ಉಡುಗೆ-ತೊಡುಗೆ

                ದೀವರು ಮಾತೃಪ್ರಧಾನ ಸಮಾಜಕ್ಕೆ ಸೇರಿದವರು. ಹೆಂಗಸರೇ ಕುಟುಂಬದ ವಹಿವಾಟು ನಡೆಸುವವರು. ಹೊಲಗದ್ದೆ ಕೆಲಸ, ಗೃಹಕೃತ್ಯದ ಕೆಲಸ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಈಚಲು ಹುಲ್ಲಿನಿಂದ ಚಾಪೆ ಹೆಣೆಯುವುದು, ತರಕಾರಿ ಬೆಳೆಯುವುದು, ಅಬ್ಬಲಿಗೆ (ಜಡೆಪತ್ರೆ) ಹೂವು ದಂಡೆ ಕಟ್ಟಿ ಮಾರುವುದು, ಕುಟ್ಟುವುದು, ಬೀಸುವುದು, ಪೇಟೆಗೆ ಹೋಗಿ ವಸ್ತುಗಳನ್ನು ಮಾರುವುದು, ಕೊಂಡು ತರುವುದು ಹೀಗೆ ಹಲವು ಹತ್ತು ಕೆಲಸಗಳನ್ನು ದಣಿವರಿಯದೇ ಮಾಡುತ್ತಾರೆ.

ಉಡುಪು

                ದೀವರ ಹೆಂಗಸರ ಉಡುಪು ಮತ್ತು ಅಲಂಕಾರಗಳು ತುಂಬಾ ವೈಶಿಷ್ಟ್ಯಮಯವಾಗಿವೆ. ಮಹಿಳೆಯರು ಸಾಮಾನ್ಯವಾಗಿ ಮಹಾಲಿಂಗಪುರ ಮತ್ತು ಇಳಕಲ್ ಸೀರೆಗಳನ್ನು ಉಡುತ್ತಾರೆ.

ವಯಸ್ಸಾದ ಮಹಿಳೆಯರು ಉಡುವ ಸೀರೆಗಳು ಇಂತಿವೆ.

1              ಒನಿಕೆಮುಂಡಿನ ಕರೆ ಸೀರೆ

2              ಕರೆ ಮತ್ತು ಕೆಂಪು ದುಂಡಿನ ಸೀರೆ

3              ಮಹಾಲಿಂಗಪುರದ ಸಾದಾ ಜಡ್ಡು ಸೀರೆಗಳು. ವಿಶೇಷವಾಗಿ 1) ಬಾಳೆಪಟ್ಟೆ ಸೆರಗಿನ ಸೀರೆ 2) ಸಕ್ಕರೆ ಕಣ್ಣಿನ ಮತ್ತು ರಾಗಿಕಣ್ಣಿನ ಸೀರೆಗಳು 3) ಬಾಳೆಪಟ್ಟೆ ಸೆರಿಗನ ಚೌಕುಳಿ ಸೀರೆಗಳು, ಇವುಗಳಿಗೆ ಒಪ್ಪುವ ರವಿಕೆ ಖಣಗಳನ್ನು ತೊಡುತ್ತಿದ್ದರು.

                ನಡುವಯಸ್ಸಿನ ಮಹಿಳೆಯರು ಮತ್ತು ಯುವತಿಯರು ದಿನನಿತ್ಯ ಉಡುವ ಸೀರೆಗಳು ಹೀಗಿವೆ.

1              ಬಂಗುಡಿ ಅಂಚಿನ ಕಪ್ಪು, ಹಸಿರು, ನೀಲಿ, ಕೆಂಪುಬಣ್ಣದ ಸೀರೆಗಳು

2              ಅಡಿಕೆ ಕಂಬಿಯ ಕಪ್ಪು, ಹಸಿರು, ಕೆಂಪು ಸೀರೆಗಳು

3              ಜಡೆಕಂಬಿಯ ಸೀರೆ

4              ಅಡಿಕೆ ಬಣ್ಣದ ಜಡ್ಡು ಸೀರೆಗಳು

                ಮದುವೆ, ಮುಂಜಿ, ಹಬ್ಬ-ಹರಿದಿನಗಳಲ್ಲಿ ಉಡುವ ಸೀರೆಗಳು ;

1              ಒನಿಕೆಮುಂಡಿನ ಜೋಡೆಳೆ ಸೀರೆ

2              ಜಡೆಕಂಬಿಯ ತೋಪು ಮುಸುಕಿನ ಸೀರೆ

3              ಟೀಕಿ ಕಂಬಿಯ ತೋಪು ಮುಸುಕಿನ ಸೀರೆ

4              ಟೀಕಿ ಕಂಬಿಯ ಬಾಳೆಪಟ್ಟೆ ಸೆರಗಿನ ಸೀರೆ

5              ಕರೆಕಾಗಿನ ಟೀಕಿಕಂಬಿಯ ತೋಪು ಮುಸುಕಿನ ಸೀರೆ

6              ಕರೆಕಾಗಿನ ಏಲಕ್ಕಿ ಮುಸುಕಿನ ಸೀರೆ

7              ಜಡೆಕಂಬಿಯ ಹಳದಿಬಣ್ಣದ ಸಕ್ಕರೆ ಕಣ್ಣಿನ ಸೀರೆ

8              ಜಡೆಕಂಬಿಯ ಕಡುಹಸಿರು ಬಣ್ಣದ ತೋಪು ಮುಸುಕಿನ ಸೀರೆ

9              ಗಿಳಿಹಸಿರು ತೋಪು ಮುಸುಕಿನ ಸೀರೆ

10           ಬಾಳೆಪಟ್ಟೆ ಸೆರಗಿನ ತೆನೆತೋಪು ಮುಸುಕಿನ ಸೀರೆ

11           ಬಾಳೆಪಟ್ಟೆ ಸೆರಗಿನ ಸೀರೆಯಲ್ಲಿ ಗೊಂಡೇವು ಇರುವ ಸೀರೆ

                ಸೀರೆಗಳಿಗೆ ಒಪ್ಪುವ ಕಡಿಹಸಿರು, ಹಳದಿ ಕಾಕೋಳಿ ಬಣ್ಣದ ರವಿಕೆಗಳನ್ನು ತೊಡುತ್ತಿದ್ದರು. ಈಗ ಹಳ್ಳಿಗಳಲ್ಲಿ ನಾಗರಿಕತೆ ಸಾಕಷ್ಟು ಪ್ರವೇಶವಾದ್ದರಿಂದ ಈ ಉಡುಗೆಗಳು ಮಾಯವಾಗುತ್ತಿವೆ. ಹಳ್ಳಿಯ ವಯಸ್ಸಾದ ಮಹಿಳೆಯರನ್ನು ಬಿಟ್ಟು ಉಳಿದವರು ಇತರೆ ನಾಗರಿಕ ಜನಾಂಗದವರು ಉಡುವ ಸೀರೆಗಳನ್ನೇ ಉಡುತ್ತಿದ್ದಾರೆ. ಈಗಲೂ ಕೃಷಿಕಾರ್ಯಗಳಿಗೆ ಅನುಕೂಲವಾಗುವಂತೆ ಮೊಣಕಾಲ ಮೇಲೆ ಸೀರೆಯುಟ್ಟುಕೊಳ್ಳುತ್ತಾರೆ.

ಕಸೂತಿ

                ಕೆಂಪುಬಣ್ಣದ ಸೆರಗು ಇರುವ ಸೀರೆಗಳಿಗೆ ಹಳದಿ, ಹಸಿರು ಹಾಗೂ ಬಿಳಿಬಣ್ಣದ ದಾರಗಳಿಂದ ಗೊಂಬೆಸಾಲು, ಸರಪಳಿ ಸಾಲು, ಗೊನೆ, ಚಿಟ್ಟ್ಹೂವು, ದೊಡ್ಡ ಹೂವು, ಗಿಳಿ, ತಾವರೆ ಹೂವುಗಳನ್ನು ಕಸೂತಿ ಹಾಕಿಕೊಳ್ಳುತ್ತಾರೆ. ಸೀರೆಗಳಿಗೆ ಒಪ್ಪುವಂತಹ ಜಡೆಕಂಬಿಯಿರುವ ಕಡಿಹಸುರು ರವಿಕೆ ಕರೆಕಾಗಿನ ಜಡೆಕಂಬಿ, ರವಿಕೆ ಖಣಗಳಿಗೆ ಕೆಳಭಾಗಕ್ಕೆ ಮೊಗ್ಗೆಸಾಲು, ಸರಪಳಿ ಸಾಲು, ತೋಳಿನ ಮೇಲ್ಭಾಗಕ್ಕೆ ಗೊಂಬೆಸಾಲು, ಬಗಲಿಗೆ ಚಿಟ್ಟ್ಹೂವು, ಬೆನ್ನಿನ ಮೇಲೆ ದೊಡ್ಡ್ಹೂವು, ಗಿಳಿ, ತಾವರೆ ಹೂವು ಮುಂತಾದ ಕಸೂತಿಗಳನ್ನು ಹಾಕಿಕೊಳ್ಳುತ್ತಾರೆ.

                ಕಸೂತಿ ವಿಧಗಳು ಇಂತಿವೆ.

1) ಗೊಂಬೆ ಸಾಲು                             2) ಸರಪಳಿ ಸಾಲು                            3) ಗೊನೆ

4) ಚಿಟ್ಟ್ಹೂವು                                  5) ದೊಡ್ಡ್ಹೂವು                              6) ಗಿಳಿ

7) ತಾವರೆಹೂವು                             3) ಮೊಗ್ಗೆ ಸಾಲು

ಒಡವೆಗಳು

                ದೀವರ ಮಹಿಳೆಯರಿಗೆ ಒಡವೆ, ಹೂವುಗಳೆಂದರೆ ಪಂಚಪ್ರಾಣ. ಕೈಗೆ ಬೆಳ್ಳಿಯ ಕೋಲ್ಕಡಗ ಹಾಗೂ ದುಂಡು, ಕೈ ಮೇಲ್ಭಾಗದಲ್ಲಿ ಬೆಳ್ಳಿ ಪಾಟ್ಲ ಹಾಕಿಕೊಂಡು ಕಟ್ಟುಬಳೆ ಇಟ್ಟುಕೊಳ್ಳುತ್ತಾರೆ. ಬಲಕೈ ತೋಳಿಗೆ ಬೆಳ್ಳಿಯ ವಂಕಿಯ ತೋಳುಸರಿಗೆ, ಎಡಕೈ ತೋಳಿಗೆ ಬೆಳ್ಳಿಯ ದುಂಡನೆಯ ತೋಳುಬಂದಿ, ಕುತ್ತಿಗೆಗೆ ಬಂಗಾರದ ಏಕದಾನ, ಬಂಗಾರದ ಟೀಕಿ, ಕಟ್ಟಾಣಿಸರ, ಪವನ ಸರ, ಗುಂಡಿನ ಸರ, ಬೆಳ್ಳಿಯ ಅಡಿಕೆ ಸರ, ಹವಳದ ಅಡಿಕೆ ಸರ, ಕರೀಮಣಿ ಸರಕ್ಕೆ ಪೋಣಿಸಿದ ಹಳದಿ ಮಣಿ ಮತ್ತು ಬಂಗಾರದ ತಾಳಿ ಮುಂತಾದ ಕೊರಳಿನ ಆಭರಣಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ ಹಳೆ ವಿನ್ಯಾಸದ ಸರಗಳು ಬದಲಾಗಿವೆ. ಈಗ ಲಕ್ಷ್ಮೀಹಾರ, ಅವಲಕ್ಕಿ ಸರ, ಗುಂಡಿನ ಸರ, ಕಾಫಿಬೀಜದ ಸರ, ಲವಂಗದ ಸರ, ಮಾಲೆ ಮಾಲೆ ಸರ ಮುಂತಾದವುಗಳನ್ನು ಕೊರಳಿಗೆ ಹಾಕಿಕೊಳ್ಳುತ್ತಾರೆ. ಕಿವಿಗೆ ಚಿನ್ನದ ಬೆಂಡೋಲೆ, ಮುತ್ತಿನ ಬುಗುಡಿ, ಕೆನ್ನೆ ಸರಪಳಿ, ಹೊನ್ನಕಡ್ಡಿ, ಹಾಲೆಬಟ್ಟು, ಬುರುಬಿನ ಬಟ್ಟು, ವಾಳೆಕಡ್ಡಿ, ಮೂಗಿನ ಎಡಭಾಗಕ್ಕೆ ಮೂಗುತಿ, ಬಲಭಾಗಕ್ಕೆ ಚಿನ್ನದ ಬಟ್ಟು ಅಥವಾ ಬೇಸರಿ, ಮದುವೆ ಸಂದರ್ಭದಲ್ಲಿ ವಧುವಿಗೆ ಅಕ್ಕಣದ ವಾಲೆ, ವಾಲೆಕಡ್ಡಿ, ಸರಪಳಿ, ತಲೆಗೆ ಮುಂದಲೆಬಟ್ಟು, ಚಂದ್ರಕೋಡು, ನೆತ್ತಿನಾಗರ, ಕೇದಿಗೆ, ಚಿನ್ನದ ಸಂಪಿಗೆ ದಂಡೆ, ಚೌಲಕುಣಿಕೆ, ಕಮಲದ ಹೂವು, ಕತ್ತರಿ ಹೂವು, ಗುಲಾಬಿ ಹೂವು, ಹರಳಿನ ಹೂವು, ಜಡೆಯ ಕೊನೆಯಲ್ಲಿ ಬಂಗಾರದ ಅಥವಾ ಬೆಳ್ಳಿಯ ಜಡೆಗೊಂಡೇವು. ಸೊಂಟಕ್ಕೆ ಗೆಜ್ಜೆಪಟ್ಟಿ, ಸಾದಾಪಟ್ಟಿ ಬೆಳ್ಳಿಯವು. ಬೆಳ್ಳಿ ಬಂಗಾರದ ಡಾಬಿನ ವಂಕಿಪಟ್ಟಿ, ಕಾಲಿಗೆ ಬೆಳ್ಳಿಯ ಕಾಲುನಗ, ಕಾಲುಬಂದಿ, ಪಡಂಗ, ಕಾಲ್ಕಡಗ, ಕಾಲುಬೆರಳಿಗೆ ಬೆಳ್ಳಿಯ ಏಳು ಸುತ್ತಿನ ಕಾಲುಂಗುರ, ಕಾಲುಪಿಲ್ಲಿ, ಮೀನುಪಿಲ್ಲಿ, ಕಿರುಪಲ್ಲಿ, ಬಲಕೈ ಮಧ್ಯದ ಬೆರಳಿಗೆ ವಂಕಿ ಉಂಗುರ, ಅದರ ಪಕ್ಕದ ಬೆರಳಿಗೆ ತಾಮ್ರದ ಕೊಚ್ಚಿನ ಬಂಗಾರ ಮುಂತಾದ ಚಿನ್ನ, ಬೆಳ್ಳಿ ಹಾಗೂ ತಾಮ್ರದ ಆಭರಣಗಳನ್ನು ತೊಡುತ್ತಾರೆ.

                ಬೆಳ್ಳಿ ಆಭರಣಗಳು ಇಂತಿವೆ

1) ಕೋಲ್ಕಡಕ                                   2) ದುಂಡು                                          3) ಪಾಟ್ಲಿ

4) ತೋಳುಸರಿಗೆ (ವಂಕಿ)                5) ತೋಳುಬಂದಿ                              6) ಅಡಿಕೆಸರ

7) ಜಡೆಗೊಂಡೇವು                          8) ಗೆಜ್ಜೆಪಟ್ಟಿ                                       9) ಸಾದಾಪಟ್ಟಿ

10) ವಂಕಿಪಟ್ಟಿ                                 11) ಕಾಲುಂಗುರ                                               12) ಕಾಲುಪಿಲ್ಲಿ

13) ಮೀನುಪಲ್ಲಿ                                               14) ಕಿರುಪಿಲ್ಲಿ                                     15) ಕಾಲುನಗ

16) ಕಾಲುಬಂದಿ                               17) ಪಡಂಗ ಪೋಂಜು

                ಬಂಗಾರದ ಒಡವೆಗಳು ಇಂತಿವೆ.

1) ಏಕದಾನಿ                                       2) ಟೀಕಿ                                 3) ಕಟ್ಟಾಣಿಸರ

4) ಮೂಗುತಿ                                       5) ಬಟ್ಟು                                              6) ಬೇಸರಿ

7) ಅಕ್ಕಿಬಟ್ಟು                                    8) ಗುಳ್ಳೇದುಬಟ್ಟು                           9) ಪವನ ಸರ

10) ಗುಂಡಿನ ಸರ                              11) ತಾಳಿ                                              12) ಲಕ್ಷ್ಮೀಹಾರ

13) ಅವಲಕ್ಕಿ ಸರ                             14) ಕಾಫಿಬೀಜದ ಸರ                      15) ಲವಂಗದ ಸರ

16) ಮಾಲೆ ಮಾಲೆ ಸರ                   17) ವಾಲೆ, ವಾಲೆಕಡ್ಡಿ                    18) ಬೆಂಡೋಲೆ

19) ಮುತ್ತಿನ ಬುಗುಡಿ                      20) ಕೆನ್ನೆ ಸರಪಳಿ                             21) ಹೊನ್ನಿನ ಕಡಿ

22) ಹಾಲೆಬಟ್ಟು                               23) ಬುರುಬಿನ ಬಟ್ಟು                     24) ವಾಲೆಕಡ್ಡಿ

25) ಮುಂದಲೆಬಟ್ಟು                      26) ಚಂದ್ರಕೋಡು                          27) ನೆತ್ತಿನಾಗರ

28) ಕೇದಿಗೆ                                           29) ಸಂಪಿಗೆದಂಡೆ                            30) ಚೌಲಿಕುಣಿಕೆ

31) ಕಮಲದಹೂವು                       32) ಕತ್ತರಿಹೂವು                              33) ಗುಲಾಬಿಹೂವು

34) ಹರಳಿನ ಹೂವು                       35) ಜಡೆಗೊಂಡೇವು                        36) ದಾಬಿನಪಟ್ಟಿ

37) ಸರದಾಳಿಸರ                              38) ಬಂದಿಸರಿಗೆ

38) ಬುಗುಡಿಗೆ ಹಾಕುವ ಕೆನ್ನೆ ಸರಪಳಿ

ಹಚ್ಚೆ

                ಸತ್ತರೂ ನಮ್ಮೊಡನೆ ಮತ್ತೇನು ಬರುವುದು

                ಹೆಚ್ಚೇಯ ಬಟ್ಟು ತಲೆ ತುರುಬು

                ಹಚ್ಚೇಯ ಬಟ್ಟು ತಲೆತುರುಬು ಅವು ಮೂರು

                ಸತ್ತರೆ ನಮ್ಮೊಡನೆ ಬರುವವು

                ದೀವರ ಹೆಂಗಸರು ಹಚ್ಚೆ ಇಟ್ಟುಕೊಳ್ಳದೇ ಅಕ್ಕಿಗೂಡಿಕೆಗೆ ಹಾಕಿದರೆ ದರಿದ್ರ ತಪ್ಪುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಮಹಿಳೆಯರು ಹಚ್ಚೆ ಇಟ್ಟುಕೊಳ್ಳುತ್ತಾರೆ. ಎರಡು ಕೈಗಳ ಮುಂಗೈ ಮೇಲ್ಭಾಗಕ್ಕೆ ಜೋಗಿ ಜಡೆ, ಒಳಭಾಗಕ್ಕೆ ಕೃಷ್ಣನ ತೊಟ್ಟಿಲು, ರಾಮನ ತೊಟ್ಟಿಲು, ಸೀತೆಮುಡಿ, ಎರಡು ಕೈಗಳ ಹಸ್ತದ ಮೇಲ್ಭಾಗಕ್ಕೆ ಮಲ್ಲಿಗೆ, ಎಲೆಕೌಳಿಗೆ, ಗೊಂಬೆಸಾಲು, ಗಿಚಿಡಿ, ಲತ್ತು, ಚೇಳು ಮುಂತಾದ ಹಚ್ಚೆಗಳನ್ನು ಇಟ್ಟುಕೊಳ್ಳುತ್ತಾರೆ. ಹಣೆ, ಗಲ್ಲ, ಗಲುಕಿಗೆ ಹಚ್ಚೆ ಇಟ್ಟುಕೊಳ್ಳುತ್ತಾರೆ.

                ಹಚ್ಚೆಯ ವಿಧಗಳು ಇಂತಿವೆ.

1) ಜೋಗಿಜಡೆ                                    2) ರಾಮನ ತೊಟ್ಟಿಲು                    3) ಕೃಷ್ಣನ ತೊಟ್ಟಿಲು

4) ಲತ್ತು                                                5) ಗಿಚಿಡಿ                                              6) ಕೌಳಿಮಟ್ಟಿ

7) ಮ್ಯಾಗೈ ಹಚ್ಚೆ                             8) ಹಣೆಚ್ಚೆ                                          9) ಗಲ್ಲದ ಬಟ್ಟು

10) ಕಲುಕಿನ ಬಟ್ಟು                        11) ಗೊಂಬೆಸಾಲು                           12) ಮಲ್ಲಿಗೆದಂಡೆ

13) ಸೀತೆಮುಡಿ                                  14) ಸುತ್ತಿನ ಸೂರ್ಯಪಾನ          15) ಎಲೆಕೌಳಿಗೆ

16) ಗಿಡಕಿ ಎಲೆಬಳ್ಳಿ                         17) ಮುತ್ತಿನಮಲಕು                       18) ಚೇಳು

ಗಂಡಸರ ಉಡುಗೆ-ತೊಡುಗೆ

                ಹಿಂದಿನ ಕಾಲದ ಗಂಡಸರು ಉಡುತ್ತಿದ್ದ ಉಡುಪು ತುಂಬಾ ವಿಶಿಷ್ಟವಾಗಿತ್ತು. ಕುರುಗೋಡು ಪಂಚೆ ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದರು. ಸೊಂಟದ ಕೆಳಗೆ ಒಂದು ಕಡೆ ಮುಚ್ಚಿಕೊಳ್ಳುತ್ತಿತ್ತು. ಇನ್ನೊಂದು ಕಡೆ ಅರೆಮುಚ್ಚುತ್ತಿತ್ತು. ಈ ಕ್ರಮಕ್ಕೆ ಸೊಂಟ ಸುತ್ತುವುದು ಎಂದು ಹೇಳುತ್ತಾರೆ. ಅರ್ಧ ತೋಳಿರುವ ಬಗಲಂಗಿ-ಈಗಿನ ತೋಳಿರುವ ಬನಿಯನ್ ರೀತಿ. ದಪ್ಪಬಟ್ಟೆ ತೆಗೆದುಕೊಂಡು ಹೊಲಿಸಿಕೊಳ್ಳುತ್ತದ್ದರು. ತಲೆಗೆ ಕೆಂಪು ಅಥವಾ ಬಿಳಿ ರುಮಾಲು ಸುತ್ತಿಕೊಳ್ಳುತ್ತಿದ್ದರು. ಹೆಗಲಮೇಲೆ ಕರಿಕಂಬಳಿ, ಸೊಂಟಕ್ಕೆ ವಡ್ಯಾಣವನ್ನು ಕಟ್ಟಿಕೊಂಡು ವಡ್ಯಾಣದ ಕೊಕ್ಕೆಗೆ ಕತ್ತಿಯನ್ನು ನೇತು ಹಾಕಿಕೊಳ್ಳುತ್ತಿದ್ದರು. ಮನೆಯಲ್ಲಿರುವಾಗ, ಹೊಲಗದ್ದೆಗಳಲ್ಲಿ ಕೆಲಸ ನಿರತರಾದಾಗ ಇದೇ ರೀತಿ ಉಡುಪು ಹಾಕಿಕೊಂಡಿರುತ್ತಿದ್ದರು. ಮದುವೆ, ಹಬ್ಬ-ಹರಿದಿನ, ಪೇಟೆ, ನೆಂಟರ ಮನೆಗೆ ಹೋಗುವಾಗ ಕಚ್ಚೆಪಂಚೆ, ಷರಟು (ಆರ್ಧತೋಳು), ಷರಟಿನ ಮೇಲೆ ವಾಷ್‍ಕೋಟು ಹಾಕಿಕೊಂಡು ತಲೆಗೆ ಕೆಂಪು ಅಥವಾ ಬಿಳಿ ರುಮಾಲು ಸುತ್ತಿಕೊಳ್ಳುತ್ತಿದ್ದರು. ಕೆಲವರು ತುಂಬುತೋಳಿನ ಷರಟು ಹಾಕಿಕೊಳ್ಳುತ್ತಿದ್ದರು. ಷರಟಿಗೆ ಬಂಗಾರದ ಗುಂಡಿ ಹಾಕಿಕೊಳ್ಳುತ್ತಿದ್ದರು ಮತ್ತು ಕೈ ಕಾಲುಗಳಿಗೆ ಕೆಲವರು ಬೆಳ್ಳಿಯ ಸರಗಿ ಮತ್ತು ಸೊಂಟಕ್ಕೆ ಬೆಳ್ಳಿ ನ್ಯಾವಳ ಹಾಕಿಕೊಳ್ಳುತ್ತಿದ್ದರು. ಎರಡೂ ಕಿವಿಗಳಿಗೆ ಒಂಟಿ ಹಾಕಿಕೊಳ್ಳುತ್ತಿದ್ದರು. ಎಡಗಿವಿ ಮೇಲ್ಭಾಗದಲ್ಲಿ ಮಹಿಳೆಯರು ಬುಗುಡಿ ಹಾಕಿಕೊಳ್ಳುವ ಸ್ಥಳದಲ್ಲಿ ಗಂಡಸರು ಮೇಲುಮುರ ಹಾಕಿಕೊಳ್ಳುತ್ತಿದ್ದರು. ಈಗ ನಾಗರಿಕತೆ ಪ್ರವೇಶವಾಗಿ ಉಡುಗೆ-ತೊಡುಗೆಗಳಲ್ಲಿ ಬದಲಾವಣೆಯಾಗಿದೆ. ನಾಗರಿಕ ಜನರು ಉಡುವ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಯುವಕರು ನಗರದ ಯುವಕರನ್ನು ಮರೆಸುವ ರೀತಿಯಲ್ಲಿ ಉಡುಗೆ-ತೊಡುಗೆಗಳ ಬದಲಾವಣೆಯಾಗಿದೆ. ಹಳ್ಳಿಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಉಡುಗೆ-ತೊಡುಗೆಗಳು ಕಾಲಕ್ಕೆ ಸರಿಯಾಗಿ ಬದಲಾವಣೆಯಾಗುತ್ತಿವೆ.