ಪುರಾಣ - ಐತಿಹ್ಯ ಮತ್ತು ಚರಿತ್ರೆ

ಐತಿಹಾಸಿಕವಾಗಿ ದೀವರರುಮಡೇನೂರು ಗಣಪತಿ

ಪೀಠಿಕೆ
ಗುಜರಾತಿನಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ 1600 ಕಿ.ಮೀ ದೂರ ಕರಾವಳಿಯ ಉದ್ದಕ್ಕೂ ಹಬ್ಬಿರುವ ಪರ್ವತ ಶ್ರೇಣಿಗಳು, ಇವನ್ನು ಸಹ್ಯಾದ್ರಿ ಪರ್ವತಗಳೆಂದೆ ಕರೆಯುವರು, ಅಲ್ಲದೆ ಈ ಪರ್ವತ ಸಮೂಹಗಳನ್ನು ಪಶ್ಚಿಮ ಘಟ್ಟಗಳೆಂದು ಗುರುತಿಸಲಾಗಿದೆ. ‘ಸಹ್ಯ’ ಎಂದರೆ ‘ಮಂಗಳ’ ಎಂದು, ಈ ಪರ್ವತಗಳು ಎತ್ತರದ ಹಚ್ಚಹಸಿರಿನ ಗಿರಿಶಿಖರಗಳನ್ನು ಹೊಂದಿದ್ದು ಅತಿಹೆಚ್ಚು ಮಳೆಸುರಿಸಲು ಸಹಾಯಕವಾಗಿದ್ದು ಅನೇಕ ಜೀವನದಿಗಳಿಗೆ ಉಗಮ ಸ್ಥಾನವಾಗಿದ್ದು ಪೂರ್ವಾಭಿ ಮುಖ ಹಾಗೂ ಕೆಲವು ಪಶ್ಚಿಮಾಭಿ ಮುಖವಾಗಿಯೂ ಹರಿಯುತ್ತಿದ್ದು ಪುಣ್ಯಪಾವನ ಮತ್ತು ಜೀವ ಚೈತನ್ಯ ನದಿಗಳಾಗಿವೆ. ಘಟ್ಟಗಳ ಸಾಲಿನ ಉದ್ದಕ್ಕೂ ಅಲ್ಲಲ್ಲಿ ದೈವೀಶಕ್ತಿ ಸ್ಥಳಗಳಿದ್ದು ದಾರ್ಶನಿಕರ ತಪೋಭೂಮಿಯಾಗಿದೆ. ಅನಘ್ರ್ಯವಾದ ಲೋಹದದಿರುಗಳನ್ನೂ ಈ ಪರ್ವತಗಳು ಹೊಂದಿವೆ. ಹಾಗಾಗಿಯೇ ಸಹ್ಯಗಿರಿಗಳು-ಮಂಗಳಕರವಾದುವುಗಳು ಎಂದಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಪ್ರಕೃತಿಯ ಅನನ್ಯ ಸೊಬಗಿಗೆ ಮರುಳಾಗದವರಾರು. ಇಂಥಹ ಸಹ್ಯಗಿರಿವೃಂದಗಳೇ ದೀವರರ ಜನಾಂಗದ ಉಗಮಸ್ಥಾನ ಮತ್ತು ಬದುಕು ಕಟ್ಟಿಕೊಂಡ ಸಂಪತ್ಭರಿತ ಮಲೆನಾಡು.

ಉಗಮ
ಮಧ್ಯಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಹುಸಂಖ್ಯೆಯಲ್ಲೂ, ಹಾಸನ ಜಿಲ್ಲೆ ಹಾಗೂ ಹಾನಗಲ್ಲು ತಾಲ್ಲೂಕುಗಳಲ್ಲಿ ವಿರಳವಾಗಿಯೂ ತನ್ನದೇ ಆದ ವಿಶಿಷ್ಟ ಬದುಕು, ಸಂಸ್ಕøತಿಯ ನಿರ್ಮಾತೃಕೆಯ ದೀವರರ ಜನಾಂಗವಾಗಿದೆ. ದೀವರರಿಗೆ ಇರುವ ಮೂಲಮಾತೃಕೆಯ ವೃತ್ತಿ ಎಂದರೆ ಅದು ಕೃಷಿ, ಇವರ ಚಾರಿತ್ರಿಕ ಮಹಾಯಾನ ಆಯುಧೋಪ ಜೀವನ. ಈ ಮೊದಲು ಇತರೆಯವರೊಡನೆ ದೀವರರೂ ಕೂಡ ಸಿಂಧೂ ನಾಗರೀಕತೆಯ ಪ್ರದೇಶದಿಂದ ಆರ್ಯರಿಂದ ದಕ್ಷಿಣಕ್ಕೆ ತಳ್ಳಲ್ಪಟ್ಟವರು ಎಂದು ನಂಬಲಾಗಿತ್ತು. ದಕ್ಷಿಣ ಭಾರತದ ನಾಲ್ಕೂ ರಾಜ್ಯದ ದ್ರಮಿಳ(ದ್ರಾವಿಡ) ಜನಾಂಗಗಳು ಮೂಲಭೂತವಾಗಿ ಇಲ್ಲಿಯೇ ಹುಟ್ಟಿ ಬೆಳೆದಿರುವುದಾಗಿ ಇತಿಹಾಸ ತಜ್ಞರ ಇತ್ತೀಚಿನ ಅಭಿಪ್ರಾಯ. ಶಂ.ಭಾ.ಜೋಷಿಯವರು ಕರ್ನಾಠಕದ ಮೂಲ ಜನಾಂಗವನ್ನು ಕಂದಮಿಳರು ಎಂದು ಕರೆದಿದ್ದಾರೆ. ಕೆಲವರು ದೀವರರು ಶೀಲಂಕಾದಿಂದ ವಲಸೆ ಬಂದವರೆಂಬ ಅಭಿಪ್ರಾಯ ಸೂಚಿಸಿರುವುದು ಮತ್ತು ಮಲೆಯಾಳದ ಥಿಯಾಸ್ ಪದದಿಂದ ದೀವರ ಪದೋತ್ಪತ್ತಿಯಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ದೀವರರಿಗೂ, ಶ್ರೀಲಂಕಾದವರಿಗೂ, ಥಿಯಾಸ್‍ರವರಿಗೂ ಭೌತಿಕ ಲಕ್ಷಣಗಳಲ್ಲಾಗಲೀ, ಆಡುಭಾಷೆಯಿಂದಾಗಲಿ, ಆಚರಣೆ-ಸಂಪ್ರದಾಯಗಳಿಂದಾಲೀ ಪೀಳಿಗೆಯ ಅನುವಂಶೀಯತೆ ಯಿಂದಾಗಲೀ ಯಾವುದೇ ಹೋಲಿಕೆಯಿಲ್ಲ ಎನ್ನುವುದನ್ನು ಮನಗಾಣಬೇಕು. ದೀವರರ ಸಂಪ್ರದಾಯಗಳಲ್ಲಿ ಕುರುಂಬಿಕೆಯ ಅಂದರೆ ಗೋವಳರ ಲಕ್ಷಣಗಳನ್ನು ಹೆಚ್ಚಾಗಿ ಕಾಣುತ್ತೇವೆ, ಮುಂದೆ ನಾಗರೀಕತೆಯು ಬೆಳೆದಂತೆಲ್ಲ ಅನ್ವೇಷಿತ ಜೀವನಾಧಾರವಾಗಿ ಕೃಷಿ ಫಲವಂತಿಕೆಯನ್ನು ಕಂಡುಕೊಂಡವರು. ದೀವರರು ಪಶ್ಚಿಮ ಘಟ್ಟಗಳ ಪರಿಸರದಲ್ಲೇ ಜನ್ಮತಾಳಿ ತಮ್ಮದೇ ಆದ ಉತ್ಕøಷ್ಟವಾದ ಸಂಸ್ಕøತಿಯನ್ನು ಕಟ್ಟಿಕೊಂಡವರು ಎಂಬುವುದರಲ್ಲಿ ಎರಡು ಮಾತಿಲ್ಲ.

ವೃತ್ತಿ
ದೀವರು ಮೂಲತಃ ‘ಕೃಷಿಕರು’ ಇದರೊಂದಿಗೆ, ಕುರುಂಬಿಕೆ ಕಾಲದಿಂದಲೂ ಪಶುಸಂಗೋಪನೆಯೂ ಇವರ ಜೀವನಾಧಾರವಾಗಿ ಬೆಳೆದುಬಂದಿದೆ. ದೀವರು ಕೃಷಿಕರು, ಒಕ್ಕಲುತನವೇ ಇವರ ಇವರ ವೃತ್ತಿ ಎಂಬುದನ್ನು ಈ ನಾಲ್ಕು ದೃಷ್ಟಾಂತಗಳು ದೃಢಪಡಿಸುತ್ತವೆ. ದೀವರರು ಶೋಡಷ ಸಂಸ್ಕಾರಗಳಲ್ಲಿ ಬಹುಮುಖ್ಯವಾದುದು ಸಾಂಸಾರಿಕ ಜೀವನಕ್ಕೆ ಕಾಲಿಡುವುದು; ಅಂದರೆ ವಿವಾಹ ಬಂಧನ. ವರ ವಧುವಿನ ಮನೆಗೆ ಹೋಗಿ ಕನ್ಯೆಯನ್ನು ಮದುವೆಯಾಗಿ ತಿರುಗಿ ಗಂಡಿನ ಮನೆಗೆ ಬಂದಾಗ ಕೂರಿಗೆ ‘ಬಿತ್ತುವ ಶಾಸ್ತ್ರ’ ಮಾಡಿಸುವರು. ಇದು  ಫಲವಂತಿಕೆಯ ದೀವರರ ಜನಾಂಗದ ಮೂಲವೃತ್ತಿ ಒಕ್ಕಲುತನ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಎರಡನೆಯದು ಕುಟುಂಬದ ಹಿರಿಯರು ತೀರಿಕೊಂಡಾಗ ಅಂಗಳದಲ್ಲಿ ಉರಿಸುವ ಚಿತಾಗ್ನಿಯಲ್ಲಿ “ಕುರೋಳಿ ಮೋಟ”ನ್ನು ಕೊಳ್ಳಿಯಾಗಿಸಿ, ಇದರಿಂದ ಈಡಿಗೆ (ಕಟ್ಟಿಗೆಯ ರಾಶಿಯ ಮೇಲಿಟ್ಟ ಮೃತದೇಹ) ಹಿರಿಯ ಪುತ್ರನಿಂದ ಚಿತಾಗ್ನಿಯನ್ನು ಸ್ಪರ್ಶಿಸಲಾಗುವುದು. ಕೃಷಿಕನಾಧ್ದರಿಂದ ಪವಿತ್ರವಾದ ಹಲ (ನೇಗಿಲು)ದಿಂದಲೇ ಆತನಿಗೆ ಮುಕ್ತಿದೊರಕಿಸುವ ಸಲುವಾಗಿ ಇಂದಿಗೂ ಆಚರಣೆಯಲ್ಲಿದೆ. ಮೂರನೆಯದು ಬರಗಾಲವೊ ಬಡತನವೊ ಎದುರಾಗಿ ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜೀವ ಉಳಿಸಿಕೊಳ್ಳಲು ದೀವರರವನು ಭಿಕ್ಷೆ ಬೇಡುವಂತ ಅನಿವಾರ್ಯ ಪರಿಸ್ಥಿತಿ ಉಂಟಾದಲ್ಲಿ ಕೊರಳಿಗೆ ಕುರೋಳಿ ಮೋಟನ್ನು (ಸವೆದು ಸಣ್ಣದಾದ ನೇಗಿಲು)ನ್ನು ಕಟ್ಟಿಕೊಂಡು ಭಿಕ್ಷೆ ಬೇಡಬೇಕೆಂಬ ಧಾರ್ಮಿಕ ಕಟ್ಟು ಇದೆ. ಕಾರಣ ಕೃಷಿಕನಾದ ಇವನು ಉತ್ತು ಬಿತ್ತು ಸ್ವಾಭಿಮಾನದಿಂದ ಬದುಕಿ ಇನ್ನೊಬ್ಬರಿಗೆ ಅನ್ನದಾತನಾದ ಈತ ಭಿಕ್ಷೆ ಬೇಡಬಾರದು, ಭಿಕ್ಷೆ ಬೇಡುವುದು ದೀವರನಿಗೆ ಅವಮಾನ. ನಾಲ್ಕನೆಯದು ಭೂಮಿಹುಣ್ಣಿಮೆ ಬುಟ್ಟಿ ಮತ್ತು ಬಸುರಿಯಾದ ಭೂಮಿತಾಯಿಯ ಪೂಜಾರಾಧನೆ. ಅಂದು ರೈತಮಕ್ಕಳಿಗೆ ಎಲ್ಲಿಲ್ಲದ ಹಬ್ಬದ ಸಂಭ್ರಮ. ಕೆಲವು ಕಡೆ ಬೆಳ್ಳಂಬೆಳಿಗ್ಗೆಯೇ ಭೂತಾಯಿಯನ್ನು ಪೂಜಿಸಿ ಅಲ್ಲಿಯೇ ಊಟಮಾಡಿ ಮನೆಮಂದಿ ಸಂತಸ ಪಡುವರು.

ಮಾನವ ಬದುಕನ್ನು ಕಟ್ಟಿಕೊಳ್ಳಲು ಹಪಹಪಿಸುವಾಗ ಧ್ಯಾನಸ್ಥಗುಣದ ಏಕಾಗ್ರತೆ ಹಾಗೂ ಮುಂದಲೋಚನೆಗಳು ಶೃಜಿಸಬೇಕು. ಬದುಕು ಯಾವತ್ತೂ ಧಾವಂತವಾಗಬಾರದು. ಜಾಗತೀಕರಣ, ನಗರೀಕರಣ, ಕೈಗಾರೀಕರಣ ಹಾಗೂ ವಿದ್ಯುನ್ಮಾನ ತಾಂತ್ರೀಯತೆಯ ಈ ಕಾಲದಲ್ಲಿ ಇತಿಹಾಸದ ಬಗ್ಗೆ ಯೋಚಿಸುವುದೇ ಕಷ್ಟವೆನಿಸಿದೆ. ಗತಿಸಿದ ಕಾಲದ ಚರಿತ್ರೆಯು ಆಧುನಿಕತೆಯ ಧಾಂಗುಡಿಯಲ್ಲಿ ನಗಣ್ಯವಾಗಿದೆ. ನಮ್ಮ ಸುತ್ತ ಮುತ್ತ ನಮ್ಮವರದೇ ಆದ ಸಚ್ಛಾರಿತ್ರದ ಘನ ಇತಿಹಾಸವಿದೆ. ಅವುಗಳನ್ನು ಹುಡುಕಿ ನೋಡುವ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ಬೆಳೆಸಿಕೊಂಡರೆ ಎಲ್ಲವೂ ಸಾಧ್ಯವಾಗುತ್ತವೆ. ಇತಿಹಾಸವನ್ನು ಅರಿಯದವನು ಎಂದೂ ಇತಿಹಾಸವನ್ನು ನಿರ್ಮಿಸಲಾರ. ಇತಿಹಾಸ ಜೀವನದ ತಾಯಿಬೇರು, ಹೆರೆ, ಕೊಂಬೆ, ಚಿಗುರು, ಹೂವು, ಕಾಯಿಗಳು ಜೀವನದ ಹೊಸಬೆಳವಣಿಗೆ, ಇವು ಸೃಷ್ಟಿಯ ನಿಯಮಗುಣದಂತೆ ಒಂದಕ್ಕೊಂದು ಪೂರಕ.

ಚಾರಿತ್ರಿಕ
ರಾಜಕೀಯ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಬಿರುಗಾಳಿಗೆ ಸಿಕ್ಕು ಇತಿಹಾಸದ ವಿವರಗಳು ನಶಿಸಿಹೋಗಿವೆ. ಇತಿಹಾಸವನ್ನು ವರ್ತಮಾನದ ಕಣ್ಣಿನಲ್ಲಿ ನೋಡುವಾಗ ವಿವೇಕದ ಬೆಳಕು ಅನಿವಾರ್ಯ, ಚರಿತ್ರಕಾರನಿಗೆ ಸತ್ಯಶೋಧನೆ ಒಂದು ಪವಿತ್ರ ವಸ್ತು. ಜನಾಂಗಗಳು ಅವರವರ ಪ್ರಕೃತಿ, ಪರಿಸರ ಮತ್ತು ಪಾರಂಪರಿಕ ಕಸುಬುಗಳಿಗೆ ಅನುಗುಣವಾಗಿ ತಮ್ಮ ಹೆಸರುಗಳನ್ನು ಪಡೆದುಕೊಂಡವು. ಅದರನುಗುಣವಾಗಿ ‘ದೀವರ’ ಜಾತಿ ಪದವು ಈ ಜನಾಂಗದ ಉನ್ನತ ಸಾಮಾಜಿಕ ನೆಲೆಯನ್ನೂ, ‘ಹಳೆಪೈಕ’ ಎಂಬುದು ಜಾರಿಹೋದ ಕಾಲದ ವೀರ ಕ್ಷಾತ್ರಧರ್ಮದ ಪ್ರಾಚೀನತೆಯನ್ನೂ, ‘ಧೀವರ’ ಎಂಬುದು ಜ್ಞಾನ ಹಾಗೂ ಶೌರ್ಯದ ಪರಮೋಚ್ಛಗುಣವನ್ನು ತಿಳಿಯ ಪಡಿಸುತ್ತವೆ.

ಒಂದು ಜನಾಂಗದ ಇತಿಹಾಸ ಮತ್ತು ಸಂಸ್ಕøತಿಯನ್ನು ಕಾಲದಿಂದ ಕಾಲಕ್ಕೆ ಬದಲಾವಣೆಗೊಂಡ ರಾಜರ ಇತಿಹಾಸದೊಂದಿಗೆ ಬಹು ಪ್ರಧಾನವಾಗಿ ಬೆರೆತುಕೊಳ್ಳುವುದು ಜನಸಾಮಾನ್ಯರ ಬದುಕು. ಒಂದುನಾಡಿನ ಇತಿಹಾಸವೆಂದರೆ ಜನಸಾಮಾನ್ಯರ ಬದುಕು, ಜನಜೀವನ, ಅನುಸರಿಸಿದ ಧರ್ಮ, ನಿರ್ಮಿಸಿದ ಕಲೆ, ಸಾಮಾಜಿಕ ಹೋರಾಟ, ಬದುಕಿನಮೌಲ್ಯ, ಆರ್ಥಿಕ ವ್ಯವಸ್ಥೆ, ನಡೆದ ಯುದ್ಧಗಳು, ವಿಜಯ, ಸೋಲು ಇವುಗಳೇ ಆ ನಾಡಿನ ಚರಿತ್ರೆ. ಜನಪದರ ಬದುಕು ಚರಿತ್ರೆಯಲ್ಲಿ ಬೆರೆತು ಹಳೆಯ ನೀರು ಹರಿದು ಹೋಗಿ ಹೊಸನೀರು ಬರುತ್ತಿರುತ್ತದೆ. ಕರ್ನಾಟಕದ ದೀವರರು ಎರಡು ಸಹಸ್ರ ವರ್ಷಳಿಂದಲೂ ಈ ಮೌಲ್ಯಗಳ ಸಮನ್ವಯತೆಗೆ ಕೊಡುಗೆ ನೀಡಿದವರು
ಭಾರತದ ಸಂಸ್ಕøತಿ ದೇವಾಲಯದ ಗೋಡೆಗಳ ನಡುವೆ ಇಲ್ಲ, ಭಾರತದ ನಿಜವಾದ ಸಂಸ್ಕøತಿ ಇರುವುದು ಶ್ರಮಜೀವಿಗಳ ಜನಪದರ ಬದುಕಿನಲ್ಲಿ. ದೀವರರು ಪ್ರಕೃತಿಯಲ್ಲಿ ದೇವರನ್ನು ಕಂಡವರು. ಕ್ರಿಸ್ತ ಪೂರ್ವ ಕಾಲದಿಂದ ಹಿಡಿದು ಈಗ್ಗೆ 216 ವರ್ಷಗಳ ಹಿಂದಿನ ವರೆಗೂ ದೀವರರ ಇತಿಹಾಸ ಮತ್ತು ಸಂಸ್ಕøತಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದುವು ಎನ್ನವುದು ಇತಿಹಾಸ ಅಧ್ಯಯನದಿಂದ ಕಂಡುಬರುತ್ತದೆ. ಕ್ರಿ.ಶ.1800 ರಷ್ಟೊತ್ತಿಗೆ ಸುಮಾರಾಗಿ ಇಡೀ ಭಾರತವು ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಳಪಟ್ಟಾಗ ಯುದ್ಧಗಳು ನಿಂತುಹೋಗಿ ಭಾರತದ ರಾಜರುಗಳು, ಯೋಧರು ನಿಷ್ಕ್ರಿಯರಾದರು. ಅದರಲ್ಲೂ ಯೋಧರು ವೃತ್ತಿಯಿಂದ ವಂಚಿತರಾಗಿ ಬದುಕಿನ ಅತಂತ್ರತೆಗೆ ದೂಡಲ್ಪಟ್ಟರು. ವೈಧಿಕ ವರ್ಗ ರಾಜರುಗಳ ಆಸ್ಥಾನದಲ್ಲಿ ಎಲ್ಲ ಹಂತಗಳಲ್ಲೂ ಉನ್ನತ ಅಧಿಕಾರಹೊಂದಿ ವರ್ಣವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ತಾವು ಮಾತ್ರ ಸುಖವಾಗಿ ಬದುಕಲು ಆಶಿಸಿತು. ರಾಜಮುದ್ರೆಯೊಂದಿಗೆ ಚತುರ್ವರ್ಣದವರಾದ ಶೂದ್ರವರ್ಗದವರನ್ನು ಶೋಷಿಸತೊಡಗಿತು. ಹೀಗೆ ಶುರುವಾದ ಶೋಷಣೆ ಸ್ವಾತಂತ್ರ ಬಂದ ನಂತರವೂ 70ನೇ ದಶಕದವರೆಗೆ ನಿರಂತರವಾಗಿ ಸಾಗಿತು. 200 ವರ್ಷಗಳಕಾಲ ಕಾಲ ವೈದಿಕ ಹಾಗೂ ವೀರಶೈವ ಧರ್ಮಗಳ ದಬ್ಬಾಳಿಕೆಯಿಂದಾಗಿ ಚತುರ್ವರ್ಣದವರು ಸಾಮಜಿಕವಾಗಿ, ಆರ್ಥಿಕವಾಗಿ ತುಳಿಯಲ್ಪಟ್ಟರುವುದು  ಈ ಭಾರತ ದೇಶದ ದುರಂತ. ಇದು 18 ಹಾಗೂ 19ನೇ ಶತಮಾನದಲ್ಲಿ ದೀವರರು ಮಾತ್ರವಲ್ಲದೆ ಎಲ್ಲಾ ಶೂದ್ರವರ್ಣದವರ ಬದುಕು ಶೋಚನೀಯವಾಯಿತು.

ಇತಿಹಾಸ
ದೀವರರ ಕಾಲ ಕಾಲದ ಇತಿಹಾಸವನ್ನು ಅನ್ವೇಶಿಸಿ ವರ್ತಮಾನ ಕಾಲಕ್ಕೆ ಪ್ರಭಾವಿಸಿ ಸಮಕಾಲೀನ ಜೀವನವನ್ನು ಪ್ರಚೋದಿಸುವುದು ಇತಿಹಾಸ ಬೆದಕಿ ನೋಡುವ ಯತ್ನ. ಇತಿಹಾಸ ಪ್ರಬಂಧಗಳ ನೋಟ ಅದು ಒಂದು ಕಲೆ, ತತ್ವಜ್ಞಾನ, ತಥ್ಯಾಂಶಗಳನ್ನು ಬೆಳಕಿಗೆ ತರುವುದೇ ಚಾರಿತ್ರಿಕ ಸಂಗತಿಗಳ ಇಣುಕು ನೋಟ. ದೀವರರ ಜನಾಂಗವನ್ನು ಕುರಿತು ಮೂರು ಗ್ರಂಥಗಳು ಹೊರಬಂದಿವೆ. ಅವುಗಳಲ್ಲಿ ಮೋಹನ ಚಂದ್ರಗುತ್ತಿಯವರ “ದೀವರ ಮಕ್ಕಳು” ಕೃತಿಯು ದೀವರರ ಜಣಾಂದ ಕುರಿತು ಜನನದಿಂದ ಅಂತ್ಯದ ವರೆಗಿನ ಷೋಡಶ ಸಂಸ್ಕಾರ ಹಾಗೂ ಹಬ್ಬ ಹರಿದಿನ, ಸಂಪ್ರದಾಯಗಳು, ಆಚರÀಣೆಗಳು, ನಂಬಿಕೆಗಳು ಮೊದಲಾದ ಸಾಂಕೃತಿಕ ಮತ್ತು ಜನಪದ ಲೋಕವನ್ನು ಸಮಗ್ರವಾಗಿ ತೆರೆದಿಡುತ್ತದೆ. ಮಧುಗಣಪತಿರಾವ್ ಮಡೆನೂರು ಇವರು “ಕರ್ನಾಟಕದ ದೀವರು” ಐತಿಹಾಸಿಕವಾಗಿ ಒಂದು ಅಧ್ಯಯನ ಎಂಬ ಕೃತಿಯು ದೀವರರ ಜನಾಂಗವನ್ನು ಐತಿಹಾಸಿಕವಾಗಿ ಶಿಲಾಶಾಸನಗಳನ್ನು ಆಧರಿಸಿ ಇತಿಹಾಸ ಕಾಲದ ಚಾರಿತ್ರಿಕ ಸಂಗತಿಗಳನ್ನಾಧರಿಸಿದ್ದು ಎರಡುಸಾವಿರ ವರ್ಷಗಳ ದೀವರರ ಕ್ಷಾತ್ರತೇಜಸ್ಸನ್ನು ಕುರಿತ ಅಮೋಘ ಇತಿಹಾಸವನ್ನು ತೆರೆದಿಟ್ಟಿದೆ. ಹುಚ್ಚಪ್ಪ ಮಾಸ್ತರು ದೀವರರ ಜನಾಂಗವ ಕುರಿತಾದ ಸಾಮಾಜಿಕ, ಜಾನಪದೀಯ ಹಾಗೂ ಸಾಂಸ್ಕøತಿಕ ವಿಷಯಗಳನ್ನೊಳಗೊಂಡ ಸಂಗ್ರಹಗಳ ಗ್ರಂಥವಾಗಿದ್ದು ಶೀಗ್ರದಲ್ಲಿಯೇ ಪ್ರಕಣೆಯಾಗಿ ಹೊರಬರಲಿದೆ.

ವೀರಗಲ್ಲುಗಳು
ನಮ್ಮ ಎದರಿನಲ್ಲಿಯೇ ಇರುವ ವೀರಗಲ್ಲುಗಳು, ಮನೆ ಮನೆಯಲ್ಲರುವ ಮಾಸ್ತಿಗಳು ಇತಿಹಾಸಕಾಲದ ದೀವರರ ಶ್ರೀಮಂತ ಚಾರಿತ್ರಿಕ ಸಂಗತಿಗಳನ್ನು ನಿಗೂಢವಾಗಿ ಧರಿಸಿನಿಂತಿವೆ. ಅವುಗಳತ್ತ ಗಮನ ಹರಿಸಿ ಅಧ್ಯಯನ ಮಾಡುವ ಮೂಲಕ ದೀವರರ ಚಾರಿತ್ರಿಕ ಸಂಗತಿಗಳನ್ನು ಬೆಳಕಿಗೆ ತರುವ ಕೆಲಸವಾಗ ಬೇಕಾಗಿದೆ.
ಇತಿಹಾಸ ಕಾಲದಲ್ಲಿ ದೀವರರು ಜಾಗತಿಕ ವೀರತ್ವಕ್ಕೆ ಕಲಿತನದ ಮೂಲಕ ಸಮರ್ಪಿಸಿಕೊಂಡವರು. ಹಾಗಾಗಿಯೆ ಎಲ್ಲೂ ಕಾಣದಂತ ಅಸಂಖ್ಯಾತ ವೀರಗಲ್ಲುಗಳು ‘ದೀವರರ’ ಹೆಸರಿನಲ್ಲಿಯೇ ದೊರೆಯುತ್ತಿರುವುದು ಹೆಗ್ಗಳಿಕೆಯ ಸಂಗತಿ. 2500 ವರ್ಷಗಳಿಂದಲೂ ದಕ್ಷಿಣ ಭಾರತವನ್ನಾಳಿದ ಎಲ್ಲ ರಾಜರುಗಳ ನೇಪಥ್ಯದಲ್ಲಿ ‘ದೀವರರು,’ ಹಾಗೂ ‘ಹಳೆಪೈಕ’ ಎಂಬ ನಾಮಧೇಯದಡಿ ಕಡುಕಲಿಗಳೆನಿಸಿ ಮೆರೆದವರು. ದೀವರಲ್ಲಿ ಮಾಂಡಲೀಕ ರಾಜರೂ, ಪ್ರಧಾನರು, ಸೈನ್ಯಾಧಿಕಾರಿಗಳೂ, ದಂಡನಾಯಕರು, ಸೈನಿಕರಾಗಿದ್ದುದನ್ನು ಶಿಲಾಶಾಸನಗಳು  ಉಲ್ಲೇಖಿಸುತ್ತವೆ.  ಅಧಿಕಾರದಲ್ಲಿದ್ದುದರಿಂದ ವಿದ್ಯಾವಂತರೂ ನಿಪುಣರೂ ಕೂಡ ಆಗಿದ್ದರು. ಕೆಲವು ಕುಟುಂಬಗಳಲ್ಲಿ ಪುರಾಣ, ಚಿಂತಾಮಣಿ, ಯಕ್ಷಗಾನಗಳಂತ  ತಾಳೆಗರಿ ಗ್ರಂಥಗಳು ಕೂಡ ಇದ್ದುವು. 1940ರ ಸುಮಾರಿನಲ್ಲಿ ಸಾಗರ ತಾಲ್ಲೂಕಿನ ಅಂಬಾರಗೋಡಿನ ಬಳಿಯ ಹಾರೊಗೊಪ್ಪ (ಹಾರುವರಕೊಪ್ಪ-ಅಗ್ರಹಾರ)ದಲ್ಲಿ ಅಥರ್ವಣವೇಧ ಪರಿಣಿತ ದೀವರರ ಬಸವಗಾಡಿಗನೆಂಬುವನಿದ್ದು ತಂತ್ರಸಾರದಲ್ಲಿ ಕೇರಳದ ಮಂತ್ರವಾದಿಗಳನ್ನು ಸೋಲಿಸಿದ್ದನೆಂಬ ಪ್ರತೀತಿ ಇದೆ.  ಈ ಜನಾಂಗದವರ ಕೆಲವು ಮನೆಗಳು ಮುನ್ನೂರು-ನಾನೂರು ವರ್ಷಗಳಷ್ಟು ಹಳೆಯದಾದ 16, 24 ಅಂಕಣಗಳ ಮೆತ್ತು ಮಾಳಿಗೆಯ ಬಾವಂತಿಮನೆಗಳಿದ್ದು ಇವುಗಳನ್ನು ನಿರ್ಮಾಣ ಮಾಡಿದವರು ಉನ್ನತ ಅಧಿಕಾರ ಹೊಂದಿದವರಿಂದ ಮಾತ್ರ ಸಾಧ್ಯವಲ್ಲವೆ.

ಸ್ಮಾರಕಗಳು
ಜೀವಂತ ವ್ಯಕ್ತಿಗಳಿಂದ ಸಾಧ್ಯವಾಗದ್ದನ್ನು ಪ್ರಾಚೀನ ಸ್ಮಾರಕಗಳು ಮತ್ತು ಸಾಂಕೃತಿಕ ಪ್ರಾಚ್ಯವಸ್ತುಗಳು ಕೆಲವೊಮ್ಮೆ ಸಾಧಿಸುತ್ತವೆ, ಅವುಗಳನ್ನು ಹುಡುಕಿ ಅರ್ಥೈಸುವ ಮನಸ್ಸು ಆಸಕ್ತರಲ್ಲಿರಬೇಕು. ನಾವು, ಎಲ್ಲೆಂದರಲ್ಲಿ ಹಾಳುದೇವಾಲಯದ ಎದುರಿನಲ್ಲಿ, ಹಳುಬೆಳೆದ ಲಂಟಾನು ಪೊದೆಯಲ್ಲಿ,  ಊರಬಾಗಿಲಿನಲ್ಲಿ, ಕೆರೆಯ ಏರಿಯ ಮೇಲೆ ಪಾಚಿಕಟ್ಟಿದ, ಎಣ್ಣೆ ಸುರಿದ ಶಿಲಾಶಾಸನಗಳನ್ನು ನೋಡುತ್ತೇವೆ. ಅದರಲ್ಲೂ ಈ ನೆಲದ ರಕ್ಷಣೆಗಾಗಿ ಹೋರಾಡಿ ಮಡಿದ ವೀರಗಲ್ಲುಗಳನ್ನು ಕಾಣುತ್ತೇವೆ. ಹಾಗೆಯೇ ಮಲೆನಾಡು ಭಾಗದಲ್ಲಿ ದೀವರರಿಗೆ ಸಂಬಂಧಪಡುವ ವೀರಗಲ್ಲುಗಳು, ಮಾಸ್ತಿಕಲ್ಲುಗಳು ಎಲ್ಲೆಂದರಲ್ಲಿ ಎಡತಾಕುತ್ತವೆ. ಈ ಸ್ಮಾರಕಗಳನ್ನು ಏನನ್ನು ತಿಳಯ ಪಡಿಸುವುದಕ್ಕಾಗಿ ಅಂದಿನ ಜನ ನಿಲ್ಲಸಿರಬಹುದು ಎಂಬ ಕುತೂಹಲ ಆಸಕ್ತರಿಗೆ ಮೂಡುತ್ತದೆ. ಈ ವೀರಗಲ್ಲುಗಳು ನಾಡಿಗಾಗಿ, ಊರಿಗಾಗಿ, ಹೆಣ್ಣಿನ ಮಾನರಕ್ಷಣೆಗಾಗಿ, ಊರಗೋವುಗಳ ರಕ್ಷಣೆಗಾಗಿ ಮಡಿದ ವೀರರ ಚರಿತ್ರೆಯನ್ನು ತಿಳಿಸುತ್ತವೆ. ಈ ಸ್ಮಾರಕಗಳಲ್ಲಿ ವೀರನು ತ್ಯಾಗ, ಬಲಿದಾನವನ್ನು ಧಾರಣಮಾಡಿ ಆದರ್ಶವ್ಯಕ್ತಿಯಾಗಿ ದೀವರನು ನಿಂತಿದ್ದಾನೆ. ಇವುಗಳು ಎಂದೋ ನಡೆದುಹೋದ ಮಹಾಯುದ್ಧದ ಇಲ್ಲವೆ ಘಟನೆಯ ಕುರಿತಾದ ತೀವ್ರತೆಯ ಕಥಾನಕದ ವಿಭಾವವನ್ನು (ದೇಹ+ಭಾವ) ಸೃಷ್ಟಿಸಿ ನಿಂತಿವೆ. ಇವರ ವೀರತ್ವಕ್ಕೆ ಅನ್ವಯಿಸುವ ಒಂದು ಶ್ಲೋಕ ಇಂದಿನ ಯುಗದ ಯೋಧರಿಗೂ ಅನ್ವಯಿಸುವಂತೆ ಹೀಗಿದೆ-

ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ|
ಕ್ಷಣವಿದ್ವಂಸನೀ ಕಾಯೇ ಚ ಚಿಂತಾ ಮರಣೇ ರಣೇ||

ಯುದ್ಧದಲ್ಲಿ ಗೆದ್ದರೆ ಲಕ್ಷ್ಮಿಯು ಲಭಿಸುವಳು ಸತ್ತರೆ ಸ್ವರ್ಗ ಪ್ರಾಪ್ತಿಯಾಗುವುದು, ಯಾವುದೇ ಕ್ಷಣದಲ್ಲಿ ನಾಶವಾಗುವ ಈ ದೇಹಕ್ಕೆ ಯಾಕೆ ಚಿಂತಿಸುತ್ತೀಯ.

ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತಾತನ ದೇಹದಿಂದ ಚಿಮ್ಮಿದ ರಕ್ತವನ್ನು ಹಣೆಗೆ ತಿಲಕವಾಗಿ ಧರಿಸುತ್ತಿದ್ದರು. ವೀರಗಲ್ಲುಗಳು ಯುದ್ಧದ ಸನ್ನಿವೇಶ, ಆಳುವ ರಾಜನ ವಿವರ, ದಾನ ನೀಡಿದವರು,  ಕಾಲ, ದೇಶ ಹಾಗೂ ವೀರನ ಸಾಹಸ, ಪರಾಕ್ರಮಗಳೊಂದಿಗೆ ನೀಡಿದ ದಾನ, ಉಂಬಳಿ ಹಾಗೂ ನೆತ್ತರುಕೊಡುಗೆಯ ಸವಿಸ್ತಾರವನ್ನು ತಿಳಿಸುತ್ತವೆ.
ವೀರಗಲ್ಲುಗಳು ಬರಿ ಶಿಲೆಯಲ್ಲ, ಅದೊಂದು ಘನ ಇತಿಹಾಸದ ಪ್ರತಿಮಾ ರೂಪ. ಅವುಗಳ ಬಗ್ಗೆ ಅಸಡ್ಡೆ ಸಲ್ಲದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿಕೊಡಬೇಕು. ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ ವಿಷಯಗಳ ನಿಜವಾದ ಕೋಶ ವೀರಗಲ್ಲುಗಳು. ಇಂತಹ ವೀರಗಲ್ಲುಗಳು ಹಾಗು ಆತನೊಡನೆ ಸಹಗಮನಗೈದ ಮಹಾಸತಿಯರ ಕಲ್ಲುಗಳು ಪ್ರತಿ ದೀವರರ ಊರಿನಲ್ಲೂ, ಮನೆ ಮನೆಯಲ್ಲೂ ಕಂಡುಬರುತ್ತವೆ. ದೀವರರ ಕ್ಷಾತ್ರ ಪರಂಪರೆಯ ಮಹಾಯಾನವನ್ನು ಈ ಕಲ್ಲುಗಳಲ್ಲಿ ಕಾಣಬಹುದು.

ಶಿಕಾರಿಪುರ ತಾಲ್ಲೂಕು.
ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಮಗೆ ಪ್ರಥಮಾವಾಗಿ ದೊರೆಯುವ ವೀರಗಲ್ಲು 1078 ರ ಶಿಕಾರಿಪುರ ತಾಲ್ಲೂಕಿನ ಮುತ್ತಗಿ ಗ್ರಾಮದ ದೀವರ ತಳಾರ ದಾಸಿಯ ಕುರಿತು. ಈತನು ತಾಳಗುಂದ ಮತ್ತು ಮುತ್ತಗಿಯ ಅಗ್ರಹಾರಗಳ ರಕ್ಷಣೆಗಾಗಿ ತನ್ನದೇ ಆದ ಯೋಧಪಡೆಯನ್ನು ಕಟ್ಟಿಕೊಂಡವನು. ಈ ಅಗ್ರಹಾರಗಳ ಮೇಲೆ ಮನ್ನೆಯ ಮಗುಲೆ ಅರಸನು ದಾಳಿಮಾಡಿ ಅಗ್ರಹಾರವನ್ನು ಕೊಳ್ಳೆಹೊಡೆದು ಅಲ್ಲಿನ ಗೋವುಗಳನ್ನು ಅಪಹರಿಸಲು ಯತ್ನಿಸಿದಾಗ ಮಗುಲೆ ಅರಸನನ್ನು ಎದುರಿಸಿ ತಾಳಗುಂದದ ತುರುಗಳನ್ನು ಹಿಂದಿರುಗಿಸಿ ಕೊಡುವನು. ಆದರೆ ಆ ಹೋರಾಟದಲ್ಲಿ ತಳಾರದಾಸಿ ಮೃತನಾಗುತ್ತಾನೆ. ಸ್ಥಾನಿಕ ಅಧಿಕಾರಿಯಾದ ಮಲ್ಲಿಶೆಟ್ಟಿಯು ತಳಾರ ದಾಸಿಯ ಮಗ ಮಸಣಯ್ಯಗೆ ಕೆರೆಯ ಕೆಳಗಣ ಕೆಯಿ ಹಾಗೂ ಒಂದು ಮನೆಯನ್ನು ಸರ್ವಮಾನ್ಯ ಮಾಡಿ ಮೂವತ್ತಿಚ್ಛಾಸಿರ ದಾನ ನೀಡುವನು.

ಮುತ್ತಗಿಯ ಪಕ್ಕದ ಊರಾದ ಹಿರೇಜಂಬೂರಿನಲ್ಲಿ ಚಿಗಳಿಕಟ್ಟೆ ಏರಿಯ ಮೇಲೆ ದೀವರಿಗೆ ಸಂಬಂದಿಸಿದ ಬೇರೆ ಬೇರೆ ಕಾಲದ ನಾಲ್ಕು ವೀರಗಲ್ಲುಗಳಿದ್ದು ಇವುಗಳೂ ಕೂಡ ಶತ್ರುಗಳು ಊರಿಗೆ ನುಗ್ಗಿ ಹೆಣ್ಣುಮಕ್ಕಳನ್ನು ಮಾನಭಂಗ ಮಾಡಿ ಗೋವುಗಳನ್ನು ಕಲದ್ದೊಯ್ಯುವಾಗ ಗೋಗ್ರಹಣವನ್ನು ತಡೆದು ಹೋರಾಡಿ ಮಡಿದ ವೀರರಾದ ದೀವಬ್ಬೆಯ ಮಗ, ದೀವರ ಬಿಟ್ಟಯ್ಯ, ದೀವರ ಬಾಚಯ್ಯ ಇವರ ಸ್ಮಾರಕಗಳಾಗಿರುತ್ತವೆ.

ಚಂದ್ರಗುತ್ತಿಯ ಮಾಂಡಳಿಕ ರಾಜ ದೀವರ ಚಿನ್ನಣ ಬಮ್ಮಣ.

ಈಗ್ಗೆ 900 ವರ್ಷಗಳ ಹಿಂದಯೇ ಚಂದ್ರಗುತ್ತಿಯಿಂದ ಗುತ್ತಿನಾಡಿನ ರಾಜನಾಗಿ ಆಡಳಿತ ನಡೆಸುತ್ತಿದ್ದುದು ಕ್ರಿ.ಶ.1129ರ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲ್ಲೂಕಿನ ಹಂತೂರು ಶಾಸನವು ತಿಳಿಯಪಡಿಸುತ್ತದೆ. ಈತನು ಹೊಯ್ಸಳ ವಿಷ್ಣುವರ್ಧನನ ಮಾಂಡಲೀಕನಾಗಿದ್ದು, ವಿಷ್ಣುವರ್ಧನನ ಮಗಳು ಹರಿಯಬ್ಬರಸಿ ಕಟ್ಟಿಸಿದ ಪಾಶ್ರ್ವನಾಥ ಜೈನ ಚೈತ್ಯಾಲಯಕ್ಕೆ ಹಂತೂರಲ್ಲಿ ಭೂಮಿದಾನ ನೀಡುವನು. ಬೊಮ್ಮಣನನ್ನು ಕುರಿತು ಸೊರಬ, ಹಾನಗಲ್ಲು, ಬಾಳೂರು ಶಾಸನಗಳು ಆತನ ಕಾಲಘಟ್ಟದಲ್ಲಿ ನಡೆದ ಯುದ್ಧದ ಸನ್ನಿವೇಶಗಳ ವಿವರ ನೀಡುತ್ತವೆ.

ಬಿಲವಕುಲ
ಹೊಂಬುಚದ ಶಾಂತರರ ನಂತರ 12-13ನೇ ಶತಮಾನದಿಂದ ಬಿಲ್ಲವ ಕುಲದ ಅದಿಯರ ಬಳಿಯ ಅರಸರು ನಾಡಕಲಸಿ, ಹೊಸಗುಂದ, ಬಿಲ್ಲೇಶ್ವರ, ಸಾಂತಳಿಗೆ, ಕೊಡಕಣಿ, ಪಟಗುಪ್ಪ, ಸೇತು, ಬಿದರೂರು, ಹನಿಯ, ಹೆಡತರಿ ಮೊದಲಾದೆಡೆ ಕೇಂದ್ರವನ್ನಾಗಿ ರಾಜ್ಯಭಾರಮಾಡಿದ ಸಂಗತಿ ಕಂಡುಬರುತ್ತದೆ. ಈ ಅರಸರುಗಳು ಹುಂಬುಚದ ಆದಿಬಿಲ್ಲೇಶ್ವರ ದೇವರ ದಿಬ್ಯ ಪಾದ ಪದುಮಾರಾಧಕರೆಂದು ಅದಿಯರ ಬಳಿಯ ಕುಲತಿಲಕರೆಂದು ಕೊಂಕಣಿಗರಾಯ ಬೇಟೆಗಾರ, ತುಳುರಾಜ್ಯ ಸ್ಥಾಪನಾಚಾರ್ಯ, ಹೊನ್ನಕೊಟ್ಟು ಕುದುರೆ ಕಟ್ಟುವ ಮಂಡಳಿಕರ ಗಂಡ, ತಮ್ಮದೆ ನೋಡಿ ಎಸೆವ ಕಣ್ಣಂಬಿನವರು ಎಂದು ತಮ್ಮನು ಕರೆಸಿಕೊಂಡಿದ್ದಾರೆ. ಕರ್ನಾಟಕದೆಲ್ಲೆಡೆ ಕಾಣಸಿಗುವ ಬಿಲ್ಲೇಶ್ವರ ದೇವಾಲಯಗಳಿಗೆ ಹೊಂಬುಚದ ಬಿಲ್ಲೇಶ್ವರನೇ ಆದಿಯ ಬಿಲ್ಲೇಶ್ವರ. ಇವರನ್ನು ಬಿಲ್ವ ಮೂನೂರ್ವರು, ನಾನೂರ್ವರು, ಐನೂರು ಆಳಿಂಗೆ, ಸಾವಂತರು ಪಡೆವಳರು ಎಂದೆಲ್ಲ ಕರೆಯಲಾಗಿದ್ದು ಇದು ಒಂದು ಸೈನಿಕ ಸಂಘಟನೆಯಾಗಿದ್ದು ಇವರುಗಳು ಇಲ್ಲಿನ ಸ್ಥಳೀಯ ದೀವರ ಜನಾಂಗವೇ ಆಗಿರುತ್ತಾರೆ. ಹೆಚ್ಚಿನ ವಿಷಯಕ್ಕೆ “ಕರ್ನಾಟಕದ ದೀವರು” ಒಂದು ಐತಿಹಾಸಿಕ ಅಧ್ಯಯನ, ಪುಸ್ತಕವನ್ನು ನೋಡಿದರೆ ವಿವರಣೆ ದೊರೆಯುತ್ತದೆ. 12ನೇ ಶತಮಾನದ ಉತ್ತರಾದ್ರದಿಂದ 14ನೇ ಶತಮಾನದ ವರೆಗೆ ಆಡಳಿತ ನಡೆಸಿರುವುದನ್ನು ಕಾಣಬಹುದು.

ಕ್ರಿ.ಪೂ.300 ರಲ್ಲಿ ಆಳಿದ ಮೌರ್ಯರ ಕಾಲದಿಂದ ಇಡಿದು ಕ್ರಿ.ಶ.ದ ಶಾತವಾಹನರು, ಕದಂಬರು, ಪಲ್ಲವರು, ಸೇಂದ್ರಕರು, ಸೇನವಾನರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿಚಾಲುಕ್ಯರು, ಮುಕುಲರು, ಶಾಂನ್ತರರು, ಪಾಂಡ್ಯರು, ಹೊಯ್ಸಳರು, ಸಿಂಧರು, ಸೇವುಣರು, ಹೊಸಗುಂದ ಹಾಗೂ ಸ್ಥಳಿಯರು, ಕಂಪಲಿ, ವಿಜಯನಗರದರಸರು, ಕೆಳದಿ ಅರಸರು, ಬೀಳಗಿಯವರು, ಮೈಸೂರು ಅರಸರು ಇವರೆಲ್ಲರ ಸೈನ್ಯದಲ್ಲಿ ದೀವರರು ಸೈನಿಕರು, ಸೈನ್ಯಾಧಿಕಾರಿಗಳು, ರಾಯನ್ನ, ಗಾವುಂಡ, ಖಿಲ್ಲೇದಾರ, ಪಡೆವಳ, ಸಾವಂತರು ಮೊದಲಾದ ನಾಮಧೇಯದೊಂದಿಗೆ ಆಯುಧೋಪಜೀವಿಗಳಾಗಿದ್ದವರು. ಇವರನ್ನು ದೀವರು, ಹಳೆಪೈಕ ಎಂದು ಕರೆದಿರುತ್ತಾರೆ. ‘ದೀವರ’ ಎಂದರೆ ಜ್ಞಾನಿ, ಪಂಡಿತ, ಶ್ರೇಷ್ಟ, ವೀರನೆಂತಲೂ, ‘ಹಳೆಪೈಕ’ವು-ಪೈಕ ಎಂದರೆ ಸೈನ್ಯದ ಪಡೆ, ಹಳೆಪೈಕ-ಅನಾಧಿಕಾಲದ ಯೋಧರು ಎಂಬುದನ್ನು ಉಲ್ಲೇಖಿಸುತ್ತವೆ. ದೀವರರು ಮೂಲತಃ ಯೋಧವೃತ್ತಿಯ ಕ್ಷತ್ರಿಯರು.
 
ಕುಮಾರವ್ಯಾಸನು ತನ್ನ ಭಾರತ ಕಥಾಮಂಜರಿಯಲ್ಲಿ ‘ದೀವರ’ ಬಳಸಿದ್ದಾನೆ. ಕೆಳದಿ ನೃಪವಿಜಯ, ಕುಮಾರರಾನ ಸಾಂಗತ್ಯ, ಕಂಠೀರವ ನರಸರಾಜ ವಿಜಯ ಕಾವ್ಯಗಳಲ್ಲಿ ದೀವರರ-ಹಳೆಪೈಕದ ಸೈನಿಕರ ಶೌರ್ಯ, ಸಾಹಸವನ್ನು ವಿಷೇಶವಾಗಿ ಹೊಗಳಿದ್ದಾರೆ.

ಕೆಳದಿ ಅರಸರ ಕಾಲದಲ್ಲಿ ಹೆಚ್ಚಿನದಾಗಿ ಸೈನಿಕರು ಹಾಗೂ ಸೈನ್ಯಾಧಿಕಾರಿಗಳಾಗಿದ್ದವರು ದೀವರರು. ದೀವರರಿಗೆ ನಾಯಕ ಪದವಿ ಬರಲುಕಾರಣ ಇವರು ಮಾಂಡಲಿಕರಾಜರು, ಸೈನ್ಯಾಧಿಕಾರಿಗಳು, ದಂಡನಾಯಕರು ಆಗಿದ್ದು ಆ ಹುದ್ದೆಗಳ ಪದವಿಯೇ ‘ನಾಯಕ’. ಪಟ್ಟ. ಕೆಲದಿ ಅರಸರಲ್ಲಿ ದಂಡನಾಯಕ ರಾಗಿರುವ ಲಿಂಗಣ್ಣನಾಯಕ, ಬೊಮ್ಮನಾಯಕ, ಹಳೆಪೈಕದ ಹೆಮ್ಮೆ ವೀರಭದ್ರಣ್ಣ, ಜಟ್ಟಿ ದೀವರ ಮಲ್ಲ ಮೊದಲಾದವರನ್ನು ಕಾಣುತ್ತೇವೆ. ಸೋಮಶೇಖರನಾಯಕನು ದುಷ್ಟಕೂಟದವರ ಮಾತು ನಂಬಿ ಆನೆಯಮದವನ್ನು ಕುಡಿದು ಮೃತನಾದಾಗ ಕೈತಪ್ಪಿ ಹೋಗಲಿರುವ ರಾಜ್ಯಭಾರವನ್ನು ಆತನ ಮಡದಿ ಚೆನ್ನಮ್ಮಾಜಿಗೆ ರಾಜ್ಯದ ಪಟ್ಟ ಕಟ್ಟಿದವನು ಮಹಾಕ್ರಾಂತಿಕಾರಿ ದಂಡನಾಯಕ ಕಾಸರಗೋಡು ದೀವರ ತಿಮ್ಮಣ್ಣನಾಯಕ. ರಾಜ್ಯದ ಆಡಳಿತವೆಲ್ಲ ಈ ತಿಮ್ಮಣ್ಣನಾಯಕನ ಸೂಚನೆಯಂತೆ ಇತ್ತು.
ಕೆಲದಿ ಅರಸರಲ್ಲಿ ಇರುವ ಅರಮನೆ ಗೌರಿಯ ಪೂಜೆ ಬೇರೆ ಯಾರಲ್ಲೂ ಇರದೆ ಪ್ರತಿಕುಟುಂಬದ ದೀವರರ ಜನಾಂಗದಲ್ಲಿ ಮಾತ್ರವಿದ್ದು ಕೆಲದಿ ಅರಸರ ಮೂಲ ಪುರುಷನ ಸಂಬಂಧವನ್ನು ಹೇಳುತ್ತಿದೆಯೇ! ಎಂಬ ಸಂದೇಹ ಮೂಡದಿರದು.