ಧೀವ ಸಮುದಾಯದ ನಾಯಕರು, ಜನಪ್ರತಿನಿಧಿಗಳು

 

ಕುಂಭತ್ತಿ ಭೈರನಾಯ್ಕರು, ಸೋನಲೆ (ಹೊಸನಗರ)

                ಹೊಸನಗರ ತಾಲ್ಲೂಕಿನ ಕುಂಭತ್ತಿಯಲ್ಲಿ ಭೈರಾನಾಯ್ಕರು ದೊಡ್ಡ ಜಮೀನುದಾರರಾಗಿದ್ದವರು. ಐವತ್ತು ಎಕರೆ ಜಮೀನಿನ ಹಿಡುವಳಿದಾರರಾಗಿದ್ದು ಗದ್ದೆ ಮತ್ತು ತೋಟ ಹೊಂದಿದ್ದ ಗಣ್ಯವ್ಯಕ್ತಿಗಳು. ಇವರದು ದೊಡ್ಡದಾದ ಅವಿಭಕ್ತ ಕುಟುಂಬ. ಇವರು ಹೊನ್ನೆಕೊಪ್ಪ ಸೀಮೆಯ ಜನಾಂಗದ ಹಿರಿಯರು ಹಾಗೂ ಸಮಾಜದ ಮುಖಂಡರಾಗಿದ್ದವರು. ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದು, ಆಗಿನ ಕಾಲದಲ್ಲಿ ವಿದ್ಯಾವಂತರೆನಿಸಿಕೊಂಡ ಹಿರಿಮೆ ಇವರದು.

ಹೊಸನಗರ ತಾಲ್ಲೂಕಿನ ಗಡಿ ಪಟಗುಪ್ಪದ ಹೊಳೆಯ ಆಚೆ ಸಾಗರ ತಾಲ್ಲೂಕಿನ ಗಡಿಗ್ರಾಮವಾದ ಕಬ್ಬನಾಡುಕೊಪ್ಪ ಗ್ರಾಮದ ಮಜರೆ ಹೇರುಗುಳದಲ್ಲಿ ಶ್ರೀವೈಷ್ಣವ ಗುರುಗಳಿದ್ದ ಒಂದು ದೀವರ ಮಠವಿತ್ತು. 1920ರ ಸುಮಾರಿನಲ್ಲಿ 32 ಸೀಮೆಯ ದೀವರ ಜನಾಂಗದವರು ಒಟ್ಟಾಗಿ ಸೇರಿ ವಂತಿಕೆ ಹಣದ ಮೂಲಕ ಮಠವನ್ನು ಜೀಣೋದ್ಧಾರ ಮಾಡಿದರು. ನೆಲಕ್ಕೆ ಗಾರೆ ಹಾಕಿ, ಮಂಗಳೂರು ಹೆಂಚು ಹೊದಿಸಿದ ಸುಸಜ್ಜಿತ ಮಠ ನಿರ್ಮಿಸಿದರು. ಮಠದ ಜೀರ್ಣೋದ್ಧಾರ ಮಾಡಿದ ಸಮಾಜದ ಪ್ರಮುಖರಲ್ಲಿ ಕುಂಭತ್ತಿ ಭೈರನಾಯ್ಕರೂ ಒಬ್ಬರು. ತಿರುಪತಿಯ ತಾತಾಚಾರ್‍ರವರ ಪ್ರಭಾವದಿಂದಾಗಿ ಶ್ರೀವೈಷ್ಣವ ಮಠ 1550ರ ಸುಮಾರಿನಲ್ಲಿ ಇಲ್ಲಿ ಸ್ಥಾಪಿಸಲ್ಪಟ್ಟಿರಬೇಕು. ಹನ್ನೊಂದನೇ ಶತಮಾನದ          ಶ್ರೀ ರಾಮಾನುಜಾಚಾರ್ಯರ ಶ್ರೀವೈಷ್ಣವ ಧರ್ಮದ ಪ್ರಭಾವ ಈ ದೀವರ ಮೇಲಾಗಿದೆ.

ಸಮಾಜದ ಸಂಪ್ರದಾಯಗಳು, ಪದ್ಧತಿಗಳು, ಕಟ್ಟಳೆಗಳು ಉಲ್ಲಂಘನೆಯಾದಾಗ ಸೀಮೆಯ ಮುಖಂಡರು ಮಠದ ಗುರುಗಳ ಉಪಸ್ಥಿತಿಯಲ್ಲಿ ಸಭೆ ಸೇರಿ ಚರ್ಚಿಸಿ, ನ್ಯಾಯ ತೀರ್ಮಾನ ಕೈಗೊಳ್ಳುತ್ತಿದ್ದರು. ತಪ್ಪಿತಸ್ಥರಿಗೆ ದಂಡ ವಿಧಿಸಲಾಗುತ್ತಿತ್ತು. ಕನ್ಯೆಯರು, ವಿಧವೆಯರು ಅನೈತಿಕ ಸಂಬಂಧದಿಂದ ಬಸಿರಾದಲ್ಲಿ ಮಠದ ಗುರುಗಳ ಆಜ್ಞೆಯಂತೆ ಮಠಕ್ಕೆ ಸೇರಿಸಬೇಕಾಗಿತ್ತು. ಅಲ್ಲಿ ಇವರದೇ ಆದ ಒಂದೈವತ್ತು ಕುಟುಂಬಗಳ ಪ್ರತ್ಯೇಕ ವಂಶ ಬೆಳೆಯಿತು. ಇವರನ್ನು ಮಠ ಮತ್ತು ಜಮೀನಿನ ಕೆಲಸಗಳಿಗೆ ಜೀತದಾಳುಗಳಾಗಿ ಮಠದ ಸ್ವಾಮಿಗಳು ದುಡಿಸಿಕೊಳ್ಳುತ್ತಿದ್ದರು. ಈ ಅನಿಷ್ಠ ಪದ್ಧತಿಯನ್ನು ಕುಂಭತ್ತಿ ಭೈರನಾಯ್ಕರು ವಿರೋಧಿಸಿದರು. ಇವರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಸೀಮೆ ಮುಖಂಡರೊಂದಿಗೆ ಚರ್ಚಿಸಿದರು. ಸ್ವಾಮಿಗಳ ಈ ಸಾಮಾಜಿಕ ಕ್ರೌರ್ಯವನ್ನು ವಿರೋಧಿಸಿದರು. ನೀವು ನಮ್ಮ ಜನಾಂಗದ ಸ್ವಾಮಿಗಳಾಗಿದ್ದು, ವೀರಶೈವರು ಹಾಗೂ ಇತರೆ ಸ್ವಾಮಿಗಳಂತೆ ನಮ್ಮ ಮನೆಗಳಲ್ಲಿ ಊಟ ಉಪಹಾರಗಳನ್ನು ಸೇವಿಸಬೇಕೆಂದು ಒತ್ತಡ ಹೇರತೊಡಗಿದರು. ಈ ವಿವಾದವು ಹೊನ್ನೇಕೊಪ್ಪದ ಭೈರನಾಯ್ಕರ ಮುಖಂಡತ್ವದಲ್ಲಿ ತೀವ್ರತೆ ಪಡೆದು ಮಠದ ಸ್ವಾಮಿಗಳನ್ನೇ 1949ರಲ್ಲಿ ಉಚ್ಛಾಟಿಸಲಾಯ್ತು.

ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ

                ಶ್ರೀರಂಗಪಟ್ಟಣದ ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದ ನಂತರ 1799ರಿಂದ 1881ರವರೆಗೆ ಮೈಸೂರು ಪ್ರಾಂತ್ಯವು ಬ್ರಿಟಿಷ್ ಕಮಿಷನ್ ಆಡಳಿತಕ್ಕೆ ಒಳಪಟ್ಟಿತ್ತು. ಮೈಸೂರು ಅರಸರ ವಿನಂತಿ ಮನ್ನಿಸಿ 1881ರಲ್ಲಿ ಹತ್ತನೇ ಚಾಮರಾಜ ಒಡೆಯರಿಗೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಯಿತು. ಜೆ.ಡಿ. ಗೋರ್ಡನ್ ಮೈಸೂರಿನ ರೆಸಿಡೆಂಟನಾಗಿ ಅಧಿಕಾರ ವಹಿಸಿಕೊಂಡನು. ಭಾರತದ ಪಾರ್ಲಿಮೆಂಟಿನ ಪಿತಾಮಹ ಎನಿಸಿದ ದಿವಾನ್ ರಂಗಾಚಾರ್ಲು ಅವರ ಸಲಹೆಯಂತೆ 1881ರಲ್ಲಿ ಪ್ರಜಾ ಪ್ರತಿನಿಧಿ ಸಭೆ ಸ್ಥಾಪಿಸಲಾಯ್ತು. ಆಡಳಿತ ದಕ್ಷರಾದ ರಂಗಾಚಾರ್ಲುರವರು ದಿವಾನ ಹುದ್ದೆ ಸ್ವೀಕರಿಸಿದರು. ರಾಜ್ಯಾಡಳಿತದಲ್ಲಿ ಪ್ರಜೆಗಳು ಪಾಲ್ಗೊಳ್ಳುವಂತಾಗಲು ಪ್ರಮುಖ ರೈತರ, ವರ್ತಕರ ಮತ್ತು ಇತರೆ ಪ್ರಜಾ ಪ್ರಮುಖರ ಒಂದು ಸಭೆಯನ್ನು ಸ್ಥಾಪಿಸಲಾಯ್ತು. 1881ರಲ್ಲಿ ದಸರಾ ಮಹೋತ್ಸವದ ತರುವಾಯ ಆರಂಭವಾದ ಈ ಸಭೆಯಲ್ಲಿ ಪ್ರಥಮಬಾರಿಗೆ 144 ಸದಸ್ಯರಿದ್ದು, ಶ್ರೀಮಂತ ಬ್ರಾಹ್ಮಣ ಭೂ ಮಾಲಿಕರಿಂದ ತುಂಬಿತ್ತು. ನಂತರ ವಿವಿಧ ಹಿತಾಸಕ್ತಿಗಳಿಗೂ ಪ್ರಾತಿನಿಧ್ಯವನ್ನು ಕಲ್ಪಿಸಲಾಯಿತು. ಪ್ರಬಲ ಕೋಮಿನವರಾದ ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆ ಹೆಚ್ಚಾಯಿತು. ಗಣ್ಯ ವರ್ತಕರು, ಪ್ರಗತಿಪರ ಚಿಂತಕರು ಹಾಗೂ ದೊಡ್ಡ ರೈತರನ್ನು ತಾಲ್ಲೂಕಿಗೆ ಒಂದು-ಎರಡರ ಪ್ರಾತಿನಿಧ್ಯದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಮಾಡಿ ಕಳಿಸುತ್ತಿದ್ದರು. ವಿಶೇಷವಾಗಿ ಸಣ್ಣ ಹಿಡುವಳಿದಾರರಿಗೆ ಮತ್ತು ಭೂರಹಿತ ಗೇಣಿದಾರರಿಗೆ ತಮ್ಮ ಪ್ರತಿನಿಧಿಯ ಆಯ್ಕೆ ಮಾಡುವ ಹಕ್ಕು ನೀಡಲಿಲ್ಲ. ಆದರೆ ನಿಜವಾದ ಕೃಷಿಕರೆಂದರೆ ಸಣ್ಣ ಹಿಡುವಳಿದಾರರು ಹಾಗೂ ಒಡೆತನರಹಿತ ಗೇಣಿದಾರರು. ಭಾರತದಲ್ಲಿರುವ ಸಂಸ್ಥಾನಗಳಲ್ಲಿಯೇ ಪ್ರಥಮಬಾರಿಗೆ ಮೈಸೂರಿನಲ್ಲಿ ಪ್ರಜಾಪ್ರಭುತ್ವದ ಆಡಳಿತ ಜಾರಿಗೆ ಬಂದಿತು.

                ಇವರ ನಂತರ ನಾಲ್ವಡಿ ಕೃಷ್ಣರಾಜ ಒಡೆಯರು 1895ರಿಂದ 1940ರವರೆಗೆ ದೀರ್ಘಾವಧಿ ಆಡಳಿತ ನಡೆಸಿ, ಮೈಸೂರನ್ನು ದೇಶದಲ್ಲಿಯೇ ಉತ್ತಮ ಆಡಳಿತ ನೀಡುವುದರೊಂದಿಗೆ ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ದ ಹೆಗ್ಗಳಿಕೆ ಅವರದು. ಪ್ರಜಾ ಪ್ರತಿನಿಧಿ ಸಭೆಗೆ ಸಂವಿಧಾನಿಕ ಸ್ಥಾನಮಾನಗಳು ದೊರೆತು ಸರ್ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮತದಾನದ ಅಧಿಕಾರವು ವಿಸ್ತøತವಾಯಿತು. ಮತದಾನಪದ್ಧತಿ, ಚುನಾವಣಾ ಕ್ರಮ, ಪ್ರಜಾಪ್ರತಿನಿಧಿ ಸಭೆಯ ರಚನೆಯಲ್ಲಿ ಮಾರ್ಪಾಡುಗಳಾದವು. ಪ್ರಜಾಪ್ರತಿನಿಧಿ ಸಭೆಯಿಂದ ನ್ಯಾಯ ವಿಧಾಯಕ ಪರಿಷತ್ತಿಗೆ ಸದಸ್ಯರನ್ನು ಚುನಾಯಿಸುವ (ದಿ.22-01-1907) ಪದ್ಧತಿಯೂ ಜಾರಿಗೆ ಬಂದಿತು. 1923ರಲ್ಲಿ ಹಾಗೂ 1940ರಲ್ಲಿ ತಿದ್ದುಪಡಿಯಾದ ಶಾಸನಗಳ ಮೂಲಕ ನ್ಯಾಯ ವಿಧಾಯಕ ಪರಿಷತ್ತಿನ ಸ್ವರೂಪವೂ, ಅಧಿಕಾರಗಳೂ ಅಮೂಲಾಗ್ರವಾಗಿ ಬದಲಾವಣೆಗೊಂಡವು. ಈ ಅವಧಿಯಲ್ಲಿ 1935-40 ಕುಂಭತ್ತಿ ಭೈರನಾಯ್ಕರು ಮೈಸೂರು ಸರ್ಕಾರದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಚುನಾಯಿತರಾದರು. ಪ್ರಜಾಪ್ರತಿನಿಧಿ ಸಭೆಯ ರಚನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಯಿತು. ಈ ಹಿಂದೆ ಇದ್ದ ಮತದಾರರಿಗಿರತಕ್ಕ ಆಸ್ತಿ ಯೋಗ್ಯತೆಯ ಮಾನದಂಡ ತಗ್ಗಿತು. ಸ್ತ್ರೀಯರಿಗೂ ಮತದಾನದ ಹಕ್ಕನ್ನು ಈ ತಿದ್ದುಪಡಿಯಲ್ಲಿ ನೀಡಲಾಯಿತು.

                ಕುಂಭತ್ತಿ ಭೈರನಾಯ್ಕರೆಂದೇ ಹೊಸನಗರ ತಾಲ್ಲೂಕಿನಲ್ಲಿ ಪ್ರಸಿದ್ಧಿ ಪಡೆದವರು ಇವರು. 1935-40ರ ಅವಧಿಯಲ್ಲಿ ಅಂದಿನ ಮೈಸೂರು ಸರ್ಕಾರದ ಜನಪ್ರತಿನಿಧಿ ಸಭೆಯ ಸದಸ್ಯರಾಗಿದ್ದುದನ್ನು ಈಗಾಗಲೇ ನೋಡಿದ್ದೇವೆ. ಅಂದು ಪ್ರೌಢಶಿಕ್ಷಣ ಪಾಸಾದವರು ಹಾಗೂ ರೂ. 15 ಹಾಗೂ ಅದರ ಮೇಲ್ಪಟ್ಟು ಭೂ ಕಂದಾಯ ಕಟ್ಟುವವರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದರು. ಇವರು ಕುಂಭತ್ತಿಯಲ್ಲಿ ಐವತ್ತು ಎಕರೆ ಜಮೀನಿನ ಖಾತೆದಾರರಾಗಿದ್ದು ರೂ. ಮುನ್ನೂರು ಕಂದಾಯ ಪಾವ್ತಿಸುವ ದೊಡ್ಡ ಹಿಡುವಳಿದಾರರಾಗಿದ್ದವರು. ಅಂದು ಹೆಚ್ಚಿನ ಖಾತೆದಾರರು ಬ್ರಾಹ್ಮಣರು, ಲಿಂಗಾಯತರೇ ಇದ್ದಾಗ್ಯೂ ಎಲ್ಲ ವರ್ಗದ ಜನರ ವಿಶ್ವಾಸಕ್ಕೆ ಪತ್ರರಾಗಿದ್ದು ಆ ಚುನಾವಣೆಯಲ್ಲಿ ವಿಜಯ ಗಳಿಸಿದರು.

                ಇವರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದಾಗ ಮಲೆನಾಡಿಗೆ ಕೆಲವೊಂದು ರಿಯಾಯಿತಿಗಳನ್ನು ಕಲ್ಪಿಸಿದರು. ಮಲೆನಾಡಿನಲ್ಲಿ ದೊರೆಯುವ ಚಾಪೆ ಹೆಣೆಯುವ, ಕಸಪೊರಕೆ ತಯಾರಿಸಲು ಉಪಯೋಗಿಸುತ್ತಿದ್ದ ಈಚಲು ಹುಲ್ಲಿಗೆ ಸರ್ಕಾರ ಹಸಲು ವಿಧಿಸಿತ್ತು. ಮಲೆನಾಡಿಗರಿಗೆ ಈಚಲು ಬಹು ಉಪಯೋಗಿಯೂ, ನಿತ್ಯ ಬಳಕೆಯ ಅತ್ಯಾವಶ್ಯಕ ವಸ್ತುವೂ ಆಗಿತ್ತು. ಈಚಲಿಗೆ ವಿಧಿಸಿದ ಹಾಸಲನ್ನು ಪ್ರಜಾಪ್ರತಿನಿಧಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಹಾಸಲನ್ನು ರದ್ದುಪಡಿಸಿದರು. ಮನೆಕಟ್ಟುವ ಬಳ್ಳಿ, ಬೆತ್ತಗಳನ್ನು ತೆರಿಗೆರಹಿತವಾಗಿ ಉಪಯೋಗಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಕೊಡಿಸಿದರು. ರೈತರು ಮನೆ ಕಟ್ಟಿಕೊಳ್ಳಲು ರಿಯಾಯಿತಿ (ಎಂ.ಅರ್.ಪಿ) ದರದಲ್ಲಿ ಮರ ಕಡಿತಲೆ ಮಾಡಿಕೊಳ್ಳಲು ಅನುಮತಿ ಕೊಡಿಸಿದರು. ಕಡ್ಲೆ ಒಡ್ಡು ಅಣೆಕಟ್ಟೆ ಕಟ್ಟುವ ಕುರಿತು ಸಭೆಯಲ್ಲಿ ಚರ್ಚಿಸಿದ್ದರು. ಸಾರಿಗೆ, ಸಂಪರ್ಕರಸ್ತೆ ಮತ್ತು ನೀರಾವರಿ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದರು. ಇವರ ಕಾಲದಲ್ಲಿ ಭೂಪಾಳಂ ಚಂದ್ರಶೇಖರಯ್ಯ, ಚನ್ನಿಕಟ್ಟೆ ಗೌಡ (ಹೆಸರು ನೆನಪಿಲ್ಲ), ಆಯನೂರು ಸೇವ್ಯಾನಾಯ್ಕ, ಕೊಪ್ಪಕ್ಕೆ ಚಾವಲುಮನೆಯ ಸುಬ್ಬಣ್ಣನಾಯ್ಕರು ಮುಂತಾದವರು ಪ್ರಜಾಪ್ರತಿನಧಿ ಸಭೆ ಸದಸ್ಯರಾಗಿದ್ದವರು. 1940ರಲ್ಲಿ ಶ್ರೀ ಜಯಚಾಮ ಒಡೆಯರ್ ತೀರ್ಥಹಳ್ಳಿಗೆ ಕುರುವಳ್ಳಿ ಸೇತುವೆ ಉದ್ಘಾಟನೆಗೆ ಬಂದಾಗ ಸ್ವಾಮಿರಾಯರು ತಮ್ಮ ತಂದೆಯೊಡನೆ ಸವಾರಿ ಗಾಡಿಯಲ್ಲಿ ಹೋಗಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಅಂದು ಹಾರ್ನಹಳ್ಳಿ ಗಾಡಿ, ಹಾಸನದ ಎತ್ತು ಇಟ್ಟವರು ಸ್ಥಿತಿವಂತರೆನಿಸಿದ್ದು ಆ ಹಿರಿಮೆ ಇವರದ್ದಾಗಿತ್ತು. ಮುಂಚಿನ ದಿನವೇ ಹೊರಟು ರಾತ್ರಿ ಅರಳಿಸುರಳಿಯಲ್ಲಿ ತಂಗಿ ಮರುದಿನ ತೀರ್ಥಹಳ್ಳಿಗೆ ಪ್ರಯಾಣ ಬೆಳೆಸಿದ್ದರಂತೆ. ಪ್ರಯಾಣಕ್ಕಾಗಿಯೇ ಸವಾರಿ ಗಾಡಿಯನ್ನು ಮೀಸಲಿಟ್ಟಿದ್ದು ಇದರಲ್ಲಿ ಅಡುಗೆಯ ಸಾಮಾನು, ಹಾಸಿಗೆ ಸಹ ಇರುತ್ತಿದ್ದವು. ತಂಗಿದಲ್ಲಿ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಆ ಕಾಲದಲ್ಲಿಯೇ ಇಸ್ತ್ರಿ ಮಾಡಿದ ಬಟ್ಟೆ ತೊಡುತ್ತಿದ್ದರು. ಕಚ್ಚೆಪಂಚೆ, ಜರಿಪೇಟ, ಕೋಟು ಧರಿಸುತ್ತಿದ್ದರು. ಕೈಯಲ್ಲೊಂದು ಕೊಡೆ, ಆಪ್ತ ಸಹಾಯಕನಾಗಿ ಸದಾ ಒಬ್ಬ ವ್ಯಕ್ತಿ ಜೊತೆಯಲ್ಲಿರುತ್ತಿದ್ದ. ಭೈರನಾಯ್ಕರಿಗೆ ಶಿಕಾರಿಯ ಹುಚ್ಚಿದ್ದು ಹುಲಿಯನ್ನೂ ಹೊಡೆಯುತ್ತಿದ್ದರಂತೆ.

                ಮೈಸೂರು ಸರ್ಕಾರವು ವಿದ್ಯುತ್ ಉತ್ಪಾದನೆಗಾಗಿ 1932ರಲ್ಲಿಯೇ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಮೀಕ್ಷಾ ವರದಿ ಪಡೆದಿತು. ಆ ವರದಿಯಂತೆ 1939ರಲ್ಲಿ ಶರಾವತಿ ನದಿಗೆ ಹಿರೇಬಸಗಾರು ಎಂಬಲ್ಲಿ ಯೋಜನೆಗೆ ಅಡಿಪಾಯ ಹಾಕಿತು. ಈ ಹಿರೇಬಸಗಾರು ಇಂದು ಸಿಗಂದೂರಿಗೆ ಲಾಂಚ್ ದಾಟಿಸುವ ಹೊಳೆಬಾಗಿಲು. ಇಲ್ಲಿ ಅಡಿಪಾಯಕ್ಕೆ ಹೆಬ್ಬಂಡೆ ಸಿಗದ ಕಾರಣ ಹಿರೇಬಸಗಾರಿನಿಂದ ನಾಡಮಡುವು-ಮಡೆನೂರಿಗೆ ಸ್ಥಳಾಂತರಿಸಿ ಡ್ಯಾಮ್ ಕಟ್ಟಲಾಯ್ತು. ಇವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾದ್ದರಿಂದ ಶರಾವತಿ ಜಲವಿದ್ಯುತ್ ಯೋಜನೆಯ ಎಲ್ಲ ರೂಪುರೇಷೆಗಳು, ಅಂಕಿಅಂಶಗಳ ಮಾಹಿತಿ ದೊರೆತಿದ್ದು, ಕುಂಭತ್ತಿಯು ಮುಳುಗಡೆಯಾಗಲಿದೆ ಎಂಬ ಮುನ್ಸೂಚನೆ ಅರಿತು, ಸೋನಲೆಯಲ್ಲಿ 60 ಎಕರೆ ಜಮೀನನ್ನು 1940ರಲ್ಲಿಯೇ ಖರೀದಿಸಿದರು. (ಹಿರೇಬಸಗಾರು) ಮಡೆನೂರು ಡ್ಯಾಂ 1939ರಿಂದ 1946ರಲ್ಲಿ ಪೂರ್ಣಗೊಂಡು 1947ರಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲ್ಪಟ್ಟಿತು. ಈ ಹಿರೇಬಸಗಾರು (ಹಿರೇಬಸಗಾರನ್ನು-ಹಿರೇಭಾಸ್ಕರವೆಂದು ಯಾರೋ ಅನಾಮಧೇಯ ವ್ಯಕ್ತಿ ಸಂಸ್ಕøತೀಕರಿಸಿಬಿಟ್ಟರು) ಕಟ್ಟೆಯಲ್ಲಿ ಕುಂಭತ್ತಿಯು ಮುಳುಗಿದ್ದು ಸೋನಲೆಗೆ ಸ್ಥಳಾಂತರಿಸಲ್ಪಟ್ಟರು.

ಡಿ. ಮೂಕಪ್ಪನವರು, ಮರ್ತೂರು

                ಸಾಗರ ತಾಲ್ಲೂಕು ಮರ್ತೂರು ಇವರ ಜನ್ಮಸ್ಥಳ. ಮರ್ತೂರಿನ ದೊಡ್ಡಮನೆ ಕುಟುಂಬದ ದುರ್ಗಪ್ಪ ಮತ್ತು ಈರಮ್ಮ ದಂಪತಿಗಳ ಹಿರಿಯ ಮಗನಾಗಿ ಹುಟ್ಟಿದ್ದು 1911ರಲ್ಲಿ. ಇವರು ಓದಿದ್ದು ಅಂದಿನ ಎಲ್‍ಎಸ್ ಪರೀಕ್ಷೆ. ಅನಕ್ಷರಸ್ಥರೇ ಹೆಚ್ಚಿದ್ದ ಆ ಅವಧಿಯಲ್ಲಿ ಅವರೇ ಹೆಚ್ಚಿನ ವಿದ್ಯಾವಂತರಾಗಿದ್ದರು. 1946ರ ಜನವರಿ 13ರಂದು ಸಾಗರ ತಾಲ್ಲೂಕಿನ ಮನೆಘಟ್ಟದಲ್ಲಿ ‘ದೀವರ ಸಮಾಜ ಸುಧಾರಣಾ ಸಭೆ’ ಪ್ರಥಮವಾಗಿ ನಡೆದಾಗ ಮೂಕಪ್ಪನವರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕ ಸೇವೆಗೆ ಇಳಿದವರು. ನಂತರ ಅದೇ ಅವಧಿಯಲ್ಲಿ ಅವರ ಮನೆಯಲ್ಲಿಯೇ ಶ್ರೀ ಆಂಜನೇಯ ಕೋ-ಆಪರೇಟಿವ್ ಸೊಸೈಟಿ ಹೆಸರಲ್ಲಿ ಸಹಕಾರ ಸಂಘವೊಂದನ್ನು ಪ್ರಾರಂಭ ಮಾಡಿದರು. ನಂತರ ವ್ಯವಸಾಯ ಇಲಾಖೆಯ ಫೀಲ್ಡ್‍ಮನ್ ಆಗಿ ನೌಕರಿ ಪಡೆದರು. ಒಂದು ವರ್ಷ ಅವಧಿಯ ನಂತರ ರಾಜೀನಾಮೆ ನೀಡಿ 1947ರಲ್ಲಿ ಜಿಲ್ಲಾ ಬೋರ್ಡ್ ಸದಸ್ಯತ್ವಕ್ಕೆ ಸ್ಪರ್ಧಿಸಿ ಆಯ್ಕೆಯಾದರು. 1948ರ ಅವಧಿಯಲ್ಲಿ ಸಾಗರ ತಾಲ್ಲೂಕು ಗೇಣಿದಾರರ ಸಂಘದ ಪ್ರಥಮ ಸಭೆ ಮರ್ತೂರಿನಲ್ಲಿ ಜರುಗಿತು. ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಮೂಕಪ್ಪನವರು ಜವಾಬ್ದಾರಿ ಹೊತ್ತರು. 50ರ ದಶಕದಲ್ಲಿ ಸಾಗರ ತಾಲ್ಲೂಕು ಗೇಣಿದಾರರ ಸಂಘದ ಅಡಿಯಲ್ಲಿ ಸೊರಬ ಹಾಗೂ ಸಾಗರ ಪ್ರದೇಶಗಳ ಗೇಣಿರೈತರ ಸಂಘಟನೆಗೆ ಅವಿರತ ಶ್ರಮಪಟ್ಟರು. ಎಚ್. ಗಣಪತಿಯಪ್ಪ ಅದರ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಡಿ.ಆರ್. ಹುಚ್ಚಪ್ಪ ಯಲಗಳಲೆ, ಮನೆಘಟ್ಟದ ಚೌಡಪ್ಪ, ಬರಸಿನ ದ್ಯಾವಪ್ಪ ಮುಂತಾದ ಅನೇಕ ದೀವರ ಮುಖಂಡರು ಈ ಸಂಘಟನೆಯ ಮುಂಚೂಣಿಯಲ್ಲಿದ್ದರು. 1948ರಲ್ಲಿ ತಾಳಗುಪ್ಪದಲ್ಲಿ ಆಸ್ಪತ್ರೆ ಶಂಕುಸ್ಥಾಪನೆ ನಡೆಸಲು ಅಂದಿನ ಮೈಸೂರು ಸರ್ಕಾರದ ಆರೋಗ್ಯ ಸಚಿವರಾಗಿದ್ದ ಸಿದ್ದಯ್ಯನವರನ್ನು ಕರೆಸಿ ನೆರವೇರಿಸಿದ್ದರು. 18-4-1951ರಂದು ಕಾಗೋಡು ಸತ್ಯಾಗ್ರಹ ಆರಂಭವಾಯಿತು. ಕಾಗೋಡು ಒಡೆಯರ ಭೂಮಿಗೆ ಉಳುಮೆ ಮಾಡಲು ಇಳಿಯುವ ಹೋರಾಟದ ಮೂಲಕ ಚಳವಳಿ ಪ್ರಾರಂಭವಾಗಿತ್ತು. ಪ್ರಥಮವಾಗಿ ಮೂಕಪ್ಪನವರು ಹಲವು ಜನ ರೈತರೊಂದಿಗೆ ಬಂಧನಕ್ಕೊಳಗಾಗಿ ಜೈಲು ಸೇರಿದರು. ನಂತರ ಒಂದೆರಡು ತಿಂಗಳು ಸತ್ಯಾಗ್ರಹ ನಡೆದು ಮುಖಂಡರೆಲ್ಲಾ ಜೈಲುಪಾಲಾದರು. ಆ ಹೊತ್ತಿನಲ್ಲಿ ಸೋಷಲಿಸ್ಟ್ ಪಕ್ಷದ ಶಾಂತವೇರಿ ಗೋಪಾಲಗೌಡರು, ಅಣ್ಣಯ್ಯ, ಸದಾಶಿವರಾಯರು ಮುಂತಾದ ನಾಯಕರು ಗೇಣಿರೈತರ ಬೆಂಬಲಕ್ಕೆ ಬಂದು ನಿಂತಾಗ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಹೋರಾಟ ಮುಂದುವರೆಯಲು ಸ್ಪೂರ್ತಿಯಾದರು.

1957ರಲ್ಲಿ ಮೈಸೂರು ರಾಜ್ಯದ ಶಾಸನಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಆಯ್ಕೆಯಾಗಿ ಶಾಸನಸಭೆಗೆ ಪ್ರವೇಶ ಪಡೆದ ದೀವರ ಸಮಾಜದ ಮೊದಲ ವ್ಯಕ್ತಿಯಾದರು.

ಎಸ್. ಬಂಗಾರಪ್ಪನವರು

                ಸೊರಬ ತಾಲ್ಲೂಕಿನ ಆನವಟ್ಟಿ ಹತ್ತಿರದ ಕುಬಟೂರಿನ ರೈತ ಕುಟುಂಬದ ಕಲ್ಲಪ್ಪ ಹಾಗೂ ಕಲ್ಲವ್ವ ದಂಪತಿಗಳ ಮಗನಾಗಿ ಬಂಗಾರಪ್ಪನವರು ಹುಟ್ಟಿದವರು. ಬಿ.ಎ., ಎಲ್‍ಎಲ್‍ಬಿವರೆಗೂ ವ್ಯಾಸಂಗ ಮಾಡಿದ ಅವರು ಶಿವಮೊಗ್ಗ ನಗರದಲ್ಲಿ ವಕೀಲಿ ವೃತ್ತಿ ಸೇವೆ ಸಲ್ಲಿಸುತ್ತಾ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಅಂದಿನ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಪ್ರಭಾವದಿಂದ ಸೋಷಲಿಸ್ಟ್ ಚಳವಳಿಗೆ ಧುಮುಕಿದವರು. 1967ರಲ್ಲಿ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೊರಬ ಕ್ಷೇತ್ರದಿಂದ ಪ್ರಥಮವಾಗಿ ಶಾಸನಸಭೆಗೆ ಆಯ್ಕೆಯಾದರು. ಇಲ್ಲಿಂದ ಸತತ ಎಂಟು ಬಾರಿ ಸೊರಬ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದು, ಸೋಲಿಲ್ಲದ ಸರದಾರ ಎಂದು ಹೆಸರು ಗಳಿಸಿದ್ದು ಬಂಗಾರಪ್ಪನವರ ಹೆಗ್ಗಳಿಕೆಯಾಗಿತ್ತು. ದೇವರಾಜ ಅರಸು ಅವರ ಸರ್ಕಾರದಲ್ಲಿ ಸಚಿವರಾಗಿ ರಾಜ್ಯಾದ್ಯಂತ ಹೆಸರು ಮಾಡಿದರು. ನಂತರ ಗುಂಡೂರಾವ್ ಸರ್ಕಾರದಲ್ಲಿಯೂ ಸಚಿವರಾದರು. ಆ ಅವಧಿಯಲ್ಲಿ ಭಿನ್ನಮತೀಯರಾಗಿ ಹೊರಬಂದು ಕ್ರಾಂತಿರಂಗ ಪಕ್ಷ ಕಟ್ಟಿ ಸೊರಬದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್‍ಗೆ ಪರ್ಯಾಯವಾಗಿ ರಾಜ್ಯದ ರಾಜಕಾರಣದಲ್ಲಿ ಜನತಾರಂಗ ರಚನೆಯಾದಾಗ ಕ್ರಾಂತಿರಂಗವನ್ನು ಅದರಲ್ಲಿ ವಿಲೀನ ಮಾಡಿ ಅಲ್ಲಿ ನಾಯಕತ್ವ ಪಡೆದರು. ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಬಂಗಾರಪ್ಪನವರಿಗೆ ಅಲ್ಲಿಯೂ ಭ್ರಮನಿರಸನವಾಗಿ ಹೊರನಡೆದರು. ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ಶಾಸಕರಾಗಿ ರಾಜೀವ್‍ಗಾಂಧಿಯವರ ಬೆಂಬಲದಿಂದ ಆ ಅವಧಿಯಲ್ಲಿ ಮುಖ್ಯಮಂತ್ರಿ ಪದವಿ ಪಡೆದರು. ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಅನೇಕ ಜನಪರ ಕಾರ್ಯಕ್ರಮಗಳು ಜನರ ಮನಸ್ಸಲ್ಲಿ ಇಂದಿಗೂ ಉಳಿದಿವೆ. ರಾಜ್ಯದ ಲಕ್ಷಾಂತರ ಗೇಣಿರೈತರ ಕುಟುಂಬಗಳು ಭೂಮಾಲಿಕರಿಗೆ ಕಟ್ಟಬೇಕಾಗಿದ್ದ ಪರಿಹಾರ ಧನವನ್ನು ಸರ್ಕಾರವೇ ಭರಿಸುವ ತೀರ್ಮಾಣ ಕೈಗೊಂಡದ್ದು ಅವರ ಅವಧಿಯಲ್ಲಿಯೇ. ರೈತರ 10 ಎಚ್.ಪಿ.ವರೆಗಿನ ನೀರಾವರಿ ಪಂಪ್‍ಸೆಟ್‍ಗಳ ವಿದ್ಯುತ್ ಶುಲ್ಕ ಮನ್ನಾ ಯೋಜನೆಯನ್ನು ಅವರ ಅವಧಿಯಲ್ಲಿ ಜಾರಿಗೊಳಿಸಿದರು. ಗ್ರಾಮೀಣ ನಿರುದ್ಯೋಗಿ ವಿದ್ಯಾವಂತರಿಗೆ ‘ಗ್ರಾಮೀಣ ಕೃಪಾಂಕ’ ಜಾರಿಗೆ ತಂದು ಹಲವು ಸಾವಿರ ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಉದ್ಯೋಗಭಾಗ್ಯ ದೊರಕಿಸಿಕೊಟ್ಟರು. ಬಡ ಬಗರ್‍ಹುಕುಂ ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡುವ ಕಾಯ್ದೆ ಜಾರಿಗೆ ತಂದದ್ದು ಅವರ ಅವಧಿಯಲ್ಲಿಯೇ. ರಾಜ್ಯದಲ್ಲಿ ಲಕ್ಷಾಂತರ ಬಡವರು ನಿವೇಶನರಹಿತರಾಗಿದ್ದರು, ಗುಡಿಸಲುವಾಸಿಗಳಾಗಿದ್ದರು. ಅಂತಹ ಅವಧಿಯಲ್ಲಿ ಆಶ್ರಯ ಹಕ್ಕುಪತ್ರ ವಿತರಣೆ ಹಾಗೂ ಆಶ್ರಯ ಮನೆಗಳ ವಿತರಣೆ ಯೋಜನೆ ಲಕ್ಷಾಂತರ ಕುಟುಂಬಗಳಿಗೆ ಬದುಕಲು ಆಸರೆಯಾಗಿದ್ದು ಒಂದು ಇತಿಹಾಸ. ಪರಂಪರಾಗತ ಕುಶಲಕರ್ಮಿಗಳ ಅಭಿವೃದ್ಧಿಗೆ ವಿಶ್ವ ಯೋಜನೆ ಜಾರಿಗೆ ತಂದರು. ದಲಿತರು, ಹಿಂದುಳಿದವರ ಕೇರಿಗಳಲ್ಲಿದ್ದ ಪರಂಪರಾಗತ ದೇವರುಗಳಿಗೆ ಆರಾಧನಾ ಯೋಜನೆಗಳ ಮೂಲಕ ಗುಡಿ ಕಟ್ಟಿಸಿಕೊಟ್ಟರು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಅಕ್ಷಯ ಯೋಜನೆ ಜಾರಿಗೆ ತಂದರು. ಇವರ ಅವಧಿಯಲ್ಲಿಯೇ ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಾರಂಭ ಮಾಡಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರು. ಸಾಧಕರಿಗೆ ನೀಡುವ ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ಥಾಪಿಸಿದ್ದು ಇವರ ಕಾಲದಲ್ಲೇ.

                ಸ್ವತಂತ್ರ ಚಿಂತನೆ ಹಾಗೂ ಪ್ರತಿಷ್ಠೆಯ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಎಸ್. ಬಂಗಾರಪ್ಪನವರು ಶಾಸ್ತ್ರೀಯ ಸಂಗೀತ ಪಾರಂಗತರಾಗಿದ್ದರು. ಕಲೆ ಹಾಗೂ ಕ್ರೀಡಾರಂಗದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ಇವರು ಕಲಾಜೀವಿಗಳಿಗೆ ಸ್ಫೂರ್ತಿಯಾಗಿದ್ದರು. ಕಲಾವಿದರಿಗೆ ಸನ್ಮಾನಿಸಿದರು. ಅವರ ಉಡುಗೆ-ತೊಡುಗೆ ಬಣ್ಣ ಬಣ್ಣದ ದಿರಿಸುಗಳನ್ನು ತೊಡುವ ಖಯಾಲಿ ಉಳ್ಳವರಾಗಿದ್ದರು. ರಾಜಕಾರಣದಲ್ಲಿ ಎಂಥವರಿಗೂ ಸೊಪ್ಪು ಹಾಕದಿರುವ ಜಾಯಮಾನ ಬೆಳೆಸಿಕೊಂಡಿದ್ದರು. ವಿಶಿಷ್ಟ ಮಾತುಗಾರಿಕೆ ಹಾಗೂ ಹಾಸ್ಯ ಪ್ರವೃತ್ತಿಯಿಂದ ಜನಸಾಮಾನ್ಯರನ್ನು ಆಕರ್ಷಿಸುತ್ತಿದ್ದರು. ಮಲೆನಾಡಿನ ಮಣ್ಣಿನ ಜನರ ನಡುವೆ ಬೆಳೆದಂತಹ ಇವರು ಕರ್ನಾಟಕದ ಅಪರೂಪದ ಮಾಸ್ ಲೀಡರ್ ಆಗಿ ಬೆಳೆದಿದ್ದು, ವರ್ಣರಂಜಿತ ರಾಜಕಾರಣಿ ಎಂದು ಖ್ಯಾತಿಗೊಂಡಿದ್ದರು.

ಕಾಗೋಡು ತಿಮ್ಮಪ್ಪನವರು

                ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲ್ಲೂಕಿನ ಕಾಗೋಡು ಎಂಬ ಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿದವರು. ತಂದೆ ಸವಾಜಿ ಬೀರನಾಯ್ಕರು, ತಾಯಿ ಭೈರಮ್ಮ ದಂಪತಿಗಳ ನಾಲ್ಕನೇ ಮಗ. ವಿದ್ಯಾವಂತರೇ ಅಪರೂಪವಾಗಿದ್ದ ಆ ಕಾಲದಲ್ಲಿ ಎಸ್‍ಎಸ್‍ಎಲ್‍ಸಿವರೆಗೂ ಓದಿಕೊಂಡು ಮನೆಯಲ್ಲೇ ಉಳಿದಿದ್ದ ಯುವಕ ಕಾಗೋಡು ತಿಮ್ಮಪ್ಪನವರನ್ನು ಶಾಂತವೇರಿ ಗೋಪಾಲಗೌಡರು ತಿಮ್ಮಪ್ಪನವರ ವಿದ್ಯಾಭ್ಯಾಸ ಮುಂದುವರೆಸಲು ಬೆಂಗಳೂರಿಗೆ ಕರೆದುಕೊಂಡು ಹೋಗಿ ಈಡಿಗ ವಿದ್ಯಾರ್ಥಿನಿಲಯಕ್ಕೆ ಸೇರಿಸಿ ಕಾಲೇಜು ವ್ಯಾಸಂಗಕ್ಕೆ ಸೇರಿಸಿದ್ದರು. ಅಲ್ಲಿ ಬಿ.ಕಾಂ., ಎಲ್‍ಎಲ್‍ಬಿ. ಪದವಿ ಗಳಿಸಿದ ಕಾಗೋಡು ತಿಮ್ಮಪ್ಪನವರು ಸಾಗರದಲ್ಲಿ ವಕೀಲಿ ವೃತ್ತಿಯನ್ನು ಕೈಗೊಂಡರು. ಸಾಗರದಲ್ಲಿ ಸೋಷಲಿಸ್ಟ್ ಚಳವಳಿ ಹಾಗೂ ಗೇಣಿರೈತರ ಹೋರಾಟಗಳು ಬಿಸಿಯೇರಿದ್ದ ಆ ಕಾಲದಲ್ಲಿ ಅದರ ಪ್ರಭಾವದಿಂದ ಹೊರಗುಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಕಾಗೋಡು ಚಳವಳಿ ನಡೆದ ಅವಧಿಯಲ್ಲಿ ವಿದ್ಯಾರ್ಥಿಯಾಗಿದ್ದ ಕಾಗೋಡು ತಿಮ್ಮಪ್ಪನವರ ಮೇಲೆ ಸೋಷಲಿಸ್ಟ್ ಮುಖಂಡರುಗಳ ಪ್ರಭಾವ ಅವರಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸ್ಪೂರ್ತಿಯಾಗಿತ್ತು. ನಂತರ ಚುನಾವಣೆಗಳಲ್ಲಿ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಎರಡು ಬಾರಿ ಸೋಲುತ್ತಾರೆ. ಆದರೆ ಸಾಗರ ತಾಲ್ಲೂಕು ಬೋರ್ಡ್ ಚುನಾವಣೆಗಳಲ್ಲಿ ಕಾಗೋಡು ತಿಮ್ಮಪ್ಪನವರು ಹಾಗೂ ಅವರ ಬೆಂಬಲಿಗರು ಗೆದ್ದು ಪ್ರಥಮ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗುತ್ತಾರೆ. ಸಾಗರ ತಾಲ್ಲೂಕಿನ ಮೂಲೆ ಮೂಲೆಯಲ್ಲಿ ಇವರ ಅಧಿಕಾರದ ಅವಧಿಯ ಛಾಪು ಜನ ಸ್ಮರಿಸುವಂತಾಗುತ್ತದೆ. ನಂತರ 1972ರಲ್ಲಿ ಸೋಷಲಿಸ್ಟ್ ಪಕ್ಷದಿಂದಲೇ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸುತ್ತಾರೆ. ಆ ಅವಧಿಯಲ್ಲಿ ದೇವರಾಜ ಅರಸು ಕಾಂಗ್ರೆಸ್ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿ ತಂದು ಜಾರಿ ಮಾಡಲು ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಆ ಅವಧಿಯಲ್ಲಿ ರಚನೆಯಾದ ಜಾಯಿಂಟ್ ಸೆಲೆಕ್ಟ್ ಸಮಿತಿಯಲ್ಲಿ ಇವರೂ ಓರ್ವ ಸದಸ್ಯರಾಗಿ ಭೂ ಸುಧಾರಣೆ ಕಾಯ್ದೆ ಸಮರ್ಪಕವಾಗಿ ಜಾರಿಯಾಗುವ ವಿಧಾನಗಳನ್ನು ರೂಪಿಸುವಲ್ಲಿ ಶ್ರಮಿಸುತ್ತಾರೆ.

                ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ಗುಂಡೂರಾವ್ ನೇತೃತ್ವದ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗುತ್ತಾರೆ. ಅವರು ಸಚಿವರಾಗಿದ್ದ ಅವಧಿಯಲ್ಲಿ ಸಾಗರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ನಂತರ ಧರ್ಮಸಿಂಗ್ ಅವಧಿಯಲ್ಲಿ ಸಮಾಜಕಲ್ಯಾಣ ಸಚಿವರಾಗಿಯೂ, ಬಂಗಾರಪ್ಪನವರ ಅವಧಿಯಲ್ಲಿ ಹೌಸಿಂಗ್ ಬೋರ್ಡ್ ಛೇರ್ಮನ್ನರಾಗಿಯೂ, ಎಸ್.ಎಂ. ಕೃಷ್ಣ ಅವಧಿಯಲ್ಲಿ ಆರೋಗ್ಯ ಸಚಿವರಾಗಿಯೂ, ವಾರ್ತಾ ಸಚಿವರಾಗಿಯೂ ಅನೇಕ ಖಾತೆಗಳಲ್ಲಿ ತಮ್ಮ ದಕ್ಷತೆ ಹಾಗೂ ಸಾಮಥ್ರ್ಯವನ್ನು ಮೆರೆದವರು. ಈಗ ಸಾಗರದ ಶಾಸಕರಾಗಿ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿ ಉನ್ನತ ಸ್ಥಾನದ ಗೌರವವನ್ನು ಪಡೆದಿದ್ದಾರೆ.

 ಬಿ. ಸ್ವಾಮಿರಾವ್ ಸೋನಲೆ

                ಹೊಸನಗರ ತಾಲ್ಲೂಕಿನ ಸೋನಲೆ ಊರಿನ ಹುಂಬತ್ತಿ ಮನೆತನದ ಭೈರನಾಯಕ ದಂಪತಿಗಳ ಹಿರಿಯಮಗನಾಗಿ ಹುಟ್ಟಿದವರು ಬಿ. ಸ್ವಾಮಿರಾವ್‍ರವರು. ಇವರ ತಂದೆ ಭೈರನಾಯಕರು ಮೈಸೂರು ರಾಜ್ಯದ ಜವಾಬ್ದಾರಿ ಸರ್ಕಾರದ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದವರು. ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿದ ಸ್ವಾಮಿರಾವ್ ಅವರು ಅಂದಿನ ಸೋಷಲಿಸ್ಟ್ ನಾಯಕರ ಸಂಪರ್ಕಕ್ಕೆ ಬಂದು ಸಮಾಜವಾದಿ ಪಕ್ಷದ ಸಂಘಟನೆಯನ್ನು ತಮ್ಮ ಅನೇಕ ಗೆಳೆಯರೊಂದಿಗೆ ಹೊಸನಗರದಲ್ಲಿ ಆರಂಭಿಸಿದವರು. ಪತ್ರಿಕೋದ್ಯಮ ಪದವಿ ಗಳಿಸಿದ್ದ ಬಿ. ಸ್ವಾಮಿರಾವ್ ಸರ್ಕಾರಿ ನೌಕರಿಗೆ ತೆರಳದೇ ರಾಜಕೀಯ ಕ್ಷೇತ್ರಕ್ಕೆ ಶಾಂತವೇರಿ ಗೋಪಾಲಗೌಡರ ಸ್ಫೂರ್ತಿಯಿಂದ ತಮ್ಮನ್ನು ತೊಡಗಿಸಿಕೊಂಡರು. ಸದಾ ಶ್ವೇತವಸ್ತ್ರಧಾರಿ. ಕಚ್ಚೆಪಂಚೆಯ ಉಡುಗೆ-ತೊಡುಗೆ, ಸರಳ ವ್ಯಕ್ತಿತ್ವ ಇವರದು. ಸೋಷಲಿಸ್ಟ್ ಪಕ್ಷದಿಂದ ಮೂರು ಬಾರಿ ಸ್ಪರ್ಧಿಸಿ ಸೋಲನ್ನನುಭವಿಸಿ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದರು. ನಂತರ ಎಸ್. ಬಂಗಾರಪ್ಪನವರ ಜೊತೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ನಂತರದ ವರ್ಷಗಳಲ್ಲಿ ಮೂರು ಬಾರಿ ಹೊಸನಗರ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದರು. ರಾಜಕೀಯ ಅಧಿಕಾರದಿಂದ ಎಂದೂ ಅಹಂಕಾರವನ್ನು ಬೆಳೆಸಿಕೊಳ್ಳದ ಸ್ವಾಮಿರಾವ್ ಸರಳತೆಯ ಜನಾನುರಾಗಿಯಾಗಿದ್ದರು. ಹೊಸನಗರ ತಾಲ್ಲೂಕಿನಲ್ಲಿ ಗೇಣಿರೈತರ ಸಮಸ್ಯೆ ಬಗೆಹರಿಸುವಲ್ಲಿ ಶ್ರಮಿಸಿದವರು. ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮದಲ್ಲಿ ಹೆಚ್ಚು ಶ್ರಮ ವಹಿಸಿದವರು. ಗ್ರಾಮೀಣ ಜಾನಪದ ಕಲೆ ಹಾಗೂ ಕ್ರೀಡೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಇವರು ರಾಜ್ಯಮಟ್ಟದ ಯುವಜನ ಮೇಳಗಳನ್ನು ಸಂಘಟಿಸಿ ಹೊಸನಗರದಲ್ಲಿ ಹಬ್ಬದಂತೆ ಆಚರಿಸುವ ಸಂಪ್ರದಾಯ ತಂದವರು. ಹೊಸನಗರ ಪಟ್ಟಣದಲ್ಲಿ ಈಡಿಗ ವಿದ್ಯಾರ್ಥಿನಿಲಯವನ್ನು ಸ್ಥಳೀಯ ದೀವರ ಪ್ರಮುಖರ ಸಹಕಾರದಿಂದ ಸ್ಥಾಪಿಸಿ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುವ ವ್ಯವಸ್ಥೆ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಜಿ. ದೇವರನಾಯ್ಕ (ಮಾಜಿ ಸಂಸದರು), ಗವಿನಗುಡ್ಡ, ಸಿದ್ದಾಪುರ ತಾ.

                ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಗವಿನಗುಡ್ಡ ಇವರ ಹುಟ್ಟೂರು. ಈರನಾಯ್ಕ ಮತ್ತು ಗೌರಮ್ಮ ದಂಪತಿಗಳ ಮಗನಾಗಿ 1947ರ ಜೂನ್ 1ರಂದು ಹುಟ್ಟಿದವರು. ತಂದೆ-ತಾಯಿಗಳು ಕೃಷಿಕರು. ಬಿ.ಎ. ಎಲ್‍ಎಲ್‍ಬಿ.ವರೆಗೂ ವ್ಯಾಸಂಗ ಮಾಡಿದರು. ವಿದ್ಯಾರ್ಥಿಜೀವನದಲ್ಲಿ ದಿನಕರ ದೇಸಾಯಿಯವರ ಪ್ರಭಾವಕ್ಕೆ ಒಳಗಾದರು. ರಾಜ್ಯದಲ್ಲಿ ಕೆ.ಎಚ್. ರಂಗನಾಥ್‍ರವರ ನಾಯಕತ್ವದ ಪ್ರಜಾ ಸೋಷಲಿಸ್ಟ್ ಪಕ್ಷವು ಹಲವು ಜಿಲ್ಲೆಗಳಲ್ಲಿ ಪ್ರಭಾವ ಇದ್ದಾಗ ಉತ್ತರಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿಯವರು ಸಂಘಟನೆಯ ನಾಯಕರಾಗಿದ್ದರು. ಅಂದು ನಡೆಯುತ್ತಿದ್ದ ಗೇಣಿರೈತರ ಚಳವಳಿಗಳಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಭಾಗವಹಿಸುತ್ತಿದ್ದರು. ಬಿ.ಎ., ಎಲ್‍ಎಲ್.ಬಿ. ವ್ಯಾಸಂಗ ಮಾಡಿದರು. ವಕೀಲ ವೃತ್ತಿಗೆ ಹೋಗಲಿಲ್ಲ. 1962ರಲ್ಲಿ ಪಿಎಸ್‍ಡಿ ಪಕ್ಷದ ಅಭ್ಯರ್ಥಿಯಾಗಿ ಸಿರ್ಸಿ ವಿಧಾನಸಭಾ ಕ್ಷೇತ್ರದಿಂದ ಕಾಗೋಡು ಸತ್ಯಾಗ್ರಹ ರೂವಾರಿ ಎಚ್. ಗಣಪತಿಯಪ್ಪ ಸ್ಪರ್ಧಿಸಿದಾಗ, ವಿದ್ಯಾರ್ಥಿ ದೇವರನಾಯಕ ಅವರೊಂದಿಗೆ ಚುನಾವಣೆಯಲ್ಲಿ ಸಕ್ರಿಯವಾಗಿ ಬೆಂಬಲಿಸಿ ರಾಜಕೀಯರಂಗದ ಪ್ರವೇಶ ಮಾಡಿದರು. ನಂತರದ ಅವಧಿಯಲ್ಲಿ 1969ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಎಫ್.ಎಂ. ಖಾನ್‍ರಂಥವರ ಆಪ್ತರಾಗಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯ ಜವಾಬ್ದಾರಿ ಹೊತ್ತರು. 1980ರಲ್ಲಿ ಕಾರವಾರ (ಉ.ಕ.) ಕ್ಷೇತ್ರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸಂಸತ್ತಿಗೆ ಸ್ಪರ್ಧಿಸಿ ಪ್ರಥಮವಾಗಿ ಆಯ್ಕೆಯಾದರು. ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿಯವರಿಗೆ ಹತ್ತಿರದವರಾದರು. 1984, 1989 ಮತ್ತು 1995ರಲ್ಲಿ ಸತತವಾಗಿ ಸಂಸದರಾಗಿ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಪಾರ್ಲಿಮೆಂಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ದೊಡ್ಡ ಹಿರಿಮೆ.

                ದಿ. ರಾಜೀವ್‍ಗಾಂಧಿಯವರ ನಿಧನಾನಂತರ ರಾಜಕೀಯ ಸನ್ಯಾಸ ಪಡೆದು ಸಂಪೂರ್ಣ ಕೃಷಿಕರಾಗಿರುವ ಶ್ರೀಯುತರು ಸಾಹಿತಿ, ಪತ್ರಕರ್ತ ಟಿ.ಕೆ. ಮಹಮೂದ್‍ರಂಥವರ ಆತ್ಮೀಯ ಸಹವಾಸ ಹೊಂದಿದ್ದು, ಸಾಹಿತ್ಯ ಅಭಿರುಚಿ ಬೆಳೆಸಿಕೊಂಡವರಾಗಿದ್ದಾರೆ.

                ರಾಜಕೀಯದಿಂದ ನಿವೃತ್ತರಾಗಿ ಕೃಷಿ ಜೀವನದಲ್ಲಿ ತೊಡಗಿಕೊಂಡಿರುವ ದೇವರನಾಯ್ಕರು ಜೀವನದಲ್ಲಿ ಸಂತೃಪ್ತಿ ಪಡೆದಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಗೀತಾರವರು ಸೊರಬ ತಾಲ್ಲೂಕಿನ ಸಮಾಜವಾದಿ ಮುಖಂಡರು, ಶಾಂತವೇರಿ ಗೋಪಾಲಗೌಡರ ಶಿಷ್ಯರೂ ಆಗಿದ್ದ ಕುಪ್ಪಗಡ್ಡೆ ಮರಿಯಪ್ಪನವರ ಪುತ್ರಿ. ಈ ದಂಪತಿಗಳಿಗೆ ಮೂವರು ಗಂಡುಮಕ್ಕಳು. ಇಬ್ಬರು ವೈದ್ಯವೃತ್ತಿಯಲ್ಲಿದ್ದಾರೆ. ಇನ್ನೋರ್ವ ಮಗ ಪ್ರತಿಷ್ಠಿತ ವಿಪ್ರೋ ಕಂಪೆನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರಾಗಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ದೇವರನಾಯಕರಿಗೆ ತುಂಬಾ ಪ್ರಭಾವ. ದಿ. ಶ್ರೀಮತಿ ಇಂದಿರಾಗಾಂಧಿಯವರನ್ನು ಸ್ಮರಿಸಿಕೊಳ್ಳುತ್ತಾರೆ. ಅವರ ರಾಜಕೀಯ ಜೀವನದ ಸ್ಮರಣೀಯ ಸಂಗತಿಗಳೆಂದರೆ ಕ್ವಿಟ್ ಗೇಣಿದಾರ ಚಳವಳಿ. ಎರಡನೆಯ ಸಂದರ್ಭ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮಂಡಲ್ ಕಮಿಷನ್ ಬಗ್ಗೆ ಅಂದಿನ ಪ್ರಧಾನಿ ದಿ. ರಾಜೀವ್‍ಗಾಂಧಿಯವರೊಡನೆ ಗಂಭೀರ ಚರ್ಚೆ ನಡೆಸಿದ್ದು. ಮೂರನೆಯದು, ಡೆನ್ಮಾರ್ಕ್ ದೇಶದ ಕೋಪನ್‍ಹೆಗನ್‍ನಲ್ಲಿ ಅಂತಾರಾಷ್ಟ್ರೀಯ ಸಂಸತ್ ಸದಸ್ಯರ ಸಮ್ಮೇಳನದಲ್ಲಿ ಭಾಷಣ ಮಾಡಿದ್ದು ಎಂದು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.

ಎನ್.ಡಿ. ನಾಯ್ಕ, ವಕೀಲರು, ಸಿದ್ದಾಪುರ

                ನಾರಾಯಣ ದ್ಯಾವನಾಯ್ಕ ಐಸೂರು ಇವರು ಸಿದ್ದಾಪುರ ತಾಲ್ಲೂಕಿನಲ್ಲಿ ವಕೀಲರಾಗಿ ಮತ್ತು ರಾಜಕೀಯ ಮುಖಂಡರಾಗಿ ಸೇವೆ ಸಲ್ಲಿಸಿದ್ದವರು. 1944 ಜೂನ್ 6ರಂದು ಸಿದ್ದಾಪುರದಿಂದ 15 ಕಿಮೀ ದೂರವಿರುವ ಐಸೂರಿನಲ್ಲಿ ದ್ಯಾವನಾಯ್ಕ ಹಾಗೂ ಸಿದ್ದಾಪುರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ಇವರು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದಿ. ದೇವರಾಜ ಅರಸುರವರಿಂದ ತುಂಬಾ ಪ್ರಭಾವಿತರಾಗಿ ರಾಜಕೀಯರಂಗಕ್ಕೆ ಬಂದವರು. ಸಿದ್ದಾಪುರ ತಾಲ್ಲೂಕು ಪಂಚಾಯ್ತಿಗೆ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಧಾರ್ಮಿಕ ಕ್ಷೇತ್ರದಲ್ಲಿ ಹಿರೇಮಗಳೂರಿನ ಶ್ರೀ ಶ್ರೀ ಶ್ರೀ ಸವ್ಯಸಾಚಿ ಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿದ್ದವರು. ನಾಯ್ಕರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದಾಗ ಹಿಂದುಳಿದವರು, ದಲಿತರ ಪರ ಯೋಜನೆಗಳನ್ನು ಮುತುವರ್ಜಿಯಿಂದ ಮಾಡಿದ್ದಾರೆ. ಸಿದ್ದಾಪುರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಇವರ ನೇತೃತ್ವದಲ್ಲಿ ನಡೆದಿತ್ತು. ದಲಿತ ಕವಿ ಮುನಿವೆಂಕಟಪ್ಪ, ಚಂಪಾ, ಬರಗೂರು ರಾಮಚಂದ್ರಪ್ಪ, ಆರ್.ವಿ. ಭಂಡಾರಿಯಂತಹ ಸಾಹಿತಿಗಳ, ಪ್ರಗತಿಪರ ಚಿಂತಕರ ಆತ್ಮೀಯರಾಗಿದ್ದರು.

                ಎನ್.ಡಿ. ನಾಯ್ಕರು ಉತ್ತಮ ಕೃಷಿಕರಾಗಿದ್ದು, ಶಿಕಾರಿ ಮಾಡುವುದು, ನಾಟಕಗಳಲ್ಲಿ ಅಭಿನಯಿಸುವುದು, ರುಚಿಯಾದ ಅಡುಗೆ ತಯಾರಿ ಮಾಡುವಂತಹ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಇವರು ಕ್ರೀಡಾರಂಗದಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ನ್ಯಾಯಾಲಯದಲ್ಲಿ ಚಟುವಟಿಕೆಯಿಂದ ಇದ್ದು ಪ್ರಶಸ್ತಿ, ಸನ್ಮಾನ ಪಡೆದವರು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ ಪೋಷಕರಿಗೆ ಕೊಡಮಾಡುವ ಪುರಸ್ಕಾರ ಪಡೆದವರು.

                ಇವರಿಗೆ ನಾಲ್ಕು ಜನ ಪುತ್ರರು. ಕೃಷ್ಣಮೂರ್ತಿ (ನ್ಯಾಯವಾದಿ), ಗುರುಮೂರ್ತಿ (ಇಂಜಿನಿಯರ್), ದಿನೇಶ (ಸ್ವಂತ ಉದ್ಯಮ), ರಾಜೇಶ (ಐಎಫ್‍ಎಸ್) ಇಂಡಿಯನ್ ಫಾರಿನ್ ಸರ್ವಿಸ್ ಪಡೆದಿದ್ದು ಜಪಾನ್ ದೇಶದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿ. ಧರ್ಮಪ್ಪ

                ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೊಸಕೊಪ್ಪ ಇವರ ಜನ್ಮಸ್ಥಳ. ತಂಗಳವಾಡಿ ಇವರ ಊರು. 1937ರಲ್ಲಿ ಹುಟ್ಟಿದ ಇವರೀಗ 74 ವರ್ಷಗಳ ಹಿರಿಯ ಜೀವ. ಇವರು ಹುಟ್ಟಿದ್ದು ಕೃಷಿಕ ಕುಟುಂಬ. ತಂದೆ ಧರ್ಮಪ್ಪ, ತಾಯಿ ಈರಮ್ಮ. ಬಿ.ಎ., ಎಲ್‍ಎಲ್.ಬಿ.ವರೆಗೂ ವ್ಯಾಸಂಗ ಮಾಡಿ ಸಾಗರದಲ್ಲಿ ವಕೀಲಿ ವೃತ್ತಿ ಮಾಡುವ ಮೂಲಕ ರೈತಾಪಿ ವರ್ಗದ ಸೇವೆ ಮಾಡಿದ್ದಾರೆ.

                ಸರ್ವೋದಯ ನಾಯಕ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪಗೌಡರ ಪ್ರಭಾವ ಬಿ. ಧರ್ಮಪ್ಪವನರ ಮೇಲೆ ಇದ್ದುದರಿಂದಲೂ, ಕೈರಾ ಗ್ರಾಮದ ಆಗಿನ ಸೋಷಲಿಸ್ಟ್ ಮುಖಂಡ ಬಿ.ಕೆ. ಕೊಲ್ಲಪ್ಪ ಅವರ ಸ್ನೇಹ ಸಾರ್ವಜನಿಕ ಜೀವನಕ್ಕಿಳಿಯಲು ಪ್ರೇರಣೆ ನೀಡಿದ್ದನ್ನು ಸ್ಮರಿಸುತ್ತಾರೆ.

                ಎರಡು ಬಾರಿ ತಾಲ್ಲೂಕು ಬೋರ್ಡ್‍ಗೆ ಆಯ್ಕೆಯಾದ ಇವರು ಒಂದು ಅವಧಿಗೆ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸೋಷಲಿಸ್ಟ್ ಪಕ್ಷದ ಸಾಗರ ತಾಲ್ಲೂಕು ಅಧ್ಯಕ್ಷರಾಗಿ ಗೇಣಿರೈತರ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟಗಳಲ್ಲಿ ಭಾಗಿಯಾಗಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಾಸಕರಾಗಿದ್ದ ಬಿ. ಧರ್ಮಪ್ಪನವರು ಹಲವು ಜನಪರ ಕಾರ್ಯಕ್ರಮಗಳನ್ನು ಸಾಗರ ಕ್ಷೇತ್ರದಲ್ಲಿ ತಂದರು.

ಬಿ.ಎಸ್. ಪುರುಷೋತ್ತಮ

                ಶ್ರೀಯುತರು ಹೊಸನಗರ ತಾಲ್ಲೂಕಿನ ಬಿದರಳ್ಳಿಯವರು. ಬಿ. ಸಿದ್ದನಾಯ್ಕರು ಮತ್ತು ಶ್ರೀಮತಿ ಕೊಲ್ಲಮ್ಮ ದಂಪತಿಗಳ ಪುತ್ರ. ಬಿ.ಎ., ಬಿಎಲ್‍ವರೆಗೂ ವ್ಯಾಸಂಗ ಮಾಡಿ ವಕೀಲಿವೃತ್ತಿ, ಕೃಷಿ ಹಾಗೂ ಸಾರಿಗೆ ಉದ್ಯಮದಲ್ಲಿ ಯಶಸ್ಸು ಕಂಡವರು. 1939ರಲ್ಲಿ ಹುಟ್ಟಿದ ಇವರು ಈಗ 73 ವರ್ಷಗಳ ಹಿರಿಯ ರಾಜಕಾರಣಿ.

                ಸಮಾಜವಾದಿ ಪಕ್ಷದಿಂದ ರಾಜಕೀಯ ಆರಂಭಿಸಿದವರು. ಹೊಸನಗರ, ರಿಪ್ಪನ್‍ಪೇಟೆ ಇವರ ಸಾಮಾಜಿಕ, ರಾಜಕೀಯ ಕ್ಷೇತ್ರವಾಗಿದ್ದು, 20 ವರ್ಷಗಳ ಕಾಲ ಚುನಾಯಿತ ಪ್ರತಿನಿಧಿಯಾಗಿ ಜನರ ಸೇವೆ ಸಲ್ಲಿಸಿದವರು. ಭೂಸುಧಾರಣೆ ಕಾನೂನಿನ ಅನುಷ್ಠಾನಕ್ಕಾಗಿ ಸತತ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ ನಂತರ ಎರಡು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ವಿರೋಧಪಕ್ಷದ ನಾಯಕರಾಗಿ ಸಮರ್ಥ ಜನಪ್ರತಿನಿಧಿ ಎನ್ನಿಸಿಕೊಂಡವರು.

                ಜೀವನದ ಆರಂಭದ ದಿನಗಳಲ್ಲಿ ತಾವು ರಾಜಕೀಯ ರಂಗಕ್ಕೆ ಬರಲು ಪ್ರೇರೇಪಿಸಿದವರಲ್ಲಿ ತಮ್ಮ ತಂದೆ ಸಿದ್ಧನಾಯ್ಕರು, ನಂತರ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಎಂದು ನೆನಪಿಸಿಕೊಳ್ಳುತ್ತಾರೆ.

                ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗಲೇ ಅವರ ಪ್ರಾಧ್ಯಾಪಕರುಗಳಾದ ರಂಗಾಚಾರ್, ಸಾ.ಶಿ. ಮರುಳಯ್ಯ, ಎನ್‍ಸಿಸಿ ಲೆಫ್ಟಿನೆಂಟ್ ಸಿದ್ದಪ್ಪ ಇವರ ಮೇಲೆ ಪ್ರಭಾವ ಬೀರಿದ್ದು ನಂತರದ ದಿನಗಳಲ್ಲಿ ಜೀವನ ರೂಪಿಸಿಕೊಳ್ಳಲು ಸಹಕಾರವಾಗಿದ್ದನ್ನು ಸ್ಮರಿಸುತ್ತಾರೆ. ಹೊಸನಗರ ತಾಲ್ಲೂಕಿನ ಪ್ರಮುಖ ಕಾಂಗ್ರೆಸ್ ಮುಖಂಡರಾಗಿದ್ದ ಇವರು ಗೇಣಿದಾರರಿಗೆ ಭೂಮಿ ಕೊಡಿಸುವಲ್ಲಿ ಮತ್ತು 20 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿಯಾಗಿ ನಿರಂತರ ಸೇವೆ ಸಲ್ಲಿಸಿದವರು.

                ಬಗರ್‍ಹುಕುಂ ರೈತರಿಗೆ ಸಾಗುವಳಿ ಚೀಟಿ ಕೊಡುವಂತೆ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಇವರು ಅನೇಕ ರಾಜಕೀಯ ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಮಾಜಿ ಸಂಸದ ಕೆ.ಜಿ. ಶಿವಪ್ಪ

                ದಿ. ಕೆ.ಜಿ. ಶಿವಪ್ಪನವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕೋಡ್ಕಣಿ ಗ್ರಾಮದಲ್ಲಿ ದಿನಾಂಕ 30.5.1943ರಂದು ಜನಿಸಿದರು. ಇವರ ತಾಯಿ ಪುಟ್ಟಮ್ಮ, ತಂದೆ ಗೌಡನ ಈರಪ್ಪ. ಸೊರಬ ತಾಲ್ಲ್ಲೂಕಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ ಇವರು ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿ ಕಾನೂನು ಪದವೀಧರರಾದರು. ಸಾಗರಕ್ಕೆ ಬಂದು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ಇವರು ಶ್ರೀ ಬಂಗಾರಪ್ಪನವರ ಜನಪರ ಕಾರ್ಯಗಳನ್ನು ಮೆಚ್ಚಿ ಅವರ ಬೆಂಬಲಿಗರಾಗಿ ರಾಜಕೀಯ ಪ್ರವೇಶಿಸಿದರು. ಪ್ರಥಮವಾಗಿ ಇವರು ಸಾಗರ ತಾಲ್ಲೂಕು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದರು. ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡರು. ಮುಂದೆ 1991-96ರ ಅವಧಿಯಲ್ಲಿ ಸನ್ಮಾನ್ಯ ಶ್ರೀ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಲೋಕಸಭಾ ಸದಸ್ಯರಾಗಿದ್ದರು. ತಮ್ಮ ಅವಧಿಯಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ಮೂಲೆ ಮೂಲೆ ಗ್ರಾಮಗಳಿಗೆ ಭೇಟಿ ನೀಡಿ ಜನಪ್ರಿಯತೆಯನ್ನು ಪಡೆದರು. ಮಾನ್ಯಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಜನಪರ ಕಾಯರ್ಕಕ್ರಮಗಳನ್ನು ಮೆಚ್ಚಿ ಭಾರತೀಯ ಜನತಾಪಕ್ಷ ಸೇರಿದರು. ಇವರು ತುಂಬಾ ಸರಳವ್ಯಕ್ತಿಯಾಗಿದ್ದರು. ಜನಸಾಮಾನ್ಯರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ತಮ್ಮ ಸಮಾಜಮುಖಿ ಕಾರ್ಯಗಳಿಂದ ಮತ್ತು ಸ್ವಯಂ ಪ್ರತಿಭೆಯಿಂದ ಜನಾನುರಾಗಿಗಳಾಗಿದ್ದರು.

ಸಮಾಜವಾದಿ ಹಿನ್ನೆಲೆಯ ಮುಖಂಡ ಐ.ಜಿ. ಮಲ್ಲಪ್ಪ ಇಂಡುವಳ್ಳಿ

                ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಇಂಡುವಳ್ಳಿ ಇವರ ಊರು. ಕೃಷಿಕರಾಗಿದ್ದ ರುದ್ರಪ್ಪ, ಹವಳಮ್ಮ ದಂಪತಿಗಳ ಮಗನಾಗಿ 1931ರ ಮಾರ್ಚ್ 19ರಲ್ಲಿ ಜನನ. ಶಿರಾಳಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿವರೆಗೂ ವ್ಯಾಸಂಗ. ಎಸ್. ಬಂಗಾರಪ್ಪನವರು ಸಹಪಾಠಿಯಾಗಿದ್ದರು. ಓದುವಾಗ ತಡಗಣಿ ಕರಿಬಸಪ್ಪ ಮಾಸ್ತರ ಮನೆಯೇ ಆಶ್ರಯವಾಗಿತ್ತು. ಸೊರಬದ ತಾಲ್ಲೂಕು ಕೃಷಿ ಉತ್ಪನ್ನ ಸೊಸೈಟಿಯಲ್ಲಿ ಮಾರಾಟ ಗುಮಾಸ್ತನಾಗಿ ಉದ್ಯೋಗಿಯಾದರು. ಅದೇ ಅವಧಿಯಲ್ಲಿ ಕುಪ್ಪಗಡ್ಡೆ ಹುಲಿ ರುದ್ರಪ್ಪನವರ ಪುತ್ರಿ ಮೈಲಮ್ಮರೊಂದಿಗೆ ವಿವಾಹವಾಯಿತು.

                ನಂತರದ ದಿನಗಳಲ್ಲಿ ನೌಕರಿಗೆ ರಾಜೀನಾಮೆ ನೀಡಿ ಸ್ವಂತ ಕೃಷಿಕರಾಗಿ ಮಾದರಿ ರೈತರೆನಿಸಿಕೊಂಡರು. 1962ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ಸೇರಿದರು. ಕುಪ್ಪಗಡ್ಡೆ ಮರಿಯಪ್ಪನವರ ಸ್ಫೂರ್ತಿಯಿಂದ 1965ರಲ್ಲಿ ಸೊರಬ ತಾಲ್ಲೂಕು ಬೋರ್ಡ್‍ಗೆ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾದರು. 1970ರವರೆಗೂ ಜನಪ್ರತಿನಿಧಿಯಾಗಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು. 1967ರಿಂದ 1972ರವರೆಗೂ ಎಸ್. ಬಂಗಾರಪ್ಪನವರ ಕಟ್ಟಾ ಅಭಿಮಾನಿಯಾಗಿ ಜನಪರ ಕೆಲಸಕಾರ್ಯಗಳಲ್ಲಿ ಭಾಗಿಯಾಗಿದ್ದರು. 1970ರಿಂದ 1982ರವರೆಗೂ 12 ವರ್ಷಗಳ ಕಾಲ ಇಂಡುವಳ್ಳಿ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷರಾಗಿ ನಿರಂತರ ಸೇವೆ ಸಲ್ಲಿಸಿರುವುದು ಇವರ ಹೆಗ್ಗಳಿಕೆಯಾಗಿದೆ.

                1980ರಿಂದ 90ರವರೆಗೂ 10 ವರ್ಷಗಳ ಕಾಲ ಇಂಡುವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತುಂಬು ಕುಟುಂಬ ಹೊಂದಿದ್ದು, ಮೂರು ಜನ ಗಂಡುಮಕ್ಕಳು, ಏಳು ಜನ ಹೆಣ್ಣುಮಕ್ಕಳು ಇದ್ದಾರೆ. 1991 ಸೆಪ್ಟೆಂಬರ್ 16ರಂದು ನಿಧನರಾದರು.

ಸಮಾಜವಾದಿ ಚೇತನ ಹಾರೋಹಿತ್ತಲು ಸುಬ್ಬನಾಯಕರು

                ರೈತರ, ಕೃಷಿ ಕಾರ್ಮಿಕರ ದನಿಯಾಗಿ ತಮ್ಮ ಜೀವಮಾನದುದ್ದಕ್ಕೂ ಸಾರ್ವಜನಿಕರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ಹಾರೋಹಿತ್ತಲು ಸುಬ್ಬನಾಯ್ಕರು ಹುಟ್ಟಿದ್ದು 1937ರಲ್ಲಿ. ಹುಟ್ಟೂರು ಸಾಗರ ತಾಲ್ಲೂಕು ಅವಿನಹಳ್ಳಿ ಹೋಬಳಿಯ ಬೇಸೂರು ಗ್ರಾಮದ ಮಜರೆ ಸೀತೂರು. ಗುಡ್ಡೆಕೊಪ್ಪದ ದೊಡ್ಮನೆ ಕರಿಮುತ್ತನಾಯಕರು ಇವರ ತಂದೆ. ತಂದೆಯವರು ದೊಡ್ಡ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಜಮೀನ್ದಾರಿ ಪದ್ಧತಿ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ಹಳೆಪೈಕ ಸಮಾಜದ ಸೀಮೆಯ ಪಂಚಾಯತ್ ಮುಖಂಡರಾಗಿದ್ದವರು. ಇವರ ಕುಟುಂಬ ನೂರು ಜನ ಸದಸ್ಯರಿದ್ದ ಒಟ್ಟು ಕುಟುಂಬವಾಗಿತ್ತು.

                ಎಸ್‍ಎಸ್‍ಎಲ್‍ಸಿವರೆಗೂ ವ್ಯಾಸಂಗ ಮಾಡಿದ ಸುಬ್ಬನಾಯ್ಕರು ಕಾಗೋಡು ಸತ್ಯಾಗ್ರಹದ ವೇಳೆಗೆ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಾಗೋಡು ಚಳವಳಿಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡರು. ಆ ಅವಧಿಯಲ್ಲಿ ಎಚ್. ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡ, ಜೆ.ಎಚ್. ಪಟೇಲರು, ವೈ.ಆರ್. ಪರಮೇಶ್ವರಪ್ಪ, ಕೋಣಂದೂರು ಲಿಂಗಪ್ಪ ಮುಂತಾದ ಸಮಾಜವಾದಿಗಳ ನಿಕಟವರ್ತಿಗಳಾದರು.

                ಸಂಯುಕ್ತ ಸೋಷಲಿಸ್ಟ್ ಪಕ್ಷದ ಯುವ ನಾಯಕರಾಗಿ ಮೇಲೆ ಬಂದ ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರ ಜೊತೆಗೆ ‘ಉಳುವವನೆ ಹೊಲದೊಡೆಯ’ ಚಳವಳಿಗಳು, ಕಾರ್ಯಕ್ರಮಗಳಲ್ಲ್ಲಿ ನಿರಂತರವಾಗಿ ಭಾಗಿಯಾದವರು.

                1958ರ ಅವಧಿಯಲ್ಲಿ ಶರಾವತಿ ವಿದ್ಯುತ್ ಯೋಜನೆಯಿಂದ ಅವರ ಹುಟ್ಟಿದ ಸೀತೂರು ಮುಳುಗಡೆಯಾದಾಗ ಹೊಸನಗರ ತಾಲ್ಲೂಕಿನ ಹಾರೋಹಿತ್ತಲು ಗ್ರಾಮದ ಕಂಬತ್ತ ಮನೆಗೆ ವಲಸೆ ಬಂದವರು.

                ಅವರ ದೊಡ್ಡ ಕುಟುಂಬ ಅಲ್ಲಿಗೆ ವಲಸೆ ಹೋದಾಗ ಸರ್ಕಾರ ಭೂಮಿ ಕೊಟ್ಟಿರಲಿಲ್ಲ. ಆದರೆ ಸುಬ್ಬನಾಯಕರ ನಿರಂತರ ಹೋರಾಟದ ಫಲವಾಗಿ ಮುಳುಗಡೆ ರೈತರಿಗಲ್ಲಿ ಜೀವನಕ್ಕೆ ಸರ್ಕಾರದಿಂದ ಭೂಮಿಯನ್ನು ಪಡೆಯುವಂತಾಯಿತು. ಇವರ ಹೋರಾಟದ ಫಲವಾಗಿ ಹಾರೋಹಿತ್ತಲು, ಕೊಳವಂಕ, ಬಸವಪುರ, ಕೊಣಾನಜೆಡ್ಡು, ಮಚ್ಚಲಿಜೆಡ್ಡು, ಸೂಡೂರು, ರೇವಚಿಕೊಪ್ಪ, ಸಾಗರನಜೆಡ್ಡು, ಅಡ್ಡೇರಿ, ಗುಬ್ಬಿಗ ಮುಂತಾದ ಊರುಗಳಲ್ಲಿ ನೆಲೆ ನಿಂತ ಮುಳುಗಡೆ ಸಂತ್ರಸ್ತರಿಗೆ, ಭೂರಹಿತ ಕೃಷಿ ಕಾರ್ಮಿಕರಿಗೆ ಹಗಲಿರುಳು ಎನ್ನದೇ ಶ್ರಮಿಸಿ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿದ ಸಮಾಜಸೇವಕರಾಗಿದ್ದರು.

                ಹೊಸನಗರ ತಾಲ್ಲೂಕಿನಲ್ಲಿ ಜಮೀನ್ದಾರರ ದೌರ್ಜನ್ಯ, ದಬ್ಬಾಳಿಕೆಗೆ ಎದುರಾಗಿ ಸಮಾಜವಾದಿ ಪಕ್ಷದ ಮುಖಂಡರು ಗೇಣಿದಾರರ ಸಂಘಟನೆ ನಡೆಸುತ್ತಿದ್ದಾಗ ಬಿ. ಸ್ವಾಮಿರಾವ್, ಬಿದರಳ್ಳಿ ಪುರುಷೋತ್ತಮ, ಕುಂಜುಕೃಷ್ಣ, ಸುಕುಮಾರ, ಕೊಡಸೆ ಕರಿಯನಾಯ್ಕ, ಚನ್ನಬಸವನಾಯ್ಕ, ಬರುವೆ ಬಡೆಯನಾಯಕ್, ಮುತ್ತು ಭಂಡಾರಿ ಮುಂತಾದವರೊಂದಿಗೆ ಸೋಷಲಿಸ್ಟ್ ಪಾರ್ಟಿ ಸಂಘಟನೆ, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಬಡರೈತರ ಧ್ವನಿಯಾಗಿದ್ದರು.

                ಸೋಷಲಿಸ್ಟರ ನಾಯಕತ್ವದಲ್ಲಿ ನಡೆದ ಭೂ ಹೋರಾಟದ ಭೂರಹಿತ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಕೊಡಿಸಲು ಅರಸಾಳು ಹತ್ತಿರದ ಅರಣ್ಯಭೂಮಿ, ಗಂಧದಸರ ಭೂಮಿ ಹೋರಾಟ ತಿಂಗಳಾನುಗಟ್ಟಲೆ ನಡೆದಾಗ ಉಪವಾಸ ಸತ್ಯಾಗ್ರಹ, ಜೈಲುವಾಸ ಅನುಭವಿಸಿದವರು. ಹೋರಾಟವನ್ನೇ ಮೈಗೂಡಿಸಿಕೊಂಡಿದ್ದ ಸುಬ್ಬನಾಯ್ಕರು ಅನೇಕ ಬಾರಿ ಭೂಮಾಲಿಕರ ದೌರ್ಜನ್ಯಕ್ಕೆ ಒಳಗಾಗಿದ್ದರು. ಹಾರೋಹಿತ್ತಲು ಗ್ರಾಮಪಂಚಾಯ್ತಿ ಸದಸ್ಯರಾಗಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ಪಡೆದಿದ್ದರು.

ಕುಮಾರ ಬಂಗಾರಪ್ಪ

                ಸೊರಬ ಕ್ಷೇತ್ರವನ್ನು ಎರಡು ಅವಧಿಗೆ ಶಾಸಕರಾಗಿ ಪ್ರತಿನಿಧಿಸಿದ ಕುಮಾರ ಬಂಗಾರಪ್ಪನವರು ಎಸ್.ಬಂಗಾರಪ್ಪ ಮತ್ತು ಶ್ರೀಮತಿ ಶಕುಂತಲಾ ಇವರ ಹಿರಿಯ ಪುತ್ರ. ಕನ್ನಡ ಚಿತ್ರರಂಗದಲ್ಲಿ ಚಿತ್ರನಟರಾಗಿ ಖ್ಯಾತಿಯಾಗಿದ್ದ ಕುಮಾರ ಬಂಗಾರಪ್ಪ ತಂದೆಯವರ ಆಶೀರ್ವಾದದಿಂದ ರಾಜಕಾರಣಕ್ಕೆ ಅಕಸ್ಮಿಕವಾಗಿ ಪ್ರವೇಶ ಪಡೆದವರು. ಸೊರಬ ಕ್ಷೇತ್ರಕ್ಕೆ ಶಾಸಕರಾಗಿ, ಎರಡನೇ ಅವಧಿಯಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಸಂಪುಟದ ರಾಜ್ಯ ಸಚಿವರಾಗಿದ್ದರು. ಸೊರಬ ಕ್ಷೇತ್ರ ಅಭಿವೃದ್ಧಿಯತ್ತ ಹೆಜ್ಜೆ ಇಡಲು ಹಲವು ಯೋಜನೆ, ಕಾಮಗಾರಿಗಳನ್ನು ಜಾರಿಗೆ ತಂದವರು.    

ಡಾ|| ಜಿ.ಡಿ. ನಾರಾಯಣಪ್ಪ

                ಹೊಸನಗರ ತಾಲ್ಲೂಕಿನ ಗಂದ್ರಳ್ಳಿ ಇವರ ಊರು. ಮಧ್ಯಮವರ್ಗದ ಧರ್ಮನಾಯ್ಕ ಮತ್ತು ಗೌರಮ್ಮ ರೈತ ದಂಪತಿಗಳ ಕುಟುಂಬದಲ್ಲಿ ಹುಟ್ಟಿದವರು. ಎಂ.ಬಿ.ಬಿ.ಎಸ್‍ವರೆಗೂ ವ್ಯಾಸಂಗ ಮಾಡಿ ಶಿವಮೊಗ್ಗದಲ್ಲಿ ವೈದ್ಯ ವೃತ್ತಿ ಆರಂಭಿಸಿದವರು. ವೈದ್ಯವೃತ್ತಿಯಲ್ಲಿ ಶಿಸ್ತು ಹಾಗೂ ಸರಳತೆ ರೂಢಿಸಿಕೊಂಡಿದ್ದ ಇವರ ಸೇವೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

                ಅಕಸ್ಮಿಕವಾಗಿ ರಾಜಕಾರಣಕ್ಕೆ ಧುಮುಕಿದ ಡಾ|| ನಾರಾಯಣಪ್ಪ ಒಂದು ಅವಧಿಗೆ ಶಾಸಕರಾಗಿ ಹೊಸನಗರ ಕ್ಷೇತ್ರವನ್ನು ಪ್ರತಿನಿಧಿಸಿದವರು. ಶಿವಮೊಗ್ಗ ಜಿಲ್ಲಾ ಈಡಿಗ ಸಂಘದ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದರು.

ಹರತಾಳು ಹಾಲಪ್ಪ

                ಹೊಸ ತಲೆಮಾರಿನ ದೀವರ ಸಮಾಜದಲ್ಲಿ ಶಾಸಕರಾಗಿ ಹರತಾಳು ಹಾಲಪ್ಪ ಹೊಸನಗರದಿಂದ ಒಂದು ಬಾರಿ, ಸೊರ ಕ್ಷೇತ್ರದಿಂದ ಇನ್ನೊಂದು ಬಾರಿ ಆಯ್ಕೆಯಾಗಿದ್ದರು. ಯಡಿಯೂರಪ್ಪನವರ ಸರ್ಕಾರದಲ್ಲಿ ನಾಗರಿಕ ಮತ್ತು ಆಹಾರ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದರು.

 

ಗೋಪಾಲಕೃಷ್ಣ ಬೇಳೂರು

                ಸಾಗರ ತಾಲ್ಲೂಕಿನ ಹೊಸ ತಲೆಮಾರಿನ ದೀವರ ಯುವಕರ ಭರವಸೆಯ ನಾಯಕರಾಗಿ ಸಾಗರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಇವರ ಹೆಗ್ಗಳಿಕೆ.

ಮಧು ಬಂಗಾರಪ್ಪ

                ಮಾಜಿ ಮುಖ್ಯಮಂತ್ರಿ             ದಿ|| ಎಸ್. ಬಂಗಾರಪ್ಪನವರ ಕಿರಿಯ ಪುತ್ರರಾದ ಮಧು ಬಂಗಾರಪ್ಪನವರು ಸೊರಬ ಕ್ಷೇತ್ರದಿಂದ 2013-2018ರ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಧು ಬಂಗಾರಪ್ಪನವರು ಸೊರಬ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ ಬಗರ್‍ಹುಕುಂ ಸಾಗುವಳಿದಾರರ ಬೆಳೆ ನಾಶವಾಗಿ ಅಪಾರ ನಷ್ಟವುಂಟಾದಾಗ ರೈತರ ಪರವಾಗಿ ಸೊರಬ ತಾಲ್ಲೂಕು ಕೆರೆಹಳ್ಳಿಯಿಂದ ಶಿವಮೊಗ್ಗದವರೆಗೂ 140ಕಿಲೋಮೀಟರ್ ಸಾವಿರಾರು ಜನರೊಂದಿಗೆ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರದ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ, ಎಸ್. ಬಂಗಾರಪ್ಪನವರ ರಾಜಕೀಯದ ದಾರಿಯಲ್ಲಿ ನಡೆಯುತ್ತಿದ್ದಾರೆ.

ಪಾಣಿರಾಜಪ್ಪ, ಸೊರಬ

                ಬಂಗಾರಪ್ಪನವರ ನಂತರದ ಪೀಳಿಗೆಯ ರಾಜಕಾರಣದಲ್ಲಿ ಶ್ರೀಯುತ ಪಾಣಿರಾಜಪ್ಪನವರದು ಸೊರಬ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತವಾಗಿರುವ ಹೆಸರು. 1985ರಲ್ಲಿ ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ಕನಸು ಹೊತ್ತು ರಾಮಕೃಷ್ಣ ಹೆಗಡೆ ಮತ್ತು ನಜೀರ್‍ಸಾಬ್‍ರವರು ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಮಸೂದೆ ಜಾರಿಗೆ ತಂದರು. ಈ ಸಂದರ್ಭದಲ್ಲಿ ತಳ ಸಮುದಾಯದ ಅನೇಕ ನಾಯಕರುಗಳು ಜನಪ್ರತಿನಿಧಿಗಳಾಗಿ ಮೇಲೆ ಬರಲು ಸಾಧ್ಯವಾಯಿತು. ಇಂತಹ ಅವಕಾಶದಲ್ಲಿ ಶಿವಮೊಗ್ಗ ಜಿಲ್ಲಾ ಪರಿಷತ್ ರಚನೆಯಾದಾಗ ಮೊದಲ ಅವಧಿಯಲ್ಲಿ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಸ್ಥಾನವನ್ನು ಶ್ರೀಯುತ ಪಾಣಿರಾಜಪ್ಪನವರು ಜೆ.ಎಚ್. ಪಟೇಲರ ಪ್ರಭಾವದಿಂದ ಪಡೆಯುವಂತಾಯಿತು. ಇವರ ತಂದೆ ಪಾಣಿ ಬಸವಣ್ಣಪ್ಪನವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಗೋಪಾಲಗೌಡರು ಮತ್ತು ಜೆ.ಎಚ್. ಪಟೇಲರಿಂದ ಪ್ರಭಾವಿತರಾಗಿದ್ದ ಸಮಾಜವಾದಿ ಹೋರಾಟಗಾರರಾಗಿದ್ದರು. ಸೊರಬ ತಾಲ್ಲೂಕಿನಲ್ಲಿ ಸಮಾಜವಾದಿ ಪಕ್ಷ ಹಾಗೂ ದೀವ ಸಮಾಜದ ಸಂಘಟನೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಕುಪ್ಪಗಡ್ಡೆ ಮರಿಯಪ್ಪನವರ ಸಮಕಾಲೀನರಾಗಿ ಭಾಗಿಯಾಗಿದ್ದವರು ಪಾಣಿ ಬಸವಣ್ಣಪ್ಪನವರು. ಅವರ ಮಗನಾಗಿ ಪಾಣಿರಾಜಪ್ಪನವರು 1957ರ ಸೆಪ್ಟೆಂಬರ್ 22ರಂದು ಹುಟ್ಟಿದ್ದು ಹಿರೇಶಕುನ ಗ್ರಾಮದಲ್ಲಿ. ಪಿ.ಯು.ಸಿ., ಐಟಿಐವರೆಗೂ ಶಿಕ್ಷಣ ಪಡೆದರು. ಇವರು ಉತ್ತಮ ಕ್ರೀಡಾಪಟು, ಕುಸ್ತಿಪಟು ಹಾಗೂ ಸಂಘಟನಾ ಚತುರರು ಎನಿಸಿಕೊಂಡಿದ್ದರು. ಅನೇಕ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಆಯೋಜಕರಾಗಿ ಸದಾ ಲವಲವಿಕೆಯಿಂದ ಇದ್ದ ವಿದ್ಯಾರ್ಥಿನಾಯಕರಾಗಿದ್ದರು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ದೇಶದಲ್ಲೆಲ್ಲಾ ರಾಜಕೀಯ ಸಂಚಲನ ಉಂಟುಮಾಡಿತ್ತು. ಈ ಸಂದರ್ಭದಲ್ಲಿ ಸಮಾಜವಾದಿ ನಾಯಕರಾದ ಜೆ.ಎಚ್. ಪಟೇಲರಿಂದ ಪ್ರಭಾವಿತಗೊಂಡಿದ್ದ ಇವರು ಯುವ ಜನತಾದಳದ ಮುಖಂಡರಾಗಿ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದರು. 1979ರಲ್ಲಿ ಸೊರಬ ತಾಲ್ಲೂಕು ಯುವಕ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ, 1985ರಲ್ಲಿ ತಾಲ್ಲೂಕು ಯುವ ಜನತಾದಳ ಪಕ್ಷದ ಅಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿ ಬಂದವರು. 1986ರಲ್ಲಿ ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಚಳವಳಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೈಗೆತ್ತಿಕೊಂಡಾಗ ಪ್ರೊ. ಬಿ. ಕೃಷ್ಣಪ್ಪನವರ ಪ್ರಭಾವದಿಂದ ಇದರಲ್ಲಿ ಭಾಗಿಯಾದರು. 1983ರಲ್ಲಿ ಜನತಾ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸೊರಬ ತಾಲ್ಲೂಕಿನ ದರಖಾಸ್ತು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಶ್ರೀಮತಿ ಗೀತಾ ತಿರುಕಪ್ಪ

                ಶಿವಮೊಗ್ಗ ಜಿಲ್ಲಾ ಪಂಚಾಯತ್‍ನ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಗೀತಾ ತಿರುಕಪ್ಪನವರು ಎಸ್. ಬಂಗಾರಪ್ಪನವರ ನೇತೃತ್ವದಲ್ಲಿದ್ದ ಅಂದಿನ ಸಮಾಜವಾದಿ ಪಕ್ಷದ ಪ್ರತಿನಿಧಿಯಾಗಿ ಕುಂಸಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇವರ ಪತಿ ಶ್ರೀಯುತ ತಿರುಕಪ್ಪನವರು ಖ್ಯಾತ ನ್ಯಾಯವಾದಿಯಾಗಿದ್ದಾರೆ.

ಶ್ರೀಮತಿ ರೋಹಿಣಿ ನಾಗರಾಜ್

                ಇವರು ಕಾಗೋಡು ತಿಮ್ಮಪ್ಪನವರ ಪ್ರಭಾವದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಳದಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್‍ಗೆ ಆಯ್ಕೆಯಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ನ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಶ್ರೀಮತಿ ಗಾಯತ್ರಿ ರೇವಪ್ಪ

                ಆನಂದಪುರ ಕ್ಷೇತ್ರದಿಂದ ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ಆಯ್ಕೆಯಾದ ಇವರು ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಭೀಮನೇರಿ ಶಿವಪ್ಪ

                ಕೆಳದಿ ಕ್ಷೇತ್ರದಿಂದ ಆಯ್ಕೆಯಾದ ಭೀಮನೇರಿ ಶಿವಪ್ಪನವರು ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ಒಂದು ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಅಶೋಕಮೂರ್ತಿ

                ತೀರ್ಥಹಳ್ಳಿ ತಾಲ್ಲೂಕಿನ ಯುವ ತಲೆಮಾರಿನ ಮುಖಂಡರಾಗಿದ್ದ ಇವರು ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

 

ಹುಣವಳ್ಳಿ ಗಂಗಾಧರಪ್ಪ

                ಸೊರಬ ತಾಲ್ಲೂಕು ಉಳವಿ ಕ್ಷೇತ್ರದಿಂದ ಮೂರು ಬಾರಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ಆಯ್ಕೆಯಾದ ಇವರು 2012-13ರ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಶ್ರೀಮತಿ ಲಲಿತಾ ನಾರಾಯಣ

                ತಾಳಗುಪ್ಪ ಸಮೀಪದ ಗುಡ್ಡೇಮನೆ ಇವರ ಊರು. ಹುಲಿಯಪ್ಪ, ಕನ್ನಮ್ಮ ದಂಪತಿಗಳ ಮಗಳಾಗಿ 1965ರಲ್ಲಿ ಹುಟ್ಟಿದ್ದು. ಪಿಯುಸಿವರೆಗೂ ವಿದ್ಯಾಭ್ಯಾಸ. ಸರ್ವೆ ಇಲಾಖೆಯಲ್ಲಿ ನೌಕರರಾಗಿರುವ ಇವರ ಪತಿ ಎನ್.ಆರ್. ನಾರಾಯಣ ತಮ್ಮ ಪತ್ನಿಯ ಸಾರ್ವಜನಿಕ ಕ್ಷೇತ್ರದಲ್ಲಿಯ ಸೇವೆಗೆ ನೆರವಾದವರು. 1995ರಲ್ಲಿ ಹಾಗೂ 2011ರಲ್ಲಿ ಎರಡು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿ ತಾಳಗುಪ್ಪ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇವರಿಗೆ ಕಾಗೋಡು ತಿಮ್ಮಪ್ಪನವರ ಪ್ರೇರಣೆ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಲು ಸ್ಫೂರ್ತಿ ನೀಡಿದೆ. ಸಾಗರ ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾಗಿ ಹಲವು ವರ್ಷಗಳ ಸೇವೆ ಇವರ ಸಾರ್ವಜನಿಕ ಜೀವನದ ಸ್ಮರಣೀಯ ದಿನಗಳಾಗಿವೆ.

ಶ್ರೀಮತಿ ದೇವಕಿ ಪಾಣಿರಾಜಪ್ಪ

                ತೀರ್ಥಹಳ್ಳಿ ತಾಲ್ಲೂಕಿನ ಕೌಡಳ್ಳಿಯಲ್ಲಿ 1963, ಸೆಪ್ಟೆಂಬರ್ 6 ರಂದು ಜನಿಸಿದ ಇವರದು ಕೃಷಿ ಕುಟುಂಬ. ತಂದೆ ಕುಮಾರನಾಯ್ಕ, ತಾಯಿ ರತ್ನಮ್ಮ. ಪ್ರೌಢಶಿಕ್ಷಣದವರೆಗೆ ವ್ಯಾಸಂಗ ಮಾಡಿರುತ್ತಾರೆ. ಶಿವಮೊಗ್ಗ ಜಿಲ್ಲಾ ಪರಿಷತ್ತಿನ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಾಣಿರಾಜಪ್ಪನವರ ಪತ್ನಿ.

ಚಂದ್ರಗುತ್ತಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಮಹಿಳಾ ಮೀಸಲು ಕ್ಷೇತ್ರದಲ್ಲಿ 2005-2010ರ ಅವಧಿಗೆ ಆಯ್ಕೆಯಾದರು. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಹುಮತದಿಂದ ಆಯ್ಕೆಯಾಗಿದ್ದರು. ಜಿಲ್ಲಾ ಪಂಚಾಯತ್, ಶಿವಮೊಗ್ಗ ಇದರ ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಚಂದ್ರಗುತ್ತಿ ಹಾಗೂ ಕಡಸೂರು ಹತ್ತಿರ ಎರಡು ಬ್ಯಾರೇಜುಗಳಿಗೆ (ತಲಾ ನಾಲ್ಕು ಹಾಗೂ ಐದು ಕೋಟಿ ವೆಚ್ಚದವು) ಮಂಜೂರಾತಿ ನೀಡಿ ಕೃಷಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಸವಿವರವಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಶ್ರೀ.ಎನ್.ಹುಚ್ಚಪ್ಪಮಾಸ್ತರ್, ಕುಗ್ವೆ ಇವರ ಕನ್ನಡ ಪುಸ್ತಕ ಪ್ರಾಧಿಕಾರ ಇವರು ಪ್ರಕಟಿಸಲಿರುವ ಮಲೆನಾಡು ದೀವರ ಸಾಂಸ್ಕøತಿಕ ಸಂಕಥನ (ಜನಾಂಗೀಯ ಅಧ್ಯಯನಪುಸ್ತಕವನ್ನು ಓದುವುದು.