ತಾರೆ.

                ಹಬ್ಬ ಹಾಡುವವರು ಮನೆಗೆ ಹೋದಾಗ ಮನೆಯಲ್ಲಿ ಯಜಮಾನರು ಮತ್ತು ಮನೆಯೊಡತಿಯರು ಹಣ್ಣು, ಕಾಯಿಕಡಿ, ಕೊಟ್ಟೆ ಕಡುಬು, ಹೋಳಿಗೆ, ಹಣ ಕೊಡುತ್ತಾರೆ. ಆಯಾಯ ದಿವಸ ಕೊಟ್ಟ ತಿಂಡಿ (ಕಡುಬು), ಹೋಳಿಗೆ, ಕಾಯಿಕಡಿಗಳನ್ನು ಮನೆಗೆ ಬರುವಾಗ ಹಂಚಿಕೊಂಡು ತಿನ್ನುತ್ತಾರೆ. ಸಂಗ್ರಹವಾದ ಹಣವನ್ನು ಹಬ್ಬವಾದ ಒಂದು ತಿಂಗಳ ನಂತರ ಒಣಮೀನು (ಸ್ವಾರ್ಲ ಮೀನು) ಅಥವಾ ಕುರಿಮಾಂಸ ತಂದು ಅಡುಗೆ ಮಾಡಿಸಿ ಊರಿನವರು, ನೆಂಟರಿಷ್ಟರನ್ನು ಸೇರಿಸಿ ಸಾಮೂಹಿಕ ಭೋಜನ ಮಾಡುತ್ತಾರೆ. ಊರಿನ ಮಹಿಳೆಯರಿಗೆ ಊರಿನ ಪ್ರತಿಯೊಂದು ಮನೆಗೂ ಎಡೆ ಹಾಕಿ ಹಂಚುತ್ತಾರೆ. ಕೆಲವು ಕಡೆ ಸಾಮೂಹಿಕ ಭೋಜನವನ್ನು ರದ್ದುಮಾಡಿ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ.

                ದೀವರ ಸಮಾಜದಲ್ಲಿ ನೂರಾರು ವರ್ಷಗಳಿಂದ ಹಬ್ಬ ಹಾಡುವ ಸಂಪ್ರದಾಯವನ್ನು ಆಚರಿಸಿಕೊಂಡುಬಂದಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಈ ಸಂಪ್ರದಾಯದ ತಂಡಗಳು ಇದ್ದವು ಎಂದು ತಿಳಿಯುತ್ತದೆ.

                1924ರಲ್ಲಿ ದಿ ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ ಎಂಬ ಗ್ರಂಥಗಳ ಸಂಪುಟ 3ರಲ್ಲಿ ಅನಂತಕೃಷ್ಣ ಅಯ್ಯರ್ ಅವರು ಹಳೆಪೈಕ (ದೀವರು) ಜನಾಂಗದವರಲ್ಲಿದ್ದ ಅಂಟಿಗೆ-ಪಂಟಿಗೆ ಕಲೆಯ ಬಗ್ಗೆ ಈ ರೀತಿ ಉಲ್ಲೇಖ ಮಾಡಿದ್ದಾರೆ.

                “ದೀಪಾವಳಿಯ ಸಂದರ್ಭದಲ್ಲಿ ಕುಲಸ್ಥರು ಬಸವಣ್ಣ ಹಾಗೂ ಬಲಿ ಚಕ್ರವರ್ತಿಯ ಹಾಡುಗಳನ್ನು ಹಾಡುತ್ತಾ ಮನೆ ಮನೆಗೂ ಹೋಗಿ ಹಣ ಹಾಗೂ ಕಾಳು ಸಂಗ್ರಹ ಮಾಡುತ್ತಾರೆ. ಇದರಿಂದ ಕುಲಸ್ಥರೆಲ್ಲ ಸೇರಿ ಊಟ ಮಾಡುತ್ತಾರೆ. ಇದಕ್ಕೆ ಅಂಟಿಗೆ-ಪಂಟಿಗೆ ಎಂದು ಕರೆಯುತ್ತಾರೆ” ಎಂದು ಬರೆದಿದ್ದಾರೆ. ಆದರೆ ದೀವರು ಜನಾಂಗದ ಹಿರಿಯ ಸುಧಾರಣಾವಾದಿಗಳು ಅಂಟಿಗೆ-ಪಂಟಿಗೆ ಸಂಪ್ರದಾಯದವರು ಮನೆ ಮನೆಗೆ ಹೋಗಿ ಜ್ಯೋತಿಯನ್ನು ನೀಡಿ ಜನಪದ ಗೀತೆಗಳನ್ನು ಹೇಳುವ ಈ ಸಂಪ್ರದಾಯವನ್ನು ಇದೊಂದು ಸುಂದರವಾದ ಜನಪದ ಕಲಾಪ್ರಕಾರ ಎಂದು ಭಾವಿಸಲೇ ಇಲ್ಲ. ಇದೊಂದು ಹೀನ ಪ್ರವೃತ್ತಿ. ಮನೆ ಮನೆಗೂ ಹೋಗಿ ಬೇಡುವುದು ಹೀನವೃತ್ತಿ ಎಂದು 1931 ಮಾರ್ಚ್ 2ರಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೋಲಸಿರ್ಸಿ ಗ್ರಾಮದಲ್ಲಿ ಪುರಾತನ ನಾಮಧಾರಿ ವಿಷ್ಣುಭಕ್ತ ಸಮಾಜದ ಮಹಾಸಭೆಯಲ್ಲಿ ಹಬ್ಬ ಹಾಡುವ ಅಂಟಿಗೆ-ಪಂಟಿಗೆ ಸಂಪ್ರದಾಯದ ಬಗ್ಗೆ ಈ ಕೆಳಗಿನಂತೆ ಠರಾವು ಮಾಡಿರುತ್ತಾರೆ.

                ಠರಾವು ನಂ.30-ದೀಪಾವಳಿ ಭಿಕ್ಷೆ (ಭಿಂಗಿ) ಬಗ್ಗೆ-ದೀಪಾವಳಿ ತರುವಾಯ ಬೇರೆ ಬೇರೆ ಸಮಾಜದಲ್ಲಿ ಹೋಗಿ ಬೇಡುವ ಪದ್ಧತಿ ಕೆಲವು ಕಡೆ ಇದೆ. ಅದು ಬಹಳ ಹೀನವಾದ್ದರಿಂದ ಅದನ್ನು ಇನ್ನುಮುಂದೆ ರದ್ದುಪಡಿಸಿದೆ ಎಂದು ಠರಾವು ಮಾಡಿದ್ದಾರೆ. ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡಿರುವ ನಿಯಮವನ್ನು ಸಮಾಜದ ವ್ಯಕ್ತಿಗಳು ಉಲ್ಲಂಘಿಸಿದರೆ ಅಂಥವರಿಗೆ ದಂಡ ವಿಧಿಸುತ್ತೇವೆ ಎಂದು ಕಠೋರವಾಗಿ ಆಜ್ಞೆ ಮಾಡಿದರು. ಆ ಕಾಲದಲ್ಲಿ ಸಮಾಜದಲ್ಲಿ ಜಾತೀಯತೆ ತುಂಬಾ ಇತ್ತು. ದೀವರು ಜನಾಂಗದ ಅಂಟಿಗೆ-ಪಂಟಿಗೆ ಕಲಾವಿದರು ಮೇಲ್ವರ್ಗದವರ ಮನೆಗಳಿಗೆ ಹೋದರೆ ತುಂಬಾ ಕೀಳಾಗಿ ಕಾಣುತ್ತಿದ್ದರು. ಜನಾಂಗದ ಹಿರಿಯರು ಇದನ್ನೆಲ್ಲಾ ಗಮನಿಸಿ ಮೇಲ್ವರ್ಗದವರ ಮನೆಗಳಿಗೆ ಹೋಗಿ ಅವರಿಂದ ಕೀಳಾಗಿ ಕಾಣಿಸಿಕೊಳ್ಳುವ ಈ ಕಲೆಯ ಆಚರಣೆಯೇ ಬೇಡ. ಇಡೀ ಸಮಾಜವನ್ನು ಅಗೌರವದಿಂದ ಕಾಣುವ ಕಲೆ ಎಷ್ಟೇ ಉತ್ತಮವಾಗಿರಲಿ, ಅಂತಹ ಕಲೆಯ ಆಚರಣೆ ಬೇಡವೆಂದು ಸಮಾಜದವರು ತೀರ್ಮಾನಕ್ಕೆ ಬಂದರು. ನಂತರ ಕ್ರಮೇಣ ದೀವರಲ್ಲಿ ಈ ಸಂಪ್ರದಾಯ ಕಡಿಮೆಯಾಗುತ್ತಾ ಹೋಯಿತು. ಆದರೂ ಕೆಲವು ಗ್ರಾಮದಲ್ಲಿ ಈ ಸಂಪ್ರದಾಯವನ್ನು ನಿಲ್ಲಿಸಲೇ ಇಲ್ಲ. ಹಬ್ಬ ಹಾಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಸಾಗರ, ಸೊರಬ, ಸಿದ್ದಾಪುರ ತಾಲ್ಲೂಕುಗಳಲ್ಲಿ ಈ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಸಾಗರ ತಾಲ್ಲೂಕಿನಲ್ಲಿ ಸಾಗರ ನಗರಕ್ಕೆ ತುಂಬಾ ಹತ್ತಿರವಿರುವ ಹಳ್ಳಿಗಳ ‘ಹಬ್ಬ ಹಾಡುವ ಸಂಪ್ರದಾಯ’ (ಅಂಟಿಗೆ-ಪಂಟಿಗೆ) ತಂಡಗಳ ಪರಿಚಯವನ್ನು ನೀಡಿದ್ದೇನೆ.

                ನಾಲ್ಕಾರು ದಶಕಗಳಿಗೆ ಮೊದಲು ಮಲೆನಾಡು ಭಾಗದಲ್ಲಿ ಆಚರಣೆಯಾಗುತ್ತಿದ್ದಂತಹ ದೀಪಾವಳಿಯ ಸಪ್ತಾಹ ಕಾಲದ ಅಂದಿನ ಸಂಭ್ರಮ, ಸಡಗರ, ಸಂತಸ, ಶ್ರದ್ಧೆಗಳು ಈಗ ಮಾಯವಾಗಿವೆ. ಕಾರಣ ವಿದ್ಯಾವಂತಿಕೆ, ವೈಚಾರಿಕ ದೃಷ್ಟಿ, ವೈಜ್ಞಾನಿಕ ಸೌಲಭ್ಯ, ಪಾಶ್ಚಾತ್ಯ ನಾಗರೀಕತೆಯ ಪ್ರವೇಶ-ಒಟ್ಟಾರೆ ಆಧುನಿಕ ಜೀವನದ ಪ್ರಭಾವ ಪ್ರಕ್ರಿಯೆಯಲ್ಲಿ ಸಾಂಪ್ರದಾಯಿಕ ಶ್ರದ್ಧೆಗಳು, ಧರ್ಮನಿಷ್ಠೆ, ಭಕ್ತಿ ಮುಂತಾದವುಗಳು ಕಡಿಮೆಯಾಗಿ ಹಬ್ಬದಾಚರಣೆಯಲ್ಲಿ ವಿಶೇಷ ವ್ಯತ್ಯಯಗಳು ಕಾಣಿಸಿಕೊಂಡಿವೆ. ವಾರದ ದೀಪಾವಳಿ ಮೂರು ದಿನಕ್ಕೆ ಇಳಿದು ಈಗೀಗ ಕೆಲವು ಊರುಗಳಲ್ಲಿ ಒಂದೇ ದಿನಕ್ಕೆ ಸೀಮಿತವಾಗಿದೆ.

                ಮುಖ್ಯವಾಗಿ ರೈತರು ಬೇಸಾಯಕ್ಕಾಗಿ ತಾವು ಅವಲಂಬಿಸಿದ್ದ ಎತ್ತು, ಎಮ್ಮೆ, ಹಸುಗಳ ಮೈತೊಳೆದು ಹೂಮಾಲೆಗಳಿಂದ, ಗಂಟೆ, ಗೆಜ್ಜೆ, ಗಗ್ಗರಗಳಿಂದ ಅಲಂಕರಿಸಿ ಪೂಜಿಸುವ ನೇಗಿಲು, ನೊಗ, ಗುದ್ದಲಿ, ಗಾಡಿ, ಕೊರಡು, ಕುಂಟೆ, ಕತ್ತಿ, ಕೊಡಲಿ, ಕುಕ್ಕೆ, ಕೊಳಗ, ಹಗ್ಗ, ಜೊತಗ ಮುಂತಾದ  ಹತ್ತು ಹಲವು ವ್ಯವಸಾಯೋಪಕರಣಗಳನ್ನು, ಬೀಸುವಕಲ್ಲು, ಭತ್ತ ಒಡೆಯುವ ತೆವಳಿಕಲ್ಲು, ಕಡಗೋಲು, ಮೇಟಿಕಂಬ ಮುಂತಾದ ಒಳ-ಹೊರಗಿನ ಸಾಮಾನುಗಳನ್ನು ಒಪ್ಪ, ಓರಣದಿಂದ ಜೋಡಿಸಿಟ್ಟು ಪೂಜಿಸುತ್ತಿದ್ದ, ತನ್ಮೂಲಕ ಕೃತಜ್ಞತೆ ತೋರಿ ಅವುಗಳ ಋಣ ತೀರಿಸುತ್ತಿದ್ದ ಹಬ್ಬದ ಸಂದರ್ಭ. ಎತ್ತು ಗಾಡಿಗಳ ಜಾಗದಲ್ಲಿ ಈಗ ಪ್ರತಿ ಮನೆಯಲ್ಲೂ ಟಿಲ್ಲರುಗಳಿವೆ. ಹಸು, ಕರು, ಎಮ್ಮೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೀಸುವಕಲ್ಲು, ಕಡೆಯುವ ಕಲ್ಲುಗಳ ಸ್ಥಾನದಲ್ಲಿ ಮಿಕ್ಸರುಗಳು ಮತ್ತು ಗ್ರೈಂಡರುಗಳು ಬಂದು ಕುಳಿತಿವೆ. ಬಹುತೇಕ ಸಲಕರಣೆಗಳೆಲ್ಲ ಕಾರ್ಖಾನೆಗಳ ಉತ್ಪಾದನೆಗಳಾಗಿದ್ದು ಪೂಜೆಯ ಪಾವಿತ್ರ್ಯಕ್ಕೆ ಎರವಾಗಿವೆ.

                ಅಂಟಿಗೆ-ಪಂಟಿಗೆ ಸಂಪ್ರದಾಯವು ಇತ್ತೀಚೆಗೆ ಸೊರಗುತ್ತಿದೆ. ಈಗಿನ ಗ್ರಾಮೀಣ ಯುವಕರಿಗೆ ಚಳಿಯಲ್ಲಿ ನಿದ್ದೆಗೆಟ್ಟು ಬೇರೆಯವರ ಮನೆ ಬಾಗಿಲಿಗೆ ಹೋಗಿ ಹಾಡುವುದು ಬೇಡವಾಗಿದೆ. ಹಳ್ಳಿಯ ವಿದ್ಯಾವಂತರಿಗೆ ಇದು ಅಸಹ್ಯವೆನಿಸುತ್ತಿದೆ. ಕಷ್ಟಪಡದೇ ಹಣ ಸಿಗಬೇಕು, ರಾತ್ರಿಯೆಲ್ಲಾ ನಿದ್ರೆಗೆಟ್ಟು ಗಂಟಲು ಒಡೆಯುವವರೆಗೆ ಕೂಗಿಕೊಳ್ಳುವ ಕೆಲಸವನ್ನು ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಒಂದು ಸುಂದರವಾದ ಗೀತ ಸಂಪ್ರದಾಯದ ಕಲೆ ಅವಸಾನದ ಅಂಚಿನಲ್ಲಿದೆ.

ಅಂಟಿಗೆ-ಪಂಟಿಗೆ ತಂಡ

ಜನ್ನೆಹಕ್ಕಲು, ಸಾಗರ ತಾಲ್ಲೂಕು

                ಸಾಗರ ನಗರಕ್ಕೆ ತುಂಬಾ ಹತ್ತಿರವಾಗಿರುವ ಪಟ್ಟಹಳ್ಳಿ ಜನ್ನೆಹಕ್ಕಲು. ಈ ತಂಡದ ಮುಖ್ಯಸ್ಥರು ದಿ. ಕಾಳಿಂಗಪ್ಪ ಜನ್ನೆಹಕ್ಕಲು. ಇವರ ತಂಡದಲ್ಲಿ ಒಂಬತ್ತು ಜನ ಕಲಾವಿದರಿದ್ದರು. ಹಾಡುವವರು ನಾಲ್ಕು ಜನ, ಹಿಮ್ಮೇಳ ಹೇಳುವವರು ನಾಲ್ಕು ಜನ, ದೀಪ ಹಿಡಿಯುವವರು ಒಬ್ಬರು.

ವೇಷಭೂಷಣಗಳು

                ಸಾಮಾನ್ಯ ವೇಷಭೂಷಣಗಳು. ಎಲ್ಲರೂ ಪಂಚೆ ಉಟ್ಟುಕೊಳ್ಳುತ್ತಾರೆ. ತಲೆಗೆ ಕೆಂಪು ಅಥವಾ ಬಿಳಿಯ ರುಮಾಲು ಸುತ್ತಿಕೊಂಡಿರುತ್ತಾರೆ. ಹಿರಿಯರು ಹಳೆಯ ಕೋಟು ಹಾಕಿಕೊಳ್ಳುತ್ತಾರೆ. ಎಲ್ಲರಿಗೂ ಕಂಬಳಿಕೊಪ್ಪೆ ಇರುತ್ತದೆ. ದೊಡ್ಡದಾದ ಮಣ್ಣಿನ ದೀಪವನ್ನು ಯಜಮಾನ ಹಿಡಿದಿರುತ್ತಾರೆ.

ಸಾಹಿತ್ಯ-ಹಾಡುಗಳು

1) ಬಲೀಂದ್ರನ ಹಾಡು

2) ಕವಲೆ ಹಾಡು

3) ಬಸವಣ್ಣ ಮತ್ರ್ಯಕ್ಕಿಳಿಯುವ ಹಾಡು

4) ಕೃಷ್ಣ ಪಾರಿಜಾತ

5) ಉತ್ತರದೇವಿ ಹಾಡು

6) ಕೃಷ್ಣ ಪಗಡೆ ಆಡುವ ಹಾಡು

7) ಮಂಗಳಾರತಿ ಹಾಡು

                ಮಲೆನಾಡಿನಲ್ಲಿ ಅಂಟಿಗೆ-ಪಂಟಿಗೆ ಎಂಬ ಪದವನ್ನು ಬಳಸುವುದಿಲ್ಲ. ಹಬ್ಬ ಹಾಡುವುದು, ಜ್ಯೋತಿ ನೀಡುವುದು ಎಂದು ಹೇಳುತ್ತಾರೆ. ದೀಪಾವಳಿಯನ್ನು ಐದು ದಿವಸಗಳ ಕಾಲ ಆಚರಿಸುತ್ತಾರೆ. ಹಬ್ಬ ಹಾಡುವುದನ್ನು ಪಾಡ್ಯದ ದಿವಸದಿಂದ ವರ್ಷತೊಡಕಿನವರೆಗೆ ಮೂರು ದಿವಸಗಳು ನಡೆಸುತ್ತಾರೆ. ಪಾಡ್ಯದ ದಿವಸ ರಾತ್ರಿ ಊಟದ ನಂತರ ಸುಮಾರು ರಾತ್ರಿ 9 ಗಂಟೆಗೆ ಗ್ರಾಮದ ಮುಂಭಾಗದ ಬೆಂಗಳೂರು-ಹೊನ್ನಾವರ ಹೆದ್ದಾರಿಯ ಪಕ್ಕದಲ್ಲಿರುವ ಜಟ್ಟಿಗಾ ದೇವರ ಬನಕ್ಕೆ ಹೋಗಿ ಜಟ್ಟಿಗಾ ದೇವರಿಗೆ ದೀಪ ಹಚ್ಚಿ ಪೂಜೆ ಮಾಡಿ ದೇವರ ದೀಪದಿಂದ ಒಂದು ಕದರು ತೆಗೆದುಕೊಂಡು ಇವರ ದೀಪವನ್ನು ಹಚ್ಚಿಕೊಂಡು ಊರನ ಮಧ್ಯೆ ಇರುವ ಚೌಡಮ್ಮನ ದೇವಸ್ಥಾನಕ್ಕೆ ಬರುತ್ತಾರೆ. ದೇವರಿಗೆ ದೀಪ ಹಚ್ಚಿ ಹಾಡು ಹೇಳಿ

                ದಿಪ್ಪು ದಿಪ್ಪು ಹೋಳಿಗೊ

                ಹಬ್ಬಕ್ಕೊಂದು ಹೋಳಿಗೊ

                ವರ್ಷಕ್ಕೊಮ್ಮೆ ಬರುವ

                ಅರಸದೀಪ ಹೋಳಿಗೊ

                ಎಂದು ಕೂಗುತ್ತಾರೆ. ಹಿಂದಿನ ಕಾಲದಲ್ಲಿ ಊರಿನ ಯಜಮಾನರ (ಹಿರಿಯರು) ಮನೆಗೆ ದೀಪ ಕೊಟ್ಟು ಮುಂದಿನ ಮನೆಗೆ ಹೋಗುವ ಪದ್ಧತಿ ಇತ್ತು. ಈಗ ನೇರವಾಗಿ ಬೇರೆ ಮನೆಗಳಿಗೆ ಹೋಗುತ್ತಾರೆ.

                ದಿಮಿಸಾಲ್ ಹೊಡಿರಣ್ಣಾ

                ದಿಮಿಸಾಲ್ಹೊಡಿರೊ

                ಅಕ್ಷೆಯ ತೆಗಿರಣ್ಣ

                ಭಿಕ್ಷೆಯ ದೊರೆಯೆ

                ಹೇಳುತ್ತಾ ಬಾಗಿಲ ಮುಂದೆ ನಿಲ್ಲುತ್ತಾರೆ. ತಕ್ಷಣ ಬಾಗಿಲು ತೆಗೆಯದಿದ್ದರೆ

                ಕಲ್ಲ ಕದವೊ ಕಬ್ಬಿಣ ಅಗಳೊ

                ಮೆಲ್ಲಗೆ ತೆಗಿರಿ ಮನಿಸ್ವಾಮಿ

                ಬಾಗಿಲು ತೆಗೆಯುತ್ತಾರೆ. ದೀಪ ಹಿಡಿದವರಿಗೆ, ಹಾಡುವವರಿಗೆ ಮನೆಯವರು ಕಾಲಿಗೆ ನೀರು ಹಾಕಿ ನಮಸ್ಕಾರ ಮಾಡಿ ಮನೆಯ ಜಗಲಿಯಲ್ಲಿ ಚಾಪೆ ಹಾಕುತ್ತಾರೆ. ಕಲಾವಿದರು ಹೋಗಿ ಕುಳಿತುಕೊಳ್ಳುತ್ತಾರೆ. ದೀಪ ಇಡಲು ಒಂದು ಮಣೆಯನ್ನು ಇಡುತ್ತಾರೆ. ದೀಪ ಹಿಡಿದವರು ಮಣೆಯ ಮೇಲೆ ದೀಪ ಇಡುತ್ತಾರೆ. ಆ ಮನೆಯ ಗೃಹಿಣಿ ದೀಪಕ್ಕೆ ಎಣ್ಣೆ ತಂದು ಹಾಕುತ್ತಾಳೆ. ತಮ್ಮ ಮನೆಯ ದೀಪವನ್ನು ತಂದು ಇವರ ದೀಪದಿಂದ ಹಚ್ಚಿಕೊಳ್ಳುತ್ತಾಳೆ. ಆ ಕುಟುಂಬದ ಯಜಮಾನ ಎದ್ದು ಬರದಿದ್ದರೆ

                ಕಾಮನ ಮಕ್ಕಳು ಬಾಗಿಲಿಗೆ ಬಂದಾರೆ

                ರಾಯ ನಮ್ಮಯ್ಯನ ಸುಳಿವಿಲ್ಲ

                ಎಲ್ಲೆ ಎಲ್ಲೆಂದರೆ ನಾವು ಹೋಗುವರಲ್ಲ

                ಸಾಲೆಯ ಹೊನ್ನುಸೆರೆ ಮುತ್ತು

                ಸಾಲೆಯ ಹೊನ್ನುಸೆರೆ ಮುತ್ತು ಕೊಟ್ಟರೆ

                ಬೇಗನೊಂದಗಸೆ ಇಳೀತೀವಿ

                ಎಂದು ಹಾಡುತ್ತಾರೆ. ಯಜಮಾನ ಎದ್ದುಬಂದು ಕಾಣಿಕೆ ಕೊಟ್ಟು ಮನೆಯವರನ್ನೆಲ್ಲಾ ಎಬ್ಬಿಸಿ ಮನೆಯವರಿಂದ, ಮಕ್ಕಳಿಂದ ದೀಪಕಾಣಿಕೆ ಹಾಕಿಸಿ, ಮನೆಯ ಹೆಣ್ಣುಮಕ್ಕಳು ದೀಪ ಕಲಾವಿದರಿಗೆ ನಮಸ್ಕಾರ ಮಾಡಿ ದೀಪದಲ್ಲಿರುವ ಕಪ್ಪನ್ನು ತೆಗೆದುಕೊಂಡು ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಾರೆ. ಮನೆಯೊಡತಿ ಹೋಳಿಗೆ, ಕಡುಬು, ಕಾಯಿಭಾಗ, ಅರ್ಧಸೇರು ಅಕ್ಕಿ ಕೊಡುತ್ತಾಳೆ.

ಹಾಡುಗಳ ಮಾದರಿಗಳು

ಕವಲೆ ಹಾಡು

                ಕಾಗಿನುಂಡೆ ಬಾರೆ

                ಕಣಗಲ ವಾಗ್ದೆ ಬಾರೆ

                ಚಿಕ್ಕನಾಗವ್ವಾನ ಸೊಸಿ ಬಾರೆ

                ಚಿಕ್ಕ ನಾಗವ್ವಾನ ಸೊಸಿ ಬಾರೆಂದರೆ

                ಬಾರಂದ್ರೆ ವಚನಾ ನುಡಿದಳು

ಪಾರಿಜಾತ

                ಯದುಕುಲೇಶನೆ ಸ್ವಾಮಿ

                ಪರಶುರಾಮನೆ

                ಮುದದಿ ನೆನೆವೆನೊ

                ಕೃಷ್ಣನ ಪದವಾ ಪೇಳ್ವೆನೊ

                ದ್ವಾರಾವತಿಯಲ್ಲಿ

                ಹದಿನಾರು ಸಾವಿರ

                ನೂರಾ ಎಂಟನೆ

                ಸ್ತ್ರೀಯರಾಳುತಿದ್ದರು

ಬಸವಣ್ಣ ಮತ್ರ್ಯಕಿಳಿಯುವ ಹಾಡು

                ಕರಿಯಾನೆ ಕಬ್ಬಂತೆ

                ನೆಡಮುರ ಗಣ್ಣಂತೆ || ಶಿವೊ ||

                ಜಗದು ಮೆದ್ದಾರೆ ಸವರುಚಿ

                ಜಗದಾನೆ ಮೆದ್ದಾರೆ

                ಸವಿರುಚಿ ಊಟನ್ನುಂಡು

                ತಳಗಾವೆ ಬಸವಯ್ಯನ ವಚನಾಕೆ ||

                ರಾತ್ರಿಯೆಲ್ಲಾ ಊರೂರು ತಿರುಗಿ ಬೆಳಗಾದರೆ ಒಂದು ಕತ್ತದ ಹಗ್ಗದ ಬತ್ತಿಗೆ ದೀಪದಿಂದ ಹಚ್ಚಿಕೊಂಡು ಊರಿಗೆ ತಂದು ದೇವರೆದುರಲ್ಲಿ ಕತ್ತದ ಬತ್ತಿಯನ್ನು ಇಡುತ್ತಾರೆ.

                ಪುನಃ ಮರುದಿವಸ ರಾತ್ರಿ ದೇವರ ದೀಪದಿಂದ ಹಚ್ಚಿಕೊಂಡು ಹೊರಡುತ್ತಾರೆ.

                ಶಿರವಂತೆ, ಹಕ್ರೆ, ಕಲ್ಲಮಕ್ಕಿ, ಹಲಸಿನ ಘಟ್ಟ, ಹುಳೇಗಾರು, ಮುಂಗಳೀಮನೆ, ಮುಂಡಗೋಡು, ಲಂಡಿಗೆರೆ ಮುಂತಾದ ಹಳ್ಳಿಗಳಿಗೆ ಹೋಗುತ್ತಾರೆ.

                ದೀಪಾವಳಿಯ ನಂತರ ಒಂದು ತಿಂಗಳೊಳಗೆ ಊರಿನ ಯಜಮಾನ ದಿವಸವನ್ನು ನಿಗದಪಡಿಸಿದಂತೆ ಊರಿನ ದೊಡ್ಡ ಬಯಲಿನಲ್ಲಿ ಚಪ್ಪರ ಹಾಕಿ ಗ್ರಾಮದ ಎಲ್ಲಾ ದೇವರುಗಳಿಗೂ ದೀಪ ಹಚ್ಚಿ ಹಣ್ಣು ಕಾಯಿ ಮಾಡಿಸಿ, ಒಣ ಸ್ವಾರ್ಲು ಮೀನು ತಂದು ಸ್ಥಳದಲ್ಲಿಯೇ ಪಲ್ಲೆ ಮಾಡಿ ನೆಂಟರಷ್ಟರನ್ನು ಕರೆದು ಮನೆಯಿಂದ ತಂದು ಸಾಮೂಹಿಕ ಭೋಜನ ಮಾಡುತ್ತಾರೆ. ಜಟ್ಟಿಗಾನ ಬನಕ್ಕೆ ಹೋಗಿ ಪೂಜೆ ಮಾಡಿಸಿ ದೀಪವನ್ನು ಅಲ್ಲಿಯೇ ಬಿಟ್ಟುಬರುತ್ತಾರೆ. ಮುಂದಿನ ದೀಪಾವಳಿವರೆಗೆ ಹಣತೆ ಅಲ್ಲಿಯೇ ಇರುತ್ತದೆ.

ಅಂಟಿಗೆ-ಪಂಟಿಗೆ ತಂಡ, ಗಾಳೀಪುರ, ಸಾಗರ ತಾಲ್ಲೂಕು

                ಗಾಳೀಪುರ ಸಾಗರ ನಗರಕ್ಕೆ ನಾಲ್ಕು ಕಿ.ಮೀ. ದೂರವಿರುವ ಪುಟ್ಟಹಳ್ಳಿ. ಈ ತಂಡ ತುಂಬಾ ಹಳೆಯದು. ಎಂಟು ದಶಕಗಳಿಂದ ತಂಡದವರು ನಿರಂತರವಾಗಿ ಅಂಟಿಗೆ-ಪಂಟಿಗೆ ಸಂಪ್ರದಾಯವನ್ನು ನಡೆಸಿಕೊಂಡುಬರುತ್ತಿದ್ದಾರೆ. ತಂಡದ ಮುಖ್ಯಸ್ಥರು ಈಗ ಹಿರೇರು ಸಣ್ಣ ಕನ್ನಪ್ಪನವರು ಮತ್ತು ಅಡ್ಡೇರಿ ಪುಟ್ಟಪ್ಪನವರು. ತಂಡದಲ್ಲಿ ಹನ್ನೆರಡು ಜನ ಕಲಾವಿದರಿದ್ದಾರೆ. ದೀಪ ಹಿಡಿಯುವವನು ಒಬ್ಬ, ಎಣ್ಣೆ ಪಾತ್ರೆ ಹಿಡಿಯುವವನು ಒಬ್ಬ, ಉಳಿದವರು ಹಾಡುವ ಕಲಾವಿದರು.

ವೇಷಭೂಷಣಗಳು

                ತಲೆಗೆ ಪೇಟಾ, ಹೆಗಲ ಮೇಲೆ ಶಲ್ಯ, ಪಂಚೆ-ಶರಟು ಹಾಕಿಕೊಳ್ಳುತ್ತಾರೆ. ದೀಪ ಹಿಡಿಯುವವನು ಕಂಬಳಿಕೊಪ್ಪೆ ಹಾಕಿರುತ್ತಾನೆ. ಕೆಲವರು ಕಪ್ಪು ಕೋಟುಗಳನ್ನು ಹಾಕಿರುತ್ತಾರೆ. ಕೆಲವರು ನಿತ್ಯ ತೊಡುವ ಉಡುಪುಗಳನ್ನು ಹಾಕಿಕೊಳ್ಳುತ್ತಾರೆ. ಅಂಟಿಗೆ-ಪಂಟಿಗೆ ಕಲಾವಿದರಿಗೆ ವಿಶೇಷವಾದ ಉಡುಪುಗಳೇನೂ ಇರುವುದಿಲ್ಲ.

ಹಾಡುಗಳು-ಸಾಹಿತ್ಯ

1) ಬಲೀಂದ್ರನ ಹಾಡು

2) ಕವಲಿ ಹಾಡು

3) ಬಾಗಿಲು ತೆಗೆಸುವ ಹಾಡು

4) ಭಾವನೆಂಟರ ಹಾಡು

5) ಶಿವ ಭಿಕ್ಷೆ ಬೇಡುವ ಹಾಡು

6) ಉತ್ತರದೇವಿ ಹಾಡು

7) ಕೃಷ್ಣ ಪಾರಿಜಾತ

                ದೀಪಾವಳಿ ಪಾಡ್ಯದ ದಿವಸ ಹಬ್ಬದ ಊಟದ ನಂತರ ರಾತ್ರಿ 9 ಗಂಟೆಗೆ ಗ್ರಾಮದ ಜಟ್ಟಿಗಾ ದೇವರಬನಕ್ಕೆ ಹೋಗಿ ದೀಪ ಹಚ್ಚಿ ಪೂಜೆ ಮಾಡಿ ಹಣ್ಣು ಕಾಯಿ ಒಡೆದು ಪೂಜೆ ಮಾಡಿ, ದೇವರ ದೀಪದಿಂದ ದೀಪ ಹಚ್ಚಿಕೊಂಡು-

                ದಿಪ್ಪಡು ದಿಪ್ಪಡು ಹೋಳಿಗೊ

                ವರ್ಷಕ್ಕೊಮ್ಮೆ ಬರುವ ಹೋಳಿಗೊ

                ವರ್ಷಕ್ಕೊಮ್ಮೆ ಬರುವ ಕಾರ್ತಿಕ ಹೋಳಿಗೊ

                ಎಂದು ಕೂಗುತ್ತಾ ಊರಿನ ಹಿರೇರ ಮನೆಬಾಗಿಲಿಗೆ ಬರುತ್ತಾರೆ. ಹಿರೇರ ಮನೆಯ ಬಾಗಿಲಲ್ಲಿ ದೀಪ ಇಡುತ್ತಾರೆ. ಊರಿನ ಪ್ರಾರಂಭದ ಮನೆಗೆ ಹೋಗಿ-

                ಧಿಮಿಸಾಲ್ಹೊಡಿರಣ್ಣ

                ದಿಮಿಸಾಲ್ಹೊಡಿರೊ

                ದಿಮಿಸಾಲ್ಹೊಡಿರಣ್ಣ ಒಂದೇ ದನಿಗೆ

                ಎತ್ತೀದ ಸಲ್ಲೀಗೆ ಕಿತ್ತೆದ್ದುಬರಲೊ

                ಈ ಊರ ದೇವರಿಗೆ ಏನೇನು ಉಡುಗರೋ

                ಈ ಊರ ಜಟ್ಟಿಗಪ್ಪನಿಗೆ ಏನೇನು ಉಡುಗರೋ

                ಈ ಊರ ಮಾಸ್ತ್ಯಮ್ಮನಿಗೆ ಏನೇನು ಉಡಗರೋ

                ಹೇರಲ್ಲಿ ಕಾಯೋ ಹೆಡಿಗೇಲಿ ಹಣ್ಣೊ

                ಸತ್ಯವಂತನಾದರೆ ಸಭೆ ಮುಂದೆ ಬರಲೊ

                ಸಭೆಗು ನಮಗು ಸಂತೋಷ ತರಲೋ

                ಆಚೆಯ ದಡದಾಗೆ ಯಾತರದ ಬೆಳಕೋ

                ಸೊನಗಾರ ಹುಡಗೀಯ ಪಟ್ಟೀಯ ಬೆಳಕೊ

                ಕಾಮಣ್ಣ ಭೀಮಣ್ಣ ಏನು ಮಾಡುತ್ತಿದ್ದರೋ

                ಕಗ್ಗಲ್ಲ ಕಡಿದು ಹಿಟ್ಟು ಮಾಡುತಿದ್ದರೊ

                ಧಿಮಿಸಾಲ್ಹೊಡಿರಣ್ಣಾ ಧಿಮಿಸಾಲ್ಹೊಡಿರೋ

                ಮನೆಯ ಬಾಗಿಲಿನಲ್ಲಿ ನಿಂತು-

                ಭಾಕುಕುಳ್ಳ ಮನ್ನವರು

                ನಮಗಾಗಿ ಒಂದ್ಗಸೆ ತೆಗಿರಯ್ಯ

                ಬಾಗಿಲು ಬಾಗಿಲು ಚೆಂದ

                ಈ ಮನೆ ಬಾಗಿಲು ಚೆಂದ

                ಬಾಗಿಲ ಮೇಲೊಂದು

                ಏನೆಂದು ಬರದಾರೆ

                ಕೊಚ್ಚ ಪಾರಿವಾಳದ

                ಗಿಳಿಹಿಂಡು ಬರುದಾರು

                ಕೊಚ್ಚ ಪಾರಿವಾಳದ

                ಗಿಳಿಹಿಂಡು ಬರುದಾರು

                ಅರ್ಥ ಬಲ್ಲಣ್ಣ ತಿಳುಕೊಳ್ಳೊ ||ಸೋ ||

                ಅಡಿಕೀಲು, ಪಡಿಕೀಲು

                ಗುಬ್ಬಿ ಜಂತದ ಕೀಲು

                ಹೆಬ್ಬುಲ ಗರುಡಾ ದನಿದೊರೆ ||ಸೋ||

                ಇಷ್ಟೆಲ್ಲಾ ಬಾಗಿಲಲ್ಲಿ ನಿಂತು ಹಾಡಿದರೂ ಕೆಲವರು ಆವಾಗ ಬಾಗಿಲನ್ನು ತೆಗೆಯುವುದೇ ಲ್ಲ.

                ದೀಪಧಾರಿಗಳು ಹೀಗೆ ಹಾಡುತ್ತಾರೆ-

                ಕಲ್ಲೀನ ಕದವೊ ಕಬ್ಬಿಣದ ಗಣಿಯೋ

                ಎಲ್ಲಾಕೆ ತೆಗಿರೊ ಮನಿಸ್ವಾಮಿ

                ಕಂಚಿನ ಕದವೊ ಮಿಂಚಿನ ಮೀಡ

                ಎಲ್ಲಾಕೆ ತೆಗಿರೊ ಮನಿಸ್ವಾಮಿ

                ಅತ್ತೀಯ ಕದವೊ ಗತ್ಯುಳ್ಳ ಮೀಡೊ

                ಎಲ್ಲಾಕೆ ತೆಗಿರೊ ಮನಿಸ್ವಾಮಿ

                ನಂತರ ಬಾಗಿಲು ತೆಗೆಯುತ್ತಾರೆ. ಮನೆಯವರು ಬಂದು ದೀಪ ಇಡಲು ಮಣೆ ತಂದು ಇಡುತ್ತಾರೆ. ಅದರ ಮೇಲೆ ದೀಪ ಇಡುತ್ತಾರೆ. ಮನೆಯ ಗೃಹಿಣಿಯರು ಬಲೀಂದ್ರನ ಹಣತೆಯನ್ನು ಇವರ ದೀಪದಿಂದ ಹಚ್ಚಿಕೊಂಡು ಹಣತೆಯನ್ನು ಬಲೀಂದ್ರನ ಮಣೆಯ ಮೇಲೆ ಇಡುತ್ತಾರೆ.

                ಬಲೀಂದ್ರನ ಹಾಡು ಹೇಳುತ್ತಾರೆ-

                ಬಲ್ಲೇಳು ಬಲೀಂದ್ರನೋ ರಾಜ

                ಎಲ್ಲರ ಸಲಗಂತವನೊ

                ಬಲ್ಲೇಳ ಬಂದು ಬಾಗಿಲಿಗೆ ನಿಂತಾಗ

                ಕಲ್ಲಂತ ಮಳೆಯು ಕರುದಾವೊ

                ಕಲ್ಲಂತ ಮಳೆಯು ಕರುದಾವೊ ಈ ಊರ

                ಮಕ್ಕಿ ಮಲ್ಡೆಲ್ಲಾ ಚಿಗುತಾವೊ |

                ಬಲ್ಡ ಬತ್ತೆಲ್ಲ ಹನಿಯಾಗೆ ತಾಯವ್ವಾ

                ಚೋರು ಬಾರೆಲ್ಲ ಕರಿಬಾರೆ |

                ಚೋರು ಬಾರೆಲ್ಲ ಹನಿಯಾಗೆ ತಾಯವ್ವಾ

                ಬಲೀಂದ್ರರಾಯಗೆ ಶಿವಪೂಜೆ ||

ಭಾವ ನೆಂಟರ ಹಾಡು

                ಭಾವ ನೆಂಟರು ಕೂಡಾಡಿ ಹೋಗುವಾಗ

                ಕೈಯಲ್ಲಿ ಗುಲಗುಂಜಿ ಫಲ ಬಂದೆ ಶಿವಾ

                ಕೈಯಲ್ಲಿ ಗುಲಗುಂಜಿ ಫಲ ಬಂದೆ ಎಲೆ ಭಾವ

                ಗುಲಗುಂಜಿ ತರದ್ಹೆಣ್ಣ ತರಬೇಕು ಶಿವಾ

                ಗುಲಗುಂಜಿ ತರದ್ಹೆಣ್ಣ ಇತ್ತಣ ರಾಜ್ಯದಲ್ಲಿಲ್ಲ

                ಮಲೆನಾಡಿಗ್ಹೋಗಿ ತರಬೇಕು ಶಿವಾ

ಕವಲಿ ಹಾಡು

                ದೀನು ಅಂದಾರೆ ಮಲೆನಾಡಿಗ್ಹೋದಾರೆ

                ಮನೆಯಲ್ಲಿ ಇನ್ಯಾರು ಎಲೆ ಭಾವ | ಸುವ್ವಿ

                ಹಂಡೆ ಕೂಡುವರ್ಯಾರು ಹಂಡಿ ಕಟ್ಟುವರ್ಯಾರು

                ಹಂಡೀಗೆ ಹುಲ್ಲ ತರೋರ್ಯಾರು | ಸುವ್ವಿ

                ಹಂಡಿ ಕೊಟ್ಟಿಗ್ಯಾಗೆ ಗಾಜಿನ ಮುಂಡಿಗ್ಯಾಗೆ

                ಹನ್ನೆರಡು ಐದಾವು ಗಿಳಿರಾಮ | ಸುವ್ವಿ

                ಹನ್ನೆರಡು ಐದಾವು ಗಿಳಿರಾಮ ಕಾವಲು ಕೊಟ್ಟು

                ನಾನ್ಹೋಗತೀನೋ ತಲಿ ಹಂಡೆ | ಸುವ್ವಿ

                ಮನೆಯವರು ಇಲ್ಲದಿದ್ದಾಗ ಅಥವಾ ಮನೆಯವರು ಏಳದಿದ್ದರೆ ದೀಪದ ಕದಿರನ್ನು ಮನೆಯ ಮುಂಬಾಗಿಲ ಮೇಲಿಟ್ಟು ಹೋಗುತ್ತಾರೆ.

ಕೋಲಾಟ

                ಕರ್ನಾಟಕದ ಅತ್ಯಂತ ಜನಪ್ರಿಯ ಜನಪದ ಕಲೆಗಳಲ್ಲಿ ಕೋಲಾಟವೂ ಒಂದು. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಂಡುಬರುವ ಕಲೆ ಕೋಲಾಟ. ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳಲ್ಲಿ ಪ್ರತಿ ಹಳ್ಳಿಯಲ್ಲಿಯೂ ಕೋಲಾಟ ಕಲೆ ಜೀವಂತವಾಗಿದೆ. ಇದು ಹಳ್ಳಿಗರಿಗೆ ಸುಲಭಸಾಧ್ಯವೂ, ಪ್ರಮುಖವೂ ಆದ ಒಂದು ಸರಳ ಮನರಂಜನಾ ಕ್ರಿಯೆ. ಜನಪದ ಕಲೆಗಳಲ್ಲೆಲ್ಲಾ ಕೋಲಾಟ ಹಳ್ಳಿಗರ ಬದುಕಿನಲ್ಲಿ ಸಹಜವಾಗಿ ಸೇರಿಹೋದ ಒಂದು ಅನಿವಾರ್ಯ ಅಂಗವೂ ಹೌದು. ಕೋಲಾಟ ಜನಪದ ಕಲೆಯೂ ಹೌದು, ಆಟವೂ ಹೌದು. ಕೋಲಾಟದಲ್ಲಿ ಹಲವು ಬಗೆಗಳನ್ನು ಕಾಣಬಹುದು. ಮರಗಾಲು ಕೋಲಾಟ, ಚಕ್ರಾಟ, ಮಂಡಿಕೋಲಾಟ, ಕಿಕ್ಕಾಲ ಕೋಲಾಟ, ಮಲಕನ ಕೋಲಾಟ, ಕತ್ತಿಗಳನ್ನು ತೋಳಿಗೆ ಕಟ್ಟಿಕೊಂಡು ಆಡುವ ಕೋಲಾಟ, ಒನಕೆ ಕೋಲಾಟ, ತೊಟ್ಟಿಲು ಕೋಲಾಟ, ಜಡೆ ಕೋಲಾಟ-ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

                ಕೋಲಾಟ ಕರ್ನಾಟಕದ ಎಲ್ಲ ಕಡೆಗಳಲ್ಲಿ ಕಂಡುಬರುವ ಜನಪದ ನೃತ್ಯಕಲೆ. ಅಖಿಲ ಭಾರತ ವ್ಯಾಪ್ತಿಯನ್ನು ಪಡೆದ ಕಲೆ ಎಂದರೂ ಆಶ್ಚರ್ಯಪಡಬೇಕಾಗಿಲ್ಲ. ಖಿಊಇ Sಖಿಂಓಆಂಖಆ ಆIಅಖಿIಔಓಂಖಙ ಔಈ ಈಔಐಏಐಔಖಇ ಒಙಖಿಊಔಐಔಉಙ ಂಓಆ ಐಇಉಇಓಆ ಎಂಬ ಗ್ರಂಥದಲ್ಲಿ ಕೂಡ ಏಔಐಂಖಿಂಒ ಎಂಬ ಒಂದು ಶೀರ್ಷಿಕೆ ಇರುವುದನ್ನು ಗಮನಿಸಿದರೆ ಕೋಲಾಟದ ಜನಪ್ರಿಯತೆ ಏನು ಎಂಬುದು ವೇದ್ಯವಾಗುತ್ತದೆ. ದ್ರಾವಿಡ ಕಲೆಯಾದ ಕೋಲಾಟದ ಸ್ವರೂಪ ಮತ್ತು ವೈವಿಧ್ಯವನ್ನು ಗುರುತಿಸುವ ಈ ಲೇಖನದಲ್ಲಿ ಸಾಧಾರಣ ಕೋಲಾಟ, ಜಡೆ ಕೋಲಾಗಳೆರಡನ್ನು ಗುರುತಿಸಲಾಗಿದೆ.

                ಕೋಲಾಟ ಲೌಕಿಕ ಕಲೆ. ಹಬ್ಬದ ದಿನವೇ ಬೇಕಾಗಿಲ್ಲ. ಮಲಬಾರಿನ ಏಂಓIಗಿಂಓ ಏಔಐಂಖಿ ಕೋಲಾಟದ ಒಂದು ವಿಶಿಷ್ಟ ಕಣಿಯ ಜನಾಂಗವನ್ನು ಸೂಚಿಸುತ್ತದೆ. ತಿರುವಾಂಕೂರಿನ ಕೋಲಾಟವು ಪ್ರಸಿದ್ಧವಾದುದು. ವಿಶ್ವವ್ಯಾಪಕವಾದ ಕೋಲಾಟ ಒಂದು ವೀರ ನೃತ್ಯ. ಅಔಒಃಂಖಿ ಆಂಓಅಇ ಎಂದೇ ಯುರೋಪಿನ ವಿವಿಧ ಭಾಗಗಳಲ್ಲಿ ಅದನ್ನು ಪರಿಗಣಿಸಲಾಗಿದೆ. ಅಲ್ಲಿ ಕೋಲು ಕತ್ತಿಯ ಪ್ರತೀಕ. ಪೋರ್ಚುಗಲ್, ಇಟಲಿ, ಲಿಥಿಯೋಪಿಯ, 

ಹಂಗೇರಿ ಮುಂತಾದ ಕಡೆಗಳಲ್ಲಿ ಕೋಲಾಟ ಸಾಕಷ್ಟು ಜನಪ್ರಿಯವಾಗಿದೆ. ಈಜಿಪ್ಟಿನಲ್ಲಿ ಪುರುಷರ ಕೋಲಾಟ ಕಾಣಬಹುದು. ಉತ್ತರಭಾರತದಲ್ಲಿ ಕೋಲಾಟ ತುಂಬಾ ವ್ಯಾಪಕವಾಗಿದೆ.

ದೀವರು ಜನಾಂಗ-ಕೋಲಾಟ

                ಮಲೆನಾಡಿನಲ್ಲಿ ಆರೇಳು ದಶಕಗಳ ಹಿಂದೆ ಕೇವಲ ಪರಿಶಿಷ್ಟ ಜನಾಂಗದವರು ಮಾತ್ರ ಕೋಲಾಟವನ್ನು ಆಡುತ್ತಿದ್ದರು. ಕೋಲಾಟ ಕೇವಲ ಪರಿಶಿಷ್ಟ ಜನಾಂಗದವರಿಗೆ ಮಾತ್ರ ಸೀಮಿತವಾಗಿತ್ತು. ದೀವರು ಜನಾಂಗ ಕೋಲುಗಳನ್ನು ಮುಟ್ಟುತ್ತಲೇ ಇರಲಿಲ್ಲ. ಕೋಲುಗಳನ್ನು ಹಿಡಿದು ಕೋಲಾಟ ಆಡುವವರು ಅಸ್ಪøಶ್ಯರು ಮಾತ್ರ. ಇತರೆ ಜನಾಂಗದವರು ಕೋಲು ಹಿಡಿದು ಕೋಲಾಟ ಆಡಬಾರದು ಎಂಬ ಭಾವನೆಯಿತ್ತು.

                1956ರಲ್ಲಿ ನಾನು ಮೆಟ್ರಿಕ್ಯುಲೇಷನ್ ಆದ ನಂತರ ಪರಿಶಿಷ್ಟ ಜಾತಿ ಯುವಕರನ್ನು ಸೇರಿಸಿ ವಯಸ್ಕರ ಶಿಕ್ಷಣ ಸಮಿತಿಯವರ ಸಹಾಯದಿಂದ ಅಕ್ಷರ ಜ್ಞಾನವಿಲ್ಲದ ನಿರಕ್ಷರಿಗಳಾದ ಪರಿಶಿಷ್ಟ ಜನಾಂಗದ ಯುವಕರಿಗೆ ಒಂದು ರಾತ್ರಿ ಶಾಲೆಯನ್ನು ಮಾಡುತ್ತಿರುವುದು ತಾಲ್ಲೂಕಿನಲ್ಲಿಯೇ ಪ್ರಥಮವಾಗಿತ್ತು. ಕುಗ್ವೆಯಲ್ಲಿ ಹಳೆಯ ಟೋಲ್‍ಗೇಟ್ ಕಟ್ಟಡವನ್ನು ಬಿಡಿಸಿಕೊಂಡು ಆ ಕಟ್ಟಡದಲ್ಲಿ ರಾತ್ರಿ ಶಾಲೆ, ಪುಸ್ತಕ ಭಂಡಾರ, ವಾಚನಾಲಯ, ಯುವಕ ಸಂಘ ಹೀಗೆ ಅನೇಕ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ರಾತ್ರಿ ಶಾಲೆಯನ್ನು ತುಂಬಾ ಚೆನ್ನಾಗಿ ನಡೆಸುತ್ತಿದ್ದೆ. ಪರಿಶಿಷ್ಟ ಜಾತಿಯ ಯುವಕರಿಗೆ ರಾತ್ರಿ ಶಾಲೆ ನಡೆಸುತ್ತಿರುವುದು ಸಾಗರ ತಾಲ್ಲೂಕಿನಲ್ಲಿ ಪ್ರಥಮವಾಗಿತ್ತು. ರಾತ್ರಿ ಶಾಲೆ ನಡೆಸುತ್ತಿರುವ ಕಟ್ಟಡ ಕುಗ್ವೆ ಊರಿಗೆ ದೂರವಾಗಿ ಪರಿಶಿಷ್ಟ ಜನಾಂಗದವರ ಕೇರಿಗೆ ಹತ್ತಿರದಲ್ಲಿತ್ತು.

                ವಯಸ್ಕರ ಶಿಕ್ಷಣ ಸಮಿತಿಯವರು ಪ್ರಕಟಿಸುತ್ತಿದ್ದ ‘ಬೆಳಕು’ ವಾರಪತ್ರಿಕೆ, ‘ಪುಸ್ತಕ ಪ್ರಪಂಚ’ ಎಂಬ ಮಾಸಪತ್ರಿಕೆಗಳು ಶಾಲೆಗೆ ಬರುತ್ತಿದ್ದವು. ರಾತ್ರಿ ಶಾಲೆಯನ್ನು ಪ್ರಾರಂಭ ಮಾಡಿ ಮೂರು ತಿಂಗಳಲ್ಲಿ ವಯಸ್ಕರ ಶಿಕ್ಷಣ ಸಮಿತಿಯ ರಾಜ್ಯ ಅಧ್ಯಕ್ಷರಾದ ಶ್ರೀ ಪಿ.ಎನ್. ಜವರಪ್ಪಗೌಡರು ಜೋಗ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ರಾತ್ರಿ ಶಾಲೆ, ಪುಸ್ತಕ ಭಂಡಾರಕ್ಕೆ ಭೇಟಿ ನೀಡಿದರು. ಅವರನ್ನು ಸ್ವಾಗತ ಮಾಡಲು ಮಾವಿನ ತೋರಣ ಕಟ್ಟಿ, ಗಂಧದ ಹಾರ ಹಾಕಿ ಸ್ವಾಗತಿಸಿದೆವು. ರಾತ್ರಿ ಶಾಲೆಯ ಪರಿಶಿಷ್ಟ ಜಾತಿಯ ಎಲ್ಲಾ ಯುವಕರನ್ನು ಸೇರಿಸಿದ್ದೆ. ಅಧ್ಯಕ್ಷರು ಪ್ರತಿಯೊಂದನ್ನೂ ಪರಿಶೀಲಿಸಿದರು. ಅವರಿಗೆ ತುಂಬಾ ಆನಂದವಾಯಿತು. ವಯಸ್ಕರ ಶಿಕ್ಷಣ ಸಮಿತಿಯ ತಾಲ್ಲೂಕು ಸಂಚಾಲಕರನ್ನು ಕರೆದು “ಈ ಹುಚ್ಚಪ್ಪನವರಿಗೆ ವಿದ್ಯಾಪೀಠಕ್ಕೆ ಕಳುಹಿಸಿ. ಅವರು ಹೆಚ್ಚಿನ ಶಿಕ್ಷಣ ಪಡೆದು ಬರಲಿ” ಎಂದು ಹೇಳಿದರು. ನಾನು ಅದೇ ವರ್ಷ ಹಾಸನ ವಿದ್ಯಾಪೀಠಕ್ಕೆ ಹೋದೆ. ಹಾಸನ ವಿದ್ಯಾಪೀಠದಲ್ಲಿ ಗಾಂಧೀಜಿಯವರ ಸೇವಾಗ್ರಾಮ ಆಶ್ರಮದಲ್ಲಿದ್ದ ಟಿ.ಆರ್. ಗೋವಿಂದರಾವ್ ಎಂಬುವವರು ಪ್ರಾಚಾರ್ಯರಾಗಿದ್ದರು. ಇವರು ಗಾಂಧೀಜಿಯವರ ಜೊತೆಗೆ ಅನೇಕ ವರ್ಷಗಳ ಕಾಲ ಇದ್ದು ಬಂದಂಥವರು. ಅಪ್ಪಟ ಗಾಂಧಿವಾದಿ. ನಾನು ಅವರ ವ್ಯಕ್ತಿತ್ವಕ್ಕೆ ಆಕರ್ಷಿತನಾದೆ. ನನಗೆ ಪ್ರತಿಯೊಂದು ವಿಷಯದಲ್ಲಿಯೂ ತರಬೇತಿ ನೀಡಿದರು. ನನ್ನ ಕಂಠವನ್ನು ನೋಡಿ ಪರಿಶಿಷ್ಟ ಜಾತಿಯ ಲಕ್ಕಯ್ಯ ಎಂಬುವವರನ್ನು ಕೋಲಾಟ ಕಲಿಸಲು ಶಿಕ್ಷಕರಾಗಿ ನೇಮಿಸಿದರು. ಲಕ್ಕಯ್ಯನವರು ಮೂರು ತಿಂಗಳು ವಿದ್ಯಾಪೀಠದಲ್ಲಿಯೇ ಇದ್ದು ಕೋಲಾಟವನ್ನು ಚೆನ್ನಾಗಿ ಕಲಿಸಿದರು. ನಾನು ಅವರು ಹೇಳುತ್ತಿದ್ದ ನೂರಾರು ಹಾಡುಗಳನ್ನು ಬರೆದುಕೊಂಡು ರಾಗಗಳನ್ನು ಕಲಿತುಕೊಂಡೆ. ಹಾಡುಗಳಿಗೆ ಸರಿಯಾಗಿ ಕೋಲು ಹಾಕುವುದನ್ನು ಕಲಿತುಕೊಂಡೆ. ವಿದ್ಯಾಪೀಠದಲ್ಲಿ ಗುರುಗಳ ಜೊತೆಗೆ ಒಂದೂವರೆ ವರ್ಷ ಇದ್ದೆ. ವಿದ್ಯಾಪೀಠದ ಶಿಕ್ಷಣದ ಅವಧಿ ಕೇವಲ ಆರು ತಿಂಗಳು. ಗುರುಗಳು ನನ್ನ ಆಸಕ್ತಿ ನೋಡಿ ಒಂದು ವರ್ಷಕ್ಕೆ ಹೆಚ್ಚಿಗೆ ಇಟ್ಟುಕೊಂಡರು. ಅಷ್ಟರಲ್ಲಿ ಗುರುಗಳನ್ನು ಹೆಚ್ಚಿನ ಶಿಕ್ಷಣಕ್ಕೆ ಡೆನ್ಮಾರ್ಕ್, ಸ್ವೀಡನ್ ಮುಂತಾದ ದೇಶಗಳಿಗೆ ವಿದೇಶ ಪ್ರವಾಸಕ್ಕೆ ಕಳುಹಿಸಿದರು. ಗುರುಗಳಿಲ್ಲದೇ ಇರುವಾಗ ನನಗೆ ಅಲ್ಲಿರುವುದು ಕಷ್ಟವಾಯಿತು. ನಾನು ತಕ್ಷಣ ಊರಿಗೆ ವಾಪಸು ಬಂದುಬಿಟ್ಟೆ.

                ಊರಿಗೆ ಬಂದನಂತರ ನಾನು ಮೊದಲು ಮಾಡಿದ ಕೆಲಸ ಹನ್ನೆರಡು ಜನ ಯುವಕರ ತಂಡ ಮಾಡಿಕೊಂಡು ಕೋಲಾಟ ಕಲಿಸಲು ಪ್ರಾರಂಭ ಮಾಡಿದ್ದು. ಸತತವಾಗಿ ಮೂರು ತಿಂಗಳು ಕೋಲಾಟದ ತರಬೇತಿಯನ್ನು ನೀಡಿ ಉತ್ತಮವಾದ ಕೋಲಾಟ ತಂಡವನ್ನು ತಯಾರು ಮಾಡಿದೆ. ತಂಡಕ್ಕೆ ಶ್ರೀ ರಾಮೇಶ್ವರ ಜಾನಪದ ಕಲಾತಂಡ, ಕುಗ್ವೆ ಎಂದು ಹೆಸರಿಟ್ಟೆ. ಅಷ್ಟರಲ್ಲಿ ಕಾರ್ತಿಕ ಮಾಸ ಪ್ರಾರಂಭವಾಯಿತು. ಪ್ರಥಮವಾಗಿ ಕಾನ್ಲೆ ಗ್ರಾಮದ ಪಡವಗೋಡು ಗ್ರಾಮದಲ್ಲಿ ಕಾರ್ತಿಕದ ದಿವಸ ಕೋಲಾಟ ಆಡಲು ವೀಳ್ಯಾ ಕೊಟ್ಟು ಆಹ್ವಾನಿಸಿದರು. ಮಲೆನಾಡಿನಲ್ಲಿ ಪ್ರತಿ ಊರಿನಲ್ಲಿ ಕಾರ್ತಿಕ ಮಾಸದಲ್ಲಿ ಊರಿನಲ್ಲಿರುವ ದೇವರುಗಳಿಗೆ ದೀಪೋತ್ಸವ ಮಾಡುತ್ತಾರೆ. ದೀವರು ವಾಸ ಮಾಡುವ ಪ್ರತಿ ಹಳ್ಳಿಯಲ್ಲಿಯೂ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಸುತ್ತಾರೆ. ರಾತ್ರಿ ಮನರಂಜನೆಗಾಗಿ ಕೋಲಾಟ, ಜೋಗೇರಾಟ, ಮೂಡಲಪಾಯ ಬಯಲಾಟ ಇವುಗಳಲ್ಲಿ ಯಾವುದಾದರೂ ಒಂದು ಪ್ರದರ್ಶನ ಮಾಡಿಸುತ್ತಾರೆ. ನಾವು ಪಡವಗೋಡಿಗೆ ಹೋಗಿ ರಾತ್ರಿ ಹತ್ತಕ್ಕೆ ಪ್ರಾರಂಭ ಮಾಡಿ ಮರುದಿವಸ ಬೆಳಗ್ಗೆ ಆರು ಗಂಟೆಯವರೆಗೆ ಕೋಲಾಟ ಆಡಿದೆವು. ಜನ ಹುಚ್ಚೆದ್ದು ಕುಣಿದರು. ಸಾಗರ ತಾಲ್ಲೂಕಿನಲ್ಲಿಯೇ ಇಂತಹ ತಂಡ ಇಲ್ಲವೆಂದು ಮೆಚ್ಚುಗೆ ಸುರಿಸಿದರು. ಕೋಲಾಟದ ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು. ಹಳ್ಳಿಯವರ ಬಾಯಲ್ಲಿ ಕುಗ್ವೆ ಯುವಕರ ಕೋಲಾಟದ್ದೇ ಮಾತಾಯಿತು.

                ಈ ಪ್ರದರ್ಶನ ನಡೆದು ಹದಿನೈದು ದಿವಸಗಳ ನಂತರ ನೇರ್ಲಿಗೆ ಎಂಬ ಗ್ರಾಮದಲ್ಲಿ ಕೋಲಾಟದ ಜೋಡಾಟವನ್ನು ಆಡಿಸಿದರು. ಕುಗ್ವೆ ಊರಿನ ಯುವಕರಿಗೆ ಗೆಲ್ಲಲೇಬೇಕು ಎಂದು ಹುರುಪಿನಿಂದ ಕೋಲಾಟದ ತಂಡದವರ ಜೊತೆಗೆ ನೂರಾರು ಜನ ಊರಿನವರು ಬಂದರು. ಜೋಡಾಟ ಆದರೆ ಎರಡೂ ತಂಡದವರಿಗೆ ವಿಶ್ರಾಂತಿ ಸಿಗುತ್ತದೆ. ನೇರ್ಲಿಗೆಯಲ್ಲಿ ರಾತ್ರಿ 10 ಗಂಟೆಗೆ ನಾನೇ ಪ್ರಥಮವಾಗಿ ಪ್ರಾರಂಭ ಮಾಡಿದೆ. ನಾವು 3-4 ಆಟ ಆಡಿ ನಿಲ್ಲಿಸಿದರೆ ಮತ್ತೊಂದು ತಂಡದವರು ಆಡಬೇಕು. ನಮ್ಮ ತಂಡದಲ್ಲಿ ಕೋಲಾಟಗಳಲ್ಲಿ ವೈವಿಧ್ಯತೆ ಇತ್ತು. ವಿವಿಧ ರಾಗಗಳ ಹಾಡುಗಳು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅದರಂತೆ ತಂಡದವರಿಂದ ಒಂದೇ ರೀತಿಯ ಒಂದೇ ರಾಗದ ಹಾಡುಗಳು. ಸುತ್ತುಕೋಲು ಮಾತ್ರ ಹಾಕುತ್ತಿದ್ದರು. ಬೆಳಗು ಹರಿಸಲು ಅವರಿಗೆ ಹಾಡುಗಳು ಇರಲಿಲ್ಲ. ನಾವು ಬೆಳಗ್ಗೆ ಆರು ಗಂಟೆಯವರೆಗೂ ಕೋಲಾಟ ಆಡಿದೆವು. ನೇರ್ಲಿಗೆಯಲ್ಲಿ ಜೋಡು ಕೋಲಾಟ ನಡೆದ ನಂತರ ಎಲ್ಲಾ ಹಳ್ಳಿಗಳಲ್ಲಿ ಕೋಲಾಟದ ತಂಡಗಳು ಹುಟ್ಟಿದವು. ಕೆಳದಿ, ಸೂರನಗದ್ದೆಯಲ್ಲಿ ಕೋಲುಮೇಳಗಳು ತಯಾರಾದವು.

                ಕ್ರಮೇಣ ಕರ್ನಾಟಕ ಸರ್ಕಾರದ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿವರ್ಷ ಯುವಜನ ಮೇಳಗಳನ್ನು ನಡೆಸಲು ಶುರು ಮಾಡಿದರು. ಮೇಳದಲ್ಲ್ಲಿ ಜನಪದ ಕಲೆಗಳು, ಜನಪದ ನೃತ್ಯ, ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಿ ಯುವಕ-ಯುವತಿಯರನ್ನು ಸೇರಿಸಿ ಎರಡು, ಮೂರು ದಿವಸ ಯುವಜನ ಮೇಳಗಳನ್ನು ಸಂಘಟಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಗ್ರಾಮೀಣ ಯುವಕ ಯುವತಿಯರಿಗೆ ಪ್ರೋತ್ಸಾಹ ನೀಡಿ ಜನಪದ ಕಲೆಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ.               

ಕೋಲಾಟ ತಂಡಗಳ ಪರಿಚಯ

                ಕೋಲಾಟ ಕಲೆ ಈಗ ಸಮೃದ್ಧಿಯಾಗಿ ಬೆಳೆದಿದೆ. ಪ್ರತಿ ಹಳ್ಳಿಗಳಲ್ಲಿಯೂ ಕೋಲಾಟದ ತಂಡಗಳಿವೆ. ಎಲ್ಲಾ ತಾಲ್ಲೂಕುಗಳಲ್ಲಿಯೂ ದೀವರು ಜನಾಂಗದ ಯುವಕರು ಕೋಲಾಟ ಕಲೆಯಲ್ಲಿ ಹಿಂದೆ ಬಿದ್ದಿಲ್ಲ. ಮಾದರಿಗಾಗಿ ನಾನು ಮೂರು ತಂಡಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಟ್ಟಿದ್ದೇನೆ.

ಶ್ರೀ ಭಾಗ್ಯೇಶ್ವರ ಜನಪದ ಕಲಾಸಂಘ-ಕೋಲಾಟ ತಂಡ

                ಈ ತಂಡದಲ್ಲಿ ಹದಿನಾಲ್ಕು ಯುವ ಕಲಾವಿದರಿದ್ದಾರೆ. ಹಾಡುವವರು ಎರಡು ಜನ. ಕೋಲಾಟಕ್ಕೆ ಕೋಲುಗಳು, ಗೆಜ್ಜೆ, ಕೊಳ್ಳಲುಗಳನ್ನು ಬಳಸುತ್ತಾರೆ.

                ಒಂದು ಅಡಿ ಕೋಲುಗಳು 24 (12 ಜೊತೆ)

                ಎರಡೂವರೆ ಅಡಿ ಉದ್ದ ಕೋಲು 12 (6 ಜೊತೆ)

ವೇಷಭೂಷಣಗಳು

                ತಲೆಗೆ ಕೆಂಪು ವಸ್ತ್ರ, ಕಪ್ಪುಬಣ್ಣದ ಬನೀನು, ಕುತ್ತಿಗೆ ಸುತ್ತ ಕೇಸರಿಬಣ್ಣದ ಟೇಪು ಹೊಲಿದಿರುತ್ತಾರೆ. ಬಿಳಿ ಬಣ್ಣದ ನಿಕ್ಕರು. ಎರಡೂ ಕೈಗೆ (ರಟ್ಟೆ) ಬಿಳಿಬಣ್ಣದ ಪ್ಲಾಸ್ಟಿಕ್ ಕುಚ್ಚುಗಳು. ಸೊಂಟಕ್ಕೆ ಹಸಿರುಬಟ್ಟೆಯ ಪಟ್ಟಿ. ಕೊರಳಿಗೆ ಕಪ್ಪುಬಣ್ಣದ ದಾರ ಇರುವ ಹಿಂಡಾಲಿಯಂ ಓಂ ಇರುವ ಪದಕ. ಕಾಲಿಗೆ ಗೆಜ್ಜೆ. ಬಿಳಿ ನಿಕ್ಕರುಗಳಿಗೆ ಎರಡೂ ಪಕ್ಕದಲ್ಲಿ ಕೆಳಭಾಗದಲ್ಲಿ ಸುತ್ತಲೂ ಕೆಂಪು ಪಟ್ಟಿ ಇರುತ್ತದೆ.

ತಂಡದ ಮುಖ್ಯಸ್ಥರು ಟಿ.ವಿ. ವಿರೂಪಾಕ್ಷಪ್ಪ, ತಂಗಳವಾಡಿ, ಅಂಚೆ:ಗಿಳಲಗುಂಡಿ, ಆನಂದಪುರಂ, ಸಾಗರ ತಾ.

ನೃತ್ಯ ಸ್ವರೂಪ

1) ಒಂದಾಳು ಸುತ್ತು

2) ಎರಡಾಳು ಸುತ್ತು

3) ಎರಡಾಳು ಬಾಗಿಲಾಟ

4) ಚಿತ್ತಾರೆ ಬೆನ್ನುಕೋಲು

5) ಎಂಟಾಳು ಗುರುತ

6) ಎರಡಾಳು ಕಬ್ಬಗೋಲು

7) ಎರಡಾಳು ದುಷ್ಮನ್

8) ಡಮಾಸು

9) ಮಜ್ಜಿಗೆ ಕಡೆಯುವುದು

10) ಪ್ಯಾರಾಚೂಟ್

11) ಚೌಕ

12) ಮಲಕು       

13) ಜಡೆ ದಂಡೆ

ಉದ್ದಕೋಲು

1) ಕಾಲಂಡ

2) ತಲೆತಿರುಕ (ಒಂದೇ ಚುಟಿಕೆ)

3) ಉದುರುಕೋಲು

4) ದಳಾಂದುಳಿ

ಪ್ರದರ್ಶನ

                ಮಂಗಳೂರು, ಉಡುಪಿ, ಶಿಕಾರಿಪುರ, ಶಿವಮಂದಿರ, ಸಾಲೂರು, ನಿಂಬೆಗೊಂದಿ, ಸಾಗರ ನಗರದಲ್ಲಿ ಗಾಮ (ಅನೇಕ ಸಾರಿ), ಆನಂದಪುರಂ, ಹೊಸೂರು, ಶಿವಮೊಗ್ಗ, ರಾಗ ಹೊಸಳ್ಳಿ (ಶಿವಮೊಗ್ಗ ತಾ.), ಶಿವಮೊಗ್ಗ, ಸೊರಬ, ಹೊಸನಗರ, ರೇವತಿಕೊಪ್ಪ ಇತ್ಯಾದಿ

 

ಸಾಹಿತ್ಯ-ಹಾಡುಗಳು

1) ರಿವಾಯತು ಹಾಡುಗಳು

2) ಸವಾಲು-ಜವಾಬು

3) ಕೋಲಾಟದ ಹಾಡುಗಳು

4) ಕಥನಗೀತೆಗಳು

5) ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ

6) ಅಣ್ಣ ತಂಗಿ

7) ಜೋಗದ ಜೋಕ್

 

ಶ್ರೀ ಗಜಾನನ ಜಾನಪದ ಕಲಾ (ತಂಡ) ಸಂಘ, ಕಾರಕ್ಕಿ-ಕೋಲುಮೇಳ

ಅಂಚೆ: ಕೋಡೂರು, ಹೊಸನಗರ ತಾಲ್ಲೂಕು

ತಂಡದ ಮುಖ್ಯಸ್ಥರು: ಎಂ.ವಿ. ಶಿವಪ್ಪ, ಮುತ್ತಲ, ಅಂಚೆ:ಕೋಡೂರು, ಹೊಸನಗರ ತಾಲ್ಲೂಕು

ಕಲಾವಿದರ ಸಂಖ್ಯೆ: 10 (ಹತ್ತು)

ವಾದ್ಯಗಾರರು: 02

ಹಾಡುವವರು: 02

ವಾದ್ಯಗಳು: ತಾಳ, ದಮ್ಮಡಿ

ಕೋಲುಗಳು: 24 (12 ಜೊತೆ)

                ಕೊಡಚ ಮತ್ತು ಕಾರೆ ಎಂಬ ಜಾತಿಯ ಗಿಡಗಳ ಕೋಲುಗಳನ್ನು ಬಳಸುತ್ತಾರೆ.

ವೇಷಭೂಷಣಗಳು

                ತಲೆಗೆ ಹಸುರು ವಸ್ತ್ರ, ಮೈಗೆ ಹಳದಿಬಣ್ಣದ ಜುಬ್ಬಾ, ಬಿಳಿ ಪಂಚೆ ಕಾಶಿ ಕಟ್ಟುತ್ತಾರೆ. ಸೊಂಟಕ್ಕೆ ಹಸುರು ವಸ್ತ್ರ, ಕಾಲಿಗೆ ಗೆಜ್ಜೆ.

 

 

ಪ್ರದರ್ಶನಗಳು

                ಹಬ್ಬ ಹರಿದಿನ, ಜಾತ್ರೆ, ರಥೋತ್ಸವ, ಮೆರವಣಿಗೆ, ಸಾರ್ವಜನಿಕ ಸಮಾರಂಭ, ಬ್ರಹ್ಮೇಶ್ವರ, ಮಾರುತಿಪುರ, ಬಾಣಿಗ, ಹೊಸನಗರ ನಗರ, ಚಕ್ರ, ಹುಂಚ, ರಿಪ್ಪನ್‍ಪೇಟೆ, ಚನ್ನಗಿರಿ, ಸೊರಬ, ಸಾಗರ, ಶಿವಮೊಗ್ಗ ಯುವಜನ ಮೇಳಗಳಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

                1992-93ರಲ್ಲಿ ಶಿವಮೊಗ್ಗ ಜಿಲ್ಲೆಯ ಅಕ್ಷರತುಂಗಾ ಸಾಕ್ಷರತಾ ಪ್ರೇರಣಾ ಜಾಥಾದಲ್ಲಿ ಭಾಗವಹಿಸಿ, ಹೊಸನಗರ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ, ಪ್ರದರ್ಶನ ನೀಡಿ, ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

                1991-92ರಲ್ಲಿ ಭಾರತೀಯ ಜ್ಞಾನ-ವಿಜ್ಞಾನ ಜಾಥಾದಲ್ಲಿ ಹೊಸನಗರ ತಾಲ್ಲೂಕಿನಾದ್ಯಂತ ಮಾಡಿದ ಪ್ರವಾಸ.

                ಹೊಸನಗರ ತಾಲ್ಲೂಕು ಕೆಲವು ಗ್ರಾಮಗಳಲ್ಲಿ ನಡೆದ ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಯ ಬಳೆಗಳನ್ನು ಪಡೆದಿರುತ್ತಾರೆ.

                1985 ಮೇ 10, 11 ಮತ್ತು 12ರಂದು ಶಿವಮೊಗ್ಗದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯವರು ನಡೆಸಿದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಪ್ರದರ್ಶನ.

 

ರಾಮಲಿಂಗೇಶ್ವರ ಜಾನಪದ ಕಲಾಸಂಘ (ಕೋಲುಮೇಳ)

ದಣಂದೂರು, ಕೆ. ಹುಣಸವಳ್ಳಿ (ಕೆರೆಹಳ್ಳಿ-ಹುಣಸವಳ್ಳಿ)

ತಂಡದ ಮುಖ್ಯಸ್ಥ: ಪುಟ್ಟನಾಯ್ಕ ಬಿನ್ ನಾಗಾನಾಯ್ಕ, ದಣಂದೂರು, ಅಂಚೆ: ಹರತಾಳು, ಹೊಸನಗರ ತಾಲ್ಲೂಕು

ಕಲಾವಿದರು: 12 ಜನ (ಹನ್ನೆರಡು)

ವಾದ್ಯಗಾರರು: 03 (ಮೂರು)

ಹಾಡುವವರು: 02 (ಎರಡು)

ವಾದ್ಯಗಳು: ತಾಳ, ದಮ್ಮಡಿ, ಝಲ್ಲರಿ

                ಕೊಡಚ ಎಂಬ ಜಾತಿಯ ಗಿಡದ ಕೋಲುಗಳು 24 (ಹನ್ನೆರಡು ಜೊತೆ).

ವೇಷಭೂಷಣಗಳು

                ತಲೆಗೆ ಕೆಂಪು ವಸ್ತ್ರ, ಸ್ಯಾಂಡೊ ಬಿಳಿ ಬನೀನು, ನೀಲಿ ನಿಕ್ಕರು, ಸೊಂಟಕ್ಕೆ ಹಳದಿ ವಸ್ತ್ರ.

 

ಕೋಲುಗಳು

1) ಮಲಕಿನ ಕೋಲು

2) ಚಿತ್ತಾರ ಕೋಲು

3) ಉದ್ದ ಕೋಲಾಟ

4) ಒಂಟಿ ಕೋಲು

5) ಸುತ್ತು ಕೋಲು

6) ಎರಡಾಳು ಸುತ್ತು

7) ಆಳು ಬಾಗಿಲು