ನ್ಯಾಯ ಮತ್ತು ಕಟ್ಟುಪಾಡುಗಳು

ಧೀವರ ಕಟ್ಟುಪಾಡುಗಳು

ದಿನಾಂಕ 26.03.1932ರಂದು ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ಮರತ್ತೂರಿನಲ್ಲಿ ಸೇರಿದ ಮಹಾಸಭೆಯಲ್ಲಿ ದೀವರ ಜನಾಂಗದ ಸುಧಾರಣೆ ಬಗೆಗೆ ಅನೇಕ ನಿಯಮಗಳನ್ನು ಅನುಸರಿಸದಿದ್ದವರಿಗೆ ದಂಡ ಮುಂತಾದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ಮಾಡಿದ್ದಾರೆ.

ವಿವಾಹ ನಿಶ್ಚಯ

                ವಿವಾಹ ಕಾರ್ಯಕ್ಕೆ ವಧೂವರರ ನಿಶ್ಚಯವು ಆಯಾ ಊರಿನ ಸದ್ಗøಹಸ್ಥರ ಮುಂದೆ ನಿರ್ಣಯವಾಗತಕ್ಕದ್ದು. ಆಗ್ಯೆ ಪರಸ್ಪರರಲ್ಲಿ ವೀಳ್ಯ ಕೊಡಲ್ಪಟ್ಟ ಬಳಿಕ ತಪ್ಪಬಾರದು.

9) ತಿರಾ

                ಇನ್ನುಮುಂದೆ ವಿವಾಹ ಕಾರ್ಯದಲ್ಲಿ ಗಂಡಿನವರು ಹೆಣ್ಣಿನವರಿಗೆ ತಿರಾ ಕೊಡುವ ಅನ್ಯಾಯ ವಿಕ್ರಯ ಪದ್ಧತಿಯನ್ನು ನಿಲ್ಲಿಸಬೇಕಾಗಿ ಠರಾವು ಇರುತ್ತದೆ. ಹೀಗಿದ್ದೂ ಪರ್ಯಾಯದಿಂದ ಸಾಲ ದಾಗಿನೆ ನೆವಗಳಿಂದ ಗುಪ್ತವಾಗಿ ರೂಪಾಯಿ ವ್ಯವಹಾರ ಮಾಡಬಾರದು.

10) ಅಪವಾದ

                ಈ ವರ್ಷದ ಈ ಹಂಗಾಮಿನ ಪೂರ್ತಾ ನಿಶ್ಚಯವಾದ ಸಂಗತಿಗಳಲ್ಲಿ ಎಷ್ಟೇ ತಿರಾದ ಮಾತುಗಳಾಗರಲಿ, ರೂಪಾಯಿ 50/-ಕ್ಕೆ ಮಿಕ್ಕಿ ಯಾರೂ ತೆಗೆದುಕೊಳ್ಳಬಾರದಾಗಿ ಠರಾವು ಇರುತ್ತದೆ.

11) ಲಗ್ನದ ಖರ್ಚು

                ಲಗ್ನದ ಸಂಬಂಧ ಅವರವರ ಕಡೆಯ ಖರ್ಚು ಅವರವರೇ ನೋಡಿಕೊಳ್ಳಬೇಕು. ಹೆಣ್ಣಿನವರು ಬಡವರಿದ್ದರೆ ಎರಡೂ ಖರ್ಚು ಹಾಕಿ ಗಂಡಿನವರು ಕಾರ್ಯ ಸಾಗಿಸಿಕೊಂಡುಹೋಗಲು ಅಡ್ಡಿಯಿಲ್ಲ.

12) ಲಗ್ನದ ಊಟ

                ಲಗ್ನದಲ್ಲಿ ಶಕ್ತ್ಯಾನುಸಾರ ಸಿಹಿ ತಿನಿಸುಗಳ ಊಟ ಮಾಡಬೇಕು ಹೊರತು ಕರಿದ ಮುಸುರೆ ಚಕ್ಕುಲಿ ಮಾಡಿ ಊರಲ್ಲಿ ಮತ್ತು ನೆಂಟರಲ್ಲಿ ಹಂಚುವುದು, ಮುಸುರೆ ಹೆಡಿಗೆ ತಲೆಯ ಮೇಲೆ ಹೊತ್ತು ಒಯ್ಯುವುದು ಮುಂತಾದ್ದನ್ನು ಮಾಡಬಾರದು. ಲಗ್ನದ ಸಂಬಂಧ ಹೆಣ್ಣಿನವರಿಂದ ಒಂದು, ಗಂಡನವರಿಂದ ಒಂದು ಊಟ ಸಲ್ಲತಕ್ಕದ್ದು.

13) ವಿವಾಹಕ್ಕೆ ಕರೆಯುವುದು

                ವಿವಾಹದಲ್ಲಿ ಎಲ್ಲರನ್ನೂ ಕುಂಕುಮ ಅಕ್ಷತೆಗಳಿಂದ ಕರೆಯಬೇಕು.

14) ಬಳುವಳಿ

                ಲಗ್ನದ ಅನಾವಶ್ಯಕ ಖರ್ಚಿಗೆ ಕಾರಣವಾದ ಉಡುಗೊರೆ, ಬಾಳುಬಳುವಳಿ ಮೊದಲಾದವುಗಳನ್ನು ಪರಸ್ಪರರು ಮಾಡಬಾರದೆಂದು ನಿರ್ಧರಿಸಿದೆ.

15) ದಾಗಿನೆ

                ಗಂಡಿನವರು ಹೆಣ್ಣಿನವರಿಗೆ ವಾಲೆಜೋಡು, ದುಂಡು, ಹಿಂಬಳೆ, ಕೋಲುಕಡಗ ಇಷ್ಟೇ ದಾಗಿನೆ ತರಬೇಕು. ಶ್ರೀಮಂತರು ಸಹಾ ಲಗ್ನದಲ್ಲಿ ಇದಕ್ಕೂ ಹೆಚ್ಚು ದಾಗಿನೆ ತರಬಾರದು. ಹಿಂದಿನಿಂದ ತಮಗೆ ಇಷ್ಟವಿದ್ದ ದಾಗಿನೆಗಳನ್ನು ಮಾಡಿಸುವುದರಲ್ಲಿ ಆತಂಕವೂ ಇರುವುದಿಲ್ಲ.

16) ಜವಳಿ

                ಗಂಡಿನವರು ಹೆಣ್ಣಿನವರಿಗೆ ಒಂದು ಧಾರೆ ಸೀರೆ, ಒಂದು ಹಸೆ ಸೀರೆ, ಒಂದು ಮುಸುಕಿನ ಸೀರೆ ಈ ರೀತಿ ಮೂರು ಸೀರೆಗಳನ್ನು ಕೊಡಬೇಕು. ಈ ಹೊರತು ಧಾರೆಯೆರೆದುಕೊಡುವವರಿಗೆ ಒಂದು ಧೋತರ, ಒಂದು ಸೀರೆ ಕೊಡಬೇಕು. ಬಳುವಳಿಯನ್ನು ಹೆಣ್ಣಿನ ಪಾಲಕರು ಹೊರತು ಅನ್ಯರ್ಯಾರೂ ಕೊಡತಕ್ಕದ್ದಲ್ಲ.

17) ಪುರುಷರ ಆಚರಣೆ

                ಗಂಡಸರು ನಮ್ಮ ವೈಷ್ಣವ ಸೂಚಕವಾದ ಉದ್ದನಾಮವನ್ನು ಹಣೆಯಲ್ಲಿ ಧರಿಸಬೇಕು. ನಮ್ಮ ಸಮಾಜದವರು ವಿಶೇಷವಾಗಿ ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕು.

18) ಸೌಭಾಗ್ಯವತಿಯರ ಆಚರಣೆ

                ಹೆಂಗಸರು ಮೂಗುತಿ, ಬಳೆ, ಕುಂಕುಮ ಧರಿಸಬೇಕು. ಕೊರಳಲ್ಲಿ ಕರಿಮಣಿ, ಹುಟ್ಟುತಾಳಿ ಸೌಭಾಗ್ಯವಾಗಿ ಧರಿಸಬೇಕು.

19) ಸತ್ಕಾರ

                ನಮ್ಮ ಜನರು ಇನ್ನುಮುಂದೆ ‘ಸಲಾಮು’ ಪದ್ಧತಿಯನ್ನು ಬಿಟ್ಟು ‘ನಮಸ್ಕಾರ’ ಎನ್ನುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.

20) ಸ್ವದೇಶಿ

                ಗಂಡಸರು, ಹೆಂಗಸರು ಸ್ವಾಭಿಮಾನ ಮತ್ತು ಆರ್ಥಿಕ ದೃಷ್ಟಿಯಿಂದ ಸ್ವದೇಶಿಯನ್ನೇ ಬಳಸಬೇಕು. ಹೆಂಗಸರು ಕರಿಮಣಿ, ಬಳೆಗಳನ್ನು ತೊಡಬೇಕು.

21) ಸೂತಕಶುದ್ಧಿ

                ಜನನ ಮರಣಗಳಲ್ಲಿ ಹತ್ತು ರಾತ್ರಿ ಸೂತಕದಲ್ಲಿ ಕಳೆದು ಹನ್ನೊಂದನೇ ದಿವಸ ಅರವಿ ಅಂಚಡಗಳನ್ನೆಲ್ಲಾ ತೊಳೆದು ಗೋಮಯದಿಂದ ಮನೆಯನ್ನು ಸಾರಿಸಿ ಪಂಚಗವ್ಯದಿಂದ ಆ ಮನೆಯವರು ತಮ್ಮ ದೇಹವನ್ನು ಮತ್ತು ವಸ್ತುಗಳನ್ನು ಶುದ್ಧಿಗೊಳಿಸತಕ್ಕದ್ದು.

22) ರಜಸ್ವಲೆ

                ಮುಟ್ಟಾದ ಹೆಂಗಸರು ಮೂರು ದಿವಸ ಹೊರಗೆ ಇದ್ದು ನಾಲ್ಕನೇ ದಿವಸ ಎರಕೊಂಡು ಒಳಗೆ ಬರತಕ್ಕದ್ದು.

23) ವಿಧವಾ ಆಚರಣೆ

                ವಿಧವೆಯರು ಮೂಗುತಿ, ಬಳೆಗಳನ್ನು ಧರಿಸಬಾರದು. ಕುಂಕುಮ ಹಚ್ಚಬಾರದು.

24) ಸೀರೆ ಉಡುಗೆ

                ತಾರುಣ್ಯ ಇರತಕ್ಕ ಹೆಂಗಸಿಗೆ ವೈಧವ್ಯ ಬಂದಲ್ಲಿ ಅವಳು ಧರ್ಮಪ್ರಕಾರ ನೀತಿಯಿಂದಿರುವಲ್ಲಿ ಸಮಾಜದ ಸಮ್ಮತಿಯಿಂದ ಪುನರ್ವಿವಾಹ ಮಾಡಿಕೊಳ್ಳಬಹುದು.

25) ಮುಂಡೆಬಸುರು

                ವಿಧವೆಯು ಉಡುಕಿ ಮಾಡಿಕೊಳ್ಳದೇ ಹಾಗೆ ಉಳಿದು ಅನೀತಿ ವ್ಯವಹಾರ ನಡೆಸಿದ್ದು ನಿಜವಾದಲ್ಲಿ ಅಥವಾ ಮುಂಡೆಬಸುರು ಅದಲ್ಲಿ ಅವಳನ್ನು ಸಮಾಜದಿಂದ ಹೊರಗೆ ಹಾಕಬೇಕು.

26) ಮದ್ಯಪಾನ ನಿಷೇಧ

                ಇನ್ನೂ ಮೇಲಾಗಿ ನಮ್ಮ ಸಮಾಜದವರು ಸೇಂದಿ, ಸಾರಾಯಿ, ಮದ್ಯ ಮಾಡಬಾರದು ಮತ್ತು ಕುಡಿಯಬಾರದು, ಮಾರಾಟ ಮಾರಬಾರದೆಂದು ನಿರ್ಬಂಧಿಸಲ್ಪಟ್ಟಿದೆ. ಈ ವ್ಯಸನದಿಂದ ನಮ್ಮ ಸಮಜದಲ್ಲಿ ಹೀನತ್ವವೂ, ಅನಾರೋಗ್ಯವೂ, ದ್ರವ್ಯಹಾನಿಯೂ ಒದಗಿರುವುದಲ್ಲದೇ ನಮ್ಮ ಸಮಾಜದ ಸೋಮಾರಿತನಕ್ಕೂ, ದರಿದ್ರಕ್ಕೂ, ಅವನತಿಗೂ ಇದೇ ಕಾರಣವಾಗಿರುತ್ತದೆ.

27) ಮೆಟ್ಟಿನಿಂದ ಹೊಡೆಸಿಕೊಳ್ಳುವಿಕೆ

                ಮೆಟ್ಟಿನಿಂದ ಹೊಡೆದವನು ಅಥವಾ ಹೊಡೆಸಿಕೊಂಡವರು ಸ್ವಜಾತಿಯವರೇ ಆಗಿದ್ದಲ್ಲಿ ಉಭಯತರೂ ಪ್ರಾಯಶ್ಚಿತ್ತ, ತೀರ್ಥ-ಪ್ರಸಾದದಿಂದ ಪುನೀತರಾಗತಕ್ಕದ್ದು. ಖರ್ಚುವೆಚ್ಚಗಳನ್ನು ಆಯಾ ಸ್ಥಳಗಳ ಪಂಚರು ಪರಿಸ್ಥಿತಿ, ವಿಚಾರದಿಂದ ನಿರ್ಣಯಿಸಬೇಕು. ಭಿನ್ನ ಜಾತಿಯವರಿಗೆ ಹೊಡೆದಲ್ಲಿ ಸಹಾ ಅವನು ರೀತಿಪ್ರಕಾರ ಪುನೀತರಾಗಬೇಕು. ಅನ್ಯರಿಂದ ಹೊಡೆಸಿಕೊಂಡಲ್ಲಿ ಸಮಾಜದವರು ಅವನು ನಿರಪರಾಧಿ ಎಂದು ಕಂಡಲ್ಲಿ ಸುಲಭ ಖರ್ಚಿನಲ್ಲಿ ಶುದ್ಧಿಪಡಿಸಬಹುದು. ಆದರೆ ಈ ಎಲ್ಲಾ ಸಂಗತಿಗಳಲ್ಲಿ ಬರೀ ಅಪವಾದ ಮಾತ್ರದಿಂದ ಏನೂ ಕೆಲಸ ನಡೆಸತಕ್ಕದ್ದಲ್ಲ. ಪೂರ್ಣ ರುಜುವಾತು ಆದರೆ ಮಾತ್ರ ಕೆಲಸ ನಡೆಸಬೇಕು.

28) ನಿಷಿದ್ಧ ಸಂಗತಿಗಳು

                ಅನ್ಯ ಸಮಾಜದವರ ಮರಣಾಂತ್ಯದಲ್ಲಿ ಪ್ರೇತ ವ್ಯವಸ್ಥೆಗೆ ಸಮಾಧಿಯನ್ನು ಅಗೆಯುವುದು, ಕಟ್ಟಿಗೆ ಮಾಡಿಕೊಡುವುದು ಮುಂತಾದ ಕೆಲಸಗಳನ್ನು ಮಾಡಬಾರದು.

29) ಲಗ್ನ ಶುಭಕಾರ್ಯಗಳಲ್ಲಿ ದಕ್ಷಿಣೆ

                ಶುಭಕಾರ್ಯಗಳಲ್ಲಿ ಆ ಕಾಲಕ್ಕೆ ಹಾಜರಿದ್ದ ವೈದಿಕರು, ಭಿಕ್ಷುಕರು, ಅಂಗಹೀನರು ಮೊದಲಾದವರಿಗೆ ದಕ್ಷಿಣೆ ಕೊಡಬೇಕು. ದಕ್ಷಿಣೆಯು ಮರ್ಯಾದೆಯ ದ್ಯೋತಕವಲ್ಲ. ಧರ್ಮಕಾರ್ಯ ಎಂಬುದನ್ನು ಎಲ್ಲರೂ ಲಕ್ಷ್ಯದಲ್ಲಿಡತಕ್ಕದ್ದು. ವೀಳ್ಯ, ಸಕ್ಕರೆಪೊಟ್ಟಣಗಳ ಮರ್ಯಾದೆ ಎಲ್ಲರಿಗೂ ಕೊಡಬಹುದು.

30) ದೀಪಾವಳಿ ಭಿಕ್ಷೆ (ಬಿಂಗಿ)

                ದೀಪಾವಳಿ ತರುವಾಯ ಬೇರೆ ಸಮಾಜದಲ್ಲಿ ಹೋಗಿ ಬೇಡುವ ಪದ್ಧತಿ ಕೆಲವು ಕಡೆ ಇದೆ. ಅದು ಬಹಳ ಹೀನವಾದ್ದರಿಂದ ಅದನ್ನು ಇನ್ನು ಮುಂದೆ ರದ್ದುಪಡಿಸಿದೆ.

31) ಹಬ್ಬಕಾಣಿಕೆ

                ದೀಪಾವಳಿ ತರುವಾಯ ಬೇರೆ ಸಮಾಜದಲ್ಲಿ ಹೋಗಿ ಬೇಡುವ ಪದ್ಧತಿ ಕೆಲವು ಕಡೆ ಇದೆ. ಅದು ಬಹಳ ಹೀನವಾದ್ದರಿಂದ ಅದನ್ನು ಇನ್ನುಮುಂದೆ ರದ್ದುಪಡಿಸಿದೆ.

32) ಅಳಿಯನಿಗೆ ಕೊಡೆ

                ಕೊಡೆ ಅಮಾವಾಸ್ಯೆಗೆ ಅಳಿಯಂದಿರಿಗೆ ಈಗ ಇರುವ ಪರದೇಶಿ ಕೊಡೆಯನ್ನು ಕೊಡುವ ಪದ್ಧತಿಯನ್ನು ನಿಲ್ಲಿಸಿ ಕಂಬಳಿ ಅಥವಾ ತಾಳೆಕೊಡೆಗಳನ್ನು ಕೊಡತಕ್ಕದ್ದು.

33) ಮದುಮಗನಿಗೆ ಜೋಡು

                ಮದುವೆಯ ಕಾಲಕ್ಕೆ ಮದುಮಗನು ಕಾಲಿಗೆ ಮೆಟ್ಟಿನ ಜೋಡನ್ನು ಹಾಕುವುದನ್ನು ನಿಲ್ಲಿಸಬೇಕು(ತಕ್ಕದ್ದು).

34) ಮಾಂಸ ನಿಷೇಧ

                ಲಗ್ನ ಮುಂತಾದ ಯಾವುದೇ ಶುಭಕಾರ್ಯಗಳಲ್ಲಿ ಮೀನು ಸಹಿತ ಯಾವುದೇ ಮಾಂಸಾಹಾರವನ್ನು ಉಪಯೋಗಿಸಕೂಡದು.

35) ವಧೂವರರ ಆಭರಣ

                ಲಗ್ನಕಾಲಕ್ಕೆ ಮದುಮಗನಿಗೆ ಕಾಸಿತಾಳಿ, ಮುಂದಲೆಬಟ್ಟು, ಕಾಲುನಗ-ಈ ದಾಗಿನಗಳನ್ನು ಹಾಕಬಾರದು ಹಾಗೂ ಮದುವಣಗಿತ್ತಿಗೆ ಗಂಡಸರು ಹಾಕುವ ಥರದ ಬೆಳ್ಳಿಯ ಉಡುದಾರವನ್ನು ಹಾಕಕೂಡದು.

36) ಕೇಲುಕುಂಭದ ನಿಷೇಧ

                ಲಗ್ನಕಾಲಕ್ಕೆ ವಧುವನ್ನು ವರನ ಮನೆಗೆ ಕಳುಹಿಸುವಾಗ ಕೇಲುಕುಂಭ ಮುಂತಾದ ಮಣ್ಣಿನ ಪಾತ್ರೆಯನ್ನು ಕೊಡಬಾರದು.

ಈ ಮೇಲಿನ ಎಲ್ಲಾ ನಿಯಮಗಳು ಇದೇ ಸಂವತ್ಸರದ ವೈಶಾಖಶುದ್ಧ ಲಾಗಾಯ್ತು ಜಾರಿಯಲ್ಲಿ ಬಂದಿರುವುದಾಗಿ ತಿಳಿಯತಕ್ಕದ್ದು.

ಎರಡನೇ ಠರಾವು : ಇದರಲ್ಲಿ ಬದಲಾವಣೆಯಾಗುವವರೆಗೆ ಇವು ಊರ್ಜಿತವಿರುತ್ತವೆ. ಈ ಠರಾವನ್ನು ಛಾಪಿಸಿ ಪ್ರಕಟಿಸಬೇಕಾಗುತ್ತದೆ.

ಗೃಹ ಸುಧಾರಣೆ

1)            ಮನೆಯಲ್ಲಿ ತಿರುಪತಿ ವೆಂಕಟರಮಣ ದೇವರನ್ನಾಗಲೀ ಅಥವಾ ದೇವರಚಿತ್ರವನ್ನಾಗಲೀ ಇಡಬೇಕು ಮತ್ತು ಮನೆಯ ಮುಂದೆ ತುಳಸಿಕಟ್ಟೆಯನ್ನು ಇಡಬೇಕು. ನಮ್ಮ ನಮ್ಮ ದೇವರ ಮುಂದೆ ಸಂಜೆಯ ವೇಳೆ ಎಣ್ಣೆದೀಪವನ್ನು ಹಚ್ಚಬೇಕು.

2)            ಬೆಂಕಿಯು ಪ್ರತಿಯೊಬ್ಬ ಮನುಷ್ಯನ ಗೃಹದೇವತೆಯಾದ್ದರಿಂದ ಒಲೆಯಲ್ಲಿ ಉಗುಳಬಾರದು.

3)            ಮನೆಯೊಳಗೆ ಊಟ ಮಾಡಿದ ಸ್ಥಳದಲ್ಲಿ ಗೋಮಯದಿಂದ ಸಾರಿಸತಕ್ಕದ್ದು. ಊಟ ಮಾಡಿದ ಗಂಗಾಳವನ್ನು ಬೂದಿಯಿಂದ ತಿಕ್ಕಿ ಎರಡನೆಯವರಿಗೆ ಬಡಿಸಬೇಕು.

4)            ಅನ್ಯ ಆಹಾರವನ್ನು ಬೇಯಿಸುವ ಪಾತ್ರೆ, ಒಲೆಗಳನ್ನು ಬೇರೆ ಮಾಡತಕ್ಕದ್ದು.

5)            ಬೆಳಗ್ಗೆ ಬಾಗಿಲನ್ನು ಸಾರಿಸಿ ರಂಗವಲ್ಲಿಯನ್ನು ಹಾಕಿ ಕುಂಕುಮ ಹೂವುಗಳನ್ನು ಧರಿಸತಕ್ಕದ್ದು.

6)            ವಧುನಿಶ್ಚಯ :

ಹೆಣ್ಣು ನಿಶ್ಚಯ ಮಾಡುವಾಗ ಆಯಾಯ ಗ್ರಾಮದ ಮೆಂಬರುಗಳ ಮುಂದೆ ನಿಶ್ಚಯ ಮಾಡಬೇಕಲ್ಲದೆ ಬೇರೆ ಗ್ರಾಮದ ಮೆಂಬರುಗಳ ಮುಂದೆ ನಿಕ್ಕಿ ಮಾಡಿದ್ದಲ್ಲಿ ಅದು ಖಾಯಂ (ಸಿಂಧು) ಆಗಲಾರದು.

7)            ತಿರಾ :

ಮುಂದಿನ ಮಹಾಸಭೆಯವರೆಗೆ ತಿರಾ 25 ರೂಪಾಯಿಗಳಿಂದ 40 ರೂಪಾಯಿಗಳವರೆಗೆ ತೆಗೆದುಕೊಳ್ಳಬಹುದು.

8)            ಲಗ್ನದ ಬಗ್ಗೆ :

                ಲಗ್ನದಲ್ಲಿ ಚಪ್ಪರದ ಹಣ ಒಂದು ರೂಪಾಯಿಗೆ ಹೆಚ್ಚಿಗೆ ತೆಗೆದುಕೊಳ್ಳಬಾರದು.

9)            ಲಗ್ನದಲ್ಲಿ ವೀಳ್ಯದೆಲೆಯನ್ನು ಐದು ಸಾವಿರದೊಳಗೆ ಖರ್ಚು ಮಾಡತಕ್ಕದ್ದು.

10)          ಧರ್ಮ ಕೊಟ್ಟ ಹೆಣ್ಣಿಗೆ ಮಾಂಗಲ್ಯವಸ್ತುಗಳನ್ನು ಗಂಡನಮನೆಯವರೇ ಮಾಡಿಸಬೇಕು.

11)          ಲಗ್ನದಲ್ಲಿ ತವರುಮನೆಯವರು ಮದುವಣಗಿತ್ತಿಗೆ ಯಾವುದೇ ಮಾಲು (ಆಭರಣ ಇತ್ಯಾದಿ) ದತ್ತ ಕೊಡತಕ್ಕದ್ದಿದ್ದರೆ ಹಂದರದಲ್ಲಿ ಮೆಂಬರುಗಳಿಗೆ ತಿಳಿಸತಕ್ಕದ್ದು.

12)          ಲಗ್ನದಲ್ಲಿ ತಂದೆ-ತಾಯಿಯರೇ ಮದುವಣಗಿತ್ತಿಯನ್ನು ಧಾರೆ ಎರೆಯಬೇಕು. ತಂದೆಯಿಲ್ಲದಿದ್ದರೆ ಸೋದರಮಾವಂದಿರಾಗಲೀ, ಇತರೆಯವರಾಗಲೀ ಧಾರೆ ಎರೆಯಬಹುದು.

13)          ಧಾರೆಯಲ್ಲಿ ಮದುವಣಗಿತ್ತಿಗೆ ಒಂದೇ ಕೋಲ್ಕಡಗ ಹಾಕಬೇಕು.

14)          ಲಗ್ನದಲ್ಲಿ ಜವಳಿಯನ್ನು ಮತ್ತು ಹಣವನ್ನು ಉಡುಗೊರೆ ಮಾಡಬಹುದು.

15)          ಲಗ್ನದಲ್ಲಿ ಹೆಣ್ಣಿಗೆ ಸೀರೆ, ಶಿವ್ಯಾಕಡಗ, ಹಿಂಬಳೆ ಹಣವನ್ನು ತೆಗೆದುಕೊಳ್ಳಬಾರದು.

16)          ಲಗ್ನದಲ್ಲಿ ಭೂಮದಕ್ಕಿ ಅಳೆಯುವುದನ್ನು ನಿಲ್ಲಿಸಬೇಕು.

17)          ಲಗ್ನದಲ್ಲಿ ಮೀಯುವವಳಿಗೆ ತೊಂಡಿಲು ಮತ್ತು ಕಳಸದ ನೀರು ಹಾಕುವುದನ್ನು ನಿಲ್ಲಿಸಬೇಕು.

18)          ಲಗ್ನದಲ್ಲಿ ಮದುಮಗನು ಹೊಸಬಟ್ಟೆಯನ್ನೇ ಧರಿಸಬೇಕು. ಹಳೆಬಟ್ಟೆಯನ್ನು ಧರಿಸಬಾರದು.

19)          ಲಗ್ನದಲ್ಲಿ ಮದುವಣಗಿತ್ತಿಗೆ ಉಡುಗೊರೆಗಳು ಸಲ್ಲತಕ್ಕದ್ದು, ಬೇರೆಯವರಿಗೆ ಸಲ್ಲುವುದಿಲ್ಲ.

20)          ಲಗ್ನದಲ್ಲಿ ಊಟಕ್ಕೆ ಬೆಣತಿಗೆ ಅಕ್ಕಿಯನ್ನೇ ಉಪಯೋಗಿಸಬೇಕು. ಕುಚ್ಚಿಗೆ ಅಕ್ಕಿಯನ್ನು ಉಪಯೋಗಿಸಬಾರದು.

21)          ಭಟ್ಟರ ದಕ್ಷಿಣೆ : ಲಗ್ನದಲ್ಲಿ ಭಟ್ಟರಿಗೆ ಕೊಡತಕ್ಕ ಸಾಮಾನ್ಯ ದಕ್ಷಿಣೆ 1-4 ರೂಪಾಯಿಗೆ ಹೆಚ್ಚಿಗೆ ಇದ್ದಲ್ಲಿ ಸುಧಾರಿಸಬೇಕು.

22)          ಮಕ್ಕಳ ವಿದ್ಯೆ :        ಪ್ರತಿ ಕುಟುಂಬದಲ್ಲಿಯೂ ಮಕ್ಕಳಿಗೆ 6 ವರ್ಷದಿಂದ 12 ವರ್ಷಗಳವರೆಗೆ ವಿದ್ಯೆಯನ್ನು ಕಲಿಯಲಿಕ್ಕೆ ಹಾಕಲೇಬೇಕು. ಆಮೇಲೆ ವ್ಯವಹಾರ ಅಥವಾ ಕೈಗಾರಿಕೆಗೆ ಹಚ್ಚಬೇಕು.

23)          ಗಣೇಶ ಚತುರ್ಥಿ : ಗಣೇಶ ಚತುರ್ಥಿ ಹಬ್ಬದಲ್ಲಿ ಇನ್ನು ಮುಂದೆ ಹೊರೆಕೊನೆ ಒಯ್ಯುವುದನ್ನು ಬಿಟ್ಟು ಒಂದು ಕುಬುಸದ ಖಣ, ಎರಡು ಚಿಪ್ಪು ಬಾಳೆಹಣ್ಣು, ಕಾಯಿ, ಹೂವು ಮುಂತಾದವುಗಳನ್ನು ತೆಗೆದುಕೊಂಡುಹೋಗಬೇಕು.

24)          ಸತ್ಕಾರ : ಸ್ವಜಾತಿಯವರು ಒಬ್ಬರಿಗೊಬ್ಬರು ನಮಸ್ಕಾರ ಪದ್ಧತಿ ರೂಢಿಯಲ್ಲಿ ತರಬೇಕು ಮತ್ತು ಸ್ತ್ರೀ-ಪುರುಷರು ಹೋಗಿ-ಬನ್ನಿ ಎಂಬ ಬಹುವಚನಾರ್ಥಕ ಶಬ್ದಗಳನ್ನು ಉಪಯೋಗಿಸಬೇಕು.

25)          ನಾಮಕರಣ : ತಮ್ಮ ಮಕ್ಕಳಿಗೆ ಉತ್ತಮವಾದ ದೇವರುಗಳ ಹೆಸರುಗಳನ್ನೇ ಇಡಬೇಕು.

26)          ವ್ಯವಹಾರ : ನಮ್ಮ ಜಾತಿಯ ಮುತ್ತೈದೆ ಸ್ತ್ರೀಯರು ಸಂತೆಗೆ ಹೋಗಬಾರದು. ಬೇಕಾದರೆ ತಮ್ಮ ಪುರುಷರ ಸಂಗಡ ತೇರು-ಜಾತ್ರೆಗಳಿಗೆ ಹೋಗಬಹುದು. ತಲೆಯ ಮೇಲೆ ಅನ್ಯ ಆಹಾರ ಹೊರಬಾರದು.

27)          ಕ್ಷೌರ :  ಪ್ರತಿಯೊಬ್ಬರೂ ಕ್ಷೌರ ಮಾಡಿಸಿಕೊಂಡು ಸ್ನಾನ ಮಾಡಲೇಬೇಕು.

28)          ಶೌಚ : ಪ್ರತಿಯೊಬ್ಬರೂ ಹೊರಗಡೆಗೆ ಹೋಗುವಾಗ್ಯೆ ತಂಬಿಗೆಯನ್ನು ತಕ್ಕೊಂಡು ಹೋಗಬೇಕು. ನಂತರ ತಂಬಿಗೆಯನ್ನು ಬೆಳಗಿ ಕೈಕಾಲು ತೊಳೆದುಕೊಂಡು  ಬಾಯಿ ಮುಕ್ಕಳಿಸಬೇಕು.

29)          ಪುನರ್ವಿವಾಹ : ಪುನರ್ವಿವಾಹ ಅಂದರೆ ಉಡ್ಕೆಯ ಕಾಲಕ್ಕೆ ಪ್ರಾಣಿಹಿಂಸೆಯನ್ನು ಮಾಡಬಾರದು.

30)          ಧರ್ಮವಿಚಾರ : ಧರ್ಮದ ವಿಷಯ ನಾಲ್ಕು ಮಂದಿ ಮೆಂಬರುಗಳು ಮಾತನಾಡುವ ಕಾಲಕ್ಕೆ ಹಿಂಸೆ, ಲೂಟಿ ಮಾಡಬಾರದು.

31)          ಹಿಂದಿನ ಕೋಲಸಿರ್ಸಿ ಸಭೆಯಲ್ಲಿ ಪಾಸಾದ ಠರಾವಿಗೆ ಅನುಸರಿಸಿ ಮರಣಾಂತ್ಯ ಕಾಲದಲ್ಲಿ ಒಂದೊಂದು ಗ್ರಾಮದಲ್ಲಿ ಆಯಾ ಕುಟುಂಬದವರೇ ಹೆಣ ತೆಗೆಯುವ ಪದ್ಧತಿ ಇದ್ದುದನ್ನು ರದ್ದು ಮಾಡಿ ಪೂರಾ ಗ್ರಾಮದ ಸಮಾಜದ ಜನರು ಹೋಗಿ ಹೆಣವನ್ನು ದಹನ ಮಾಡಿ ತಣ್ಣೀರಿನಲ್ಲಿ ಸ್ನಾನ ಮಾಡಿ ನೇಮ ಪ್ರಕಾರ ತುಳಸೀದಳದಿಂದ ಶುದ್ಧ ಮಾಡಿಕೊಂಡು ಪುನೀತರಾಗಬೇಕು.

32)          ಬಿರುದು : ನಮ್ಮ ಸಮಾಜದ ಜನರು ಆಯಾಯ ಕಾಲಕ್ಕೆ ರಾಜರುಗಳಿಗೆ ಬಿರುದು ಮುಖ್ಯ ತೋರಣ ಗಗ್ಗರ ಕಟಗಿ ಹಿಡಿಯಬಹುದು. ಬೇರೆಯ ಮತಸ್ಥರ ಸದ್ರಿ ಬಿರುದು ನಾವು ಹಿಡಿಯಲು ಬರುವುದಿಲ್ಲ.

ದಂಡಗಳು

ಕಲಮು    ಅಪರಾಧದ ವಿವರ    ದಂಡದ ರಕಮು

2              ಒಲೆಯಲ್ಲಿ ಎಂಜಲು ಹಾಕಿದರೆ                0.4.0

5              ಬಾಗಿಲು ಸಾರಿಸಿ ರಂಗೋಲಿ ಹಾಕದಿದ್ದರೆ  0.4.0

6              ಅಲ್ಲಲ್ಲಿಯ ಗ್ರಾಮದ ಮೆಂಬರುಗಳಿಗೆ ಗೊತ್ತಿಲ್ಲದೇ ಹೆಣ್ಣು ನಿಶ್ಚಯ ಮಾಡಿದ್ದಲ್ಲಿ           2.0.0

8              ಹೆಣ್ಣಿಗೆ ತರಾ 40 ರೂಪಾಯಿಗಳಿಗಿಂತ ಹೆಚ್ಚಿಗೆ ತೆಗೆದುಕೊಂಡಲ್ಲಿ

1) ಹೆಚ್ಚಿನ ಹಣ ಸಂಘಕ್ಕೆ ಕೊಡಬೇಕು

2) ಕೊಟ್ಟವರಿಗೆ 5 ರೂಪಾಯಿಗಳ ದಂಡ ಕೊಡಬೇಕಾಗುವುದು 5.0.0

9              ವೀಳ್ಯದೆಲೆ ಹೆಚ್ಚಿಗೆ ತೆಗೆದುಕೊಂಡಲ್ಲಿ      1.0.0

13           ಎರಡು ಕೋಲ್ಕಡಗ ಮಾಡಿಸಿದವರಿಗೆ       1.0.0

14           ಆವಳಿ ಉಡುಗೊರೆ ಮಾಡಿದವರಿಗೆ            1.0.0

15           ಹೆಣ್ಣಿಗೆ ಎಂದು ಸೀರೆ ಬಗ್ಗೆ ಕಡಗ ಹಿಂಬಳೆಯ ಹಣ ತೆಗೆದುಕೊಂಡರೆ        ರೂ.5-10

16           ಭೂಮದ ಅಕ್ಕಿ ಅಳೆದರೆ           2.0.0

17           ಕೂಡಿ ಮೀಯುವವಳು ತೊಂಡಿಲು ಧರಿಸಿದರೆ           ರೂ.1-2

18           ಮದುಮಗನು ಹಳೆಬಟ್ಟೆ ಧರಿಸಿದರೆ          0.8.0

23           ಗಣೇಶ ಚತುರ್ಥಿಯಲ್ಲಿ ಹೊರೆಕೊನೆಯ ಒಯ್ದರೆ   1.0.0

24           ಸ್ವಜಾತಿಯಲ್ಲಿ ನಮಸ್ಕಾರ ಮಾಡುವುದು ತಪ್ಪಿದಲ್ಲಿ             0.4.0

26           ಮುತ್ತೈದೆ ಸ್ತ್ರೀಯರು ಸಂತೆ/ಬಾಜಾರ್‍ಗೆ ಹೋದರೆ  0.8.0

27, 28    ಹಜಾಮತ್ ಮಾಡಿಸಿ ಸ್ನಾನ ಮಾಡದಿದ್ದರೆ              0.4.0

29           ಉಡಿಕೆ ಕಾಲಕ್ಕೆ ಪ್ರಾಣಿಹಿಂಸೆ ಮಾಡಿದವರಿಗೆ              ರೂ.2-10

30           ಧರ್ಮ ವಿಚಾರ ಕುರಿತು ಮಾತನಾಡುವಾಗ ಹಾಸ್ಯ ಮಾಡಿದರೆ    1.0.0

32           ತಪ್ಪಿ ನಡೆದವರಿಗೆ     ರೂ.2-10

33           ವೀಳ್ಯವಾಗಿ ವಿವಾಹ ನಿಶ್ಚಯವಾದ ನಂತರ ಮುರಿದರೆ              ರೂ.10-15

34           ತಿರಾ ತೆಗೆದುಕೊಂಡರೆ               ನಿಶ್ಚಿತ ತಿರಾ

35           ಲಗ್ನದ ಊಟದಲ್ಲಿ ಮುಸುರೆ ಚಕ್ಕುಲಿ ಮಾಡಿ ಹಂಚುವುದು, ತಲೆಯ ಮೇಲೆ ಹೊತ್ತು ಬೇರೆ ಕಡೆಗೆ ಒಯ್ಯುವುದು ವಗೈರೆ ಬಗ್ಗೆ                ರೂ.1-5

36           ಲಗ್ನದಲ್ಲಿ ಉಡುಗೊರೆ ಬಳುವಳಿ, ಬೇರೆಯವರು ಮಾಡಿದರೆ ಕೊಡು-ಕೊಂಬುವವರಿಗೆ             ರೂ.1-5

37           ಲಗ್ನದ ದಾಗಿನೆ ನಿಯಮ ಮುರಿದರೆ          ರೂ.1-5

38           ಲಗ್ನದ ಜವಳಿ ನಿಯಮ ಮುರಿದರೆ            ರೂ.1-5

39           ಪುರುಷರು ಆಚರಣೆ ತಪ್ಪಿದರೆ   ಎಂಟಾಣೆ

40           ಸ್ತ್ರೀಯರು ಆಚರಣೆ ತಪ್ಪಿದರೆ ನಾಲ್ಕು ಆಣೆ

42           ವಿಧವೆಯಾದವಳು ನಿಯಮ ಮೀರಿದರೆ     ನಾಲ್ಕು ಆಣೆ

43           ಸೇಂದಿ, ಶರಾಬು ಮಾಡಿದಲ್ಲಿ, ಕುಡಿದಲ್ಲಿ ಸೇಂದಿ, ಸೆರೆ ಕುಡಿದವರನ್ನು ಸ್ವಜಾತಿಯವರು ಹಿಡಿದುಕೊಟ್ಟಿಲ್ಲ. ಹಿಡಿದುಕೊಟ್ಟವರಿಗೆ 2 ರೂಪಾಯಿ ಇನಾಮು ರೂ.5-15

27           ಮೆಟ್ಟನಿಂದ ಹೊಡೆದುಕೊಂಡ ವಿಷಯದಲ್ಲಿ          ರೂ.1-5

28           ಅನ್ಯ ಸಮಾಜದವರ ಹೆಣದ ವ್ಯವಸ್ಥೆ ಮಾಡಿದರೆ      ರೂ.1-5

30           1) ದೀಪಾವಳಿಯಲ್ಲಿ ಬಿಂಗಿ ಬೇಡಲು ಹೋದರೆ

2)ಕಸಬರಿಗೆಯಿಂದ ಹೊಡೆದವರಿಗೆ, ಹೊಡೆಸಿಕೊಂಡವರಿಗೆ, ಪಂಚನಿರ್ಣಯದಂತೆ

3) ಲಗ್ನದಲ್ಲಿ ಬಾಣ, ಬಿರುಸು ಮುಂತಾದ ಮದ್ದಿನ ಸಾಮಾನು ತಂದವರಿಗೆ              ರೂ. 1

ರೂ. 1

ರೂ.1-5

31           ವಧೂವರರು ನೇಮ ಮುರಿದು ಹಬ್ಬಕಾಣಿಕೆಗೆ ಹೋದರೆ          ರೂ.1

ಈ ದಂಡಗಳನ್ನು ಮೊದಲನೆ ಅಪರಾಧಕ್ಕೆ ಕಡಿಮೆಯಾಗಿಯೂ ಪುನಃ ಪುನಃ ಅಪರಾಧ ಮಾಡಿದರೆ ಹೆಚ್ಚು ಹೆಚ್ಚಾಗಿಯೂ ಮಾಡಬೇಕು.

 

                ಕಟ್ಟೆಗಳಲ್ಲಿ ಈ ಕೆಳಗಿನಂತೆ ಲೆಕ್ಕಪತ್ರಗಳು ಇರಬೇಕು.

1) ಕಿರ್ದಿ

2) ಕಟ್ಟೆಗೊಪ್ಪಿದ ಕುಟುಂಬದ ರಿಜಿಸ್ಟರ್ (ವರ್ಗವಾರಿ ಸಹಿ)

3) ಖಾತೆ

4) ಪಾವತಿ ಪುಸ್ತಕ

5) ದಂಡದ ರಿಜಿಸ್ಟರ್

6) ಅಪರಾಧ ಮತ್ತು ಚೌಕಾಸಿ ವಹಿ

7) ಠರಾವು ಪುಸ್ತಕ

8) ಮೇಲಿನಿಂದ ಬಂದ ಹುಕುಮು ವಗೈರೆ ಫೈಲು (ಕಡತ)

ತಾ.2.3.1931

ಕೋಲಸಿರ್ಸಿ                                                                                                             ಕನ್ನನಾಯ್ಕ ಈರನಾಯ್ಕ ಬೇಡ್ಕಣಿ

 

                1931ರ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ದೀವರ ಸುಧಾರಣೆಗೆ ಪ್ರಯತ್ನ ನಡೆದಂತೆ ಕಾಣುವುದಿಲ್ಲ. ಈ ಬಗ್ಗೆ ದಾಖಲೆಗಳೂ ದೊರಕುವುದಿಲ್ಲ. 1931ರಲ್ಲಿ ಪ್ರಾರಂಭಗೊಂಡ ನಾಮಧಾರಿ ವಿಷ್ಣುಭಕ್ತರ ಸಂಘದ ಕಾರ್ಯಕ್ರಮಗಳ ಬಗ್ಗೆ ಎರಡು ಪುಸ್ತಿಕೆಗಳನ್ನು ಪ್ರಕಟಿಸಿರುವುದನ್ನು ಬಿಟ್ಟರೆ ಬೇರೆಯಾದ ದಾಖಲೆಗಳು ಕಂಡುಬರುವುದಿಲ್ಲ. ಈ ಸಂಘದ ಪದಾಧಿಕಾರಿಗಳು ದೀವರು ದಟ್ಟವಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಈ ನಾಲ್ಕು ತಾಲ್ಲೂಕುಗಳನ್ನು ಸೇರಿಸಿ ಹದಿನೇಳು ಸೀಮೆಗಳನ್ನಾಗಿ ವಿಂಗಡಿಸಿದ್ದಾರೆ. ಆಡಳಿತದ ಅನುಕೂಲಕ್ಕಾಗಿ ಹದಿನೇಳು ಸೀಮೆಗಳನ್ನು ಎಂಟು ಕಟ್ಟೆಗಳಾಗಿ ವಿಂಗಡಿಸಿದ್ದಾರೆ.

                ಹಿಂದಿನ ನಮ್ಮ ಸಮಾಜದ ಹಿರಿಯರು ದೀವರು ಸಾಕಷ್ಟು ಸಂಖ್ಯೆಲ್ಲಿರುವ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳನ್ನು ಸಂಘಟನೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದಾರೆ. ಬಹುಶಃ ಆ ತಾಲ್ಲೂಕುಗಳು, ಸಾಗರದಿಂದ ಹೊಸನಗರ 42, ತೀರ್ಥಹಳ್ಳಿ 76 ಕಿಲೋಮೀಟರು ದೂರದಲ್ಲಿರುವುದೇ ಕಾರಣವಾಗಿರಬಹುದು. ನಾಮಧಾರಿ ವಿಷ್ಣುಭಕ್ತರ ಸಂಘದಂದ ಅತ್ಯಂತ ಹಿಂದುಳಿದ ಸಮಾಜದ ಬದಲಾವಣೆಗೆ ಸಾಕಷ್ಟು ಪ್ರಯತ್ನ ನಡೆದಿರುವುದು ಕಂಡುಬರುತ್ತದೆ.

                ಸ್ವಾತಂತ್ರ್ಯಾನಂತರ ಸೊರಬ ತಾಲ್ಲೂಕಿನಲ್ಲಿ 1948ರಲ್ಲಿ ಸೊರಬ ತಾಲ್ಲೂಕಿಗೆ ಸೀಮಿತವಾದ ಹಾಲಕ್ಷತ್ರಿಯ ಸುಧಾರಣಾ ಸಂಘ ಸ್ಥಾಪನೆ ಮಾಡಿ ಇದರ ಮೂಲಕ ಸಮಾಜ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬರುತ್ತದೆ. ಸಂಘದ ಸಂಸ್ಥಾಪಕರಲ್ಲೊಬ್ಬರಾದ ಸೊರಬ ಟೌನ್ ಮುನ್ಸಿಪಲ್ ಮುತ್ಸದ್ದಿಯವರಾದ ಶ್ರೀ ಕೆ. ಬಂಗಾರಪ್ಪನವರು ‘ಹಾಲಕ್ಷತ್ರಿಯ ಸುಧಾರಣಾ ಸಂಘದ ನಿರ್ಣಯಗಳು’ ಎಂಬ ಪುಸ್ತಿಕೆಯನ್ನು ಬರೆದು 1948ರಲ್ಲಿ ಪ್ರಕಟಿಸಿದ್ದಾರೆ. ಆ ಕಾಲದ ಪ್ರಸಿದ್ಧ ಸಮಾಜ ಸುಧಾರಕರಾದ ಶ್ರೀ ಕೆ.ಎಚ್. ಮರಿಯಪ್ಪನವರು ಮುನ್ನುಡಿ ಬರೆದಿದ್ದಾರೆ. ಸೊರಬ ತಾಲ್ಲೂಕು ಸಲಹಾ ಸಮಿತಿಯವರಿಂದ ಅನುಮೋದಿಸಲ್ಪಟ್ಟಿದೆ.

                1948ರ ಹೊತ್ತಿಗೆ ಸೊರಬ ತಾಲ್ಲೂಕಿನಲ್ಲಿ ಹಾಲಕ್ಷತ್ರಿಯ (ದೀವರು) ಜನಾಂಗದ ಜನಸಂಖ್ಯೆ 14,000 ಇತ್ತು. ಈ ತಾಲ್ಲೂಕಿನಲ್ಲಿ ಬಿಎಸ್‍ಸಿ ಪದವಿ ಪಡೆದವರು ಎಚ್. ಹನುಮಂತಪ್ಪ ಎಂಬುವವರು ಒಬ್ಬರೇ ಇದ್ದರು. ಮೆಟ್ರಿಕ್ಯುಲೇಷನ್ (ಎಸ್‍ಎಸ್‍ಎಲ್‍ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾದ ಯುವಕರು ಕೇವಲ ನಾಲ್ಕು ಜನ, ಲೋಯರ್ ಸೆಕೆಂಡರಿ ಮುಗಿಸಿದವರು 10 ಜನ ಯುವಕರಿದ್ದರು. ಸಮಾಜದಲ್ಲಿ ಅನಕ್ಷರಸ್ಥರೇ ಹೆಚ್ಚಾಗಿದ್ದರು. ಆದರೆ ಹಾಲಕ್ಷತ್ರಿಯ ಸುಧಾರಣಾ ಸಂಘದ ಸಂಘಟಕರು ಸಾಧಾರಣ ವಿದ್ಯಾವಂತರಾಗಿದ್ದರು.

.               ಸೊರಬ ತಾಲ್ಲೂಕು ಹಾಲಕ್ಷತ್ರಿಕ ಸಂಘವು ಜನಾಂಗದ ಸುಧಾರಣೆಗಾಗಿ ಅನೇಕ ಠರಾವುಗಳನ್ನು ಮಾಡಿದೆ. ಅವು ಈ ರೀತಿ ಇವೆ.

1) ಜನಾಂಗದಲ್ಲಿ ಉಡಿಕೆ (ಮರುಮದುವೆ) ಮಾಡಿಕೊಳ್ಳುವಾಗ ಗಂಡಿನವರು ಇಪ್ಪತ್ತೈದು (25/-) ರೂಪಾಯಿಗಳನ್ನು ಕೊಡತಕ್ಕದ್ದು. ಇದರಲ್ಲಿ 10 ರೂಪಾಯಿಗಳನ್ನು ಸೀಮೆ ಫಂಡ್‍ಗೆ, 4 ರೂಪಾಯಿಗಳನ್ನು ಹೆಣ್ಣಿನವರಿಗೆ, 2 ರೂಪಾಯಿ ಬಿಡುಗಡೆ ಹೊನ್ನು ಗಂಡಿನವರಿಗೆ ಸಲ್ಲತಕ್ಕದ್ದು. 9 ರೂಪಾಯಿ ತೋಪುಕಟ್ಟೆ ಯಜಮಾನರಿಗೆ ಮತ್ತು ಗ್ರಾಮಸ್ಥರಿಗೆ ಸಲ್ಲತಕ್ಕದ್ದು. ಉಡಿಕೆ ಲಗ್ನವನ್ನು ಸೀಮೆಯ ಕೊಂಡಿಕಾರನು ಮಾಡತಕ್ಕದ್ದು. ತೋಪುಕಟ್ಟೆಯ ಇಬ್ಬರು ಮೆಂಬರುಗಳಿಂದ ಪತ್ರ ಬರೆಯಿಸಿಕೊಂಡು ಸೀಮೆಯ ಅಧ್ಯಕ್ಷರ ಆಫೀಸಿಗೆ ರೂಪಾಯಿ ಮತ್ತು ಪತ್ರವನ್ನು ರವಾನಿಸತಕ್ಕದ್ದು. ಈ ರೀತಿ ನಡೆಯದಿದ್ದಲ್ಲಿ ಉಡಿಕೆ ಲಗ್ನವೆಂದು ಭಾವಿಸತಕ್ಕದ್ದಲ್ಲ ಎಂದು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

2) ತಮ್ಮ ಜನಾಂಗದಲ್ಲಿ ಆಗುವ ದುಂದುಗಾರಿಕೆಯನ್ನು ಹೋಗಲಾಡಿಸಲು ಹೆಣ್ಣು ನಿಶ್ಚಯ ಮಾಡುವ ಕಾಲದಲ್ಲಿ ಆಯಾಯ ಗ್ರಾಮದ ಯಜಮಾನರ ಮುಖಾಂತರ ಹಣ್ಣು, ಸಕ್ಕರೆ ಹಂಚಿ ಹೆಣ್ಣು ನಿಶ್ಚಯ ಮಾಡತಕ್ಕದ್ದು. ಹೆಣ್ಣಿನವರು ಗಂಡನವರಿಂದ ತೆಗೆದುಕೊಳ್ಳತಕ್ಕ ‘ತಿರಾ’ ಹಂಗಾಮಿಯಾಗಿ 100 ರೂಪಾಯಿಗಳಿಗೆ ಮೀರಕೂಡದೆಂತಲೂ, ಹಿಂದಿನ ಪದ್ಧತಿಯಂತೆ ಗಂಡಿನವರೇ ಸೀರೆ ಕುಪ್ಪಸ ತರತಕ್ಕದ್ದು. ಹೆಣ್ಣಿನವರಿಗೆ ಧಾನ್ಯ ವಗೈರೆ ಕೊಡಕೂಡದು. ಗಂಡಿನವರು ವೀಳ್ಯಕ್ಕೆ ಹೆಣ್ಣಿನ ಮನೆಗೆ ಹೋಗುವಾಗ ಮೂರು ಸಾವಿರ ವೀಳ್ಯದೆಲೆ, ಎರಡು ದಡಿ ಅಡಿಕೆ ಇದಕ್ಕೆ ಮೀರದಂತೆ ಕೊಟ್ಟು ಗ್ರಾಮಸ್ಥರಿಂದ ವೀಳ್ಯ ನಡೆಸತಕ್ಕದ್ದು. ಲಗ್ನದಲ್ಲಿ ದೇವರ ಹೆಸರಿನಲ್ಲಿ ಕುರಿ, ಕೋಳಿಗಳನ್ನು ಕಡಿಯುವುದು ಮುಂತಾದ ಪ್ರಾಣಿಹಿಂಸೆ ಮಾಡಕೂಡದು. ಹಂದರ (ಚಪ್ಪರ) ಹಾಕುವ ಕಾಲದಲ್ಲಿ ಗ್ರಾಮಸ್ಥರು ಹಣ ತೆಗೆದುಕೊಳ್ಳಬಾರದು. ಹೆಣ್ಣಿನವರು ತಮ್ಮ ಗ್ರಾಮದಲ್ಲಿಯೂ, ಗಂಡಿನವರು ತಮ್ಮ ಗ್ರಾಮದಲ್ಲಿಯೂ ಸಿಹಿ ಊಟವನ್ನು ಗ್ರಾಮದ ಹಿಡುವಳಿಯಲ್ಲಿ ಕೊಡತಕ್ಕದ್ದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಮದುವೆ ಕಾಲದಲ್ಲಿ ಮದುಮಗನಿಗೆ ಕೈಗಳಿಗೆ ತೋಡೆ, ಬಳೆ ಹಾಕುವುದು, ಕಂಬಳಿ ಮುಸುಕು ಹಾಕುವುದು, ಕೊರಳಲ್ಲಿ ಆಭರಣ ಹಾಕುವುದು, ಹಲ್ಲಿಗೆ ಹಲ್ಲಿಟ್ಟು ಹಚ್ಚಿಕೊಳ್ಳುವುದು ಮಾಡಬಾರದು. ಹೆಂಗಸರ ಬಲವಂತಕ್ಕೆ ಕೈಕಡಗ ಹಾಕಬಾರದು. ಹಣೆಗೆ ಕೆಂಪುನಾಮ ಹಚ್ಚಿಕೊಳ್ಳತಕ್ಕದ್ದು. ಮದುವಣಗಿತ್ತಿಗೆ ಸೀರೆ ಸುತ್ತು ಹಾಕಿ ಉಡಿಸಬಾರದು. ಸೀರೆ ಮೇಲು ಮುಸುಗು ಹಾಕಬಾರದು. ಮೂಗುತಿ, ಬೆಳ್ಳಿಯ ದುಂಡುಗಳು, ಕಾಲು ಪೈಜಣ, ಪಾಡುಗ ಹಾಕಿಕೊಳ್ಳಬಾರದು. ಹವಳದ ಸರ, ತೋಳಸರಿಗಿ ಹಾಕಬಾರದು. ಮೂಗುಬೊಟ್ಟು, ಬೇಸರಿ, ಕಾಲಿಗೆ ಚೈನು, ಕಾಲುಂಗುರಗಳನ್ನು ಹಾಕಿಕೊಳ್ಳಬಹುದು. ವಧೂವರರಿಗೆ ಕೂಡಲು ಪೀಠ ಹಾಕುವ ಪದ್ಧತಿಯನ್ನು ಬಿಟ್ಟು ಜಮಖಾನ ಹಾಸತಕ್ಕದ್ದು. ಬಲಗೋಡೆಯ ಬಲಗೊಡತಿಯರಿಗೆ ಸಾಸುವೆ ಇಡುವ ಪದ್ಧತಿಯನ್ನು ಸರಿ-ಬೆಸ ಆಡುವಾಗ ಬಲಗೊಡತಿಯಿಂದ ಸರಿ-ಬೆಸ ಹೇಳುವ ಪದ್ಧತಿಯನ್ನು ವಜಾ ಮಾಡಲಾಗಿದೆ. ಬಲಗೊಡತಿಗೆ ತೊಂಡಿಲು ಸೂಡುವ ಪದ್ಧತಿಯನ್ನು ವಜಾ ಮಾಡಲಾಗಿದೆ.

ಮದುವಣಗಿತ್ತಿಯನ್ನು ಧಾರೆಗೆ ಎತ್ತಿಕೊಂಡು ಹೋಗುವ ಪದ್ಧತಿಯನ್ನು ವಜಾ ಮಾಡಲಾಗಿದೆ.

ಮದುವಣಗಿತ್ತಿಯನ್ನು ಹುಡುಕಾಡಿಸುವ ಪದ್ಧತಿಯನ್ನು ವಜಾ ಮಾಡಲಾಗಿದೆ.

ತೋಳಿಗೆ ಬಾಸಿಂಗ ಕಟ್ಟುವಾಗ ಹೆಣ್ಣಿನ ನಾಗವಲ್ಲಿ ಶಾಸ್ತ್ರ ಆದನಂತರ ಮಕ್ಕಳಿಗೆ ಬಾಸಿಂಗ ತೊಂಡಿಲು ಸೂಡುವುದನ್ನು ನಿಲ್ಲಿಸಿದೆ.

ಆಹಾರಸಂಬಂಧ ಹೆಡಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ನಿಲ್ಲಿಸಲಾಗಿದೆ.

ಸಮಾಜದ ಸ್ತ್ರೀಯರು ಇನ್ನು ಮುಂದೆ ಹಚ್ಚೆ ಹಾಕಿಸಿಕೊಳ್ಳಬಾರದು.

ಹೆಂಗಸರು ಇನ್ನು ಮುಂದೆ ಮೂಗುತಿ ಇಟ್ಟುಕೊಳ್ಳುವುದನ್ನು ಬಿಟ್ಟು ಬೇಸರಿಗಳನ್ನು ಇಟ್ಟುಕೊಳ್ಳಬೇಕು.

ಹುಟ್ಟಿದ ಮಕ್ಕಳಿಗೆ ದೇವರ ಹೆಸರುಗಳನ್ನು ಇಡಬೇಕು.

ಹೆಂಗಸರು ಕರಿಸೀರೆ, ದುಂಡಿನ ಸೀರೆಗಳನ್ನು ಉಡುವ ಪದ್ಧತಿಯನ್ನು ವಜಾ ಮಾಡಿರುತ್ತೆ.

ಪ್ರತಿಯೊಬ್ಬ ಗಂಡಸರು ಕೆಂಪುನಾಮ, ಹೆಂಗಸರು ಕುಂಕುಮವನ್ನು ಧರಿಸತಕ್ಕದ್ದು.

ಮದುವೆ ಸಮಯದಲ್ಲಿ ಜೋಯಿಸರಿಗೆ 21 ರೂಪಾಯಿ ಮತ್ತು ಹಸನಾದ 3 ಗಿದ್ನ ಅಕ್ಕಿ, ಐದು ಆಣೆ ದಕ್ಷಿಣೆ ಕೊಡಬೇಕಾಗಿ ಠರಾಯಿಸಿದೆ.

ಲಗ್ನದ ಬಾಸಿಂಗವು ಎಲ್ಲಾ ಒಂದೇ ಸಮನಾಗಿದ್ದು ಐದು ರೂಪಾಯಿಗಳಿಗೆ ಮೀರದಂತೆ ಮಾಡಿಸತಕ್ಕದ್ದು. ಬಾಸಿಂಗ ಇಲ್ಲದೆಯೂ ಮಾಡಿಕೊಳ್ಳಬಹುದು.

ಮದುವೆ ಕಾಲದಲ್ಲಿ ಧಾರೆ ದಿನ ಮಾತ್ರ ವಾಲಗವನ್ನು ತರಬಹುದು. ಒಂದೇ ದಿವಸದ ಲಗ್ನಕ್ಕೆ 15 ರೂಪಾಯಿಗಳಿಗೆ ಮೀರದಂತೆ ತರತಕ್ಕದ್ದು.

ಮದುವೆಯಲ್ಲಿ ಮೇಲ್ಕಟ್ಟು ಕಟ್ಟುವ ಅಗಸರಿಗೆ ಹಸನಾದ 1.5 ಗಿದ್ನ ಅಕ್ಕಿ ಕೊಡತಕ್ಕದ್ದು.

ಉಡಿಕೆ ಲಗ್ನದಲ್ಲಿ ಸೀಮೆ ಫಂಡು ಹೆಣ್ಣಿಗೆ ಗ್ರಾಮದಲ್ಲಿಯೇ ಪಾವತಿ ಮಾಡಬೇಕು.

ಗಂಡನಮನೆ ಗ್ರಾಮದಲ್ಲಿ ಕಾರ್ಯ ಮಾಡಿಕೊಳ್ಳುವಾಗ ಊಟ ಕೊಡಬೇಕು.

ಮದುವೆಯಾಗಿ ಮೆಜಾರಿಟಿಗೆ ಬಂದ ಹೆಣ್ಣುಮಕ್ಕಳನ್ನು ಶುಭ ಮುಹೂರ್ತದಲ್ಲಿ ಕೂಡಲೇ ಶೋಭನಪ್ರಸ್ಥ ಮಾಡಿಕೊಡಬೇಕಾಗಿ ಠರಾವು ಆಗಿರುತ್ತದೆ.

 

 

 

ಸವಿವರವಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಶ್ರೀ.ಎನ್.ಹುಚ್ಚಪ್ಪಮಾಸ್ತರ್, ಕುಗ್ವೆ ಇವರ ಕನ್ನಡ ಪುಸ್ತಕ ಪ್ರಾಧಿಕಾರ ಇವರು ಪ್ರಕಟಿಸಲಿರುವ ಮಲೆನಾಡು ದೀವರ ಸಾಂಸ್ಕøತಿಕ ಸಂಕಥನ (ಜನಾಂಗೀಯ ಅಧ್ಯಯನಪುಸ್ತಕವನ್ನು ಓದುವುದು