ದೀವರು ಬಳಸುವ ಗೃಹಬಳಕೆಯ ವಸ್ತುಗಳು

ಮಣ್ಣಿನ ಸಾಮಾನುಗಳು

ದೀವರು ತುಂಬಾ ಹಿಂದಿನ ಕಾಲದಿಂದಲೂ ಮಣ್ಣು, ಮರ ಮತ್ತು ಕಂಚು, ಹಿತ್ತಾಳೆ, ತಾಮ್ರ, ಹಿಂಡಾಲಿಯಂ, ಅಲ್ಯುಮಿನಿಯಂ, ಸ್ಟೀಲು, ಕಬ್ಬಿಣ ಹೀಗೆ ಏಳು ಲೋಹಗಳಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಬಳಸುತ್ತಿದ್ದಾರೆ.

ಮಣ್ಣಿನ ಮಡಕೆಗಳು

ಹಿಂದಿನ ಕಾಲದಲ್ಲಿ ಅಡುಗೆ ತಯಾರಿಸಲು ಮಣ್ಣಿನ ಮಡಕೆಗಳು, ನೀರು ತುಂಬಿಟ್ಟುಕೊಳ್ಳಲು ಮಣ್ಣಿನ ಹರವಿಗಳು, ಕೊಡಗಳು, ಗಡಿಗೆಗಳು, ಬಾಣಿಗೆ, ಮಗೆ, ಮಣ್ಣಿನ ದೋಸೆ ಹಂಚು, ರೊಟ್ಟಿ ಹಂಚು, ಪಡ್ಡು ಹಂಚು, ಹುಗ್ಗಿ ಚಟಿಗೆ, ಹಾಲು ಚಟಿಗೆ, ಮಣ್ಣಿನ ಹಣತೆಗಳು, ಧೂಪಾರತಿ ಹೀಗೆ ಮಣ್ಣಿನಿಂದ ತಯಾರಿಸಿದ ಸಮಸ್ತ ವಸ್ತುಗಳನ್ನು ಕುಂಬಾರರು ತಯಾರಿಸುತ್ತಿದ್ದರು. ದೀವರ ಮನೆಗಳಲ್ಲಿ ಮಣ್ಣಿನ ಗಡಿಗೆಗಳು ಹೆಚ್ಚಾಗಿರುತ್ತಿದ್ದವು. ಮಣ್ಣಿನ ಗಡಿಗೆಗಳಲ್ಲಿ ತಯಾರಿಸಿದ ಅಡುಗೆಯನ್ನು ಊಟ ಮಾಡಿದರೆ ತುಂಬಾ ಆರೋಗ್ಯಕರ ಮತ್ತು ರುಚಿಯಾಗಿರುತ್ತದೆ ಎಂಬ ಭಾವನೆ ಇತ್ತು. ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಜನ ಮಣ್ಣಿನ ಗಡಿಗೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಮಡಕೆಯಲ್ಲಿ ಅಡುಗೆ ಮಾಡುವುದು ಅವಮಾನಕರ ಎಂದು ತಿಳಿದುಕೊಂಡಿದ್ದಾರೆ.

ಕಂಚಿನ ಪಾತ್ರೆಗಳು

ದೀವರ ಮನೆಗಳಲ್ಲಿ ಊಟ ಮಾಡುವ ಗಂಗಾಳಗಳು ಕಂಚಿನವು. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಎರಡು-ಮೂರು ತಂಬಿಗೆಗಳು, ಐದು-ಆರು ಗಂಗಾಳಗಳು, ಸೌಟು, ಸಟ್ಟುಗ, ಕಜ್ಜಾಯದ ಬಾಣಿಗೆ, ಲೋಟಗಳು, ಗಿಂಡಿಗಳು, ಸಣ್ಣ ಮತ್ತು ದೊಡ್ಡ ಹರಿವಾಣಗಳು, ಕನಿಷ್ಠ ಪಾತ್ರೆಗಳು ಇದ್ದೇ ಇರುತ್ತವೆ.

ಅನುಕೂಲಸ್ಥರ ಕುಟುಂಬಗಳಲ್ಲಿ ಕಂಚಿನ ಕೊಳದಪ್ಪಲೆ, ಚರಿಗೆಗಳು, ಆಲೆಮನೆಯಲ್ಲಿ ಬಳಸುವ ಆಲೆದಳ್ಳೆ (ಕಬ್ಬಿನ ಗಾಣದಿಂದ ಕಬ್ಬಿನ ಹಾಲು ಬೀಳುವ ದೊಡ್ಡ ಪಾತ್ರೆ), ದೊಡ್ಡ ತಪ್ಪಲೆಗಳು (ಎಲ್ಲಾ ಪಾತ್ರೆಗಳಿಗೆ ಕಲಾಯ ಹಾಕಿರುತ್ತಾರೆ), ಎಲೆ ತಬಕ, ಧೂಪಾರತಿ, ಆರತಿ ತಟ್ಟೆ, ದೀಪ ಹಚ್ಚುವ ಹೂಜಿಗಳು, ತಿರುಗಣಿ ಚೊಂಬು ಇತ್ಯಾದಿ ಪಾತ್ರೆಗಳು ಇರುತ್ತವೆ.

ತಾಮ್ರದ ಪಾತ್ರೆಗಳು

ಬಡವರ ಕುಟುಂಬಗಳಲ್ಲಿ ಎರಡು-ಮೂರು ತಾಮ್ರದ ಕೊಡಪಾನಗಳು ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತವೆ. ‘ಹರಿ ಇಡಕಲು’ ಮೇಲೆ ಇಡಲು ಒಂದು ಹಂಡೆ, ನೀರು ಕಾಯಿಸಲು ಒಂದು ಹಂಡೆ, ತಾಮ್ರದ ಕಜ್ಜಾಯದ ಬಾಣಿಗೆ ಪ್ರತಿಯೊಂದು ಕುಟುಂಬದಲ್ಲಿ ಇರುತ್ತವೆ. ತಾಮ್ರದ ಥಾಲಿ, ತಾಮ್ರದ ಸೀಮೆಎಣ್ಣೆಯ ಬುಡ್ಡಿದೀಪಗಳು, ಸೌಟು, ನಲ್ಡಿ ಮನೆ ಚೊಂಬು, ತಾಮ್ರದ ತಂಬಿಗೆ ಇವು ಎಷ್ಟೇ ಬಡವರಾಗಿದ್ದರೂ ದೀವರ ಮನೆಗಳಲ್ಲಿ ಇರುತ್ತವೆ.

ದೀವರಲ್ಲಿ ಆರ್ಥಿಕವಾಗಿ ಅನುಕೂಲವಾಗಿದ್ದವರು ತಾಮ್ರದ ಚರಿಗೆಗಳು, ತಾಮ್ರದ ಕೊಳದಪ್ಪಲೆ, ತಾಮ್ರದ ದಳ್ಳೆ, ತಾಮ್ರದ ಕೊಡಪಾನಗಳು, ತಾಮ್ರದ ಹಂಡೆಗಳು, ಕಜ್ಜಾಯದ ಬಾಣಿಗೆ, ತಾಮ್ರದ ಥಾಲಿ, ತಾಮ್ರದ ಬಕೆಟ್, ನಲ್ಡಿ ಚೊಂಬು, ಸೌಟು, ತಂಬಿಗೆ, ತಪ್ಪಲೆ, ಬೋಗುಣಿ ಇತ್ಯಾದಿ ಹೀಗೆ ತಾಮ್ರದ ಪಾತ್ರೆಗಳನ್ನು ಕೊಂಡು ಸಂಗ್ರಹ ಮಾಡಿರುತ್ತಾರೆ. ತಮ್ಮ ಕುಟುಂಬಗಳಲ್ಲಿ ಮದುವೆ, ಮುಂಜಿ, ದೇವರ ಕಾರ್ಯಗಳು ನಡೆದಾಗ ಸಾಮೂಹಿಕ ಭೋಜನದ ಅಡುಗೆಗೆ ಬೇಕಾಗುತ್ತವೆ ಎಂದು ಕೂಡಿಡುತ್ತಿದ್ದರು.

ಹಿತ್ತಾಳೆ ಪಾತ್ರೆಗಳು

ತಾಮ್ರದ ಪಾತ್ರೆಗಳನ್ನು ಕೊಂಡು ಕೂಡಿಡುವಂತೆ ಹಿತ್ತಾಳೆ ಪಾತ್ರೆಗಳನ್ನು ಕೊಂಡು ಕೂಡಿಡುತ್ತಿದ್ದರು. ಬಡವರಿಗೆ ಪಾತ್ರೆಗಳನ್ನು ಕೊಂಡು ಕೂಡಿಟ್ಟುಕೊಳ್ಳಲು ಆಗದಿದ್ದರೂ ಹಣವುಳ್ಳವರು ಎಲ್ಲಾ ರೀತಿಯ ಪಾತ್ರೆಗಳನ್ನು ಕೊಳ್ಳುತ್ತಿದ್ದರು. ಕುಟುಂಬದಲ್ಲಿ ಮದುವೆ, ದೇವರಕಾರ್ಯಗಳಿದ್ದಾಗ ನೂರಾರು ಜನಗಳಿಗೆ ಅಡುಗೆ ತಯಾರಿಸಲು ಈಗಿನಂತೆ ಹಿಂದೆ ಬಾಡಿಗೆಗೆ ಪಾತ್ರೆಗಳು ಸಿಗುತ್ತಿರಲಿಲ್ಲ. ಮೇಲ್ವರ್ಗದವರ (ಬ್ರಾಹ್ಮಣರು ಮತ್ತು ಲಿಂಗಾಯತರು) ಮನೆಗೆ ಹೋಗಿ ಕೇಳುವ ಹಾಗಿರಲಿಲ್ಲ. ಶೂದ್ರರು ಅವರ ಪಾತ್ರೆಗಳನ್ನು ಮುಟ್ಟುವಂತೆ ಇರಲಿಲ್ಲ. ಸಮಾಜದಲ್ಲಿ ಆ ಕಾಲದಲ್ಲಿ ಜಾತೀಯತೆ ತುಂಬಾ ಇತ್ತು.

ಅನಿವಾರ್ಯವಾಗಿ ದೀವರಲ್ಲಿ ಅನುಕೂಲವಾಗಿದ್ದವರು ಪ್ರತಿವರ್ಷ ಹಣ ಜೋಡಿಸಿಕೊಂಡು ದೊಡ್ಡ ದೊಡ್ಡ ಪಾತ್ರೆಗಳನ್ನು ಕೊಂಡುಕೊಳ್ಳಲು ಪ್ರಾರಂಭಿಸಿದರು. ತಮ್ಮ ತಮ್ಮ ಊರುಗಳಲ್ಲಿ ಮದುವೆಕಾರ್ಯಗಳು ನಡೆದಾಗ ಬಡವರಾದವರು ಹೋಗಿ ಕೇಳಿದರೆ ಉಳ್ಳವರು ಕೊಟ್ಟು ಸಹಕಾರ ನೀಡುತ್ತಿದ್ದರು.

ಹಿತ್ತಾಳೆಯ ಚರಿಗೆಗಳು, ಹಿತ್ತಾಳೆ ಕೊಳಗ, ಹಿತ್ತಾಳೆ ದಳ್ಳೆ, ಹಿತ್ತಾಳೆ ಕೊಳದಪ್ಪಲೆ, ಹಿತ್ತಾಳೆ ಲೋಟಗಳು, ಹಿತ್ತಾಳೆ ಬಕೆಟ್, ಹಿತ್ತಾಳೆ ತಂಬಿಗೆ, ಹಿತ್ತಾಳೆ ಪರಾತ, ಹಿತ್ತಾಳೆ ಸಣ್ಣ ಮತ್ತು ದೊಡ್ಡ ಹರಿವಾಣಗಳು, ಹಿತ್ತಾಳೆಯ ಕಜ್ಜಾಯದ ಬಾಣಿಗೆ ಇತ್ಯಾದಿ ಪಾತ್ರೆ ಸಾಮಾನುಗಳು; ಹಿತ್ತಾಳೆ, ತಾಮ್ರ, ಕಂಚಿನ ಪಾತ್ರೆಗಳಿಗೆ ಕಲಾಯ ಹಾಕಿಸುತ್ತಿದ್ದರು. ಕಲಾಯ ಹೋದರೆ ಪುನಃ ಕಲಾಯ ಹಾಕಿಸುತ್ತಿದ್ದರು.

ಹಿಂಡಾಲಿಯಂ ಮತ್ತು ಅಲ್ಯೂಮಿನಿಯಂ ಪಾತ್ರೆಗಳು

ದೀವರು ಹಿಂಡಾಲಿಯಂ ಮತ್ತು ಅಲ್ಯೂಮಿನಿಯಂ ಅಡುಗೆ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಕೊಡಗಳು, ತಂಬಿಗೆ, ಬಕೆಟ್‍ಗಳು ಸುಲಭ ಬೆಲೆಗೆ ದೊರಕುವುದರಿಂದ ಬಡವರಿಗೆ, ಹಳ್ಳಿಯವರಿಗೆ ತುಂಬಾ ಅನುಕೂಲವಾಗಿದೆ.

ಕಬ್ಬಿಣದ ಸಾಮಾನುಗಳು

ಕಬ್ಬಿಣದ ರೊಟ್ಟಿ ಹಂಚು, ದೋಸೆ ಹಂಚು, ಚುಂಚುಗ, ಈಳಿಗೆಮಣೆ, ಮುಂಡ್ಹಾರೆಗಳನ್ನು ಹೆಚ್ಚಾಗಿ ಹಳ್ಳಿಯವರು ಬಳಸುತ್ತಾರೆ.

ಇತ್ತೀಚೆಗೆ ಸ್ಟೀಲ್ ಪಾತ್ರೆಗಳ ಬಳಕೆ ಹೆಚ್ಚಾಗಿದೆ. ಕಂಚು, ತಾಮ್ರ, ಹಿತ್ತಾಳೆ ಪಾತ್ರೆಗಳ ಜೊತೆಗೆ ಸ್ಟೀಲ್ ಪಾತ್ರೆಗಳ ಬಳಕೆ ಹೆಚ್ಚಾಗಿದೆ. ಸ್ಟೀಲ್ ಅಡುಗೆ ಸಾಮಾನುಗಳನ್ನು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಬಳಸಲು ತೊಡಗಿದ್ದಾರೆ. ಬೀಸುವ ಕಲ್ಲಿನ ವ್ಯಾಸ ಎರಡು ಅಡಿ ಇರುತ್ತದೆ.

ಮಣ್ಣಿನ ಪಾತ್ರೆಗಳು

ಹರವಿ

                ಇದನ್ನು ಮಣ್ಣಿನಿಂದ ಕುಂಬಾರರು ತಯಾರಿಸುತ್ತಾರೆ. ನಾಲ್ಕು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿರುತ್ತದೆ. ಕುಡಿಯುವ ನೀರು, ಅಡುಗೆ ಮಾಡುವ ನೀರನ್ನು ಈ ಹರವಿಯಲ್ಲಿ ಹಾಕಿ ಅಡುಗೆಮನೆಯ ಹರಿ ಇಡಕಲು ಜಾಗದಲ್ಲಿ ಪ್ರಧಾನವಾಗಿ ಇಟ್ಟಿರುತ್ತಾರೆ. ಹರವಿಯ ಜೊತೆಯಲ್ಲಿ ಎರಡು ಕೊಡದಲ್ಲಿ ನೀರು ತುಂಬಿ ಇಟ್ಟಿರುತ್ತಾರೆ. ಹರವಿ, ಕೊಡಗಳು ಮಣ್ಣಿನಿಂದ ತಯಾರಿಸಲ್ಪಟ್ಟಿರುತ್ತವೆ.

ಅನ್ನದ ಗಡಿಗೆ

                ದಿನದ ಅನ್ನ ತಯಾರಿಸುವ ಗಡಿಗೆ. ಇದನ್ನು ಮಣ್ಣಿನಿಂದ ತಯಾರಿಸುತ್ತಾರೆ.

ಸಾರಿನ ಗಡಿಗೆ

                ಆಯಾಯ ದಿವಸಕ್ಕೆ ಬೇಕಾದ ತರಕಾರಿ ಸಾರು ಮಾಡುವ ಸಾಧನ. ಇದನ್ನು ಕೂಡ ಮಣ್ಣಿನಿಂದ ಮಾಡಿರುತ್ತಾರೆ.

ಮೀನು ಬೇಯಿಸುವ ಬಾಣಿಗೆ

                ಹಸಿ ಮತ್ತು ಒಣಮೀನು ಬೇಯಿಸಲು ಅಗಲ ಬಾಯುಳ್ಳ ಪ್ರತ್ಯೇಕವಾದ ಮಣ್ಣಿನ ಸಾಧನ.

ಕೋಳಿಮಾಂಸ ಬೇಯಿಸುವ ಗಡಿಗೆ

                ಕೋಳಿ ಮಾಂಸ ಬೇಯಿಸಲು ಅಗಲ ಬಾಯುಳ್ಳ ಕೊಳಗದ ಆಕಾರದ ಮಣ್ಣಿನ ಗಡಿಗೆ.

ಕುರಿ ಗಡಿಗೆ

                ಕುರಿ ಮಾಂಸ ಬೇಯಿಸುವ ಕೊಳತಪ್ಪಲಿ ರೀತಿಯ ಕೆಳಭಾಗ ಅಗಲವಿರುವ ಪಾಚಾಲಿ ಗಡಿಗೆ.

ಗವಲುಗಡಿಗೆ

                ಇದನ್ನು ಅಡುಗೆಯ ಪಾತ್ರೆಗಳ ಜೊತೆಗೆ ಸೇರಿಸದೆ ಹೊರಗಡೆ ಪ್ರತ್ಯೇಕವಾಗಿ ಇಡುತ್ತಾರೆ. ಕಾಡುಹಂದಿ ಮಾಂಸವನ್ನು ಮಾತ್ರೆ ಬೇಯಿಸಲು ಈ ಗಡಿಗೆಯನ್ನು ಬಳಸುತ್ತಾರೆ. ದೀವರು ಹಂದಿಯ ಮಾಂಸವನ್ನು ಒಳಗಡೆ ಒಲೆಯಲ್ಲಿ ಬೇಯಿಸುತ್ತಿರಲಿಲ್ಲ. ಪ್ರತ್ಯೇಕವಾದ ಒಲೆಯಲ್ಲಿ ಬೇಯಿಸುತ್ತಾರೆ.

ಹುಳಿಗಡಿಗೆ

                ತಂಬಳಿ ತಯಾರಿಸಲು ದೀವರ ಮನೆಗಳಲ್ಲಿ ಹುಳಿಗಡಿಗೆ ಎಂಬ ಪ್ರತ್ಯೇಕವಾದ ಗಡಿಗೆ ಇರುತ್ತದೆ. ಪ್ರತಿದಿವಸ ಬೇರೆ ಸಾರು ಮಾಡಿದರೂ ತಂಬಳಿಯನ್ನು ಪ್ರತ್ಯೇಕವಾಗಿ ಮಾಡುತ್ತಾರೆ.

ಹುಳಿಮಗೆ

                ಹೊಲಗಳಲ್ಲಿ ಕೆಲಸ ಮಾಡಲು ಹೋದಾಗ ಊಟ ತೆಗೆದುಕೊಂಡು ಹೋಗುವಾಗ ತಂಬಳಿಯನ್ನು ಈ ಮಗೆಯಲ್ಲಿ ತೆಗೆದುಕೊಂಡುಹೋಗುತ್ತಾರೆ. ಕುರಮ್ಸಲು ಬಳ್ಳಿಯಿಂದ ತಯಾರಿಸಿದ ಅಥವಾ ಬಿದಿರು ಅಥವಾ ವಾಟೆ ಹಾಗೂ ಸಾಮೆ ಬಿದಿರುಗಳನ್ನು ಸೀಳಿ ಬೆತ್ತವನ್ನು ಸೀಳಿ ಮೇದಾರರು ತಯಾರಿಸಿದ ಬುಟ್ಟಿಯಲ್ಲಿ ಕೆಳಗಡೆ ಬಾಳೆ ಎಲೆ ಹಸಿ ಅನ್ನ ಹಾಕಿಕೊಂಡು ಪಕ್ಕದಲ್ಲಿ ನಂಚಿಗೆ ಪಲ್ಲೆ ಹಾಗೂ ಪಕ್ಕದಲ್ಲಿ ಹುಳಿಮಗೆ ಇಟ್ಟುಕೊಂಡು ಹೊಲಗಳಿಗೆ ಹೋಗುತ್ತಾರೆ.

ತಿರಿಗೆ ಮಣೆ

                ದೀವರ ಸಮೂಹದಲ್ಲಿ ತಿರಿಗೆಮಣೆಗಳಿಲ್ಲದ ಕುಟುಂಬಗಳೇ ಇರುವುದಿಲ್ಲ. ಪ್ರತಿ ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವಾಗ ತಿರಿಗೆಮಣೆಯನ್ನು ಬಳುವಳಿಯಾಗಿ ಕೊಡುತ್ತಾರೆ. ಒಂದು ಅಡಿ ಉದ್ದ, ಒಂದು ಅಡಿ ಅಗಲ, ಐದು ಇಂಚು ಎತ್ತರವಿರುತ್ತದೆ. ಮಣೆಯ ಮೇಲ್ಭಾಗದಲ್ಲಿ ಕಮಲದ ಹೂವನ್ನು ಕೆತ್ತಿರುತ್ತಾರೆ. ಚಚ್ಚೌಕವಾಗಿ ತುಂಬಾ ಸುಂದರವಾಗಿ ಇರುತ್ತದೆ. ಮದುವೆ, ಚೌಲ, ಮನೆಯಲ್ಲಿ ನಡೆಯುವ ಶುಭಕಾರ್ಯಗಳಿಗೆ, ಹಬ್ಬ ಹರಿದಿನಗಳಲ್ಲಿ ಕಳಸ ಮಾಡುತ್ತಾರೆ. ಕಳಸವನ್ನು ತಿರಿಗೆಮಣೆಯ ಮೇಲೆ ಇಡುತ್ತಾರೆ. ಇದನ್ನು ಹಲಸು, ಬಿಲ್ಕಂಬಿ, ಬೀಟೆ, ಸಾಗುವಾನಿ, ಶಿವನೆ ಮರಗಳಿಂದ ತಯಾರಿಸುತ್ತಾರೆ.

ರೊಟ್ಟಿ ಹಂಚು

                ಪ್ರತಿದಿವಸ ರೊಟ್ಟಿ ಸುಡಲು ಬಳಸುವ ಸಾಧನ. ಇದನ್ನು ಮಣ್ಣಿನಿಂದ ತಯಾರಿಸುತ್ತಾರೆ.

ದೋಸೆ ಹಂಚು

                ದೋಸೆ ಮಾಡಲು ಬಳಸುವ ಸಾಧನ. ಇದನ್ನು ಕೂಡ ಮಣ್ಣಿನಿಂದ ತಯಾರಿಸುತ್ತಾರೆ.

ಕರಬಾನದ ಗಡಿಗೆ

                ಧಾನ್ಯಗಳನ್ನು ತುಂಬಿಡುವ ಗಡಿಗೆಗಳ ಸಾಲು.

ನಲ್ಡಿ ಹರವಿ

                ಬಚ್ಚಲುಮನೆಯಲ್ಲಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟಿರುವ ಸಾಧನ. ನಾಲ್ಕು-ಐದು ಕೊಡ ನೀರು ಹಿಡಿಯುವಂತಹ ಮಣ್ಣಿನಿಂದ ತಯಾರಿಸಿದ ಹರವಿ.

ಪಡ್ಡು ಹಂಚು

                ಪಡ್ಡು ಎಂಬ ತಿಂಡಿಯನ್ನು ತಯಾರಿಸುವ ಸಾಧನ. ಇಡ್ಲಿಯ ಹಾಗೆ ಒಂದೇ ಸಾರಿಗೆ ಐದಾರು ಪಡ್ಡನ್ನು ಬೇಯಿಸಬಹುದು.

ತುಪ್ಪದ ಚಟಿಗೆ

                ತುಪ್ಪವನ್ನು ಹಾಕಿಡುವ ಸಾಧನ. ಮಣ್ಣಿನಿಂದ ತಯಾರಿಸಿದ್ದು.

ಹುಗ್ಗಿ ಚಟಿಗೆ

                ಎಳೆಮಕ್ಕಳಿಗೆ ಹುಗ್ಗಿ ತಯಾರಿಸಲು ಮಣ್ಣಿನಿಂದ ತಯಾರಿಸಿದ ಸಾಧನ. ಅಕ್ಕಿಗೆ ಹಾಲು ಹಾಕಿ ಕರಗುವ ಹಾಗೆ ಬೇಯಿಸುತ್ತಾರೆ. ಚೆನ್ನಾಗಿ ಬೆಂದ ನಂತರ ಹುಗ್ಗಿ ಗೂಟದಿಂದ ತಿರುಗಿಸುತ್ತಾರೆ.

ಹಾಲು ಚಟಿಗೆ

                ಹಾಲು ಕಾಯಿಸಿ ಇಟ್ಟುಕೊಳ್ಳುವ ಸಾಧನ. ಇದು ಹುಗ್ಗಿ, ತುಪ್ಪದ ಚಟಿಗೆಗಳಿಗಿಂತ ದೊಡ್ಡದಾಗಿರುತ್ತದೆ.

ಧೂಪಾರತಿ

                ಪೂಜೆಯಲ್ಲಿ ಧೂಪಾರತಿಗೆ ಬೆಂಕಿ ಕೆಂಡಗಳ ಮೇಲೆ ಲೋಬಾನದ ಹೊಗೆ ಹಾಕುವ ಸಾಧನ.

ಮಣ್ಣಿನ ಹೂಜಿ

                ಕಾರ್ತಿಕ ಮಾಸ ದೀಪಾವಳಿ ಇತ್ಯಾದಿ ಕೆಲವು ಹಬ್ಬಗಳಲ್ಲಿ ದೀಪ ಹಚ್ಚಿ ಇಡುವ ಚಿಕ್ಕ ಸಾಧನ.

 

 

 

ಮಣ್ಣಿನ ಹಣತೆಗಳು

                ಹಳ್ಳಿಗಳಲ್ಲಿ ತುಂಬಾ ಹಿಂದಿನಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಹಿಂದೆ ಬೆಳಕಿಗಾಗಿ ಹಣತೆ ಹಚ್ಚಿ ಗೋಡೆಯ ಕನಾಟ್ಲುವಿನಲ್ಲಿ ಮತ್ತು ‘ದೀಪದ ಗುಡ್ಡ’ಗಳಲ್ಲಿ ಹಣತೆಯಲ್ಲಿ ಹರಳೆಣ್ಣೆ ದೀಪ ಹಚ್ಚಿ ಮನೆಯ ಎಲ್ಲಾ ಕೋಣೆಗಳಲ್ಲಿ ಇಡುತ್ತಿದ್ದರು.

ಒಬ್ಬಣಗಿತ್ತಿ ಕಜ್ಜಾಯ ಮಡಕೆ ಬಾಣಿಗೆ

                ಬೇಕರಿಯ ಬನ್ನಿನ ಆಕಾರದಲ್ಲಿರುವ ಕಜ್ಜಾಯದ ಬಾಣಿಗೆ. ಈ ಬಾಣಿಗೆಯಲ್ಲಿ ಒಂದೇ ಕಜ್ಜಾಯವನ್ನು ಬೇಯಿಸಬಹುದು.

ಮಣ್ಣಿನ ಖಾರದ ಬಟ್ಲು

                ತಿರುವ ಕಲ್ಲಿನಲ್ಲಿ ತಿರುಗಿಸಿದ ಖಾರವನ್ನು ಖಾರದ ಬಟ್ಟಲಿನಲ್ಲಿ ಹಾಕಿರುತ್ತಾರೆ.

ಹಿಟ್ಟಿನ ಗಡಿಗೆ

                ಬೀಸಿದ ಹಿಟ್ಟನ್ನು ಸಂರಕ್ಷಿಸಲು ಸುರಕ್ಷಿತವಾಗಿಡುವ ಸಾಧನ. ಹಿಟ್ಟು ತುಂಬಿದ ಗಡಿಗೆಯನ್ನು ಮುಚ್ಚಲು ಮುಚ್ಚಳವಿರುತ್ತದೆ.

ಮರದ ಸಾಮಾನುಗಳು

ಕೂರುವ ಮಣೆಗಳು

                ಹೆಚ್ಚು ಜನರಿರುವ ಕುಟುಂಬಗಳಲ್ಲಿ ಊಟಕ್ಕೆ ಕುಳಿತುಕೊಳ್ಳುವ ಮರದ ಹಲಗೆ-ಮಣೆಗಳು. ಸಾಮಾನ್ಯ  ಕುಟುಂಬಗಳಲ್ಲಿ ಎಂಟು-ಹತ್ತು ಮಣೆಗಳು ಇರುತ್ತವೆ. ದೊಡ್ಡ ಕುಟುಂಬಗಳಲ್ಲಿ ಹದಿನೈದು-ಇಪ್ಪತ್ತು ಮಣೆಗಳು ಇರುತ್ತದೆ. ಉದ್ದ ಹದಿನೈದು ಇಂಚು, ಅಗಲ ಹದಿನೈದು ಇಂಚು, ಎತ್ತರ ಎರಡು ಇಂಚು ಇರುತ್ತದೆ. ಕಾಡುಮರಗಳಾದ ಹಲಸು, ಹೊನ್ನೆ, ಮತ್ತಿ, ಹುನಾಲು, ನಂದಿ ಮರಗಳ ಹಲಗೆಯಿಂದ ತಯಾರಿಸಿರುತ್ತಾರೆ.

ರೊಟ್ಟಮರಗಿ

                ದೀವರು ಬೆಳಗಿನ ತಿಂಡಿಗೆ ಹೆಚ್ಚಾಗಿ ರೊಟ್ಟಿ ಮಾಡುತ್ತಾರೆ. ರೊಟ್ಟಿಹಿಟ್ಟಿಗೆ ಸ್ವಲ್ಪ ಬಿಸಿ ಅನ್ನ ಹಾಕಿ ಸೇರಿಸಿ ಮಿಲಿದುಕೊಳ್ಳುತ್ತಾರೆ. ನಂತರ ರೊಟ್ಟಿಯ ಆಕಾರ ಕೊಟ್ಟು ರೊಟ್ಟಿ ಹಂಚಿನಲ್ಲಿ ಸುಡುತ್ತಾರೆ. ಮರಗಿ ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲವಿರುತ್ತದೆ. ಕೆಲವು ರೊಟ್ಟಿ ಹಂಚುಗಳು ರೌಂಡ್ ಆಗಿ, ಚಚ್ಚೌಕವಾಗಿ ಮತ್ತು ಬಾದಾಮಿ ಆಕಾರದಲ್ಲಿ ಇರುತ್ತವೆ.

 

ಗಂಜಿ ಮರಗಿ

                ಗಡಿಗೆಯಲ್ಲಿ ಬೇಯಿಸಿದ ಅನ್ನ ಬೆಂದಕೂಡಲೇ ಗಂಜಿ ಬಸಿಯುವಾಗ ಉಪಯೋಗಿಸುವ ಮರದ ಸಾಧನ. ಒಂದೂವರೆ ಅಡಿ ಉದ್ದ, ಅರ್ಧ ಅಡಿ ಅಗಲ, ಅರ್ಧ ಅಡಿ ಎತ್ತರವಿರುತ್ತದೆ. ಇದನ್ನು ಗೊದ್ಲು, ಹಲಸು ಜಾತಿಯ ಮರದಿಂದ ತಯಾರಿಸಿರುತ್ತಾರೆ.

ಮರತಟ್ಟೆ

                ಅನ್ನದಲ್ಲಿರುವ ಬಿಸಿಗಂಜಿ ಬಸಿಯುವ ಸಾಧನ. ಗೊದ್ಲ ಅಥವಾ ಹಲಸಿನ ಮರದಿಂದ ತಯಾರಿಸಿರುತ್ತಾರೆ. ಒಂದು ಅಡಿ ವ್ಯಾಸವುಳ್ಳ ದುಂಡಾಕೃತಿಯಾಗಿರುತ್ತದೆ.

ಸಿಬ್ಲ

                ಬಿದಿರು ಅಥವಾ ಸಾಮೆಯಿಂದ ತಯಾರಿಸಿದ ಒಂದು ಅಡಿ ಸುತ್ತಳತೆಯ ದುಂಡಾಕಾರದ ಸಾಧನ. ಮರತಟ್ಟೆಯ ಕೆಳಗೆ ಇಟ್ಟು ಅನ್ನ ಬಸಿಯಲು ಉಪಯೋಗಿಸುತ್ತಾರೆ.

ರೊಟ್ಟಿ ಮಣೆ

                ಮಣೆಯ ಮೇಲೆ ಒದ್ದೆಯಾದ (ನೆನೆಸಿದ) ತೆಳುವಾದ ಬಟ್ಟೆ ಹಾಕಿಕೊಂಡು ಮಿಲಿದ ಹಿಟ್ಟಿನ ಉಂಡೆಯನ್ನಿಟ್ಟು ಕೈಯಲ್ಲಿ ಬಡಿಯುತ್ತಾರೆ. ನಂತರ ಹಂಚಿಗೆ ಹಾಕಿ ಸುಡುತ್ತಾರೆ.

ಉಪ್ಪಿನ ಮರಗಿ

                ದಿನಬಳಕೆಯ ಉಪ್ಪು ಹಾಕಿ ಇಡುವ ಮರದಿಂದ ತಯಾರಿಸಿದ ಮೇಲ್ಭಾಗದಲ್ಲಿ ಮುಚ್ಚಳವಿರುವ ಸಾಧನ.

ಖಾರದ ಬಟ್ಟಲು

                ಖಾರ, ಹುಳಿ, ಅರಿಶಿನಗಳನ್ನು ಪ್ರತ್ಯೇಕವಾಗಿ ತಿರುವ ಕಲ್ಲಿನಲ್ಲಿ ತಿರುವಿ ಖಾರದ ಬಟ್ಟಲಲ್ಲಿ ಇಟ್ಟುಕೊಳ್ಳುತ್ತಾರೆ. ಇದನ್ನು ಮರದಿಂದ ತಯಾರಿಸಿರುತ್ತಾರೆ. ಮೇಲ್ಗಡೆ ಮುಚ್ಚಳವಿರುತ್ತದೆ.

ಗೆರಸಿ

                ಕುಂಮ್ಸಲು ಎಂಬ ಜಾತಿಯ ಬಳ್ಳಿಯಿಂದ ತಯಾರಿಸಿದ ಸಾಧನ. ಇದನ್ನು ಬಿದಿರಿನಿಂದಲೂ ಮೇದಾರರು ತಯಾರಿಸುತ್ತಿದ್ದರು. ಒಂದೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲವಾಗಿ, ನಾಲ್ಕು ಮೂಲೆ ಚೌಕವಾಗಿ ಇರುತ್ತದೆ. ಬೇಸಿಗೆಯಲ್ಲಿ ಬಿಸಿ ಅನ್ನವನ್ನು ಗೆರಸಿಗೆ ಹಾಕಿ ತಣಿಸುತ್ತಿದ್ದರು. ಅನ್ನ ಆರಿದ ಮೇಲೆ ಅನ್ನದ ಗಡಿಗೆಗೆ ತುಂಬಿ ಇಡುತ್ತಿದ್ದರು.

 

ಸಾಣಿಗೆ

                ಸಾಣಿಗೆಯನ್ನು ಮೇದಾರರು ತಯಾರಿಸುತ್ತಾರೆ. ಬೆತ್ತದ ಸೀಳಿನಿಂದ ಕಂಡಿಗಳನ್ನು ಬಿಟ್ಟು ನಾಜೂಕಾಗಿ ಹೆಣೆಯುತ್ತಾರೆ. ಅಕ್ಕಿ ನೆಲ್ಲು, ನುಚ್ಚು, ಕಡಿ ಅಕ್ಕಿಯನ್ನು ತೆಗೆದು ಅಕ್ಕಿಯನ್ನು ಸ್ವಚ್ಛಗೊಳಿಸಲು ಉಪಯೋಗಿಸುತ್ತಾರೆ.

ಕೇರುವ ಮೊರಗಳು

                ಬಿದಿರಿನಿಂದ ಮೇದಾರರು ತಯಾರಿಸುತ್ತಾರೆ. ಅಕ್ಕಿಯಲ್ಲಿರುವ ಧೂಳು ನೆಲ್ಲು, ನುಚ್ಚು ತೆಗೆಯಲು ಮೊರಗಳನ್ನು ಬಳಸುತ್ತಾರೆ. ಅಕ್ಕಿಯನ್ನು ಸ್ವಚ್ಛಗೊಳಿಸಲು ಮೊರಗಳು ಬೇಕು.

ಗೂಡು

                ಬಿದಿರು, ಸಾಮೆ, ವಾಟೆ ಜಾತಿಯ ಬಿದಿರಿನಿಂದ ಮೇದಾರರು ಗೂಡು ತಯಾರಿಸುತ್ತಾರೆ. ಮೇದಾರರಿಂದ ಕೊಂಡುಕೊಳ್ಳುತ್ತಾರೆ. ಹೊಸ ಗೂಡಿಗೆ ಸಗಣಿ ಹಚ್ಚಿ ಗೂಡನ್ನು ಚೆನ್ನಾಗಿ ಸಾರಿಸಿ ನಯವಾಗಿ ಮಾಡಿಕೊಳ್ಳುತ್ತಾರೆ. ಕುಚ್ಚಲಕ್ಕಿ ಮತ್ತು ಬೆಣತಕ್ಕಿಗೆ ಪ್ರತ್ಯೇಕವಾಗಿ ಗೂಡುಗಳಿರುತ್ತವೆ. ಗೂಡಿನಲ್ಲಿ ಇಪ್ಪತ್ತು ಕೊಳಗ (60 ಸೇರು) ಅಕ್ಕಿಯನ್ನು ತುಂಬಿಡುತ್ತಿದ್ದರು. ನಿತ್ಯ ಬಳಸುವ ಅಕ್ಕಿಯನ್ನು ಗೂಡಿನಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು.

ದೀಪದ ಗುಡ್ಡ

                ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯತ್ ಸಂಪರ್ಕವಿರುತ್ತಿರಲಿಲ್ಲ. ಮನೆಗಳಲ್ಲಿ ಬೆಳಕಿಗೆ ಸೀಮೆಎಣ್ಣೆ, ಹರಳೆಣ್ಣೆ ದೀಪಗಳನ್ನು ಬಳಸುತ್ತಿದ್ದರು. ಎಲ್ಲಾ ದೀಪದ ಬೆಳಕು ಹರಡುವಂತೆ ನೆಲದಿಂದ ಸ್ವಲ್ಪ ಎತ್ತರದಲ್ಲಿ ದೀಪವನ್ನು ಇಟ್ಟುಕೊಳ್ಳಲು ದೀಪದ ಗುಡ್ಡಗಳನ್ನು ಬಳಸುತ್ತಿದ್ದರು. ದೀಪದ ಗುಡ್ಡ ಕೆಳಭಾಗ ನೆಲದ ಮೇಲೆ ಗಟ್ಟಿಯಾಗಿ ನಿಂತುಕೊಳ್ಳಲು ಸ್ವಲ್ಪ ಅಗಲವಾಗಿ, ಮಧ್ಯಭಾಗ ತೆಳುವಾಗಿ, ಮೇಲ್ಭಾಗ ದೀಪಗಳನ್ನು ಇಟ್ಟುಕೊಳ್ಳಲು ಸ್ವಲ್ಪ ಅಗಲವಾಗಿರುತ್ತದೆ. ಕಾಡುಜಾತಿಯ ಮರದಿಂದ ತಯಾರಿಸುತ್ತಾರೆ. ಎರಡು ಅಡಿ ಎತ್ತರವಿರುತ್ತದೆ. ಕೆಳಭಾಗ ಮತ್ತು ಮೇಲ್ಭಾಗ ಮೂರು ಇಂಚು ವ್ಯಾಸದಲ್ಲಿ ದುಂಡಾಗಿರುತ್ತದೆ.

ಕನಾಟ್ಲು

                ಮನೆಯ ಗೋಡೆಯನ್ನು ಕಟ್ಟುವಾಗ ಪ್ರತಿ ಕೋಣೆಗೂ ದೀಪ ಇಡಲು ಅನುಕೂಲವಾಗುವಂತೆ ಕನಾಟ್ಲುಗಳನ್ನು ತ್ರಿಕೋನಾಕೃತಿಯಲ್ಲಿ ಮಾಡಿರುತ್ತಾರೆ. ಎತ್ತರದಲ್ಲಿ ದೀಪಗಳನ್ನು ಇಡುವುದರಿಂದ ಮನೆಯ ಎಲ್ಲಾ ಕಡೆ ಬೆಳಕು ಹರಡುತ್ತದೆ.

 

 

ದೀಪದ ಕೈ

                ಮನೆಯಲ್ಲಿ ರಾತ್ರಿ ಹೊತ್ತು ದೀಪಗಳನ್ನಿಟ್ಟುಕೊಳ್ಳಲು ಮನೆಯ ಗೋಡೆ ಅಥವಾ ಮನೆಯ ಮುಂಡಿಗೆಗಳಿಗೆ ಮೊಳೆ ಹೊಡೆದು ಇಡುವ ದೀಪದ ಕೈಗಳು. ಯಾವುದಾದರೂ ಕಾಡುಜಾತಿಯ ಮರಗಳಿಂದ ತಯಾರಿಸುತ್ತಾರೆ.

ಬೆಸಲುಕಳಿ

                ಮನೆಯ ಅಡುಗೆಮನೆ, ಬಚ್ಚಲು ಒಲೆಯ ಮೇಲೆ ಬಿದಿರು ದಬ್ಬೆಗಳನ್ನು ಚೌಕಾಕಾರದಲ್ಲಿ ಕಟ್ಟಿ ಒಲೆಗಳ ಮೇಲೆ ಕಟ್ಟುವ ಸಾಧನಕ್ಕೆ ‘ಬೆಸಲುಕಳಿ’ ಎಂದು ಕರೆಯುತ್ತಾರೆ. ಅಡುಗೆ ಒಲೆಯ ಮೇಲಿರುವ ಬೆಸಲುಕಳಿ ಮೇಲೆ ಹಬ್ಬಗಳಲ್ಲಿ ದೇವರಿಗೆ ಒಡೆದ ತೆಂಗಿನಕಾಯಿ ಹೋಳುಗಳನ್ನು ಒಣಗಿಸಲು ಕಳಿ ಮೇಲೆ ಇಡುತ್ತಾರೆ. ಭತ್ತವನ್ನು ಕುಚ್ಚಿ ಕುಚ್ಚಲಕ್ಕಿ ಮಾಡಿಕೊಳ್ಳಲು ಕಳಿ ಮೇಲೆ ಒಣಗಿಸುತ್ತಾರೆ. ಮನೆಯ ಜಗಲಿ ಒಲೆಯ ಬೆಸಲಕಳಿ ಮೇಲೆ ಮಳೆಗಾಲದಲ್ಲಿ ಒದ್ದೆಯಾದ ಕಂಬಳಿಗಳನ್ನು ಕಳಿಯ ಮೇಲೆ ಹಾಕಿ ಒಣಗಿಸಿಕೊಳ್ಳಲು ಮತ್ತು ಒದ್ದೆಯಾದ ಮೈಯನ್ನು ಬೆಂಕಿ ಕಾಯಿಸಿ ಒಣಗಿಸಿಕೊಳ್ಳಲು ಉಪಯೋಗಿಸುತ್ತಾರೆ. ಬೆಸಲಕಳಿ ಹಳ್ಳಿಗರಿಗೆ ಉಪಯುಕ್ತ.

ಸಾಂಬಾರು ಬಟ್ಟಲು

                ಮರದಿಂದ ತಯಾರಿಸಿದ ಸಾಧನ. ಮೇಲ್ಗಡೆ ಮುಚ್ಚಲು ಮುಚ್ಚಳವಿರುತ್ತದೆ. ಅಡುಗೆಮನೆಯಲ್ಲಿ ಸದಾಕಾಲ ಬೇಕಾಗುವ ಜೀರಿಗೆ, ಸಾಸಿವೆ, ಮೆಂತೆ, ಮೆಣಸಿನಕಾಳು, ಗಸಗಸೆ, ಕಡ್ಲೆಬೇಳೆ, ಉದ್ದಿನಬೇಳೆ ಮುಂತಾದ ಸಾಂಬಾರಪದಾರ್ಥಗಳನ್ನು ಇಟ್ಟುಕೊಳ್ಳುವ ಸಾಧನ.

ಹಾಲಕಂಬ

                ಮೊಸರು ಕಡೆಯಲು ಕಡಗೋಲನ್ನು ಕಟ್ಟಿಕೊಳ್ಳುವ ಕಂಬ. ಅಡುಗೆಮನೆಯ ಒಂದು ಮೂಲೆಯಲ್ಲಿ ನಿಲ್ಲಿಸಿರುತ್ತಾರೆ. ಇದು ‘ಮದ್ದಾಲೆ’ ಎಂಬ ಜಾತಿಯ ಮರದ ಕೊಂಬೆ. ಕಡಿದಾಗ ಹಾಲು (ಬಿಳಿಬಣ್ಣದ ದ್ರವ) ಹೊರಡುತ್ತದೆ. ಕಂಬದ ಮೇಲೆ ನಾಲ್ಕು ಅಥವಾ ಐದು ‘ಕವೆ’ಗಳಿರುತ್ತವೆ.

ಮೊಸರು ಮಜ್ಜಿಗೆ ಗಡಿಗೆ

                ಮೊಸರು ಕಡೆಯುವ ಮಣ್ಣಿನ ಗಡಿಗೆ. ಮೊಸರು ಕಡೆಯುವ ಹಿಂದಿನ ರಾತ್ರಿ ಹಾಲನ್ನು ಚೆನ್ನಾಗಿ ಕಾಯಿಸಿ ಆರಿಸಿ ಇಡಬೇಕು. ನಂತರ ಸ್ವಲ್ಪ ಮಜ್ಜಿಗೆಯನ್ನು ಹಾಲಿ ಹೆಪ್ಪು ಹಾಕಬೇಕು. ಮಾರನೇ ದಿವಸ ಮೊಸರು ಗಡಿಗೆಯ ಒಳಗೆ ಕಡೆಗೋಲನ್ನು ಇಟ್ಟು ಕಡೆದಾಗ ಬೆಣ್ಣೆ, ಮಜ್ಜಿಗೆ ಬರುತ್ತದೆ.

 

 

ಕಡಗೋಲು

                ಹಾಲನ್ನು ಚೆನ್ನಾಗಿ ಕಾಯಿಸಿ ಆರಿಸಬೇಕು. ರಾತ್ರಿ ಸ್ವಲ್ಪ ಮಜ್ಜಿಗೆಯನ್ನು ಹೆಪ್ಪು ಹಾಕಬೇಕು. ಮಾರನೆ ದಿವಸ ಬೆಳಗ್ಗೆ ಎದ್ದು ಮೊಸರು ಗಡಿಗೆಯಲ್ಲಿ ಕಡಗೋಲನ್ನು ಇಟ್ಟು ಕಡೆದಾಗ ಬೆಣ್ಣೆ ಬರುತ್ತದೆ. ಬೆಣ್ಣೆಯನ್ನು ತೆಗೆದಾಗ ಮಜ್ಜಿಗೆ ಉಳಿಯುತ್ತದೆ. ಬೆಣ್ಣೆಯನ್ನು ಕಾಯಿಸಿದಾಗ ತುಪ್ಪ ಬರುತ್ತದೆ. ಕಡಗೋಲನ್ನು ತಯಾರಿಸಲು ಹಲಸು, ತೇಗ, ಹೊನ್ನೆ, ಮತ್ತಿ ಮರವನ್ನು ಬಳಸುತ್ತಾರೆ.

ಸಿಕ್ಕ

                ಮಲೆನಾಡಿನಲ್ಲಿ ದೀವರ ಮನೆಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಸಿಕ್ಕಗಳು ಇರುತ್ತವೆ. ಹಾಲು, ಮೊಸರು, ಮಜ್ಜಿಗೆಗಳಿಗೆ ರಕ್ಷಿಸಲು ಸಿಕ್ಕಗಳ ಮೇಲೆ ಎತ್ತರದಲ್ಲಿ ಇಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಸಿಕ್ಕಗಳಿಗೆ ‘ನೆಲವು’ ಎಂದು ಕರೆಯುತ್ತಾರೆ. ‘ಪುಂಡಿ’ ಎಂಬ ಜಾತಿಯ ಗಿಡದ ನಾರಿನಿಂದ ಹುರಿ ಮಾಡಿ ಈ ಹಗ್ಗದಿಂದ ಸಿಕ್ಕಗಳನ್ನು ತಯಾರಿಸುತ್ತಾರೆ.

ಬೀಸುವ ಕಲ್ಲು

                ಬೀಸುವ ಕಲ್ಲು ದೀವರಿಗೆ ಪವಿತ್ರವಾದ ಕಲ್ಲು. ದೈವೀಸ್ವರೂಪವಾದದ್ದು. ಬೀಸುವ ಕಲ್ಲಿಗೆ ಕಾಲು ತಾಗಿಸುವುದಿಲ್ಲ. ಬೀಸಲು ಪ್ರಾರಂಭ ಮಾಡುವಾಗ ಬೀಸೋಕಲ್ಲಿಗೆ ನಮಸ್ಕಾರ ಮಾಡಿ ಬೀಸಲು ಪ್ರಾರಂಭಿಸುತ್ತಾರೆ. ಮುಕ್ತಾಯ ಮಾಡುವಾಗಲೂ ನಮಸ್ಕಾರ ಮಾಡುತ್ತಾರೆ. ಅಕ್ಕಿ, ರಾಗಿ, ಜೋಳ, ಹೆಸರು, ಕಡ್ಲೆ ಮುಂತಾದ ಧಾನ್ಯಗಳನ್ನು ಹಿಟ್ಟು ಮಾಡಲು ಬೀಸುವಕಲ್ಲು ಅಗತ್ಯವಾಗಿ ಬೇಕು. ಗುಂಡಾಕಾರದ ಒಂದೇ ಗಾತ್ರದ ಎರಡು ಕಲ್ಲುಗಳು ಧಾನ್ಯವನ್ನು ಹಿಟ್ಟು ಮಾಡಲು ಅನುಕೂಲವಾಗುವಂತೆ ಎರಡೂ ಕಲ್ಲುಗಳ ಬಾಯಿಗೆ ಹಲ್ಲು ಕೊರೆಸಿರುತ್ತಾರೆ. ತಳದ ಕಲ್ಲಿಗೆ ಅಭಿಮುಖವಾಗಿ ಮುಚ್ಚುವ ಕಲ್ಲನ್ನು ಜೋಡಿಸಲಾಗುತ್ತದೆ. ಮುಚ್ಚುವ ಕಲ್ಲಿನ ಬೆನ್ನ ಭಾಗದಲ್ಲಿ ಧಾನ್ಯವನ್ನು ಸುರಿಯಲು ಬಾಯಿ ಇರುತ್ತದೆ. ಕಲ್ಲನ್ನು ತಿರುಗಿಸಲು, ಹಿಡಿದುಕೊಳ್ಳಲು ನಾಲ್ಕು ಬೆರಳು ದಪ್ಪದ ಅರ್ಧ ಅಡಿ ಉದ್ದದ ಒಂದು ಗೂಟವಿರುತ್ತದೆ. ಇದನ್ನು ‘ಬೀಸುವಕಲ್ಲು ಗೂಟ’ ಎಂದು ಕರೆಯುತ್ತಾರೆ. ಈ ಗೂಟವನ್ನು ಹಿಡಿದುಕೊಂಡು ತಿರುಗಿಸಿದರೆ ಮೇಲಿನ ಕಲ್ಲು ಮಾತ್ರ ತಿರುಗುತ್ತದೆ. ಕೆಳಗಿನ ಕಲ್ಲು ಸ್ಥಿರವಾಗಿರುತ್ತದೆ. ತಳದ ಕಲ್ಲಿನ ಕೇಂದ್ರಸ್ಥಳದಲ್ಲಿ ಕಬ್ಬಿಣದ ಮೊಳೆಯನ್ನು ಅಳವಡಿಸುತ್ತಾರೆ. ಮುಚ್ಚುವ ಕಲ್ಲಿಗೂ ಮಧ್ಯಭಾಗದಲ್ಲಿ ಮೊಳ ಹಿಡಿಸುವಷ್ಟು ರಂಧ್ರವಿರುತ್ತದೆ. ತಳದ ಕಲ್ಲಿನ ಮೇಲೆ ಮುಚ್ಚುಕಲ್ಲನ್ನಿಟ್ಟು ಗೂಟ ಹಿಡಿದು ತಿರುಗಿಸಿದಾಗ ಧಾನ್ಯ ಹಿಟ್ಟಾಗಿ ಚಾಪೆಯ ಮೇಲೆ ಬೀಳುತ್ತದೆ.

 

 

 

ತೆವಳಿಕಲ್ಲು

                ಇದು ಕೂಡ ಬೀಸೋಕಲ್ಲಿನ ರೀತಿಯಂತೆ ದೊಡ್ಡದಾದ ಎರಡು ಕಲ್ಲುಗಳು. ಕಲ್ಲುಗಳ ಉದ್ದ ಮೂರು ಅಡಿ, ಅಗಲ ಮೂರು ಅಡಿ, ಸುತ್ತಳತೆ ಹತ್ತು ಅಡಿ ಇರುತ್ತದೆ. ಮೇಲ್ಭಾಗದ ಕಲ್ಲಿನ ಕೇಂದ್ರಸ್ಥಾನದಲ್ಲಿ ಮುಕ್ಕಾಲು ಅಡಿ ಸುತ್ತಳತೆಯ ಬಾಯಿ ಇರುತ್ತದೆ. ಮೇಲಿನ ಕಲ್ಲಿನ ಪಕ್ಕದಲ್ಲಿ ಹನ್ನೆರಡು ಅಡಿ ಉದ್ದದ ಗಟ್ಟಿ ಜಾತಿಯ ಗೂಟ ಇರುತ್ತದೆ. ಗೂಟದ ಮೇಲ್ಭಾಗವನ್ನು ಮೇಲ್ಭಾಗದ ಮರದ ತೊಲೆಗೆ ದೊಡ್ಡ ರಂಧ್ರವನ್ನು ಮಾಡಿ ಆ ರಂಧ್ರದ ಒಳಗೆ ಗೂಟವನ್ನು ಹೊಗಿಸಿರುತ್ತಾರೆ. ಕೆಳಗಡೆ ಕಲ್ಲಿನ ಮಧ್ಯಭಾಗದಲ್ಲಿ ಹೆಬ್ಬೆರಳು ಗಾತ್ರದ ಕಬ್ಬಿಣದ ಮೊಳೆಯನ್ನು ಅಳವಡಿಸಿರುತ್ತಾರೆ. ಮುಚ್ಚುವ ಕಲ್ಲಿನ ಮಧ್ಯಭಾಗದಲ್ಲಿ ಮೊಳೆ ಹಿಡಿಸುವಷ್ಟು ಗಾತ್ರದ ರಂಧ್ರವಿರುತ್ತದೆ. ತಳದ ಕಲ್ಲಿನ ಮೇಲೆ ಮುಚ್ಚುಕಲ್ಲನ್ನಿಟ್ಟು ಗೂಟ ಹಿಡಿದು ತಿರುಗಿಸಿದಾಗ ಭತ್ತ ಒಡೆದು ಅಕ್ಕಿ ಕೆಳಗೆ ಬೀಳುತ್ತದೆ. ತೆವಳಿಕಲ್ಲನಲ್ಲಿ ಭತ್ತವನ್ನು ಒಡೆದ ನಂತರ ಮೊರದಲ್ಲಿ ಕೇರಬೇಕು. ಕೇರಿದ ನಂತರ ಒನಕೆಯಲ್ಲಿ ಕುಟ್ಟಿ ಒಳ್ಳಿಗೆ ಹಾಕಿ ತೊಳಸಬೇಕು. ಆಮೇಲೆ ವುಂವಿ ಕವಡು ಧೂಳು ಕೇರಬೇಕು. ನಂತರ ಸಾಣಿಗೆಯಲ್ಲಿ ಭತ್ತ ತೆಗೆಯಬೇಕು. ಹಾಗೆಯೇ ಮೊರದಲ್ಲಿ ಒನೆದು ನುಚ್ಚು, ಕಲ್ಲು ತೆಗೆಯಬೇಕು. ದೊಡ್ಡಕಲ್ಲು ತೆಗೆಯಲು ಮೊರದಲ್ಲಿ ಕೊಚ್ಚುತ್ತಾರೆ. ಶುದ್ಧವಾದ ಅಕ್ಕಿ ಪಡೆಯಲು ಇಷ್ಟು ಪ್ರಕ್ರಿಯೆಗಳು ನಡೆಯಬೇಕು. ಭತ್ತ ಬಡಿಯುವಾಗ ಒಬ್ಬರು ಕೂತು ಕಲ್ಲಿನ ಬಾಯಿಗೆ ಭತ್ತವನ್ನು ಹಾಕುತ್ತಿರಬೇಕು. ಎರಡು ಮೂರು ಜನ ಮಹಿಳೆಯರು ನಿಂತು ಕಲ್ಲನ್ನು ತಿರುಗಿಸುತ್ತಾರೆ. ತೆವಳಿಕಲ್ಲು ಇಲ್ಲದವರು ಭತ್ತವನ್ನು ಕುಟ್ಟಿ ಅಕ್ಕಿ ಮಾಡಬೇಕಾಗಿತ್ತು. ಅವಿಭಕ್ತ (ಕೂಡು) ಕುಟುಂಬಗಳಲ್ಲಿ ಅನುಕೂಲಸ್ಥರು ತೆವಳಿಕಲ್ಲನ್ನು ಇಟ್ಟುಕೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ಅಕ್ಕಿ ಗಿರಣಿಗಳಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಭತ್ತವನ್ನು ಕುಟ್ಟಿ ಅಕ್ಕಿ ಮಾಡಿಕೊಳ್ಳಬೇಕಾಗಿತ್ತು. ಅನುಕೂಲಸ್ಥ ಕುಟುಂಬದವರು ತೆವಳಿಕಲ್ಲು ಇಟ್ಟುಕೊಳ್ಳುತ್ತಿದ್ದರು.

ಕುಟ್ಟುವ ಒಳ್ಳುಗಳು

                ಒಳ್ಳುಗಳಲ್ಲಿ ಮೂರು ರೀತಿಯ ಒಳ್ಳುಗಳಿವೆ.

1) ಮರೊಳ್ಳು     2) ಕಲ್ಲೊಳ್ಳು       3) ನೆಲೊಳ್ಳು

1) ಮರೊಳ್ಳು

ಹಲಸು, ಹೊನ್ನೆ, ಹುನಾಲು ಈ ಜಾತಿಯ ಯಾವುದಾದರೂ ಮರದ ತುಂಡಿನಲ್ಲಿ ಎರಡು ಅಡಿ ಉದ್ದ, ಒಂದೂವರೆ ಅಡಿ ಅಗಲ, ಅರ್ಧ ಅಡಿ ವ್ಯಾಸ ಆಳ ಅರ್ಧ ಅಡಿಯ ಒಳ್ಳು ಮಾಡಿರುತ್ತಾರೆ. ಪಕ್ಕದಲ್ಲಿ ಒಂದು ಅಡಿ ಉದ್ದ, ಮುಕ್ಕಾಲು ಅಡಿ ಅಗಲ, ಆಳ ಮೂರು ಇಂಚು, ಮೂರು ಇಂಚು ವ್ಯಾಸದ ಮೂರು ಇಂಚು ಆಳದ ಒಂದು ಸಣ್ಣ ಒಳ್ಳು ಇರುತ್ತದೆ. ಈ ತುಂಡನ್ನು ಮನೆಯಲ್ಲಿ ಒಂದು ಮೂಲೆಯಲ್ಲಿ ಒಂದು ಅಡಿ ಗುಂಡಿ ತೆಗೆದು ಹುಗಿಯುತ್ತಾರೆ. ಈ ಒಳ್ಳಿನ್ನು ಅವಲಕಿ,್ಕ ಖಾರ, ಭತ್ತ ಕುಟ್ಟಲು ಬಳಸುತ್ತಾರೆ.

2) ಕಲ್ಲೊಳ್ಳು

                ತಿರುವ ಕಲ್ಲಿನಂತಹ ಕಪ್ಪು ಶಿಲೆಯ ಉದ್ದ ಒಂದೂವರೆ ಅಡಿ, ಅಗಲ ಒಂದೂವರೆ ಅಡಿ, ಸುತ್ತಳತೆ  ನಾಲ್ಕು ಅಡಿ ಕಲ್ಲಿನಲ್ಲಿ ಅರ್ಧ ಅಡಿ ಉದ್ದ, ಅರ್ಧ ಅಡಿ ಅಗಲ, ನಾಲ್ಕು ಇಂಚು ಆಳದ ಒಳ್ಳು ಇರುತ್ತದೆ. ಮನೆಯ ಜಗಲಿಯ ಒಂದು ಕಡೆ ನೆಲದಲ್ಲಿ ಹುಗಿದಿರುತ್ತಾರೆ. ಅಕ್ಕಿ ಹೆಚ್ಚು ನುಚ್ಚಾಗುತ್ತದೆ ಎಂದು ಹೆಚ್ಚಾಗಿ ಕಲ್ಲೊಳ್ಳು ಬಳಸುವುದಿಲ್ಲ. ಮರೊಳ್ಳು ಮತ್ತು ನೆಲೊಳ್ಳುಗಳನ್ನು ಬಳಸುತ್ತಾರೆ. ಒಂದು ಒಳ್ಳಲ್ಲಿ ಐದು ಜನ ಒಟ್ಟಗೆ ಕುಟ್ಟುತ್ತಾರೆ. ಮಳೆಗಾಲ, ಚಳಿಗಾಲದಲ್ಲಿ ಮನೆಯ ಒಳಗಡೆ ಕುಟ್ಟುವ ಒಳ್ಳುಗಳನ್ನು ಮಾಡಿಕೊಂಡಿರುತ್ತಾರೆ.

                ಬೇಸಿಗೆ ಕಾಲದಲ್ಲಿ ಮನೆಯ ಅಂಗಳದಲ್ಲಿ ಕುಟ್ಟುವ ಒಳ್ಳುಗಳನ್ನು ಮಾಡಿಕೊಳ್ಳುತ್ತಾರೆ. ನೆಲೊಳ್ಳಿನ ಮಧ್ಯೆ ನುಣುಪಾದ ಕಲ್ಲನ್ನು (ಗಟ್ಟಿಯಾದ) ಹುಗಿದುಕೊಳ್ಳುತ್ತಾರೆ.

ಒನಿಕೆ

                ಒನಿಕೆ ಭತ್ತ ಕುಟ್ಟುವ ಸಾಧನ. ‘ಬಗಿನೆ’ ಎಂದ ಜಾತಿಯ ಮರದಿಂದ ಒನಿಕೆಗಳನ್ನು ತಯಾರಿಸುತ್ತಾರೆ. ಬಗಿನೆ ಮರ ತುಂಬಾ ಗಟ್ಟಿಯಾದ ಮರ. ಒಂದು ಒನಿಕೆ ನೂರಾರು ವರ್ಷ ಬಾಳಿಕೆ ಬರುತ್ತದೆ. ಇದರ ಕೆಳಭಾಗದಲ್ಲಿ ಎರಡು ಇಂಚು ಉದ್ದದ ಕಬ್ಬಿಣದ ಬಳೆಯನ್ನು ಜೋಡಿಸಿರುತ್ತಾರೆ. ಬಳೆಯ ಮಧ್ಯೆ ಒನಕೆಯ ಬುಡದಲ್ಲಿ ಮೂರು-ನಾಲ್ಕು ಮೊಳೆಯನ್ನು ಹೊಡೆದಿರುತ್ತಾರೆ. ಇವುಗಳನ್ನು ಒನಿಕೆಯ ಬುಡಕ್ಕೆ ಬಳೆಯ ಒಳಗೆ ಹೊಡೆದಿರುತ್ತಾರೆ. ಒನಿಕೆಗಳು ಆರು ಅಡಿ ಉದ್ದವಿರುತ್ತವೆ. ಮಲೆನಾಡಿನಲ್ಲಿ ಬಗಿನೆಮರವನ್ನು ಮಾತ್ರ ಒನಿಕೆ ತಯಾರಿಸಲು ಬಳಸುತ್ತಾರೆ.

ಈಳಿಗೆಮಣೆ

                ದಿನನಿತ್ಯದ ಅಡುಗೆಗೆ ಬೇಕಾಗುವ ತರಕಾರಿ ಹೆಚ್ಚಲು ಮತ್ತು ತೆಂಗಿನಕಾಯಿ ಭಾಗಗಳನ್ನು ತುರಿಯಲು ಹರಿತವಾದ ಅಲಗುಳ್ಳ ಕತ್ತಿಯಿರುವ ಮಣೆ. ಕತ್ತಿಯ ತುದಿಗೆ ಚೂಪು ಮುಳ್ಳುಗಳಿರುವ ಒಂದು ಅಂಗುಲ ವ್ಯಾಸದ ಬಿಲ್ಲೆಯೊಂದು ಸೇರಿಕೊಂಡಿರುತ್ತದೆ. ಇದರಿಂದ ಸುಲಭವಾಗಿ ತೆಂಗಿನಕಾಯಿ ತುರಿಯಬಹುದು. ಆದ್ದರಿಂದ ಇದನ್ನು ‘ತುರಿಮಣೆ’ ಎಂದೂ ಕರೆಯುಲಾಗುತ್ತದೆ.

                ಈಳಿಗೆಮಣೆಗಳಲ್ಲಿ ಅನೇಕ ವಿನ್ಯಾಸದ ಮಣೆಗಳನ್ನು ಕಾಣಬಹುದು. ಎರಡು ಅಡಿ ಉದ್ದ, ಒಂದೂವರೆ ಅಡಿ ಅಗಲದ ಹಲಸು, ನೇರಲು, ಮತ್ತಿ ಇತ್ಯಾದಿ ಯಾವುದಾದರೂ ಒಂದು ಜಾತಿಯ ಮರದ ದಪ್ಪ ಹಲಗೆಯ ಮೇಲೆ ಕತ್ತಿಯನ್ನು ಜೋಡಿಸಿರುತ್ತಾರೆ. ಹಲಗೆಯ ಮೇಲೆ ಕೂತುಕೊಂಡು ತರಕಾರಿ ಹೆಚ್ಚಬಹುದು. ತೆಂಗಿನಕಾಯಿ ಭಾಗಗಳನ್ನು ತುರಿಯಬಹುದು.

 

 

ತಿರುವ ಕಲ್ಲು

                ಪ್ರತಿದಿವಸ ಅಡುಗೆಗೆ ಬೇಕಾದ ಖಾರವನ್ನು ತಿರುಗಿಸುವ ಸಾಧನವಾಗಿ ಗ್ರಾಮೀಣ ಭಾಗದಲ್ಲಿ ಪ್ರತಿ ಕುಟುಂಬದಲ್ಲಿಯೂ ‘ತಿರುವಕಲ್ಲು’ ಇರುತ್ತದೆ. ತಿರುವಕಲ್ಲಿನ ಜೊತೆಗೆ ಖಾರ ತಿರುವ ಗುಂಡು ಪ್ರತ್ಯೇಕವಾಗಿ ಇರುತ್ತದೆ.

                ತಿರುವ ಕಲ್ಲು ದುಂಡಾಗಿ ಇರುತ್ತದೆ. ಇದರ ಉದ್ದ ಹದಿನಾಲ್ಕು ಇಂಚು, ಅಗಲ ಹದಿನಾಲ್ಕು ಇಂಚು, ಎತ್ತರ ಹತ್ತು ಇಂಚು, ಸುತ್ತಳತೆ ನಾಲ್ಕು ಅಡಿ ಇರುತ್ತದೆ. ಕಲ್ಲಿನ ಮೇಲ್ಭಾಗದ ಮಧ್ಯೆ ಒಳ್ಳು ಇರುತ್ತದೆ. ಒಳ್ಳಿನ ಸುತ್ತಳತೆ ಒಂದು ಅಡಿ, ಎಂಟು ಇಂಚು ಇರುತ್ತದೆ. ಆಳ ಮೂರೂವರೆ ಇಂಚು ಇರುತ್ತದೆ. ತಿರುವಕಲ್ಲಿನಲ್ಲಿರುವ ಒರಳಿಗೆ ಖಾರದ ವಸ್ತುಗಳನ್ನು ಹಾಕಿ ತಿರುಗಿಸಲು ಪ್ರತ್ಯೇಕವಾಗಿ ಗುಂಡು ಇರುತ್ತದೆ. ಗುಂಡಿನ ಸುತ್ತಳತೆ ಒಂದು ಅಡಿ, ನಾಲ್ಕು ಇಂಚು, ಗುಂಡಿನ ಉದ್ದ ಹತ್ತು ಇಂಚು, ಅಗಲ ನಾಲ್ಕು ಇಂಚು ಇರುತ್ತದೆ.

ಅರಕಲ್ಲು

                ಗ್ರಾಮೀಣ ಭಾಗದಲ್ಲಿ ತಿರುವಕಲ್ಲು ಇಲ್ಲದವರ ಕುಟುಂಬದಲ್ಲಿ ಅಡುಗೆಗೆ ಬೇಕಾದ ಖಾರವನ್ನು ಅರೆಯಲು ‘ಅರಕಲ್ಲು’ ಎಂಬ ಸಾಧನವಿರುತ್ತದೆ. ಇದು ಕಪ್ಪುಬಣ್ಣದ ಶಿಲೆಕಲ್ಲು. ಇದರ ಉದ್ದ ಒಂದೂವರೆ ಅಡಿ, ಅಗಲ ಒಂದು ಅಡಿ ನಾಲ್ಕು ಇಂಚು.

ಖಾರ ಕುಟ್ಟುವ ಹಾರೆ

                ಖಾರದಪುಡಿ, ಚಟ್ನಿಪುಡಿ, ಉಪ್ಪಿನಕಾಯಿಗೆ ಖಾರ ಹಾಕಲು, ಖಾರದಪುಡಿ ತಯಾರಿಸುವ ಸಾಧನ ಮುಂಡು ಹಾರೆ. ಇದರ ಉದ್ದ ಒಂದೂವರೆ ಅಡಿ, ದಪ್ಪ ಸುತ್ತಳತೆ ಐದು ಇಂಚು, ಬುಡದ ಮುಂಭಾಗ ಆರು ಇಂಚು ಸುತ್ತಳತೆ ಇರುತ್ತದೆ. ಯಾವುದೇ ವಸ್ತುಗಳನ್ನು ಪುಡಿ ಮಾಡಬೇಕಾದರೂ ಹಾರೆಯಿಂದ ಕುಟ್ಟಿ ಪುಡಿ ಮಾಡುತ್ತಾರೆ.

ಮಸಕಲ್ಲು

                ಕೃಷಿಗೆ ಸಂಬಂಧಪಟ್ಟ ಆಯುಧಗಳನ್ನು (ಕತ್ತಿ, ಕೊಡಲಿ, ಕುಡಗೋಲು ಇತ್ಯಾದಿ) ಹರಿತ ಮಾಡಲು ಮಸಕಲ್ಲಿನಲ್ಲಿ ಮಸೆಯುತ್ತಾರೆ.

ನಾಮದ ಪೆಟ್ಟಿಗೆ

                ದೀವರಲ್ಲಿ ಎರಡು ಗುಂಪುಗಳಿವೆ. ಹೆಣ್ಣೊಕ್ಕಲು ಮತ್ತು ಗಂಡೊಕ್ಕಲು. ಚಂದ್ರಗುತ್ತಿ ರೇಣುಕಾಂಬೆಗೆ (ಚಂದ್ರಗುತ್ತಿ ಗುತ್ಯಮ್ಮ, ಕನ್ನಮ್ಮ) ನಡೆದುಕೊಳ್ಳುವವರು ಹೆಣ್ಣೊಕ್ಕಲು. ಶಿಕಾರಿಪುರದ ಹುಚ್ಚರಾಯಸ್ವಾಮಿಗೆ (ಆಂಜನೇಯ) ನಡೆದುಕೊಳ್ಳುವವರು ಗಂಡೊಕ್ಕಲು ಎನ್ನುತ್ತಾರೆ. ಇವರಿಗೆ ದೊಡ್ಡ ದೇವರ ಒಕ್ಕಲು ಎಂದೂ ಕರೆಯುತ್ತಾರೆ. ಇವರು ವೈಷ್ಣವ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇವರು ಪ್ರತಿದಿವಸ ಸ್ನಾನ ಮಾಡಿ ಇಡಕಲು ಕೆಳಗೆ ಕೂತು ಹಣೆಗೆ ಉದ್ದವಾದ ನಾಮವನ್ನಿಟ್ಟುಕೊಂಡು ದೇವರಿಗೆ ಪೂಜೆ ಮಾಡಿ (ಆಂಜನೇಯನಿಗೆ) ಊಟ ಮಾಡುತ್ತಾರೆ.

                ನಾಮದ ಪೆಟ್ಟಿಗೆ ಬೆತ್ತದಿಂದ ಹೆಣಿಗೆ ಮಾಡಿದ ಪುಟ್ಟಪೆಟ್ಟಿಗೆ. ಕೆಲವರು ಮರದಿಂದ ತಯಾರಿಸಿದ ಚಿಕ್ಕಪೆಟ್ಟಿಗೆಯನ್ನು ಇಟ್ಟುಕೊಳ್ಳುತ್ತಾರೆ. ಪೆಟ್ಟಿಗೆಯಲ್ಲಿ ನಾಮದ ಉಂಡೆಗಳು, ಚಿಕ್ಕ ಕನ್ನಡಿ ಇರುತ್ತದೆ. ವಾರದಲ್ಲಿ ಪ್ರತಿ ಶನಿವಾರ ಇವರು ಮಾಂಸಾಹಾರ ಮಾಡುವುದಿಲ್ಲ. ಕುಟುಂಬದ ಪ್ರತಿಯೊಬ್ಬರೂ ಸಸ್ಯಾಹಾರ ಸೇವಿಸುತ್ತಾರೆ.

ಚಕ್ಕುಲಿ ಒಳ್ಳು

                ಚಕ್ಕುಲಿಯನ್ನು ತಯಾರಿಸಲು ಇರುವ ಮರದ ಸಾಧನ. ಸ್ಟೀಲು, ಹಿತ್ತಾಳೆ, ಕಂಚಿನ ಲೋಹದ ಸುಂದರವಾದ ವಿನ್ಯಾಸದ ಒಳ್ಳುಗಳು ಇರುತ್ತವೆ. ಹಳ್ಳಗಳಲ್ಲಿ ಹೆಚ್ಚಿನ ಸಂಖ್ಯೆ ದೀವರು ಮರದ ಚಕ್ಕುಲಿ ಒಳ್ಳುಗಳನ್ನು ಬಳಸುತ್ತಾರೆ. ಪ್ರತಿವರ್ಷ ಗೌರಿಹಬ್ಬಕ್ಕೆ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರುಮನೆಗೆ ಬರುತ್ತಾರೆ. ತವರಿನಲ್ಲಿ ಒಂದು ವಾರ ಸಂಭ್ರಮದಿಂದ ಹಬ್ಬ ಆಚರಿಸಿ ತಮ್ಮ ಗಂಡಂದಿರ ಮನೆಗೆ ಹೊರಡುತ್ತಾರೆ. ಹೆಣ್ಣುಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಾಗ ಬರಿಕೈಯಲ್ಲ್ಲಿ ಕಳುಹಿಸುವುದಿಲ್ಲ. ಒಂದುನೂರು ಚಕ್ಕುಲಿ, ಐವತ್ತು ಅತಿರಸದ ಕಜ್ಜಾಯ ತಯಾರಿಸಿ ಹೆಣ್ಣುಮಕ್ಕಳಿಗೆ ಕೊಟ್ಟು ಕಳುಹಿಸುತ್ತಾರೆ. ಹಾಗಾಗಿ ಪ್ರತಿಯೊಂದು ಕುಟುಂಬದಲ್ಲಿಯೂ ಒಂದು, ಎರಡು ಚಕ್ಕುಲಿ ಒಳ್ಳುಗಳು ಇರುತ್ತವೆ.

ಲಟ್ಟಣಿಗೆ-ಮಣೆ

                ಚಪಾತಿ, ಹೋಳಿಗೆ ಇತ್ಯಾದಿ ತಿನಿಸುಗಳನ್ನು ತಯಾರಿಸುವಾಗ ಚಪಾತಿ ಒರೆಯಲು ಲಟ್ಟಣಿಗೆ ಮತ್ತು ಮಣೆ ಸಾಧನಗಳು.

ಕೊಡಗಳು

                ಬಾವಿಯಿಂದ ನೀರು ಎತ್ತುವ ಸಾಧನ ಕೊಡಪಾನಗಳು. ಮಣ್ಣು, ತಾಮ್ರ, ಹಿತ್ತಾಳೆ, ಸ್ಟೀಲು, ಅಲ್ಯೂಮಿನಿಯಂ, ಹಿಂಡಾಲಿಯಂ ಲೋಹಗಳ ಕೊಡಗಳು ಇರುತ್ತವೆ. ಆದರೆ ಈಗ ಪ್ಲಾಸ್ಟಿಕ್ ಕೊಡಗಳು ಹೆಚ್ಚಾಗಿ ಬರುತ್ತವೆ. ಹಳ್ಳಿಯ ಜನ ಹೆಚ್ಚಾಗಿ ತಾಮ್ರದ ಕೊಡಗಳ ಜೊತೆಯಲ್ಲಿ ಪ್ಲಾಸ್ಟಿಕ್ ಕೊಡಗಳನ್ನು ಬಳಸುತ್ತಾರೆ.

 

 

 

 

ಹಂಡೆ

                ಪ್ರತಿಯೊಬ್ಬ ದೀವರ ಕುಟುಂಬದಲ್ಲಿಯೂ ತಾಮ್ರದ ಹಂಡೆಗಳು ಇರುತ್ತವೆ. ಇತ್ತೀಚೆಗೆ ಸ್ಟೀಲು, ಹಿತ್ತಾಳೆ, ಅಲ್ಯೂಮಿನಿಯಂ, ಹಿಂಡಾಲಿಯಂ ಹಂಡೆಗಳನ್ನು ಬಳಸುತ್ತಾರೆ. ತಾಮ್ರದ ಹಂಡೆಗೆ ನೀರು ತುಂಬಿ ಹರಿ ಇಡಕಲು ಮೇಲೆ ಇಟ್ಟಿರುತ್ತಾರೆ.

ಸಟ್ಟುಗ

                ಅಡುಗೆ ಸಲಕರಣೆಗಳಲ್ಲಿ ಮುಖ್ಯವಾದುದು. ಒಂದೂವರೆ ಅಡಿ ಉದ್ದವಾದ ಹಿಡಿ ಇರುತ್ತದೆ. ಇದರ ಬಾಯಿ ಅಗಲವಾಗಿ ಗುಂಡಾಗಿರುತ್ತದೆ. ಅನ್ನ, ಹಿಟ್ಟು ಬೇಯಿಸುವಾಗ ಪಾತ್ರೆಗಳಿಗೆ ಅಂಟಿಕೊಳ್ಳದಿರಲಿ ಎಂದು ತಿರುವುತ್ತಿರುತ್ತಾರೆ.

ಸೌಟು

                ತೆಂಗಿನಕಾಯಿ ಕರಟದಿಂದ ತಯಾರು ಮಾಡುವ ಸಾಧನ. ಕರಟವನ್ನು ಚೆನ್ನಾಗಿ ಒರೆದು ನಯವಾಗಿ ಮಾಡಿ ಬುಡದಲ್ಲಿ ಎರಡು ತೂತುಗಳನ್ನು ಮಾಡಿ ಬಿದಿರು ದಬ್ಬೆಯ ಹಿಡಿಯನ್ನು ಅಳವಡಿಸಲಾಗುತ್ತದೆ. ತೆಂಗಿನಕಾಯಿ ಚಿಪ್ಪಿನಿಂದ ಆಗಿರುವ ತುಂಬಾ ಸುಲಭವಾದ ಸಾಧನ. ಆರೋಗ್ಯಕರವೂ ಹೌದು.

ಬತ್ತಿಕೋವಿ

                ನಳಿಗೆಯಾದಿಯಾಗಿ ಈ ಕೋವಿಯ ಎಲ್ಲಾ ಭಾಗಗಳು ಕಬ್ಬಿಣದಿಂದಲೇ ತಯಾರಾಗಿರುತ್ತವೆ. ಇದಕ್ಕೆ ಕವಲುಮರದ ಬೇರಿನ ನಾರಿನ ಜಾವುಗೆ ತುಂಬಿ ಇದಕ್ಕೆ ಬೆಂಕಿ ತಗುಲಿಸಿ ಸಿಡಿಸುತ್ತಿದ್ದರು. ನಾರಿನ ಜಾವುಗೆಗೆ ಬೆಂಕಿ ಹೊತ್ತಿದಾಗ ನಳಿಗೆಯಲ್ಲಿ ಮೊದಲು ಹೊಗೆ ಬಂದು, ಆಮೇಲೆ ಅದು ಈಡಾಗುತ್ತದೆ.

ಕೊಳಗ

                ಭತ್ತವನ್ನು ಅಳತೆ ಮಾಡುವ ಸಾಧನ. ಮೂರು ಸೇರಿನ ಕೊಳಗ. ಇಪ್ಪತ್ತು ಕೊಳಗ ಹಾಕಿದರೆ ಒಂದು ಖಂಡುಗ. ಮರ, ಕಬ್ಬಿಣದ ತಗಡು ಅಥವಾ ಹಿತ್ತಾಳೆ ಲೋಹದ ಕೊಳಗಗಳು ಇರುತ್ತವೆ.

ಲೋಟ

                ನೀರು, ಕಾಫಿ, ಟೀ, ಮಜ್ಜಿಗೆ, ತಂಪಾದ ಪಾನೀಯಗಳನ್ನು ಕುಡಿಯಲು ಕಂಚಿನ ಲೋಟಗಳನ್ನು ಹಿಂದೆ ಬಳಸುತ್ತಿದ್ದರು. ನಂತರ ಹಿತ್ತಾಳೆ ಲೋಟಗಳು ಬಳಕೆಗೆ ಬಂದವು. ಇತ್ತೀಚಿನ ದಿನಗಳಲ್ಲಿ ಸ್ಟೀಲು ಲೋಟಗಳು ಬಳಕೆಗೆ ಬಂದಿವೆ.

ಬಟ್ಟಲು

                ಹಿಂದೆ ಕಂಚಿನ ಗಂಗಾಳಗಳನ್ನು ಊಟದ ತಟ್ಟೆಗಳಾಗಿ ಬಳಸುತ್ತಿದ್ದರು. ಈಗ ಸ್ಟೀಲ್ ಊಟದ ತಟ್ಟೆಗಳನ್ನು ಬಳಸುತ್ತಾರೆ.

ಕಣಜ

                ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಕಣಜಗಳನ್ನು ಬಳಸುತ್ತಾರೆ. ಕಣಜವನ್ನು ಬಿದಿರಿನ ತೆಳುವಾದ ಸೀಳುಗಳಿಂದ ಮೇದಾರರು ಹೆಣೆಯುತ್ತಾರೆ. ಮೇದಾರರಿಂದ ಕೊಂಡುತಂದ ನಂತರ ಸಗಣಿ ಬಗ್ಗಡದಿಂದ ಸಾರಿಸುತ್ತಾರೆ. ಒಣಗಿಸಿ ಮತ್ತೊಂದು ಸಾರಿ ಸಗಣಿ ಬಗ್ಗಡದಿಂದ ಕಣಜವನ್ನು ಸಾರಿಸಿ ಚೆನ್ನಾಗಿ ಒಣಗಿಸುತ್ತಾರೆ. ಒಣಗಿದ ನಂತರ ಕಣಜ ಗಟ್ಟಿಯಾಗುತ್ತದೆ. ಮನೆಯ ಸುರಕ್ಷಿತವಾದ ಸ್ಥಳದಲ್ಲಿ ಕಟ್ಟಿ ಭತ್ತವನ್ನು ತುಂಬುತ್ತಾರೆ. ಕಣಜ ಆರೂವರೆ ಅಡಿ ಉದ್ದ, ಆರೂವರೆ ಅಡಿ ಎತ್ತರ ಇರುತ್ತದೆ. ಮೂವತ್ತೈದರಿಂದ ನಲವತ್ತು ಚೀಲ ಭತ್ತವನ್ನು ತುಂಬಿ ಇಡಬಹುದು.

ಪಣತ

                ಮನೆಯ ಕಡಿಮಾಡಿನ ಒಂದು ಮೂಲೆಯಲ್ಲಿ ಭತ್ತವನ್ನು ತುಂಬಿ ಇಡಲೆಂದೇ ನಿರ್ಮಾಣಗೊಂಡಿರುವ ಸಾಧನ. ಇದು ಸುಮಾರು ಏಳು ಅಡಿ ಎತ್ತರ, ಹದಿನೈದರಿಂದ ಇಪ್ಪತ್ತು ಅಡಿ ಅಗಲವಿರುತ್ತದೆ. ಮರದಿಂದ ಬಿಗಿ ಕೂಡಿಸಿ ಹಲಗೆಗಳಿಂದ ನಿರ್ಮಾಣ ಮಾಡುತ್ತಾರೆ. ಇದರ ನಾಲ್ಕು ಮೂಲೆಗೆ ಸುಮಾರು ಒಂದು ಅಡಿ ಎತ್ತರದ ನಾಲ್ಕು ಕಾಲುಗಳಿರುತ್ತವೆ. ನೆಲದ ಭಾಗವು ಸೇರಿದಂತೆ ಆರು ಮೈಗೆ ಹಲಗೆಗಳನ್ನು ಹಾಸಿರುತ್ತಾರೆ. ಮೇಲ್ಭಾಗದಲ್ಲಿ ಒಬ್ಬ ಮನುಷ್ಯ ಮಾತ್ರ ಇಳಿಯಬಹುದಾದಷ್ಟು ಕಂಡಿ ಬಿಟ್ಟಿರುತ್ತಾರೆ. ಉಳಿದ ಭಾಗಕ್ಕೆ ಹಲಗೆ ಹಾಸಿ ಮೇಲೆ ಮಣ್ಣುಗಾರೆಯ ಮೆತ್ತು ಹಾಕಿರುತ್ತಾರೆ. ಪಣತದ ಬಾಯಿಗೆ ಬಾಯಿಯಾಕಾರದ ಹಲಗೆ ಮುಚ್ಚಳಗಳು ಇರುತ್ತವೆ. ಮೇಲಿನ ಕಂಡಿಯಿಂದ (ಇದನ್ನು ಪಣತದ ಕಂಡಿ ಎನ್ನುತ್ತಾರೆ) ಭತ್ತ ಸುರಿದು ಪಣತ ತುಂಬಿಸಿ ಆಮೇಲೆ ಆ ಕಂಡಿಗೆ ಹಲಗೆ ಮುಚ್ಚಿ ಮೆತ್ತು ಹಾಕುತ್ತಾರೆ. ಸುಮಾರು ಮೂವತ್ತರಿಂದ ಅರವತ್ತು ಪಲ್ಲ ಭತ್ತ ತುಂಬುವ ಪಣತಗಳಿವೆ. ಹಿಂದೆ ಕಳ್ಳಕಾಕರ ಭಯ ಇದ್ದ ಕಾಲದಲ್ಲಿ ಕಾಡಿನ ಮಧ್ಯೆ ಹಗೇವು ನಿರ್ಮಿಸಿ ಅಲ್ಲಿ ಭತ್ತ ತುಂಬಿಡುವ ಪದ್ಧತಿ ಇತ್ತು. ಇಳಿಜಾರು ಜಾಗದಲ್ಲಿ ನೀರು ನಿಲ್ಲದೆಡೆಯಲ್ಲಿ ಸುಮಾರು ಹತ್ತು ಅಡಿ ಆಳ, ಐದು ಅಡಿ ವ್ಯಾಸವುಳ್ಳ ಗುಂಡಿ ತೆಗೆದು ಎರಡು ಅಡಿ ಅಗಲದ ಬಾಯಿ ಇಟ್ಟು ನಿರ್ಮಿಸುತ್ತಿದ್ದುದಾಗಿ ಹೇಳುತ್ತಾರೆ.

ಪೊರಕೆಗಳು

ಈಚಲು ಪೊರಕೆ

                ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಚೆನ್ನಾಗಿ ಬೆಳೆದ ಈಚಲು ಹುಲ್ಲನ್ನು ಕೊಯ್ದು ತಂದು ಬುಡದ ಜಾಗವನ್ನು ಕಲ್ಲಿನಿಂದ ಜಜ್ಜಿ ಮೃದುಗೊಳಿಸಿ, ಜಡೆ ಆಕಾರದಲ್ಲಿ ಹೆಣೆದು ಒಣಗಿಸುತ್ತಾರೆ. ಎಂಟು-ಹತ್ತು ದಿವಸಗಳ ನಂತರ ಒಳ್ಳೆ ಮುಹೂರ್ತ ನೋಡಿ ಹಿಡಿ ಕಟ್ಟುತ್ತಾರೆ. ಬುಡದಲ್ಲಿ ಗಟ್ಟಿಯಾಗಿ ಸುತ್ತುಕಟ್ಟು ಹಾಕುತ್ತಾರೆ. ಈ ಕಟ್ಟೆಗೆ ‘ಅಟ್ಟುಂಡ’ ಎನ್ನುತ್ತಾರೆ. ಸ್ವಲ್ಪ ಜಾಗ ಬಿಟ್ಟು ಇನ್ನೊಂದು ಕಟ್ಟು ಕಟ್ಟುತ್ತಾರೆ. ಇದಕ್ಕೆ ‘ತಿರುದುಂಡ’ ಎನ್ನುತ್ತಾರೆ. ಮೂರನೇ ಕಟ್ಟನ್ನು ಮಧ್ಯಭಾಗದಲ್ಲಿ ಈಚಲು ಹುಲ್ಲನ್ನು ಎರಡು ಭಾಗ ಮಾಡಿ ಕತ್ತರಿಗಂಟು ಹಾಕುತ್ತಾರೆ. ಮೂರನೇ ಗಂಟಿಗೆ ‘ಅಟ್ಟುಂಡ’ ಎನ್ನುತ್ತಾರೆ. ಪೊರಕೆ ಬಗ್ಗೆ ಕೆಲವು ನಂಬಿಕೆಗಳು ಹೀಗಿವೆ.

1)            ಹೆಣ್ಣು ಬಂದ ಮುಹೂರ್ತ, ಹಿಡಿ ಕಟ್ಟಿದ ಮುಹೂರ್ತ ಚೆನ್ನಾಗಿರಬೇಕು.

2)            ಹಿಡಿ; ಒಬ್ಬಳು ಗರತಿಯಿದ್ದಾಂಗೆ.

3)            ಹಿಡಿ ಒದೆಯಬಾರದು; ಲಕ್ಷ್ಮಿ ಇದ್ದಾಂಗೆ.

4) ಹಿಡಿಯನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ಒದೆಯಬಾರದು, ಅಕಸ್ಮಾತ್ ಕಾಲು ತಾಗಿದರೆ ನಮಸ್ಕಾರ ಮಾಡಬೇಕು.

5)            ಪೊರಕೆಯನ್ನು (ಹಿಡಿ) ಮೂಲೆಯಲ್ಲಿ ನಿಲ್ಲಿಸಿ ಇಡಬಾರದು. ನಿಲ್ಲಿಸಿ ಇಟ್ಟರೆ ದರಿದ್ರ ಬರುತ್ತದೆ, ಮಲಗಿಸಿ ಇಡಬೇಕು.

6)            ರಾತ್ರಿ ಹೊತ್ತು ಕಸ ಗುಡಿಸಿ ಹೊರಗೆ ಹಾಕಬಾರದು. ಲಕ್ಷ್ಮಿ ಹೊರಗೆ ಹಾಕಿದ ಹಾಗೆ.

7)            ಅಡುಗೆ ಒಲೆಗೆ ಉಗುಳಬಾರದು.

ಹಲ್ಲ್ಹಿಡಿ

                ಹಲ್ಲ್ಹಿಡಿಯನ್ನು ಈಚಲು ಹುಲ್ಲಿನಿಂದ ರಂಜಲ ಹೂವುಗಳನ್ನು ದಂಡೆ ಕಟ್ಟಿದಂತೆ ಹೆಣೆಯುತ್ತಾರೆ. ನಂತರ ಎಂಟ್ಹತ್ತು ದಿವಸ ಒಣಗಿಸುತ್ತಾರೆ. ಈಚಲು ಹಿಡಿಗೆ ಮೂರು ಗಂಟು ಹಾಕಿದಂತೆ ಇದಕ್ಕೂ ಮೂರು ಗಂಟು ಹಾಕುತ್ತಾರೆ. ಕೆಲವೇ ಮನೆತನದವರು ಹಲ್ಲ್ಹಿಡಿಯನ್ನು ಬಳಸುತ್ತಾರೆ. ಈಚಲು ಹುಲ್ಲು ಚಿಕ್ಕದಾಗಿರುವುದನ್ನು ಸೇರಿಸಿ ಹಿಡಿ ಮಾಡಿಕೊಳ್ಳುತ್ತಾರೆ. ಇದನ್ನು ಅಡುಗೆ ಮನೆಯ ಒಲೆ ಗುಡಿಸಲು ಮಾತ್ರ ಉಪಯೋಗಿಸುತ್ತಾರೆ.

ಕುಂಡಿಗೆ ಹುಲ್ಲಿನ ಹಿಡಿ

                ಗಟ್ಟಿಯಾದ ಕುಂಡಿಗೆ ಹುಲ್ಲನ್ನು ತೆಗೆದುಕೊಂಡು ಬುಡದಲ್ಲಿ ಯಾವುದಾದರೂ ಬಳ್ಳಿಯಿಂದ ಅಥವಾ ಬಾಳೆಪಟ್ಟೆಯಿಂದ ಗಂಟು ಹಾಕುತ್ತಾರೆ. ಈ ಹಿಡಿಯನ್ನು ಬೇಸಿಗೆಯಲ್ಲಿ ಅಂಗಳ ಗುಡಿಸಲು ಬಳಸುತ್ತಾರೆ.

ಮೆದೆಚೆಂಟೆ ಹುಲ್ಲಿನ ಹಿಡಿ

                ಮೆದೆಚೆಂಟೆ ಹುಲ್ಲು ಕೆರೆ ಪಕ್ಕದಲ್ಲಿ ಮತ್ತು ಹೊಳೆ (ನದಿ) ಪಕ್ಕದಲ್ಲಿ ಬೆಳೆಯುತ್ತದೆ. ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ತಲೆಯ ಮೇಲೆ ಅಗಲವಾದ ಹೂವು ಇರುತ್ತದೆ. ಹೂವನ್ನು ತೆಗೆದು ನೂರಾರು ಕಡ್ಡಿ ಸೇರಿಸಿ (ಒಂದು ಮುಷ್ಠಿಯಷ್ಟು) ಗಂಟು ಹಾಕಿ ಪೊರಕೆ ಮಾಡುತ್ತಾರೆ. ಮನೆಯಿಂದ ಹೊರಗಡೆ (ಹಿತ್ತಲು, ಬಾಗಿಲು, ಅಂಗಳ) ಗುಡಿಸಲು ಬರುತ್ತದೆ.

 

ತೆಂಗಿನ ಗರಿಯ ಹಿಡಿ

ತೆಂಗಿನ ಹ್ಯಾಡದಲ್ಲಿರುವ ಗರಿಯನ್ನು ಬಿಡಿಸಿ ಕಡ್ಡಿಯನ್ನು ತೆಗೆದು ನೂರಾರು ಕಡ್ಡಿಗಳನ್ನು ಸೇರಿಸಿ ಬುಡದ ಭಾಗದಲ್ಲಿ ಹಗ್ಗದಂದ ಗಂಟು ಹಾಕುತ್ತಾರೆ. ಈ ಹಿಡಿಗೆ ‘ಸೀಕೆ ಹಿಡಿ’ ಎಂದೂ ಕರೆಯುತ್ತಾರೆ. ಇದು ಗಟ್ಟಿಮುಟ್ಟಾಗಿರುತ್ತದೆ. ಮನೆಯಿಂದ ಹೊರಗೆ ಗುಡಿಸಲು ಹೆಚ್ಚಾಗಿ ಬಳಸುತ್ತಾರೆ. ಇತ್ತೀಚೆಗೆ ಪ್ಲಾಸ್ಟಿಕ್ ಕಡ್ಡಿ ಹಿಡಿಗಳು ಬಂದಿವೆ.

ಅಡಿಕೆ ಹ್ಯಾಡದ ಕಡ್ಡಿ ಹಿಡಿ

                ಅಡಿಕೆ ಹ್ಯಾಡದಲ್ಲಿರುವ ಗರಿಯನ್ನು ಬಿಡಿಸಿ ಕಡ್ಡಿಯನ್ನು ತೆಗೆದು ನೂರಾರು ಕಡ್ಡಿಗಳನ್ನು ಸೇರಿಸಿ ಬುಡದ ಭಾಗದಲ್ಲಿ ಗಟ್ಟಿಯಾದ ಗಂಟನ್ನು ಹಾಕಿ ಹಿಡಿಯನ್ನು ತಯಾರಿಸುತ್ತಾರೆ. ಇದು ಸೀಕೆ ಹಿಡಿಯಷ್ಟು ಉದ್ದವಾಗದಿದ್ದರೂ ಮನೆಯ ಒಳಗಡೆ ಮತ್ತು ಹೊರಗಡೆ ಗುಡಿಸಲು ಬರುತ್ತದೆ.

ಕಾಡು ಕಡಲೆ ಗಿಡದ ಪೊರಕೆ

                ಹಳ್ಳಿಗಳಲ್ಲಿ ರಸ್ತೆಗಳ ಎರಡೂ ಬದಿಯಲ್ಲಿ ಕಾಡು ಕಡಲೆ ಗಿಡ ಎಂಬ ಗಿಡ ಬೆಳೆಯುತ್ತದೆ. ಈ ಗಿಡವನ್ನು ಬುಡಸಹಿತ ಕೀಳಬಹುದು. ಮಲೆನಾಡಿನಲ್ಲಿ ಕಡಿಮೆ ಬೆಳೆಯುತ್ತದೆ. ಬಯಲುಸೀಮೆಯಲ್ಲಿ ಹೆಚ್ಚು ಬೆಳೆಯುತ್ತದೆ. ಬುಡಸಹಿತ ಕಿತ್ತು ತಂದು ಎರಡು ಮೂರು ಸೇರಿಸಿ ಬುಡವನ್ನು ಸರಿಯಾಗಿ ಕತ್ತರಿಸಿ ದಾರದಿಂದ ಗಂಟು ಹಾಕಿದರೆ ಉತ್ತಮ ಪೊರಕೆಯಾಗುತ್ತದೆ. ಮನೆಯ ಮುಂದಿನ ಅಂಗಳ, ರಸ್ತೆ ಗುಡಿಸಲು ಉತ್ತಮ ಪೊರಕೆಯಾಗುತ್ತದೆ. ಬಾಳಿಕೆಯೂ ಬರುತ್ತದೆ.

ಸಲ್ಲ್ಹಿಡಿ

                ಮಲೆನಾಡಿನ ಕಾಡುಗಳಲ್ಲಿ ’ಅರಚಟ್ಟಿ’ ಎಂಬ ಜಾತಿಯ ಮರವಿರುತ್ತದೆ. ವಕ್ಕಲು ಮಾಡುವಾಗ ಕಣದಲ್ಲಿ ಈ ಹಿಡಿಯನ್ನು ಹೆಚ್ಚು ಬಳಸುತ್ತಾರೆ.

                ಇದು ದೊಡ್ಡ ಮರವಾಗಿ ಬೆಳೆಯುವುದಿಲ್ಲ. ಸಣ್ಣ ಗಿಡವೂ ಅಲ್ಲ. ಸಾಧಾರಣ ಎತ್ತರವಾಗಿ ಬೆಳೆಯುತ್ತದೆ. ಆದರೆ ಇದು ತುಂಬಾ ಗಟ್ಟಿಜಾತಿಯದು. ಇದರಿಂದ ನಿಂತುಕೊಂಡೇ ಗುಡಿಸುತ್ತಾರೆ. ಆರು ಅಡಿ ಎತ್ತರವಿರುತ್ತದೆ. ಒಮ್ಮೆ ಹಿಡಿಯನ್ನು ಮಾಡಿಕೊಂಡರೆ ಒಂದು ವರ್ಷ ಬಳಸಬಹುದು. ಕಣದಲ್ಲಿ ಭತ್ತ, ಜಳ್ಳು, ಹೊಟ್ಟು, ಗಟ್ಟಿಭತ್ತ ಹೀಗೆ ಎಲ್ಲಾ ವಸ್ತುಗಳನ್ನು ಗುಡಿಸಿ ರಾಶಿ ಮಾಡಬಹುದು.

ದಡಸಲು ಹಿಡಿ

                ಮಲೆನಾಡಿನ ಕಾಡುಗಳಲ್ಲಿ ದಡಸಲು ಎಂಬ ಜಾತಿಯ ಮರಗಳು ಬೆಳೆಯುತ್ತವೆ. ಈ ಮರಗಳ ಹ್ಯಾಡದ ಗರಿಯಿಂದ ಕಡ್ಡಿ ಪೊರಕೆಗಳನ್ನು ತಯಾರಿಸಬಹುದು. ದಡಸಲು ಮರದ ಹ್ಯಾಡವನ್ನು ಕಡಿದು ಹ್ಯಾಡದಲ್ಲಿರುವ ಗರಿಗಳಿಂದ ಕೂಡಿರುವ ಕಡ್ಡಿಯನ್ನು ಬೇರ್ಪಡಿಸಿ ನೂರಾರು ಕಡ್ಡಿಗಳನ್ನು ಸೇರಿಸಿ ಬುಡದಲ್ಲಿ ದಾರದಿಂದ ಗಂಟು ಹಾಕಿದರೆ ಹಿಡಿ ತಯಾರಾಗುತ್ತದೆ. ಮನೆಯ ಹಿತ್ತಲು, ಬಾಗಿಲು, ಅಂಗಳವನ್ನು ಚೊಕ್ಕವಾಗಿ ಗುಡಿಸಬಹುದು.

ದಪ್ಪ ಕರಡದ ಪೊರಕೆ

                ಕರಡದ ಬ್ಯಾಣದಲ್ಲಿ ಚೆನ್ನಾಗಿ ಬೆಳೆದ ಕರಡದ ಕಡ್ಡಿಗಳನ್ನು ಸೇರಿಸಿ ಪೊರಕೆಯನ್ನು ತಯಾರಿಸುತ್ತಾರೆ. ಇದರಿಂದ ಮನೆಯ ಅಂಗಳವನ್ನು ಗುಡಿಸಬಹುದು.

ಬಗಿನಿ ಹಿಡಿ

                ಮಲೆನಾಡಿನ ಕಾಡುಗಳಲ್ಲಿ ಬಗಿನೆ ಮರಗಳು ಇವೆ. ಈ ಹಿಂದೆ ಈ ಮರಗಳಿಂದ ಬಗಿನೆ ಹೆಂಡ ಇಳಿಸುತ್ತಿದ್ದರು. ಬಯಲುನಾಡಿನ ಈಚಲು ಮರಗಳಿಂದ ಹೆಂಡ ಇಳಿಸಿ ಈಡಿಗರಾದರು. ಕರಾವಳಿಯಲ್ಲಿ ಬೆಳೆಯುವ ತೆಂಗಿನಮರದಲ್ಲಿ ಹೆಂಡ ಇಳಿಸಿ ತೆಂಗಿನ ದೀವರಾದರು. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬೆಳೆಯುವ ಬಗಿನೆ ಮರಗಳಲ್ಲಿ ಹೆಂಡ ಇಳಿಸಿ ಬಯಿನೆ ದೀವರಾದರು. ಬಗಿನೆ ಮರ ತುಂಬಾ ಗಟ್ಟಿಯಾಗಿರುತ್ತದೆ. ವ್ಯವಸಾಯೋಪಕರಣಗಳಾದ ಕೊರಡು, ಹಲ್ಕು, ಈಸು ಮುಂತಾದವುಗಳನ್ನು ಮಾಡುತ್ತಾರೆ. ಭತ್ತ ಕುಟ್ಟುವ ಒನಿಕೆಗಳನ್ನು ಮಾಡುತ್ತಾರೆ. ಈ ಮರಕ್ಕೆ ಕೊಂಬೆಗಳಿರುವುದಿಲ್ಲ. ಎಲೆಗಳಿಂದ ಕೂಡಿದ ಹ್ಯಾಡಗಳಿರುತ್ತವೆ. ಉತ್ತಮವಾದ ಹ್ಯಾಡವನ್ನು ಹಿಡಿಯಾಗಿ ಬಳಸುತ್ತಾರೆ. ಭತ್ತದ ವಕ್ಕಲು ಕಣಗಳಲ್ಲಿ ಭತ್ತದ ಮೇಲಿರುವ ಹುಲ್ಲಿನ ಹೊಟ್ಟು ಗುಡಿಸಲು ಬಳಸುತ್ತಾರೆ. ಇದನ್ನು ಬಗಿನೆ ಹಿಡಿ ಎನ್ನುತ್ತಾರೆ.

ಹಿಟ್ಟಂಡೆ ಹುಲ್ಲಿನ ಹಿಡಿ

                ಮಲೆನಾಡಿನಲ್ಲಿ ಭತ್ತವನ್ನು ಕೊಯ್ಲು ಮಾಡಿದ ನಂತರ ತೇವವಿರುವ ಗದ್ದೆಗಳಲ್ಲಿ ಅಪರೂಪ ಮತ್ತು ವೈಶಿಷ್ಟ್ಯಮಯವಾದ ಹುಲ್ಲು ಬೆಳೆಯುತ್ತದೆ. ಈ ಹುಲ್ಲಿಗೆ ‘ಹಿಟ್ಟಂಡೆ’ ಎನ್ನುತ್ತಾರೆ. ಇದು ಕೆರೆಗಳ ಅಂಚಿನಲ್ಲಿ, ತೇವವಿರುವ ಗದ್ದೆಗಳಲ್ಲಿ ಬೆಳೆಯುತ್ತದೆ. ಇದರ ಒಂದು ಬುಡದಲ್ಲಿ ಎಂಟು ಹತ್ತು ಕಡ್ಡಿಗಳಿರುತ್ತವೆ. ಎಲ್ಲಾ ಕಡ್ಡಿಯ ನೆತ್ತಿಯ ಮೇಲೆ ಬಳಿಬಣ್ಣದ ಹೂವುಗಳಿರುತ್ತದೆ. ತಲೆಯ ಹೂವುಗಳನ್ನು ಕತ್ತರಿಸಿ ಹುಲ್ಲನ್ನು ಮಾತ್ರ ಕಿತ್ತುಕೊಂಡು ಬುಡದ ಭಾಗದಲ್ಲಿ ಜಡೆ ಹೆಣೆದಂತೆ ಸುಂದರವಾಗಿ ಹೆಣಿಗೆ ಹಾಕುತ್ತಾರೆ. ನೂರಾರು ಹುಲ್ಲಿನ ಕಡ್ಡಿ ಸೇರಿಸಿ ಹೆಣಿಗೆ ಹಾಕಿ ಸುತ್ತಿ ಹುಲ್ಲಿನಿಂದಲೇ ಗಂಟು ಹಾಕುತ್ತಾರೆ. ತುಂಬಾ ಸುಂದರವಾಗಿ ಹಿಟ್ಟಂಡೆ ಹಿಡಿಯನ್ನು ಮಾಡುತ್ತಾರೆ. ಹಿಡಿಗಳು ಹತ್ತು ಇಂಚು ಉದ್ದವಿರುತ್ತವೆ. ದೇವರಕೋಣೆಯಲ್ಲಿ ಆಗಾಗ್ಯೆ ದೇವರಸ್ಥಳವನ್ನು ಗುಡಿಸಲು ಉಪಯೋಗಿಸುತ್ತಾರೆ.

                ಈ ಹುಲ್ಲಿನಿಂದ ಸಿಬ್ಲ, ಪೆಟ್ಟಿಗೆ, ಹೂದಾನಿ, ಇರಿಕೆ, ಬುಟ್ಟಿ, ಚಿಕ್ಕಪೆಟ್ಟಿಗೆ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ.

 

 

ಇರಿಕೆಗಳು

                ಮಡಕೆಗಳು ಮತ್ತು ಲೋಹದ ಪಾತ್ರೆಗಳನ್ನು ನೆಲದ ಮೇಲೆ ಸುರಕ್ಷಿತವಾಗಿಡಲು ಇರಿಕೆಗಳನ್ನು ಬಳಸುತ್ತಾರೆ. ಈ ಇರಿಕೆಗಳನ್ನು ಗ್ರಾಮೀಣ ಭಾಗದಲ್ಲಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಅನೇಕ ವಿನಯಾಸಗೀಮದ ತುಂಬಾ ಸುಂದರವಾಗಿ ಮತ್ತು ಕಲಾತ್ಮಕವಾಗಿ ತಯಾರಿಸುತ್ತಾರೆ. ಅವುಗಳು ಈ ರೀತಿ ಇರುತ್ತವೆ.

ಏಲಕ್ಕಿ ಇರಿಕೆ

                ಎಂಟು ಇಂಚು ವ್ಯಾಸದ ಹುಲ್ಲಿನ ದಿಂಡನ್ನು ತಯಾರಿಸಿಕೊಂಡು ದಿಂಡಿನ ಸುತ್ತ ಬಾಳೆಪಟ್ಟೆಯಂದ ಸುತ್ತುತ್ತಾರೆ. ನಂತರ ಏಲಕ್ಕಿ ಗರಿಯನ್ನು ಹುರಿಮಾಡಿ ಬಿಗಿಯಾಗಿ ಸುತ್ತುತ್ತಾ ಹೋಗಬೇಕು. ಏಲಕ್ಕಿ ಇರಿಕೆ ತಯಾರಾಗುತ್ತದೆ ಮತ್ತು ಸುಂದರವಾದ ಇರಿಕೆಯಾಗುತ್ತದೆ.

ಅಡಿಕೆ ಹೊಂಬಾಳೆ ಇರಿಕೆ

                ಒಂದು ಮುಷ್ಠಿ ಹುಲ್ಲಿನಿಂದ ಏಳು, ಆರು ಹಾಗೂ ಐದು ಇಂಚು ವ್ಯಾಸದ ದಿಂಡುಗಳನ್ನು ಪ್ರತ್ಯೇಕ ಮಾಡಿಕೊಂಡು ನಂತರ ಬಾಳೆಪಟ್ಟೆಯಿಂದ ದಿಂಡನ್ನು ಗಟ್ಟಿಯಾಗಿ ಸುತ್ತುತ್ತಾರೆ. ಈ ದಿಂಡಿನ ಮೇಲೆ ಹೊಂಬಾಳೆ ಸೀಳುಗಳನ್ನು ಹುರಿ ಮಾಡಿ ಸುತ್ತಬೇಕು. ಕೊನೆಯಲ್ಲಿ ಗಟ್ಟಿಯಾಗಿ ಗಂಟು ಹಾಕುತ್ತಾರೆ.

ಕುಂಡಿಗೆ ಹುಲ್ಲಿನ ಇರಿಕೆ

                ಒಂದು ಮುಷ್ಠಿಯಷ್ಟು ಕುಂಡಿಗೆ ಹುಲ್ಲನ್ನು ಆರು, ಏಳು ಹಾಗೂ ಎಂಟು ಇಂಚು ವ್ಯಾಸಗಳ ದಿಂಡುಗಳನ್ನು ತಯಾರಿಸಿ ನಂತರ ದಿಂಡನ್ನು ಬಾಳೆಪಟ್ಟೆಯಿಂದ ಸುತ್ತು ಹಾಕಿ ನಂತರ ಕುಂಡಿಗೆ ಹುಲ್ಲನ್ನು ಹುರಿ ಮಾಡಿ ದಿಂಡಿಗೆ ಸುತ್ತುತ್ತಾರೆ.

ಹಿಟ್ಟಂಡೆ ಹುಲ್ಲಿನ ಇರಿಕೆ

                ಒಂದು ಮುಷ್ಠಿ ಹುಲ್ಲನ್ನು ದಿಂಡು ಮಾಡಿ ದಿಂಡಿಗೆ ಬಾಳೆಪಟ್ಟೆ ಸುತ್ತುತ್ತಾರೆ. ನಂತರ ದಿಂಡಿಗೆ ಹಿಟ್ಟಂಡೆ ಹುಲ್ಲನ್ನು ಹುರಿ ಮಾಡಿ ಸುತ್ತಬೇಕು. ಮದುವೆ ಮನೆಗಳಲ್ಲಿ, ದೇವರಕಾರ್ಯ, ಗೃಹಪ್ರವೇಶದಲ್ಲಿ ಕಳಸಗಳನ್ನು ಕಳಸದ ಮೇಲೆ ಇಡಲು ಬಳಸುತ್ತಾರೆ.

ವಾಟೆ ಬಿದಿರು ಇರಿಕೆ

                ಕಾಡಿನಲ್ಲಿ ಬೆಳೆಯುವ ವಾಟೆ ಎಂಬ ಜಾತಿಯ ಬಿದಿರನ್ನು ತಂದು ಅಳತೆಗೆ ಸರಿಯಾಗಿ ಕತ್ತರಿಸಿ ವಾಟೆಯನ್ನು ಸೀಳು ಮಾಡಿ ಸೀಳುಗಳಿಂದ ಜಡೆ ರೀತಿಯಲ್ಲಿ ಹೆಣಿಗೆ ಹಾಕಿ ಇರಿಕೆ ಮಾಡುತ್ತಾರೆ. ಈ ಇರಿಕೆಗಳು ಗಟ್ಟಿಯಾಗಿರುತ್ತವೆ.

ಕೊಟ್ಟೆ ಬಳ್ಳಿಯ ಇರಿಕೆ

                ಕಾಡಿನಲ್ಲಿ ಚೆನ್ನಾಗಿ ಬೆಳೆದ ಕೊಟ್ಟೆಬಳ್ಳಿಯನ್ನು ತಂದು ಇರಿಕೆಯ ರೂಪದಲ್ಲಿ ಹೆಣೆಯುತ್ತಾರೆ. ನಮಗೆ ಬೇಕಾದ ಅಳತೆಯ ಇರಿಕೆಗಳನ್ನು ತಯಾರಿಸಿಕೊಳ್ಳಬಹುದು. ಕೊಟ್ಟೆಬಳ್ಳಿಯಂದ ಪೆಟ್ಟಿಗೆ, ಹೂದಾನಿ, ದೊಡ್ಡ ಪೆಟ್ಟಿಗೆ ಮತ್ತು ಮುಚ್ಚಳ ಮಾಡುತ್ತಾರೆ.

ಬೆತ್ತದ ಪೆಟ್ಟಿಗೆ

                ಮಲೆನಾಡಿನ ದಟ್ಟವಾದ ಅರಣ್ಯಗಳಲ್ಲಿ ಬೆತ್ತ ಯಥೇಚ್ಛವಾಗಿ ಬೆಳೆಯುತ್ತಿತ್ತು. ಬೆತ್ತದಿಂದ ಕುರ್ಚಿಗಳು, ಟೇಬಲ್, ಸೋಫಾ, ಟೀಪಾಯಿ, ಮಂಚ ಇತ್ಯಾದಿ ವಸ್ತುಗಳನ್ನು ತಯಾರು ಮಾಡುವ ಬೆತ್ತದ ಕೆಲಸ ಮಾಡುವ ಕೇಂದ್ರಗಳು ಅಲ್ಲಲ್ಲಿ ಪ್ರಾರಂಭವಾದವು. ಈ ಕೇಂದ್ರಗಳಲ್ಲಿ ಜನಗಳಿಗೆ ಬೇಕಾಗುವ ವಿವಿಧ ಪೀಠೋಪಕರಣಗಳನ್ನು ತಯಾರು ಮಾಡುತ್ತಿದ್ದರು. ಈ ವಸ್ತುಗಳಲ್ಲಿ ಜನಸಾಮಾನ್ಯರನ್ನು ಆಕರ್ಷಿಸಿದ್ದು ಬೆತ್ತದ ಪೆಟ್ಟಿಗೆಗಳು. ದೀವರಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡುವಾಗ ಬೆತ್ತದ ಪೆಟ್ಟಿಗೆಗಳನ್ನು ಹೆಣ್ಣುಮಕ್ಕಳಿಗೆ ಬಳುವಳಿಯಾಗಿ ಕೊಡುವುದು ರೂಢಿಗೆ ಬಂತು. ಬೆತ್ತ ತುಂಬಾ ವರ್ಷಗಳವರೆಗೆ ಹಾಳಾಗದಂತೆ ಬಾಳಿಕೆ ಬರುತ್ತದೆ. ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ತಮ್ಮ ವಸ್ತ್ರ, ಒಡವೆ ಇತ್ಯಾದಿ ತಮ್ಮ ವೈಯಕ್ತಿಕ ವಸ್ತುಗಳನ್ನು ಬೆತ್ತದ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಕೊಳ್ಳುತ್ತಿದ್ದರು.

                ಬೆತ್ತದ ಪೆಟ್ಟಿಗೆಯ ಉದ್ದ ಎರಡು ಅಡಿ, ಅಗಲ ಒಂದೂವರೆ ಅಡಿ, ಎತ್ತರ ಒಂದೂವರೆ ಅಡಿ ಇರುತ್ತದೆ.

ಪೆಠಾರಿ

                ಬೆತ್ತದ ಪೆಟ್ಟಿಗೆಯಂತೆ ಪೆಠಾರಿಯು ಕೂಡ ಮರದಿಂದ ತಯಾರಿಸಿದ ಪೆಟ್ಟಿಗೆ. ಉದ್ದ ಮೂರು ಅಡಿ, ಅಗಲ ಎರಡೂವರೆ ಅಡಿ, ಎತ್ತರ ಒಂದೂವರೆ ಅಡಿ ಇರುತ್ತದೆ. ಹಲಸು, ನಂದಿ, ಹೊನ್ನೆ ಯಾವುದಾದರೂ ಒಂದು ಜಾತಿಯ ಮರದಿಂದ ತಯಾರಿಸುತ್ತಾರೆ. ತುಂಬಾ ವರ್ಷಗಳ ಹಿಂದೆ ಬೆತ್ತ ಕಾಡಿನಲ್ಲಿ ಬರಿದಾಗಿದೆ. ಈಗ ಬೆತ್ತ ಕಾಣೆಯಾಗಿರುವುದರಿಂದ ಬೆತ್ತದ ವಸ್ತುಗಳನ್ನು ತಯಾರು ಮಾಡುವುದು ನಿಂತುಹೋಗಿರುತ್ತದೆ.

                ಮದುವೆ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಬಳುವಳಿಯಾಗಿ ಬೆತ್ತದ ಪೆಟ್ಟಿಗೆ ಬದಲು ಮರದ ಪೆಟ್ಟಿಗೆ (ಪಿಠಾರಿ) ಕೊಡುತ್ತಿದ್ದರು.

ಮರಗಿ

                ಅವಿಭಕ್ತ (ಕೂಡು ಕುಟುಂಬ) ದೀವರ ಕುಟುಂಬಗಳಲ್ಲಿ ಕುಟುಂಬದ ಯಜಮಾನನ ವಶದಲ್ಲಿ ಮರಗಿ ಇರುತ್ತದೆ, ಆ ಕುಟುಂಬದ ಟ್ರೆಜರಿ ಇದ್ದಹಾಗೆ. ಯಾವುದಾದರೂ ಕಾಡುಜಾತಿಯ ಮರದಿಂದ ತಯಾರಿಸಿರುತ್ತಾರೆ.

                ಹಲಸು, ನಂದಿ, ಹೊನ್ನೆ, ಭರಣಿಗೆ ಇವುಗಳಲ್ಲಿ ಯಾವುದಾದರೂ ಒಂದು ಜಾತಿಯ ಮರದಿಂದ ತಯಾರಿಸಿರುತ್ತಾರೆ. ಕುಟುಂಬದ ಹಣ, ಆಭರಣ ಮುಂತಾದ ಮುಖ್ಯವಸ್ತುಗಳನ್ನು ಯಜಮಾನ ಇಟ್ಟುಕೊಂಡಿರುತ್ತಾನೆ. ಇದರ ಉದ್ದ ಐದು ಅಡಿ, ಅಗಲ ಎರಡು ಅಡಿ, ಎತ್ತರ ಎರಡು ಅಡಿ ಇರುತ್ತದೆ. ನೂರಾರು ವರ್ಷ ಬಾಳಿಕೆ ಬರುತ್ತದೆ.

ಚಾಪೆಗಳು

ಈಚಲು ಚಾಪೆಗಳು

                ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಬೆಳೆಯುವ ಈಚಲು ಹುಲ್ಲನ್ನು ದೀವರ ಹೆಣ್ಣುಮಕ್ಕಳು ಕೊಯ್ದು ತರುತ್ತಾರೆ. ಈಚಲು ಹುಲ್ಲಿನಲ್ಲಿ ಸಣ್ಣಹುಲ್ಲು, ದೊಡ್ಡ ಹುಲ್ಲು ಎಂದು ವಿಂಗಡಿಸಿ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ದೀವರ ಸಮೂಹದಲ್ಲಿ ಪ್ರತಿಯೊಬ್ಬ ಮಹಿಳೆಯರೂ ಈಚಲು ಚಾಪೆಯನ್ನು ಹೆಣೆಯುತ್ತಾರೆ. ಚಾಪೆಗಳಲ್ಲಿ ಸಣ್ಣಹುಲ್ಲಿನ ಚಾಪೆ ಮತ್ತು ದೊಡ್ಡ ಹುಲ್ಲಿನ ಚಾಪೆಗಳನ್ನು ಪ್ರತ್ಯೇಕವಾಗಿ ಹೆಣೆಯುತ್ತಾರೆ. ಚಾಪೆಗಳಲ್ಲಿ ಐದು ವಿಧಗಳಿವೆ.

1) ಒಂದಾಳು ಮಲಗುವ ಚಾಪೆ

2) ಎರಡಾಳು ಮಲಗುವ ಚಾಪೆ

3) ಅಂಕಣದ ಚಾಪೆ

4) ಅಕ್ಕಿ ಬೀಸೋ ಚಾಪೆ

5) ಪಂಕ್ತಿ ಚಾಪೆ

ಸಣ್ಣ ಹುಲ್ಲಿನ ಒಂದಾಳು ಮಲಗುವ ಚಾಪೆ

                ಎಂಟು ಅಣೆ ಪಟ್ಟೆಯ ಹನ್ನೆರಡು ಪಟ್ಟೆ ಸೇರಿಸಿದರೆ ಒಬ್ಬ ಮನುಷ್ಯ ಮಲಗುವ ಚಾಪೆ ತಯಾರಾಗುತ್ತದೆ. ಈ ಚಾಪೆಯ ಉದ್ದ ಆರು ಅಡಿ, ಅಗಲ ಎರಡೂವರೆ ಅಡಿ ಇರುತ್ತದೆ.

ದೊಡ್ಡ ಹುಲ್ಲಿನ ಚಾಪೆ

                ಆರು ಅಣೆ ಪಟ್ಟೆಯಹನ್ನೆರಡು ಪಟ್ಟೆ ಸೇರಿಸಿ ಒಂದು ಚಾಪೆ ಮಾಡುತ್ತಾರೆ. ಈ ಚಾಪೆಯ ಉದ್ದ ಆರು ಅಡಿ, ಅಗಲ ಎರಡೂವರೆ ಅಡಿ ಇರುತ್ತದೆ.

ದೊಡ್ಡ ಹುಲ್ಲಿನ ದೊಡ್ಡ ಚಾಪೆ

                ಆರು ಅಣೆ ಪಟ್ಟೆ ಚಾಪೆ ಹೆಣೆದು ಇಪ್ಪತ್ತೆರಡು ಪಟ್ಟೆ ಸೇರಿಸಿದರೆ ದೊಡ್ಡ ಚಾಪೆಯಾಗುತ್ತದೆ. ಇದರ ಉದ್ದ ಆರು ಅಡಿ, ಅಗಲ ಐದೂವರೆ ಅಡಿ ಇರುತ್ತದೆ.

 

ದೊಡ್ಡ ಅಂಕಣದ ಚಾಪೆ

                ಇದನ್ನು ದೊಡ್ಡ ಹುಲ್ಲಿನಿಂದ ತಯಾರಿಸುತ್ತಾರೆ. ಕುಟುಂಬದಲ್ಲಿ ಮದುವೆ, ಮುಂಜಿ, ದೇವರಕಾರ್ಯಗಳು ನಡೆದಾಗ ಜನಗಳನ್ನು ಕೂರಿಸಲು ಈ ಚಾಪೆಯನ್ನು ಬಳಸುತ್ತಾರೆ. ಆರು ಅಣೆ ಪಟ್ಟೆ ಚಾಪೆ ಹೆಣೆದು ಮೂವತ್ತೈದು ಪಟ್ಟೆಗಳನ್ನು ಸೇರಿಸಿ ಅಂಕಣದ ಚಾಪೆಯನ್ನು ತಯಾರಿಸುತ್ತಾರೆ. ಇದರ ಉದ್ದ ಇಪ್ಪತ್ತು ಅಡಿ, ಅಗಲ ಒಂಬತ್ತು ಅಡಿ ಇರುತ್ತದೆ.

ಪಂಕ್ತಿ ಚಾಪೆ

                ಕುಟುಂಬದಲ್ಲಿ ಮದುವೆ, ಚೌಳ, ಸತ್ಯನಾರಾಯಣ ವ್ರತ, ಶನಿಕತೆಗಳು ನಡೆದಾಗ, ಸಾಮೂಹಿಕ ಭೋಜನಗಳು ನಡೆಯುವಾಗ ಜನಗಳಿಗೆ ಭೋಜನಕ್ಕೆ ಕೂರಲು ನೆಲಕ್ಕೆ ಹಾಸಲು ಪಂಕ್ತಿಚಾಪೆಗಳನ್ನು ಹಾಕುತ್ತಾರೆ. ಆರು ಅಣೆ ಪಟ್ಟೆ ಚಾಪೆ ಹೆಣೆದು ನಾಲ್ಕು ಪಟ್ಟೆಗಳನ್ನು ಕೂಡಿಸುತ್ತಾರೆ. ಉದ್ದ ಮೂವತ್ತು ಅಡಿ, ಅಗಲ ಒಂದೂವರೆ ಅಡಿ ಇರುತ್ತದೆ.

ಅಕ್ಕಿ ಬೀಸೋ ಚಾಪೆ

                ಆರು ಅಣೆ ಪಟ್ಟೆಯ ಚಾಪೆ ಹೆಣೆದು ಹದಿನೈದು ಪಟ್ಟೆಗಳನ್ನು ಕೂಡಿಸಿ ಒಂದು ಭಾಗವನ್ನು ಮಡಿಸಿ ಸುತ್ತಲೂ ಹೊಲಿಗೆ ಹಾಕುತ್ತಾರೆ. ಉದ್ದ ಐದು ಅಡಿ, ಅಗಲ ಐದು ಅಡಿ ಇರುತ್ತದೆ.

ಚಾಪೆಗಳಿಗೆ ಬಣ್ಣ ಹಾಕುವುದು

                ಸಣ್ಣ ಹುಲ್ಲಿನ ಚಾಪೆಗಳಿಗೆ ಮಾತ್ರ ಬಣ್ಣ ಹಾಕುತ್ತಾರೆ. ಹುಲ್ಲಿಗೆ ಕೆಂಪು ಮತ್ತು ಹಸಿರು ಬಣ್ಣ ಹಾಕಿ ಒಣಗಿಸಿಕೊಳ್ಳುತ್ತಾರೆ. ಮದುವೆಗಳಲ್ಲಿ ಹಸೆಗೋಡೆ ಚಿತ್ತಾರದ ಕೆಳಗೆ ವಧೂವರರನ್ನು ಕೂರಿಸುವಾಗ ಬಳಸುತ್ತಾರೆ. ಸುಮಾರು ಒಂದರಿಂದ ಐದು, ಒಂಬತ್ತು, ಹತ್ತೊಂಬತ್ತು ಚಾಪೆಗಳನ್ನು ಹಾಸುತ್ತಿದ್ದರು. ಈಗ ಹಳ್ಳಿಯ ಮದುವೆಗಳೂ ಕೂಡ ಕಲ್ಯಾಣಮಂಟಪಗಳಲ್ಲಿ ನಡೆಯುತ್ತವೆ. ಅಲ್ಲದೆ ಹಳ್ಳಿಯ ಮಹಿಳೆಯರು ಚಾಪೆ ಹೆಣೆಯುವುದನ್ನು ಕಡಿಮೆ ಮಾಡಿದ್ದಾರೆ.

ಚಾಪೆ ಹುಲ್ಲಿಗೆ ಬಣ್ಣ ಹಾಕುವ ವಿಧಾನ

                ಪೇಟೆಯಲ್ಲಿ ದೊರೆಯುವ ಹುರಿಮಂಜು ಎಂಬ ಬಣ್ಣವನ್ನು (ಕೆಂಪು ಮತ್ತು ಹಸಿರು) ತಂದು ಅರ್ಧ ಲೀಟರು ನೀರು ಕಾಯಿಸಿ ಕುದಿಯುವ ನೀರಿಗೆ ಒಂದು ಚಮಚ ಉಪ್ಪು, ಒಂದು ಚಮಚ ಬೆಲ್ಲ, ಒಂದು ಹನಿ ಕೊಬ್ರಿ ಎಣ್ಣೆ ಮತ್ತು ಕೆಂಪು ಹುರಿಮಂಜು ಹಾಕಿ ಕುದಿಸಬೇಕು. ಅರ್ಧಗಂಟೆ ಕುದಿಸಿದ ನಂತರ ಹುಲ್ಲನ್ನು ಕುದಿಸಿದ ಬಣ್ಣದ ನೀರಿಗೆ ಅದ್ದಿ ಹಿಡಿಯಬೇಕು. ಹಸಿರುಬಣ್ಣ ಹಾಕಲು ಇದೇ ರೀತಿ ಮಾಡಬೇಕು. ಹುಲ್ಲಿಗೆ ಬಣ್ಣ ಹತ್ತಿದ ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.